ನಿದ್ರಾ ನಡಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿದ್ರಾ ನಡಿಗೆ ಎಂಬುದು ಒಂದು ಬಗೆಯ ಮಾನಸಿಕ ಅಸ್ವಸ್ಥೆಯಾಗಿದ್ದು, ಇದನ್ನು ಸೋಮ್ನಾಮ್ಬುಲಿಸಂ ಅಥವಾ ನೋಕ್ಟಾಂಬುಲಿಸಂ ಎಂದೂ ಕರೆಯುತ್ತಾರೆ. ಇದೊಂದು ಸಂಕೀರ್ಣ ನಡುವಳಿಕೆ[೧]. ಹೀಗೆ ನಡೆಯುವಾಗ ಕಣ್ಣು ತೆರೆದಿದ್ದರೂ ದೃಷ್ಟಿ ಎಲ್ಲೋ ಇರುವುದು. ಶೇ. ೧೫ ರಷ್ಟು , ೪ ರಿಂದ ೧೨ ವಯಸ್ಸಿನ ಮಕ್ಕಳಲ್ಲಿ ಇದು ಸಾಮಾನ್ಯ. ಕೆಲವರಿಗೆ ಇದು ಹದಿಹರೆಯದಲ್ಲಿ ಕಂಡು ಬಂದು ಮುಂದುವರೆಯುವುದನ್ನು ಕಾಣಬಹುದು.

ವಿವರಣೆ[ಬದಲಾಯಿಸಿ]

ನಿದ್ರೆಯಲ್ಲಿ ಐದು ಹಂತಗಳಿವೆ.ಇದರಲ್ಲಿ ಮೂರರಿಂದ ನಾಲ್ಕನೇ ಹಂತದವರೆಗೆ ಕಣ್ಣುಗಳ ಚಲನೆ ಇರುವುದಿಲ್ಲ. ಕಣ್ಣುಗಳ ಚಲನೆಯಿರುವ ಹಂತವೆಂದರೆ ಕನಸು ಕಾಣುವ ಅವಧಿ. ಈ ಅವಧಿಯಲ್ಲೇ ಬೆಳವಣಿಗೆ ಹಾಗೂ, ಚಯಾಪಚಯ ಕ್ರಿಯೆಗಳಿಗೆ ಅಗತ್ಯವಿರುವ ಹಾರ್ಮೋನುಗಳ ಬಿಡುಗಡೆಯಾಗುವುದು.ಈ ಐದೂ ಹಂತಗಳ ಒಟ್ಟು ಅವಧಿ ೯೦ ರಿಂದ ೧೦೦ ನಿಮಿಷಗಳು.ನಂತರ ಈ ಚಕ್ರದ ಪುನರಾವರ್ತನೆ. ಪ್ರತಿರಾತ್ರಿ ನಿದ್ದೆಯಲ್ಲಿ ಸುಮಾರು ೪ರಿಂದ ಐದು ಬಾರಿ ಈ ಚಕ್ರದ ಪುನರಾವರ್ತನೆಯಾಗುತ್ತದೆ. ನಿದ್ರಾ ನಡಿಗೆಯು ಎರಡನೇ ಚಕ್ರದ ಮೂರನೇ ಅಥವಾ ನಾಲ್ಕನೇ ಹಂತದಲ್ಲಿ ಶುರುವಾಗುತ್ತದೆ. ಇದರಲ್ಲಿ ವ್ಯಕ್ತಿಗಳು ತಾವು ಎಚ್ಚರವಾಗಿದ್ದಾಗ ಕೈಗೊಳ್ಳುವ ಚಟುವಟಿಕೆಗಳನ್ನು ನಿದ್ರೆಯ ಸಂದರ್ಭದಲ್ಲಿ ನಡೆಸುತ್ತಾರೆ.ಈ ಸಂದರ್ಭದಲ್ಲಿ ನಡಿಗೆ ಮಾತ್ರವಲ್ಲದೆ ಹಾಸಿಗೆಯ ಮೇಲೆ ಎದ್ದು ಕೂರುವುದು ನಿತ್ಯದ ಕೆಲಸಗಳಲ್ಲಿ ನಿದ್ರೆ ಮಾಡುವುದು, ವಿಚಿತ್ರವಾಗಿ ವರ್ತಿಸುವುದು ಇದೆಲ್ಲಾ ಸೇರಿದೆ. ಈ ಅಸ್ವಸ್ಥತೆ ಕೆಲವು ಸೆಕೆಂಡುಗಳಿಂದ ಹಿಡಿದು ಅರ್ಧಗಂಟೆಯವರೆಗೆ ಕಾಣಿಸಿಕೊಳ್ಳಬಹುದು[೨].ವ್ಯಕ್ತಿಗೆ ತಾನು ನಡೆಯುತ್ತಿರುವುದರ ಬಗ್ಗೆ ಅರಿವು ಇರುವುದಿಲ್ಲ. ಈ ಸಮಸ್ಯೆಗೆ ತುತ್ತಾದವರಿಗೆ ಎಚ್ಚರಾದ ಬಳಿಕ ಇದರ ನೆನಪು ಇರಲೇಬೇಂಕೆದಿಲ್ಲ. ಮಧ್ಯಾಹ್ನದ ಹೊತ್ತಿನ ನಿದ್ದೆಯ ಸಮಯದಲ್ಲಿ ಸಾಮಾನ್ಯವಾಗಿ ಇದು ಘಟಿಸುವುದಿಲ್ಲ. ಏಕೆಂದರೆ ಇದು ಚುಟುಕಾದ ನಿದ್ರೆಯಾಗಿರುತ್ತದೆ.

ಲಕ್ಷಣಗಳು[ಬದಲಾಯಿಸಿ]

ನಿದ್ರೆ ನಡಿಗೆಗೆ ಲಕ್ಷಣಗಳು ಬಿನ್ನ ಭಿನ್ನವಾಗಿರುತ್ತದೆ. ಅದರಲ್ಲಿನ ಕೆಲವು ಲಕ್ಷಣಗಳನ್ನು ಈ ಕೆಳಗಿನಂತೆ ಪಟ್ಟಿಮಾಡಬಹುದು.

 • ಮೊದಲ ಆವರ್ತದ ಮೂರನೇ ಹಂತದಲ್ಲಿ ನಿದ್ರೆಯಲ್ಲಿ ನಡೆಯುವವರು, ಅರೆ ಎಚ್ಚರಿಕೆಯಲ್ಲಿರುವರು.ಈ ಸಂದರ್ಭದಲ್ಲಿ ಕಂಡ ಕನಸುಗಳು ನೆನಪು ಇರುಲೂ ಬಹುದು
 • ನಿದ್ರಾ ನಡಿಗೆಯ ಸ್ಥಿತಿಯಲ್ಲಿರುವವರ ಬಳಿ ಮಾತನಾಡಿಸಿದಲ್ಲಿ ಅಸ್ಪಷ್ಟ ಉತ್ತರಗಳು ಸಿಗುವವವು ಅಥವಾ ಮೌನವಾಗಿರುವರು
 • ಕೊಠಡಿಯಲ್ಲಿ ಯಾವುದೇ ಸದ್ದು ಗದ್ದಲವಿಲ್ಲದೆ ಓಡಾಡುವುದು.
 • ಯಾರೋ ಓಡಿಸಿಕೊಂಡು ಬಂದಂದಂತೆ ಭಯದಿಂದ ಓಡುವುದು.
 • ಕಣ್ಣುಗಳನ್ನು ಅಗಲವಾಗಿ ತೆರೆದು ಕೆಕ್ಕರಿಸಿಕೊಂಡು ನೋಡುವುದು.

ಇದರ ಹೊರತಾದ ಲಕ್ಷಣಗಳೂ ಕಂಡು ಬರಬಹುದು.

ಕಾರಣಗಳು ಹಾಗೂ ಪರಿಣಾಮಗಳು[ಬದಲಾಯಿಸಿ]

ನಿದ್ರೆಯ ಕೊರತೆ ಅಥವಾ ಒತ್ತಡದ ಪರಿಣಾಮದಿಂದ ಇದು ಉಂಟಾಗುತ್ತದೆ. ಈ ಕುರಿತು ಈ ಅಧ್ಯಯನವನ್ನು ನಡೆಸಿದ ಆಂಟೊನಿಯೊ ಝಾದ್ರಾ, ನಿದ್ದೆಯಲ್ಲಿ ನಡೆಯುವ ಸಮಸ್ಯೆಯಿರುವ ೪೦ ಜನರನ್ನು ಆಗಸ್ಟ್ ೨೦೦೩ ರಿಂದ ೨೦೦೭ ರವರೆಗೆ ಡಿ ಮಾಂಟ್ರಿಯಲ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನಕ್ಕೆ ಒಳಪಡಿಸಿ ಪರಿಶೀಲನೆ ನಡೆಸಿದರು.ಅಧ್ಯಯನಕ್ಕೆ ಒಳಪಡಿಸಿದ ಈ ಜನರಲ್ಲಿ ನಿದ್ದೆ ಕೊರತೆ ಮತ್ತು ನಿದ್ದೆ ಸಮಸ್ಯೆಯೇ ನಿದ್ದೆಯಲ್ಲಿ ನಡೆಯುವ ಅಭ್ಯಾಸಕ್ಕೆ ಪ್ರಚೋದಕವಾಗಿರುವುದಾಗಿ ತಿಳಿದುಬಂದಿದೆ. ಅಲ್ಲದೆ, ಹಿಂದಿನ ಪೀಲಿಗೆಯಲ್ಲಿ ನಿದ್ರಾ ನಡಿಗೆಯ ಅಭ್ಯಾಸವಿದ್ದಲ್ಲಿ ಈ ಅಸ್ವಸ್ಥತೆ ಕಾಡುವ ಸಾಧ್ಯತ ಸಾಮಾನ್ಯಕ್ಕಿಂತ ಹತ್ತು ಪಟ್ಟು ಜಾಸ್ತಿ ಇರುವುದು.ಅನುರೂಪ ಅವಳಿಗಳಲ್ಲೂ ನಿದ್ರಾ ನಡಿಗೆಯ ಸಾದ್ಯತೆ ಹೆಚ್ಚಾಗಿರವುದು. ಅಶಿಸ್ತಿನ ಜೀವನ ಶೈಲಿ, ಅಸಮರ್ಪಕ ಹಾಗೂ ಅನಿಯಮಿತ ನಿದ್ರಾ ಅವಧಿ, ನಿದ್ರಾ ಭಂಗ, ಮದ್ಯಪಾನ, ಮ್ಯಾಗ್ನಿಶಿಯಂನ ಕೊರತೆ, ಜ್ವರ ಇತ್ಯಾದಿಗಳು ಕೂಡ ಪ್ರಮುಖ ಕಾರಣಗಳು. ಕೆಲವೊಮ್ಮೆ ಇತರ ಮಾನಸಿಕ ತೊಂದರೆಗಳಿಗೂ ಈ ನಿದ್ರಾ ನಡಿಗೆಯು ತಳುಕು ಹಾಕಿಕೊಂಡಿರುವುದು.

ಈ ರೀತಿಯ ಅಭ್ಯಾಸದಿಂದ ಮನೋಸ್ಥಿತಿಯಲ್ಲಿ ಗೊಂದಲ ಮಾಡುವುದಷ್ಟೇ ಅಲ್ಲ, ಇದರಿಂದ ತಮ್ಮ ವಾತಾವರಣವನ್ನು ತಕ್ಷಣವೇ ಗುರುತಿಸದಷ್ಟು ಮರೆವಿನ ಸಮಸ್ಯೆಯೂ ತಲೆದೋರಬಹುದು. ಕೆಲವು ರೋಗಿಗಳು ದೈಹಿಕವಾಗಿ ಗಾಯ ಮಾಡಿಕೊಂಡ ಹಾಗೂ ಸಾವಿಗೀಡಾದ ಉದಾಹರಣೆಗಳಿವೆ[೩]. ನಿದ್ರಾ ನಡಿಗೆಯ ಸ್ಥಿತಿಯಲ್ಲಿ ನಗ್ನವಾಗಿ ಸುತ್ತಾಡಿ ಮುಜುಗರಕ್ಕೆ ಒಳಗಾದ ನಿದರ್ಶನಗಳಿವೆ.[೪]

ಪರಿಹಾರ[ಬದಲಾಯಿಸಿ]

ನಿದ್ದೆಯಲ್ಲಿ ಓಡಾಡುವ ಅಭ್ಯಾಸವಿದ್ದವರು ನಿಯಮಿತವಾಗಿ ಮತ್ತು ಸರಿಯಾದ ಸಮಯಕ್ಕೆ ನಿದ್ದೆ ಮಾಡುವುದನ್ನು ರೂಢಿಸಿಕೊಳ್ಳುವುದರಿಂದ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು . ಜೊತೆಗೆ ಯೋಗಾಭ್ಯಾಸ, ಒಳ್ಳೆಯ ಆಹಾರ ಕ್ರಮ ಮತ್ತು ಮನೋಸ್ಥಿತಿಯ ಸದೃಢತೆ ಕೂಡ ಈ ಸಮಸ್ಯೆಯನ್ನು ಹೋಗಲಾಡಿಸುವುದರಲ್ಲಿ ಸಹಾಯ ಮಾಡುತ್ತದೆ[೫]. ಜ್ವರ ಅಥವಾ ಇತರ ಮಾನಸಿಕ ಸಮಸ್ಯೆಗಳು ಇದಕ್ಕೆ ಕಾರಣವಾಗಿದ್ದಲ್ಲಿ, ಅದಕ್ಕೆ ಪರಿಹಾರ ಸಿಕ್ಕಿ, ವ್ಯಕ್ತಿಯು ಗುಣಮುಖನಾದರೆ, ಅದರೊಂದಿಗೆ ನಿದ್ರಾ ನಡಿಗೆಯ ಸಮಸ್ಯೆ ತಾನಾಗಿಯೇ ದೂರಾಗುವುದು. ಈ ಎಲ್ಲಾ ಸಂದರ್ಭಗಳಲ್ಲೂ ವೈದ್ಯರ ಸಲಹೆ ಹಾಗೂ ಚಿಕಿತ್ಸೆ ಅಗತ್ಯವಾಗಿರುತ್ತದೆ

ಸಾಮಾನ್ಯ ಸಲಹೆಗಳು[ಬದಲಾಯಿಸಿ]

ನಿದ್ರಾ ನಡಿಗೆಯ ಸಮಸ್ಯೆ ಇದ್ದವರ ಆಸುಪಾಸಿನಲ್ಲಿ ಚೂರಿ, ಕತ್ತರಿ, ಬ್ಲೇಡಿನಂತಹ ಹರಿತವಾದ ಆಯುಧಗಳನ್ನು ಇಡದಂತೆ ಎಚ್ಚರಿಕೆ ವಹಿಸಬೇಕು[೬]. ಇಂತವರ ಮಲಗುವ ಕೊಠಡಿಯು ಆದಷ್ಟು ನೆಲ ಅಂತಸ್ಥಿನಲ್ಲಿ ಇರುವುದು ಒಳ್ಳೆಯದು. ಬಾಗಿಲಿಗೆ ಅಲರಾಂ ಅಳವಡಿಸಿದಲ್ಲಿ ಮನೆಯಿಂದ ಅರಿವಿಲ್ಲದೇ ಹೊರಹೋಗುವ ಅವಕಾಶಗಳು ಕಡಿಮೆಯಾಗುತ್ತವೆ.

ಉಲ್ಲೇಖಗಳು[ಬದಲಾಯಿಸಿ]

 1. World Health Organization. (1992). The ICD-10 classification of mental and behavioural disorders: Clinical descriptions and diagnostic guidelines. Version 2016. Geneva: World Health Organization.
 2. Swanson, Jenifer (1999). "Sleepwalking" Sleep Disorders Sourcebook. Omnigraphics. p. 249–254,351–352.
 3. https://www.mirror.co.uk/news/uk-news/sleepwalker-rob-williams-dies-after-2981951
 4. https://www.news24.com/News24/Sleep-walker-mows-lawn-naked-20050321
 5. ಡಾ. ಕಿಶೋರ್,, ಎನ್.ರುಕ್ಮಿಣಿ ಬಾಯಿ. ಮನಸ್ಸು ಮನಸ್ಸಿನ ತೊಂದರೆಗಳು ಮತ್ತು ಮಾನವೀಯ ಮೌಲ್ಯಗಳು:ನಿಮಗಿದು ತಿಳಿದಿರಲಿ. Dr M Kishor. p. 44.{{cite book}}: CS1 maint: extra punctuation (link)
 6. https://pubmed.ncbi.nlm.nih.gov/28787563/