ಜಲದೇವತೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಲದೇವತೆಗಳು -ಜಲದ ಅಧಿದೇವತೆ ಅಥವಾ ಜಲದಲ್ಲಿ ವಾಸಮಾಡುತ್ತದೆಂದು ಮಾನವ ವಿಶ್ವಾಸವಿಟ್ಟುಕೊಂಡಿರುವ ದೇವತೆ. ಜಲಕ್ಕೆ, ವೃಷ್ಟಿಗೆ ತನ್ಮೂಲಕ ಹಳ್ಳ, ಕೆರೆ, ಕುಂಟೆ, ಸರೋವರ, ತೊರೆ, ನದಿ, ಸಮುದ್ರ ಇವುಗಳ ಅಸ್ತಿತ್ವಕ್ಕೆ ಕಾರಣಭೂತವಾದ ಶಕ್ತಿಯ ಪ್ರತೀಕ.

ಭಾರತದ ಸನಾತನ ಸಂಸ್ಕೃತಿಯಲ್ಲಿ[ಬದಲಾಯಿಸಿ]

ಮಾನವನ ನೀರಿನ ಅಗತ್ಯ ಅನಾದಿಯಾದುದು, ಅಸಾಧಾರಣವಾದುದು. ಜಲಮಾನವನ ಅಸ್ತಿತ್ವದ ಅವಿಭಾಜ್ಯ ಅಂಗ. ನೀರಿನಿಂದಲೇ ಜೀವದ ವಿಕಾಸ ಮೊದಲಾಯಿತೆನ್ನುವುದು ಇಂದು ವೈಜ್ಞಾನಿಕ ಸತ್ಯ. ಭಾರತೀಯರ ಋಗ್ವೇದದ ಸೂಕ್ತವೊಂದು ಈ ವಿಶ್ವದ ಆದಿಯಲ್ಲಿ ವ್ಯಕ್ತ ಜೀವಗಳು ಗೋಚರವಾಗುವ ಮೊದಲು ಗಹನವಾದ ಗಂಭೀರವಾದ ನೀರಿತ್ತೆ ಎಂದು ಪ್ರಶ್ನಿಸುತ್ತದೆ. ಭೂಮಂಡಲದ ಬಹುಭಾಗ ಜಲಾವೃತವಾಗಿದ್ದು ಉಳಿದ ಭಾಗವೂ ಹಿಮಾವೃತವಾಗಿತ್ತೆಂದು ಇತ್ತೀಚಿನ ಭೂ ಮತ್ತು ಪುರಾತತ್ವ ಶೋಧನೆಗಳಿಂದ ವ್ಯಕ್ತವಾಗಿದೆ. ಉಪನಿಷತ್ತುಗಳಲ್ಲಿ ಬರುವ ಸೃಷ್ಟ್ಯಾತ್ಮಕ ಊಹೆಗಳೂ ಅಪ ಏವ ಆದಂ ಅಗ್ರ ಆಸೀತ್-ಇಲ್ಲಿದ್ದುದು ಮೊದಲು ನೀರೇ ಎಂದು ಪುಷ್ಟೀಕರಿಸುತ್ತದೆ. ಪುರಾಣಗಳ ದಶಾವತಾರಗಳಲ್ಲಿ ಮೊದಲನೆಯದಾದ ಮತ್ಸ್ಯಾವತಾರ ವೈಜ್ಞಾನಿಕವಾಗಿ ವಿಮರ್ಶಿಸಿದಾಗ ಜೀವದ ಉಗಮಸ್ಥಳ ಜಲವೆಂಬುದನ್ನು ಸಮರ್ಥಿಸುತ್ತದೆ. ಇಂಥ ಅನಾದಿಯಾದ ಜಲ ಒಂದು ದೇವತೆ ಎನಿಸಿಕೊಂಡಿದ್ದರೆ, ಅಪೋ ದೇವೀಃ-ಎಂಬುದಾಗಿ ಪೂಜೆಗೊಂಡಿದ್ದರೆ ಅದರಲ್ಲಿ ಅನೌತ್ಯವೇನೂ ಇಲ್ಲ.

ವೇದಗಳಲ್ಲಿ ಅಪಾಂ ನಪಾತ್-ನೀರಿನ ಮಗ-ಜಲದೇವತೆ, ಅಗ್ನಿಯೂ ಅಂಶತಃ ಜಲದಲ್ಲಿ ವಾಸಿಸುವ ದೇವತೆ. ಬಡಬಾಗ್ನಿ ನೀರಿನಲ್ಲಿರುತ್ತದೆ. ವರುಣ ನೀರಿಗೆ ಅಧಿದೇವತೆ. ಪುರಾಣಗಳಲ್ಲಿ ಈ ಭಾವನೆ ಪಕ್ವವಾಗಿದೆ. ಪರ್ಜನ್ಯ ವೃಷ್ಟಿಯ ಅಧಿದೇವತೆ, ಗೋವುಗಳಿಗೆ ಒಳ್ಳೆಯ ನೀರಿನ ತಾಣಗಳನ್ನು ಅವನು ಮಾಡುತ್ತಾನೆ. ಸರಸ್ವತೀ, ಗಂಗಾ, ಯಮುನಾ, ಗೋದಾವರಿ-ಈ ನದಿಗಳೂ ದೇವತೆಗಳು. ಅಪ್ಸರೆಯರು ಹೆಸರೇ ಸೂಚಿಸುವಂತೆ ಜಲದೇವತೆಗಳು. ಇಂದ್ರ, ಮಳೆರಾಯ-ಜಲದೇವತೆ.

ಜಲದ ಶಕ್ತಿ ಅದ್ಭುತವಾದುದು. ಅನಾಗರಿಕ ಜನಾಂಗಗಳು ಅದರಲ್ಲಿ ಮನ-ಎಂಬ ಅದ್ಭುತ ಶಕ್ತಿದೇವತೆ ಅಡಗಿದೆಯೆಂದು ನಂಬಿದ್ದರು. ಮಂತ್ರಮಾಟಗಳಿಗೆ ತಾಂತ್ರಿಕ ಪೂಜಾದಿಗಳಿಗೆ ಜಲ ಬೇಕು. ಜಲ ಶುದ್ಧವಸ್ತು. ಶುದ್ಧೀಕರಣಶಕ್ತಿ ಅಲ್ಲಡಗಿದೆ. (ಮೇಧ್ಯಾ ವಾ ಆಪಃ-ಶತಪಥಬ್ರಾಹ್ಮಣ). ಆದ್ದರಿಂದಲೇ ಚಿತಾಭಸ್ಮ, ಅಸ್ಥಿಗಳು, ಇತರ ಕಾಣಿಕೆಗಳು ಅದಕ್ಕೆ ತರ್ಪಣವಾಗುತ್ತವೆ. ದೇವತಾವಿಗ್ರಹಗಳಿಗೆ ರಾಜ ಮಹಾರಾಜರುಗಳಿಗೆ ಅದರಿಂದ ಮಸ್ತಕಾಭಿಷೇಕವಾಗಬೇಕು. ಪವಿತ್ರ ಕಾರ್ಯಮಾಡುವಾಗ, ಪುಣ್ಯ ಅಥವಾ ಶುಭಕಾರ್ಯ ಮಾಡುವಾಗ ಜಲಸ್ನಾನವಾಗಬೇಕು. ಪೂಜಾದಿಳು ಜಲಸನ್ನಿಧಿಯಲ್ಲಿ ನಡೆಯಬೇಕು. ವಿಗ್ರಹಾದಿಗಳ (ಭಗ್ನಮೂರ್ತಿಗಳೂ ಸೇರಿ) ಪಿತೃತರ್ಪಣಾದಿಗಳ ಬಲಿಗಳು ಜಲದಲ್ಲಿ ಲೀನವಾಗಬೇಕು. ಕಾಶಿ, ರಾಮೇಶ್ವರ, ಪುರಿ, ದ್ವಾರಕೆ, ಸೋಮನಾಥ, ಗೋಕರ್ಣ, ಹರಿದ್ವಾರ, ಬದರಿ, ಕೇದಾರನಾಥ್ ಮುಂತಾದ ಸ್ಥಳಗಳಲ್ಲಿ ಸ್ನಾನ ಮತ್ತೂ ಪವಿತ್ರವಾದುದು. ಇಲ್ಲಿ ಸ್ನಾನಮಾಡಿ ಇಲ್ಲಿರುವ ವೈಷ್ಣವ ಶೈವ ದೇವತೆಗಳ ದರ್ಶನಮಾಡಿದರೆ ಪುಣ್ಯಪ್ರದವಾದುದು. ಈ ಎಲ್ಲ ಭಾವನೆಗಳೂ ಜಲದ ದೈವತ್ವವನ್ನು ಜಲದೇವತೆಗಳಲ್ಲಿ ನಂಬುಗೆಯನ್ನು ಪುಷ್ಟೀಕರಿಸುತ್ತವೆ.

ಯಾವುದಾದರೊಂದು ಧಾರ್ಮಿಕ ಕಾರ್ಯ ಮಾಡುವಾಗ ಸ್ಥಳಶುದ್ಧಿ ಮಾಡಿಕೊಳ್ಳಬೇಕಾದರೆ ಪುಣ್ಯಾಹವಾಚನವೆಂಬ ಕ್ರಿಯೆಯನ್ನು ನಡೆಸಲಾಗುತ್ತದೆ. ಎರಡು ಕಲಶಗಳಲ್ಲಿ ನೀರು ತುಂಬಿ ವರುಣಾದಿ ದೇವತೆಗಳನ್ನು ಆವಾಹಿಸಿ ಪೂಜಿಸಲಾಗುತ್ತದೆ. ಯಾವುದೇ ಪೂಜೆಯ ಆರಂಭದಲ್ಲಿ ಪಾದ್ಯಾದಿಗಳಿಗೆ ಉಪಯೋಗಿಸಲು ಕಲಶದಲ್ಲಿ ಇಟ್ಟುಕೊಂಡಿರುವ ನೀರಿಗೆ (ಅಗ್ರೋದಕ) ಪೂಜೆ ಮಾಡುತ್ತಾರೆ. ಸ್ವರ್ಣಗೌರೀವ್ರತದಲ್ಲಿ ನದೀ ತೀರದಿಂದ ಮರಳು ತರಬೇಕೆಂಬ ನಿಯಮವಿದೆ. ಆಗ ಗಂಗಾಪೂಜೆ ವಿಹಿತವಾಗಿದೆ. ಋಷಿಪಂಚಮಿ ಮತ್ತು ಅನಂತಪದ್ಮನಾಭ ವ್ರತಗಳ ಅಂಗವಾಗಿ ಪ್ರಾರಂಭದಲ್ಲಿ ಯಮುನಾ ಪೂಜೆಯನ್ನು ಮಾಡಬೇಕೆಂಬ ವಿಧಿಯಿದೆ. ವೈಶಾಖ ಮಾಸದ ಶುದ್ಧ ಸಪ್ತಮೀ ದಿನವನ್ನು ಗಂಗಾಸಪ್ತಮೀ ಎಂದು ಕರೆಯಲಾಗಿದೆ. ಅದೊಂದು ವ್ರತ. ವರ್ಷದ ಇನ್ನೂ ಕೆಲವು ದಿನಗಳಲ್ಲಿ ಗಂಗಾಪೂಜೆ ನಡೆಯಬೇಕೆಂಬ ನಿಯಮ ಕಂಡುಬರುತ್ತದೆ. ತುಲಾಸಂಕ್ರಮಣದ ದಿನ ತಲಕಾವೇರಿಯಲ್ಲಿ ಕಾವೇರಿ ನದಿಯು ಉಕ್ಕಿಬರುವ ಅದ್ಭುತ ಸನ್ನಿವೇಶವಿದೆ. ಅಂದು ಕೊಡಗಿನ ಜನರಿಗೆ ಹಬ್ಬ. ಆ ದಿನ ಅಲ್ಲಿಂದ ನೀರು ತುಂಬಿ ತರುತ್ತಾರೆ. ಮುಂದಿನ ವರ್ಷದವರೆಗೂ ಅದನ್ನಿಟ್ಟುಕೊಂಡು ಪೂಜೆ ಮಾಡುತ್ತಾರೆ.

ಪುರಾತನ ಬೇಬಿಲಾನಿನಲ್ಲಿ[ಬದಲಾಯಿಸಿ]

ಪುರಾತನ ಬೇಬಿಲಾನಿನ ಜನರು ಗಹನ ಜಲರಾಶಿಯಲ್ಲಿ ಇಯಾ (ಅಪ್ಪು) ಎಂಬ ಜಲದೇವತೆ ವಾಸಿಸುತ್ತದೆಂದು ನಂಬಿದ್ದರು. ಯೂಫ್ರೆಟಿಸ್ ಮತ್ತು ಟೈಗ್ರಿಸ್ ನದಿಗಳು ಅಕೂಪಾರ (ಸಂಸ್ಕೃತದಲ್ಲೂ ಇದೇ ಶಬ್ದ-ಅರ್ಥ) ಸಮುದ್ರದ ಮಕ್ಕಳು. ಮರ್ದಾಕ್ ದೇವತೆ ವರುಣನಿಗೆ ಪ್ರತಿವಾದಿ. ಆತ ನದೀನಿಯಂತ್ರಣದ ದೇವತೆ. ತಾಮೂeóï ದಿಟದ ಜಲಕುವರ, ವೇದದ ಅಪಾಂ ನಪಾತ್ (ನೀರಿನ ಮಗ) ಇದ್ದಂತೆ. ಅದಾದ್ ರಮನ್ ಸುಮೇರಿಯನರ ದುಷ್ಟವೃಷ್ಟಿದೇವತೆ.

ಪ್ರಾಚೀನ ಈಜಿಪ್ಟಿನಲ್ಲಿ[ಬದಲಾಯಿಸಿ]

ಪ್ರಾಚೀನ ಈಜಿಪ್ಟಿನಲ್ಲೂ ನಿಸ್ಸೀಮ ಜಲರಾಶಿ ಸ್ವರ್ಗ ಮತ್ರ್ಯಗಳ ಸಕಲ ಚರಾಚರ ವಸ್ತುಗಳ ಉಗಮಸ್ಥಾನ ಎಂದಿದೆ. ಭಾರತೀಯರ ಗಂಗೆ ಹೇಗೆ ತ್ರಿಪಥಗೆಯೋ ಅಂತೆಯೇ ನೀಲನದಿ ಭೂವ್ಯೋಮ ವ್ಯಾಪಕವಾದುದು. ಮತ್ಸ್ಯ ಭಾರತೀಯರಿಗೆ ಹೇಗೊ ಹಾಗೆ, ಮೊದಲ ಪೂಜನೀಯವಸ್ತು, ಪಾವಕವಾದುದು. ಹಾಪೀ ಎಂಬುದು ಜಲದೇವತೆ. ಗಂಡುರೂಪಿನ ಆ ದೇವತೆಗೆ ಎರಡು ಮೊಲೆಗಳು. ಕೈಯಲ್ಲಿ ಕಮಲ. ಇಲ್ಲಿನ ಸೂಕ್ತವೊಂದು ವರುಣದೇವತಾ ಸೂಕ್ತವೋ ಎಂಬಂತಿದೆ. ಆ ದೇವತಾ ಪ್ರಾರ್ಥನೆಗಾಗಿ ನೀಲನದಿ ಉಗಮಕ್ಕೆ ಹಾಥಾರ್ ಎಂಬ 'ಗೌ ದೇವತೆ ಕಾರಣ ಈ ನದಿಯ ಇಕ್ಕೆಲಗಳೂ ಪವಿತ್ರ ಸ್ಥಳಗಳು. ಗೂಳಿಗಳು ಕುದುರೆ ಕೋಳಿಗಳು ಇದಕ್ಕೆ ತರ್ಪಣ ವಸ್ತುಗಳು. ಅಪೇಪ್ ಸಮುದ್ರರಾಕ್ಷಸದೇವತೆ. 'ನು ಎಂಬುದು ಮತ್ತೊಂದು ಜಲದೇವತೆ. ಖ್ನೇಮು, ಸತೇತ್, ಅಂಕೇತ್ ಇವು ಮೂರು ಪ್ರಧಾನ ಜಲದೇವತೆಗಳು. ರಾ, ಗೇಬ್, ನುತ್ ನೀತ್, ಮೆರತ್, ಮುತ್, ಮೆಹ್ತ್‍ವರ್ತ್ ಇವು ಇತರ ಜಲದೇವತೆಗಳು. ಓಸಿರಿಸ್ ಮೊದಲು ನೀರಿನಲ್ಲಿ ಮುಳುಗಿದ ಪಾತಾಳ ದೇವತೆ. ಅದು ಸರ್ವದೇವತಾ ಸಮನ್ವಯಶಕ್ತ. ಹೀಗೆಯೇ ಟಗರಿನ ನಾಲ್ಕು ತಲೆಗಳನ್ನು ಮೊಸಳೆಯನ್ನು ಚೇಳನ್ನು ಪ್ರತಿನಿಧಿಸುವ ದೇವತೆಗಳಿವೆ. ಕೆಲವು ದೇವತೆಗಳ ಕೈಯಲ್ಲಿ ಜಲಪಾತ್ರೆ ಅಥವಾ ಸಸ್ಯ ಇರುತ್ತದೆ.

ಗ್ರೀಕ್ ಜನಾಂಗದಲ್ಲಿ[ಬದಲಾಯಿಸಿ]

ಗ್ರೀಕ್ ಜನಾಂಗದಲ್ಲೂ ಜಲವೇ ಸರ್ವದ ಮೂಲವೆಂಬ ಭಾವನೆಯಿತ್ತು. ಹೀಸೀಯಡ್ ತನ್ನ ತಿಯೋಗನಿ ಎಂಬ ಗ್ರಂಥದಲ್ಲಿ ವಿಕ್ಯಾಮು ಮತ್ತು ತೀತಿಸ್ ಎರಡೂ ದ್ಯಾವಾ ಪೃಥಿವಿಯ ಮಕ್ಕಳ-ಮೂಲ ಜಲದೇವತೆಗಳು ಎಂದು ಬರೆದಿದ್ದಾನೆ. ದೇವತ್ವಾರೋಪ ಮಾಡಲ್ಪಟ್ಟ ಜಲದೇವತೆಗಳೆಂದರೆ ತ್ರೈತಾನ್, ಪ್ರೋತಿಯಸ್, ಗ್ಲಾಮೆ, ನೀರಿಯಸ್ ಮುಂತಾದುವು. ಪಸೈಡನ್ ಸಮುದ್ರಾಧಿದೇವತೆ; ಅಯೋನೊಯನ್ ಮತ್ತು ಮಿನೀಯನ್ ಜನಾಂಗಗಳ ಆದಿಪುರುಷ. ಬಿರುಗಾಳಿ ಏಳುವುದು ಭೂಕಂಪಗಳಾಗಿ ಬೆಟ್ಟಗಳೇ ಸೀಳಿ ಹೋಳುಹೋಳುಗಳಾಗುವುದು, ದ್ವೀಪಗಳು ಜಲಮಯವಾಗುವುದು ಈ ದೇವತೆಯ ಕೈವಾಡ. ಆಡಿಸಿ ಕಾವ್ಯದಲ್ಲಿ ಮಾತ್ರ ಇದೊಂದು ದುಷ್ಟ ಸಮುದ್ರದೇವತೆ. ಗ್ರೀಕರ ಮತ್ತೊಂದು ಜಲದೇವತೆ ನೆಪ್ಚೂನ್ ಕೈಯಲ್ಲಿ ತ್ರಿಶೂಲ ಹಿಡಿದು ಸಮುದ್ರಕುದುರೆಯೇರಿರುವ ಇದು ಸಮುದ್ರಾಧಿದೇವತೆ ವರುಣನ ಪ್ರತಿಪಾದಿ. ನೀರೀಯಿಡ್‍ಗಳೆಂಬ ಜಲಕನ್ಯೆಯರಲ್ಲಿ ಗ್ರೀಕ್ ಜನಪದರು ನಂಬುಗೆಯಿಟ್ಟಿದ್ದರು.

ಹೀಬ್ರೂ ಮತ್ತು ಯೆಹೂದಿ ಜನಾಂಗಗಳಲ್ಲಿ[ಬದಲಾಯಿಸಿ]

ಪ್ರಾಚೀನ ಹೀಬ್ರೂ ಮತ್ತು ಯೆಹೂದಿ ಜನಾಂಗಗಳಲ್ಲೂ ಜಲದಲ್ಲಿ ದೈವೀಶಕ್ತಿ ಅಡಗಿದೆ, ಅದು ಪಿತ್ರತಮ, ಸಕಲ ಚರಾಚರ ವಸ್ತುಗಳಿಗೆ ಆದಿಯ ಆಕರ ಎಂಬ ಭಾವನೆಯಿತ್ತು. ಸಮುದ್ರವಾಸಿಯಾದ ಸಸ್ತನಿ ಪ್ರಾಣಿ-ಜರಾಯುಜವನ್ನು (ಮರ್‍ಮೇಡ್) ಅದರ ರೂಪು ನೋಡಿ ಜಲಕನ್ಯೆಯೆಂದು ಭ್ರಮಿಸಿ ಹೆಸರಿಟ್ಟವರು ಯಾರೋ ಅಂಬಿಗರೆಂಬ ನಂಬಿಕೆಯಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: