ದಾಸ್ತಾನು ಮಳಿಗೆಗಳು

ವಿಕಿಪೀಡಿಯ ಇಂದ
Jump to navigation Jump to search


ವಸ್ತುಗಳನ್ನು ಭವಿಷ್ಯದಲ್ಲಿ ಉಪಯೋಗಿಸಲು ಕೂಡಿಸುವುದು ಮನುಷ್ಯನ ಪ್ರವೃತ್ತಿ . ಇದು ಅನಾದಿಕಾಲದಿಂದಲೂ ನಡೆದು ಬಂದಿದೆ. ವಸ್ತುಗಳು ಹೆಚ್ಚಾಗಿ ದೊರೆತಾಗ ಅದನ್ನು ಸಂಗ್ರಹಿಸಿ, ಸಿಗದೇ ಹೋದಾಗ ಬಳಸುವ ಕಾರ್ಯ ಅಂದರೆ ಕೂಡಿಸಿಡುವ ಕೆಲಸ ಒಂದು ಪ್ರಮುಖ ಮಾರಾಟ ಪ್ರಕ್ರಿಯೆ ಆಗಿದೆ. ಇದಕ್ಕೆ ಹೆಚ್ಚು ಬಂಡವಾಳ ಸಹ ಬೇಕಾಗುತ್ತದೆ ಅಲ್ಲದೇ ಮಾನವ ಶಕ್ತಿಯೂ ಬೇಕಾಗುತ್ತದೆ. ಮಾರಾಟ ತೀರ್ಮಾನ ಶೀಲತೆಯಲ್ಲಿ ಸಂಗ್ರಹಣೆ ಒಂದು ಮುಖ್ಯ ಅಂಶ. ವಸ್ತುವನ್ನು ತೊಂದರೆಗೆ ಈಡಾಗದಂತೆ ಕಾಪಾಡುವುದು ಅಥವಾ ಹಾಳಾಗದಂತೆ ನೋಡಿಕೊಳ್ಳುವುದು ಒಂದು ಆಸ್ತಿಯನ್ನು ಕೊಂಡಂತಾಗುತ್ತದೆ. ಈ ಕಾರ್ಯ ವಸ್ತುವಿಗೆ 'ಸಮಯ ತುಷ್ಟಿಗುಣ'ವನ್ನು ಕೊಡುತ್ತದೆ. ವಸ್ತುಗಳು ಸಮಯಕ್ಕೆ ಸರಿಯಾಗಿ ಗ್ರಾಹಕರಿಗೆ ತಲಪಿದಾಗ ಮಾತ್ರ ಉತ್ಪಾದನೆಗೆ ಒಂದು ಅರ್ಥ ಬರುತ್ತದೆ. ಸಾಗಣೆ ಮತ್ತು ಶೇಖರಣೆ ಒಂದಕ್ಕೊಂದು ಪೂರಕ ಕಾರ್ಯಗಳು. ಶೇಖರಣೆಯಾಗದೆ ಸಾಗಾಣಿಕೆ ಸಾಧ್ಯವಿಲ್ಲ. ಈ ದೃಷ್ಟಿಯಿಂದ ಇವೆರಡು ಕಾರ್ಯಗಳನ್ನು ಭೌತಿಕ ಕಾರ್ಯವನ್ನಾಗಿ ವಿಂಗಡಿಸಿದೆ. ಭೌಗೋಳಿಕ ಮತ್ತಿತ್ತರ ಕಾರಣಗಳಿಂದಾಗಿ,ವಸ್ತು ಉತ್ಪಾದನಾ ಕೇಂದ್ರ, ಮಾರಟ ಕೇಂದ್ರಗಳಿಂದ ದೂರವಾಗಿರುತ್ತವೆ. ಆದುದರಿಂದ ಉತ್ಪನ್ನಗಳು ಬೇಗ ಮಾರಾಟ ಕೇಂದ್ರಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ಸಾಗಣೆ ಮತ್ತು ಶೇಖರಣೆ ಕಾರ್ಯ ಇದನ್ನು ನಿವಾರಿಸುತ್ತದೆ. ಈ ಕಾರ್ಯಗಳು ವಸ್ತುವಿಗೆ ಸಮಯ ಮತ್ತು ಸ್ಥಳ ತುಷ್ಟಿಗುಣವನ್ನು ತರುವುದರಿಂದ, ಇವು ಮಾರಾಟ ಪ್ರಕ್ರಿಯೆಯಲ್ಲಿ ಪ್ರಮುಖವಾಗಿವೆ. ವಸ್ತು ನಿರಂತರವಾಗಿ ಸರಬರಾಜಾಗಲು ಸಹ ಶೇಖರಣೆ ಕಾರ್ಯ ಸಹಾಯಕ. ಗ್ರಾಹಕ ಆಧಾರಿತ ಮಾರುಕಟ್ಟೆಯಲ್ಲಿ, ಬೇಡಿಕೆಯನ್ನು ನಿರೀಕ್ಷಿಸಿ ಉತ್ಪಾದನೆ ನಡೆಯುತ್ತದೆ. ಆದುದರಿಂದ ಮಾರಾಟ ಪ್ರಕ್ರಿಯೆಯಲ್ಲಿ ಒಂದಲ್ಲ ಒಂದು ಜಾಗದಲ್ಲಿ ವಸ್ತು ಶೇಖರಣೆ ಆಗಲೇ ಬೇಕು. ಜಾಹೀರಾತು ಮತ್ತು ಸಾಗಣೆ ವಸ್ತುವಿಗೆ ಮಾರುಕಟ್ಟೆಯನ್ನು ವಿಸ್ತರಿಸಿದರೆ, ಶೇಖರಣೆ ಆಳವಾಗಿರುತ್ತದೆ.

ಉಗ್ರಾಣದ ಕಾರ್ಯಗಳು[ಬದಲಾಯಿಸಿ]

ಮಾರಾಟ ಪ್ರಕ್ರಿಯೆಯಲ್ಲಿ ಉಗ್ರಾಣ , ಮುಂದೆ ತಿಳಿಸಿದ ಅವಶ್ಯ ಕಾರ್ಯಗಳನ್ನು ನೆರವೇರಿಸುತ್ತದೆ.

೧.ಸಂಗ್ರಹಣೆ[ಬದಲಾಯಿಸಿ]

ವಸ್ತುಗಳು ಹೆಚ್ಚು ಸರಬರಾಜಾದಾಗ ಅದನ್ನು ಸಂಗ್ರಹಿಸಿ, ಮಾರುಕಟ್ಟೆಯಲ್ಲಿ ಸರಬರಾಜು ಪ್ರಮಾಣ ಕಡಿಮೆ ಆದಾಗ, ಸರಬರಾಜಿನ ಸಮತೋಲನ ಕಾಪಾಡಲು ಸಹಾಯಕಾರಿ.

೨.ಬೆಲೆ ಸ್ಥಿಮಿತಗೊಳಿಸುತ್ತದೆ[ಬದಲಾಯಿಸಿ]

ಸರಬರಾಜು ಜಾಸ್ತಿ ಆದರೆ ವಸ್ತುವಿನ ಬೆಲೆ ಕಡಿಮೆ ಆಗುತ್ತದೆ. ಸರಬರಾಜು ಕಡಿಮೆ ಆದರೆ ಬೆಲೆ ಹೆಚ್ಚುತ್ತದೆ. ಬೆಲೆಯಲ್ಲಿ ಸ್ಥಿರತೆ ಉಂಟಾಗಲು ಬೇಡಿಕೆ ಮತ್ತು ಸರಬರಾಜಿನ ಸಮತೋಲನ ಅಗತ್ಯ. ಇವನ್ನು ಉಗ್ರಾಣ ಸೌಲಭ್ಯ ಬಹುಮಟ್ಟಿಗೆ ಕಾಪಾಡುತ್ತದೆ.

೩.ನಷ್ಟಭಯ ಎದರಿಸುವಿಕೆ[ಬದಲಾಯಿಸಿ]

ವಸ್ತುಗಳು ಉಗ್ರಾಣದಲ್ಲಿರುವಷ್ಟು ದಿನ, ಉಗ್ರಾಣ ಪಾಲಕ ಅದರ ಜವಬ್ದಾರಿ ವಹಿಸುತ್ತಾನೆ. ವಸ್ತುವಿಗೆ ಯಾವುದೇ ರೀತಿಯ ಆಘಾತವಾದರೆ ಅದನ್ನು ಉಗ್ರಾಣ ಪಾಲಕ ಭರಿಸಬೇಕು. ಸರಕು ಮಾಲೀಕನಿಗೆ ಈ ನಷ್ಟಭಯಗಳ ಹೆದರಿಕೆ ಇರುವುದಿಲ್ಲ.

೪.ಹಣಕಾಸು ಪಡೆಯಲು ಸಹಾಯ[ಬದಲಾಯಿಸಿ]

ವಸ್ತುಗಳು ಉಗ್ರಾಣದಲ್ಲಿ ದಾಸ್ತಾನು ಮಾಡಿದಾಗ, ಸರಕು ಮಾಲೀಕನಿಗೆ, ಹಣ ಪಡೆಯಲು ಉಗ್ರಾಣ ಸಹಾಯ ಮಾಡುತ್ತದೆ. ಉಗ್ರಾಣ ಪಾಲಕನೆ, ವಸ್ತುವನ್ನು ಅಡಕವಾಗಿಟ್ಟುಕೊಂಡು ಹಣ ನೀಡುವುದುಂಟು. ಅಥವಾ ಉಗ್ರಾಣ ರಶೀತಿಯನ್ನು ಬ್ಯಾಂಕ್ ಮತ್ತಿತರ ಹಣಕಾಸು ಸಂಸ್ಥೆಗಳಲ್ಲಿ ಅಡವಿಟ್ಟು ಸಾಲ ಪಡೆಯಬಹುದು.

೫.ಸಂವೇಷ್ಟನ[ಬದಲಾಯಿಸಿ]

ಕೆಲವು ವೇಳೆ ಗೋದಾಮು ಪಾಲಕ, ವಸ್ತುಗಳನ್ನು ಮಿಶ್ರಣ ಮಾಡುವುದು, ಶ್ರೇಣಿಕರಿಸುವುದು ಮತ್ತು ಅವಶ್ಯಕತೆಗೆ ಅನುಗುಣವಾಗಿ ಮತ್ತು ಪುನರ್ ಮಾರಾಟಕ್ಕಾಗಿ ಸಣ್ಣ ಸಣ್ಣ ಘಟಕಗಳಾಗಿ ವಸ್ತುವನ್ನು ಪರಿವರ್ತಿಸುವ ಕೆಲಸವನ್ನು ಮಾಡುತ್ತಾನೆ.

೬.ಇತರ ಕಾರ್ಯಗಳು[ಬದಲಾಯಿಸಿ]

ಮೊದಲು ತಿಳಿಸಿದ ಕಾರ್ಯಗಳ ಜೊತೆಗೆ ,ಗೋದಾಮು ಪಾಲಕ, ಗ್ರಾಹಕನಿಗೆ ಸ್ಯಾಂಪಲ್ಲುಗಳನ್ನು ಕೊಡುವುದು, ವಸ್ತು ಪುನರ್ ವಿಂಗಡಣೆ ಮಾಡುವುದು, ಮಾಲೀಕನ ತಿಳುವಳಿಕೆಯಂತೆ ಗ್ರಾಹಕರಿಗೆ ಸರಕು ಬಟವಾಡೆ ಮಾಡುವುದು ಮೊದಲಾದ ಕಾರ್ಯಗಳನ್ನು ಮಾಡುತ್ತಾನೆ. ಇವೆಲ್ಲ ಉಗ್ರಾಣ ಕಾರ್ಯಗಳು.

ಉಗ್ರಾಣದ ವಿಧಾನಗಳು[ಬದಲಾಯಿಸಿ]

ಉಗ್ರಾಣಗಳನ್ನು ೧. ಮಲಿಕತ್ವಕ್ಕನುಸಾರವಾಗಿ, ೨. ಸೌಕರ್ಯಕ್ಕನುಸಾರವಾಗಿ, ವಿಂಗಡಣೆ ಮಾಡುವುದು.

ಮಾಲೀಕತ್ವಕ್ಕನುಸಾರವಾಗಿ ಮೂರು ಬಗೆಗಳಲ್ಲಿ ವಿಂಗಡಣೆ ಮಾಡಬವುದು

೧. ಖಾಸಗೀ ಉಗ್ರಾಣ

೨. ಸಾರ್ವಜನಿಕ ಉಗ್ರಾಣ

೩.ಸಹಕಾರಿ ಉಗ್ರಾಣ

ಖಾಸಗೀ ಉಗ್ರಾಣಗಳು[ಬದಲಾಯಿಸಿ]

ಬೃಹತ್ ಉತ್ಪಾದಕರು ಅಥವಾ ದೊಡ್ಡ ಸಗಟು ವ್ಯಾಪಾರಗಾರರು, ತಮ್ಮ ಸರಕನ್ನು ದಾಸ್ತಾನು ಮಾಡಲು ಉಪಯೋಗಿಸುವ ಉಗ್ರಾಣವನ್ನು 'ಖಾಸಗೀ ಉಗ್ರಾಣ' ಎನ್ನುತ್ತಾರೆ. ಇವು ಸಾಮಾನ್ಯವಾಗಿ ಸ್ವಂತ ಉಗ್ರಾಣಗಳಾಗಿರುತ್ತವೆ. ಕೆಲವು ವೇಳೆ ಬಾಡಿಗೆಗೆ ಪಡೆದ ಸುರಕ್ಷಿತ ಕಟ್ಟಡಗಳಲ್ಲೂ ದಾಸ್ತಾನು ಮಾಡುತ್ತಾರೆ. ಅವುಗಳು ಖಾಸಗಿಯಾಗಿದ್ದರಿಂದ, ಸಾರ್ವಜನಿಕವಾಗಿ ಉಪಯುಕ್ತತೆ ಕಡಿಮೆ. ಖಾಸಗಿಯಾಗಿ ಉಗ್ರಾಣಗಳನ್ನು ಕಟ್ಟುವುದು ಕಷ್ಟ. ನಿರ್ಮಾಣ ಬೆಲೆ ವಿಪರೀತ. ಆದುದರಿಂದ ಆವು ಕಡಿಮೆ ಪ್ರಮಾಣದಲ್ಲಿರುತ್ತವೆ.

ಸಾರ್ವಜನಿಕ ಉಗ್ರಾಣ[ಬದಲಾಯಿಸಿ]

ಇವು ಸಾರ್ವಜನಿಕರಿಗೆ ಸರಕು ಶೇಖರಿಸಿಡಲು ಸಹಾಯ ಮಾಡುತ್ತದೆ. ಈ ಉಗ್ರಾಣಗಳು ಸರಕಾರದಿಂದ ರಚಿತವಾಗಿದ್ದು ನಿಯಮ ಪಾಲನೆಗೊಳಪಟ್ಟು ಕಾರ್ಯಾಚರಣೆ ನಡೆಸುತ್ತವೆ. ಅನೇಕ ರೀತಿಯ ಸೇವೆಗಳನ್ನು ಇವುಗಳು ನೀಡುತ್ತವೆ. ಮತ್ತು ಸೂಕ್ತ ಬಾಡಿಗೆ ನಿರ್ಧಾರ ಮಾಡುತ್ತವೆ. ಮಾರಟ ಪ್ರಕ್ರಿಯೆಯಲ್ಲಿ ಈ ಉಗ್ರಾಣಗಳು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಲ್ಪಡುತ್ತಿವೆ. ಇವುಗಳಲ್ಲಿ ಅನೇಕ ವಿಧ,

೧. ವ್ಯಾಪಾರೀ ಸರಕುಗಳ ಉಗ್ರಾಣ

೨. ವಿಶೇಷ ವಸ್ತುಗಳಿಗೆ ಸಂಬಂಧಿಸಿದ ಉಗ್ರಾಣ

೩. ಶೈತ್ಯಾಗಾರಗಳು

೪. ಸುಂಕದಕಟ್ಟೆಯಲ್ಲಿರುವ ಉಗ್ರಾಣಗಳು ಇತ್ಯಾದಿ.

ಸಾರ್ವಜನಿಕ ಉಗ್ರಾಣಗಳು ಎಲ್ಲಾ ರೀತಿಯ ಸೇವೆಗಳನ್ನು ನೀಡುತ್ತವೆ.ಉಗ್ರಾಣ ಮಾಲೀಕ ಮತ್ತು ಸರಕು ಮಾಲೀಕರ ಸಂಬಂಧ, ಮಾಲೀಕ-ಪ್ರತಿನಿಧಿಯಂತೆ ಇರುತ್ತದೆ. ಉಗ್ರಾಣ ಮಾಲೀಕ ಷರತ್ತಿಗನುಗುಣವಾಗಿ ನಡೆದುಕೊಳ್ಳಬೇಕು. ಅದೇ ರೀತಿ ಸರಕು ಮಾಲೀಕ ಸಹ. ಉಗ್ರಾಣ ಮಾಲೀಕ ಸರಕನ್ನು ಸುರಕ್ಷಿತವಾಗಿಟ್ಟಿರಬೇಕು. ಅದಕ್ಕೆ ಅವನು ಬಾಡಿಗೆ ಪಡೆಯುತ್ತಾನೆ. ಸರಕು ಮಾಲೀಕ ಬಾಡಿಗೆ ಕೊಡದಿದ್ದಾಗ, ವಸ್ತುವನ್ನು ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶ ಹೊಂದಿರುತ್ತಾನೆ. ದಾಸ್ತಾನಿನ ಮೇಲೆ ಅವನಿಗೆ 'ಗ್ರಹಣಾಧಿಕಾರ' ಇರುತ್ತದೆ.

ಸಾರ್ವಜನಿಕ ಉಗ್ರಣಗಳ ಜವಾಬ್ದಾರಿ

ಉಗ್ರಾಣಗಳ ಪಾಲಕ, ತನ್ನ ಸ್ವಂತ ಸರಕಿನಂತೆ, ದಾಸ್ತಾನನ್ನು ಕಾಪಾಡಬೇಕು. ಅವನು ಮಿಮಗಾರನೂ ಅಲ್ಲ. ಆದುದರಿಂದ ಸರಕಿನ ಸುರಕ್ಷತೆಗೋಸ್ಕರ, ವಿಮೆ ಮಾಡ ಬೇಕು, ಉಗ್ರಾಣದಲ್ಲಿ ಸರಕು ಹಾಳಾಗಿದ್ದರೆ, ಅದು ಉಗ್ರಾಣದಲ್ಲಿಯೇ, ಉಗ್ರಾಣ ಪಾಲಕನ ಉದಾಸೀನದಿಂದ ಹಾಳಾಗಿದೆ ಎಂಬ ಅಂಶವನ್ನು ಪ್ರಮಾಣಿಕರಿಸಬೇಕು. ಆಗ ಮಾತ್ರ ಅವನು ಹಾಳಾದ ದಾಸ್ತಾನಿಗೆ ಜವಾಬ್ದಾರನಾಗುತ್ತಾನೆ.

ಸಾರ್ವಜನಿಕ ಉಗ್ರಾಣಗಳ ಸೇವೆಗಳು:[ಬದಲಾಯಿಸಿ]

ಸಾರ್ವಜನಿಕ ಉಗ್ರಾಣಗಳು ಅನೇಕ ಸೇವೆಯನ್ನು ಸಲ್ಲಿಸುತ್ತವೆ.

೧. ಸರಕಿನ ಸುರಕ್ಷತೆ ಬಗೆಗೆ ಹೆಚ್ಚು ಆಸಕ್ತಿ ವಹಿಸುತ್ತವೆ, ಉಗ್ರಾಣಕ್ಕೆ ಯಾವಾಗಲೂ ಬಿಗಿ ಕಾವಲಿರುತ್ತದೆ, ಸರಕುಗಳು ಹಾಳಾಗದಂತೆ, ಅವುಗಳಿಗೆ ಔಷಧಿಗಳನ್ನು ಸಿಂಪಡಿಸಲಾಗುತ್ತದೆ. ಬೆಂಕಿ ಕಳ್ಳತನ ಮೊದಲಾದ ನಷ್ಟಭಯ ತಪ್ಪಿಸಲು ವಿಮೆ ಮಾಡಲಾಗುತ್ತದೆ.

೨. ಅವುಗಳು ಉತ್ತಮ ಸಾರಿಗೆ ಸೌಲಭ್ಯವನ್ನು ಹೊಂದಿರುತ್ತದೆ. ರೈಲಿ ನಿಂದಾಗಲೀ, ಹಡಗುಗಳಿಂದಾಗಲೀ ಸರಕುಗಳು ಬಂದಾಗ ಉಗ್ರಾಣಕ್ಕೆ ಸೌಖ್ಯವಾಗಿ ಬಂದು ತಲುಪುವಂತೆ ಉತ್ತಮ ಸಾರಿಗೆ ಮಾಧ್ಯಮಗಳನ್ನು ಹೊಂದಿರುತ್ತದೆ. ಉಗ್ರಾಣದಿಂದ ವಸ್ತು ಹೊರಗೆ ಹೋಗುವಾಗ ಸಂವೇಷ್ಟನದ(packing) ಅವಶ್ಯಕತೆ ಇದ್ದರೆ, ಈ ಕಾರ್ಯವನ್ನು ಉಗ್ರಾಣ ಪಾಲಕರು ಕೈಗೊಳ್ಳುತ್ತಾರೆ, ಅಗತ್ಯವಾದ ತೂಕ, ಗಾತ್ರಗಳಿಗೆ ಅನುಗುಣವಾಗಿ ಸಂವೇಷ್ಟನ ಕಾರ್ಯ ನಡೆಸಿಕೊಡುತ್ತಾರೆ.

೩. ಕೊಳ್ಳುವವರಿಗೆ ಬಿಕರಿ ಪಟ್ಟಿ ತಯಾರಿಸಿ ಕೊಡುತ್ತಾರೆ, ಅದರ ನಕಲನ್ನು ಮಾರಾಟಗಾರರಿಗೆ ತಲುಪಿಸುತ್ತಾರೆ.

೫. ಸರಕು ಮಾಲೀಕನ ಆದೇಶದಂತೆ, ಸರಕುಗಳನ್ನು ಹೊರದೇಶಗಳಿಗೆ ಕಳಿಸಲು, ಉಗ್ರಾಣದಿಂದ ಹಡಗಿಗೆ ತಲುಪಿಸುವ ಕಾರ್ಯ ಕೈಗೊಳ್ಳುತ್ತಾರೆ. ಇತ್ಯಾದಿ.

ಪ್ರತಿ ಬಂಧಿತ ಉಗ್ರಾಣಗಳು ( bonded ware houses)[ಬದಲಾಯಿಸಿ]

ಪ್ರತಿ ಬಂಧಿತ ಉಗ್ರಾಣಗಳು ಎಂದರೆ ಕೆಲವು ನಿಬಂಧನೆಗೆ ಒಳಪಟ್ಟು ಕಾರ್ಯ ನಡೆಸುವ ಉಗ್ರಾಣಗಳು. ಸಾಮಾನ್ಯವಾಗಿ ಈ ಉಗ್ರಾಣಗಳು ಹಡಗು ಕಟ್ಟೆಯ ಸಮೀಪದಲ್ಲಿರುತ್ತವೆ ಮತ್ತು ಹಡಗು ಕಟ್ಟೆಯವರು ಇದನ್ನು ನಡೆಸುತ್ತಾರೆ. ಸಂಕವನ್ನು ಕೊಡುವುದಕ್ಕೆ ಮೊದಲು, ಹೊರದೇಶದಿಂದ ಬಂದ ಸರಕನ್ನು, ಅನುಮತಿ ಹೊಂದಿದ ಉಗ್ರಾಣಗಳಲ್ಲಿ ದಾಸ್ತಾನು ಮಾಡಲು, ಆಯಾತಗಾರನಿಗೆ ಅನುಕೂಲವಿರುತ್ತದೆ. ಈ ಉಗ್ರಾಣಗಳಲ್ಲಿ ತನ್ನ ಸರಕನ್ನು ದಾಸ್ತಾನು ಮಾಡುವುದರಿಂದ ಅವನು ಕೆಲವು ಹತೋಟಿಗಳನ್ನು ಪಡೆಯುತ್ತಾನೆ. ಸರಕಿನ ಮೇಲೆ ತಕ್ಷಣ ಸುಂಕ ಕೊಡಬೇಕಾಗುವ ಭಯವಿಲ್ಲ. ವಸ್ತುಗಳು ಮಾರಾಟವಾದಂತೆ, ಅಷ್ಟಷ್ಟನ್ನೇ ಉಗ್ರಾಣದಿಂದ ಸುಂಕ ಕೊಟ್ಟು ಹೊರತೆಗೆಯಲು ಅವಕಾಶವಿರುತ್ತದೆ. ಅದೇರೀತಿ ಸರಕು ಹೊರದೇಶಕ್ಕೆ ಹೋಗಬೇಕಾದಾಗಲು ಸಹ ಈ ಉಗ್ರಾಣಗಳಲ್ಲಿ ದಾಸ್ತಾನು ಮಾಡಲು ಅವಕಾಶ ನೀಡಲಾಗುತ್ತದೆ. ಹೊರದೇಶದಿಂದ ಬಂದು ವಸ್ತುವಿಗೆ ಸಂಸ್ಕರಣ ಕಾರ್ಯ ನಡೆಸಬೇಕಾಗಿದ್ದರೆ, ಅಂದರೆ ಅದು ಪುನರ್ ಸಂವೇಷ್ಟನಕ್ಕೆ ಒಳಗಾಗಬೇಕಿದ್ದರೆ, ಅದನ್ನು ಮಾಡಲು ಅವಕಾಶವಿರುತ್ತದೆ, ಪುನರ್ ನಿರ್ಯಾತವಾಗಬೇಕಿದ್ದರೆ ಅದಕ್ಕೂ ಅವಕಾಶವಿರುತ್ತದೆ. ಉದಾಹರಣೆ, ಟೀ ಅಥವಾ ಬೃಹತ್ ಪ್ರಯಾಣದಲ್ಲಿ ಬಂದ ಯಾವುದೇ ದ್ರವ ವಸ್ತುವನ್ನು ಸಣ್ಣ ಸಣ್ಣ ಬಾಟಲುಗಳಲ್ಲಿ ಹಾಕಿ ಮಾರಾಟ ಯೋಗ್ಯವಾಗಿ ಮಾಡುವುದು, ಸ್ಥಳಿಯವಾಗಿ ತಯಾರಾದ ಅನೇಕ ಗ್ರಾಹಕ ವಸ್ತುಗಳನ್ನು (ಸುಂಕ ಕೊಡಬೇಕಾದಂತ ವಸ್ತುಗಳು ಅಂದರೆ ಬೆಂಕಿಪಟ್ಟಣ, ಸಿಗರೇಟು, ಔಷಧಿಗಳು ಇತ್ಯಾದಿ) ಈ ಉಗ್ರಾಣಗಳಲ್ಲಿ ದಾಸ್ತಾನು ಮಾಡಬವುದು. ಈ ವಸ್ತುಗಳನ್ನು ಉಗ್ರಾಣದಿಂದ ಹೊರತೆಗೆಯುವವರೆಗೆ ಸುಂಕ ಕೊಡುವ ಅವಶ್ಯಕತೆ ಇರುವುದಿಲ್ಲ. ಅದರೆ ಉಗ್ರಾಣ ಪಾಲಕ ಒಂದು ಷರತ್ತು ಪತ್ರ ಕೊಡಬೇಕು ಅಂದರೆ ಸುಂಕದ ಹೊರತು, ಸರಕನ್ನು ಹೊರಗೆ ತೆಗೆಯಲು ಅವಕಾಶ ಕೊಡುವುದಿಲ್ಲವೆಂದು, ಉಗ್ರಾಣ ಪಾಲಕ ಈ ಪತ್ರವನ್ನು ಸುಂಕದ ಅಧಿಕಾರಿಗಳಿಗೆ ಕೊಡಬೇಕು. ಈ ಉಗ್ರಾಣಗಳು ಸುಂಕದ ಅಧಿಕಾರಿಗಳ ಪೂರ್ಣ ಮೇಲ್ವಿಚಾರಣೆಯಲ್ಲಿರುತ್ತದೆ, ದಾಸ್ತಾನುಗಾರ, ಸರಕಿನ ಬಗೆಗೆ ಯಾವುದೇ ವ್ಯವಹಾರ ನಡೆಸಬೇಕಾದರೆ, ಸುಂಕದ ಅಧಿಕಾರಿಗಳ ಪೂರ್ವಾನುಮತಿ ಪಡೆಯಬೇಕು. ಈ ಉಗ್ರಾಣಗಳು, ಹಡಗು ಕಟ್ಟಿದವರದ್ದಾಗಿರಬವುದು ಅಥವಾ ಸರ್ಕಾರರದ್ದಾಗಿರಬವುದು ಅಥವಾ ಖಾಸಗೀಯವರೂ ಇದನ್ನು ನಡೆಸಬಹುದು. ಅದರೆ ಅವರು ಸರ್ಕಾರದ ಅನುಮತಿ ಪಡೆಯಬೇಕು.

ಪ್ರತಿಬಂಧಿತ ಉಗ್ರಾಣಗಳ ಸೇವೆಗಳು:[ಬದಲಾಯಿಸಿ]

೧. ಆಯಾತಗಾರ ಒಂದೇ ಸಾರಿಗೆ, ಬಂದ ಸರಕಿನ ಮೇಲೆ ಸುಂಕ ಕೊಡುವ ಜವಾಬ್ದಾರಿ ಇರುವುದಿಲ್ಲ, ಸರಕಾರವನ್ನು ಹೊರತೆಗೆಯುವಾಗ, ತೆಗೆದಷ್ಟು ಸರಕಿನ ಸುಂಕ ಕೊಡಬಹುದು.

೨. ಸರಕನ್ನು ಶ್ರೇಣಿಕರಿಸಲು ಮತ್ತು ಸಂವೇಷ್ಟನಗೊಳಿಸಲು ಅವಕಾಶವಿರುತ್ತದೆ, ವಸ್ತುಗಳು ಪುನರ್ ನಿರ್ಯಾತವಾಗಬೇಕಾದಾಗ ಈ ಕಾರ್ಯ ನಡೆಯಲು, ಉಗ್ರಾಣ ಸಹಾಯ ಮಾಡುತ್ತದೆ.

೩. ಈ ಶ್ರೇಣೀಕರ ಸೌಕರ್ಯಗಳಿಂದ, ಆಯಾತಗಾರನಿಗೆ ತನ್ನ ಸರಕಿಗೆ ಹೆಚ್ಚು ಬೆಲೆ ಪಡೆಯಲು ಸಹಾಯವಾಗುತ್ತದೆ.

೪. ದ್ರವ ವಸ್ತುಗಳಿಗೆ ಸಂಬಂಧಿಸಿದಂತೆ, ಬೇಕಾದ ಅಳತೆಗೆ ಬಾಟಲೀಕರಿಸುವುದು,ಮಿಶ್ರಣ ಕಾರ್ಯ,(valting) ಮುಂತಾದ ಸಂಸ್ಕರಣ ಕಾರ್ಯ ನಡೆಸಲು ಸಹಾಯಕಾರಿಯಾಗಿದೆ.

೫. ಆಯಾತಗಾರ, ಕೊಳ್ಳುವವರನ್ನು ಉಗ್ರಾಣಕ್ಕೆ ಕರೆದುಕೊಂಡು ಹೋಗಿ ವಸ್ತುಗಳನ್ನು ತೋರಿಸಿ ಮಾರಾಟಕ್ಕೆ ಸಹಾಯವಾಗಲು ನೆರವು ನೀಡುತ್ತದೆ.

೬. ಪ್ರತಿಬಂಧಿತ ಉಗ್ರಾಣದ ರಶೀತಿಗಳು, ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಉತ್ತಮ ಆಧಾರಗಳಾಗಿರುತ್ತವೆ.

ಸಹಕಾರಿ ಉಗ್ರಾಣಗಳು:[ಬದಲಾಯಿಸಿ]

ಇವು ಸಹಕಾರ ತತ್ತ್ವದ ಆಧಾರದಲ್ಲಿ ರೂಪುಗೊಂಡ ಉಗ್ರಾಣಗಳು, ಮೊದಲಿಗೆ ಕೃಷಿ ಉತ್ಪನ್ನಗಳನ್ನು ಕೃಷಿಕರು ತಮ್ಮಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲದೆ, ಕಡಿಮೆ ಬೆಲೆಗೆ ಮಾರುವ ಸಂದರ್ಭವಿರುತ್ತಿತ್ತು, ಈ ತೊಂದರೆಯನ್ನು ನಿವಾರಿಸಲು, ಕೆಲವು ಸಹಕಾರಿ ಸಂಸ್ಥೆಗಳು ಒಟ್ಟುಗೂಡಿ ತಮ್ಮ ಸದಸ್ಯರಿಗೋಸ್ಕರ ಉಗ್ರಾಣಗಳನ್ನು ರೂಪಿಸಿದವು, ಇವೇ ಸಹಕಾರಿ ಉಗ್ರಾಣಗಳು. ಇವುಗಳಿಗೆ ಸರ್ಕಾರದ ನೆರವು ದೊರೆಯುತ್ತದೆ, ಆದರೂ ಇವುಗಳು ಅಷ್ಟಾಗಿ ಪ್ರಬುದ್ಧಮಾನಕ್ಕೆ ಬರಲಿಲ್ಲ.

ಇತರ ವಿಂಗಡಣೆಗಳು:[ಬದಲಾಯಿಸಿ]

೧. ವಿಶೇಷ ವಸ್ತು ಉಗ್ರಾಣ[ಬದಲಾಯಿಸಿ]

ಪೆಟ್ರೋಲಿಯಂ ಉತ್ಪನ್ನಗಳು, ರಾಸಾಯನಿಕ ವಸ್ತುಗಳನ್ನು, ವನಸ್ಪತಿ ಎಣ್ಣೆ, ಆಹಾರ ಪದಾರ್ಥಗಳು, ತಂಬಾಕು, ಹತ್ತಿ, ಉಣ್ಣೆ, ಸೆಣಬು, ಮೀನು ಮುಂತಾದ ವಿಶಿಷ್ಟ ವಸ್ತುಗಳನ್ನು ದಾಸ್ತಾನು ಮಾಡಲು, ಅವುಗಳಿಗೆ ಪ್ರತ್ಯೇಕ ವಿನ್ಯಾಸ ಹೊಂದಿದ ಉಗ್ರಾಣಗಳಿವು. ಈ ವಸ್ತುಗಳು ತಮ್ಮದೇ ಆದ ಗುಣಗಳನ್ನು ಹೊಂದಿದ್ದು, ಸಾಮಾನ್ಯ ಉಗ್ರಾಣಗಳಲ್ಲಿ ದಾಸ್ತಾನು ಮಾಡಿದಾಗ ತಮ್ಮ ತನವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಆದುದರಿಂದ ಪ್ರತ್ಯೇಕ ಉಗ್ರಾಣಗಳ ಅವಶ್ಯಕತೆ ಇದೆ. ಆಹಾರ ಪದಾರ್ಥಗಳನ್ನು ಅಂದರೆ ಗೋಧಿ ಇತ್ಯಾದಿಯನ್ನು ದಾಸ್ತಾನಿಸಲು "ಸೈಲೊ" ಎಂಬ ಉಗ್ರಾಣ ರಚಿಸಿದ್ದಾರೆ. ಅದೇರೀತಿ ದ್ರವರೂಪ ವಸ್ತುಗಳನ್ನು ದಾಸ್ತಾನಿಸಲು ಟ್ಯಾಂಕರ್ ರೂಪದ ಅಥವಾ ಭೂಮಿಯೊಳಗೆ ತೊಟ್ಟಿಗಳನ್ನು ನಿರ್ಮಿಸುತ್ತಾರೆ. ಈ ರೀತಿಯಾಗಿ ವಿವಿಧ ಉತ್ಪನ್ನಗಳು ಹಾಳಾಗದ ರೀತಿಯಲ್ಲಿ ವಿಶೇಷ ಉಗ್ರಾಣಗಳನ್ನು ನಿರ್ಮಿಸುತ್ತಾರೆ.

೨. ಶ್ಯೆತ್ಯಾಗಾರಗಳು(cold storage)[ಬದಲಾಯಿಸಿ]

ಈ ಉಗ್ರಾಣಗಳು ಮೊಟ್ಟೆ,ಮಾಂಸ, ಹಣ್ಣು, ತರಕಾರಿ ಮತ್ತಿತರ ಬೇಗ ಹಾಳಾಗುವ ವಸ್ತುಗಳನ್ನು ಸಂರಕ್ಷಿಸಲು ಸಹಕಾರಿಗಳಾಗಿವೆ. ಈ ವಸ್ತುಗಳನ್ನು ಸಾಮಾನ್ಯ ಉಗ್ರಾಣಗಳಲ್ಲಿಡಲು ಸಾಧ್ಯವಿಲ್ಲ. ಈ ವಸ್ತುಗಳ ಉತ್ಪಾದಕರಿಗೆ ಉತ್ತಮ ಬೆಲೆ ಸಿಗಲು ಇವು ಸಹಾಯಕವಾಗಿವೆ. ಶೈತ್ಯಾಗಾರಗಳು ಹೆಚ್ಚುದಿನ ಈ ವಸ್ತುಗಳನ್ನು ದಾಸ್ತಾನು ಮಾಡಲು ಸಹಾಯಕವಾಗಿರುವುದರಿಂದ ಉತ್ತಮ ಬೆಲೆಗಾಗಿ, ಉತ್ಪಾದಕರು ಕಾಯಬಹುದು ಶೈತ್ಯಾಗಾರಗಳು ಬೇಗ ಹಾಳಾಗುವ ವಸ್ತುಗಳಿಗೆ ಎರಡನೇ ಜೀವವನ್ನು ಕೊಡುತ್ತವೆ. ಈ ತಂತ್ರಜ್ಞಾನದ ಅಭಿವೃದ್ಧಿಯಿಂದ ವಸ್ತುಗಳಿಗೆ "ಕಾಲ ತುಷ್ಟಿಗುಣ" ( time utility) ದೊರೆತಿದೆ. ಕೃಷಿ ಉತ್ಪನ್ನಗಳಿಗೆ ಇದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆ ಪ್ರವೇಶದಲ್ಲಿ ಅನುಕೂಲವಾಗಿದೆ. ಈ ದಿನಗಳಲ್ಲಿ ಪ್ರತಿಯೊಂದು ಮಾರುಕಟ್ಟೆ ಪ್ರದೇಶದಲ್ಲಿ ಶೈತ್ಯಾಗಾರಗಳು ಕಾರ್ಯಾಚರಣೆಯಲ್ಲಿವೆ.

೩. ಸಾಮಾನ್ಯ ಸರಕುಗಳಿಗೆ ಉಗ್ರಾಣಗಳು[ಬದಲಾಯಿಸಿ]

ವಿಶೇಷ ವ್ಯವಸ್ಥೆ ಬೇಡದಿರುವ ವಸ್ತುಗಳಿಗೆ ಈ ಉಗ್ರಾಣಗಳ ಸಹಾಯವಿದೆ, ಕಚ್ಚಾವಸ್ತುಗಳು ಸಿದ್ದಪಡಿಸಿದ ವಸ್ತುಗಳು ಮುಂತಾದವುಗಳನ್ನು ಈ ಉಗ್ರಾಣಗಳಲ್ಲಿ ಶೇಖರಿಸಲಾಗುತ್ತದೆ. ಸಗಟು ವ್ಯಾಪಾರಗಾರರು, ಚಿಲ್ಲರೆ ವ್ಯಾಪಾರಗಾರರು ಈ ಉಗ್ರಾಣಗಳನ್ನು ಬಳಸುತ್ತಾರೆ. ಉಗ್ರಾಣ ಪಾಲಕರು ಸಾಮಾನ್ಯವಾಗಿ ನಡೆಸುವ ಕೆಲಸಗಳೆಂದರೆ, ವಸ್ತುಗಳ ಶುದ್ಧೀಕರಣ, ಸಂವೇಷ್ಟನ, ಸರಕು ಮಾಲೀಕರ ಆದೇಶದಂತೆ ವಸ್ತುಗಳ ರವಾನೆ ಅಥವಾ ಬಟವಾಡೆ, ಹಾಳಾಗಿರುವ ಸಂವೇಷ್ಟನಗಳನ್ನು ಸರಿಪಡಿಸುವುದು, ಮಾರಾಟಗಾರರ ಪರವಾಗಿ ಕೊಳ್ಳುವವರಿಗೆ ಬಿಕರಿಪಟ್ಟಿ ತಯಾರು ಮಾಡಿಕೊಡುವುದು, ಮಾರಾಟಗಾರರ ಪರವಾಗಿ ಬಾಕಿ ವಸೂಲಿ ಮುಂತಾದವುಗಳು.

ಕ್ಷೇತ್ರ ಉಗ್ರಾಣಗಳು ( field warehouse)[ಬದಲಾಯಿಸಿ]

ಉದ್ಯಮಿಗಳು, ಸಗಟು ವ್ಯಾಪಾರಗಾರರು, ಚಿಲ್ಲರೆ ವ್ಯಾಪಾರಗಾರರು. ಮುಖ್ಯವಾಗಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಈ ಉಗ್ರಾಣಗಳನ್ನು ಉಪಯೋಗಿಸುತ್ತಾರೆ. ಇವರುಗಳು ತಮ್ಮ ವಸ್ತುಗಳನ್ನು ಒಂದು ಕೊಠಡಿಯಲ್ಲಿ ಅಥವಾ ದೊಡ್ಡ ತೊಟ್ಟಿಯಲ್ಲಿ ಶೇಖರಿಸಿಡುತ್ತಾರೆ. ಆ ಕೊಠಡಿಯ ಬೀಗದ ಕೈಯನ್ನು ಸಾರ್ವಜನಿಕ ಉಗ್ರಾಣ ಪಾಲಕರಿಗೆ ಕೊಡುತ್ತಾರೆ. ಹಾಗೆ ಮಾಡುವಾಗ ವಸ್ತುವಿನ ಮಾಲೀಕತ್ವವನ್ನು ವರ್ಗವಣೆ ಮಾಡುವುದಿಲ್ಲ, ಜಾಗ ಸಹ ತಮ್ಮದೇ ಆಗಿರುತ್ತದೆ. ಅದಕ್ಕೆ ಬಾಡಿಗೆ ಕೊಡಬೇಕಾಗಿರುವುದಿಲ್ಲ. ಉಗ್ರಾಣ ಪಾಲಕ ಅದಕ್ಕೆ'ಉಗ್ರಾಣ ರಶೀತಿ' ಕೊಡುತ್ತಾನೆ. ಈ ರಶೀತಿಯನ್ನು ಹಣಕಾಸು ಸಂಸ್ಥೆಯಲ್ಲಿ ಅಡವಿಟ್ಟು ಹಣ ಸಾಲವಾಗಿ ಪಡೆಯಬಹುದು. ಉಗ್ರಾಣ ಪಾಲಕ ರಶೀತಿ ಕೊಡಲು ಕಮೀಷನ್ ಪಡೆಯುತ್ತಾನೆ. ಸರಕುಗಳು ತಮ್ಮ ಹತೋಟಿಯಲ್ಲಿರುತ್ತದೆ. ಆದರೆ ಅದರ ಮೇಲೆ ಸಾಲ ದೊರೆಯುತ್ತದೆ, ಇದು ಈ ಉಗ್ರಾಣದ ಪ್ರಮುಖ ಲಕ್ಷಣ.

ಉಗ್ರಾಣದ ಅನುಕೂಲಗಳು:[ಬದಲಾಯಿಸಿ]

೧. ತಮ್ಮದೇ ಅದ ಉಗ್ರಾಣವನ್ನು ಹೊಂದಿರದ ಅಥವಾ ಸ್ವಲ್ಪ ಸ್ಥಳವನ್ನು ಹೊಂದಿರುವ ಉತ್ಪಾದಕರು ಮತ್ತು ವ್ಯಾಪಾರಗಾರರಿಗೆ ಉಗ್ರಾಣಗಳು ವಸ್ತು ಶೇಖರಣೆಗೆ ಅವಕಾಶಮಾಡಿಕೊಡುತ್ತವೆ.

೨. ಉಗ್ರಾಣದ ಕೊರತೆಯಿಂದಾಗಿ ವ್ಯಾಪಾರಗಾರರು ತಮ್ಮ ವ್ಯಾಪಾರವನ್ನು ಕಡಿಮೆ ಮಾಡಬೇಕಾಗಿಲ್ಲ, ತಯಾರಕರೂ ಸಹ ಉತ್ಪನ್ನ ಕುಂಠಿತಗೊಳಿಸಬೇಕಾಗಿಲ್ಲ, ಉಗ್ರಾಣಗಳು ಇದನ್ನು ನಿವಾರಿಸುತ್ತವೆ.

೩. ಗ್ರಾಹಕರಿಗೆ ತ್ವರಿತಗತಿಯಲ್ಲಿ ಸೇವೆ ಸಲ್ಲಿಸಲು ಸಹಕಾರಿ.

೪. ಆಯಾತಕರು, ಹೊರದೇಶದಿಂದ ಸರಕನ್ನು ತರಿಸಿದಾಗ, ಪ್ರತಿಬಂಧಿತ ಉಗ್ರಾಣಗಳು ವಸ್ತುಗಳನ್ನು ಇಡುವುದರಿಂದ ಒಂದೇ ಬಾರಿಗೆ ಸಂಕವನ್ನು ಕೊಡುವ ಕಷ್ಟವಿರುವುದಿಲ್ಲ.

೫. ಉಗ್ರಾಣ ಪ್ರಮಾಣಪತ್ರ,( ware house warrent) ಮಾಲೀಕತ್ವದ ಹಕ್ಕು ಮತ್ತು ಆಸಕ್ತಿಯನ್ನು ಪಡೆದಿರುವುದರಿಂದ, ವಸ್ತುವನ್ನು ಭೌತಿಕವಾಗಿ ಬದಲಾಯಿಸದೇ ಎಷ್ಟು ಬಾರಿಯಾದರು ಪತ್ರದ ಹಸ್ತಾಂತರದ ಮೂಲಕ, ಮಾಲೀಕತ್ವವನ್ನು ಬದಲಾಯಿಸಬಹುದು.

೬. ಅನೇಕ ಮಾರಾಟ ಕೇಂದ್ರಗಳಲ್ಲಿ, ಉಗ್ರಾಣಗಳಲ್ಲಿ ತಮ್ಮ ವಸ್ತುಗಳನ್ನು ಶೇಖರಿಸಿಟ್ಟು ಉತ್ತಮ ಬೆಲೆಗಾಗಿ ವ್ಯಾಪಾರಗಾರರು ಕಾಯಬಹುದು.

೭. ಸರ್ಕಾರಿ ಉಗ್ರಾಣಗಳ ಇರುವಿಕೆಯಿಂದ ತಯಾರಕರು ಮತ್ತು ವ್ಯಾಪಾರಗಾರರು, ಉಗ್ರಾಣಗಳ ಕಟ್ಟಡ ರಚಿಸುವ ವೆಚ್ಚದಲ್ಲಿ ಉಳಿತಾಯ ಹೊಂದುತ್ತಾರೆ.

೮. ಉಗ್ರಾಣ ಪ್ರಮಾಣ ಪತ್ರಗಳು, ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆಯುವ ಆಧಾರಗಳಾಗಿ ಕೆಲಸ ಮಾಡುತ್ತವೆ.

೯. ಬೆಂಕಿ, ಕಳ್ಳತನ, ವಸ್ತು ಹಾಳಾಗುವಿಕೆ ಮೊದಲಾದ ನಷ್ಟಭಯಗಳನ್ನು ಉಗ್ರಾಣಗಳು ತಪ್ಪಿಸುತ್ತವೆ.ಯಾಕೆಂದರೆ ಉಗ್ರಾಣದ್ದಲ್ಲಿರುವ ಸರಕುಗಳು ವಿಮೆ ಹೊಂದಿರುತ್ತವೆ

೧೦. ಶೇಣೀಕರಣ, ಸಂವೇಷ್ಟನ ಮೊದಲಾದ ಕಾರ್ಯಗಳು ಉಗ್ರಾಣಗಳಲ್ಲಿ ಅನುಕೂಲವಾಗುತ್ತದೆ.

ಇವುಗಳನ್ನು ನೋಡಿ[ಬದಲಾಯಿಸಿ]

ಉಲೇಖನ[ಬದಲಾಯಿಸಿ]