ವಿಷಯಕ್ಕೆ ಹೋಗು

ಘರ್ಷಕ ಪರೀಕ್ಷಣ ಯಂತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಘರ್ಷಕ ಪರೀಕ್ಷಣ ಯಂತ್ರವು ಪರಸ್ಪರಾಭಿಮುಖವಾದ ಎರಡು ವಸ್ತುಗಳು ಒಂದನ್ನೊಂದು ಉಜ್ಜಿದಾಗ ಅವುಗಳ ಮೇಲ್ಮೈಯಲ್ಲಿ ಉಂಟಾಗುವ ಸವೆತವನ್ನು ಅಳೆಯಲು ಬಳಸುವ ಯಂತ್ರ (ಅಬ್ರೇಷನ್ ಟೆಸ್ಟಿಂಗ್ ಮಷೀನ್).[] ಸಾಮಾನ್ಯವಾಗಿ ಇಲ್ಲಿ ಬಳಸುವ ಯಂತ್ರದ ಹೆಸರು ಡಾರಿಯ ಪರೀಕ್ಷಾಯಂತ್ರ (Dorry's testing machine). ಇದಕ್ಕೆ ದುಂಡನೆಯ, ತಿರುಗುವ ಒಂದು ಉಕ್ಕಿನ ಬಟ್ಟು ಉಂಟು. ಪರೀಕ್ಷೆಗೆ ಒಳಗಾಗುವ ಕಲ್ಲಿನ ಪ್ರಮಾಣ ಒಂದು ಅಂಗುಲ ವ್ಯಾಸ ಮತ್ತು ಒಂದು ಅಂಗುಲ ಎತ್ತರ ಇರಬೇಕು. ಇಂಥ ಕಲ್ಲನ್ನು ಮೊದಲು ತೂಕ ಮಾಡಿ ಇದನ್ನು ಉಕ್ಕಿನ ಬಟ್ಟಿನ ಮೇಲಿಟ್ಟು 1,250 ಗ್ರಾಮುಗಳಷ್ಟು ಒತ್ತಡಕ್ಕೆ ಗುರಿಪಡಿಸಬೇಕು. ಅನಂತರ ಉಕ್ಕಿನ ಬಟ್ಟನ್ನು ಮಿನಿಟಿಗೆ 28 ಸುತ್ತುಗಳಂತೆ ಆವರ್ತಿಸಬೇಕು. ಹೀಗೆ ಸುತ್ತುತ್ತಿರುವಾಗ ದಪ್ಪವಾದ ಮರಳನ್ನು ಅದರ ಮೇಲೆ ನಿಧಾನವಾಗಿ ಉದುರಿಸಬೇಕು. ಪರೀಕ್ಷೆಗೆ ಒಳಗಾಗಿರುವ ಕಲ್ಲು ಆಗ ದಪ್ಪವಾದ ಮರಳಿನೊಡನೆ ಸಂಪರ್ಕವನ್ನು ಪಡೆದಿರುವುದು. ಉಕ್ಕಿನ ಬಟ್ಟು 1000 ಸುತ್ತು ಸುತ್ತಬೇಕು. ಹೀಗೆ ಸುತ್ತುವಾಗ ಮರಳಿನ ಮೂಲಕ ಪರೀಕ್ಷೆಗೆ ಗುರಿಯಾದ ಕಲ್ಲಿನೊಡನೆ ಸಂಪರ್ಕ ಹೊಂದಿರುವಂತೆ ನೋಡಿಕೊಳ್ಳಬೇಕು. ಈ ಕಾರ್ಯ ನಡೆಯುತ್ತಿರುವಾಗ ಮರಳಿನಿಂದ ತರಿಯಾಗಿರುವ ಬಟ್ಟಿನ ಮೇಲ್ಮೈಗೆ ಕಲ್ಲಿನ ತಳಭಾಗ ಸಿಕ್ಕಿ ಉಜ್ಜಲ್ಪಟ್ಟು ಸವೆತ ಉಂಟಾಗುತ್ತದೆ. ಕಾಠಿಣ್ಯ ಗುಣಾಂಕವನ್ನು (ಕೋಎಫಿಷಂಟ್ ಆಫ್ ಹಾರ್ಡ್‌ನೆಸ್) ಈ ಕೆಳಗಣ ಸೂತ್ರದಿಂದ ನಿರ್ಧರಿಸಬಹುದು.

ಈ ಸೂತ್ರದಿಂದ ನಿರ್ಧರಿಸಲ್ಪಟ್ಟ ಕಾಠಿನ್ಯ ಗುಣಾಂಕ ವಸ್ತುವಿನ ಘರ್ಷಕತ್ವವನ್ನು ಸೂಚಿಸುತ್ತದೆ. C ಯ ಗುಣಾಂಕ 14ಕ್ಕಿಂತ ಕಡಿಮೆ ಇದ್ದರೆ ಅದು ರಸ್ತೆಯ ಉಪಯೋಗಕ್ಕೆ ಯೋಗ್ಯವಲ್ಲ. 14 ರಿಂದ 17ರ ವರೆಗಿದ್ದರೆ ಅದು ಮಧ್ಯಮ ದರ್ಜೆಯದು, 17ಕ್ಕಿಂತ ಹೆಚ್ಚಿದ್ದರೆ ತೃಪ್ತಿಕರ.

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: