ಪುಲೋಮೆ
ಪುಲೋಮೆ ವೈದಿಕ ಧರ್ಮಗ್ರಂಥಗಳಲ್ಲಿ ಬ್ರಹ್ಮರ್ಷಿಗಳಲ್ಲಿ ಒಬ್ಬನೆಂದು ಪರಿಗಣಿತನಾದ ಭೃಗು ಋಷಿಯ ಪತ್ನಿ.[೧] ಭೃಗು ಸೃಷ್ಟಿಕರ್ತ ಬ್ರಹ್ಮನ ಮಾನಸ ಪುತ್ರರಲ್ಲಿ ಒಬ್ಬನು ಮತ್ತು ಇವನಿಗೆ ಬ್ರಹ್ಮರ್ಷಿ ಎಂಬ ಗೌರವಸೂಚಕವನ್ನು ನೀಡಲಾಯಿತು. ಪುಲೋಮೆ ಬಹಳ ಸದ್ಗುಣಶೀಲ ಮತ್ತು ನಿಷ್ಠಾವಂತ ಪತ್ನಿಯಾಗಿದ್ದಳು. ಅವಳು ಗರ್ಭಿಣಿಯಾಗಿದ್ದಾಗ, ಒಮ್ಮೆ ಭೃಗು ತನ್ನ ಬೆಳಿಗ್ಗೆಯ ಶುದ್ಧೀಕರಣ ಭೇಟಿಗಾಗಿ ನದಿಗೆ ಹೋಗಿದ್ದನು (ಧಾರ್ಮಿಕ ವಿಧಿಗಳನ್ನು ನೆರವೇರಿಸಲು ಹೋಗಿದ್ದನು ಎಂದೂ ಹೇಳಲಾಗಿದೆ). ಅವಳನ್ನು ಅಗ್ನಿಯ ರಕ್ಷಣೆಯಲ್ಲಿ ಬಿಟ್ಟಿದ್ದನು. ಆದರೆ, ಆ ಸಮಯದಲ್ಲಿ, ಪುಲೋಮನೆಂಬ ರಾಕ್ಷಸನು ಭೃಗುವಿನ ಆಶ್ರಮಕ್ಕೆ ಬಂದು ಪುಲೋಮೆಯನ್ನು ಕಂಡನು. ಹಿಂದೊಮ್ಮೆ ಪುಲೋಮೆಯೊಡನೆ ಅವನ ವಿವಾಹದ ನಿಶ್ಚಿತಾರ್ಥವಾಗಿತ್ತು. ನಂತರ ಅವನು ಅವಳ ಶೀಲಭಂಗ ಮಾಡಲು ಪ್ರಯತ್ನಿಸಿದನು ಮತ್ತು ಅವಳನ್ನು ವಿವಾಹವಾಗಲು ಅವಳ ತಂದೆಯನ್ನು ಕೇಳಿದ್ದ ಮತ್ತು ಅವಳ ತಂದೆ ಒಪ್ಪದೆ ಅವಳನ್ನು ಭೃಗುವಿಗೆ ಕೊಟ್ಟು ಮದುವೆಮಾಡಿದ ಕಾರಣ ಅವಳನ್ನು ಮದುವೆಯಾಗಲು ಮತ್ತು ಅವಳನ್ನು ಅಲ್ಲಿಂದ ಕರೆದೊಯ್ಯಲು ತನಗೆ ಹಕ್ಕಿದೆ ಎಂದು ಸಾಧಿಸಿದನು. ಅವಳು ಭೃಗುವಿನ ಪತ್ನಿ ಮತ್ತು ಭೃಗು ಅವಳನ್ನು ತನ್ನ ಉಪಸ್ಥಿತಿಯಲ್ಲಿ ಹಿಂದೂ ವಿಧಿ ವಿಧಾನಗಳ ಪ್ರಕಾರ ವಿವಾಹವಾಗಿದ್ದನೆಂದು ಅಗ್ನಿಯು ಅವನಿಗೆ ದೃಢಪಡಿಸಿದಾಗ, ಪುಲೋಮನು ಅವಳನ್ನು ಅಪಹರಿಸಲು ಪ್ರಯತ್ನಿಸಿದನು. ಪುಲೋಮನು ಪುಲೋಮೆಯ ಸೌಂದರ್ಯದಿಂದ ಮರುಳುಗೊಂಡು, ಹಂದಿಯ ರೂಪಕ್ಕೆ ಮಾರ್ಪಾಡಾಗಿ ಅವಳನ್ನು ಅಪಹರಿಸಿದನು. ಇದರಿಂದ ಭಯಭೀತಳಾದ ಪುಲೋಮೆಗೆ ಹೆರಿಗೆಯಾಯಿತು ಮತ್ತು ಅವಳ ಮಗ ನೆಲದ ಮೇಲೆ ಬಿದ್ದನು. ಈ ದಂತಕಥೆಯ ಇತರ ಆವೃತ್ತಿಗಳಲ್ಲಿ, ಮಗುವು ತನ್ನನ್ನು ತಾನೇ ಅವಳ ಗರ್ಭದಿಂದ ತೆಗೆಸಿಕೊಂಡನು. ಈ ಮಗನಿಗೆ ಚ್ಯವನನೆಂಬ ಹೆಸರು. ಚ್ಯವನ ಅಂದರೆ ಗರ್ಭದಿಂದ ಬಿದ್ದವನು ಎಂದು. ಆ ಮಗುವು ಸೂರ್ಯನಂತೆ ಪ್ರಕಾಶಮಾನವಾಗಿತ್ತು ಮತ್ತು ಪುಲೋಮನು ಆ ಮಗುವಿನ ದರ್ಶನದಿಂದ ಸುಟ್ಟು ಬೂದಿಯಾದನು.
ತನ್ನ ದುರವಸ್ಥೆಯಿಂದ ಪೀಡಿತಳಾದ ಪುಲೋಮೆ, ಬಹಳ ಕಣ್ಣೀರು ಸುರಿಸಿದಳು. ಎಷ್ಟರ ಮಟ್ಟಿಗೆ ಎಂದರೆ, ಅವಳ ಕಣ್ಣೀರು ವಧುಸಾರಸ ಎಂಬ ನದಿಯನ್ನು ಸೃಷ್ಟಿಸಿತು. ಈ ನದಿಯು ಮುಂದೆ ಚ್ಯವನನು ಋಷಿಯಾದ ಮೇಲೆ ಅವನ ಆಶ್ರಮದ ನೆಲೆಯಾಯಿತು. ಚ್ಯವನನ ತಪಸ್ಸಿನ ಸಾಧನೆ ಅಗಾಧವಾಗಿತ್ತು. ಬ್ರಹ್ಮನು ಪುಲೋಮೆಯನ್ನು ಸಂತೈಸಿದನು.
ಪುಲೋಮೆಯು ನಂತರ ಆಶ್ರಮಕ್ಕೆ ಹಿಂದಿರುಗಿ ತನ್ನ ಮತ್ತು ತನ್ನ ಮಗನೊಂದಿಗೆ ನಡೆದ ಘಟನೆಗಳ ಬಗ್ಗೆ ಭೃಗುವಿಗೆ ತಿಳಿಸಿದಳು. ಭೃಗು ತನ್ನ ಮಗನನ್ನು ನೋಡಿ ಸಂತೋಷಗೊಂಡರೂ, ಅಗ್ನಿಯು ಅವಳ ನಿಜ ಗುರುತನ್ನು ಪುಲೋಮನಿಗೆ ಬಹಿರಂಗಪಡಿಸಿದನು ಎಂದು ಪುಲೋಮೆಯಿಂದ ಕೇಳಿ ಸಿಟ್ಟಾದನು. ತೀವ್ರ ಕ್ರೋಧದಲ್ಲಿ, ಭೃಗುವು ಅಗ್ನಿಗೆ "ನೀನು ಸರ್ವಭಕ್ಷಕನಾಗು" ಎಂದು ಶಾಪ ಕೊಟ್ಟನು. ತನ್ನ ಶಾಪ ಕೇಳಿ ಅಗ್ನಿಯೂ ಸಿಟ್ಟಾದನು ಮತ್ತು ತಾನು ಕೇವಲ ನಿಜ ಹೇಳಿದ್ದೆನು ಹಾಗಾಗಿ ಅವನ ಶಾಪ ನ್ಯಾಯವಾದದ್ದಲ್ಲ ಎಂದು ಭೃಗುವಿಗೆ ಹೇಳಿದನು. ಅವನು ಎಲ್ಲ ಕಡೆ ಇರುವುದಾಗಿಯೂ ಮತ್ತು ತನ್ನ ಬಾಯಿಯಿಂದ ಎಲ್ಲ ದೇವರು ಮತ್ತು ಪಿತೃಗಳು ಕೊಡುಗೆಗಳನ್ನು ಸ್ವೀಕರಿಸುತ್ತಾರೆ ಮತ್ತು ಹಾಗಾಗಿ ತನಗೆ ಅಸ್ವಚ್ಛ ವಸ್ತುಗಳ ಅರ್ಪಣೆ ಸರಿಯಲ್ಲ ಎಂದು ಅಗ್ನಿ ಹೇಳಿದನು.
ಉಲ್ಲೇಖಗಳು
[ಬದಲಾಯಿಸಿ]- ↑ "Section V (Pauloma Parva continued)". Sacred Texts. p. 46. Retrieved 17 November 2013.