ವಿಷಯಕ್ಕೆ ಹೋಗು

ಡೈಥಯಾನಿಕ್ ಆಮ್ಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡೈಥಯಾನಿಕ್ ಆಮ್ಲದ ರಚನಾ ಸೂತ್ರ

SO2.OH ಗುಚ್ಛಕ್ಕೆ ಸಲ್ಫಾನಿಕ್ ಗುಚ್ಛವೆಂದು (sulfonic group) ಹೆಸರು. ಎರಡು ಸಲ್ಫಾನಿಕ್ ಗುಚ್ಛಗಳು ನೇರವಾಗಿ ಅಥವಾ ಗಂಧಕದ ಪರಮಾಣುಗಳ ಮೂಲಕ ಬಂಧಿತವಾಗಿದ್ದರೆ ಅಂಥ ಆಮ್ಲಗಳನ್ನು ಥಯಾನಿಕ್ ಆಮ್ಲ ಎಂಬ ಹೆಸರಿನಿಂದ ಕರೆಯುವುದುಂಟು. ಇವನ್ನು H2SnO6 ಎಂಬ ಸಾಮಾನ್ಯ ಸೂತ್ರದಿಂದ ಸೂಚಿಸಬಹುದು. ಇಲ್ಲಿ n=2,3,4,5 ಅಥವಾ 6 ಆಗಿರಬಹುದು. ಆಗ ಅವನ್ನು ಅನುಕ್ರಮವಾಗಿ ಡೈ, ಟ್ರೈ, ಟೆಟ್ರ, ಪೆಂಟ ಮತ್ತು ಹೆಕ್ಸ ಥಯಾನಿಕ್ ಆಮ್ಲಗಳು ಎಂದು ಕರೆಯುತ್ತೇವೆ.

ಡೈಥಯಾನಿಕ್ ಆಮ್ಲ (H2S2O6) (IUPAC name - dithionic acid[]) ಒಂದು ಅಕಾರ್ಬನಿಕ ಸಂಯುಕ್ತ. ಡೈಥಯಾನಿಕ್ ಆಮ್ಲದ ಅಣುವಿನಲ್ಲಿ ಎರಡು ಸಲ್ಫಾನಿಕ್ ಗುಚ್ಛಗಳು ನೇರವಾಗಿ ಬಂಧಿತವಾಗಿವೆ. ಇದರ ಆಮ್ಲ ವಿಯೋಜನಾ ಸ್ಥಿರಾಂಕ −3.4 (ಅಂದಾಜು).[] ಡೈಥಯಾನಿಕ್ ಆಮ್ಲವನ್ನು ಮುಖ್ಯವಾಗಿ ಜಲೀಯ ದ್ರಾವಣವಾಗಿ ಗಮನಿಸಲಾಗುತ್ತದೆ ಮತ್ತು ನಿರೂಪಿಸಲಾಗುತ್ತದೆ.[]

ತಯಾರಿಕೆ

[ಬದಲಾಯಿಸಿ]

ಸಾಮಾನ್ಯವಾಗಿ ಈ ಆಮ್ಲವನ್ನು ತಯಾರಿಸಲು ಪೈರೊಲೂಸೈಟಿನ ನುಣುಪು ಪುಡಿಯನ್ನು ತಣ್ಣೀರಿನಲ್ಲಿ ವಿಲಂಬಿಸಿ ಅದರ ಮೂಲಕ ಗಂಧಕದ ಡೈ ಆಕ್ಸೈಡನ್ನು ನಿಧಾನವಾಗಿ ಹಾಯಿಸುವುದು ವಾಡಿಕೆ. ಮೊದಲು ಉತ್ಪತ್ತಿಯಾಗುವ ಮ್ಯಾಂಗನೀಸ್ ಸಲ್ಫೇಟ್ ಸ್ವಯಂ ಉತ್ಕರ್ಷಣ ಮತ್ತು ಅಪಕರ್ಷಣ ಹೊಂದಿ ಮ್ಯಾಂಗನೀಸ್ ಡೈಥಯೊನೇಟ್ ಆಗುತ್ತದೆ. ಹೀಗೆ ಪೈರೊಲೂಸೈಟ್ ಪೂರ್ಣವಾಗಿ ಪರಿವರ್ತಿತವಾದ ಬಳಿಕ ಬೆರೈಟಾ ದ್ರಾವಣ ಕೂಡಿಸಿದರೆ ಬೇರಿಯಂ ಸಲ್ಫೇಟ್ ಮತ್ತು ಮ್ಯಾಂಗನೀಸ್ ಹೈಡ್ರಾಕ್ಸೈಡುಗಳು ಒತ್ತರಿಸುವುವು. ಹೆಚ್ಚುವರಿ ಬೆರೈಟಾವನ್ನು ಕಾರ್ಬನ್ ಡೈಆಕ್ಸೈಡಿನಿಂದ ಒತ್ತರಿಸಿ ಬೇರ್ಪಡಿಸಲಾಗುವುದು. ಸೋಸಿ ಪಡೆದ ದ್ರಾವಣವನ್ನು ಇಂಗಿಸಿ ಬೇರಿಯಂ ಡೈಥಯೋನೇಟಿನ (BaS2O6.2H2O) ಹರಳುಗಳನ್ನು ಪಡೆಯಬಹುದು. ಇವನ್ನು ಸಲ್ಫ್ಯೂರಿಕ್ ಆಮ್ಲದಿಂದ ವಿಭಜಿಸಿದರೆ ಡೈಥಯಾನಿಕ್ ಆಮ್ಲದ ದ್ರಾವಣ ದೊರೆಯುವುದು.

ಗುಣಗಳು

[ಬದಲಾಯಿಸಿ]

ಡೈಥಯಾನಿಕ್ ಆಮ್ಲ ದ್ರಾವಣ ಸ್ಥಿತಿಯಲ್ಲಿ ಮಾತ್ರ ಇರಬಲ್ಲದು. ದ್ರಾವಣವನ್ನು ಜಲತಾಪಕದ (water heater) ಮೇಲಿಟ್ಟು ಎಚ್ಚರಿಕೆಯಿಂದ ಇಂಗಿಸುತ್ತ ಬಂದರೆ ದ್ರಾವಣ ಸಾಂದ್ರತೆ 1.347 ಮುಟ್ಟಿದಾಗ ಆಮ್ಲ ವಿಭಜಿಸಿ ಸಲ್ಫ್ಯೂರಿಕ್ ಆಮ್ಲ ಮತ್ತು ಗಂಧಕದ ಡೈ ಆಕ್ಸೈಡುಗಳನ್ನು ಕೊಡುತ್ತದೆ. ಇದರ ಲವಣಗಳೂ ಹೀಗೆಯೇ ವರ್ತಿಸುವುವು. ಈ ಆಮ್ಲ ಉತ್ಕರ್ಷಣಕಾರಿಗಳಿಗೆ ಮಣಿಯದು. ಉದಾಹರಣೆಗೆ ಕ್ಲೋರೀನ್ನಿನ ದ್ರಾವಣ ಅಥವಾ ನೈಟ್ರಿಕ್ ಆಮ್ಲಗಳಿಂದ ಪ್ರಭಾವಿತವಾಗುವುದಿಲ್ಲ. ಅಲ್ಲದೆ ಗಂಧಕದೊಡನೆ ಸಂಯೋಜಿಸದು. ಈ ಎರಡು ಲಕ್ಷಣಗಳಲ್ಲಿ ಇದು ಇತರ ಥಯಾನಿಕ್ ಆಮ್ಲಗಳಿಗಿಂತ ಭಿನ್ನ. ಡೈ ಥಯಾನಿಕ್ ಆಮ್ಲ ದ್ವಿ ಪ್ರತ್ಯಾಮ್ಲೀಯ ಆಮ್ಲವೆಂದು (dibasic acid) ವಿದ್ಯುದ್ವಹನ ಪ್ರಯೋಗಗಳಿಂದ ಸ್ಥಿರಪಟ್ಟಿದೆ. ಅಂದರೆ ಈ ಆಮ್ಲ ನಾರ್ಮಲ್ ಮತ್ತು ಆಮ್ಲೀಯ ಎಂಬ ಎರಡು ಶ್ರೇಣಿಯ ಲವಣಗಳನ್ನು ಕೊಡಬೇಕು. ಅದರೆ ಆಮ್ಲೀಯ ಡೈಥಯೊನೇಟುಗಳನ್ನು ಇದುವರೆಗೆ ತಯಾರಿಸಲು ಸಾಧ್ಯವಾಗಿಲ್ಲ.

ಉಲ್ಲೇಖಗಳು

[ಬದಲಾಯಿಸಿ]
  1. International Union of Pure and Applied Chemistry (2005). Nomenclature of Inorganic Chemistry (IUPAC Recommendations 2005). Cambridge (UK): RSCIUPAC. ISBN 0-85404-438-8. p. 130. Electronic version.
  2. Perrin, D. D., ed. (1982) [1969]. Ionisation Constants of Inorganic Acids and Bases in Aqueous Solution. IUPAC Chemical Data (2nd ed.). Oxford: Pergamon (published 1984). Entry 63. ISBN 0-08-029214-3. LCCN 82-16524.
  3. Greenwood, Norman N.; Earnshaw, Alan (1997). Chemistry of the Elements (2nd ed.). Butterworth-Heinemann. ISBN 978-0-08-037941-8. pp. 715-716