ವಿಷಯಕ್ಕೆ ಹೋಗು

ಪೂರ್ಣಲೇಖನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಜರ್ಮನ್ ಗುರುತು ಪತ್ರದಲ್ಲಿ ಐಡೆಂಟಿಗ್ರಾಮ್ ಸುರಕ್ಷತಾ ಘಟಕವಾಗಿದೆ.(Personalausweis)

ಪೂರ್ಣಲೇಖನ (ಹೊಲೊಗ್ರಫಿ) (ಗ್ರೀಕ್‍ನಿಂದ ὅλος -hólos ಪೂರ್ಣ + γραφή -grafē ಬರೆಯುವುದು, ಚಿತ್ರ ಬಿಡಿಸುವುದು) ಒಂದು ತಂತ್ರವಾಗಿದ್ದು, ಇದು ಒಂದು ವಸ್ತುವು ಚದರಿಸಿದ ಬೆಳಕನ್ನು ದಾಖಲಿಸಿಕೊಳ್ಳಲು ಮತ್ತು ನಂತರ ವಸ್ತುವನ್ನು ಪುನನರ್ನಿಮಿಸಲು ಅವಕಾಶ ನೀಡುತ್ತದೆ. ಇದರಿಂದ ವಸ್ತುವನ್ನು ದಾಖಲಿಸಿದಾಗ ಇದ್ದಂತೆ ದಾಖಲಿಸುವ ಮಾಧ್ಯಮಕ್ಕೆ ತುಲನಾತ್ಮಕವಾಗಿ ಅದು ಅದೇ ಸ್ಥಾನದಲ್ಲಿಯೇ ಇರುವಂತೆ ತೋರುತ್ತದೆ. ನೋಡುವ ವ್ಯವಸ್ಥೆಯ ಸ್ಥಾನ ಹಾಗೂ ನಿಲುವು ಬದಲಾದಂತೆ ಚಿತ್ರವೂ ಬದಲಾಗುತ್ತದೆ, ನಿಖರವಾಗಿ ವಸ್ತುವು ಈಗಲೂ ಇರುವ ರೀತಿಯಲ್ಲಿ. ಆದ್ದರಿಂದ ದಾಖಲಿಸಲ್ಪಟ್ಟ ಚಿತ್ರವು (ಹೊಲೊಗ್ರಾಮ್) ತ್ರಿವಿಮಿತೀಯವಾಗಿ ಕಾಣಿಸುತ್ತದೆ.

ಪೂರ್ಣಲೇಖನದ ತಂತ್ರವನ್ನು ಮಾಹಿತಿಯನ್ನು ದೃಗ್ವೈಜ್ಞಾನಿಕವಾಗಿ ಸಂಗ್ರಹಿಸಿಡಲು, ಪುನಃ ಪಡೆದುಕೊಳ್ಳಲು ಹಾಗೂ ಸಂಸ್ಕರಿಸಲೂ ಬಳಸಬಹುದು. ಪೂರ್ಣಲೇಖನವನ್ನು ಸಾಮಾನ್ಯವಾಗಿ ನಿಶ್ಚಲ 3-ಡಿ ಚಿತ್ರಗಳನ್ನು ಪ್ರದರ್ಶಿಸಲು ಬಳಸಲಾಗುತ್ತದಾದರೂ, ಪೂರ್ಣಲೇಖನದ ಗಾತ್ರೀಯ ಪ್ರದರ್ಶನದಿಂದ ಕ್ರಮವಿಲ್ಲದ ದೃಶ್ಯಗಳನ್ನು ಉತ್ಪಾದಿಸಲು ಇನ್ನೂ ಸಾಧ್ಯವಾಗಿಲ್ಲ.

ಸ್ಥೂಲ ಅವಲೋಕನ

[ಬದಲಾಯಿಸಿ]

ಪೂರ್ಣಲೇಖನವನ್ನು 1947 ರಲ್ಲಿ ಹಂಗೇರಿಯ ಭೌತವಿಜ್ಞಾನಿ ಡೆನ್ನಿಸ್ ಗ್ಯಾಬೊರ್ (1900-1979) ಪರಿಶೋಧಿಸಿದರು.[] ಈ ಕೆಲಸಕ್ಕಾಗಿ ಅವರು 1971 ರಲ್ಲಿ ನೊಬೆಲ್ ಪ್ರಶಸ್ತಿ ಪಡೆದರು. ಭೌತಶಾಸ್ತ್ರ ಕ್ಷೇತ್ರದಲ್ಲಿ ಪೋಲಂಡ್‍ನ ವಿಜ್ಞಾನಿ ಮೀಸಿಸ್ಲಾ ವುಲ್ಪ್ಕೆಯ ಪ್ರವರ್ತಕ ಕೆಲಸದಿಂದ ಇದು ಸಾಧ್ಯವಾಯಿತು. ಇವರು ಹಿಂದೆ ಪ್ರಗತಿಗಳನ್ನು ಅಸಾಧ್ಯವಾಗಿಸಿದ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿದರು. ಇಂಗ್ಲೆಂಡಿನ ರಗ್ಬಿಯಲ್ಲಿರುವ ಬ್ರಿಟಿಷ್ ಥಾಮ್ಸನ್-ಹೌಸ್ಟನ್ ಕಂಪನಿಯಲ್ಲಿ ನಡೆದ ಇಲೆಕ್ಟ್ರಾನ್ ಸೂಕ್ಷ್ಮದರ್ಶಕಗಳನ್ನು ಸುಧಾರಿಸಲು ಆದ ಸಂಶೋಧನೆಯ ಅನಿರೀಕ್ಷಿತ ಪರಿಣಾಮದಿಂದ ಈ ಪರಿಶೋಧನೆಯಾಯಿತು. ಕಂಪನಿಯು ಇದಕ್ಕಾಗಿ 1947 ರಲ್ಲಿ ಪೇಟೆಂಟ್‍ಗಾಗಿ (ಪೇಟೆಂಟ್ ಜಿಬಿ685286) ದಾಖಲಿಸಿತು. ಮೊದಲು ಆವಿಷ್ಕರಿಸಿದ ತಂತ್ರವನ್ನು ಇಲೆಕ್ಟ್ರಾನ್ ಸೂಕ್ಷ್ಮದರ್ಶನದಲ್ಲಿ ಇಂದಿಗೂ ಬಳಸಲಾಗುತ್ತದೆ. ಅಲ್ಲಿ ಇದನ್ನು ಇಲೆಕ್ಟ್ರಾನ್ ಪೂರ್ಣಲೇಖನ ಎಂದು ಕರೆಯಲಾಗುತ್ತದೆ. ಆದರೆ, ಒಂದು ಬೆಳಕು-ದೃಷ್ಟಿ ಸಂಬಂಧಿ ತಂತ್ರವಾಗಿ ಪೂರ್ಣಲೇಖನವು 1960 ರಲ್ಲಿ ಲೇಸರ್‌ನ ಅಭಿವೃದ್ಧಿಯಾಗುವವರೆಗೆ ವಾಸ್ತವವಾಗಿ ಮುನ್ನಡೆಯಲಿಲ್ಲ.

3ಡಿ ವಸ್ತುಗಳನ್ನು ದಾಖಲಿಸಿದ ಮೊದಲ ಹೊಲೊಗ್ರಾಮ್‍ಗಳನ್ನು 1962 ರಲ್ಲಿ ಸೋವಿಯಟ್ ಯೂನಿಯನ್‍ನಲ್ಲಿ[] ಯೂರಿ ಜೆನಿಸಿಯುಕ್ ಮತ್ತು ಅಮೇರಿಕಾದ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಎಮಿಟ್ ಲೇಥ್ ಹಾಗೂ ಜೂರಿಸ್ ಪುಪಾಟ್ನೀಸ್ ಮಾಡಿದರು.[] ಉಚ್ಚ ಗುಣಮಟ್ಟದ ಪ್ರದರ್ಶನ ಹೊಲೊಗ್ರಾಮ್‌ಗಳನ್ನು ಸೃಷ್ಟಿಸಲು ದ್ಯುತಿರಾಸಾಯನಿಕ ಸಂಸ್ಕರಣಾ ತಂತ್ರಗಳಲ್ಲಿನ ಪ್ರಗತಿಗಳನ್ನು ನಿಕೋಲಾಸ್ ಜೆ. ಫಿಲಿಪ್ಸ್ ಸಾಧಿಸಿದರು.[]

ಹಲವು ರೀತಿಯ ಹೊಲೊಗ್ರಾಮ್‍ಗಳನ್ನು ತಯಾರಿಸಬಹುದು. ಲೇತ್ ಮತ್ತು ಉಪಾಟ್ನೀಕ್ಸ್ ಸೃಷ್ಟಿಸಿದಂತಹ ಪ್ರಸಾರ ಹೊಲೊಗ್ರಾಮ್‌ಗಳನ್ನು ಅವುಗಳ ಮೂಲಕ ಲೇಸರ್ ಬೆಳಕನ್ನು ಬೀರಿ ಮತ್ತು ಮೂಲಕ್ಕೆ ವಿರುದ್ಧವಾದ ಹೊಲೊಗ್ರಾಮ್‍ನ ಪಾರ್ಶ್ವದಿಂದ ಪುನಃ ನಿರ್ಮಿಸಲಾದ ಚಿತ್ರವನ್ನು ಕಂಡು ನೋಡಲಾಗುತ್ತದೆ. ಒಂದು ನಂತರದ ಪರಿಷ್ಕರಣವಾದ "ಮಳೆಬಿಲ್ಲು ಪ್ರಸಾರ" ಹೊಲೊಗ್ರಾಮ್ ಲೇಸರ್ ಬದಲು ಬಿಳಿ ಬೆಳಕು ಅಥವಾ ಇತರ ಏಕವರ್ಣ ಮೂಲಗಳಿಂದ ಹೆಚ್ಚು ಅನುಕೂಲವಾದ ಪ್ರಜ್ವಲನಕ್ಕೆ ಅವಕಾಶ ನೀಡುತ್ತದೆ. ಮಳೆಬಿಲ್ಲು ಹೊಲೊಗ್ರಾಮ್‍ಗಳನ್ನು ಇಂದು ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಸುರಕ್ಷತಾ ಲಕ್ಷಣವಾಗಿ ಹಾಗೂ ಉತ್ಪನ್ನ ಪ್ಯಾಕಿಂಗ್ ಮೇಲೆ ಕಾಣಬಹುದು. ಮಳೆಬಿಲ್ಲು ಹೊಲೊಗ್ರಾಮ್‍ನ ಈ ಆವೃತ್ತಿಗಳು ಸಾಮಾನ್ಯವಾಗಿ ಒಂದು ಪ್ಲಾಸ್ಟಿಕ್ ಪೊರೆಯಲ್ಲಿ ಮೇಲ್ಮೈ ಉಬ್ಬು ಚಿತ್ರ ನಮೂನೆಗಳಾಗಿ ರೂಪಗೊಂಡಿರುತ್ತವೆ. ಇವು ಪ್ರತಿಫಲಿಸುವ ಅಲ್ಯೂಮಿನಿಯಂ ಲೇಪನವನ್ನು ಒಳಗೊಂಡಿರುತ್ತವೆ. ಇದು ಅವುಗಳ ಚಿತ್ರಗಳನ್ನು ಪುನನಿರ್ಮಿಸಲು ಹಿಂದಿನಿಂದ ಪ್ರಕಾಶವನ್ನು ಒದಗಿಸುತ್ತದೆ.

ಮತ್ತೊಂದು ಸಾಮಾನ್ಯ ರೀತಿಯ ಹೊಲೊಗ್ರಾಮ್ ಎಂದರೆ ಪ್ರತಿಫಲನ ಅಥವಾ ಡೆನಿಸಿಯುಕ್ ಹೊಲೊಗ್ರಾಮ್. ಇದು ದರ್ಶಕನಿರುವ ಪಾರ್ಶ್ವದಲ್ಲಿನ ಹೊಲೊಗ್ರಾಮ್ ಬದಿಯಲ್ಲಿ ಬಿಳಿ ಬೆಳಕಿನ ಪ್ರಜ್ವಲನ ಮೂಲವನ್ನು ಬಳಸಿ ಬಹುವರ್ಣ ಚಿತ್ರದ ಪುನರುತ್ಪಾದನೆಗೆ ಸಮರ್ಥವಾಗಿರುತ್ತದೆ. ಪೂರ್ಣಲೇಖನದ ಲಘು ಇತಿಹಾಸದಲ್ಲಿ ಅತ್ಯಂತ ಆಶಾದಾಯಕವಾದ ಇತ್ತೀಚಿನ ಪ್ರಗತಿಗಳಲ್ಲಿ ಒಂದೆಂದರೆ ಕಡಿಮೆ ಬೆಲೆಯ ಘನಸ್ಥಿತಿಯ ಲೇಸರ್‌ಗಳ ರಾಶಿ ಉತ್ಪಾದನೆ. ಇವು ಲಕ್ಷಗಟ್ಟಲೆ ಡಿವಿಡಿ ರೆಕಾರ್ಡರ್‌ಗಳಲ್ಲಿ ಕಂಡುಬರುತ್ತವೆ ಮತ್ತು ಇತರ ಸಾಮಾನ್ಯ ಅನ್ವಯಗಳಲ್ಲಿ ಬಳಸಲ್ಪಡುತ್ತವೆ. ಕೆಲವೊಮ್ಮೆ ಇವು ಪೂರ್ಣಲೇಖನಕ್ಕೂ ಉಪಯುಕ್ತವಾಗಿರುತ್ತವೆ. ಇಂತಹ ಅಗ್ಗವಾದ, ಅಡಕವಾದ, ಘನಸ್ಥಿತಿಯ ಲೇಸರ್‌ಗಳು ಕೆಲವು ಸಂದರ್ಭಗಳಲ್ಲಿ ಪೂರ್ವದಲ್ಲಿ ಹೊಲೊಗ್ರಾಮ್‍ಗಳನ್ನು ತಯಾರಿಸಲು ಅಗತ್ಯವಾಗಿದ್ದ ದೊಡ್ಡ, ದುಬಾರಿಯಾದ ಅನಿಲ ಲೇಸರ್‌ಗಳೊಂದಿಗೆ ಉತ್ತಮವಾಗಿ ಸ್ಪರ್ಧಿಸಬಲ್ಲವು. ಇವು ಈಗಾಗಲೇ ಕಡಿಮೆ ವೆಚ್ಚದ ಸಂಶೋಧಕರು, ಕಲಾಕಾರರು ಮತ್ತು ಸಮರ್ಪಿಸಿಕೊಂಡ ಹವ್ಯಾಸಿಗಳಿಗೆ ಪೂರ್ಣಲೇಖನವನ್ನು ಇನ್ನೂ ಹೆಚ್ಚು ಸುಲಭ ಲಭ್ಯವಾಗಿಸಲು ನೆರವಾಗುತ್ತಿವೆ.

ಸಿದ್ಧಾಂತ

[ಬದಲಾಯಿಸಿ]
ಹೊಲೋಗ್ರಾಫಿಕ್ ದಾಖಲಾತಿ ಪ್ರಕ್ರಿಯೆ

ಹಲವುವೇಳೆ ಪೂರ್ಣಲೇಖನವನ್ನು 3ಡಿ ಛಾಯಾಗ್ರಹಣವೆಂದು ಕರೆಯಲಾಗುತ್ತದೆ, ಆದರೆ ಇದು ತಪ್ಪು ತಿಳುವಳಿಕೆ. ಉತ್ತಮ ಹೋಲಿಕೆ ಎಂದರೆ ಧ್ವನಿ ಮುದ್ರಣ. ಅಲ್ಲಿ ಧ್ವನಿ ಕ್ಷೇತ್ರವನ್ನು ನಂತರ ಪುನರುತ್ಪಾದಿಸಲು ಆಗಬಲ್ಲ ರೀತಿಯಲ್ಲಿ ಸಂಕೇತಭಾಷೆಯಲ್ಲಿ ಪರಿವರ್ತಿಸಲಾಗುತ್ತದೆ. ಪೂರ್ಣಲೇಖನದಲ್ಲಿ, ಒಂದು ವಸ್ತು ಅಥವಾ ವಸ್ತುಗಳ ಸಮೂಹದಿಂದ ಚದರಿದ ಸ್ವಲ್ಪ ಬೆಳಕು ದಾಖಲಿಸುವ ಮಾಧ್ಯಮದ ಮೇಲೆ ಬೀಳುತ್ತದೆ. ಸಂದರ್ಭ ರಶ್ಮಿ ಎಂದು ಕರೆಯಲ್ಪಡುವ ಎರಡನೇ ಬೆಳಕಿನ ರಶ್ಮಿಯೂ ದಾಖಲಿಸುವ ಮಾಧ್ಯಮವನ್ನು ಪ್ರಕಾಶಿಸುತ್ತದೆ. ಹೀಗೆ ಎರಡು ರಶ್ಮಿಗಳ ನಡುವೆ ವ್ಯತಿಕರಣ ಆಗುತ್ತದೆ. ಪರಿಣಾಮರೂಪಿ ಬೆಳಕಿನ ಕ್ಷೇತ್ರವು ತೋರಿಕೆಯಲ್ಲಿ ಬದಲಾಗುವ ತೀವ್ರತೆಯ ಯಾದೃಚ್ಛಿಕ ಮಾದರಿಯಾಗಿರುತ್ತದೆ. ಇದೇ ಹೊಲೊಗ್ರಾಮ್. ಹೊಲೊಗ್ರಾಮನ್ನು ಮೂಲ ಸಂದರ್ಭ ರಶ್ಮಿಯಿಂದ ಪ್ರಕಾಶಿಸಿದರೆ ಸಂದರ್ಭ ರಶ್ಮಿಯಿಂದ ಬೆಳಕಿನ ಕ್ಷೇತ್ರವು ವಿಭಜಿಸಲ್ಪಡುತ್ತದೆ. ಈ ಬೆಳಕಿನ ಕ್ಷೇತ್ರ ವಸ್ತು ಅಥವಾ ವಸ್ತುಗಳು ಚದರಿಸಿದ ಬೆಳಕಿನ ಪ್ರದೇಶಕ್ಕೆ ಸರ್ವಾಂಗಸಮವಾಗಿರುತ್ತದೆ. ಹೀಗೆ, ಹೊಲೊಗ್ರಾಮ್‌ನೊಳಗೆ ನೋಡುವ ಯಾರಾದರೂ ಅವು ಈಗ ಇಲ್ಲದಿದ್ದರೂ ಅ ವಸ್ತುಗಳನ್ನು "ನೋಡು"ತ್ತಾರೆ. ಛಾಯಾಚಿತ್ರ ಪೊರೆ ಸೇರಿದಂತೆ ಬಳಸಬಲ್ಲ ಹಲವಾರು ದಾಖಲಿಸುವ ವಸ್ತುಗಳಿವೆ.

ವ್ಯತಿಕರಣ ಮತ್ತು ವಿವರ್ತನೆ

[ಬದಲಾಯಿಸಿ]

ಒಂದು ಅಥವಾ ಹೆಚ್ಚು ತರಂಗಮುಖಗಳನ್ನು ಅಧ್ಯಾರೋಪಿಸಿದಾಗ ವ್ಯತಿಕರಣ ಉಂಟಾಗುತ್ತದೆ. ತರಂಗಮುಖವು ಒಂದು ವಸ್ತುವಿಗೆ ಎದುರಾದಾಗ ವಿವರ್ತನೆಯು ಉಂಟಾಗುತ್ತದೆ. ಹೊಲೊಗ್ರಾಫಿಕ್ ಪುನರ್ನಿರ್ಮಾಣವನ್ನು ಸೃಷ್ಟಿಸುವ ಪ್ರಕ್ರಿಯೆಯನ್ನು ಕೆಳಗೆ ಕೇವಲ ವ್ಯತಿಕರಣ ಮತ್ತು ವಿವರ್ತನೆಯ ಅನುಸಾರವಾಗಿ ವಿವರಿಸಲಾಗಿದೆ. ಇದು ಸ್ವಲ್ಪಮಟ್ಟಿಗೆ ಸರಳೀಕೃತವಾಗಿದೆ, ಆದರೆ, ಪೂರ್ಣಲೇಖನ ಪ್ರಕ್ರಿಯೆಯು ಹೇಗೆ ಕೆಲಸ ಮಾಡುತ್ತದೆ ಎಂಬುದರ ಕುರಿತು ತಿಳಿವಳಿಕೆ ನೀಡುವಷ್ಟು ನಿಖರವಾಗಿದೆ.

ಸಮತಲ ತರಂಗಮುಖಗಳು

[ಬದಲಾಯಿಸಿ]

ವಿವರ್ತನ ಜಾಲರಿಯು ಪುನರಾವರ್ತಿಸುವ ಮಾದರಿಯುಳ್ಳ ರಚನೆಯಾಗಿದೆ. ಸರಳ ಉದಾಹರಣೆ ಎಂದರೆ ನಿಯತ ಅಂತರಗಳಲ್ಲಿ ಸೀಳುಗಳು ಕತ್ತರಿಸಲ್ಪಟ್ಟ ಒಂದು ಲೋಹದ ತಟ್ಟೆ. ಅದರ ಮೂಲಕ ಚಲಿಸುವ ಬೆಳಕಿನ ಕಿರಣಗಳು ಬೆಳಕಿನ ತರಂಗಮಾನ λ ಮತ್ತು ಸೀಳುಗಳ ನಡುವಿನ ದೂರ d ಇಂದ ನಿರ್ಧಾರಿತವಾದ ಕೋನದಲ್ಲಿ ಬಾಗಿರುತ್ತವೆ. ಇದನ್ನು sinθ = λ/d ಎಂಬ ಸೂತ್ರದಿಂದ ನೀಡಲಾಗಿರುತ್ತದೆ.

ಬಹಳ ಸರಳವಾದ ಹೊಲೊಗ್ರಾಮನ್ನು ಒಂದೇ ಬೆಳಕಿನ ಮೂಲದ ಎರಡು ಸಮತಲ ಅಲೆಗಳನ್ನು ಅಧ್ಯಾರೋಪಿಸಿ ತಯಾರಿಸಬಹುದು. ಒಂದು (ಸಂದರ್ಭ ರಶ್ಮಿ) ಛಾಯಾಗ್ರಹಣ ತಟ್ಟೆಗೆ ಮಾಮೂಲಾಗಿ ಬಡಿಯುತ್ತದೆ ಮತ್ತು ಇನ್ನೊಂದು (ವಸ್ತು ರಶ್ಮಿ) ತಟ್ಟೆಗೆ θ ಎಂಬ ಕೋನದಲ್ಲಿ ಬಡಿಯುತ್ತದೆ. ಈ ಎರಡು ರಶ್ಮಿಗಳ ನಡುವಿನ ತುಲನಾತ್ಮಕ ಹಂತವು ಛಾಯಾಗ್ರಾಹಣದ ತಟ್ಟೆಯ ಉದ್ದಕ್ಕೂ 2πysinθ/λ ಪ್ರಕಾರ ಬದಲಾಗುತ್ತದೆ. ಇಲ್ಲಿ y ಛಾಯಾಗ್ರಾಹಣದ ತಟ್ಟೆಯ ಉದ್ದಕ್ಕಿರುವ ದೂರ. ಈ ಎರಡು ರಶ್ಮಿಗಳು ಒಂದಕ್ಕೊಂದು ಅಡ್ಡಬಂದು ವ್ಯತಿಕರಣ ಮಾದರಿಯನ್ನು ರೂಪಿಸುತ್ತವೆ. ತುಲನಾತ್ಮಕ ಹಂತವು d = λ/sinθ ಅಷ್ಟು ಅಂತರಗಳಲ್ಲಿ 2π ಅಷ್ಟು ಬದಲಾಗುತ್ತದೆ, ಹಾಗಾಗಿ ವ್ಯತಿಕರಣ ಅಂಚುಗಳ ನಡುವಿನ ಅಂತರ d ಆಗಿರುವುದು. ಹೀಗಾಗಿ, ವಸ್ತು ಮತ್ತು ಸಂದರ್ಭ ರಶ್ಮಿಯ ತುಲನಾತ್ಮಕ ಹಂತವನ್ನು ಅಂಚು ಮಾದರಿಯ ಗರಿಷ್ಠಗಳು ಹಾಗೂ ಕನಿಷ್ಠಗಳಾಗಿ ಸಂಕೇತಭಾಷೆಗೆ ಪರಿವರ್ತಿಸಲಾಗುತ್ತದೆ.

ಛಾಯಾಗ್ರಹಣ ತಟ್ಟೆಯನ್ನು ಸ್ಫುಟಗೊಳಿಸಿದಾಗ ಅಂಚು ಮಾದರಿಯು ವಿವರ್ತನ ಜಾಲರಿಯಾಗಿ ಕಾರ್ಯನಿರ್ವಹಿಸುತ್ತದೆ. ಛಾಯಾಗ್ರಹಣ ತಟ್ಟೆಯ ಮೇಲೆ ಸಂದರ್ಭ ರಶ್ಮಿಯು ಬಿದ್ದಾಗ ಅದು ಮೂಲ ವಸ್ತು ರಶ್ಮಿಯು ಬಿದ್ದ ಅದೇ ಕೋನ θ ನಷ್ಟೇ ಭಾಗಶಃ ವಿವರ್ತಿಸುತ್ತದೆ. ಹೀಗೆ ವಸ್ತು ರಶ್ಮಿಯನ್ನು ಪುನರ್ನಿರ್ಮಿಸಲಾಗುತ್ತದೆ. ಎರಡು ಅಲೆಗಳು ಅಡ್ಡಬಂದು ಸೃಷ್ಟಿಯಾಗುವ ವಿವರ್ತನ ಜಾಲರಿಯು "ವಸ್ತು ರಶ್ಮಿಯನ್ನು" ಪುನರ್‌ನಿರ್ಮಿಸಿದೆ. ಹಾಗಾಗಿ ಇದು ಮೇಲೆ ವ್ಯಾಖ್ಯಾನಿಸಲಾದ ಹೊಲೊಗ್ರಾಮ್ ಆಗಿದೆ.

ಬಿಂದು ಮೂಲಗಳು

[ಬದಲಾಯಿಸಿ]
ಹೊಲೋಗ್ರಾಫಿಕ್ ಪುನರ್‌ನಿರ್ಮಾಣ ಪ್ರಕ್ರಿಯೆ

ವಸ್ತು ರಶ್ಮಿಯಾಗಿ ಬೆಳಕಿನ ಬಿಂದು ಮೂಲವನ್ನು ಬಳಸಿ ಮತ್ತು ಛಾಯಾಗ್ರಹಣ ತಟ್ಟೆಯನ್ನು ಪ್ರಕಾಶಿಸಲು ಸಂದರ್ಭ ರಶ್ಮಿಯಾಗಿ ಸಮತಲ ಅಲೆಯನ್ನು ಬಳಸಿ ಸ್ವಲ್ಪ ಹೆಚ್ಚು ಕ್ಲಿಷ್ಟಕರವಾದ ಹೊಲೊಗ್ರಾಮನ್ನು ತಯಾರಿಸಬಹುದು. ಒಂದು ವ್ಯತಿಕರಣ ಮಾದರಿಯು ರೂಪಗೊಳ್ಳುತ್ತದೆ. ಈ ಸಂದರ್ಭದಲ್ಲಿ ಇದು ಕಡಿಮೆಯಾಗುವ ವಿಯೋಜನೆಯ ಮತ್ತು ಕೇಂದ್ರಬಿಂದುವಿಂದ ಹೆಚ್ಚಾಗುವ ದೂರವಿರುವ ವಕ್ರರೇಖೆಗಳ ರೂಪದಲ್ಲಿ ಇರುತ್ತದೆ.

ಕ್ಲಿಷ್ಟಕರವಾದ ಮಾದರಿಯನ್ನು ಕೊಟ್ಟು ಛಾಯಾಗ್ರಹಣ ತಟ್ಟೆಯನ್ನು ಸ್ಫುಟಗೊಳಿಸಲಾಗುತ್ತದೆ. ಇದು ಬದಲಾಗುವ ಅಂತರದ ವಿವರ್ತನ ಮಾದರಿಯಿಂದ ರೂಪಗೊಂಡಿದೆ ಎಂದು ಪರಿಗಣಿಸಬಹುದು. ತಟ್ಟೆಯನ್ನು ಕೇವಲ ಸಂದರ್ಭ ರಶ್ಮಿಯಿಂದ ಪ್ರಕಾಶಿಸಿದಾಗ ಅದು ಜಾಲರಿಯಿಂದ ವಿಭಿನ್ನ ಕೋನಗಳಲ್ಲಿ ವಿವರ್ತಿಸಲ್ಪಡುತ್ತದೆ. ಈ ಕೋನಗಳು ತಟ್ಟೆಯ ಮೇಲಿನ ಮಾದರಿಯ ಸ್ಥಳೀಯ ಅಂತರಗಳನ್ನು ಅವಲಂಬಿಸಿರುತ್ತವೆ. ವಸ್ತು ರಶ್ಮಿಯನ್ನು ಪುನರ್ನಿರ್ಮಿಸುವುದು ಇದರ ನಿವ್ವಳ ಪರಿಣಾಮವಾಗಿರುತ್ತದೆ ಎಂದು ತೋರಿಸಬಹುದು. ಹಾಗಾಗಿ ತಟ್ಟೆಯ ಹಿಂದಿರುವ ಬಿಂದು ಮೂಲದಿಂದ ಬೆಳಕು ಬರುತ್ತಿರುವಂತೆ ತೋರುತ್ತದೆ, ಮೂಲವನ್ನು ತೆಗೆದಾಗಲು ಕೂಡ. ಛಾಯಾಗ್ರಹಣ ತಟ್ಟೆಯಿಂದ ಹೊರಹೊಮ್ಮುವ ಬೆಳಕು ಅಲ್ಲಿ ಮೊದಲಿದ್ದ ಬಿಂದು ಮೂಲದಿಂದ ಹೊರಹೊಮ್ಮುವ ಬೆಳಕಿಗೆ ಸರ್ವಾಂಗಸಮವಾಗಿರುತ್ತದೆ. ಬೇರೆ ಬದಿಯಿಂದ ತಟ್ಟೆಯೊಳಗೆ ನೋಡುವ ವೀಕ್ಷಕನು ಅಲ್ಲಿ ಬೆಳಕಿನ ಬಿಂದು ಮೂಲವನ್ನು "ಕಾಣು"ತ್ತಾನೆ, ಅಲಿ ಬೆಳಕಿನ ಆದ್ಯ ಮೂಲ ಇರಲಿ ಇಲ್ಲದಿರಲಿ.

ಈ ರೀತಿಯ ಹೊಲೊಗ್ರಾಮ್ ಕಾರ್ಯಕಾರಿಯಾಗಿ ನಿಮ್ನ ಮಸೂರವಾಗಿರುತ್ತದೆ, ಏಕೆಂದರೆ ಅದು ಸಮತಲ ತರಂಗಮುಖವನ್ನು ಅಪಸಾರಿ ತರಂಗಮುಖವನ್ನಾಗಿ "ಪರಿವರ್ತಿಸು"ತ್ತದೆ. ಅದು ತನ್ನ ಮೇಲೆ ಬೀಳುವ ಯಾವುದೇ ಅಲೆಯ ಅಪಸರಣವನ್ನೂ ಹೆಚ್ಚಿಸುತ್ತದೆ, ನಿಖರವಾಗಿ ಸಾಮಾನ್ಯ ಮಸೂರವು ಮಾಡುವ ರೀತಿಯಲ್ಲಿಯೇ. ಬಿಂದು ಮೂಲ ಹಾಗೂ ತಟ್ಟೆಯ ನಡುವಿನ ದೂರ ಇದರ ನಾಭಿದೂರವಾಗಿರುತ್ತದೆ.

ಸಂಕೀರ್ಣ ವಸ್ತುಗಳು

[ಬದಲಾಯಿಸಿ]

ಸಂಕೀರ್ಣ ವಸ್ತುವಿನ ಹೊಲೊಗ್ರಾಮನ್ನು ದಾಖಲಿಸಲು, ಅರೆ ಬೆಳ್ಳಿ ಗಾಜು ಅಥವಾ ದ್ವಿವಕ್ರೀಕಾರಕ ವಸ್ತುವಿನ ರಶ್ಮಿ ವಿಭಾಜಕವನ್ನು ಬಳಸಿ ಲೇಸರ್ ರಶ್ಮಿಯನ್ನು ಮೊದಲು ಎರಡು ಪ್ರತ್ಯೇಕ ಬೆಳಕಿನ ರಶ್ಮಿಗಳಾಗಿ ವಿಭಜಿಸಲಾಗುತ್ತದೆ. ಒಂದು ರಶ್ಮಿಯು ವಸ್ತುವನ್ನು ಪ್ರಕಾಶಿಸಿ ವಸ್ತುವು ರಶ್ಮಿಯನ್ನು ಚದರಿಸಿದಾಗ ಅದರ ಚಿತ್ರವನ್ನು ದಾಖಲಿಸುವ ಮಾಧ್ಯಮದ ಮೇಲೆ ಪ್ರತಿಫಲಿಸುತ್ತದೆ. ಎರಡನೇ (ಸಂದರ್ಭ) ರಶ್ಮಿಯು ದಾಖಲಿಸುವ ಮಾಧ್ಯಮವನ್ನು ನೇರವಾಗಿ ಪ್ರಕಾಶಿಸುತ್ತದೆ.

ವಿವರ್ತನ ಸಿದ್ಧಾಂತದ ಪ್ರಕಾರ, ವಸ್ತುವಿನಲ್ಲಿಯ ಪ್ರತಿಯೊಂದು ಬಿಂದು ಬೆಳಕಿನ ಬಿಂದು ಮೂಲದಂತೆ ವರ್ತಿಸುತ್ತದೆ. ಈ ಪ್ರತಿಯೊಂದು ಬಿಂದು ಮೂಲ ಸಂದರ್ಭ ರಶ್ಮಿಗೆ ಅಡ್ಡಬಂದು ವ್ಯತಿಕರಣ ಮಾದರಿಯನ್ನು ಸೃಷ್ಟಿಸುತ್ತದೆ. ಪರಿಣಾಮರೂಪಿ ಮಾದರಿಯು ಬಿಂದು ಮೂಲ + ಸಂದರ್ಭ ರಶ್ಮಿಯ ವ್ಯತಿಕರಣ ಮಾದರಿಗಳ ದೊಡ್ಡ ಸಂಖ್ಯೆಯ (ವಾಸ್ತವವಾಗಿ, ಒಂದು ಅನಂತ ಸಂಖ್ಯೆ) ಮೊತ್ತವಾಗಿರುತ್ತದೆ.

ವಸ್ತುವು ಮುಂದಿನ ಸಮಯದಲ್ಲಿ ಇಲ್ಲದಿದ್ದಾಗ, ಸಂದರ್ಭ ರಶ್ಮಿಯು ಪೂರ್ಣಲೇಖನ ತಟ್ಟೆಯನ್ನು ಪ್ರಕಾಶಿಸುತ್ತದೆ. ಪ್ರತಿಯೊಂದು ಬಿಂದು ಮೂಲ ವಿವರ್ತನ ಜಾಲರಿಯು ಅದರ ಬಿಂದು ಮೂಲದಿಂದ ತರಂಗಮುಖವನ್ನು ಪುನನಿರ್ಮಿಸಲು ಸಂದರ್ಭ ರಶ್ಮಿಯ ಒಂದು ಭಾಗವನ್ನು ವಿವರ್ತಿಸುತ್ತದೆ. ಈ ವೈಯಕ್ತಿಕ ತರಂಗಮುಖಗಳು ಒಂದಕ್ಕೊಂದು ಸೇರಿಕೊಂಡು ಸಂಪೂರ್ಣ ವಸ್ತು ರಶ್ಮಿಯನ್ನು ಪುನರ್ನಿರ್ಮಿಸುತ್ತವೆ.

ವೀಕ್ಷಕನು ಸಂದರ್ಭ ರಶ್ಮಿಯು ಪ್ರಕಾಶಿಸಿದ ವಸ್ತುವಿನ ಚದರಿದ ತರಂಗಮುಖಕ್ಕೆ ಸರ್ವಾಂಗಸಮವಾಗಿರುವ ತರಂಗಮುಖವನ್ನು ಗ್ರಹಿಸುತ್ತಾನೆ. ಹಾಗಾಗಿ ವಸ್ತುವು ಈಗಲೂ ಅದೇ ಸ್ಥಳದಲ್ಲಿ ಇರುವಂತೆ ಅವನಿಗೆ ಕಂಡುಬರುತ್ತದೆ. ಈ ಚಿತ್ರವನ್ನು "ಮಿಥ್ಯಾ" ಚಿತ್ರ ಎಂದು ಕರೆಯಲಾಗುತ್ತದೆ, ಏಕೆಂದರೆ ವಸ್ತುವು ಅಲ್ಲಿ ಈ ಸಮಯದಲ್ಲಿ ಇಲ್ಲದಿದ್ದರೂ ಅದು ಸೃಷ್ಟಿಯಾಗಿರುತ್ತದೆ. ಮಿಥ್ಯಾ ಚಿತ್ರವನ್ನು ಪ್ರಕಾಶಿಸುವ ಬೆಳಕಿನ ಮೂಲದ ದಿಕ್ಕು ಮೂಲ ಪ್ರಕಾಶಿಸುವ ರಶ್ಮಿಯ ದಿಕ್ಕೇ ಆಗಿರುತ್ತದೆ.

ಇದು ಸ್ವಲ್ಪಮಟ್ಟಿಗೆ ಸರಳ ಶಬ್ದಗಳಲ್ಲಿ ಪ್ರಸರಣ ಹೊಲೊಗ್ರಾಮ್‍ಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ವಿವರಿಸುತ್ತದೆ. ಮಳೆಬಿಲ್ಲು ಹಾಗೂ ಡೆನಿಸ್ಯುಕ್ ಹೊಲೊಗ್ರಾಮಗಳಂತಹ ಇತರ ಹೊಲೊಗ್ರಾಮ್‍ಗಳು ಹೆಚ್ಚು ಜಟಿಲವಾಗಿರುತ್ತವೆ ಆದರೆ, ಅಂತಹದೇ ಆದ ತತ್ತ್ವಗಳನ್ನು ಹೊಂದಿರುತ್ತವೆ.

ಗಣಿತ ಮಾದರಿ

[ಬದಲಾಯಿಸಿ]

ಒಂದು ಬೆಳಕಿನ ಅಲೆಯ ಮಾದರಿಯನ್ನು ಸಂಕೀರ್ಣ ಸಂಖ್ಯೆ U ಯಿಂದ ರೂಪಿಸಬಹುದು. ಇದು ಬೆಳಕಿನ ಅಲೆಯ ವಿದ್ಯುತ್ ಅಥವಾ ಕಾಂತಕ್ಷೇತ್ರವನ್ನು ಪ್ರತಿನಿಧಿಸುತ್ತದೆ. ಸಂಕೀರ್ಣ ಸಂಖ್ಯೆಯ ನಿರಪೇಕ್ಷ ಮೌಲ್ಯ ಹಾಗೂ ಕೋನಗಳು ಬೆಳಕಿನ ವಿಸ್ತಾರ ಮತ್ತು ಅವಸ್ಥೆಗಳನ್ನು ಪ್ರತಿನಿಧಿಸುತ್ತವೆ. ಪೂರ್ಣಲೇಖನ ವ್ಯವಸ್ಥೆಯಲ್ಲಿನ ಯಾವುದೇ ಬಿಂದುವಿನಲ್ಲಿನ ವಸ್ತು ಮತ್ತು ಸಂದರ್ಭ ಅಲೆಗಳನ್ನು UO ಮತ್ತು UR ಎಂದು ಕರೆಯಲಾಗುತ್ತದೆ. ಸಂಯೋಜಿತ ರಶ್ಮಿಯನ್ನು UO + UR ಎಂದು ಕರೆಯಲಾಗುತ್ತದೆ. ಸಂಯೋಜಿತ ರಶ್ಮಿಗಳ ಶಕ್ತಿಯು ವಿದ್ಯುತ್ ಅಲೆಯ ಪರಿಮಾಣದ ವರ್ಗಕ್ಕೆ ಅನುಪಾತೀಯವಾಗಿರುತ್ತದೆ:

ಛಾಯಾಗ್ರಹಣ ತಟ್ಟೆಯನ್ನು ಈ ಎರಡು ರಶ್ಮಿಗಳಿಗೆ ಒಡ್ಡಿ ನಂತರ ಸ್ಫುಟಗೊಳಿಸಿದರೆ, ಅದರ ಟ್ರಾನ್ಸ್‌ಮಿಟೆನ್ಸ್ T ತಟ್ಟೆಯ ಮೇಲೆ ಬಿದ್ದ ಬೆಳಕಿನ ಶಕ್ತಿಗೆ ಅನುಪಾತೀಯವಾಗಿರುತ್ತದೆ ಮತ್ತು ಇದನ್ನು ಹೀಗೆ ನೀಡಲಾಗುತ್ತದೆ.

ಇಲ್ಲಿ k ಒಂದು ನಿಯತಾಂಕ. ಸಂದರ್ಭ ರಶ್ಮಿಯು ಸ್ಫುಟಗೊಳಿಸಿದ ತಟ್ಟೆಯನ್ನು ಪ್ರಕಾಶಿಸಿದಾಗ, ತಟ್ಟೆಯ ಮೂಲಕ ಪ್ರಸಾರವಾಗುವ ಬೆಳಕು UH ಅನ್ನು ಹೀಗೆ ನೀಡಲಾಗುತ್ತದೆ

UH ನಾಲ್ಕು ಪರಿಮಾಣಗಳನ್ನು ಹೊಂದಿದೆ ಎಂದು ನೋಡಬಹುದು. ಇವುಗಳಲ್ಲಿ ಮೊದಲನೆಯದು kUO, URUR* ಒಂದಕ್ಕೆ ಸಮನಾಗಿರುವುದರಿಂದ ಇದು ಪುನನಿರ್ಮಾಣಗೊಂಡ ವಸ್ತು ರಶ್ಮಿಯಾಗಿರುತ್ತದೆ. ಎರಡನೇ ಪರಿಮಾಣವು ಸಂದರ್ಭ ರಶ್ಮಿಯನ್ನು ಪ್ರತಿನಿಧಿಸುತ್ತದೆ. ಇದರ ವೈಶಾಲ್ಯವನ್ನು UR2 ನಷ್ಟು ಮಾರ್ಪಡಿಸಲಾಗಿದೆ. ಮೂರನೇಯದು ಕೂಡ ಸಂದರ್ಭ ರಶ್ಮಿಯನ್ನು ಪ್ರತಿನಿಧಿಸುತ್ತದೆ. ಇದರ ವೈಶಾಲ್ಯವನ್ನೂ UO2 ನಷ್ಟು ಮಾರ್ಪಡಿಸಲಾಗಿದೆ; ಈ ಮಾರ್ಪಾಡು ಸಂದರ್ಭ ರಶ್ಮಿಯು ಅದರ ಕೇಂದ್ರ ದಿಕ್ಕಿನ ಸುತ್ತ ವಿವರ್ತಿಸುವಂತೆ ಮಾಡುತ್ತದೆ. ನಾಲ್ಕನೆಯ ಪರಿಮಾಣವನ್ನು "ಅನುಬದ್ಧ ವಸ್ತು ರಶ್ಮಿ" ಎಂದು ಕರೆಯಲಾಗುತ್ತದೆ. ಇದು ವಸ್ತು ರಶ್ಮಿಗೇ ಪ್ರತಿಲೋಮವಾದ ವಕ್ರತೆಯನ್ನು ಹೊಂದಿರುತ್ತದೆ. ಮತ್ತು ಹೊಲೊಗ್ರಾಫಿಕ್ ತಟ್ಟೆಯ ಆಚೆಗಿರುವ ಅಂತರದಲ್ಲಿ ವಸ್ತುವಿನ ನೈಜ ಚಿತ್ರವನ್ನು ರಚಿಸುತ್ತದೆ.

ಮುಂಚಿನ ಹೊಲೊಗ್ರಾಮ್‍ಗಳಲ್ಲಿ ವಸ್ತು ಮತ್ತು ಸಂದರ್ಭ ರಶ್ಮಿಗಳು ಎರಡೂ ದಾಖಲಿಸುವ ಮಾಧ್ಯಮವನ್ನು ಸಹಜವಾಗಿ ಪ್ರಕಾಶಿಸುತ್ತಿದ್ದವು. ಹಾಗಾಗಿ ಹೊಲೊಗ್ರಾಮ್‍ನಿಂದ ಹೊರಹೊಮ್ಮುವ ಎಲ್ಲ ನಾಲ್ಕು ರಶ್ಮಿಗಳು ಒಂದರ ಮೇಲೊಂದು ಅಧ್ಯಾರೋಪಿತವಾಗಿರುತ್ತಿದ್ದವು. ಈ ಸಮಸ್ಯೆಯನ್ನು ನಿವಾರಿಸಲೋಸುಗ ಅಕ್ಷರೇಖೆ ರಹಿತ ಹೊಲೊಗ್ರಾಮನ್ನು ಲೀಥ್ ಮತ್ತು ಉಪಾಟ್ನೇಕ್ಸ್ ಅಭಿವೃದ್ಧಿಪಡಿಸಿದರು. ಹೊಲೊಗ್ರಾಫಿಕ್ ದಾಖಲಿಸುವ ಮಾಧ್ಯಮದ ಮೇಲೆ ವಸ್ತು ಹಾಗೂ ಸಂದರ್ಭ ರಶ್ಮಿಗಳು ಚೆನ್ನಾಗಿ ಬೇರ್ಪಟ್ಟ ಕೋನಗಳಲ್ಲಿ ಬೀಳುತ್ತವೆ. ಮಿಥ್ಯಾ, ನೈಜ ಹಾಗೂ ಸಂದರ್ಭ ತರಂಗಮುಖಗಳೆಲ್ಲವೂ ಬೇರೆ ಬೇರೆ ಕೋನಗಳಲ್ಲಿ ಹೊರಹೊಮ್ಮುತ್ತವೆ. ಹೀಗಾಗಿ ಪುನರ್ನಿರ್ಮಿತ ವಸ್ತು ರಶ್ಮಿಯನ್ನು ಸ್ಪಷ್ಟವಾಗಿ ಚಿತ್ರಿಸಲು ಸಾಧ್ಯವಾಗುತ್ತದೆ.

ಹೊಲೊಗ್ರಾಮನ್ನು ವೀಕ್ಷಿಸುವುದು

[ಬದಲಾಯಿಸಿ]
ವಿಸೃತ ಬೆಳಕಿನ ಹಿನ್ನೆಲೆಯ ಮುಂದಿರುವ ಹೊಲೊಗ್ರಾಮ್‍ನ ಛಾಯಾಚಿತ್ರ- 8x8 ಮಿ.ಮಿ.

ಬಲಕ್ಕಿರುವ ಚಿತ್ರವು ವಿಸೃತ ಬೆಳಕಿನ ಹಿನ್ನೆಲೆಯಲ್ಲಿ ತೆಗೆದುಕೊಂಡ, ಛಾಯಾಗ್ರಹಣ ಎಮಲ್ಷನ್ ಮೇಲೆ ದಾಖಲಿಸಲ್ಪಟ್ಟ ಹೊಲೊಗ್ರಾಮ್‍ನ ಛಾಯಾಚಿತ್ರವಾಗಿದೆ. ತೋರಿಸಲಾದ ವಿಸ್ತೀರ್ಣವು ಸುಮಾರು 8 ಮಿ.ಮಿ. ಬೈ 8 ಮಿ.ಮಿ. ಇದೆ. ಹೊಲೊಗ್ರಾಫಿಕ್ ದಾಖಲಾತಿಯು ತೀಕ್ಷ್ಣತೆಯಲ್ಲಿನ ಯಾದೃಚ್ಛಿಕ ವ್ಯತ್ಯಯನವಾಗಿದೆ. ಇದು ಒಂದು ವಸ್ತುನಿಷ್ಠ ಕಲೆ ವಿನ್ಯಾಸವಾಗಿದ್ದು ಕ್ರಮಬದ್ಧವಾದ ಗೆರೆಗಳಲ್ಲ. ಈ ಕ್ರಮಬದ್ಧವಾದ ಗೆರೆಗಳು ಛಾಯಾಗ್ರಹಣ ಎಮಲ್ಷನ್‌ ಅಂಟಿಸಲ್ಪಟ್ಟ ಗಾಜಿನ ತಟ್ಟೆಯಲ್ಲಿ ಬಹುಸಂಖ್ಯೆಯ ಪ್ರತಿಫಲನಗಳಿಂದ ಉಂಟಾದ ವ್ಯತಿಕರಣದ ಕಾರಣದಿಂದ ಆಗಿರಬಹುದು. ಹೇಗೆ ಗ್ರಾಮೊಫೋನ್ ಧ್ವನಿಮುದ್ರಣ ಮೇಲ್ಮೈಯ ರಚನೆಯನ್ನು ನೋಡಿ ಗ್ರಾಮೊಫೋನ್ ಧ್ವನಿಮುದ್ರಣದಲ್ಲಿರುವ ಸಂಗೀತವನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲವೊ ಅದೇ ರೀತಿ ಈಗ ಮುಂದಕ್ಕೆ ಇದರಿಂದ ಹೊಲೊಗ್ರಾಮ್‍ನ ವಿಷಯವನ್ನು ತಿಳಿದುಕೊಳ್ಳುವುದು ಸಾಧ್ಯವಿಲ್ಲ. ಒಂದು ಅಪಸಾರಿ ಲೇಸರ್ ರಶ್ಮಿಯು ಈ ಹೊಲೊಗ್ರಾಮನ್ನು ಪ್ರಕಾಶಿಸಿದಾಗ, ವೀಕ್ಷಕನು ಅದನ್ನು ತಯಾರಿಸಲು ಬಳಸಲಾದ ವಸ್ತುವನ್ನು (ಈ ಸಂದರ್ಭದಲ್ಲಿ ಆಟದ ವ್ಯಾನ್) ಕಾಣುತ್ತಾನೆ. ಏಕೆಂದರೆ ವಸ್ತುವಿನಿಂದ ಚದರಿದ ಬೆಳಕನ್ನು ಪುನರ್ನಿರ್ಮಿಸಲು ಬೆಳಕು ಹೊಲೊಗ್ರಾಮ್‍ನಿಂದ ವಿವರ್ತಿಸಲ್ಪಡುತ್ತದೆ.

ಒಬ್ಬರು ಒಂದು ದೃಶ್ಯದತ್ತ ನೋಡಿದಾಗ ಪ್ರತಿಯೊಂದು ಕಣ್ಣು ದೃಶ್ಯದಿಂದ ಚದರಿದ ಬೆಳಕಿನ ಒಂದು ಭಾಗವನ್ನು ಸೆರೆಹಿಡಿಯುತ್ತದೆ. ಕಣ್ಣಿನ ಮಸೂರವು ರೆಟಿನಾದ ಮೇಲೆ ದೃಶ್ಯದ ಒಂದು ಚಿತ್ರವನ್ನು ರಚಿಸುತ್ತದೆ. ಪ್ರತಿಯೊಂದು ಕೋನೀಯ ಸ್ಥಾನದಿಂದ ಬೆಳಕು ಚಿತ್ರದ ಸಮತಲದಲ್ಲಿನ ನಿರ್ದಿಷ್ಟ ಕೋನೀಯ ಸ್ಥಾನದಲ್ಲಿ ಕೇಂದ್ರೀಕರಿಸಲ್ಪಡುತ್ತದೆ. ಹೊಲೊಗ್ರಾಮ್ ತನ್ನ ಮೇಲೆ ಬಿದ್ದ ಚದರಿದ ಬೆಳಕಿನ ಕ್ಷೇತ್ರದ ಸಂಪೂರ್ಣವನ್ನು ಪುನರ್ನಿರ್ಮಿಸುವುದರಿಂದ, ವೀಕ್ಷಕನು ಅದೇ ಚಿತ್ರವನ್ನು ನೋಡುತ್ತಾನೆ, ಅದು ವಸ್ತುವಿನಿಂದ ಚದರಿದ ಬೆಳಕಿನ ಕ್ಷೇತ್ರದ ಮೂಲಕ ಪಡೆದಿದ್ದಾಗಿರಬಹುದು ಅಥವಾ ಹೊಲೊಗ್ರಾಮ್‍ನಿಂದ ಪುನರ್ನಿರ್ಮಿಸಲ್ಪಟ್ಟ ಬೆಳಕಿನ ಕ್ಷೇತ್ರವೇ ಇರಬಹುದು. ವ್ಯಕ್ತಿಯು ನೋಡುತ್ತಿರುವ ವಸ್ತು ನಿಜವಾದದ್ದೇ ಅಥವಾ ಮಿಥ್ಯಾವಸ್ತುವೇ ಎಂದು ಹೇಳುವುದು ಸಾಧ್ಯವಿಲ್ಲ. ವೀಕ್ಷಕನು ಚಲಿಸಿದರೆ ವಸ್ತುವೂ ನಿಖರವಾಗಿ ಅದೇ ರೀತಿಯಲ್ಲಿ ಚಲಿಸುವಂತೆ ತೋರುತ್ತದೆ, ವ್ಯಕ್ತಿಯು ಮೂಲ ಬೆಳಕಿನ ಕ್ಷೇತ್ರವನ್ನು ನೋಡುತ್ತಿದ್ದರೂ ಅಥವಾ ಪುನರ್ನಿರ್ಮಿಸಲ್ಪಟ್ಟ ಬೆಳಕಿನ ಕ್ಷೇತ್ರವನ್ನು ನೋಡುತ್ತಿದ್ದರೂ. ದೃಶ್ಯದಲ್ಲಿ ಹಲವಾರು ವಸ್ತುಗಳಿದ್ದರೆ, ಅವು ಸ್ಥಾನಾಭಾಸವನ್ನು ಪ್ರದರ್ಶಿಸುತ್ತವೆ. ವೀಕ್ಷಕನು ಎರಡೂ ಕಣ್ಣುಗಳನ್ನು ಬಳಸುತ್ತಿದ್ದರೆ (ಸ್ಟೀರಿಯೊಸ್ಕೋಪಿಕ್ ದೃಷ್ಟಿ), ಹೊಲೊಗ್ರಾಮನ್ನು ನೋಡುತ್ತಿರುವಾಗ ವ್ಯಕ್ತಿಗೆ ಆಳದ ಮಾಹಿತಿ ಸಿಗುತ್ತದೆ, ನಿಖರವಾಗಿ ವ್ಯಕ್ತಿಯು ನೈಜ ದೃಶ್ಯವನ್ನು ನೋಡುತ್ತಿರುವಾಗ ಆಗುವ ರೀತಿಯಲ್ಲೇ.

ಪೂರ್ಣಲೇಖವು ೩ಡಿ ಛಾಯಾಚಿತ್ರವಲ್ಲ. ಛಾಯಾಚಿತ್ರವು ಏಕೈಕ ದೃಷ್ಟಿಕೋನದಿಂದ ದಾಖಲಿಸಲ್ಪಟ್ಟ ದೃಶ್ಯದ ಚಿತ್ರವನ್ನು ದಾಖಲಿಸುತ್ತದೆ. ಇದು ಕ್ಯಾಮರಾ ಮಸೂರದ ಸ್ಥಾನದಿಂದ ವ್ಯಾಖ್ಯಾನಿಸಲ್ಪಟ್ಟಿರುತ್ತದೆ. ಪೂರ್ಣಲೇಖವು ಒಂದು ಚಿತ್ರವಲ್ಲ, ಬದಲಾಗಿ ಚದರಿದ ಬೆಳಕಿನ ಕ್ಷೇತ್ರವನ್ನು ಪುನರ್ನಿರ್ಮಿಸಲು ಸಾಧ್ಯವಾಗಿಸುವ ಒಂದು ಸಂಕೇತೀಕರಣ ವ್ಯವಸ್ಥೆ. ನಂತರ ಚಿತ್ರಗಳನ್ನು ಪುನರ್ನಿರ್ಮಿತ ರಶ್ಮಿಯಲ್ಲಿನ ಯಾವುದೇ ಬಿಂದುವಿನಿಂದ ರಚಿಸಬಹುದು, ಕ್ಯಾಮರಾದಿಂದ ಅಥವಾ ಕಣ್ಣಿನಿಂದ. ಪೂರ್ಣಲೇಖನದ ಮುಂಚಿನ ದಿನಗಳಲ್ಲಿ ವಸ್ತುವಾಗಿ ಒಂದು ಚದುರಂಗ ಫಲಕವನ್ನು ಬಳಸುವುದು ಬಹಳ ಸಾಮಾನ್ಯವಾಗಿತ್ತು, ಮತ್ತು ನಂತರ ಚದುರಂಗದ ಕಾಯಿಗಳ ತುಲನಾತ್ಮಕ ಸ್ಥಾನಗಳು ಬದಲಾದಂತೆ ಹೇಗೆ ತೋರಿದವು ಎಂಬುದನ್ನು ತೋರಿಸಲು, ಪುನರ್‌ನಿರ್ಮಿತ ಬೆಳಕನ್ನು ಬಳಸಿ ಹಲವಾರು ಭಿನ್ನ ಕೋನಗಳಲ್ಲಿ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲಾಗುತ್ತಿತ್ತು.

ಹೊಲೊಗ್ರಾಮ್‍ನಲ್ಲಿನ ಪ್ರತಿ ಬಿಂದು ಸಮಗ್ರ ಮೂಲ ದೃಶ್ಯದಿಂದ ಬೆಳಕನ್ನು ಒಳಗೊಂಡಿರುವುದರಿಂದ, ತಾತ್ತ್ವಿಕವಾಗಿ ಸಮಗ್ರ ದೃಶ್ಯವನ್ನು ಹೊಲೊಗ್ರಾಮ್‍ನ ಕ್ರಮವಿಲ್ಲದ ಒಂದು ಸಣ್ಣ ಭಾಗದಿಂದ ಪುನರ್‌ನಿರ್ಮಿಸಬಹುದು. ಈ ಪರಿಕಲ್ಪನೆಯನ್ನು ಪ್ರಮಾಣೀಕರಿಸಲು, ಹೊಲೊಗ್ರಾಮನ್ನು ಸಣ್ಣ ಚೂರುಗಳಾಗಿ ಓಡೆಯಬಹುದು ಮತ್ತು ಆಗಲೂ ಪ್ರತಿ ಸಣ್ಣ ಚೂರಿನಿಂದ ಸಂಪೂರ್ಣ ವಸ್ತುವನ್ನು ನೋಡಬಹುದು. ಹೊಲೊಗ್ರಾಮನ್ನು ವಸ್ತುವಿನ ಮೇಲಿರುವ "ಕಿಟಕಿ" ಎಂದು ಭಾವಿಸಿದರೆ, ಹೊಲೊಗ್ರಾಮ್‍ನ ಪ್ರತಿ ಸಣ್ಣ ಚೂರು ಕೇವಲ ಕಿಟಕಿಯ ಒಂದು ಭಾಗವಾಗಿದ್ದು ಅದರಿಂದ ಅದನ್ನು ಈಗಲೂ ನೋಡಬಹುದು, ಕಿಟಕಿಯ ಉಳಿದ ಭಾಗ ಮುಚ್ಚಿಕೊಂಡಿದ್ದರೂ.

ಹೊಲೊಗ್ರಾಮ್‍ನ ಗಾತ್ರವನ್ನು ಕಡಿಮೆಮಾಡಿದಂತೆ ಪೃಥಕ್ಕರಣ ಸಾಮರ್ಥ್ಯ ಹಾನಿಯಾಗುತ್ತದೆ - ಚಿತ್ರವು ಹೆಚ್ಚು "ಅಸ್ಪಷ್ಟ"ವಾಗುತ್ತದೆ. ಇದು ವಿವರ್ತನೆಯ ಒಂದು ಪರಿಣಾಮವಾಗಿದೆ ಮತ್ತು ಹೇಗೆ ಮಸೂರ ಅಥವಾ ಮಸೂರ ರಂಧ್ರದ ವ್ಯಾಸವು ಕಡಿಮೆಯಾದಂತೆ ಪೃಥಕ್ಕರಣ ಸಾಮರ್ಥ್ಯ ಹೆಚ್ಚು ನಯವಿಲ್ಲದಂತೆ ಆಗುತ್ತದೆಯೊ ಅದೇ ರೀತಿಯಲ್ಲೇ ಇದು ಉದ್ಭವಿಸುತ್ತದೆ, ಏಕೆಂದರೆ ಒಂದು ಚಿತ್ರಣ ವ್ಯವಸ್ಥೆಯ ಪೃಥಕ್ಕರಣ ಸಾಮರ್ಥ್ಯವು ಅಂತಿಮವಾಗಿ ವಿವರ್ತನೆಯಿಂದ ಸೀಮಿತವಾಗಿರುತ್ತದೆ.

ವೀಕ್ಷಿಸುವುದು ಮತ್ತು ರಚಿಸುವುದು

[ಬದಲಾಯಿಸಿ]

ಪೂರ್ಣಲೇಖನ ದಾಖಲಿಸುವಿಕೆ ಮಾಡುವ ಸಮಯದಲ್ಲಿ ವಸ್ತು ಹಾಗೂ ಉಲ್ಲೇಖ ರಶ್ಮಿಗಳು ಸ್ಥಿರವಾಗಿರುವ ವ್ಯತಿಕರಣ ವಿನ್ಯಾಸವನ್ನು ಸೃಷ್ಟಿಸುವುದು ಸಾಧ್ಯವಾಗಬೇಕು. ಇದನ್ನು ಮಾಡಲು, ಈ ಸಮಯದಲ್ಲಿ ಅವುಗಳು ಒಂದೇ ಆವರ್ತನವನ್ನು ಮತ್ತು ಒಂದೇ ರೀತಿಯ ತುಲನಾತ್ಮಕ ಹಂತವನ್ನು ಹೊಂದಿರಬೇಕು, ಅಂದರೆ, ಅವು ಪರಸ್ಪರವಾಗಿ ಸಂಸಕ್ತವಾಗಿರಬೇಕು. ಅನೇಕ ಲೇಸರ್ ರಶ್ಮಿಗಳು ಈ ಷರತ್ತನ್ನು ಈಡೇರಿಸುತ್ತವೆ, ಮತ್ತು ಅವುಗಳ ಆವಿಷ್ಕರಣ ಕಾಲದಿಂದ ಹೊಲೊಗ್ರಾಮ್‍ಗಳನ್ನು ತಯಾರಿಸಲು ಲೇಸರ್‌ಗಳನ್ನು ಬಳಸಲಾಗಿದೆ. ಆದರೆ ಗ್ಯಾಬೊರ್‌ನ ಮೊದಲ ಹೊಲೊಗ್ರಾಮ್‍ಗಳು 'ಅರೆ-ವರ್ಣೀಯ' ಬೆಳಕಿನ ಮೂಲಗಳನ್ನು ಬಳಸಿದ್ದವು ಎಂಬುದನ್ನು ಗಮನಿಸಬೇಕು. ತಾತ್ತ್ವಿಕವಾಗಿ, ಸಂಸಕ್ತಿಯ ಷರತ್ತನ್ನು ಈಡೇರಿಸಬಹುದಾಗಿದ್ದರೆ ಎರಡು ಪ್ರತ್ಯೇಕ ಬೆಳಕಿನ ಮೂಲಗಳನ್ನು ಬಳಸಬಹುದು, ಆದರೆ ಅಭ್ಯಾಸದಲ್ಲಿ ಒಂದೇ ಲೇಸರನ್ನು ಯಾವಾಗಲೂ ಬಳಸಲಾಗುತ್ತದೆ.

ಜೊತೆಗೆ, ಅಂಚಿನ ವಿನ್ಯಾಸವನ್ನು ದಾಖಲಿಸಲು ಬಳಸಲಾಗುವ ಮಾಧ್ಯಮಕ್ಕೆ ಅಂಚಿನ ಮಾದರಿಗಳನ್ನು ಪೃಥಕ್ಕರಿಸಲು ಸಾಧ್ಯವಾಗಬೇಕು. ಬಳಸಲಾಗುವ ಕೆಲವು ಹೆಚ್ಚು ಸಾಮಾನ್ಯವಾದ ಮಾಧ್ಯಮಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ. ಅಂಚುಗಳ ಅಂತರವು ವಸ್ತು ಮತ್ತು ಸಂದರ್ಭ ರಶ್ಮಿಗಳ ನಡುವಣ ಕೋನವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ಈ ಕೋನವು 45° ಆಗಿದ್ದರೆ, ಮತ್ತು ಬೆಳಕಿನ ತರಂಗಾಂತರವು 0.5μm ಆಗಿದ್ದರೆ, ಅಂಚಿನ ಅಂತರವು ಸುಮಾರು 0.7μm ಅಥವಾ ೧೩೦೦ ಸಾಲುಗಳು/ಮಿ.ಮಿ. ಆಗಿರುವುದು. ಎಲ್ಲ ಅಂಚುಗಳು ಪೃಥಕ್ಕರಣವಾಗಿಲ್ಲದಿದ್ದರೂ ಒಂದು ಕೆಲಸಮಾಡುವ ಹೊಲೊಗ್ರಾಮನ್ನು ಪಡೆಯಬಹುದು, ಆದರೆ ದಾಖಲಿಸುವ ಮಾಧ್ಯಮದ ಪೃಥಕ್ಕರಣ ಸಾಮರ್ಥ್ಯ ಕಡಿಮೆಯಾದಂತೆ ಚಿತ್ರದ ಪೃಥಕ್ಕರಣ ಸಾಮರ್ಥ್ಯ ಕಡಿಮೆಯಾಗುತ್ತದೆ.

ಹೊಲೊಗ್ರಾಮನ್ನು ತಯಾರಿಸುವಾಗ ಯಾಂತ್ರಿಕ ಸ್ಥಿರತೆಯೂ ಬಹಳ ಮುಖ್ಯವಾಗಿದೆ. ಕಂಪನ ಅಥವಾ ಗಾಳಿಯ ಚಲನೆಯ ಕಾರಣದಿಂದ ವಸ್ತು ಹಾಗೂ ಸಂದರ್ಭ ರಶ್ಮಿಗಳ ನಡುವಿನ ಯಾವುದೇ ತುಲನಾತ್ಮಕ ಅವಸ್ಥಾ ಬದಲಾವಣೆಯು, ದಾಖಲಿಸುವ ಮಾಧ್ಯಮದ ಮೇಲಿನ ಅಂಚುಗಳು ಚಲಿಸುವಂತೆ ಮಾಡುತ್ತದೆ. ಅವಸ್ಥಾ ಬದಲಾವಣೆಯು π ಗಿಂತ ಹೆಚ್ಚಿದ್ದರೆ, ಅಂಚು ವಿನ್ಯಾಸವು ಸರಾಸರಿಯಾಗುತ್ತದೆ, ಮತ್ತು ಯಾವುದೇ ಪೂರ್ಣಲೇಖನ ದಾಖಲಾತಿಯು ಸಿಗುವುದಿಲ್ಲ. ದಾಖಲಿಸುವ ಸಮಯವು ಹಲವು ಸೆಕೆಂಡ್‌ಗಳು ಅಥವಾ ಹೆಚ್ಚಾಗಿರಬಹುದು, ಮತ್ತು π ಯಷ್ಟು ಅವಸ್ಥಾ ಬದಲಾವಣೆ λ/2 ಯಷ್ಟು ಚಲನೆಗೆ ಸರಿಸಮವಾಗಿದೆ ಎಂದು ಸಮ್ಮತವಾಗಿದ್ದರೆ ಇದು ಸಾಕಷ್ಟು ಕಟ್ಟುನಿಟ್ಟಾದ ಸ್ಥಿರತಾ ಅವಶ್ಯಕತೆಯಾಗಿದೆ.

ಸಾಮಾನ್ಯವಾಗಿ, ಬೆಳಕಿನ ಸಂಸಕ್ತಿ ಲಂಬವು ಪೂರ್ಣಲೇಖನರೀತ್ಯ ದಾಖಲಿಸಬಲ್ಲ ಆಸಕ್ತಿಯ ದೃಶ್ಯದಲ್ಲಿನ ಗರಿಷ್ಠ ಆಳವನ್ನು ನಿರ್ಧರಿಸುತ್ತದೆ. ಒಂದು ಉತ್ತಮ ಪೂರ್ಣಲೇಖನ ಲೇಸರ್ ಸಾಮಾನ್ಯವಾಗಿ ಹಲವಾರು ಮೀಟರ್‌ಗಳ ಸಂಸಕ್ತಿ ಲಂಬವನ್ನು ಹೊಂದಿರುತ್ತದೆ. ಇದು ಆಳದ ಪೂರ್ಣಲೇಖನಕ್ಕೆ ಸಾಕಷ್ಟು ಇರುತ್ತದೆ. ನಿರ್ದಿಷ್ಟ ಪೆನ್ ಲೇಸರ್ ತೋರುಗಡ್ಡಿಗಳನ್ನು ಚಿಕ್ಕ ಹೊಲೊಗ್ರಾಮ್‍ಗಳನ್ನು ತಯಾರಿಸಲು ಬಳಸಲಾಗಿದೆ. ಈ ಹೊಲೊಗ್ರಾಮ್‍ಗಳ ಗಾತ್ರವು ಲೇಸರ್ ತೋರುಗಡ್ಡಿಗಳ ಸಂಸಕ್ತಿ ಲಂಬದಿಂದ ಸೀಮಿತವಾಗಿಲ್ಲ (ಅದು ಹಲವಾರು ಮೀಟರ್‌ಗಳನ್ನು ಮೀರಬಹುದು), ಬದಲಾಗಿ 5 mW ಗಿಂತ ಕಡಿಮೆ ಇರುವ ಅವುಗಳ ವಿದ್ಯುತ್ ಸಾಮರ್ಥ್ಯದಿಂದ ಸೀಮಿತವಾಗಿರುತ್ತವೆ.

ಸಾಮಾನ್ಯವಾಗಿ, ದೃಶ್ಯವನ್ನು ರಚಿಸುವ ವಸ್ತುಗಳು ದೃಷ್ಟಿರೀತ್ಯ ಒರಟಾದ ಮೇಲ್ಮೈಗಳನ್ನು ಹೊಂದಿರಬೇಕು, ಏಕೆಂದರೆ ಅವು ಬೆಳಕನ್ನು ವಿಶಾಲ ವ್ಯಾಪ್ತಿಯ ಕೋನಗಳಲ್ಲಿ ಚದರಿಸುತ್ತವೆ. ಒಂದು ಕನ್ನಡಿಯಂತೆ ಪ್ರತಿಫಲಿಸುವ (ಅಥವಾ ಹೊಳೆಯುವ) ಮೇಲ್ಮೈಯು ಬೆಳಕನ್ನು ತನ್ನ ಮೇಲ್ಮೈಯ ಪ್ರತಿ ಬಿಂದುವಿನಲ್ಲಿ ಕೇವಲ ಒಂದೇ ದಿಕ್ಕಿನಲ್ಲಿ ಪ್ರತಿಫಲಿಸುತ್ತದೆ, ಹಾಗಾಗಿ ಸಾಮಾನ್ಯವಾಗಿ, ಬಹುತೇಕ ಬೆಳಕು ದಾಖಲಿಸುವ ಮಾಧ್ಯಮದ ಮೇಲೆ ಬೀಳುವುದಿಲ್ಲ. ಒರಟು ಮೇಲ್ಮೈಯುಳ್ಳ ವಸ್ತುಗಳಿಂದ ಚದರಲ್ಪಟ್ಟ ಬೆಳಕು ಯಾದೃಚ್ಛಿಕವಾದ ವೈಶಾಲ್ಯ ಹಾಗೂ ಅವಸ್ಥೆಯನ್ನು ಹೊಂದಿರುವ ವಸ್ತುಭೂತ ಕಲೆಯ ವಿನ್ಯಾಸವನ್ನು ರಚಿಸುತ್ತದೆ.

ಸಂದರ್ಭ ರಶ್ಮಿಯು ಸಾಮಾನ್ಯವಾಗಿ ಸಮತಲ ತರಂಗಮುಖವಾಗಿರುವುದಿಲ್ಲ; ಅದು ಸಾಮಾನ್ಯವಾಗಿ ಅಪಸಾರಿ ತರಂಗಮುಖವಾಗಿದ್ದು ಅದನ್ನು ಲೇಸರ್ ರಶ್ಮಿಯ ಮಾರ್ಗದಲ್ಲಿ ಒಂದು ಪೀನ ಮಸೂರವನ್ನು ಇರಿಸುವುದರ ಮೂಲಕ ರಚಿಸಲಾಗುತ್ತದೆ.

ಪ್ರಸಾರ ಹೊಲೊಗ್ರಾಮ್‍ನಿಂದ ವಸ್ತುವನ್ನು ನಿಖರವಾಗಿ ಪುನರ್‌ನಿರ್ಮಿಸಲು, ಸಂದರ್ಭ ರಶ್ಮಿಯು ಅದೇ ತರಂಗಾಂತರ ಮತ್ತು ವಕ್ರತೆಯನ್ನು ಹೊಂದಿರಬೇಕು, ಮತ್ತು ಮೂಲ ಸಂದರ್ಭ ರಶ್ಮಿಯಂತೆ ಹೊಲೊಗ್ರಾಮನ್ನು ಅದೇ ಕೋನದಲ್ಲಿ ಪ್ರಕಾಶಿಸಬೇಕು (ಅಂದರೆ ಕೇವಲ ಅವಸ್ಥೆ ಬದಲಿಸಲ್ಪಡಬಹುದು). ಈ ಯಾವುದೇ ಷರತ್ತುಗಳಿಂದ ಅಡ್ಡ ಸರಿದರೆ ವಿಕೃತವಾದ ಪುನರ್‌ನಿರ್ಮಾಣವನ್ನು ನೀಡುವುದು. ಹೆಚ್ಚುಕಡಿಮೆ ಎಲ್ಲ ಹೊಲೊಗ್ರಾಮ್‍ಗಳನ್ನು ಲೇಸರ್‌ಗಳನ್ನು ಬಳಸಿ ದಾಖಲಿಸಲಾಗುತ್ತದೆಯಾದರೂ, ಪುನರ್‌ನಿರ್ಮಿತ ಚಿತ್ರವನ್ನು ಗುರುತಿಸಲು ಒಂದು ಕಿರು-ತರಂಗವ್ಯಾಪ್ತಿ ದೀಪ ಅಥವಾ ಸೂರ್ಯನ ಬೆಳಕು ಕೂಡ ಸಾಕು.

ಹೊಲೊಗ್ರಾಮನ್ನು ಪುನರ್ನಿಮಿಸಲು ಬಳಸಲಾದ ಬೆಳಕು ಹೆಚ್ಚಿನ ತರಂಗಾಂತರವನ್ನು ಹೊಂದಿದ್ದರೆ ಪುನರ್ನಿಮಿತ ಹೊಲೊಗ್ರಾಮ್ ದೊಡ್ಡದಾಗಿರುತ್ತದೆ. ಇದು ಆರಂಭದಲ್ಲಿ ಸ್ವಲ್ಪ ಆಸಕ್ತಿಯನ್ನು ಸೃಷ್ಟಿಸಿತು ಏಕೆಂದರೆ ಅಣುಗಳ ಹೊಲೊಗ್ರಾಮ್‍ಗಳನ್ನು ತಯಾರಿಸಲು ಮತ್ತು ಅವುಗಳನ್ನು ಗೋಚರ ಬೆಳಕನ್ನು ಬಳಸಿ ನೋಡಲು ಕ್ಷ-ಕಿರಣಗಳನ್ನು ಬಳಸುವುದು ಸಾಧ್ಯವಿದೆ ಎಂದು ತೋರಿತು. ಆದರೆ ಕ್ಷ-ಕಿರಣ ಹೊಲೊಗ್ರಾಮ್‍ಗಳನ್ನು ಇಂದಿನವರೆಗೆ ಸೃಷ್ಟಿಸಲಾಗಿಲ್ಲ.[] ಹಲವಾರು ವಿಭಿನ್ನ ಆವರ್ತನಗಳನ್ನು ಹೊರಸೂಸುವ ಒಂದು ಬೆಳಕಿನ ಮೂಲವನ್ನು ಬಳಸಿ ಈ ಪರಿಣಾಮವನ್ನು ತೋರ್ಪಡಿಸಬಹುದು.[]

ಪೂರ್ಣಲೇಖನ ವ್ಯತಿಕರಣಮಾಪನದಲ್ಲಿ ನಿಖರವಾದ ಪುನರ್ನಿರ್ಮಾಣವನ್ನು ಸಾಧಿಸಲಾಗುತ್ತದೆ. ಪ್ರತ್ಯಕ್ಷ ವಸ್ತುವಿನ ಯಾವುದೇ ಸ್ಥಳಾಂತರವನ್ನು ಕಂಡುಹಿಡಿಯಲು ಅಲ್ಲಿ ಪೂರ್ಣಲೇಖನರೀತ್ಯ ಪುನರ್ನಿರ್ಮಿತವಾದ ತರಂಗಮುಖವು ನೇರ ತರಂಗಮುಖದೊಂದಿಗೆ ವ್ಯತಿಕರಿಸುತ್ತದೆ. ವಸ್ತುವು ಚಲಿಸಿರದಿದ್ದಲ್ಲಿ ಶೂನ್ಯ ಅಂಚನ್ನು ನೀಡುತ್ತದೆ.

ಪೂರ್ಣಲೇಖನ ದಾಖಲೀಕರಣ ಮಾಧ್ಯಮಗಳು

[ಬದಲಾಯಿಸಿ]

ಮೇಲೆ ಚರ್ಚಿಸಿದಂತೆ, ವ್ಯತಿಕರಣ ಅಂಚುಗಳನ್ನು ಪೃಥಕ್ಕರಿಸಲು ದಾಖಲಿಸುವ ಮಾಧ್ಯಮಕ್ಕೆ ಸಾಧ್ಯವಾಗಬೇಕು. ವ್ಯವಸ್ಥೆಯು ದೃಷ್ಟಿರೀತ್ಯ ಸ್ಥಿರವಾಗಿ ಉಳಿಯುವಷ್ಟು ಸಣ್ಣ ಕಾಲಾವಧಿಯಲ್ಲಿ ಅಂಚು ವಿನ್ಯಾಸವನ್ನು ದಾಖಲಿಸಲು ಸಾಕಷ್ಟು ಸೂಕ್ಷ್ಮಗ್ರಾಹಿಯಾಗಿರಬೇಕು, ಅಂದರೆ ಎರಡು ರಶ್ಮಿಗಳ ಯಾವುದೇ ಸಾಪೇಕ್ಷ ಚಲನೆಯು λ/2 ಗಿಂತ ಗಣನೀಯವಾಗಿ ಕಡಿಮೆ ಇರಬೇಕು.

ದಾಖಲಿಸುವ ಮಾಧ್ಯಮವು ವ್ಯತಿಕರಣ ವಿನ್ಯಾಸವನ್ನು (ತನ್ನ ಮೇಲೆ ಬೀಳುವ ಬೆಳಕಿನ ರಶ್ಮಿಯ ವೈಶಾಲ್ಯ ಅಥವಾ ಅವಸ್ಥೆಯನ್ನು ಮಾರ್ಪಡಿಸುವ) ದೃಷ್ಟಿಯ ಘಟಕವಾಗಿ ಪರಿವರ್ತಿಸಬೇಕು. ಇವುಗಳನ್ನು ಕ್ರಮವಾಗಿ ವೈಶಾಲ್ಯ ಮತ್ತು ಅವಸ್ಥಾ ಹೊಲೊಗ್ರಾಮ್‌ಗಳೆಂದು ಕರೆಯಲಾಗುತ್ತದೆ. ವೈಶಾಲ್ಯ ಹೊಲೊಗ್ರಾಮ್‌ಗಳಲ್ಲಿ, ತಿರುವರ್ತನವು ಹೊಲೊಗ್ರಾಮ್‌ನಿಂದ ಬೆಳಕಿನ ಬದಲಾಗುವ ಹೀರುವಿಕೆಯಲ್ಲಿ ಇರುವುದು, ಅದನ್ನು ಪ್ರಕಾಶಿಸಿದ ಬೆಳಕಿನ ತೀವ್ರತೆಯನ್ನು ಅವಲಂಬಿಸಿ ಹೆಚ್ಚು ಅಥವಾ ಕಡಿಮೆ ಚೂಷಕವಿರುವ ಸ್ಫುಟಗೊಳಿಸಿದ ಛಾಯಾಗ್ರಹಣ ಎಮಲ್ಷನ್‌ನಲ್ಲಿ ಇರುವಂತೆ. ಅವಸ್ಥಾ ಹೊಲೊಗ್ರಾಮ್‌ಗಳಲ್ಲಿ, ವಸ್ತುವಿನಲ್ಲಿನ ದೃಷ್ಟಿಯ ದೂರವನ್ನು (ಅಂದರೆ, ವಕ್ರೀಭವನ ಸೂಚ್ಯಂಕ ಅಥವಾ ಕೆಲವು ಸಂದರ್ಭಗಳಲ್ಲಿ ದಪ್ಪ) ಬದಲಾಯಿಸಲಾಗುತ್ತದೆ.

ಅವಸ್ಥಾ ಹೊಲೊಗ್ರಾಮ್‌ಗಳಿಗೆ ಬಳಸಲಾಗುವ ಬಹುತೇಕ ವಸ್ತುಗಳು ಹೊಲೊಗ್ರಾಮ್‍ಗಳ ಸೈದ್ಧಾಂತಿಕ ವಿವರ್ತನಾ ಸಾಮರ್ಥ್ಯವನ್ನು ತಲುಪುತ್ತವೆ, ಇದು ದಪ್ಪ ಹೊಲೊಗ್ರಾಮ್‌ಗಳಿಗೆ 100% (ಬ್ರಾಗ್ ವಿವರ್ತನಾ ಸಂದರ್ಭ) ಇರುವುದು ಮತ್ತು ತೆಳು ಹೊಲೊಗ್ರಾಮ್‌ಗಳಿಗೆ 33.9% (ರಾಮನ್-ನಾಥ್ ವಿವರ್ತನಾ ಸಂದರ್ಭ, ಸಾಮಾನ್ಯವಾಗಿ ಕೆಲವು μm ದಪ್ಪದ ಪೂರ್ಣಲೇಖನ ಪೊರೆಗಳು) ಇರುವುದು. ವೈಶಾಲ್ಯ ಹೊಲೊಗ್ರಾಮ್‌ಗಳು ಅವಸ್ಥಾ ಹೊಲೊಗ್ರಾಮ್‌ಗಳಿಗಿಂತ ಕಡಿಮೆ ಸಾಮರ್ಥ್ಯವನ್ನು ಹೊಂದಿರುತ್ತವೆ, ಆದ್ದರಿಂದ ಇವನ್ನು ಬಳಸುವುದು ಬಹಳ ವಿರಳ.

ಕೆಳಗಿನ ಪಟ್ಟಿಯು ಪೂರ್ಣಲೇಖನ ದಾಖಲೀಕರಣದ ಪ್ರಮುಖ ವಸ್ತುಗಳನ್ನು ತೋರಿಸುತ್ತದೆ. ಒಂದು ಅಸ್ತಿತ್ವದಲ್ಲಿರುವ ಹೊಲೊಗ್ರಾಮ್‌ನ ರಾಶಿ ನಕಲೀಕರಣದಲ್ಲಿ ಬಳಸಲಾಗುವ ವಸ್ತುಗಳನ್ನು ಇವು ಒಳಗೊಳ್ಳುವುದಿಲ್ಲ ಎಂಬುದನ್ನು ಗಮನಿಸಿ. ಪಟ್ಟಿಯಲ್ಲಿ ಕೊಟ್ಟಿರುವ ಪೃಥಕ್ಕರಣ ಮಿತಿಯು ಪ್ರತಿ ಮಿ.ಮಿ.ಗೆ ಜಾಲರಿಗಳ ಗರಿಷ್ಠ ಸಂಖ್ಯೆಯ ವ್ಯತಿಕರಣ ರೇಖೆಗಳನ್ನು ಸೂಚಿಸುತ್ತದೆ. ಆವಶ್ಯಕ ಒಡ್ಡಿಕೆಯು ದೀರ್ಘ ಒಡ್ಡಿಕೆಗೆ ಆಗಿದೆ. ಲಘು ಒಡ್ಡಿಕೆ ಸಮಯಗಳಿಗೆ (ಪ್ರತಿ ಸೆಕೆಂಡಿನ 1/1000ಕ್ಕೂ ಕಡಿಮೆ, ಉದಾಹರಣೆಗೆ ಸ್ಪಂದಿಸುವ ಲೇಸರ್‌) ಪರಸ್ಪರತೆ ವೈಫಲ್ಯದ ಕಾರಣ ಅಧಿಕ ಒಡ್ಡಿಕೆ ಬೇಕಾಗುತ್ತದೆ.

ಪೂರ್ಣಲೇಖನಕ್ಕೆ ದಾಖಲೀಕರಣ ವಸ್ತುಗಳ ಸಾಮಾನ್ಯ ಗುಣಗಳು. ಮೂಲ:[]
ವಸ್ತು ಮರುಬಳಕೆ ಸಂಸ್ಕರಣೆ ಹೊಲೊಗ್ರಾಮ್‌ನ ವಿಧ ಗರಿಷ್ಠ ಸಾಮರ್ಥ್ಯ ಅಗತ್ಯವಿರುವ ಒಡ್ಡಿಕೆ [mJ/cm²] ಪೃಥಕ್ಕರಣ ಮಿತಿ [mm−1]
ಛಾಯಾಗ್ರಹಣ ಎಮುಲ್ಷನ್‌ಗಳು ಇಲ್ಲ ತೇವ ವೈಶಾಲ್ಯ 6% 0.001–0.1 1,000–10,000
ಅವಸ್ಥೆ ((ಬ್ಲೀಚ್ ಮಾಡಿರುವುದು)) 60%
ಡೈಕ್ರೊಮೇಟೆಡ್‌ ಜೆಲಟಿನ್‌ ಇಲ್ಲ ತೇವ ಅವಸ್ಥೆ 100% 10 10,000
ಪ್ರಕಾಶಪ್ರತಿರೋಧಗಳು ಇಲ್ಲ ತೇವ ಅವಸ್ಥೆ 33% 10 3,000
ಫೋಟೋಥರ್ಮೋಪ್ಲಾಸ್ಟಿಕ್‌ಗಳು ಹೌದು ವಿದ್ಯುತ್ ಮತ್ತು ಉಷ್ಣ ಅವಸ್ಥೆ 33% 0.01 500–1,200
ಫೋಟೋಪಾಲಿಮರ್‌‌ಗಳು ಇಲ್ಲ ಒಡ್ಡಿಕೆಯ ನಂತರ ಅವಸ್ಥೆ 100% 1–1,000 2,000–5,000
ಫೋಟೋಕ್ರೊಮಿಕ್‌ಗಳು ಹೌದು ಯಾವುದೂ ಇಲ್ಲ ವೈಶಾಲ್ಯ 2% 10–100 >5,000
ಪ್ರಕಾಶವಕ್ರೀಕಾರಕಗಳು ಹೌದು ಯಾವುದೂ ಇಲ್ಲ ಅವಸ್ಥೆ 100% 0.1–50,000 2,000–10,000

ಹೊಲೊಗ್ರಾಮ್‌ಗಳ ರಾಶಿ ನಕಲೀಕರಣ

[ಬದಲಾಯಿಸಿ]
ನೊಕೀಯಾ ಮೊಬೈಲ್ ಫೋನ್ ಬ್ಯಾಟರಿಯ ಮೇಲೆ ಹೊಲೊಗ್ರಾಮ್. ಬ್ಯಾಟರಿಯ ಮೇಲೆ ಇದು "ಮೂಲ ನೋಕಿಯಾ" ಮತ್ತು ನಕಲಿ ಅಥವಾ ಅನುಕರಣವಲ್ಲ ಎಂದು ತೋರಿಸುವುದು ಇದರ ಉದ್ದೇಶ.

ಅಸ್ತಿತ್ವದಲ್ಲಿರುವ ಹೊಲೊಗ್ರಾಮನ್ನು ನಕಲು ಮಾಡಬಹುದು, ಪೂರ್ಣಲೇಖನ ದಾಖಲೀಕರಣವನ್ನು ಹೋಲುವ ದ್ಯುತಿ ರೀತಿಯಲ್ಲಿ, ಅಥವಾ ಮೇಲ್ಮೈ ಉಬ್ಬು ಚಿತ್ರಣ ಹೊಲೊಗ್ರಾಮ್‌ಗಳ ವಿಷಯದಲ್ಲಿ ಉಬ್ಬು-ಚಿತ್ರಣದ ಮೂಲಕ. ಮೇಲ್ಮೈ ಉಬ್ಬು ಚಿತ್ರಣ ಹೊಲೊಗ್ರಾಮ್‌ಗಳನ್ನು ಫೋಟೋರೆಸಿಸ್ಟ್‌ಗಳು ಅಥವಾ ಫೋಟೋಥರ್ಮೋಪ್ಲಾಸ್ಟಿಕ್‌ಗಳಲ್ಲಿ ದಾಖಲಿಸಲಾಗುತ್ತದೆ, ಮತ್ತು ಅಗ್ಗದ ರಾಶಿ ನಕಲೀಕರಣಕ್ಕೆ ಅನುಮತಿಸುತ್ತವೆ. ಅಂತಹ ಉಬ್ಬು-ಚಿತ್ರದ ಹೊಲೊಗ್ರಾಮ್‌ಗಳನ್ನು ಈಗ ವ್ಯಾಪಕವಾಗಿ ಬಳಸಲಾಗುತ್ತಿದೆ, ಉದಾಹರಣೆಗೆ ಕ್ರೆಡಿಟ್ ಕಾರ್ಡ್‌ಗಳು ಅಥವಾ ಗುಣಮಟ್ಟದ ಸರಕಿನ ಮೇಲಿನ ಭದ್ರತಾ ಲಕ್ಷಣಗಳಿಗಾಗಿ. ದ ರಾಯಲ್ ಕೆನಡಿಯನ್ ಮಿಂಟ್ ಸಂಸ್ಥೆಯು ಸಂಕೀರ್ಣವಾದ ಅಚ್ಚೊತ್ತುವ ಪ್ರಕ್ರಿಯೆಯ ಮೂಲಕ ಪೂರ್ಣಲೇಖನದ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಕೂಡ ಉತ್ಪಾದಿಸುತ್ತದೆ. ಮುಖಪುಟದ ಮೇಲೆ ಒಂದು ಹೊಲೊಗ್ರಾಮನ್ನು ಹೊಂದಿದ್ದ ಮೊದಲ ಪುಸ್ತಕವೆಂದರೆ ಜೆ ಪಿ ಮಿಲ್ಲರ್‌ನ ದ ಸ್ಕೂಕ್ (ವಾರ್ನರ್ ಬುಕ್ಸ್, 1984). ಅದು ಮಿಲ್ಲರ್‌ನ ಸಚಿತ್ರ ವಿವರಣೆಯನ್ನು ಹೊಂದಿತ್ತು. ಅದೇ ವರ್ಷ, ಆಡ್ ಇನ್ಫಿನಿಟಮ್‌ನ "ಟೆಲ್‍ಸ್ಟಾರ್" ಹೊಲೊಗ್ರಾಮ್ ಹೊದಿಕೆಯಿರುವ ಮೊದಲ ಧ್ವನಿಮುದ್ರಣವಾಯಿತು.

ಉಬ್ಬು-ಚಿತ್ರಣ ಪ್ರಕ್ರಿಯೆಯಲ್ಲಿನ ಮೊದಲ ಹಂತವೆಂದರೆ, ಫೋಟೋರೆಸಿಸ್ಟ್ ಅಥವಾ ಫೋಟೋಥರ್ಮೊಪ್ಲಾಸ್ಟಿಕ್‌ ಮೇಲೆ ದಾಖಲಿಸಲಾದ ಉಬ್ಬು-ಚಿತ್ರದ ಮೇಲೆ ನಿಕಲ್‌ನ ವಿದ್ಯುಲ್ಲೇಪನದಿಂದ ಮುದ್ರೆ ಒತ್ತುವುದು. ನಿಕೆಲ್ ಪದರವು ಸಾಕಷ್ಟು ದಪ್ಪನಾಗಿದ್ದಾಗ, ಅದನ್ನು ಮೂಲ ಹೊಲೊಗ್ರಾಮ್‌ನಿಂದ ಬೇರ್ಪಡಿಸಿ ಲೋಹದ ಆಧಾರ ಇರುವ ತಟ್ಟೆಯ ಮೇಲೆ ಕೂರಿಸಲಾಗುತ್ತದೆ. ಉಬ್ಬುಚಿತ್ರವಿರುವ ಪ್ರತಿಗಳನ್ನು ತಯಾರಿಸಲು ಬಳಸಲಾಗುವ ಪದಾರ್ಥವು ಪಾಲಿಯೆಸ್ಟರ್ ಆಧಾರ ಪೊರೆ, ರಾಳ ಬೇರ್ಪಡಿಕೆ ಪದರ ಮತ್ತು ಪೂರ್ಣಲೇಖನ ಪದರವನ್ನು ರಚಿಸುವ ಒಂದು ಥರ್ಮೋಪ್ಲಾಸ್ಟಿಕ್ ಪದರವನ್ನು ಹೊಂದಿರುತ್ತದೆ.

ಉಬ್ಬು-ಚಿತ್ರಣ ಪ್ರಕ್ರಿಯೆಯನ್ನು ಸರಳ ಕಾಯಿಸಿದ ಅಚ್ಚು ಯಂತ್ರದಿಂದ ನಡೆಸಬಹುದು. ನಕಲು ಮಾಡುವ ಪದರದ (ಥರ್ಮೋಪ್ಲಾಸ್ಟಿಕ್ ಪದರ) ಕೆಳ ಪದರವನ್ನು ಅದರ ಮೆದುವಾಗುವ ಬಿಂದುವಿಗಿಂತ ಮೇಲಿನ ಉಷ್ಣಾಂಶಕ್ಕೆ ಕಾಯಿಸಿ ಮತ್ತು ಅದು ಆಕಾರವನ್ನು ಪಡೆಯುವಂತೆ ಅಚ್ಚು ಯಂತ್ರದ ಮೇಲೆ ಒತ್ತಲಾಗುತ್ತದೆ. ಪದರವನ್ನು ತಣ್ಣಗಾಗಿಸಿ ಅಚ್ಚು ಯಂತ್ರದಿಂದ ತೆಗೆದಾಗ ಈ ಆಕಾರ ಉಳಿದುಕೊಳ್ಳುತ್ತದೆ. ಪ್ರತಿಬಿಂಬದಲ್ಲಿ ಉಬ್ಬು-ಚಿತ್ರದ ಹೊಲೊಗ್ರಾಮ್‌ಗಳು ಕಾಣುವಂತೆ ಮಾಡಲು, ಹೊಲೊಗ್ರಾಮ್‌ನ ದಾಖಲೀಕರಣ ಪದರದ ಮೇಲೆ ಒಂದು ಹೆಚ್ಚುವರಿ ಪ್ರತಿಫಲಕ ಅಲ್ಯೂಮಿನಿಯಂ ಪದರವನ್ನು ಸಾಮಾನ್ಯವಾಗಿ ಸೇರಿಸಲಾಗುತ್ತದೆ.

ಈಗ ಬೇಕಾದ ಮೇಲ್ಮೈ ಉಬ್ಬುಚಿತ್ರವನ್ನು ಸೃಷ್ಟಿಸಲು ಫಲಕ ಸ್ಫೋಟಕ ವಿದ್ಯುದಾವೇಶವನ್ನು ಬಳಸಿ ಹೊಲೊಗ್ರಾಮ್‌ಗಳನ್ನು ನೇರವಾಗಿ ಉಕ್ಕಿನೊಳಗೆ ಮುದ್ರಿಸುವುದು ಸಾಧ್ಯವಿದೆ.[]

ಉಪಯೋಗಗಳು

[ಬದಲಾಯಿಸಿ]

ದತ್ತ ಸಂಗ್ರಹಣೆ

[ಬದಲಾಯಿಸಿ]

ಚಿತ್ರಗಳನ್ನು ದಾಖಲಿಸುವುದಲ್ಲದೇ ಪೂರ್ಣಲೇಖನವನ್ನು ಇತರ ಅನೇಕ ಉಪಯೋಗಗಳಿಗಾಗಿ ಬಳಸಬಹುದು. ಪೂರ್ಣಲೇಖನ ದತ್ತ ಸಂಗ್ರಹಣೆಯು ಹೆಚ್ಚಿನ ಸಾಂದ್ರತೆಯಲ್ಲಿ ಸ್ಫಟಿಕಗಳು ಅಥವಾ ಫೋಟೋಪಾಲಿಮರ್‌ಗಳೊಳಗೆ ಮಾಹಿತಿಯನ್ನು ಸಂಗ್ರಹಿಸುವ ಒಂದು ತಂತ್ರ. ಅನೇಕ ವಿದ್ಯುನ್ಮಾನ ಉತ್ಪನ್ನಗಳು ಸಂಗ್ರಹಣಾ ಸಾಧನಗಳನ್ನು ಹೊಂದಿರುವುದರಿಂದ ಯಾವುದೇ ಬಗೆಯ ಮಾಧ್ಯಮದಲ್ಲಿ ದೊಡ್ಡ ಪ್ರಮಾಣದ ಮಾಹಿತಿಯನ್ನು ಸಂಗ್ರಹಿಸುವ ಸಾಮರ್ಥ್ಯ ಬಹಳ ಮಹತ್ವದ್ದಾಗಿದೆ. ಬ್ಲೂ-ರೇ ಡಿಸ್ಕ್‌ಗಳಂತಹ ಪ್ರಚಲಿತ ಸಂಗ್ರಹಣಾ ತಂತ್ರಗಳು ಸಂಭಾವ್ಯ ದತ್ತ ಸಾಂದ್ರತೆಯ ಮಿತಿಯನ್ನು ಮುಟ್ಟುತ್ತಿರುವುದರಿಂದ (ಬರೆಯುವ ರಶ್ಮಿಗಳ ವಿವರ್ತನಾ ಸೀಮಿತ ಗಾತ್ರದ ಕಾರಣದಿಂದ), ಪೂರ್ಣಲೇಖನ ಸಂಗ್ರಹಣೆಯು ಮುಂದಿನ ಪೀಳಿಗೆಯ ಜನಪ್ರಿಯ ಸಂಗ್ರಹಣಾ ಮಾಧ್ಯಮಗಳಾಗುವ ಸಾಮರ್ಥ್ಯ ಹೊಂದಿದೆ. ಈ ಬಗೆಯ ದತ್ತ ಸಂಗ್ರಹಣೆಯ ಅನುಕೂಲವೇನೆಂದರೆ ಕೇವಲ ಮೇಲ್ಮೈಯ ಬದಲಾಗಿ ದಾಖಲಿಸುವ ಮಾಧ್ಯಮದ ಪರಿಮಾಣವನ್ನು ಬಳಸಲಾಗುತ್ತದೆ.

ಇಂದು ಲಭ್ಯವಿರುವ ಎಸ್‌ಎಲ್‌ಎಂ‌ಗಳು 1024×1024-ದ್ವಯಾಂಕ ಪೃಥಕ್ಕರಣದಲ್ಲಿ ಒಂದು ಸೆಕೆಂಡಿಗೆ ಸುಮಾರು 1000 ಭಿನ್ನ ಚಿತ್ರಗಳನ್ನು ಸೃಷ್ಟಿಸಬಲ್ಲವು. ಸರಿಯಾದ ಬಗೆಯ ಮಾಧ್ಯಮಗಳಿದ್ದಲ್ಲಿ (LiNbO3 ಬದಲಾಗಿ ಬಹುಶಃ ಪಾಲಿಮರ್‌ಗಳು), ಪ್ರತಿ ಸೆಕೆಂಡಿಗೆ 1 ಗಿಗಾಬಿಟ್‌ ಬರೆಯುವ ವೇಗವಾಗಿ ಪರ್ಯವಸಾನವಾಗುವುದು. ಓದುವ ವೇಗಗಳು ಇದನ್ನು ಮೀರಬಲ್ಲವು ಮತ್ತು ಪ್ರತಿ ಸೆಕೆಂಡಿಗೆ 1-ಟೆರಾಬಿಟ್ ಓದುವುದು ಸಾಧ್ಯ ಎಂದು ತಜ್ಞರು ನಂಬುತ್ತಾರೆ.

2005ರಲ್ಲಿ, ಆಪ್ಟ್‌ವೇರ್‌ ಮತ್ತು ಮ್ಯಾಕ್ಸೆಲ್‌‍ನಂತಹ ಕಂಪೆನಿಗಳು 120 ಎಂಎಂ‌ ಮುದ್ರಿಕೆಯನ್ನು ಉತ್ಪಾದಿಸಿದ್ದು ಇದು ಸಂಭಾವ್ಯ 3.9 TB (ಟೆರಾಬೈಟ್‌) ನಷ್ಟು ದತ್ತ ಸಂಗ್ರಹಣೆಗೆ ಪೂರ್ಣಲೇಖನ ಪದರವನ್ನು ಬಳಸುತ್ತದೆ. ಇವು ಇವುಗಳನ್ನು ಹೊಲೊಗ್ರಾಫಿಕ್‌ ವರ್ಸಟಾಯಿಲ್‌ ಡಿಸ್ಕ್‌ ಎಂಬ ಹೆಸರಿನಲ್ಲಿ ಮಾರಾಟ ಮಾಡಲು ಯೋಜಿಸಿವೆ. ಇನ್‌ಫೇಸ್‌ ಟೆಕ್‌ನಾಲಜೀಸ್‌ ಎಂಬ ಮತ್ತೊಂದು ಕಂಪೆನಿಯು ಸ್ಪರ್ಧಿಸುವ ಶೈಲಿಯನ್ನು ಅಭಿವೃದ್ಧಿಪಡಿಸುತ್ತಿದೆ.

ಅನೇಕ ಪೂರ್ಣಲೇಖನ ದತ್ತ ಸಂಗ್ರಹಣಾ ಮಾದರಿಗಳು "ಪುಟ-ಆಧಾರಿತ" ಸಂಗ್ರಹಣೆಯನ್ನು ಬಳಸಿವೆಯಾದರೂ (ಪ್ರತಿಯೊಂದು ದಾಖಲಿಸಲ್ಪಟ್ಟ ಹೊಲೊಗ್ರಾಮ್‌ ದೊಡ್ಡ ಪ್ರಮಾಣದ ದತ್ತವನ್ನು ಹೊಂದಿರುತ್ತದೆ), ಇತ್ತೀಚೆಗಿನ ಉಪಮೈಕ್ರೊಮೀಟರ್‌ ಗಾತ್ರದ "ಮೈಕ್ರೊ ಹೊಲೊಗ್ರಾಮ್‌"ಗಳ ಬಳಕೆ ಮೇಲಿನ ಸಂಶೋಧನೆಯು ಹಲವಾರು ಸಂಭಾವ್ಯ 3ಡಿ ದ್ಯುತಿ ದತ್ತ ಸಂಗ್ರಹಣಾ ಪರಿಹಾರಗಳಾಗಿ ಪರಿಣಮಿಸಿವೆ. ದತ್ತ ಸಂಗ್ರಹಣೆಯ ಈ ಕಾರ್ಯವಿಧಾನವು ಪುಟ-ಆಧಾರಿತ ಸಂಗ್ರಹಣೆಯ ವೇಗದ ದತ್ತ ದರಗಳನ್ನು ಮುಟ್ಟುವುದಿಲ್ಲವಾದರೂ, ಸಹಿಷ್ಣುತೆಗಳು, ತಾಂತ್ರಿಕ ತೊಂದರೆಗಳು, ಮತ್ತು ಒಂದು ವಾಣಿಜ್ಯಿಕ ಉತ್ಪನ್ನವನ್ನು ಸೃಷ್ಟಿಸುವ ವೆಚ್ಚ ಗಣನೀಯವಾಗಿ ಕಡಿಮೆಯಾಗುತ್ತದೆ.

ಭದ್ರತೆ

[ಬದಲಾಯಿಸಿ]

ಭದ್ರತಾ ಹೊಲೊಗ್ರಾಮ್‌ಗಳನ್ನು ನಕಲು ಮಾಡುವುದು ಬಹಳ ಕಷ್ಟ, ಏಕೆಂದರೆ ಅವುಗಳನ್ನು ಒಂದು ಮೂಲ ಹೊಲೊಗ್ರಾಮ್‌ನಿಂದ ಪ್ರತಿಕೃತಿ ಮಾಡಲಾಗಿರುತ್ತದೆ. ಇದಕ್ಕೆ ಬೆಲೆಬಾಳುವ, ವಿಶೇಷೀಕೃತ ಮತ್ತು ತಾಂತ್ರಿಕವಾಗಿ ಮುಂದುವರೆದ ಸಲಕರಣೆಗಳು ಬೇಕಾಗುತ್ತವೆ. ಇವುಗಳನ್ನು ಅನೇಕ ನೋಟುಗಳಲ್ಲಿ ಬಳಸಲಾಗುತ್ತದೆ, ಉದಾಹರಣೆಗೆ ಬ್ರೆಜಿಲಿಯನ್‌ ರಿಯಲ್‍ 20 ನೋಟು, ಬ್ರಿಟಿಷ್‌ ಪೌಂಡ್‌ 5/10/20 ನೋಟುಗಳು, ಕೆನಡಾ ಡಾಲರ್‌ 5/10/20/50/100 ನೋಟುಗಳು, ಯೂರೋ 5/10/20/50/100/200/500 ನೋಟುಗಳು, ದಕ್ಷಿಣ ಕೊರಿಯಾದ ವಾನ್‌ 5000/10000/50000 ನೋಟುಗಳು, ಜಪಾನ್‌ ಯೆನ್‌ 5000/10000 ನೋಟುಗಳು ಮುಂತಾದವು. ಇವುಗಳನ್ನು ಬ್ಯಾಂಕ್‌ ಕಾರ್ಡ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳಲ್ಲಿ ಜೊತೆಗೆ, ಪಾಸ್‌ಪೋರ್ಟ್‌ಗಳು, ಪುಸ್ತಕಗಳು, ಡಿವಿಡಿಗಳು, ಮತ್ತು ಕ್ರೀಡಾ ಸಲಕರಣೆಯಲ್ಲೂ ಬಳಸಲಾಗುತ್ತದೆ.

ಮುಂಚಿನ ಹಂತದಲ್ಲಿ ಕಲಾವಿದರು ಒಂದು ಮಾಧ್ಯಮವಾಗಿ ಪೂರ್ಣಲೇಖನದ ಸಾಮರ್ಥ್ಯವನ್ನು ಕಂಡರು, ಮತ್ತು ತಮ್ಮ ಕೃತಿಗಳನ್ನು ಸೃಷ್ಟಿಸಲು ವಿಜ್ಞಾನ ಪ್ರಯೋಗಾಲಯಗಳಿಗೆ ಪ್ರವೇಶ ಪಡೆದುಕೊಂಡರು. ಪೂರ್ಣಲೇಖನ ಕಲೆಯು ಹಲವುವೇಳೆ ವಿಜ್ಞಾನಿಗಳು ಮತ್ತು ಕಲಾವಿದರ ನಡುವಣ ಸಹಯೋಗದ ಪರಿಣಾಮವಾಗಿರುತ್ತದೆ. ಆದರೆ ಕೆಲವು ಪೂರ್ಣಲೇಖನಕಾರರು ತಮ್ಮನ್ನು ತಾವು ಕಲಾವಿದ ಮತ್ತು ವಿಜ್ಞಾನಿ ಎರಡೂ ಎಂದು ಭಾವಿಸಿಕೊಳ್ಳುತ್ತಾರೆ.

ಸಾಲ್ವೇಡಾರ್‌ ಡಾಲಿಯು ಪೂರ್ಣಲೇಖನವನ್ನು ಕಲಾತ್ಮಕವಾಗಿ ಬಳಸಿಕೊಂಡವರಲ್ಲಿ ತಾನೇ ಮೊದಲು ಎಂದು ಹೇಳಿಕೊಂಡ. ಹಾಗೇ ಮಾಡಿದವರಲ್ಲಿ ಖಂಡಿತವಾಗಿಯೂ ಆತನೇ ಮೊದಲ ಮತ್ತು ಬಹಳ ಪ್ರಸಿದ್ಧ ಅತಿ ಯಥಾರ್ಥವಾದಿ, ಆದರೆ 1972ರಲ್ಲಿ ನಡೆದ ಡಾಲಿಯ ಹೊಲೊಗ್ರಾಮ್‌ಗಳ ಪ್ರದರ್ಶನಕ್ಕೆ ಮುಂಚೆಯೇ, 1968ರಲ್ಲಿ ಮಿಚಿಗನ್‌ನಲ್ಲಿನ ಕ್ರ್ಯಾನ್‌ಬ್ರೂಕ್‌ ಅಕ್ಯಾಡೆಮಿ ಆಫ್‌ ಆರ್ಟ್‌ನಲ್ಲಿ ಪೂರ್ಣಲೇಖನ ಕಲಾ ಪ್ರದರ್ಶನ ನಡೆದಿತ್ತು ಮತ್ತು 1970ರಲ್ಲಿ ನ್ಯೂಯಾರ್ಕ್‌ನ ಫಿಂಚ್‌ ಕಾಲೇಜ್‌ ಗ್ಯಾಲರಿಯಲ್ಲಿಯೂ ನಡೆದಿತ್ತು. ಇದು ರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆದಿತ್ತು.[]

1970ರ ದಶಕದಲ್ಲಿ ಅನೇಕ ಕಲಾ ಸ್ಟೂಡಿಯೋಗಳು ಮತ್ತು ಶಾಲೆಗಳನ್ನು ಸ್ಥಾಪಿಸಲಾಯಿತು, ಪ್ರತಿಯೊಂದೂ ಪೂರ್ಣಲೇಖನದ ಬಗ್ಗೆ ತನ್ನದೇ ವಿಶಿಷ್ಟ ದೃಷ್ಟಿಕೋನವನ್ನು ಹೊಂದಿತ್ತು. ಗಮನಾರ್ಹವಾಗಿ ಲ್ಲಾಯ್ಡ್‌ ಕ್ರಾಸ್‌ ಸ್ಥಾಪಿಸಿದ ಸ್ಯಾನ್‌ ಫ್ರಾನ್ಸಿಸ್ಕೊ ಸ್ಕೂಲ್‌ ಆಫ್‌ ಹೊಲೊಗ್ರಫಿ, ರೊಸ್‌ಮೆರಿ (ಪೊಸಿ) ಎಚ್‌. ಜ್ಯಾಕ್‌ಸನ್‌ ಸ್ಥಾಪಿಸಿದ ನ್ಯೂಯಾರ್ಕ್‌ನ ದ ಮ್ಯೂಸಿಯಮ್‌ ಆಫ್‌ ಹೊಲೊಗ್ರಫಿ, ಲಂಡನ್‌ನಲ್ಲಿ ರಾಯಲ್‌ ಕಾಲೇಜ್‌ ಆಫ್‌ ಆರ್ಟ್ ಮತ್ತು ಟುಂಗ್‌ ಜಿಯೋಂಗ್‌ (ಟಿ.ಜೆ.) ಆಯೋಜಿಸಿದ ಲೇಕ್‌ ಫಾರೆಸ್ಟ್‌ ಕಾಲೇಜು ವಿಚಾರಗೋಷ್ಠಿಗಳು[೧] ಇದ್ದವು. ಇವುಗಳಲ್ಲಿ ಯಾವ ಸ್ಟುಡಿಯೋಗಳೂ ಈಗ ಅಸ್ತಿತ್ವದಲ್ಲಿಲ್ಲ; ಆದರೆ ನ್ಯೂಯಾರ್ಕ್‌ನಲ್ಲಿ ಸೆಂಟರ್‌ ಫಾರ್‌ ಹೊಲೊಗ್ರಾಫಿಕ್‌ ಆರ್ಟ್ಸ್‌ [೨] ಮತ್ತು ಸಿಯೋಲ್‌ನಲ್ಲಿ ಹೊಲೊಸೆಂಟರ್‌ [೩] Archived 2011-07-22 ವೇಬ್ಯಾಕ್ ಮೆಷಿನ್ ನಲ್ಲಿ. ಇವೆ. ಇವು ಕಲಾವಿದರಿಗೆ ತಮ್ಮ ಕೃತಿಗಳನ್ನು ಸೃಷ್ಟಿಸಿ ಪ್ರದರ್ಶಿಸಲು ಸ್ಥಳವನ್ನು ನೀಡುತ್ತವೆ.

ಸಣ್ಣ ಆದರೆ ಕ್ರಿಯಾಶೀಲ ಕಲಾವಿದರ ತಂಡವು ಪೂರ್ಣಲೇಖನವನ್ನು ತಮ್ಮ ಮುಖ್ಯ ಮಾಧ್ಯಮವನ್ನಾಗಿ ಬಳಸಿಕೊಳ್ಳುತ್ತದೆ ಮತ್ತು ಇನ್ನೂ ಅನೇಕ ಕಲಾವಿದರು ತಮ್ಮ ಕೆಲಸಗಳಲ್ಲಿ ಪೂರ್ಣಲೇಖನ ಅಂಶಗಳನ್ನು ಸಂಯೋಜಿಸಿಕೊಂಡಿದ್ದಾರೆ [೪]. ಎಂ‌ಐ‌ಟಿ ವಸ್ತುಸಂಗ್ರಹಾಲಯ [೫] ಮತ್ತು ಜೊನಾತನ್‌ ರಾಸ್‌ ಪೂರ್ಣಲೇಖನದ ವ್ಯಾಪಕ ಸಂಗ್ರಹಗಳನ್ನು ಮತ್ತು ಕಲಾ ಹೊಲೊಗ್ರಾಮ್‌ಗಳ ಆನ್‍ಲೈನ್‌ ಪಟ್ಟಿಗಳನ್ನು ಹೊಂದಿವೆ.

ಹವ್ಯಾಸಿ ಬಳಕೆ

[ಬದಲಾಯಿಸಿ]
ಹವ್ಯಾಸಿ ಡೇವ್ ಬ್ಯಾಟಿನ್‌ರಿಂದ "ಪೀಸ್ ವಿದಿನ್ ರೀಚ್" ಎಂಬ ಒಂದು ಡೆನಿಸ್‌ಯುಕ್ ಡಿಸಿಜಿ ಹೊಲೋಗ್ರಾಮ್.

ಪೂರ್ಣಲೇಖನದ ಪ್ರಾರಂಭದಿಂದ, ಪ್ರಯೋಗಕಾರರು ಅದರ ಉಪಯೋಗಗಳನ್ನು ಸಂಶೋಧಿಸಿದ್ದಾರೆ. 1971ರಲ್ಲಿ ಪ್ರಾರಂಭವಾಗಿ ಲ್ಲಾಯ್ಡ್‌ ಕ್ರಾಸ್‌ ಸ್ಯಾನ್‌ ಫ್ರ್ಯಾನ್‌ಸಿಸ್ಕೊ ಸ್ಕೂಲ್‌ ಆಫ್‌ ಹೊಲೊಗ್ರಫಿಯನ್ನು ಪ್ರಾರಂಭಿಸಿದನು ಮತ್ತು ಹವ್ಯಾಸಿಗಳಿಗೆ ಕಡಿಮೆ ವೆಚ್ಚದ ಸಲಕರಣೆಗಳೊಂದಿಗೆ ಹೊಲೊಗ್ರಾಮ್‌ಗಳನ್ನು ತಯಾರಿಸುವುದನ್ನು ಕಲಿಸಲು ಪ್ರಾರಂಭಿಸಿದನು. ಈ ವಿಧಾನವು, ದ್ಯುತಿ ಸಂಬಂಧಿ ಅಂಶಗಳನ್ನು ಗಟ್ಟಿಯಾಗಿ ಹಿಡಿದಿಡಲು ಮತ್ತು ಚಿತ್ರವನ್ನು ನಾಶಮಾಡುವ ತೇವ ಕಂಪನಗಳನ್ನು ತಡೆಯಲು ಆಳದ ಮರಳಿನ ಒಂದು ದೊಡ್ಡ ಮೇಜನ್ನು ಅವಲಂಬಿಸಿತ್ತು.

ಈ ಪೂರ್ಣಲೇಖನಕಾರರಲ್ಲಿ ಅನೇಕರು ಕಲಾತ್ಮಕ ಹೊಲೊಗ್ರಾಮ್‌ಗಳನ್ನು ಸೃಷ್ಟಿಸುವುದನ್ನು ಮುಂದುವರಿಸಿದರು. 1983ರಲ್ಲಿ, ಫ್ರೆಡ್‌ ಅಂಟೆರ್‌ಸೆಹೆರ್‌ ಪೂರ್ಣಲೇಖನ ಕೈಪಿಡಿಯನ್ನು ಪ್ರಕಟಿಸಿದನು, ಓದಲು ಅತ್ಯಂತ ಸುಲಭವಾದ, ಮನೆಯಲ್ಲಿ ಹೊಲೊಗ್ರಾಮ್‌ ತಯಾರಿಕೆಯ ವರ್ಣನೆ ಅದರಲ್ಲಿತ್ತು. ಇದರಿಂದ ಪೂರ್ಣಲೇಖನಕಾರರ ಹೊಸ ಅಲೆಯೇ ಪ್ರಾರಂಭವಾಯಿತು ಮತ್ತು ಆಗ ಲಭ್ಯವಿದ್ದ ಎಜಿಎಫ್‌ಎ (AGFA) ಸಿಲ್ವರ್‌ ಹ್ಯಾಲೈಡ್‌ ದಾಖಲೀಕರಣ ವಸ್ತುಗಳನ್ನು ಬಳಸಲು ಸುಲಭವಾದ ವಿಧಾನಗಳನ್ನು ನೀಡಿತು.

2000ರಲ್ಲಿ ಫ್ರ್ಯಾಂಕ್‌ ಡಿಫ್ರಿಟಾಸ್‌ ಷೂಬಾಕ್ಸ್‌ ಪೂರ್ಣಲೇಖನ ಪುಸ್ತಕವನ್ನು ಪ್ರಕಟಿಸದರು ಮತ್ತು ಕಡಿಮೆ ಖರ್ಚಿನ ಲೇಸರ್‌ ಪಾಯಿಂಟರ್‌ಗಳನ್ನು ಬಳಸುವುದನ್ನು ಅಸಂಖ್ಯಾತ ಹವ್ಯಾಸಿಗಳಿಗೆ ಪರಿಚಯಿಸಿದರು. ಹವ್ಯಾಸಿಗಳಿಗೆ ಇದು ಬಹಳ ಮುಖ್ಯವಾದ ಬೆಳವಣಿಗೆಯಾಗಿತ್ತು, ಏಕೆಂದರೆ ಅರೆವಾಹಕ ಲೇಸರ್‌ ಡಯೋಡ್‍ಗಳು ರಾಶಿ ಮಾರುಕಟ್ಟೆಯನ್ನು ತಲುಪಿದ್ದರಿಂದ 5 ಮೆಗಾವ್ಯಾಟ್‌ ಲೇಸರ್‌ನ ಬೆಲೆಯು $1200ರಿಂದ $5ಕ್ಕೆ ತಗ್ಗಿತು. ಈಗ, ವಿಶ್ವದಾದ್ಯಂತ ನೂರಾರು ಸಾವಿರಾರು ಹವ್ಯಾಸಿ ಪೂರ್ಣಲೇಖನಕಾರರು ಇದ್ದಾರೆ.

2006ರಲ್ಲಿ, ದೊಡ್ಡಸಂಖ್ಯೆಯ ಹೆಚ್ಚುವರಿ ಪೂರ್ಣಲೇಖನ ಗುಣಮಟ್ಟದ ಹಸಿರು ಲೇಸರ್‌ಗಳು (ಕೊಹೆರೆಂಟ್‌ ಸಿ315) ಲಭ್ಯವಾದವು ಮತ್ತು ಡೈಕ್ರೊಮೇಟೆಡ್‌ ಜಲ್ಯಾಟಿನ್‌ಗಳು ಹವ್ಯಾಸಿ ಪೂರ್ಣಲೇಖನಕಾರರ ಕೈಗೆಟುಕುವಂತಾಯಿತು. ಹಸಿರು ಬೆಳಕಿಗೆ ಡಿಸಿಜಿಗಳ ಅತ್ಯಾಶ್ಚರ್ಯಕರ ಸಂವೇದನತ್ವ ಕಂಡು ಪೂರ್ಣಲೇಖನ ಸಮುದಾಯವು ಅಚ್ಚರಿಗೊಂಡಿತು. ಸಂವೇದನತ್ವವು ಇರುವುದೇ ಇಲ್ಲವೆಂದು ಊಹಿಸಲಾಗಿತ್ತು. ಈ ಹೊಸ ಲೇಸರ್‌ಗಳಿಗೆ ವೇಗ ಮತ್ತು ಸಂವೇದನತ್ವವನ್ನು ಹೆಚ್ಚಿಸಲು ಜೆಫ್‌ ಬ್ಲಿತ್‌ ಡಿಸಿಜಿಯ ಜಿ307 ಸೂತ್ರೀಕರಣದೊಂದಿಗೆ ಪ್ರತಿಸ್ಪಂದಿಸಿದನು.

ಸಿಲ್ವರ್‌ ಹಾಲೈಡ್‌ ಮಾರುಕಟ್ಟೆಯಿಂದ ಅನೇಕ ಪೊರೆ ಸರಬರಾಜುದಾರರು ಬಂದು ಹೋಗಿದ್ದಾರೆ. ಹೆಚ್ಚು ಪೊರೆ ಉತ್ಪಾದಕರು ಶೂನ್ಯತೆಯನ್ನು ತುಂಬಿದ್ದಾರಾದರೂ, ಅನೇಕ ಹವ್ಯಾಸಿಗಳು ಈಗ ತಮ್ಮದೇ ಪೊರೆಯನ್ನು ತಯಾರಿಸಿಕೊಳ್ಳುತ್ತಿದ್ದಾರೆ. ಡೈಕ್ರೊಮೇಟೆಡ್‌ ಜೆಲಟಿನ್‌, ಮೆತಿಲೀನ್‌ ಬ್ಲೂ ಸೆನ್ಸಿಟೈಸ್ಡ್‌ ಡೈಕ್ರೊಮೇಟೆಡ್‌ ಜೆಲಟಿನ್‌ ಮತ್ತು ಡಿಫ್ಯೂಷನ್‌ ಮೆತಡ್‌ ಸಿಲ್ವರ್‌ ಹ್ಯಾಲೈಡ್‌ ಪ್ರೆಪರೇಷನ್‍ಗಳು ಅಚ್ಚುಮೆಚ್ಚಿನ ಸೂತ್ರೀಕರಣಗಳು. ಜೆಫ್‌ ಬ್ಲಿತ್‌ ಒಂದು ಸಣ್ಣ ಪ್ರಯೋಗಾಲಯ ಅಥವಾ ಗ್ಯಾರೇಜ್‌ನಲ್ಲಿ ಪೊರೆಯನ್ನು ತಯಾರಿಸಲು ಬಹಳ ನಿಖರವಾದ ವಿಧಾನಗಳನ್ನು ಪ್ರಕಟಿಸಿದ್ದಾನೆ.[೧೦]

ಹವ್ಯಾಸಿಗಳ ಒಂದು ಸಣ್ಣ ತಂಡವು, ಚಲಿಸುವ ವಸ್ತುಗಳ ಹೊಲೊಗ್ರಾಮ್‌ಗಳನ್ನು ಮಾಡಲು ತಮ್ಮ ಸ್ವಂತದ ಸ್ಪಂದಿಸುವ ಲೇಸರ್‌ಗಳನ್ನೂ ನಿರ್ಮಿಸುತ್ತಿದ್ದಾರೆ.[೧೧]

ಪೂರ್ಣಲೇಖನ ವ್ಯತಿಕರಣಮಾಪನ

[ಬದಲಾಯಿಸಿ]

ಪೂರ್ಣಲೇಖನ ವ್ಯತಿಕರಣಮಾಪನವು (HI)[೧೨][೧೩] ದೃಷ್ಟಿರೀತ್ಯ ಒರಟು ಮೇಲ್ಮೈಗಳುಳ್ಳ ವಸ್ತುಗಳ ನಿಶ್ಚಲ ಮತ್ತು ಚಾಲಕಬಲದ ಸ್ಥಳಾಂತರಗಳನ್ನು ದ್ಯುತಿ ವ್ಯತಿಕರಣಮಾಪನದ ನಿಖರತೆಯೊಂದಿಗೆ (ಅಂದರೆ ಬೆಳಕಿನ ತರಂಗಾಂತರದ ಭಿನ್ನಾಂಕಗಳಷ್ಟು) ಅಳತೆಮಾಡಲು ಸಾಧ್ಯವಾಗಿಸುವ ಒಂದು ತಂತ್ರ. ಇದನ್ನು ಪಾರದರ್ಶಕ ಮಾಧ್ಯಮಗಳಲ್ಲಿ ದ್ಯುತಿ ಮಾರ್ಗ ಲಂಬದ ವ್ಯತ್ಯಯನಗಳನ್ನು ಪತ್ತೆಮಾಡಲೂ ಬಳಸಬಹುದು. ಉದಾಹರಣೆಗೆ ಇದು ದ್ರವದ ಹರಿವನ್ನು ದೃಶ್ಯೀಕರಿಸು ಮತ್ತು ವಿಶ್ಲೇಷಿಸಲು ಸಾಧ್ಯವಾಗಿಸುತ್ತದೆ. ಮೇಲ್ಮೈಯ ರೂಪವನ್ನು ಪ್ರತಿನಿಧಿಸುವ ಬಾಹ್ಯರೇಖೆಗಳನ್ನು ಸೃಷ್ಟಿಸಲು ಕೂಡ ಇದನ್ನು ಬಳಸಬಹುದು.

ಎಂಜಿನಿಯರಿಂಗ್ ರಚನೆಗಳಲ್ಲಿ ಒತ್ತಡ, ಬಿಗಿತ ಮತ್ತು ಕಂಪನವನ್ನು ಅಳೆಯಲು ಇದನ್ನು ವ್ಯಾಪಕವಾಗಿ ಬಳಸಲಾಗಿದೆ.

ವ್ಯತಿಕರಣಮಾಪನ ಸೂಕ್ಷ್ಮದರ್ಶನ

[ಬದಲಾಯಿಸಿ]

ಕ್ಷೇತ್ರದ ವೈಶಾಲ್ಯ ಮತ್ತು ಅವಸ್ಥೆ ಮೇಲಿನ ಮಾಹಿತಿಯನ್ನು ಹೊಲೋಗ್ರಾಮ್ ಇಡುತ್ತದೆ. ಹಲವಾರು ಹೊಲೋಗ್ರಾಮ್‌ಗಳು ವಿವಿಧ ದಿಕ್ಕುಗಳಲ್ಲಿ ಹೊರಸೂಸಿದ ಬೆಳಕಿನ ಅದೇ ಚೆದರಿಕೆಯ ಬಗ್ಗೆ ಮಾಹಿತಿ ಇಟ್ಟಿರಬಹುದು. ಅಂತಹ ಹೊಲೋಗ್ರಾಮ್‌ಗಳ ಸಂಖ್ಯಾತ್ಮಕ ವಿಶ್ಲೇಷಣೆಯು ದೊಡ್ಡ ಸಂಖ್ಯಾತ್ಮಕ ದ್ಯುತಿರಂಧ್ರವನ್ನು ಅನುಕರಿಸಲು ಅನುವುಮಾಡಿಕೊಡುತ್ತದೆ. ಇದು ಪ್ರತಿಯಾಗಿ ದ್ಯುತಿ ಸೂಕ್ಷ್ಮದರ್ಶನದ ಪ್ರಥಕ್ಕರಣ ಸಾಮರ್ಥ್ಯದ ಏರಿಕೆಯನ್ನು ಸಾಧ್ಯವಾಗಿಸುತ್ತದೆ. ಅನುರೂಪದ ತಂತ್ರವನ್ನು ವ್ಯತಿಕರಣಮಾಪನ ಸೂಕ್ಷ್ಮದರ್ಶನ ಎಂದು ಕರೆಯಲಾಗುತ್ತದೆ. ವ್ಯತಿಕರಣಮಾಪನ ಸೂಕ್ಷ್ಮದರ್ಶನದ ಇತ್ತೀಚಿನ ಸಾಧನೆಗಳು ಪೃಥಕ್ಕರಣ ಸಾಮರ್ಥ್ಯದ ಕಾಲುಭಾಗ-ತರಂಗಾಂತರ ಮಿತಿಯನ್ನು ಸಮೀಪಿಸಲು ಅನುವು ಮಾಡಿಕೊಡುತ್ತದೆ.[೧೪]

ಕ್ರಿಯಾಶೀಲ ಪೂರ್ಣಲೇಖನ

[ಬದಲಾಯಿಸಿ]

ನಿಶ್ಚಲ ಪೂರ್ಣಲೇಖನದಲ್ಲಿ, ದಾಖಲೀಕರಣ, ಸ್ಫುಟಗೊಳಿಸುವುದು ಮತ್ತು ಪುನರ್‌ನಿರ್ಮಾಣ ಅನುಕ್ರಮವಾಗಿ ಆಗುತ್ತವೆ ಮತ್ತು ಶಾಶ್ವತ ಹೊಲೋಗ್ರಾಮ್ ಸೃಷ್ಟಿಯಾಗುತ್ತದೆ.

ಸ್ಫುಟಗೊಳಿಸುವ ಪ್ರಕ್ರಿಯೆ ಬೇಕಿರದ ಮತ್ತು ಬಹಳ ಕಡಿಮೆ ಸಮಯದಲ್ಲಿ ಹೊಲೋಗ್ರಾಮನ್ನು ದಾಖಲಿಸುವ ಪೂರ್ಣಲೇಖನ ವಸ್ತುಗಳೂ ಇವೆ. ಇದು ಸರ್ವ ದ್ಯುತಿ ರೀತಿಯಲ್ಲಿ ಕೆಲವು ಸರಳವಾದ ಕಾರ್ಯಗಳನ್ನು ನೆರವೇರಿಸಲು ಪೂರ್ಣಲೇಖನವನ್ನು ಬಳಸಲು ಅನುವು ಮಾಡಿಕೊಡುತ್ತದೆ. ಅಂತಹ ನಿಜ ಕಾಲದ ಹೊಲೊಗ್ರಾಮ್‍ಗಳ ಉಪಯೋಗಗಳ ಉದಾಹರಣೆಗಳೆಂದರೆ ಅವಸ್ಥಾ-ಅನುಬದ್ಧ ಕನ್ನಡಿಗಳು (ಬೆಳಕಿನ "ಕಾಲ-ಬದಲಾವಣೆ"), ದ್ಯುತಿ ಕ್ಯಾಶ್ ಸ್ಮೃತಿ ಕೋಶ, ಚಿತ್ರ ಸಂಸ್ಕರಣೆ (ಸಮಯ-ವ್ಯತ್ಯಾಸದ ಚಿತ್ರಗಳ ಮಾದರಿ ಗ್ರಹಿಕೆ), ಮತ್ತು ದ್ಯುತಿ ಗಣನೆ.

ಸಮಾನಾಂತರವಾಗಿ ಪೂರ್ಣ ಚಿತ್ರದ ಮೇಲೆ ಕಾರ್ಯ ನಡೆಯುವುದರಿಂದ ಸಂಸ್ಕರಿಸಿದ ಮಾಹಿತಿಯ ಪ್ರಮಾಣ ಬಹಳ ಹೆಚ್ಚಿರಬಹುದಾಗಿದೆ (terabit/s). ವಿದ್ಯುನ್ಮಾನ ಗಣಕಯಂತ್ರದ ಸಂಸ್ಕರಣಾ ಸಮಯಕ್ಕೆ ಹೋಲಿಸಿದಾಗ ಈ ದಾಖಲೀಕರಣ ಸಮಯ (ಒಂದು µs ನಷ್ಟು ಶ್ರೇಣಿಯಲ್ಲಿರುವ) ಈಗಲೂ ಬಹಳ ಹೆಚ್ಚಾಗಿರುವುದು ಎಂಬ ವಾಸ್ತವಾಂಶವನ್ನು ಇದು ಸರಿದೂಗಿಸುತ್ತದೆ. ಕ್ರಿಯಾತ್ಮಕ ಹೋಲೊಗ್ರಾಮ್‌ ಮಾಡುವ ದ್ಯುತಿ ಸಂಸ್ಕರಣೆ ವಿದ್ಯುನ್ಮಾನ ಸಂಸ್ಕರಣೆಗಿಂತ ಬಹಳ ಕಡಿಮೆ ಹೊಂದಿಕೊಳ್ಳುತ್ತದೆ ಕೂಡ. ಒಂದು ಬದಿಯಲ್ಲಿ ಯಾವಾಗಲೂ ಪೂರ್ಣ ಚಿತ್ರದ ಮೇಲೆ ಕಾರ್ಯ ನಿರ್ವಹಿಸಬೇಕಾಗುತ್ತದೆ, ಇನ್ನೊಂದು ಬದಿಯಲ್ಲಿ ಹೊಲೊಗ್ರಾಮ್ ನಿರ್ವಹಿಸಬಹುದಾದ ಕಾರ್ಯವು ಮೂಲತಃ ಗುಣಾಕಾರ ಅಥವಾ ಅವಸ್ಥಾ ಕೂಡಿಕೆ ಆಗಿರುತ್ತದೆ. ಆದರೆ ದ್ಯುತಿವಿಜ್ಞಾನದಲ್ಲಿ ಕೂಡಿಸುವುದು ಮತ್ತು ಫೋರಿಯರ್ ರೂಪಾಂತರಗಳನ್ನು ಆಗಲೇ ಸುಲಭವಾಗಿ ರೇಖಾತ್ಮಕ ವಸ್ತುಗಳಲ್ಲಿ ಸಾಧಿಸಲಾಗಿದೆ, ಎರಡನೆಯದು ಕೇವಲ ಮಸೂರದಿಂದ, ಎಂಬುದನ್ನು ನೆನಪಿಡಬೇಕು. ಇದು ದ್ಯುತಿ ರೀತಿಯಲ್ಲಿ ಚಿತ್ರಗಳನ್ನು ಹೋಲಿಸುವ ಸಾಧನದಂತಹ ಕೆಲವು ಉಪಯೋಗಗಳನ್ನು ಸಾಧ್ಯವಾಗಿಸಿದೆ.[೧೫]

ಕ್ರಿಯಾಶೀಲ ಪೂರ್ಣಲೇಖನಕ್ಕೆ ಹೊಸ ಅರೇಖೀಯ ದ್ಯುತಿ ವಸ್ತುಗಳಿಗಾಗಿ ಹುಡುಕಾಟವು ಸಕ್ರಿಯವಾದ ಸಂಶೋಧನಾ ಕ್ಷೇತ್ರವಾಗಿದೆ. ಅತ್ಯಂತ ಸಾಮಾನ್ಯವಾದ ವಸ್ತುಗಳೆಂದರೆ ದ್ಯುತಿವಕ್ರೀಕಾರಕ ಸ್ಫಟಿಕಗಳು, ಆದರೆ ಅರೆವಾಹಕಗಳು ಅಥವಾ ಅರೆವಾಹಕ ಭಿನ್ನರಚನೆಗಳು (ಉದಾ. ಕ್ವಾಂಟಮ್ ಬಾವಿಗಳು) ಪರಮಾಣು ಬಾಷ್ಪಗಳು ಹಾಗೂ ಅನಿಲಗಳು, ಪ್ಲಾಸ್ಮಾಗಳು ಮತ್ತು ದ್ರವಗಳಲ್ಲಿ ಕೂಡ ಹೊಲೋಗ್ರಾಮ್‌ಗಳನ್ನು ಸೃಷ್ಟಿಸಲು ಸಾಧ್ಯ.

ವಿಶೇಷವಾಗಿ ಆಶಾದಾಯಕ ಅನ್ವಯವೆಂದರೆ ದ್ಯುತಿ ಅವಸ್ಥಾ ಕೂಡಿಕೆ. ಒಂದು ಅಪಸಾರಿ ಮಾಧ್ಯಮದ ಮೂಲಕ ಸಾಗುವಾಗ ಬೆಳಕಿನ ರಶ್ಮಿಯು ಸ್ವೀಕರಿಸುವ ತರಂಗಮುಖ ವಿಕಾರಗಳನ್ನು ತೆಗೆಯಲು ಇದು ಅನುಮತಿಸುತ್ತದೆ. ಹೇಗೆಂದರೆ ಆ ಬೆಳಕಿನ ರಶ್ಮಿಯನ್ನು ಅನುಬದ್ಧ ಅವಸ್ಥೆಯೊಂದಿಗೆ ಅದೇ ಅಪಸಾರಿ ಮಾಧ್ಯಮದ ಮೂಲಕ ಹಿಂದಿರುಗಿ ಕಳುಹಿಸುವ ಮೂಲಕ. ಇದು ಉಪಯುಕ್ತವಾಗಿದೆ ಉದಾ. ಮುಕ್ತ-ಆಕಾಶ ದ್ಯುತಿ ಸಂವಹನದಲ್ಲಿ ವಾತಾವರಣದ ಪ್ರಕ್ಷುಬ್ಧತೆಯನ್ನು ಸರಿದೂಗಿಸಲು (ನಕ್ಷತ್ರ ಪ್ರಕಾಶ ಹೊಳೆಯುವಂತೆ ಮಾಡುವ ವಿದ್ಯಮಾನ).

ದ್ಯುತಿರಹಿತ ಅನ್ವಯಗಳು

[ಬದಲಾಯಿಸಿ]

ತಾತ್ತ್ವಿಕವಾಗಿ, ಯಾವುದೇ ತರಂಗಕ್ಕೆ ಹೊಲೋಗ್ರಾಮನ್ನು ತಯಾರಿಸಲು ಸಾಧ್ಯವಿದೆ.

ಎಲೆಕ್ಟ್ರಾನ್ ಪೂರ್ಣಲೇಖನ ಎಂದರೆ ಬೆಳಕಿನ ಅಲೆಗಳ ಬದಲಾಗಿ ಎಲೆಕ್ಟ್ರಾನ್ ಅಲೆಗಳಿಗೆ ಪೂರ್ಣಲೇಖನ ತಂತ್ರಗಳನ್ನು ಅನ್ವಯಿಸುವುದು. ಪೃಥಕ್ಕರಣ ಸಾಮರ್ಥ್ಯವನ್ನು ಸುಧಾರಿಸಲು ಮತ್ತು ಪ್ರಸಾರ ಎಲೆಕ್ಟ್ರಾನ್ ಸೂಕ್ಷ್ಮದರ್ಶಕದ ವಿಪಥನಗಳನ್ನು ತಪ್ಪಿಸಲು ಡೆನಿಸ್ ಗ್ಯಾಬೊರ್‌ ಎಲೆಕ್ಟ್ರಾನ್ ಪೂರ್ಣಲೇಖನವನ್ನು ಆವಿಷ್ಕರಿಸಿದನು. ಇಂದು ಇದನ್ನು ಸಾಮಾನ್ಯವಾಗಿ ತೆಳ್ಳನೆಯ ಪೊರೆಗಳಲ್ಲಿನ ವಿದ್ಯುತ್ ಮತ್ತು ಆಯಸ್ಕಾಂತೀಯ ಕ್ಷೇತ್ರದ ಅಧ್ಯಯನದಲ್ಲಿ ಬಳಸಲಾಗುತ್ತಿದೆ, ಏಕೆಂದರೆ ಮಾದರಿಯ ಮೂಲಕ ಸಾಗುವ ವ್ಯತಿಕರಿಸುವ ತರಂಗದ ಅವಸ್ಥೆಯನ್ನು ಆಯಸ್ಕಾಂತೀಯ ಮತ್ತು ವಿದ್ಯುತ್ ಕ್ಷೇತ್ರಗಳು ಸ್ಥಳಾಂತರಿಸಬಹುದು.[೧೬] ಎಲೆಕ್ಟ್ರಾನ್ ಪೂರ್ಣಲೇಖನದ ತತ್ವವನ್ನು ವ್ಯತಿಕರಣ ಶಿಲಾಮುದ್ರಣಕ್ಕೂ ಅನ್ವಯಿಸಬಹುದು.[೧೭]

ಶ್ರವಣಸಂಬಂಧಿ ಪೂರ್ಣಲೇಖನವು ಒತ್ತಡ ಮತ್ತು/ಅಥವಾ ಕಣ ವೇಗ ಸಂಜ್ಞಾಪರಿವರ್ತಕಗಳ ವ್ಯೂಹದ ಮೂಲಕ ಮೂಲದಿಂದ ದೂರದಲ್ಲಿರುವ ಶ್ರವಣಸಂಬಂಧಿ ನಿಯತಾಂಕಗಳನ್ನು ಅಳೆದು ಒಂದು ಮೂಲದ ಹತ್ತಿರ ಧ್ವನಿ ಕ್ಷೇತ್ರದ ಅಂದಾಜು ಮಾಡಲು ಬಳಸಲಾಗುವ ವಿಧಾನ. ಶ್ರವಣಸಂಬಂಧಿ ಪೂರ್ಣಲೇಖನದೊಳಗೆ ಸೇರಿರುವ ಅಳೆಯುವ ತಂತ್ರಗಳು ವಿವಿಧ ಕ್ಷೇತ್ರಗಳಲ್ಲಿ, ಅತ್ಯಂತ ಗಮನಾರ್ಹವಾಗಿ ಸಾಗಣೆ, ವಾಹನ ಹಾಗೂ ವಿಮಾನ ವಿನ್ಯಾಸ, ಮತ್ತು ಎನ್‌ವಿಎಚ್‌ಗಳಲ್ಲಿ ಹೆಚ್ಚೆಚ್ಚು ಜನಪ್ರಿಯವಾಗುತ್ತಿವೆ. ಶ್ರವಣಸಂಬಂಧಿ ಪೂರ್ಣಲೇಖನದ ಸಾಮಾನ್ಯ ಕಲ್ಪನೆಯು ವಿಭಿನ್ನ ಆವೃತ್ತಿಗಳಿಗೆ ದಾರಿತೋರಿದೆ, ಉದಾ. ಸಮೀಪ-ಕ್ಷೇತ್ರದ ಶ್ರವಣಸಂಬಂಧಿ ಪೂರ್ಣಲೇಖನ (NAH) ಮತ್ತು ಸಂಖ್ಯಾಶಾಸ್ತ್ರೀಯವಾಗಿ ಪ್ರಶಸ್ತ ಸಮೀಪ-ಕ್ಷೇತ್ರದ ಶ್ರವಣಸಂಬಂಧಿ ಪೂರ್ಣಲೇಖನ (SONAH). ಶ್ರವ್ಯ ಅಭಿವ್ಯಕ್ತಿಗೆ, ತರಂಗ ಕ್ಷೇತ್ರ ಸಮನ್ವಯವು ಅತ್ಯಂತ ಸಂಬಂಧಿತ ಕಾರ್ಯವಿಧಾನವಾಗಿದೆ.

ಪರಮಾಣು ಪೂರ್ಣಲೇಖನವು ಪರಮಾಣು ದೃಗ್ವಿಜ್ಞಾನದ ಮೂಲಭೂತ ಅಂಶಗಳ ಅಭಿವೃದ್ಧಿಯಿಂದ ರೂಪಗೊಂಡಿದೆ. ಫ್ರೆಸ್‌ನೆಲ್ ವಿವರ್ತನಾ ಮಸೂರ ಮತ್ತು ಪರಮಾಣು ಕನ್ನಡಿಗಳೊಂದಿಗೆ ಪರಮಾಣು ಪೂರ್ಣಲೇಖನವು ಪರಮಾಣು ರಶ್ಮಿಗಳ ಭೌತಶಾಸ್ತ್ರದ (ಮತ್ತು ಅನ್ವಯಗಳು) ಬೆಳವಣಿಗೆಯಲ್ಲಿ ಸಹಜವಾದ ಹೆಜ್ಜೆಯನ್ನು ಅನುಸರಿಸುತ್ತದೆ. ಪರಮಾಣು ಕನ್ನಡಿಗಳು ಮತ್ತು ವಿಶೇಷವಾಗಿ ಏಣುಗಳುಳ್ಳ ದರ್ಪಣಗಳು ಸೇರಿದಂತೆ ಇತ್ತೀಚಿನ ಬೆಳವಣಿಗೆಗಳು ಪರಮಾಣು ಹೊಲೋಗ್ರಾಮ್‌ಗಳನ್ನು ಸೃಷ್ಟಿಸಲು ಆವಶ್ಯಕವಾದ ಸಾಧನಗಳನ್ನು ಒದಗಿಸಿವೆ,[೧೮] ಆದರೆ ಅಂತಹ ಹೊಲೋಗ್ರಾಮ್‌ಗಳನ್ನು ಇಲ್ಲಿಯವರೆಗೂ ವ್ಯಾಪಾರೀಕರಿಸಲಾಗಿಲ್ಲ.

ಇತರೆ ಅನ್ವಯಗಳು

[ಬದಲಾಯಿಸಿ]

ಪೂರ್ಣಲೇಖನ ಶೋಧಕ ಯಂತ್ರಗಳನ್ನು ಅಂಚೆ ಕಛೇರಿಗಳಲ್ಲಿ, ದೊಡ್ಡ ಹಡಗು ಸಂಸ್ಥೆಗಳಲ್ಲಿ, ಮತ್ತು ಮೂರು-ಆಯಾಮದ ಪ್ಯಾಕೇಜ್‌ಗಳ ಅಳತೆಯನ್ನು ಕಂಡುಹಿಡಿಯಲು ಸ್ವಯಂಚಾಲಿತ ಸಾಗಣಾ ವ್ಯವಸ್ಥೆಗಳಲ್ಲಿ ಬಳಸಲಾಗುತ್ತದೆ. ಟ್ರಕ್ ಅಥವಾ ಸರಕುಗಳ ರಾಶಿ ಸಾಗಣೆಗೆ ಹೇರು ವೇದಿಕೆಯಂತಹ ನಿರ್ದಿಷ್ಟ ಪರಿಮಾಣಗಳ ಸ್ವಯಂಚಾಲಿತ ಪೂರ್ವ ಪ್ಯಾಕಿಂಗ್‍ಗೆ ಅನುಮತಿಸಲು ಇವುಗಳನ್ನು ಹಲವುವೇಳೆ ತೂಕಗಾರನೊಂದಿಗೆ ಒಟ್ಟಾಗಿ ಬಳಸಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Gabor, Dennis (1949), "Microscopy by recorded wavefronts", Proceedings of the Royal Society, London, 197 (1051): 454–487, doi:10.1098/rspa.1949.0075
  2. Denisyuk, Yuri N. (1962). "On the reflection of optical properties of an object in a wave field of light scattered by it". Doklady Akademii Nauk SSSR. 144 (6): 1275–1278. {{cite journal}}: Cite has empty unknown parameters: |month= and |coauthors= (help)
  3. Leith, E.N. (1962). "Reconstructed wavefronts and communication theory". J. Opt. Soc. Am. 52 (10): 1123–1130. {{cite journal}}: Cite has empty unknown parameter: |month= (help); Unknown parameter |coauthors= ignored (|author= suggested) (help)
  4. ಎನ್.ಜೆ.ಪಿಲಿಪ್ಸ್ ಮತ್ತು ಡಿ.ಪೊರ್ಟರ್, "ಅನ್ ಅಡ್ವಾನ್ಸ್ ಇನ್ ದ ಪ್ರೊಸೆಸಿಂಗ್ ಆಫ್ ಹೊಲೋಗ್ರಾಮ್ಸ್," ಜರ್ನಲ್ ಆಫ್ ಫಿಜಿಕ್ಸ್ ಇ : ಸೈಂಟಿಫಿಕ್ ಇನ್ಸ್ಟ್ರುಮೆಂಟ್ಸ್(1976) ಪು. 631
  5. ಹೊಲೋಗ್ರಾಫಿಕ್ ಚಿತ್ರದ ಅಳೆಯುವುದು, http://hyperphysics.phy-astr.gsu.edu/Hbase/optmod/holog.html#c5
  6. ತರಂಗಾಂತರದಿಂದ ಪ್ರಕಾಶ ವಿಜ್ಞಾನ ಅಳೆಯುವುದು http://hyperphysics.phy-astr.gsu.edu/Hbase/optmod/scaleh.html#c1
  7. 2002ರಲ್ಲಿ ಪ್ರೊಫೆಸರ್ ಜಿ.ಮೊಂಟೆಮೆಜ್ಜನಿಯವರಿಂದ ಎಟಿಎಚ್ ಜ್ಯೂರಿಚ್‌ನಲ್ಲಿ ಹೊಲೋಗ್ರಫಿ ಆ‍ಯ್‌೦ಡ್ ಆಪ್ಟಿಕಲ್ ಫೇಸ್ conjugation ಒಳಗೊಂಡ ಭಾಷಣ.
  8. ಸ್ಪೋಟಕ ಶಕ್ತಿಯಿಂದ ಪ್ರಕಾಶ ವಿಜ್ಞಾನ, physorg.com
  9. ಮೂಲ: http://holophile.com/history.htm, 2005ರ ಡಿಸೆಂಬರ್‌ನಲ್ಲಿ ಪರಿಷ್ಕರಿಸಲಾಗಿದೆ.
  10. ಇಲ್ಲಿ ಹಲವಾರು ವಿಧಾನಗಳಿವೆ: http://www.holowiki.com/index.php/Special:Search?search=Blyth&go=Go Archived 2012-03-07 ವೇಬ್ಯಾಕ್ ಮೆಷಿನ್ ನಲ್ಲಿ.
  11. ಜೆಫ್ ಬ್ಲಿತ್‌ನ ಫಿಲ್ಮ್ ಫಾರ್ಮುಲೇಶನ್
  12. ಪೊವೆಲ್ ಆರ್‌ಎಲ್ & ಸ್ಟೇಟ್ಸನ್ ಕೆ‌ಎ, 1965, ಜೆ.ಆಪ್ಟ್. Soc. Am., 55, 1593-8
  13. ಜೋನ್ಸ್ ಆರ್ ಮತ್ತು ವೈಕ್ಸ್ ಸಿ,ಹೊಲೋಗ್ರಾಫಿಕ್ ಆ‍ಯ್‌೦ಡ್ ಸ್ಪೆಕಲ್ ಇಂಟರ್‌ಫೆರೊಮೆಟ್ರಿ, 1989, ಕೆಂಬ್ರಿಜ್ ವಿಶ್ವವಿದ್ಯಾಲಯ ಮುದ್ರಣಾಲಯ ISBN 0-521-34417-4
  14. Y.Kuznetsova (2007). "Imaging interferometric microscopy–approaching the linear systems limits of [[optical resolution]]". Optics Express. 15: 6651–6663. doi:10.1364/OE.15.006651. {{cite journal}}: URL–wikilink conflict (help); Unknown parameter |coauthors= ignored (|author= suggested) (help)
  15. ಆರ್. ರೈಫ್ ಎಟ್ ಆಲ್l. High-frame-rate joint Fourier-transform correlator based on Sn2P2S6 crystal, ಆಪ್ಟಿಕ್ಸ್ ಲೆಟರ್ಸ್ 26 , 1666-1668 (2001)
  16. ಆರ್. ಇ. ದುನುನ್-ಬೊರ್ಕೊವ್ಸ್ಕಿ ಎಟ್ ಅಲ್.,ಮೈಕ್ರೊಸ್ ರೆಸ್. ಮತ್ತು ಟೆಕ್. ಸಂಪುಟ. 64, ಪುಪು. 390-402 (2004)
  17. ಕೆ. ಒಗಾಯ್ ಎಟ್ ಅಲ್., ಜಪಾನ್. ಜೆ. Appl. Phys., ಸಂಪುಟ. 32, ಪುಪು.5988-5992 (1993)
  18. F.Shimizu (2002). "Reflection-Type Hologram for Atoms". PRL. American Physical Society. 88 (12): 123201. doi:10.1103/PhysRevLett.88.123201. {{cite journal}}: Unknown parameter |coauthors= ignored (|author= suggested) (help); Unknown parameter |month= ignored (help); Unknown parameter |numpages= ignored (help)

ಹೆಚ್ಚಿನ ಓದಿಗೆ

[ಬದಲಾಯಿಸಿ]
  • Hariharan, P (1996), Optical Holography: principles, techniques, and applications, Cambridge University Press, ISBN 978-0521439657
  • ಲೇಸರ್ಸ್ ಆ‍ಯ್‌೦ಡ್ ಹೊಲೋಗ್ರಫಿ: ಆ‍ಯ್‌ನ್ ಇಂಟರ್‌ಡಕ್ಷನ್ ಟು ಕೊಹೇರೆಂಟ್ ಆಪ್ಟಿಕ್ಸ್ ಡಾಬ್ಲ್ಯೂ. ಇ. ಕಾಕ್, ದೋವರ್ ಪಬ್ಲಿಕೇಶನ್ಸ್ (1981), ISBN 978-0-486-24041-1
  • ಪ್ರಿನ್ಸಿಪಲ್ಸ್ ಆಫ್ ಹೊಲೋಗ್ರಪಿ ಎಚ್. ಎಮ್. ಸ್ಮಿತ್, ವಿಲ್ಲೆ (1976), ISBN 978-0-471-80341-6
  • ಜಿ. ಬರ್ಗರ್ ಎಟ್ ಆಲ್., ಡಿಜಿಟಲ್ ಡಾಟಾ ಸ್ಟೊರೇಜ್ ಇನ್ ಎ ಫೇಸ್-ಎನ್ಕೊಡೇಡ್ ಹೊಲೋಗ್ರಾಪಿಕ್ ಮೆಮೊರಿ ಸಿಸ್ಟಮ್: ಡಾಟಾ ಕ್ವಾಲೀಟಿ ಆ‍ಯ್‌೦ಡ್ ಸೆಕ್ಯುರಿಟಿ , ಎಸ್‌ಪಿಐಇಯ ಪ್ರೊಸಿಡಿಂಗ್ಸ್, ಸಂಪುಟ. 4988, ಪು. 104-111 (2003)
  • ಹೊಲೋಗ್ರಾಫಿಕ್ ವಿಜನ್ಸ್:ಎ ಹಿಸ್ಟರಿ ಆಫ್ ನ್ಯೂ ಸೈನ್ಸ್ ಸೀನ್ ಎಫ್. ಜಾನ್ಸ್‌ಟನ್,ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ (2006), ISBN 0-19-857122-4

ಹೊರಗಿನ ಕೊಂಡಿಗಳು

[ಬದಲಾಯಿಸಿ]