ವಿಷಯಕ್ಕೆ ಹೋಗು

ಜಯಶೀಲರಾವ್ ಎಸ್ ವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಜಯಶೀಲ ರಾವ್ ಇಂದ ಪುನರ್ನಿರ್ದೇಶಿತ)

ಜಯಶೀಲರಾವ್ ಎಸ್ ವಿ (೧೯೨೮-೨೦೧೬)-ಕನ್ನಡ ಪತ್ರಿಕೋದ್ಯಮಕ್ಕೆ ಅಪರಿಮಿತ ಕೊಡುಗೆ ಸಲ್ಲಿಸಿದ ಪತ್ರಕರ್ತ ಮಹನೀಯರು. ಸಂಪೆಮನೆ ಜಯಶೀಲರಾವ್ ಅವರು ತಮ್ಮ ಬರಹಗಳಿಂದಲ್ಲದೆ, ಪತ್ರಿಕೋದ್ಯಮಕ್ಕೆ ಸಂಬಂಧಪಟ್ಟ ಸಂಘಟನೆಗಳಲ್ಲಿನ ಬಹುಮುಖ ಸೇವೆಯಿಂದಾಗಿ ಕರ್ನಾಟಕವಲ್ಲದೆ, ಹೊರ ರಾಜ್ಯಗಳಲ್ಲಿ ಪರಿಚಿತರಾದ ಪತ್ರಕರ್ತರು.

ಆರಂಭಿಕ ಬದುಕು

[ಬದಲಾಯಿಸಿ]

ಎಸ್.ವಿಜಯಶೀಲರಾಯರು ಹುಟ್ಟಿದ್ದು ಜುಲೈ 1, 1928 ರಲ್ಲಿ ಚಾಮರಾಜನಗರದಲ್ಲಿ. ಇವರ ತಂದೆ ಕೆ ವೆಂಕಟಸುಬ್ಬಯ್ಯ, ತಾಯಿ ಕೃಷ್ಣಮ್ಮ. ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೇ ಶಾಲೆಗೆ ಚಕ್ಕರ್ ಹೊಡೆದು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದರು. ಸ್ವಾತಂತ್ರ್ಯ ಬಂದ ನಂತರ ರಾಷ್ಟ್ರದ ಅಂಗವಾಗಿ ಸೇರುವಂತೆ ಆಗಿನ ಮೈಸೂರು ಮಹಾರಾಜರನ್ನು ಒತ್ತಾಯ ಮಾಡಲು 1947ರಲ್ಲಿ ನಡೆದ ಮೈಸೂರು ಚಲೋ ಸತ್ಯಾಗ್ರಹದಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದರು.

ಪತ್ರಿಕೋದ್ಯಮದಲ್ಲಿ

[ಬದಲಾಯಿಸಿ]

'ದೇಶ ಬಂಧು' ಪತ್ರಿಕೆಯ ಮೂಲಕ 1947ರಲ್ಲಿ ಪತ್ರಿಕೋದ್ಯಮ ಪ್ರವೇಶ ಮಾಡಿದರು. 1948ರಲ್ಲಿ ಪ್ರಜಾವಾಣಿಯಿಂದ ಕರೆ ಬಂದು ವರದಿಗಾರನಾಗಿ ನೇಮಕ ಹೊಂದಿದರು; ನಂತರ ಮುಖ್ಯ ವರದಿಗಾರರಾಗಿ 26 ವರ್ಷಗಳ ಕಾಲ 'ಪ್ರಜಾವಾಣಿ'ಯಲ್ಲಿ ಸೇವೆ. ಸಲ್ಲಿಸಿದರು.

ಪ್ರಜಾವಾಣಿಯಲ್ಲಿ ಜಯಶೀಲರಾಯರು ಸಮೀಪದರ್ಶಿ ಅಂಕಿತದಲ್ಲಿ ಬರೆಯುತ್ತಿದ್ದ ವಿಧಾನ ಮಂಡಲದ ಕಲಾಪ ಕುರಿತಾದ "ಸದನ ಸಮೀಕ್ಷೆ" ಅಂಕಣ, ವಿನೂತನ, ಜನಪ್ರಿಯ. ವಿಧಾನ ಸಭೆ ಹಾಗೂ ವಿಧಾನ ಪರಿಷತ್‍ನ ಕಲಾಪಗಳ ಶುಷ್ಕ ವರದಿಗೆ ಭಿನ್ನವಾದ ಅನೂರೂಪದ ಶೈಲಿಯಲ್ಲಿ ಅವರು ದಾಖಲಿಸುತ್ತಿದ್ದ ಅಂಕಣ ಕನ್ನಡ ಪತ್ರಿಕೋದ್ಯಮದ ವರದಿಗಾರಿಕೆ ಶೈಲಿಗೆ ಬೇರೆಯದೇ ಆದ ಆದರೆ ಸ್ವಾಗತಾರ್ಹವಾದ ಆಯಾಮವನ್ನೇ ಕೊಟ್ಟಿತು.ಇಂದಿನಂತೆ ಮೂರೂವರೆ ನಾಲ್ಕು ದಶಕದ ಹಿಂದೆ ಹೊಸ ಪ್ರಯೋಗಕ್ಕೆ ತೆರೆದುಕೊಳ್ಳುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಜಯಶೀಲರಾಯರು ತಮ್ಮ ಆ ಹೊಸ ಪ್ರಯೋಗದಲ್ಲಿ ಜಯಶೀಲರಾದರು.

ಸಾರ್ವತ್ರಿಕ ಚುನಾವಣಾ ಸಮೀಕ್ಷೆ ನಡೆಸುವುದನ್ನೂ ಆರಂಭಿಸಿದ್ದು ಪ್ರಜಾವಾಣಿ. ಸಂಪಾದಕ ಟಿ.ಎಸ್ ರಾಮಚಂದ್ರರಾಯರ ಮಾರ್ಗದರ್ಶನದಲ್ಲಿ ಜಯಶೀಲರಾಯರು ಬರೆದ 1952ರ ಮಹಾಚುನಾವಣಾ ಸಮೀಕ್ಷಾ ವರದಿಗಳು ಓದುಗರ ಮೆಚ್ಚುಗೆಗೆ ಪಾತ್ರವಾಯಿತು.

1974ರಲ್ಲಿ ಹುಬ್ಬಳ್ಳಿ ಹಾಗೂ ಬೆಂಗಳೂರುಗಳಿಂದ ಪ್ರಕಟವಾಗುತ್ತಿದ್ದ `ಸಂಯುಕ್ತ ಕರ್ನಾಟಕ ಪತ್ರಿಕೆಯ ಜಂಟಿ ಸಂಪಾದಕರಾದರು. ಅನಂತರ ಎರಡು ಅವಧಿಗೆ ಸಂಪಾದಕರೂ ಆದರು. ಈ ಮಧ್ಯೆ 1982ರಲ್ಲಿ ಹೊಸ ಕನ್ನಡ ಪತ್ರಿಕೆ `ಮುಂಜಾನೆ'ಯ ಸಂಪಾದಕರಾಗಿ ಅದನ್ನು ಜನಪ್ರಿಯಗೊಳಿಸಿದರು.

ಇವರು ಸಂಯುಕ್ತ ಕರ್ನಾಟಕದ ಜಂಟೀ ಸಂಪಾದಕರಾಗಿದ್ದಾಗ `ಯಾರಿವರು' ಎಂಬ ನೂತನ ಅಂಕಣವನ್ನು ಆರಂಭಿಸಿದರು. ನಾನಾ ಸಾಮರ್ಥ್ಯಗಳಿರುವ ಹಾಗೂ ಸಮಾಜಕ್ಕೆ ಸೇವೆ ಸಲ್ಲಿಸುವ ಬಹುಮಂದಿ ಯಾವ ಗಮನ ಹಾಗೂ ಮನ್ನಣೆಯಿಂದ ವಂಚಿತರಾಗಿದ್ದಾರೊ ಅಂತಹವರನ್ನು ಹುಡುಕಿ ಜನತೆಗೆ ಪರಿಚಯಿಸುವುದು ಈ ಅಂಕಣದ ಉದ್ದೇಶವಾಗಿತ್ತು. ರಾಯರ ವಿದೇಶಗಳಲ್ಲಿ ಅಧ್ಯಯನ ಪ್ರವಾಸ ನಡೆಸಿದ್ದಾರೆ. 1963ರಲ್ಲಿ ಇಂಡೋನೇಷಿಯಾಜಕಾರ್ತದಲ್ಲಿ ನಡೆದ ಏಷ್ಯಾ ಆಫ್ರಿಕ ಪತ್ರಕರ್ತರ ಸಮ್ಮೇಳನದಲ್ಲಿ ಪಿ.ಎಫ್.ಡಬ್ಲ್ಯುಜೆಯ ನಿಯೋಗದ ಸದಸ್ಯರಾಗಿದ್ದರು.

1982ರಲ್ಲಿ ಸೋವಿಯತ್ ರಷ್ಯಾದ ಪತ್ರಕರ್ತರ ಸಂಘದ ಆಹ್ವಾನದ ಮೇಲೆ 1982ರಲ್ಲಿ ಫ್ರೂಂಜೆಯಲ್ಲಿ ನಡೆದ ಅಂತರರಾಷ್ಟ್ರೀಯ ಪತ್ರಕರ್ತರ ಸಮ್ಮೇಳನದಲ್ಲಿ ಭಾಗವಹಿಸಿದ ನಿಯೋಗದ ನಾಯಕರಾಗಿದ್ದರು. 1985 ಪಿ.ಎಫ್.ಡಬ್ಲ್ಯುಜೆಯ ದ್ವಿ ಸದಸ್ಯ ನಿಯೋಗದ ನಾಯಕರಾಗಿ ಬಲ್ಗೇರಿಯಾ ಹಾಗೂ ಜೆಕೊಸ್ಲಾವಿಯ ರಾಷ್ಟ್ರಗಳಿಗೆ ಭೇಟಿ ನೀಡಿದರು.

ಥಾಂಪಸನ್ ಫೌಂಡೇಶನ್ ಆಶ್ರಯದಲ್ಲಿ ಪತ್ರಿಕೋದ್ಯಮದಲ್ಲಿ ಹೆಚ್ಚಿನ ತರಬೇತಿ ಪಡೆಯಲು ಪ್ರಜಾವಾಣಿ ಇವರನ್ನು 1969ರಲ್ಲಿ ಇಂಗ್ಲೆಂಡಿಗೆ ಕಳುಹಿಸಿತ್ತು. ಕೇಂದ್ರಸರ್ಕಾರದ ರಕ್ಷಣಾ ಇಲಾಖೆ ಪತ್ರಕರ್ತರಿಗಾಗಿ ಏರ್ಪಡಿಸಿದ ತರಬೇತಿ ಶಿಬಿರದಲ್ಲೂ ರಾಯರು ಭಾಗವಹಿಸಿದ್ದಾರೆ. ಜಯಶೀಲರಾಯರು ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆ ಎಂದರೆ ಕಿರಿಯರಿಗೆ ಉದಯೋನ್ಮುಖ ಪತ್ರಕರ್ತರಿಗೆ ತರಬೇತಿ.

`ಸಂಯುಕ್ತ ಕರ್ನಾಟಕ ಪತ್ರಿಕೆಯ ಜಂಟಿ ಸಂಪಾದಕರಾಗಿದ್ದಾಗ, ಪ್ರಧಾನ ಸಂಪಾದಕ ಖಾದ್ರಿ ಶಾಮಣ್ಣ ಅವರೊಡನೆ, ನೇಮಕಗೊಂಡ ಪತ್ರಕರ್ತ-ಅಭ್ಯರ್ಥಿಗಳಿಗೆ ತರಬೇತಿ ನೀಡಿದರು.

`ಡೆಕ್ಕನ್ ಹೆರಾಲ್ಡ್-ಪ್ರಜಾವಾಣಿ ಆಡಳಿತ ವರ್ಗ ಇವರನ್ನು ತರಬೇತು ಸಂಯೋಜಕರಾಗಿ (1991) ಒಂದು ವರ್ಷ ಕಾಲ ನೇಮಿಸಿತು ಮತ್ತು 2004-05ರಲ್ಲಿ ತರಬೇತಿ ಹಾಗೂ ಹೀಗೆ ಅವರ ಅನುಭವಕ್ಕೆ ಮನ್ನಣೆ ದೊರೆಯಿತು. ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿತು.

ಪತ್ರಿಕಾ ಅಕಾಡೆಮಿ, ಮತ್ತವರ ಸಂಸ್ಥೆಗಳು ನಡೆಸುವ ಪತ್ರಕರ್ತರ ತರಬೇತಿ ಶಿಬಿರದಲ್ಲೂ ಭಾಗವಹಿಸಿ ಮಾರ್ಗದರ್ಶನ ನೀಡುತ್ತಿದ್ದಾರೆ.

ಪತ್ರಿಕಾ ಮಂಡಳಿಯ ಸದಸ್ಯ (1988-91), ಕೆಯುಡಬ್ಲುಜೆ ಅಧ್ಯಕ್ಷ (1961-63), ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ, ಬೆಂಗಳೂರು ವರದಿಗಾರರ ಗಿಲ್ಡ್‍ನ ಸ್ಥಾಪಕ ಅಧ್ಯಕ್ಷ (1971), ಬೆಂಗಳೂರು ಪ್ರೆಸ್‍ಕ್ಲಬ್‍ನ ಸ್ಥಾಪಕ ಸದಸ್ಯ-ಹೀಗೆ ಅವರದು ಬಹುಮುಖೀ ಸೇವೆ.

ಜಯಶೀಲರಾಯರು, ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರು ಪತ್ರಿಕಾ ಕಾರ್ಯದರ್ಶಿಯಾಗಿದ್ದರು. ದೇವೇಗೌಡರು ಪ್ರಧಾನಿ ಆದಾಗಲೂ ಅವರಿಗೆ ಪತ್ರಿಕಾ ಕಾರ್ಯದರ್ಶಿಯಾಗಿದ್ದರು. ಯುವ ಪೀಳಿಗೆಯ ಪತ್ರಕರ್ತರ ನಡುವೆ ಹಮ್ಮು-ಬಿಮ್ಮು ತೋರದೆ ಸಹಜವಾಗಿ, ಸರಳವಾಗಿ ಬೆರೆಯುವ ಗುಣ ಜಯಶೀಲರಾಯರಲ್ಲೂ ಎದ್ದು ಕಾಣುತ್ತದೆ. ಟೆಲಿವಿಷನ್, ಆಕಾಶವಾಣಿ ಹಾಗೂ ಅನೇಕ ವೃತ್ತಿಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಪ್ರಶಸ್ತಿಗಳು, ಗೌರವಗಳು

[ಬದಲಾಯಿಸಿ]

ಜಯಶೀಲರಾಯರಿಗೆ ಸಂದ ಪ್ರಶಸ್ತಿಗಳು, ಸನ್ಮಾನಗಳು ಅಸಂಖ್ಯ. 1969ರಲ್ಲಿ ತುಮಕೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಪತ್ರಿಕೊದ್ಯಮಕ್ಕೆ ಸಲ್ಲಿಸಿದ ಸೇವೆಗಾಗಿ ಸನ್ಮಾನಿತರಾಗಿದ್ದಾರೆ. ಇದಲ್ಲದೆ ಪತ್ರಿಕಾ ಅಕಾಡೆಮಿ ಪ್ರಶಸ್ತಿ (1987) ರಾಜ್ಯೋತ್ಸವ ಪ್ರಶಸ್ತಿ (1990), ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ (1999) ಪಡೆದಿದ್ದಾರೆ. ಕರ್ನಾಟಕದ ಅತ್ಯುನ್ನತ ಟಿಯೆಸ್ಸಾರ್ ಪ್ರಶಸ್ತಿ ಪುರಸ್ಕೃತರು (1998}.

ಇವರು ೨೦೧೬ರ ಏಪ್ರಿಲ್ ೨೯ ಶುಕ್ರವಾರದಂದು ಖಾಸಗಿ ಆಸ್ಪತ್ರೆಯೊಂದರಲ್ಲಿ ದೈವಾಧೀನರಾದರು[]

ಉಲ್ಲೇಖಗಳು

[ಬದಲಾಯಿಸಿ]



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: