ವಿಷಯಕ್ಕೆ ಹೋಗು

ಘರ್ಷಣಕ್ಷಯ ಪರೀಕ್ಷಣ ಯಂತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಘರ್ಷಣಕ್ಷಯ ಪರೀಕ್ಷಣ ಯಂತ್ರ ಎಂದರೆ ಜಲ್ಲಿ ಹಾಸಿದ ರಸ್ತೆಯಲ್ಲಿ ವಾಹನಗಳ ಸಂಚಾರದಿಂದ ಜಲ್ಲಿಯಲ್ಲಿ ಆಗುವ ಕ್ಷಯ, ಮಾರ್ಪಾಡು ಮುಂತಾದವನ್ನು ಪರೀಕ್ಷಿಸಲು ರಚಿಸಿರುವ ಪ್ರಯೋಗಶಾಲಾ ಪ್ರತಿರೂಪ (ಅಟ್ರಿಷನ್ ಟೆಸ್ಟಿಂಗ್ ಮಷೀನ್).[] ವಾಸ್ತವಿಕ ಪರಿಸ್ಥಿತಿಯನ್ನು ಪ್ರಯೋಗಶಾಲೆಯಲ್ಲಿ ಅನುಕರಿಸಿ ಯಂತ್ರ ಪ್ರತಿರೂಪದ ನೆರವಿನಿಂದ ಮಾರ್ಪಾಡುಗಳನ್ನು ಅಳೆಯುವುದು ಇಲ್ಲಿನ ತಂತ್ರ. ಈ ಯಂತ್ರದಲ್ಲಿ 29 cm ವ್ಯಾಸ ಮತ್ತು 34 cm ಎತ್ತರದ ಒಂದು ಉರುಳೆ ಉಂಟು. ಇದರ ಒಳಗೆ ಸುಮಾರು 1 7/8 ಅಂಗುಲ ವ್ಯಾಸದ ಹಾಗೂ 390 ರಿಂದ 445 ಗ್ರಾಮ್ ತೂಕದ 6 ಗುಂಡುಗಳಿರುತ್ತವೆ. ಪ್ರತಿ ಪರೀಕ್ಷಾ ಕಾಲದಲ್ಲೂ ಹತ್ತು ಹೆಚ್ಚು ಕಡಿಮೆ 2,500 ಗ್ರಾಮುಗಳಷ್ಟು ಕಲ್ಲನ್ನು ನಿಗದಿ ಮಾಡಲ್ಪಟ್ಟ ಪ್ರಮಾಣದಲ್ಲಿ ಉರುಳೆಯ ಒಳಗೆ ಹಾಕಬೇಕು. ಯಂತ್ರದ ಆವರ್ತನ ವೇಗ ಮಿನಿಟಿಗೆ 30-35ರ ವರೆಗೆ ಇರುತ್ತದೆ. ಈ ವೇಗದಲ್ಲಿ ಯಂತ್ರ 10,000 ಸಲ ಆವರ್ತಿಸಿದ ಬಳಿಕ ಆದರಿಂದ ಜಲ್ಲಿಯೆಲ್ಲವನ್ನೂ ಹೊರತೆಗೆದು ಅದನ್ನು ಹನ್ನೆರಡನೆಯ ಸಂಖ್ಯೆಯ ಜರಡಿಯಲ್ಲಿ ಜರಡಿ ಹಿಡಿಯಬೇಕು. ಜರಡಿಯಲ್ಲಿ ಉಳಿದ ಪದಾರ್ಥವನ್ನು ತೊಳೆದು ಆರಲು ಬಿಟ್ಟು ತರುವಾಯ ತೂಗಬೇಕು. ಹೀಗೆ ಮಾಡಿದ ತೂಕ ಅದರ ಅತಿಸಮೀಪದ ಗ್ರಾಮಿನಷ್ಟಿರಬೇಕು. ತೇಮಾನವನ್ನು ಮೂಲಪದಾರ್ಥದ ತೂಕಕ್ಕೂ, 12ನೆಯ ಸಂಖ್ಯೆಯ ಜರಡಿಯಲ್ಲಿ ನಿಂತ ವಸ್ತುವಿನ ತೂಕಕ್ಕೂ ಉಂಟಾದ ಅಂತರವೆಂಬುದಾಗಿಯೂ, ಪ್ರಾರಂಭದಲ್ಲಿ ಪರೀಕ್ಷೆಗಾಗಿ ಉಪಯೋಗಿಸಿದ್ದ ಪ್ರತಿರೂಪ ವಸ್ತುವಿನ ಸೇಕಡವಾರು ತೂಕವೆಂಬುದಾಗಿಯೂ ಪರಿಗಣಿಸಬೇಕು. ಈ ತೇಮಾನ 2% ಇದ್ದರೆ ಅಂಥ ಜಲ್ಲಿ ಅತ್ಯುತ್ತಮವಾದುದೆಂದೂ 7% ಇದ್ದರೆ ಅಂಥ ಜಲ್ಲಿ ಸಾಮಾನ್ಯವಾಗಿ ತೃಪ್ತಿಕರವಾದುದೆಂದೂ ನಿರ್ಧರಿಸಲಾಗಿದೆ.

ಉಲ್ಲೇಖಗಳು

[ಬದಲಾಯಿಸಿ]