ವಿಷಯಕ್ಕೆ ಹೋಗು

ಗ್ರಹಮ್ ಸ್ಟೇನ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗ್ರಹಮ್ ಸ್ಟೂಅರ್ಟ್ ಸ್ಟೇನ್ಸ್ (೧೯೪೧ - ಜನವರಿ ೧೯೯೯) ಅವರು ೧೯೬೫ನೇ ಇಸವಿಯಲ್ಲಿ ಭಾರತಕ್ಕೆ ಬಂದು, ಒರಿಸ್ಸ ರಾಜ್ಯದಲ್ಲಿ ನೆಲೆಸಿದ ಆಸ್ಟ್ರೇಲಿಯದ ಒಬ್ಬ ಮಿಷನರಿಯಾಗಿದ್ದರು. ಇವರು ಒರಿಸ್ಸದಲ್ಲಿನ ಕುಷ್ಠ ರೋಗಿಗಳ ಮಧ್ಯೆ ಸೇವೆ ಸಲ್ಲಿಸುತ್ತಿದ್ದರು.

ಜೀವನ ಚರಿತ್ರೆ[ಬದಲಾಯಿಸಿ]

 • ಗ್ರಹಮ್ ಸ್ಟೇನ್ಸ್ ಅವರು ೧೯೪೧ನೆ ಇಸವಿಯಲ್ಲಿ ಆಸ್ಟ್ರೇಲಿಯ ಖಂಡದ ಕ್ವೀನ್ಸ್‌ಲೆಂಡ್‌ನಲ್ಲಿನ ಪಾಮ್ಸ್‌ವುಡ್ ಎಂಬ ಊರಿನಲ್ಲಿ ಜನಿಸಿದರು. ಇವರು ೧೯೬೫ರಲ್ಲಿ ಪ್ರಥಮ ಬಾರಿಗೆ ಭಾರತಕ್ಕೆ ಆಗಮಿಸಿ ಇವ್ಯಾಂಜಲಿಕಲ್ ಮಿಷನರಿ ಸೊಸೈಟಿ ಆಫ್ ಮಯೂರ್‌ಬಂಜ್ (EMSM) ಎಂಬ ಸಂಸ್ಥೆಯನ್ನು ಸೇರಿ ಅಲ್ಲಿನ ಬುಡಕಟ್ಟು ಜನಾಂಗದವರ ಮಧ್ಯದಲ್ಲಿ ಸೇವೆ ಮಾಡಿದರು. ಸ್ಟೇನ್ಸ್‌ರವರು ಮಿಷನ್ನಿನ ಆಡಳಿತ ಕಾರ್ಯ ನಿರ್ವಹಣೆಯ ಜವಾಬ್ದಾರಿಯನ್ನು ೧೯೮೩ರಲ್ಲಿ ಹೊತ್ತರು.
 • ಇದಲ್ಲದೆ ಮಯೂರ್‌ಬಂಜ್ ಲೆಪ್ರಸಿ ಹೋಮನ್ನು ನೋಂದಾಯಿಸಲ್ಪಟ್ಟ ಸಂಸ್ಥೆಯನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರು ೧೯೮೧ರ ಜೂನ್ ತಿಂಗಳಿನಲ್ಲಿ ಗ್ಲ್ಯಾಡಿಸ್ ಎಂಬುವರನ್ನು ಸಂಧಿಸಿ ೧೯೮೩ನೆ[೧] ಇಸವಿಯಲ್ಲಿ ಅವರನ್ನು ವಿವಾಹವಾದರು. ಅವರಿಬ್ಬರೂ ಕೊನೆಯವರೆಗು ಒರಿಸ್ಸದಲ್ಲಿನ ಕುಷ್ಠರೋಗಿಗಳ ಮಧ್ಯೆ ಸೇವೆ ಸಲ್ಲಿಸಿದರು. ಅವರಿಗೆ ಮೂವರು ಮಕ್ಕಳಿದ್ದರು, ಎಸ್ತೇರ್ ಎಂಬ ಮಗಳು, ತಿಮೋಥಿ ಮತ್ತು ಫಿಲಿಪ್ ಎಂಬ ಗಂಡು ಮಕ್ಕಳು.

ಮರಣ ಮತ್ತು ನಂತರದ ಘಟನೆಗಳು[ಬದಲಾಯಿಸಿ]

 • ಗ್ರಹಮ್ ಸ್ಟೇನ್ಸ್ ಅವರು ೧೯೯೯ರ ಜನವರಿ ತಿಂಗಳಿನ ೨೨ನೆ ತಾರೀಖಿನಂದು ರಾತ್ರಿ ಬುಡಕಟ್ಟು ಜನರ ನಡುವೆ ನಡೆದ ಒಂದು ವಾರ್ಷಿಕ ಕ್ರೈಸ್ತ ಜಾತ್ರೆಯಲ್ಲಿ ಭಾಗವಹಿಸಿ ಬಂದು ತಮ್ಮ ಇಬ್ಬರು ಗಂಡು ಮಕ್ಕಳೊಡನೆ ಅವರ ಮಹೀಂದ್ರ ಜೀಪಿನಲ್ಲಿ ಮಲಗಿದ್ದರು. ಇವರನ್ನು ಮತ್ತು ಇವರ ಇಬ್ಬರು ಎಳೆ ಪ್ರಾಯದ ಗಂಡು ಮಕ್ಕಳಾದ ತಿಮೋಥಿ (ವಯಸ್ಸು ೯ ವರ್ಷಗಳು) ಮತ್ತು ಫಿಲಿಪ್ (ವಯಸ್ಸು ೭ ವರ್ಷಗಳು) ಅವರನ್ನು ೧೯೯೯ ಇಸವಿಯ ಜನವರಿ ತಿಂಗಳಿನಲ್ಲಿ ಒರಿಸ್ಸದಲ್ಲಿನ ಮನೋಹರಪುರ ಎಂಬ ಹಳ್ಳಿಯಲ್ಲಿ ತಮ್ಮ ಜೀಪಿನಲ್ಲಿ ಮಲಗಿಕೊಂಡಿದ್ದಾಗ ಮೂವರನ್ನು ಸಜೀವ ದಹನ ಮಾಡಲಾಗಿತ್ತು.
 • ಇವರ ಮೇಲೆ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ [೧] ಮಾಡುತ್ತಿರುವರು ಎಂದು ಆರೋಪಿಸಲಾಗಿತ್ತು. ಈ ಘಟನೆಯ ಹಿನ್ನೆಲೆಯಲ್ಲಿ ಮುಖ್ಯ ಆರೋಪಿಯಾದ ದಾರಾ ಸಿಂಗ್ ಎಂಬ ವ್ಯಕ್ತಿಗೆ ಮರಣ ದಂಡನೆಯನ್ನು ಮತ್ತು ಇತರ ೧೨ ಮಂದಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿತ್ತು.
 • ಮಯೂರ್‌ಬಂಜ್ ಪೋಲೀಸರು ನಡೆಸಿದ ಪ್ರಥಮ ತನಿಖೆಯಲ್ಲಿ ದಾರಾ ಸಿಂಗ್ ಎಂಬ ವ್ಯಕ್ತಿಯ ಕೈವಾಡ ಎತ್ತಿ ತೋರುತ್ತಿತ್ತು. ದಾರಾ ಸಿಂಗ್ ಎಂಬುದು ರವೀಂದ್ರ ಪಾಲ್ ಸಿಂಗ್ ಎಂಬುವರ ನಾಮಧೇಯ. ಇವರು ೧೯೮೯ರಿಂದ ಆ ಭಾಗದಲ್ಲಿನ ಹಿಂದು ಸಮಾಜದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದರು.
 • ೧೯೯೯ರ ಜನವರಿ ೨೯ರಂದು ಭಾರತ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಡಿ.ಪಿ.ವಧ್ವ ಎಂಬುವರ ನೇತೃತ್ವದಲ್ಲಿ ಸ್ಟೇನ್ಸ್‌ರವರ ಕೊಲೆಯನ್ನು ನ್ಯಾಯಾಂಗ ನಿಯೋಗದ ತನಿಖೆಗೆ ಒಪ್ಪಿಸಲಾಯಿತು. ಈ ನಿಯೋಗವು ಮೊದಲು ೨ ತಿಂಗಳಿನಲ್ಲಿ ತನ್ನ ವರದಿಯನ್ನು ಸಲ್ಲಿಸುವಂತೆ ನಿರ್ಧರಿಸಲಾಗಿತ್ತು. ನಂತರ ಮಾರ್ಚಿ ೧೯೯೯ರಲ್ಲಿ ಅದನ್ನು ೫ ತಿಂಗಳಿಗೆ ಏರಿಸಲಾಯಿತು. ಅದೇ ತಿಂಗಳಿನಲ್ಲಿ ಈ ಮೊಕದ್ದಮೆಯನ್ನು ರಾಜ್ಯ ಪೋಲೀಸರಿಂದ ಸಿಬಿಐಗೆ ವಹಿಸಲಾಯಿತು.
 • ಈ ನಿಯೋಗವು ೧೯೯೯ರ ಜೂನ್ ತಿಂಗಳಿನಲ್ಲಿ ದಾರಾ ಸಿಂಗ್ ಅವರನ್ನು ದುಷ್ಕರ್ಮಿಯನ್ನಾಗಿ ನೇಮಿಸಿ ತನ್ನ ವರದಿಯನ್ನು ಸಲ್ಲಿಸಿತು. ಇದರ ಮಾರನೆಯ ದಿನವೆ ಸಿಬಿಐ ಈ ಘಟನೆಯಲ್ಲಿ ಕೈವಾಡವಿದ್ದ ಎಲ್ಲಾ ಜನರ ವಿರುದ್ಧ ಚಾರ್ಜ್‌ಷೀಟ್‌ಗಳನ್ನು ಸಲ್ಲಿಸಿತು. ೨೦೦೦ ಇಸವಿಯ ಜನವರಿ ತಿಂಗಳಿನಲ್ಲಿ ದಾರಾ ಸಿಂಗ್ ಅವರನ್ನು ಮಯೂರ್‌ಬಂಜ್ ಜಿಲ್ಲೆಯ ಕಾಡಿನಲ್ಲಿ ಸೆರೆಹಿಡಿಯಲಾಯಿತು.
 • ಮಾರ್ಚಿ ೨೦೦೧ರಲ್ಲಿ ಸಿಬಿಐ ನೇಮಿಸಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನ್ಯಾಯವಿಚಾರಣೆ ಪ್ರಾರಂಭವಾಯಿತು. ಫೆಬ್ರವರಿ ೨೦೦೨ರಲ್ಲಿ ಮಹೇಂದ್ರ ಹೆಂಬ್ರಮ್ ಎಂಬ ವ್ಯಕ್ತಿ ಈ ಘಟನೆಯಲ್ಲಿ ತಾನೆ ಒಂಟಿಗನಾದ ಆರೋಪಿ ಮತ್ತು ಇತರರೆಲ್ಲರೂ ನಿರ್ದೋಷಿಗಳು ಎಂದು ಹೇಳಿಕೆ ನೀಡಿದರು. ಏಪ್ರಿಲ್ ೨೦೦೩ರಲ್ಲಿ ದಯಾನಿಧಿ ಪಾತ್ರ ಎಂಬ ವ್ಯಕ್ತಿ ದಾರಾ ಸಿಂಗ್ ಸ್ಟೇನ್ಸ್‌ರವರ ಜೀಪಿಗೆ ಬೆಂಕಿ ಹಚ್ಚುವಾಗ ಆ ಸ್ಥಳದಲ್ಲಿ ಹಾಜರಿದ್ದುದನ್ನು ಹೇಳಿಕೊಂಡರು.
 • ನ್ಯಾಯವಿಚಾರಣೆಯು ಆಗಸ್ಟ್ ೨೦೦೩ರಲ್ಲಿ ಅಂತ್ಯಗೊಂಡಿತು. ಸೆಪ್ಟಂಬರ್ ೨೦೦೩ರಲ್ಲಿ ದಾರಾ ಸಿಂಗ್ ಮತ್ತು ಹೆಂಬ್ರಮ್ ಮುಖ್ಯವಾದ ಆರೋಪಿಗಳೆಂದು ನ್ಯಾಯಾಲಯ ತೀರ್ಪು ನೀಡಿತು. ಸ್ಟೇನ್ಸ್‌ರವರ ಹೆಂಡತಿಯಾದ ಗ್ಲ್ಯಾಡಿಸ್ ಸ್ಟೇನ್ಸ್‌ರವರು ಈ ಘಟನೆಗೆ ಕಾರಣರಾದವರೆಲ್ಲರಿಗೂ ಕ್ಷಮಾಪಣೆಯನ್ನು ನೀಡಿರುವೆನೆಂದು ಹೇಳಿದ್ದಾಗ್ಯೂ ದಾರಾ ಸಿಂಗ್ ಅವರಿಗೆ ಮರಣ ದಂಡನೆಯನ್ನೂ ಮತ್ತು ಇತರ ೧೨ ಮಂದಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತು[೨].

ಆದರೂ ೨೦೦೫ರ ಮೇ ತಿಂಗಳಿನಲ್ಲಿ ಒರಿಸ್ಸ ಉಚ್ಚ ನ್ಯಾಯಾಲಯ ಮರಣ ದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತು[೩] ಮತ್ತು ಇತರರೆಲ್ಲರನ್ನು ಬಿಡುಗಡೆಗೊಳಿಸಿತು. ಓರಿಸ್ಸ ಉಚ್ಚ ನ್ಯಾಯಾಲಯದ ತೀರ್ಪನ್ನು [೪]ಆಕ್ಷೇಪಿಸಿ ಮಹೇಂದ್ರ ಹೆಂಬ್ರಮ್ ಸಲ್ಲಿಸಿದ ಅರ್ಜಿಯ ಮೇರೆಗೆ ಆತನು ಟ್ರಯಲ್ ಕೋರ್ಟಿನ ಮುಂದೆ, ಸ್ಟೇನ್ಸ್ ಅವರನ್ನು ತಾನೆ ಕೊಂದೆನೆಂದು, ನೀಡಿದ ತಪ್ಪೊಪ್ಪಿಗೆಯ ಹೇಳಿಕೆಯನ್ನು ಪರಿಗಣಿಸಬೇಕೆಂದು ಸರ್ವೋಚ್ಚ ನ್ಯಾಯಾಲಯ ಸಿಬಿಐಗೆ ಸೂಚನೆ ನೀಡಿತು.

ಅವಗಾಹನೆಗಳು[ಬದಲಾಯಿಸಿ]

 1. ೧.೦ ೧.೧ Graham Stewart Staines: His Background Archived 2011-04-09 ವೇಬ್ಯಾಕ್ ಮೆಷಿನ್ ನಲ್ಲಿ. hvk.org website
 2. The Staines case verdict Archived 2010-09-01 ವೇಬ್ಯಾಕ್ ಮೆಷಿನ್ ನಲ್ಲಿ. V. Venkatesan, Frontline Magazine, Oct 11-23, 2003.
 3. Staines murder: Dara Singh's death sentence commuted to life term rediff.com May 19, 2005
 4. Supreme Court issues notice to CBI in Staines case Archived 2012-10-11 ವೇಬ್ಯಾಕ್ ಮೆಷಿನ್ ನಲ್ಲಿ., Daijiworld.com, March 20, 2007.


ಹೊರಗಿನ ಸಂಪರ್ಕಗಳು[ಬದಲಾಯಿಸಿ]