ಚಿತ್ರಗುಪ್ತ (ಪತ್ರಿಕೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪತ್ರಿಕೆಯ 18-08-1957ರ ಸಂಚಿಕೆ, ಹೆಚ್.ಆರ್.ನಾಗೇಶರಾವ್ ಸಂಗ್ರಹ.

ಚಿತ್ರಗುಪ್ತ - ಕನ್ನಡದ ಒಂದು ದಿನಪತ್ರಿಕೆ ಹಾಗೂ ವಾರಪತ್ರಿಕೆ.

ಆರಂಭ[ಬದಲಾಯಿಸಿ]

1928ರ ಡಿಸೆಂಬರ್ ಅಂತ್ಯದಲ್ಲಿ ಬೆಂಗಳೂರಿನಿಂದ ಪ್ರಕಟವಾಗತೊಡಗಿತು. ಪತ್ರಿಕೆಯ ಸಂಪಾದಕರು ಮತ್ತು ಮುದ್ರಕರು ಎಚ್. ಕೆ. ವೀರಣ್ಣಗೌಡ, ಆರ್ಕಾಟ್ ಶ್ರೀನಿವಾಸಾಚಾರ್ ಬೀದಿಯಲ್ಲಿದ್ದ ಅವರ ಗ್ರಾಮಸೇವಾ ಪ್ರೆಸ್‍ನಲ್ಲಿ ಮುದ್ರಿತವಾಗಿ ಅಲ್ಲಿಂದಲೇ ಪ್ರಕಟವಾಗುತ್ತಿತ್ತು.

ಸರ್ಕಾರದ ಕ್ರೂರದೃಷ್ಟಿ[ಬದಲಾಯಿಸಿ]

ಆಗಿನ ಮೈಸೂರು ಸಂಸ್ಥಾನದ ದಿವಾನ್ ಮಿರ್ಝಾ ಇಸ್ಮಾಯಿಲರ ಆಡಳಿತದ ಲೋಪದೋಷಗಳನ್ನು ಕಟುವಾಗಿ ಟೀಕಿಸುತ್ತಿದ್ದುದರಿಂದ ಪತ್ರಿಕೆಯನ್ನು ಸರ್ಕಾರದವರು ಕ್ರೂರದೃಷ್ಟಿಯಿಂದ ನೊಡುತ್ತಿದ್ದರು. ಮೊದಮೊದಲು ಸಂಪಾದಕರನ್ನು ವಶಪಡಿಸಿಕೊಳ್ಳಲು ಮಿರ್ಝಾ ಅವರು ಪ್ರಯತ್ನಿಸಿದರು. ಅವರು ತಮ್ಮನ್ನು ಕಾಣಬೇಕೆಂದು ಸ್ನೇಹಿತರೊಬ್ಬರ ಮುಖಾಂತರ ಹೇಳಿಕಳುಹಿಸಿದರು. ಒಮ್ಮೆ ಸತ್ಕಾರಕೂಟವೊಂದರಲ್ಲಿ ಸಂಪಾದಕರಿದ್ದ ಸ್ಥಳಕ್ಕೆ ಅವರಾಗಿ ಬಂದು, ಕ್ಷೇಮ ಸಮಾಚಾರ ವಿಚಾರಿಸಿ, ತಮ್ಮನ್ನು ಕಾಣಲು ಬರಬೇಕೆಂದು ಸ್ವತಃ ಆಹ್ವಾನಿಸಿದರು. ದಿವಾನರನ್ನು ಕಂಡರೆ ತಾವೆಲ್ಲಿ ಅವರ ಬಲೆಗೆ ಬೀಳಬೇಕಾಗುವುದೋ ಎಂಬ ಶಂಕೆಯಿಂದ ಸಂಪಾದಕರು ಎಂದೂ ಅವರನ್ನು ಭೇಟಿ ಮಾಡಲಿಲ್ಲ. ಕ್ರಮೇಣ ಸರ್ಕಾರದ ಆಗ್ರಹ ತೀವ್ರವಾಯಿತು. ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಸರ್ಕಾರಿ ಪ್ರಕಟಣೆಗಳು ನಿಂತುವು. ಮುದ್ರಣಾಲಯಕ್ಕಾಗಿ ಬ್ಯಾಂಕಿನಿಂದ ಪಡೆದಿದ್ದ ಸಾಲವನ್ನು ನಿಂತ ಹೆಜ್ಜೆಯಲ್ಲೇ ಕೊಡಬೇಕೆಂದು ಬ್ಯಾಂಕಿನಿಂದ ತಗಾದೆ ಬಂತು. ಪತ್ರಿಕೆಯ ಧೋರಣೆಯಿಂದ ದಿವಾನರು ಕುಪಿತರಾಗಿದ್ದಾರೆಂದೂ ಪತ್ರಿಕೆಯನ್ನು ನಿಲ್ಲಿಸಬೇಕೆಂದೂ ಮುದ್ರಣಾಲಯ ಅಭಿವೃದ್ಧಿಗೊಳಿಸಲು ಇನ್ನೂ ಹೆಚ್ಚಿನ ಸಾಲ ಕೊಡುವುದಾಗಿಯೂ ಬ್ಯಾಂಕಿನ ಅಧಿಕಾರಿಗಳಿಂದ ಸಲಹೆ ಬಂತು. ಪತ್ರಿಕೆ ನಿಲ್ಲಿಸಿದರೆ ಮುದ್ರಣಾಲಯದ ಅಗತ್ಯವೆ ಇಲ್ಲವೆಂಬುದು ಸಂಪಾದಕರ ಉತ್ತರಪತ್ರಿಕೆಯ ಧ್ಯೇಯಧೋರಣೆಗಳು ಬದಲಾಗಲಿಲ್ಲ.

ಬೆಂಗಳೂರಿನಲ್ಲಿ 1929ರಲ್ಲಿ ನಡೆದ ಗಣಪತಿ ಗಲಭೆಯ ಸಂಬಂಧ ವಿಚಾರಣೆ ನಡೆಸಲು ಎಂ. ವಿಶ್ವೇಶ್ವರಯ್ಯನವರ ಅಧ್ಯಕ್ಷತೆಯಲ್ಲಿ ಸರ್ಕಾರ ರಚಿಸಿದ್ದ ವಿಚಾರಣಾ ಸಮಿತಿಯ ವರದಿಯನ್ನು ಬಹಿರಂಗಪಡಿಸಬೇಕೆಂದು ನ್ಯಾಯವಿಧಾಯಕ ಮತ್ತು ಪ್ರಜಾಪ್ರತಿನಿಧಿ ಸಭೆಗಳಲ್ಲಿ ಪ್ರತಿನಿಧಿಗಳು ಎಷ್ಟೇ ಒತ್ತಾಯಪಡಿಸಿದರೂ ಸರ್ಕಾರ ಅದನ್ನು ಪ್ರಕಟಿಸಲಿಲ್ಲ. ಸರ್ಕಾರದ ಬೀಗಮುದ್ರೆಯಲ್ಲಿದ್ದ ಆ ವರದಿಯ ಪ್ರತಿಯೊಂದನ್ನು ಚಿತ್ರಗುಪ್ತದ ಸಂಪಾದಕರು ಹೇಗೋ ಪಡೆದುಕೊಂಡು ಚಿತ್ರಗುಪ್ತ ಪತ್ರಿಕೆಯಲ್ಲಿ ಕ್ರಮವಾಗಿ ಪ್ರಕಟಿಸುತ್ತ ಬಂದರು. ಅನಂತರ ಸರ್ಕಾರ ವರದಿಯನ್ನು ಪುಸ್ತಕರೂಪದಲ್ಲಿ ಪ್ರಕಟಿಸಿತು.

ಅದೇ ರೀತಿ 1928-29ರಲ್ಲಿ ಬೆಂಗಳೂರು ಜಿಲ್ಲಾ ಬೋರ್ಡು ಕಬ್ಬನ್ ಪಾರ್ಕಿನಲ್ಲಿ ನಡೆಸಿದ ವಸ್ತುಪ್ರದರ್ಶನದಲ್ಲಿ ಆಡಳಿತಗಾರರು ಲಕ್ಷಾಂತರ ರೂಪಾಯಿ ದುಂದುವೆಚ್ಚ ಮಾಡಿದ್ದರ ಬಗ್ಗೆ ಸರ್ಕಾರದ ತನಿಖೆ ಶಾಖೆ ಸರ್ಕಾರಕ್ಕೆ ಕೊಟ್ಟಿದ್ದ ವರದಿಯನ್ನೂ ಸರ್ಕಾರ ಪ್ರಕಟಿಸಲಿಲ್ಲ. ಆ ವರದಿಯೂ ಚಿತ್ರಗುಪ್ತ ಪತ್ರಿಕೆಯಲ್ಲಿ ಪ್ರಕಟವಾಯಿತು. ಅನಂತರ ಆ ವಸ್ತು ಪ್ರದರ್ಶನ ನಡೆಯಲಿಲ್ಲ. ದಾವಣಗೆರೆಯಲ್ಲಿ ನಡೆದ ಹಿಂದೂ-ಮುಸ್ಲಿಂ ಗಲಭೆಯ ನಿಜಾಂಶಗಳನ್ನು ವಿವರವಾಗಿ ಪ್ರಕಟಿಸಬಾರದೆಂದು ಸರ್ಕಾರದ ಪ್ರಯತ್ನವಾಗಿತ್ತು. ಆದರೆ ಚಿತ್ರಗುಪ್ತ ಪತ್ರಿಕೆಯಲ್ಲಿ ಅದರ ನಿಜಾಂಶಗಳು ಪ್ರಕಟವಾದುವು. ಪತ್ರಿಕೆಯ ಈ ಬಗೆಯ ಧೋರಣೆಯಿಂದ ಸರ್ಕಾರದ ಕಿರುಕುಳ ಅಧಿಕವಾಯಿತು. ಪತ್ರಿಕೆಯನ್ನು ಪ್ರೋತ್ಸಾಹಿಸಬಾರದೆಂಬ ಸರ್ಕಾರದ ಇಚ್ಛೆಯನ್ನು ಕಾರ್ಯಗತಗೊಳಿಸಲು ಕೆಲವು ಅಧಿಕಾರಿಗಳು ಪ್ರಯತ್ನ ನಡೆಸಿದರು. ಪ್ರಭಾವ ಬೀರಿದರು. ನ್ಯಾಯಲಯಗಳಲ್ಲಿ ನಡೆಯುತ್ತಿದ್ದ ಮೊಕದ್ದಮೆಗಳ ಬಗ್ಗೆ ಲಾಯರುಗಳು ನೀಡುತ್ತಿದ್ದ ಪ್ರಕಟಣೆಗಳನ್ನು ಚಿತ್ರಗುಪ್ತ ಪತ್ರಿಕೆಯಲ್ಲಿ ಪ್ರಕಟಿಸದೆ ಬೇರೆ ಪತ್ರಿಕೆಗಳಲ್ಲಿ ಪ್ರಕಟಿಸುವಂತೆ ಕೆಲವು ನ್ಯಾಯವಾದಿಗಳಿಗೆ ಸರ್ಕಾರ ಒತ್ತಾಯ ಮಾಡಿತು.

ಪ್ರಕಟನೆಯ ನಿಲುಗಡೆ[ಬದಲಾಯಿಸಿ]

ಸಂಸ್ಥಾನದ ಹಲವೆಡೆಗಳಲ್ಲಿದ್ದ ಪತ್ರಿಕಾ ಪ್ರತಿನಿಧಿಗಳು ಕೊಡಬೇಕಾದ ಹಣವನ್ನು ಕೊಡದೆ ತೊಂದರೆ ನೀಡಿದರು. ಪತ್ರಿಕೆ ಮತ್ತು ಮುದ್ರಣಾಲಯಗಳ ಮೇಲಿದ್ದ ಸಾಲಕ್ಕಾಗಿ ಸಾಲಿಗರು ನ್ಯಾಯಾಲಯದಲ್ಲಿ ದಾವೆ ಹೂಡಿ ಡಿಕ್ರಿ ಪಡೆದುಕೊಂಡರು. ಉಜ್ಜ್ವಲ ರಾಷ್ಟ್ರೀಯ ಕನ್ನಡ ದಿನಪತ್ರಿಕೆಯೆಂದು ಖ್ಯಾತಿ ಪಡೆದಿದ್ದ ಚಿತ್ರಗುಪ್ತ ದಿ ಪತ್ರಿಕೆಯೂ ಅದೇ ಹೆಸರಿನ ವಾರಪತ್ರಿಕೆಯೂ ಹೀಗೆ ನಾನಾ ಕೋಟಲೆಗಳಿಂದಲೂ ಆರ್ಥಿಕ ಮುಗ್ಗಟ್ಟಿನಿಂದಲೂ 1931ರ ಅಂತ್ಯದಲ್ಲಿ ಅನಿವಾರ್ಯವಾಗಿ ನಿಂತುಹೋಯಿತು. ಸಂಪಾದಕರು ಭಾರಿಯ ಸಾಲದ ಹೊರೆ ಹೊರಬೇಕಾಯಿತು.

1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದು ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪಿತವಾದ ಮೇಲೆ ಕೆಲವು ಜನ ಸೇರಿ ಖಾಸಗಿ ಸಂಸ್ಥೆಯೊಂದನ್ನು ಸ್ಥಾಪಿಸಿ ಪುನಃ ಚಿತ್ರಗುಪ್ತ ಪತ್ರಿಕೆಯನ್ನ ಎಚ್.ಕೆ.ವೀರಣ್ಣಗೌಡರ ನೇತೃತ್ವದಲ್ಲಿ ಹೊರಡಿಸಿದರು. ಅದೂ ಕೇವಲ ಒಂದು ವರ್ಷ ಕಾಲ ನಡೆದು ಹಣದ ಮುಗ್ಗಟ್ಟಿನಿಂದ ನಿಂತಿತು. ಪತ್ರಿಕೆಯ ಉಪಸಂಪಾದಕರಾಗಿದ್ದ ಎಂ. ಎಸ್. ಭಾರದ್ವಾಜರ ಸಂಪಾದಕತ್ವದಲ್ಲಿ ವಾರಪತ್ರಿಕೆ ಕೆಲವು ತಿಂಗಳುಗಳ ಕಾಲ ನಡೆಯಿತು. ಆಮೇಲೆ ಅದೂ ನಿಂತುಹೋಯಿತು.

ಪತ್ರಿಕೆಯ ಕೊಡುಗೆ[ಬದಲಾಯಿಸಿ]

ಪತ್ರಿಕೆಗೆ ಬರಹಗಾರರಲ್ಲಿ ಹೆಚ್.ಆರ್.ನಾಗೇಶರಾವ್, ಪಿ.ಲಂಕೇಶ್, ಎಸ್.ಕೆ.ನಾಡಿಗ್, ಕೋ.ಚೆನ್ನಬಸಪ್ಪ, ಸಿ.ಎಚ್.ಪ್ರಹ್ಲಾದರಾವ್, ಎಚ್.ಎಸ್.ಪಾರ್ವತಿ, ಎಲ್.ಎಸ್.ಶೇಷಗಿರಿರಾವ್ ಮುಂತಾದವರು ಇದ್ದರು.

ಈ ಪತ್ರಿಕೆ ಕೇವಲ 3 ವರ್ಷಗಳ ಕಾಲ ನಡೆದರೂ ನಿರ್ಭಯ, ನಿರ್ದಾಕ್ಷಿಣ್ಯ, ನಿಷ್ಪಕ್ಷಪಾತ ಧ್ಯೇಯಗಳಿಂದ ಕೂಡಿ, ಅವಕ್ಕೆ ಅನುಸಾರವಾಗಿ ದೇಶಸೇವೆ ಸಲ್ಲಿಸಿ ಕೀರ್ತಿಗಳಿಸಿತ್ತು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: