ವಿಷಯಕ್ಕೆ ಹೋಗು

ತಾಂಬೂಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಲೆ ಅಡಕೆಗೆ ತಾಂಬೂಲ ಎಂದು ಹೆಸರಿದೆ. ಬಳಸುವಾಗ ಸುಣ್ಣವೂ ಬೇಕಾಗುತ್ತದೆ. ಜೀರ್ಣಶಕ್ತಿಯನ್ನು ಹೆಚ್ಚಿಸುವ ಆಮ್ಲತೆಯನ್ನು ಕಡಿಮೆ ಮಾಡುವ ಕಟುಮಧರ ಪುಷ್ಟಿಕತ ವಸ್ತುವಿದೆ. ಇದರಿಂದ ಬಾಯಿಗೆ ಕೆಂಪು, ಸುವಾಸನೆ ಉಂಟಾಗುತ್ತದೆ. ಮನಸ್ಸಿಗೆ ಉತ್ಸಾಹ ಬರುತ್ತದೆ. ಶರೀರದ ಶಾಖ ಹೆಚ್ಚುತ್ತದೆ. ತಾಂಬೂಲದ ಪ್ರಧಾನ ಅಂಗಗಳಾದ ವೀಳಯದೆಲೆ, ಅಡಕೆ ಮತು ಸುಣ್ಣಗಳಿಂದ ಭಿನ್ನ ಭಿನ್ನ ಪ್ರಯೋಜನಗಳುಂಟು. ಎಲೆಯಿಂದ ಶಾಖ ಹೆಚ್ಚುತ್ತದೆ. ಸುಣ್ಣ ತೇವವನ್ನು ಆರಿಸುತ್ತದೆ. ಅಡಕೆಯಿಂದ ಹಲ್ಲು ವಸಡು ಮತ್ತು ಜಠರಗಳು ಗಟ್ಟಿಯಾಗುತ್ತವೆ. ತಾಂಬೂಲಕ್ಕೆ ಪಚ್ಚಕರ್ಪೂರ, ಏಲಕ್ಕಿ, ಲವಂಗ. ಜಾಕಾಯಿ, ಜಾಪತ್ರೆ, ಕಾಚು ಮುಂತಾದ ಇನ್ನೂ ಅನೇಕ ಮಸಾಲೆ ದ್ರವ್ಯಗಳನ್ನೂ ಬಳಸುತ್ತಾರೆ. ಡಚ್ ಭಾಷೆಯಲ್ಲಿ ಇದಕ್ಕೆ ತಾಂಬೂಲ ಎಂದು ಹೆಸರು. ಊಟವಾದ ಮೇಲೆ ಮಿತವಾಗಿ ತಾಂಬೂಲ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದಾಗುವುದಾದರೂ ಅತಿಯಾದ ಸೇವನೆಯಿಂದ ನಾಲಗೆಯ ರುಚಿ ಕೆಡುವ ಅಪಾಯವೂ ಉಂಟು.

ಇದು ಪ್ರಾಚೀನ ಭಾರತದ ಉತ್ತಮ ಪ್ರಸಾಧನ ಸಾಮಗ್ರಿಗಳಲ್ಲೊಂದಾಗಿದೆ. ಇದನ್ನು ಪೂಜಾ ಮತ್ತು ಶೃಂಗಾರ ಸಾಧನವನ್ನಾಗಿ ಉಪಯೋಗಿಸುವ ರೂಢಿ ಇಂದಿಗೂ ಇದೆ. ಮಂಗಳ ದ್ರವ್ಯಗಳಲ್ಲಿ ಇದೂ ಒಂದು. ಆರ್ಯರು ಈ ದೇಶಕ್ಕೆ ಬರುವ ಮೊದಲು ಇದರ ಉಪಯೋಗವನ್ನು ತಿಳಿದಿರಲಿಲ್ಲ. ಇಲ್ಲಿಗೆ ಬಂದ ಮೇಲೆ ನಾಗ ಜಾತಿಯಿಂದ ಇದರ ಪ್ರಯೋಗವನ್ನು ತಿಳಿದರು. ಇದರಲ್ಲಿ ಬಳಸುವ ಎಲೆ ಬಳ್ಳಿಗೆ ನಾಗವಲ್ಲಿಯೆಂದೇ ಹೆಸರು. ಈ ನಾಗವಲ್ಲಿ ಉದಯನನಿಗೆ ವಾಸುಕಿ ನಾಗನಿಂದ ಬಳುವಳಿಯಾಗಿ ಬಂದಿತೆಂದು ಪ್ರತೀತಿ. ಪಾಂಡವರ ಅಶ್ವಮೇಧಯಾಗಕ್ಕಾಗಿ ನಾಗಜಾತಿಯವರಿಂದ ಇದನ್ನು ತರಿಸಲಾಯಿತೆಂದು ಪ್ರತೀತಿ ಇದೆ.

ಇದು ಮಲಯದಿಂದ ಬಂದದ್ದೆಂದು ಹೇಳಲಾಗುತ್ತದೆ. ಸುಮಾರು ಕ್ರಿ.ಪೂ. 600ರ ಹೊತ್ತಿಗೆ ಕಾಶಿಯಲ್ಲಿ ರಚಿತವಾದ ಸುಕೃತ ಸಂಹಿತೆ ಎಂಬ ಆಯುರ್ವೇದ ಗ್ರಂಥದಲ್ಲಿ ಇದರ ವಿಚಾರ ಮೊದಲಿಗೆ ಪ್ರಸ್ತಾವಿತವಾಗಿದೆಯೆಂದು ತಿಳಿದು ಬರುತ್ತದೆ. ಚರಕ ಸುಶ್ರುತರ ಗ್ರಂಥಗಳಿಂದ ಕೂಡ ಕ್ರಿ.ಪೂ. ದಲ್ಲೇ ಇದರ ಪ್ರಯೋಗವಿತ್ತೆಂದು ತಿಳಿಯುತ್ತದೆ.

ವರಾಹಮಿಹಿರ ಕೂಡ ಇದರ ಗುಣಗಳನ್ನು ಬಹುವಾಗಿ ಹೊಗಳುತ್ತಾನೆ. ಇದರ ಸೇವನೆಯಿಂದ ಮುಖಕ್ಕೆ ಕಾಂತಿ, ಸುಗಂಧ, ವಾಣಿಗೆ ಮಾಧುರ್ಯ ಉಂಟಾಗುತ್ತದೆ.

ಇದು ಮಧುರವೂ, ಕ್ಷಾರಪೂರ್ಣವೂ, ಕಷಾಯಗುಣಯುತವೂ, ವಾತಾಪರಿಹಾರಿಯೂ, ಕ್ರಿಮಿನಾಶಕವೂ, ಕಫಹರವೂ, ದುರ್ಗಂಧನಾಶಕವೂ ಆಗಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು.

ಎಲೆ, ಅಡಕೆ, ಸುಣ್ಣ ಇತ್ಯಾದಿಗಳನ್ನು ಕೂಡಿಸಿ ಬೀಡ ಕಟ್ಟುವುದಂತೂ ಒಂದು ಕಲೆಯಾಗಿ ಉಳಿದುಬಂದಿದೆ. ಒಂದು ಕಾಲದಲ್ಲಿ ತಾಂಬೂಲರಸ ಉಗಿಯುವುದರಲ್ಲೂ ಚಿತ್ರಕಲಾ ಕೌಶಲವನ್ನು ಪ್ರದರ್ಶಿಸುತ್ತಿದ್ದುದೂ ಉಂಟೆಂದು ದಶಕುಮಾರ ಚರಿತ್ರೆಯಿಂದ ತಿಳಿದುಬರುತ್ತದೆ. ರಾಜಾಸ್ಥಾನಗಳಲ್ಲಿ ಶ್ರೀಮಂತರ ಮನೆಗಳಲ್ಲಿ ತಾಂಬೂಲಕರಂಕವಾಹಿನಿಯರು ಇರುತ್ತಿದ್ದರು. ಇವರನ್ನು ಕುಮಾರವ್ಯಾಸ ಹಡಪದಬಲೆಯರು ಎಂದಿದ್ದಾನೆ. ಮನೆಯ ಯಜಮಾನ ಯಜಮಾನಿಯರಿಗೆ ಎಲೆಯಡಿಕೆ ಒದಗಿಸುವುದು ಇವರ ಕೆಲಸವಾಗಿತ್ತು. ತಾಂಬೂಲವನ್ನು ಉಗಿಯುವ ಪೀಕದಾನಿ ಎಂಬ ವಿಶೇಷ ರೀತಿಯ ಪಾತ್ರೆ ಇಂದಿಗೂ ಚಾಲ್ತಿಯಲ್ಲಿದೆ.

ಈಗ ತಾಂಬೂಲಕ್ಕೆ ಬಳಸುವ ಅಡಕೆಯಲ್ಲಿ ಎರಡು ಬಗೆಗಳುಂಟು. ಬೇಯಿಸಿ ಬಣ್ಣ ಕಟ್ಟಿದ್ದು ಒಂದು. ಹಸಿಯದು ಇನ್ನೊಂದು. ಅಡಕೆಯನ್ನು ಹಾಲು ಸಕ್ಕರೆಯಲ್ಲಿ ಬೇಯಿಸಿ ಬೆಳ್ಳಿಯ ರೇಕು ಕಟ್ಟಿ ಬಳಸುವವರೂ ಇದ್ದಾರೆ. ಎಲೆಯ ಖಾಯಿಷಿನಲ್ಲೂ ವೈವಿಧ್ಯವಿದೆ. ಶಿವಮೊಗ್ಗ ತರೀಕೆರೆಯಾದಿಯಾದ ಮಲೆನಾಡಿನಲ್ಲಿ ಕರಿಯ ಎಳೆ ಎಲೆ ಜನಪ್ರಿಯವಾಗಿದೆ. ಮದ್ರಾಸಿನ ಕಡೆ ಬಿಳಿಯ ಅಂಬಾಡಿ ಎಲೆ ಬಳಕೆಯಲ್ಲಿದೆ. ಉತ್ತರ ಭಾರತದವರು ಬಲಿತ ಹಣ್ಣೆಲೆ ಉಪಯೋಗಿಸುತ್ತಾರೆ. ಬಿಳಿಯ ಬಣ್ಣಕ್ಕೂ ಮೃದುತ್ವಕ್ಕೂ ಹೆಸರಾದ್ದು ಮೈಸೂರು ಎಲೆ.

ತಂಬಾಕು ಪ್ರಿಯರಿಗೆ ಒಗಚಾದ ಬೆಟ್ಟಡಕೆ ಹಾಗೂ ಬಲಿತ ಕಾರವಾದ ಎಲೆ ಹೊಸಸುಣ್ಣ ಆಗಬೇಕು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

  • Nutritional composition of paan
  • Humans, Iarc Working Group on the Evaluation of Carcinogenic Risks to; Cancer, International Agency for Research on (2004). Betel-quid and Areca-nut Chewing and Some Areca-nut-derived Nitrosamines. Vol. 85. p. 2004. ISBN 978-92-832-1285-0. {{cite book}}: |journal= ignored (help)
  • Traditional values of Betel Leaf in Indian
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ತಾಂಬೂಲ&oldid=964344" ಇಂದ ಪಡೆಯಲ್ಪಟ್ಟಿದೆ