ಪಂಚವಟಿ' ಕಥಾಮೃತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಂಚವಟಿ ಪಂಚವಟಿ'- ಹೆಸರಿನಲ್ಲೇ ಮಾಧುರ್ಯವನ್ನು ಒಸರುವ ಈ ಸ್ಥಳಕ್ಕೆ ಸಂಬಂಧಿಸಿದಂತೆ ಪುರಾಣ ಕಥನಗಳ ಒರತೆಯೇ ಇದೆ. ರಾಮಾಯಣ ಮಹಾಕಾವ್ಯದಲ್ಲಿ ಲಂಕೆಯಷ್ಟೇ ಪ್ರಾಮುಖ್ಯತೆ ಪಡೆದಿರುವ ಸ್ಥಳವಿದು. ಪಂಚವಟಿ ಎಂದರೆ ಐದು ಆಲದಮರಗಳ ಉದ್ಯಾನ. ರಾಮ, ಸೀತೆ ಮತ್ತು ಲಕ್ಷ್ಮಣ ತಮ್ಮ ವನವಾಸದ ಬಹು ಸಮಯವನ್ನು ಕಳೆದದ್ದು ಇಲ್ಲಿಯೇ.

ಪಂಚವಟಿ ಇರುವುದು ನಾಸಿಕ್‌ನ ಉತ್ತರ ಭಾಗದಲ್ಲಿ. ಪಂಚವಟಿಯಲ್ಲಿ ಇರುವಾಗಲೇ ರಾವಣನ ಸಹೋದರಿ ಶೂರ್ಪನಖಿಯು ಸೀತೆಯನ್ನು ಕೊಲ್ಲಲು ಪ್ರಯತ್ನಿಸಿದ್ದು. ಆ ಪ್ರಸಂಗದ ಕಾರಣವಾಗಿಯೇ ಲಕ್ಷ್ಮಣ ಶೂರ್ಪನಖಿಯ ಮೂಗು ಕತ್ತರಿಸಿದನು. ಮೂಗುಭಂಗವಾದ ಸ್ಥಳವೇ ನಾಸಿಕ್.

ನಾಸಿಕ ಎಂದರೆ ಮೂಗು.

ಸೀತೆಯ ಬಯಕೆಯಂತೆ ರಾಮ ಚಿನ್ನದ ಜಿಂಕೆಯನ್ನು ಬೆನ್ನಟ್ಟಿದ್ದು, ತನ್ನ ಬಾಣದಿಂದ ಎಳೆದ `ರಕ್ಷಾ ಗಡಿ' (ಲಕ್ಷ್ಮಣ ರೇಖೆ) ದಾಟಬಾರದೆಂದು ಲಕ್ಷ್ಮಣ ತನ್ನ ಅತ್ತಿಗೆ ಸೀತೆಗೆ ಮನವಿ ಮಾಡಿದ್ದು ಇಲ್ಲಿಯೇ. ಅಂದರೆ ಈ ಐದು ಆಲದಮರಗಳ ಉದ್ಯಾನವಿರುವ ಪರಿಸರವೇ ಸೀತಾಪಹರಣಕ್ಕೆ ಸಾಕ್ಷಿಯಾದ ಸ್ಥಳ. ಹೀಗೆ ರಾಮಾಯಣದ ಹಲವು ಪ್ರಸಂಗಗಳೊಂದಿಗೆ ಪಂಚವಟಿ ತಳುಕು ಹಾಕಿಕೊಂಡಿದೆ.

ನಂಬಿಕೆಗಳು ಇನ್ನೂ ಇವೆ. ಗೋದಾವರಿ ನದಿಯಲ್ಲಿ ಪಿಂಡದಾನ ಮಾಡಿದರೆ ಅಥವಾ ಅಸ್ಥಿ ವಿಸರ್ಜಿಸಿದರೆ ಮೃತರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎನ್ನುವುದೊಂದು ನಂಬಿಕೆ. ವನವಾಸದ ಸಮಯದಲ್ಲಿ ದಶರಥನ ಅಸ್ಥಿಯನ್ನು ರಾಮ ಇಲ್ಲಿಯ ನೀರಿನಲ್ಲಿಯೇ ವಿಸರ್ಜಿಸಿದನಂತೆ.

ಅಮೃತ ಸಿಂಚನ! ಈಗಿನ ಪೀಳಿಗೆಗೆ ನಾಸಿಕವೆಂದರೆ ನೆನಪಾಗುವುದು ಅಲ್ಲಿ ಬೆಳೆಯುವ ಈರುಳ್ಳಿ ಮತ್ತು ಸಿಹಿ ದ್ರಾಕ್ಷಿ. ದೇಶದಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಕುಂಭಮೇಳ ನಡೆಯುವ ಸ್ಥಳಗಳಲ್ಲಿ ನಾಸಿಕ್ ಕೂಡ ಒಂದು. ಸಮುದ್ರಮಥನದ ಸಂದರ್ಭದಲ್ಲಿ ರಾಕ್ಷಸರಿಗೆ ಅಮೃತ ದೊರೆಯದಂತೆ ಅದನ್ನು ಬಚ್ಚಿಡಲು ಪ್ರಯತ್ನಿಸಿದರಂತೆ. ಆ ಸಂದರ್ಭದಲ್ಲಿ ಅಮೃತಕುಂಭದಿಂದ ನಾಲ್ಕು ಹನಿಗಳು ತುಳುಕಿದವಂತೆ. ಆ ಪ್ರದೇಶಗಳೇ- ಅಲಹಾಬಾದ್, ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕ್. ಹೀಗಾಗಿ ಈ ನಾಲ್ಕೂ ಸ್ಥಳಗಳಿಗೆ ದೈವಿಕ ಪ್ರಭಾವಳಿ.

ತ್ರಿವೇಣಿ ಸಂಗಮ ನಾಸಿಕ್‌ನ ಇನ್ನೊಂದು ವಿಶೇಷ. ಅರುಣ, ವರುಣ ಮತ್ತು ಗೋದಾವರಿ ನದಿಗಳ ಸಂಗಮದ ತಾಣವಿದು. ಅರುಣ ಮತ್ತು ವರುಣ ನದಿಗಳು ಗುಪ್ತಗಾಮಿನಿಗಳು. ಗೋದಾವರಿಯೋ ಜನಸಮುದಾಯದ ಮೈದೊಳೆದು ಪೊರೆವ ಜೀವದಾಯಿನಿ.

ಪಂಚವಟಿಯ ಕುರಿತು ಅನೇಕ ಬರಹಗಳನ್ನು ಓದಿದ್ದ ನನಗೆ ಆ ಪ್ರಸಿದ್ಧ ವೃಕ್ಷಗಳು ಮತ್ತು ತಾಣವನ್ನು ನೋಡಲೇಬೇಕು ಎನ್ನುವ ಕುತೂಹಲವಿತ್ತು. ನನ್ನ ಪಯಣ ಆರಂಭವಾದುದು ಗೋದಾವರಿ ಮಹಾ ದೇವಸ್ಥಾನದ ಭೇಟಿಯೊಂದಿಗೆ. ಅದು ಕುಂಭಮೇಳದ ಸಮಯ. ಅಂದರೆ 12 ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ದೇವಸ್ಥಾನವನ್ನು ನೋಡುವ ಅವಕಾಶ. ಅಲ್ಲಿನ ಪವಿತ್ರ ತೀರ್ಥದ ಪ್ರೋಕ್ಷಣೆ, ನದಿಯಲ್ಲಿ ಮೀಯುವುದು, ದೇವರ ದರ್ಶನ- ಇವೆಲ್ಲ ಪಾಪವನ್ನು ಕಳೆದುಕೊಳ್ಳುವ ಮತ್ತು ಬಯಕೆಗಳನ್ನು ಈಡೇರಿಸಿಕೊಳ್ಳುವ ಮಾರ್ಗಗಳು ಎಂದು ಅಲ್ಲಿನ ಗೈಡ್ ವಿವರಿಸಿದ.

ಪವಿತ್ರ ತೀರ್ಥವೆಂದು ಗೈಡ್ ಹೇಳಿದ ಗೋದಾವರಿ ಸಂಪೂರ್ಣ ಕಲುಷಿತಗೊಂಡಿದ್ದಳು. ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಮಳೆ ಕಡಿಮೆಯಾಗಿದ್ದ ಕಾರಣ ನದಿಯಲ್ಲಿ ನೀರಿನ ಪ್ರಮಾಣ ಕ್ಷೀಣಿಸಿತ್ತು. 2009ರಲ್ಲಿ ಅನಿರೀಕ್ಷಿತ ಪ್ರವಾಹದಿಂದ ಹಲವು ಅಡಿಗಳಷ್ಟು ನೀರು ಏರಿತ್ತು. ಅದರ ಗುರುತು ಪಂಚವಟಿಯ ಹಲವು ಕಟ್ಟಡಗಳಲ್ಲಿ ಕಲೆಯಾಗಿ ಕಾಣಿಸಿತು.