ವಿಷಯಕ್ಕೆ ಹೋಗು

ಘಸೀಟಿ ಬೇಗಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಾಂಗ್ಲಾರ್ ಬೇಗಮ್ ಪುಸ್ತಕದಿಂದ ಘಸೀಟಿ ಬೇಗಮ್‍ನ ಭಾವಚಿತ್ರ

ಘಸೀಟಿ ಬೇಗಂ ಬಂಗಾಳದ ನವಾಬನಾಗಿದ್ದ (1740-56) ಅಲಿವರ್ದಿಖಾನನ ಮೂವರು ಹೆಣ್ಣು ಮಕ್ಕಳ ಪೈಕಿ ಮೊದಲನೆಯವಳು.[] ಅವನಿಗೆ ಗಂಡು ಸಂತಾನವಿರಲಿಲ್ಲ. ಮೂವರು ಹೆಣ್ಣು ಮಕ್ಕಳನ್ನೂ ಅವನು ತನ್ನ ಸಹೋದರನ ಮೂವರು ಪುತ್ರರಿಗೆ ವಿವಾಹ ಮಾಡಿಕೊಟ್ಟಿದ್ದ.[][]

ಘಸೀಟಿ ಬೇಗಮಳ ಗಂಡ ನವಾಜಿಸ್ ಮಹಮ್ಮದ್. ಅಲಿವರ್ದಿ ತನ್ನ ಕೊನೆಯ ಮಗಳ ಮಗನಾದ ಸಿರಾಜ್-ಉದ್-ದೌಲನನ್ನು ಉತ್ತರಾಧಿಕಾರಿಯನ್ನಾಗಿ ಆರಿಸಿದ. ಆದರೆ ಈ ಆಯ್ಕೆ ಆವನ ಮೊದಲ ಇಬ್ಬರು ಅಳಿಯಂದಿರಿಗೆ ಸರಿಬೀಳಲಿಲ್ಲ. ಢಾಕಾ ಮತ್ತು ಪೂರ್ನಿಯದ ಅಧಿಪತಿಗಳಾಗಿದ್ದ ಇವರು ಅನೇಕ ಪಿತೂರಿಗಳ ಕೇಂದ್ರವಾದರು. ಅಲಿವರ್ದಿಯ ಅಂತ್ಯಕಾಲದಲ್ಲಿ ಈ ಇಬ್ಬರು ಅಳಿಯಂದಿರೂ ನಿಧನರಾದರು. ಅದರೆ ಸಿರಾಜ್-ಉದ್-ದೌಲನ ಉತ್ತರಾಧಿಕಾರವನ್ನು ಘಸೀಟಿ ಬೇಗಂ ಪ್ರಶ್ನಿಸಿದಳು. ಘಸೀಟಿಯ ಪಿತೂರಿಗೆ ಅವಳ ದಿವಾನನಾದ ರಾಜಾವಲ್ಲಭನ ಸಂಪೂರ್ಣ ಬೆಂಬಲವಿತ್ತು. ಅಲಿವರ್ದಿಯ ಅನಾರೋಗ್ಯದಿಂದಾಗಿ ಅವನ ಪರವಾಗಿ ಆಡಳಿತ ನಡೆಸುತ್ತಿದ್ದ ಸಿರಾಜ್-ಉದ್-ದೌಲ ಇಂಗ್ಲಿಷರ ವೈರವನ್ನು ಕಟ್ಟಿಕೊಂಡಿದ್ದ. ಫ್ರೆಂಚರು ಪ್ರಬಲರಾಗುತ್ತಿದ್ದರೆಂಬ ಕಾರಣದಿಂದ ಕಲ್ಕತ್ತೆಯಲ್ಲಿ ತಮ್ಮ ಕೋಟೆಕೊತ್ತಲುಗಳನ್ನು ಭದ್ರಪಡಿಸಿಕೊಳ್ಳುತ್ತಿದ್ದ ಇಂಗ್ಲಿಷರ ವರ್ತನೆಯಿಂದಾಗಿ ಸಿರಾಜ್-ಉದ್-ದೌಲನಿಗೆ ಅಸಮಾಧಾನವಾಗಿತ್ತು. ಸಿರಾಜ್-ಉದ್-ದೌಲ ಬಂಗಾಳದ ನವಾಬನಾಗಲಾರನೆಂಬುದು ಅವರ ಅಭಿಪ್ರಾಯವಾಗಿತ್ತು. ಆದ್ದರಿಂದ ಅವರು ಅವನ ವಿರೋಧಿಗಳಾದ ಘಸೀಟಿ ಬೇಗಂ ಮತ್ತು ರಾಜಾವಲ್ಲಭರಿಗೆ ಬೆಂಬಲವಾಗಿದ್ದರು. ಅಲಿವರ್ದಿಯ ಮರಣಕಾಲ ಸನ್ನಿಹಿತವಾದಾಗ, ಘಸೀಟಿಬೇಗಂ ರಾಜಧಾನಿಯಾದ ಮುರ್ಷಿದಾಬಾದನ್ನು ಬಿಟ್ಟು ಅದಕ್ಕೆ ಎರಡು ಮೈಲಿ ದೂರದಲ್ಲಿ ಮೋತಿಝೀರ್ಲ ಎಂಬ ತೋಟದಲ್ಲಿ ಬಿಡಾರ ಹೂಡಿದಳು. ಉತ್ತರಾಧಿಕಾರಿಯ ಸಮಸ್ಯೆಯಲ್ಲಿ ಘಸೀಟಿಗೆ ಹೆಚ್ಚಿನ ಬೆಂಬಲ ಕಂಡುಬಂದದ್ದರಿಂದ ಆಂಗ್ಲ ಅಧಿಕಾರಿಗಳು ಅವಳ ನೆರವಿಗೆ ನಿಂತರು.

ಅಲಿವರ್ದಿ 1756 ರಲ್ಲಿ ಮರಣ ಹೊಂದಿದಾಗ ಸಿರಾಜ್-ಉದ್-ದೌಲ ಬಂಗಾಳದ ನವಾಬನಾದ. ಕೂಡಲೇ ಅವನು ತನ್ನ ಸ್ಥಾನವನ್ನು ಭದ್ರಪಡಿಸುವ ಉದ್ದೇಶದಿಂದ ಘಸೀಟಿ ಬೇಗಮಳನ್ನು ತನ್ನ ಅರಮನೆಗೆ ಎತ್ತಿಕೊಂಡು ಹೋಗಿ ಬಂಧನದಲ್ಲಿಟ್ಟ. ಇದರಿಂದ ಅವಳ ರಾಜಕೀಯ ಮಹತ್ವಾಕಾಂಕ್ಷೆ ಕೊನೆಗೊಂಡಿತು. ಕೊನೆಗೆ ಅವಳು ಪ್ರಭಾವಹೀನಳಾಗಿ ತೀರಿಕೊಂಡಳು.

ಉಲ್ಲೇಖಗಳು

[ಬದಲಾಯಿಸಿ]
  1. Iqbal, Shahriyar ZR (2012). "Ghaseti Begum". In Sirajul Islam; Miah, Sajahan; Khanam, Mahfuza; Ahmed, Sabbir (eds.). Banglapedia: the National Encyclopedia of Bangladesh (Online ed.). Dhaka, Bangladesh: Banglapedia Trust, Asiatic Society of Bangladesh. ISBN 984-32-0576-6. OCLC 52727562. OL 30677644M. Retrieved ೩೦ ಡಿಸೆಂಬರ್ ೨೦೨೪. {{cite encyclopedia}}: Check date values in: |access-date= (help)
  2. Datta, K.K. (1967). Early Career of Siraj-ud-daulah. Bengal, Past & Present: Journal of the Calcutta Historical Society. Vol. LXXXVI. Calcutta Historical Society. p. 142.
  3. Sen, Ranjit (1987). Metamorphosis of the Bengal Polity (1700–1793). Kolkata: Rabindra Bharati University. p. 87. OCLC 17918965.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: