ವಿಷಯಕ್ಕೆ ಹೋಗು

ಸಂದೀಪ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ದೀಪ್ತಿ ಇಂದ ಪುನರ್ನಿರ್ದೇಶಿತ)
ಲೂಮಿನಾಲ್ ಮತ್ತು ಹೀಮೊಗ್ಲೋಬಿನ್, ರಸದೀಪ್ತಿಯ ಒಂದು ಉದಾಹರಣೆ
ಸೂಕ್ಷ್ಮ ಜೀವವಿಜ್ಞಾನ ರೋಗನಿದಾನದಲ್ಲಿ ಯುವಿ-ದ್ಯುತಿದೀಪ್ತಿ

ಸಂದೀಪ್ತಿ ಎಂದರೆ ನಿರ್ದಿಷ್ಟ ಪದಾರ್ಥಗಳು ಸಾಪೇಕ್ಷವಾಗಿ ತಣ್ಣಗಿರುವಾಗ ಉಷ್ಣ ಪಡೆಯದೆ ಅಥವಾ ತಮ್ಮ ತಾಪ ಬದಲಿಸದೆ ಉತ್ಸರ್ಜಿಸುವ ಬೆಳಕು, ಶೀತಬೆಳಕು (ಲ್ಯೂಮಿನಿಸೆನ್ಸ್).[][] ಪರ್ಯಾಯ ಪದ: ದೀಪ್ತಿ.

ಸಂದೀಪ್ತಿಗೆ ಕಾರಣಗಳು

[ಬದಲಾಯಿಸಿ]

ಎಕ್ಸ್-ಕಿರಣ ಅಥವಾ ಅತಿನೇರಿಳೆ ವಿಕಿರಣ, ಎಲೆಕ್ಟ್ರಾನ್ ದೂಲ (ಬೀಮ್), ರಾಸಾಯನಿಕ ಕ್ರಿಯೆ ಮುಂತಾದ ಆಕರಗಳಿಂದ ಪದಾರ್ಥವು ಶಕ್ತಿ ಹೀರಿದ ಬಳಿಕ ದೀಪ್ತಿ ವಿದ್ಯಮಾನ ಜರಗುತ್ತದೆ. ಪದಾರ್ಥದ ಪರಮಾಣುಗಳನ್ನು ಈ ಶಕ್ತಿ ಉದ್ರೇಕಿಸುತ್ತದೆ, ಅರ್ಥಾತ್ ಮೇಲಿನ ಶಕ್ತಿಮಟ್ಟಕ್ಕೆ ಒಯ್ಯುತ್ತದೆ. ಪರಮಾಣು ನ್ಯೂಕ್ಲಿಯಸ್‌ಗಳ ಸುತ್ತ ಅತ್ಯಂತ ಹೊರವಲಯದಲ್ಲಿ ಸುತ್ತು ಹಾಕುತ್ತಿರುವ ಎಲೆಕ್ಟ್ರಾನ್‌ಗಳು ಮಾತ್ರ ಪಾಲ್ಗೊಳ್ಳುವ ಪ್ರಕ್ರಿಯೆ ಇದು. ಅಸ್ಥಿರ ಉದ್ರೇಕಿತ ಸ್ಥಿತಿಯಿಂದ ಪೂರ್ವಸ್ಥಿತಿಗೆ ಅವು ಮರಳುವಾಗ ಮೊದಲು ಹೀರಿದ್ದ ಶಕ್ತಿಯನ್ನು ಬೆಳಕಿನ ರೂಪದಲ್ಲಿ ಉತ್ಸರ್ಜಿಸುತ್ತವೆ. ಪರಮಾಣುಗಳು ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಸಂಕ್ರಮಿಸುವಾಗ ಅವುಗಳ ವಿಕ್ಷೋಭೆ (ಎಜಿಟೇಷನ್) ಗಮನಾರ್ಹವಾಗಿ ಬದಲಾಗುವುದಿಲ್ಲ, ಅರ್ಥಾತ್ ಪದಾರ್ಥದ ತಾಪದಲ್ಲಿ ಬದಲಾವಣೆ ಆಗದು. ದೀಪ್ತಿಶೀಲತೆಗೂ ಪದಾರ್ಥಸ್ಥಿತಿಗೂ ಸಂಬಂಧವಿಲ್ಲ. ಶಕ್ತಿಯ ಅಗೋಚರ ರೂಪಗಳನ್ನು ಗೋಚರಬೆಳಕಾಗಿ ಪರಿವರ್ತಿಸಲು ದೀಪ್ತಿಶೀಲ ಪದಾರ್ಥಗಳನ್ನು ಬಳಸಬಹುದಾದರೂ ಔಪಯೋಗಿಕ ಮೌಲ್ಯವಿರುವ ದೀಪ್ತಿದಕ್ಷ ಪದಾರ್ಥಗಳ ಸಂಖ್ಯೆ ಬಲು ಕಡಿಮೆ.

ಬಗೆಗಳು

[ಬದಲಾಯಿಸಿ]

ಉದ್ರೇಕ ಪ್ರೇರಕ ಶಕ್ತಿ ಆಕರವನ್ನು ಆಧರಿಸಿ ಪ್ರಸರಿತ ದೀಪ್ತಿಯಲ್ಲಿ ಹಲವು ಬಗೆಗಳನ್ನು ಗುರುತಿಸಬಹುದು. ಉದಾಹರಣೆಗೆ ರಾಸಾಯನಿಕ ಕ್ರಿಯೆಯಿಂದ ರಸದೀಪ್ತಿ (ಕೆಮಿಲ್ಯೂಮಿನಿಸೆನ್ಸ್) - ‘ಶೀತಲ’ ಬೆಳಕಿನ ಉತ್ಪಾದನೆಯಲ್ಲಿ ಇದರ ಉಪಯೋಗವಿದೆ; ಎಕ್ಸ್-ಅಥವಾ ಗ್ಯಾಮ-ಕಿರಣಗಳಿಂದ ವಿಕಿರಣದೀಪ್ತಿ (ರೇಡಿಯೊಲ್ಯೂಮಿನಿಸೆನ್ಸ್)-ಇದಕ್ಕೆ ಎಕ್ಸ್-ಕಿರಣಯಂತ್ರದ ಪರದೆಯಲ್ಲಿ ಚಿತ್ರ ಮೂಡಿಸುವ ಗುಣವಿದೆ; ಕ್ಯಾಥೋಡ್ ಕಿರಣಗಳಿಂದ (ವೇಗೋತ್ಕರ್ಷಿತ ಎಲೆಕ್ಟ್ರಾನ್‌ಗಳು) ಕ್ಯಾಥೋಡೊದೀಪ್ತಿ-ಟಿವಿಯಲ್ಲಿ ಇದರ ಉಪಯೋಗ ಉಂಟು; ವಿದ್ಯುತ್ ಕ್ಷೇತ್ರದ ಪ್ರಯೋಗದಿಂದ ವಿದ್ಯುದ್ದೀಪ್ತಿ (ಎಲೆಕ್ಟ್ರೊಲ್ಯೂಮಿನಿಸೆನ್ಸ್) - ದ್ಯುತಿಪ್ರವರ್ಧಕಗಳಲ್ಲಿಯೂ ಫ್ಲೂರಸೆಂಟ್ ದೀಪಗಳಲ್ಲಿಯೂ ಇದರ ಉಪಯೋಗವಿದೆ; ಅತಿನೇರಿಳೆ, ಗೋಚರ ಬೆಳಕು ಅಥವಾ ಅವಕೆಂಪು ಕಿರಣಗಳಿಂದ ದ್ಯುತಿದೀಪ್ತಿ (ಫೋಟೊಲ್ಯೂಮಿನಿಸೆನ್ಸ್) ಬೆಳಕು ಬಿದ್ದನಂತರ ಕತ್ತಲೆಯಲ್ಲಿ ಮಿನುಗುವ ಬಣ್ಣಗಳಲ್ಲಿ ದ್ಯುತಿದೀಪ್ತಿಯನ್ನೂ ಸ್ಫುರದೀಪ್ತಿಯನ್ನೂ (ಫಾಸ್ಫರೆಸೆನ್ಸ್) ಗುರುತಿಸಬಹುದು; ಉಷ್ಣ ಪೂರೈಕೆಯಿಂದ ಉಷ್ಣದೀಪ್ತಿ (ಥರ್ಮೊಲ್ಯೂಮಿನಿಸೆನ್ಸ್)[]-ವಸ್ತುಗಳ ಕಾಲನಿರ್ಣಯ ಮಾಡಲು ಇದು ಉಪಯುಕ್ತ; ಘರ್ಷಣೆಯಿಂದ ಘರ್ಷಣದೀಪ್ತಿ (ಟರ್ಬೊಲ್ಯೂಮಿನಿಸೆನ್ಸ್); ಕೆಲವು ಜೀವಿಗಳ ಶರೀರಗಳಲ್ಲಿ ಧ್ವನಿದೀಪ್ತಿ (ಸೋನೊಲ್ಯೂಮಿನಿಸೆನ್ಸ್); ಕೆಲವು ಜೀವಿಗಳ ಶರೀರಗಳಲ್ಲಿ ಜರಗುವ ವಿಶಿಷ್ಟ ರಾಸಾಯನಿಕ ಕ್ರಿಯೆಯಿಂದ ಜೈವದೀಪ್ತಿ (ಬಯೊಲ್ಯೂಮಿನಿಸೆನ್ಸ್)-ಹಲವಾರು ಸಸ್ಯ ಮತ್ತು ಪ್ರಾಣಿಗಳಲ್ಲಿ ಪ್ರಕಟವಾಗುವ ಜೈವದೀಪ್ತಿಯ ಉಪಯೋಗ ಅಸ್ಪಷ್ಟ.

ಪ್ರತಿದೀಪ್ತಿ ಮತ್ತು ಸ್ಫುರದೀಪ್ತಿ

[ಬದಲಾಯಿಸಿ]

ಉತ್ಸರ್ಜನೆಯ ಅವಧಿ ಆಧರಿಸಿ ದೀಪ್ತಿಯ ಎರಡು ಪ್ರಭೇದಗಳನ್ನು ಗುರುತಿಸಬಹುದು: ಕೆಲವು ವಿಶಿಷ್ಟ ಸನ್ನಿವೇಶಗಳಲ್ಲಿ ಅತಿನೇರಿಳೆ ಅಥವಾ ಗೋಚರವಿಕಿರಣ ಶಕ್ತಿಯಿಂದ ಉದ್ರೇಕಗೊಳ್ಳುವ ಪದಾರ್ಥಗಳು, ಆ ಶಕ್ತಿ ಪೂರೈಕೆ ಆಗುತ್ತಿರುವ ಅವಧಿ ಅಥವಾ ತದನಂತರದ 10-9 ರಿಂದ 10-6 ಸೆಕೆಂಡ್ ಅವಧಿಯಲ್ಲಿ, ಉದ್ರೇಕಿಸಿದ ಶಕ್ತಿಯಷ್ಟೇ ಅಥವಾ ಹೆಚ್ಚು ಅಲೆಯುದ್ದವುಳ್ಳ ಗೋಚರಬೆಳಕು ಉತ್ಸರ್ಜನೆ ಆಗುವ ಪ್ರತಿದೀಪ್ತಿ (ಫ್ಲೂರಸೆನ್ಸ್),[] ಶಕ್ತಿಪೂರೈಕೆ ನಿಂತ 10-8 ಸೆಕೆಂಡ್ ಕಾಲಾನಂತರವೂ ಉತ್ಸರ್ಜನೆ ಆಗುವ ಸ್ಫುರದೀಪ್ತಿ (ಫಾಸ್ಫರಸೆನ್ಸ್).[] ಇದು ವೀಕ್ಷಕ ಅಥವಾ ಅಳತೆ ಮಾಡಲು ಬಳಸುವ ಉಪಕರಣ ಅವಲಂಬಿತ ಜ್ಞಾತೃನಿಷ್ಠ ವರ್ಗೀಕರಣ ಎಂಬ ಆಪಾದನೆ ಇದೆ. ಎಂದೇ, ಉದ್ರೇಕಿತಾವಧಿಯಲ್ಲಿ ಮಾತ್ರ ಆಗುವ ಉತ್ಸರ್ಜನೆ ಪ್ರತಿದೀಪ್ತಿ, ತಾಪ ಏರಿದಂತೆಲ್ಲ ಉತ್ತರ ದೀಪ್ತಿಯ ಅವಧಿ ಕಡಿಮೆ ಆಗುವ ಉತ್ಸರ್ಜನೆ ಸ್ಫುರದೀಪ್ತಿ ಎಂಬ ವ್ಯಾಖ್ಯಾನವೂ ಇದೆ.

ಉಷ್ಣದೀಪ್ತಿ ಪ್ರಕ್ರಿಯೆ

[ಬದಲಾಯಿಸಿ]

ಇತರ ದೀಪ್ತಿ ಪ್ರಕ್ರಿಯೆಗಳಿಗಿಂತ ಕೊಂಚ ಭಿನ್ನವಾದದ್ದು ಉಷ್ಣದೀಪ್ತಿ ಪ್ರಕ್ರಿಯೆ: ಅನೇಕ ದೀಪ್ತಿಶೀಲ ಘನಗಳಲ್ಲಿ ಸಂರಚನಾ ದೋಷಗಳ ಅಥವಾ ಹುದುಗಿರುವ ರಾಸಾಯನಿಕ ಕಲ್ಮಷಗಳ ಸಮೀಪದಲ್ಲಿ ದೀಪ್ತಿಕೇಂದ್ರಗಳಿರುತ್ತವೆ. ಈ ಸ್ಥಳದಲ್ಲಿ ಒಟ್ಟಾರೆ ಜಾಲಕದಲ್ಲಿರುವುದಕ್ಕಿಂತ ಭಿನ್ನವಾದ ಎಲೆಕ್ಟ್ರಾನ್ ಜೋಡಣೆ ಇರಬಹುದು ಅಥವಾ ಅವು ಪ್ರಸಾಮಾನ್ಯಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಸಂಗ್ರಹವಾಗಿರಬಹುದು. ಇಂಥ ಘನಗಳಲ್ಲಿ ಎಲೆಕ್ಟ್ರಾನುಗಳನ್ನು ಸೆರೆಹಿಡಿಯುವ ಕೇಂದ್ರಗಳಿರುವುದೂ ಸಾಮಾನ್ಯ. ಸ್ವಾಭಾವಿಕ ಅಯಾನೀಕರಿಸುವ ವಿಕಿರಣಗಳ ಪ್ರೇರಣೆಯಿಂದ ಎಲೆಕ್ಟ್ರಾನುಗಳು ಈ ಸ್ಥಳಗಳಲ್ಲಿ ಬಂಧನದಲ್ಲಿರುತ್ತವೆ. ಅವುಗಳ ಸಂಖ್ಯೆ ಮತ್ತು ವಿಮೋಚನೆಗೆ ವ್ಯಯಿಸಬೇಕಾದ ಶಕ್ತಿ ಎಷ್ಟು ಎಂಬುದು ಘನ ಎಷ್ಟು ಕಾಲ ವಿಕಿರಣದ ಪ್ರಭಾವದಲ್ಲಿತ್ತು ಎಂಬುದನ್ನು ಅವಲಂಬಿಸಿರುತ್ತದೆ. ಇದಕ್ಕೆ ಬೇಕಾದ ಶಕ್ತಿಯ ಪರಿಮಾಣ ಅಧಿಕವಾಗಿದ್ದು ಘನ ಕಡಿಮೆ ತಾಪದಲ್ಲಿದ್ದರೆ ಎಲೆಕ್ಟ್ರಾನುಗಳು ಬಂಧಮುಕ್ತವಾಗುವುದೇ ಇಲ್ಲ. ಘನದ ಉಷ್ಣತೆಯನ್ನು ನಿಧಾನವಾಗಿ ಏರಿಸಿದರೆ ಎಲೆಕ್ಟ್ರಾನುಗಳು ಮುಕ್ತವಾಗಿ ದೀಪ್ತಿ ಸೂಸಲು ಅಗತ್ಯವಾದ ಶಕ್ತಿ ದೀಪ್ತಿಕೇಂದ್ರಗಳಿಗೆ ಲಭಿಸುತ್ತದೆ. ಪೂರೈಸಬೇಕಾದ ಉಷ್ಣ ಮತ್ತು ದೀಪ್ತಿಯ ತೀವ್ರತೆಯನ್ನಾಧರಿಸಿ ಘನದ ಕಾಲನಿರ್ಣಯಿಸಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Gundermann, Karl-Dietrich. "luminescence". Encyclopedia Britannica, 29 Jun. 2023, https://www.britannica.com/science/luminescence. Accessed 15 July 2023.
  2. "Luminescence ." Science of Everyday Things. . Encyclopedia.com. 29 Jun. 2023 <https://www.encyclopedia.com>.
  3. Meetei, Sanoujam Dhiren. "Synthesis, Characterization and Photoluminescence of ZrO2:Eu3+ Nanocrystals" (PDF). Retrieved 18 December 2014.
  4. ೪.೦ ೪.೧ Valeur, Bernard; Berberan-Santos, Mário N. (2011-06-01). "A Brief History of Fluorescence and Phosphorescence before the Emergence of Quantum Theory". Journal of Chemical Education (in ಇಂಗ್ಲಿಷ್). 88 (6): 731–738. Bibcode:2011JChEd..88..731V. doi:10.1021/ed100182h. ISSN 0021-9584.


ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: