ನವಿಲುಕೋಸು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನವಿಲುಕೋಸು

ನವಿಲುಕೋಸು (ಬ್ರ್ಯಾಸಿಕಾ ಆಲರೇಸಿಯಾ ಗಾಂಜಿಲಸ್ ಗುಂಪು) ಒಂದು ಬಹುವಾರ್ಷಿಕ ತರಕಾರಿ, ಮತ್ತು ಅದು ಎಲೆಕೋಸಿನ ಒಂದು ತಗ್ಗಾದ, ದಪ್ಪನೆಯ ತಳಿ. ನವಿಲುಕೋಸನ್ನು ಹಸಿಯಾಗಿ ಅಥವಾ ಬೇಯಿಸಿ ತಿನ್ನಬಹುದು. ನವಿಲುಕೋಸನ್ನು ಪಾರ್ಶ್ವ ವರ್ಧನೋತಕ ಬೆಳವಣಿಗೆಗಾಗಿ ಕೃತಕ ಆಯ್ಕೆಯಿಂದ ಸೃಷ್ಟಿಸಲಾಗಿದೆ (ಉಬ್ಬಿಕೊಂಡಿರುವ, ಬಹುಮಟ್ಟಿಗೆ ಗೋಲಾಕಾರ); ಪ್ರಕೃತಿಯಲ್ಲಿ ಅದರ ಮೂಲ ಎಲೆಕೋಸು, ಬ್ರಾಕಲಿ, ಹೂಕೋಸು, ಕೇಲ್, ಕಾಲರ್ಡ್ ಸೊಪ್ಪು, ಮತ್ತು ಬ್ರಸಲ್ಸ್ ಮೊಳಕೆಯಂತಹದ್ದೆ: ಅವೆಲ್ಲವನ್ನು ಕಾಡು ಕೋಸು ಸಸ್ಯದಿಂದ (ಬ್ರ್ಯಾಸಿಕಾ ಆಲರೇಸಿಯಾ) ಬೆಳೆಸಲಾಗಿದೆ ಮತ್ತು ಅದೇ ಜಾತಿ. ಶೇಷವಾಗಿ ಬಳಕೆಯಲ್ಲಿರುವ ಒಂದು ಜನಪ್ರಿಯ ತರಕಾರಿ ಸಸ್ಯ. ನವಿಲು ಕೋಸು ಪರ್ಯಾಯ ನಾಮ. ಬ್ರ್ಯಾಸಿಕೇಸೀ ಕುಟುಂಬಕ್ಕೆ ಸೇರಿದೆ. ಇದರ ಇಂಗ್ಲಿಷ್ ಹೆಸರು ಕೊಹ್ಲ್ ರಬಿ (ಮೂಲ ಜರ್ಮನ್ ಭಾಷೆ); ವೈಜ್ಞಾನಿಕ ಹೆಸರು ಬ್ರ್ಯಾಸಿಕ ಓಲರೇಸಿಯ ವೆರೈಟಿ ಗಾಂಗೈಲಾಯಿಡಿಸ್ ಅಥವಾ ಬ್ರ್ಯಾಸಿಕ ಕಾಲರೇಪ. ಇದರಲ್ಲಿ ಸುಮಾರು ನೂರೈವತ್ತು ಬಗೆಗಳಿವೆ. ಇವುಗಳಲ್ಲಿ ಕೆಲವು ಬಗೆಗಳು ಏಕವಾರ್ಷಿಕಗಳಾದರೆ ಇನ್ನು ಕೆಲವು ದ್ವೈವಾರ್ಷಿಕಗಳು. ಕೆಲವನ್ನು ಎಣ್ಣೆಬೀಜಗಳಿಗಾಗಿಯೂ ಇನ್ನು ಕೆಲವನ್ನು ಕಾಯಿಪಲ್ಯಗಳಿಗಾಗಿಯೂ ಬೆಳೆಸುತ್ತಾರೆ. ಬ್ರ್ಯಾಸಿಕ ಓಲರೇಸಿಯ ಎಂಬ ಪ್ರಭೇದದಲ್ಲಿಯೇ ಹಲವಾರು ಬಗೆಗಳಿವೆ. ಉದಾಹರಣೆಗೆ ಎಲೆಕೋಸು ಮತ್ತು ಹೂಕೋಸು ಮುಂತಾದವು. ಇವು ತಮ್ಮ ಕಾಂಡ ಎಲೆ ಮತ್ತು ಹೂಗೊಂಚಲುಗಳ ಗುಣಲಕ್ಷಣಗಳಲ್ಲಿ ವ್ಯತ್ಯಾಸವನ್ನು ತೋರಿಸುತ್ತವೆ.

ಬೆಳೆ[ಬದಲಾಯಿಸಿ]

ಗೆಡ್ಡೆಕೋಸು ಪ್ರಧಾನವಾಗಿ ಉತ್ತರ ಸಮಶೀತೋಷ್ಣವಲಯದ ಬೆಳೆ. ಉತ್ತರ ಯುರೋಪಿನ ಕರಾವಳಿ ಪ್ರದೇಶಗಳು ಇದರ ತವರು ಎಂದು ಅಭಿಪ್ರಾಯ ಪಡಲಾಗಿದೆ. ಆದರೆ ಚಳಿಗಾಲದ ಬೆಳೆಯಾಗಿ ಉಷ್ಣವಲಯದಲ್ಲೂ ಬೆಳೆಸಬಹುದು. ಭಾರತದಲ್ಲಿ ಇದನ್ನು ಮುಂಬಯಿ, ಬರೋಡ, ಅಸ್ಸಾಂ, ಉತ್ತರ ಪ್ರದೇಶ ಮತ್ತು ಪಂಜಾಬುಗಳಲ್ಲಿ ಅಧಿಕವಾಗಿ ಬೆಳೆಸುತ್ತಾರೆ.

ಗೆಡ್ಡೆಕೋಸಿನ ಕೃಷಿಗೆ ತಂಪಾದ ಹಾಗೂ ತೇವಾಂಶವಿರುವ ಹವೆ ಅಗತ್ಯ. ಆದ್ದರಿಂದ ಭಾರತದಲ್ಲಿ ಇದನ್ನು ಚಳಿಗಾಲದ ಬೆಳೆಯನ್ನಾಗಿ ಬೆಳೆಸುವುದೇ ಹೆಚ್ಚು. ಅದರಲ್ಲೂ ಉತ್ತರ ಭಾರತದಲ್ಲಿ ಇದರ ಕೃಷಿ ಬಹಳವಾಗಿದೆ. ಬೆಟ್ಟಪ್ರದೇಶಗಳಲ್ಲಿ ಇದನ್ನು ವಸಂತ ಋತುವಿನಲ್ಲಿ ಅಥವಾ ಬೇಸಗೆ ಕಾಲದ ಆರಂಭದಲ್ಲಿ ಬೆಳೆಸಲಾಗುತ್ತದೆ. ಕೆಲವು ಕಡೆಗಳಲ್ಲಿ ವರ್ಷಕ್ಕೆ ಎರಡು ಬೆಳೆಗಳನ್ನೂ ತೆಗೆಯುವುದುಂಟು. ಮಣ್ಣಿನ ಲಕ್ಷಣದಲ್ಲಿ ಸ್ವಲ್ಪ ಬದಲಾವಣೆಯಾದರೂ ಇದು ಹೊಂದಿಕೊಂಡು ಬೆಳೆಯಬಲ್ಲುದು. ಮರಳು ಮಿಶ್ರಿತ ಜೇಡಿಮಣ್ಣಿದ್ದಲ್ಲಿ ಬೇಗನೆ ಬೆಳೆ ತೆಗೆಯಬಹುದಾದರೂ ಮೆಕ್ಕಲು ಮಣ್ಣು ಒಳ್ಳೆಯ ಫಸಲನ್ನು ಕೊಡುತ್ತದೆ. ಆಮ್ಲೀಯ ಮಣ್ಣಿನಲ್ಲಿ ಇದು ಚೆನ್ನಾಗಿ ಬೆಳೆಯಲಾರದು. ಮಣ್ಣಿನಲ್ಲಿ ಇತರ ಸಾವಯವ ವಸ್ತುಗಳು ಬೆರೆತಿದ್ದರೆ ಉತ್ತಮ. ಆಗಾಗ್ಗೆ ಮಣ್ಣನ್ನು ಸಡಿಲಿಸಿ ಕಳೆ ಕೀಳುವುದು ಒಳ್ಳೆಯದು. ಗೆಡ್ಡೆಕೋಸಿನ ಬೆಳೆಗೆ ಅಧಿಕ ಗೊಬ್ಬರದ ಪುರೈಕೆಯೂ ಅಗತ್ಯ. ಹಾಕಿದ ಗೊಬ್ಬರ ಮಣ್ಣಿನಲ್ಲಿ ಸರಿಯಾಗಿ ಬೆರೆಯುವಂತೆ ಮೂರು ನಾಲ್ಕು ಸಲವಾದರೂ ಚೆನ್ನಾಗಿ ಉಳಬೇಕು. ಅಮೋನಿಯಂ ಸಲ್ಫೇಟ್, ಸೂಪರ್ ಫಾಸ್ಫೇಟ್ ಮತ್ತು ಹಸಿರು ಗೊಬ್ಬರಗಳನ್ನು ಮಿಶ್ರ ಮಾಡಿ ಅಥವಾ ಬೇರೆ ಬೇರೆಯಾಗಿ ಉಪಯೋಗಿಸ ಬಹುದು. ಬೀಜ ಬಿತ್ತುವ ಪಾತಿಯಲ್ಲಿನ ಮಣ್ಣಿನ ಹೊರಪದರ ಗಡುಸಾಗಿರದೆ ಪುಡಿಯಾಗು ವಂತಿರಬೇಕು. ಬೀಜ ಬಿತ್ತುವ ಸ್ಥಳ ಅಶುಚಿಯಾಗಿದ್ದಲ್ಲಿ ಫಾರ್ಮಾಲ್ಡಿಹೈಡ್ ದ್ರಾವಣವನ್ನು ಅಥವಾ ಬಿಸಿನೀರನ್ನು ಚಿಮುಕಿಸಬೇಕು. ಗೆಡ್ಡೆಕೋಸಿಗೆ ನೀರಿನ ಸರಬರಾಜು ಯಥೇಚ್ಛವಾಗಿರಬೇಕು.

ಬೇಸಾಯ[ಬದಲಾಯಿಸಿ]

ಗೆಡ್ಡೆಕೋಸಿನ ಬೀಜಗಳನ್ನು ಬಯಲು ಪ್ರದೇಶಗಳಲ್ಲಿ ಆಗಸ್ಟ್‌ನಿಂದ ಅಕ್ಟೋಬರ್ವರೆಗೂ ಗುಡ್ಡ ಪ್ರದೇಶಗಳಲ್ಲಿ ಫೆಬ್ರವರಿಯಿಂದ ಮೇ ವರೆಗೂ ಬಿತ್ತುತ್ತಾರೆ. ಒಂದು ಹೆಕ್ಟೇರಿಗೆ 1-1.5 ಕೆಜಿ ಬೀಜ ಬೇಕಾಗುತ್ತದೆ. ಬೀಜಗಳನ್ನು ಸಾಲಾಗಿ ನೆಡಬೇಕು. ಸಾಂದ್ರವಾಗಿ ಬಿತ್ತಬಾರದು. ಒಂದು ಗಿಡ ಇನ್ನೊಂದು ಗಿಡದಿಂದ ಇಪ್ಪತ್ತು ಸೆಂಮೀ ಅಂತರದಲ್ಲಿರಬೇಕು. ಬೀಜ ಬಿತ್ತಿದ ಸುಮಾರು 40-60 ದಿವಸಗಳೊಳಗೆ ಬೆಳೆ ಕೊಯ್ಲಿಗೆ ಬರುತ್ತದೆ. ಗೆಡ್ಡೆಕೋಸಿಗೆ ಸಾರಜನಕದ ಆವಶ್ಯಕತೆ ಹೆಚ್ಚಾಗಿರುವುದರಿಂದ ದ್ವಿದಳಧಾನ್ಯಗಳನ್ನು ಬೆಳೆಸಿದ ಅನಂತರ ಬೀಜ ಬಿತ್ತುವುದು ಉತ್ತಮ.

ಈ ಸಸ್ಯದಲ್ಲಿ ರೂಪಾಂತರ ಹೊಂದಿರುವ ಕಾಂಡವೇ ಆಹಾರಕ್ಕಾಗಿ ಉಪಯೋಗಿಸಲ್ಪಡುವ ಭಾಗ. ಕಾಂಡ ಸರಿಯಾದ ಗಾತ್ರಕ್ಕೆ ಬೆಳೆದ ಅನಂತರ ಇದನ್ನು ಕೀಳಬಹುದು. ಆದರೆ ದೀರ್ಘಕಾಲ ಹಾಗೆಯೇ ಬಿಟ್ಟರೆ ಗೆಡ್ಡೆ ಬಲಿತು ಗಟ್ಟಿಯಾಗಿ ನಾರು ನಾರಾಗುತ್ತದೆ. ಗೆಡ್ಡೆಕೋಸಿನ ವಾರ್ಷಿಕ ಇಳುವರಿ ಹೆಕ್ಟೇರಿಗೆ 20-25 ಟನ್ಗಳು. ಗೆಡ್ಡೆಕೋಸನ್ನು 00 ಸೆಂ. ಉಷ್ಣತೆಯಲ್ಲಿ ಮತ್ತು ಶೇ.90-95 ತೇವಾಂಶವಿರುವಲ್ಲಿ ಶೇಖರಿಸಿಡಬಹುದು.

ಗೆಡ್ಡೆಕೋಸಿನಲ್ಲಿ ಕಾಂಡ ಮಾರ್ಪಾಡಾಗಿ ಗೆಡ್ಡೆಯಂಥ ರಚನೆಯಾಗುತ್ತದೆ. ಎಲೆಗಳು ಕಾಂಡದ ಮೇಲ್ಭಾಗದಲ್ಲಿ ಗುಂಪುಕೂಡಿರುತ್ತವೆ. ಇವು ಸರಳ ಮಾದರಿಯವು. ಹೂಗಳು ದ್ವಿಲಿಂಗಿಗಳು ಹಾಗೂ ಹಳದಿಬಣ್ಣದವು. ಗೊನೆಯಾಕಾರದ ಹೂಗೊಂಚಲುಗಳಲ್ಲಿ ಜೋಡಣೆಗೊಂಡಿವೆ. ಪುಷ್ಪಪತ್ರ ಮತ್ತು ಪುಷ್ಪದಳಗಳ ಸಂಖ್ಯೆ ನಾಲ್ಕು, ಕೇಸರಗಳು ಆರು. ಇವುಗಳಲ್ಲಿ ಎರಡು ಚಿಕ್ಕವಾಗಿಯೂ ನಾಲ್ಕು ದೊಡ್ಡವಾಗಿಯೂ ಇವೆ. ಅಂಡಾಶಯದಲ್ಲಿ ಎರಡು ಕಾರ್ಪೆಲುಗಳಿರುತ್ತವೆ. ಶಲಾಕೆ ಚಿಕ್ಕದು. ಶಲಾಕಾಗ್ರ ಗುಂಡಗಿದೆ. ಕಾಯಿಗಳು ಕ್ಯಾಪ್ಸುಲ್ ಮಾದರಿಯವು. ಹೂಗಳಲ್ಲಿ ಸಾಮಾನ್ಯವಾಗಿ ಅನ್ಯ ಪರಾಗಸ್ಪರ್ಶ ನಡೆಯುತ್ತದೆ. ಅಲ್ಲದೆ ಇದೇ ಜಾತಿಯ ಬೇರೆ ಸಸ್ಯಗಳೊಡನೆ ಪರಕೀಯ ಪರಾಗಸ್ವರ್ಶವೂ ನಡೆಯಬಹುದು. ಪರಾಗಕೋಶ ಮತ್ತು ಅಂಡಾಶಯಗಳು ಬೇರೆ ಬೇರೆ ಕಾಲಗಳಲ್ಲಿ ಪಕ್ವವಾಗುವುದರಿಂದ ಸ್ವಕೀಯ ಪರಾಗಸ್ಪರ್ಶ ಅಸಾಧ್ಯ. ಪರಾಗಸ್ಪರ್ಶ ಕ್ರಿಯೆ ಸಹಜವಾಗಿ ನಡೆದರೂ ಬೀಜಗಳ ಉತ್ಪತ್ತಿ ಬಲು ಕಡಿಮೆ. ಭಾರತದಲ್ಲಿ ಬೆಟ್ಟ ಪ್ರದೇಶಗಳಲ್ಲಿನ ಗೆಡ್ಡೆಕೋಸುಗಳು ಮಾತ್ರ ಬೀಜವನ್ನು ಉತ್ಪಾದಿಸುತ್ತವೆ.

ಪ್ರಬೇಧಗಳು[ಬದಲಾಯಿಸಿ]

ಗೆಡ್ಡೆಕೋಸಿನಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ಒಂದು ನಸುಹಸಿರು ಬಣ್ಣದ್ದು. ಇದು ಗುಂಡಾಗಿಯೂ ನುಣುಪಾಗಿಯೂ ಇರುವ ಮಧ್ಯಮ ಗಾತ್ರದ ಕೋಸು. ಇದರ ವಾಣಿಜ್ಯನಾಮ ವೈಟ್ ವಿಯನ. ಇನ್ನೊಂದು ನೇರಳೆ ವರ್ಣದ್ದು. ಇದರ ಹೆಸರು ಪರ್ಪಲ್ ವಿಯನ. ಇದನ್ನು ತರಕಾರಿಯಂತೆ ಉಪಯೋಗಿಸುವುದಲ್ಲದೆ ಉಪ್ಪಿನಕಾಯಿ ಹಾಕುವುದಕ್ಕೂ ಬಳಸುತ್ತಾರೆ.

ಪೌಷ್ಟಿಕಾಂಶಗಳು[ಬದಲಾಯಿಸಿ]

ಗೆಡ್ಡೆಕೋಸಿನಲ್ಲಿ ಶೇ.92.7 ತೇವಾಂಶ ಶೇ.1.1 ನೈಟ್ರೋಜನ್, ಶೇ.0.2 ಕೊಬ್ಬು, ಶೇ.3.8 ಕಾರ್ಬೊಹೈಡ್ರೇಟ್, ಶೇ.0.7 ಲವಣ ಪದಾರ್ಥ, ಶೇ.1.5 ನಾರು; ಲವಣ ಪದಾರ್ಥಗಳಲ್ಲಿ ಮುಖ್ಯವಾದವು ಕ್ಯಾಲ್ಸಿಯಂ, ಮೆಗ್ನೀಸಿಯಂ, ಫಾಸ್ಫರಸ್, ಕಬ್ಬಿಣ, ತಾಮ್ರ, ಗಂಧಕ. ಗಂಧಕದ ಅಂಶ ವಿಶೇಷವಾಗಿರುವುದರಿಂದ ಗೆಡ್ಡೆಕೋಸಿಗೆ ಒಂದು ವಿಧದ ತೀಕ್ಷ್ಣ ವಾಸನೆಯಿದೆ.

ರೋಗಗಳು[ಬದಲಾಯಿಸಿ]

ಗೆಡ್ಡೆಕೋಸು ಹಲವು ರೀತಿಯ ವ್ಯಾಧಿಗಳಿಗೆ ಮತ್ತು ಹಾನಿಕರ ಕೀಟಗಳಿಗೆ ಬಲಿಯಾಗುತ್ತದೆ. ರೋಗಗಳಲ್ಲಿ ಮುಖ್ಯವಾದವು-

  1. ಡ್ಯಾಂಪಿಂಗ್ ಆಫ್
  2. ಬ್ಲಾಕ್ ರಾಟ್
  3. ಕ್ಲಬ್ರೂಟ್
  4. ಬ್ಲ್ಯಾಕ್ ಲೆಗ್
  5. ಹಳದಿರೋಗ

ಡ್ಯಾಂಪಿಂಗ್ ಆಫ್ ಎಳೆಯ ಸಸ್ಯಗಳಲ್ಲಿ ಇದು ಬಲು ಸಾಮಾನ್ಯವಾದ ರೋಗ. ಇದನ್ನು ತಡೆಗಟ್ಟಲು ಫಾರ್ಮಾಲ್ಡಿಹೈಡ್ ಅಥವಾ ಇನ್ನಿತರ ಶಿಲೀಂಧ್ರನಾಶಕ ವಸ್ತುಗಳನ್ನು ಬೀಜ ಬಿತ್ತುವ ಜಾಗದಲ್ಲಿ ಚಿಮುಕಿಸಬೇಕು ಮತ್ತು ಬೀಜಗಳನ್ನು ಸಾಕಷ್ಟು ಅಂತರದಲ್ಲಿ ನೆಡಬೇಕು.

ಬ್ಲಾಕ್ ರಾಟ್ ಕ್ಸ್ಯಾಂತೊಮೊನಾಸ್ ಕಂಪೆಸ್ಟ್ರಿಸ್ ಎಂಬ ಬ್ಯಾಕ್ಟೀರಿಯ ಈ ರೋಗಕ್ಕೆ ಮೂಲ ಕಾರಣ. ಇದರಿಂದ ಎಲೆಗಳು ಹಳದಿಬಣ್ಣಕ್ಕೆ ತಿರುಗುವುದಲ್ಲದೆ ನರಗಳು ಕಪ್ಪಾಗುತ್ತವೆ. ಚಿಕ್ಕ ಚಿಕ್ಕ ಸಸಿಗಳಿಗೆ ಈ ರೋಗ ಬಂದರೆ ಅವು ಸತ್ತುಹೋಗುತ್ತವೆ. ಬೆಟ್ಟ ಪ್ರದೇಶಗಳಲ್ಲಿ ಈ ರೋಗ ಬಹು ಸಾಮಾನ್ಯ. ಇದು ಬೀಜಗಳ ಮೂಲಕ ಹರಡುವುದರಿಂದ ಇಂಥ ಬೀಜಗಳನ್ನು ಬಿತ್ತುವ ಮೊದಲು 500 ಸೆಂ. ಉಷ್ಣತೆಯ ನೀರಿನಲ್ಲಿ 25-30 ಮಿನಿಟುಗಳ ತನಕ ಮುಳುಗಿಸಬೇಕು. ಬೆಳೆಗಳ ಪರ್ಯಾಯವೂ ಈ ರೋಗವನ್ನು ಹತೋಟಿಗೆ ತರುವ ಇನ್ನೊಂದು ಉಪಾಯ.

ಕ್ಲಬ್ರೂಟ್ ಈ ರೋಗ ಆಮ್ಲೀಯ ಮಣ್ಣಿನಲ್ಲಿ ಬೆಳೆಯುವ ಸಸ್ಯಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕೆ ಪ್ಲಾಸ್ಮೊಡಿಯೋಫೊರ ಬ್ರ್ಯಾಸಿಕೆ ಎಂಬ ಶಿಲೀಂಧ್ರ ಕಾರಣ. ಇದು ಮಣ್ಣಿನಲ್ಲಿ ವಾಸವಾಗಿದ್ದು ಬೇರನ್ನು ಆಕ್ರಮಿಸಿಕೊಳ್ಳುತ್ತದೆ. ಬೇರಿನಿಂದ ಒಳಹೊಕ್ಕ ಮೇಲೆ ನೀರಿನ ಸಾಗಣೆಗೆ ಅಡ್ಡಿಯನ್ನು ಉಂಟುಮಾಡುವುದರಿಂದ ಸಸ್ಯದ ಬೆಳೆವಣಿಗೆಯನ್ನು ಕುಂಠಿಸುತ್ತದೆ. ತತ್ಪರಿಣಾಮವಾಗಿ ಎಲೆಗಳು ಬಾಡಿಹೋಗುತ್ತವೆ. ಬೆಳೆಯ ಪರ್ಯಾಯ ಕಾಲವನ್ನು ಹೆಚ್ಚಿಸುವುದರಿಂದ ಮತ್ತು ಮಣ್ಣನ್ನು ಕ್ಷಾರೀಯ ಸ್ಥಿತಿಗೆ ತರುವುದರಿಂದ ಈ ರೋಗವನ್ನು ತಡೆಗಟ್ಟಬಹುದು.

ಬ್ಲ್ಯಾಕ್ ಲೆಗ್ ಫೋಮ ಲಿಂಗಮ್ ಎಂಬ ಶಿಲೀಂಧ್ರದಿಂದ ಈ ರೋಗ ಬರುತ್ತದೆ. ರೋಗ ಅಂಟಿದಾಗ ಕಾಂಡದ ತಳಭಾಗ ಮತ್ತು ಬೇರುಗಳು ಸತ್ತುಹೋಗುವುದರಿಂದ ಗಿಡ ಬಾಡಿ ಬಿದ್ದುಹೋಗುತ್ತದೆ. ಎಳೆಯ ಸಸಿಗಳು ಇದಕ್ಕೆ ಬಹುಬೇಗನೆ ತುತ್ತಾಗುತ್ತವೆ. ಇದನ್ನು ಹತೋಟಿಗೆ ತರುವ ಮುಖ್ಯ ವಿಧಾನಗಳೆಂದರೆ ಬೆಳೆಗಳ ಪರ್ಯಾಯ ಕಾಲವನ್ನು ಹೆಚ್ಚಿಸುವುದು ಮತ್ತು ಬೀಜಗಳನ್ನು ಬಿತ್ತುವ ಮೊದಲು ಅವನ್ನು ಸುಮಾರು 1220. ಸೆಂ. ಉಷ್ಣತೆಯಿರುವ ನೀರಿನಲ್ಲಿ 25 ಮಿನಿಟುಗಳ ಕಾಲ ಮುಳುಗಿಸಿಟ್ಟಿದ್ದು ಅನಂತರ ಒಣಗಿಸುವುದು.

ಹಳದಿರೋಗ ಫ್ಯೂಸೇರಿಯಂ ಕೊಂಗ್ಲುಟಿನೆನ್ಸ್‌ ಎಂಬ ಶಿಲೀಂಧ್ರ ಈ ರೋಗವನ್ನು ಉಂಟುಮಾಡುತ್ತದೆ. ಇದು ಸಸ್ಯ ದೇಹದಲ್ಲಿ ನೀರು ಮತ್ತು ಆಹಾರ ಸಾಗಣೆಗೆ ತೊಂದರೆಯನ್ನು ಉಂಟುಮಾಡುವುದರಿಂದ ಗಿಡದ ಬೆಳೆವಣಿಗೆ ಕುಂಠಿತಗೊಳ್ಳುತ್ತದೆ. ಇಡೀ ಗಿಡ ಹಳದಿಬಣ್ಣಕ್ಕೆ ತಿರುಗಿ ಎಲೆಗಳು ಉದುರಲು ಪ್ರಾರಂಭವಾಗುವುದು ಈ ಜಾಡ್ಯದ ಮುಖ್ಯ ಚಿಹ್ನೆ. ರೋಗವನ್ನು ತಡೆಗಟ್ಟಲು ಬೀಜ ನೆಡುವ ಪಾತಿಗಳನ್ನು ಚೊಕ್ಕಟವಾಗಿರಿಸಬೇಕು. ನಿರೋಧ ಶಕ್ತಿಯುಳ್ಳ ಬಗೆಗಳನ್ನು ಮಾತ್ರ ಬೆಳೆಯುವುದು ರೋಗ ನಿವಾರಣೆಯ ಉತ್ತಮ ವಿಧಾನ. ಹಾನಿಕಾರಕ ಕೀಟಗಳಲ್ಲಿ ಮುಖ್ಯವಾದವು ಇವು: ಹೈಲೆಮಿಯ ಬ್ರ್ಯಾಸಿಕೆ ಎಂಬ ಕೀಟ ಮೊದಲು ಎಳೆಯ ಬೇರುಗಳನ್ನು ಆಕ್ರಮಿಸಿಕೊಂಡು ಅನಂತರ ಪ್ರಮುಖ ಬೇರಿನೊಳಕ್ಕೆ ಹಾಗೂ ಕಾಂಡದೊಳಕ್ಕೆ ಕೊರೆದುಕೊಂಡು ಹೋಗುತ್ತದೆ. ತತ್ಫಲವಾಗಿ ಗಿಡ ಹಳದಿಬಣ್ಣಕ್ಕೆ ತಿರುಗಿ ಬಾಡುತ್ತ ಬರುತ್ತದೆ. ರಸಕರ್ಪುರದ (ಕ್ಯಾಲೊಮೆಲ್) ದ್ರಾವಣ, ಪಾದರಸದ ಕ್ಲೋರೈಡ್, ಆಲ್ಡ್ರಿನ್ ಮೊದಲಾದ ರಾಸಾಯನಿಕ ವಸ್ತುಗಳನ್ನು ಸಿಂಪಡಿಸುವುದರಿಂದ ಈ ಕೀಟಗಳನ್ನು ನಾಶಪಡಿಸಬಹುದು.

ಏಸಿಯ ರೇಪ ಎಂಬ ಕೀಟ ಗೆಡ್ಡೆಕೋಸಿನ ಎಲೆಗಳನ್ನು ತಿಂದು ಜೀವಿಸುತ್ತದೆ. ಡಿ ಡಿ ಟಿ ಮತ್ತು ಎಂಡ್ರೆಕ್ಸ್‌ ಎಂಬ ಕೀಟನಾಶಕ ವಸ್ತುಗಳನ್ನು ಚಿಮುಕಿಸುವುದರಿಂದ ಈ ಕೀಟವನ್ನು ನಾಶಪಡಿಸಬಹುದು.

ಏಫಿಡ ಬ್ರಾಸಿಕೆ ಎಂಬ ಕೀಟ ಇನ್ನೊಂದು ಮುಖ್ಯ ಪಿಡುಗು. ಎಲೆಗಳು ಸುರುಟಿಕೊಂಡು ಬೆಳೆವಣಿಗೆ ಕುಂಠಿತವಾಗುವುದು ಈ ರೋಗದ ಮುಖ್ಯ ಲಕ್ಷಣ. ಫಾಲಿಡಾಲನ್ನು ಚಿಮುಕಿಸುವುದರಿಂದ ಇದನ್ನು ನಿವಾರಿಸಬಹುದು.

ಮುರ್ಗೆನ್ಶಿಯ ಹಿಸ್ಟ್ರಿಯಾನಿಕ ಎಂಬ ಇನ್ನೊಂದು ಕೀಟ ಗೆಡ್ಡೆಕೋಸಿಗೆ ತಗಲುತ್ತದೆ. ಇದರ ನಿವಾರಣೆ ಪ್ರಯಾಸದ ಕೆಲಸ. ಸಸಿಗಳು ಎಳೆಯವಾಗಿದ್ದಾಗಲೇ ಡಿ.ಡಿ.ಟಿ.ಯನ್ನು ಸಿಂಪಡಿಸುವುದರ ಮೂಲಕ ಕೀಟವನ್ನು ನಾಶಪಡಿಸಬಹುದು. ಆದರೆ ಗಿಡ ಬಲಿಯುತ್ತ ಬಂದಂತೆ ಈ ಕ್ರಮವನ್ನು ಅನುಸರಿಸುವುದು ಯೋಗ್ಯವಲ್ಲ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: