ಗೃಹಭಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೃಹಭಂಗ
ಲೇಖಕರುಎಸ್.ಎಲ್.ಭೈರಪ್ಪ
ದೇಶಭಾರತ
ಭಾಷೆಕನ್ನಡ
ಪ್ರಕಾರಕಾದಂಬರಿ
ಪ್ರಕಾಶಕರುಸಾಹಿತ್ಯ ಭಂಡಾರ, ಬೆಂಗಳೂರು
ಪ್ರಕಟವಾದ ದಿನಾಂಕ
1970
ಮಾಧ್ಯಮ ಪ್ರಕಾರಮುದ್ರಿತ (Paperback & Hardback)
ಮುಂಚಿನತಬ್ಬಲಿಯು ನೀನಾದೆ ಮಗನೆ (1968)
ನಂತರದನಿರಾಕರಣ (1971)
ಲೇಖಕ ಎಸ್. ಎಲ್. ಭೈರಪ್ಪ

ಗೃಹಭಂಗ ಕನ್ನಡದ ಪ್ರಮುಖ ಕಾದಂಬರಿಕಾರರಲ್ಲಿ ಒಬ್ಬರಾದ ಎಸ್.ಎಲ್.ಭೈರಪ್ಪನವರ ಒಂದು ಪ್ರಸಿದ್ಧ ಕಾದಂಬರಿ. ೧೯೨೦ರ ನಂತರ ಪ್ರಾರಂಭವಾಗುವ ಇದರ ಕಥಾವಸ್ತು, ೧೯೪೦-೪೫ರ ಸುಮಾರಿಗೆ ಮುಗಿಯುತ್ತದೆ. ತಿಪಟೂರು, ಚೆನ್ನರಾಯಪಟ್ಟಣ ತಾಲ್ಲೂಕುಗಳನ್ನೊಳಗೊಂಡ ಭಾಗದ ಪ್ರಾದೇಶಿಕ ಹಿನ್ನೆಲೆಯನ್ನು ಈ ಕಾದಂಬರಿ ಹೊಂದಿದೆ.

ಪರಿಚಯ[ಬದಲಾಯಿಸಿ]

  • ಯಾವುದೇ ಬೌದ್ಧಿಕ ಜಿಜ್ಞಾಸೆಯ, ತಾತ್ತ್ವಿಕ, ವೈಚಾರಿಕ ವಿಶ್ಲೇಷಣೆಗಳ ಹಂಗಿಲ್ಲದೆ, ಬದುಕನ್ನು ಕೇವಲ ಬದುಕಾಗಿ ನೋಡುವ ಸಾಕ್ಷಿಪ್ರಜ್ಞೆಯ ಸೃಜನಾತ್ಮಕ ಕೃತಿ ‘ಗೃಹಭಂಗ’.
  • ಯಾವುದೇ ಸಿದ್ಧಾಂತದ ವ್ಯಾಖ್ಯೆಗೂ ನಿಲುಕದ ಬದುಕಿನ ಒಳನೋಟಗಳ ಸಂಕೀರ್ಣ ವಿನ್ಯಾಸಗಳ ದರ್ಶನ ಮಾಡಿಸುವ ಈ ಕಾದಂಬರಿ, ಬದುಕಿಗೆ ಬದುಕೇ ಬರೆದ ಭಾಷ್ಯ.
  • ‘ಗೃಹಭಂಗ’ ಭಾರತದ ಎಲ್ಲ ಭಾಷೆಗಳಿಗೂ ಅನುವಾದವಾಗಿ ಎಲ್ಲ ಭಾಷೆಗಳ ಓದುಗರನ್ನು ಸೆರೆಹಿಡಿದು, ಸಮಕಾಲೀನ ಭಾರತೀಯ ಕಾದಂಬರಿಗಳಲ್ಲಿ ಅಗ್ರಮಾನ್ಯತೆ ಪಡೆದಿದೆ.
  • ಕಾದಂಬರಿಕಾರರು ತಮ್ಮ ಕಾದಂಬರಿಯ ಬಗ್ಗೆ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.- ಗೃಹಭಂಗ ಎಂಬುದು ಈ ಕೃತಿಯ ಕೇಂದ್ರಕಲ್ಪನೆ ಯಲ್ಲ. ಮೇಲೆ ಹೇಳಿದ ಅವಧಿಯಲ್ಲಿ ನಡೆಯಬಹುದಾದ ಜೀವನ ಚಿತ್ರಣದ ಪ್ರಯತ್ನವೇ ಇದರ ದೃಷ್ಟಿ.
  • ಇಲ್ಲಿ ಮನೆ ಒಡೆಯುವುದು, ಮುರಿಯುವುದು ಮಾತ್ರವಲ್ಲ; ಪ್ಲೇಗು, ಕಜ್ಜಿ, ಬರ, ಮೊದಲಾಗಿ ಇನ್ನೂ ಎಷ್ಟೋ ಸಂಗತಿಗಳು, ವಿವಿಧ ರೀತಿಯ ಪಾತ್ರಗಳು ಬರುತ್ತವೆ. ಇವು ಮೂಡಿ ನಡೆದಂತೆ ಒಂದು ಜೀವನ ದೃಷ್ಟಿಯ ಹಿನ್ನೆಲೆಯಲ್ಲಿ ಮಸುಕು ಮಸುಕಾಗಿ ಕಾಣಬಹುದು.

ಗೃಹಭಂಗ - ಈ ಹೆಸರು ಹೇಗೆ ಬಂತು?-(ಕಾದಂಬರಿಕಾರರ ಅಭಿಪ್ರಾಯ)[ಬದಲಾಯಿಸಿ]

  • ಕಾದಂಬರಿಗೆ ಇಟ್ಟಿರುವ ಗೃಹಭಂಗ ಎಂಬ ಹೆಸರು ಹೇಗೆ ಬಂದಿತೆನ್ನುವ ಬಗ್ಗೆಯೂ ಭೈರಪ್ಪನವರು ತಮ್ಮ ಕಾದಂಬರಿಯ ಮುನ್ನುಡಿಯಲ್ಲಿ ವಿವರಿಸಿದ್ದಾರೆ - ಕೆಲವು ಬಾರಿ ಕೃತಿ ರಚನೆಯಾಗುವಾಗ, ಅಥವಾ ಅದಕ್ಕಿಂತ ಮೊದಲೇ, ಹೆಸರು ಹೊಳೆದು ಬಿಡುತ್ತದೆ.
  • ಮತ್ತೆ ಕೆಲವು ಬಾರಿ ಬರೆದು ಎರಡು ವರ್ಷ ಸಂದು, ತಲೆಗೂದಲ ಮಧ್ಯೆ ಬೆರಳು ತೂರಿಸಿ ಯೋಚಿಸಿದರೂ ಹೊಳೆಯುವುದಿಲ್ಲ. ಯೋಚಿಸಿ ಯೋಚಿಸಿ ಕೊನೆಗೆ ``ಯಾವುದಾದರೇನು? ಹೆಸರೇ ಬೇಡ. 'ಎಸ್.ಎಲ್. ಭೈರಪ್ಪ: ಕಾದಂಬರಿ ಸಂಖ್ಯೆ: ೮' ಎಂದು ಯಾಕೆ ಇಡಬಾರದು? ಎಂಬ ವಿಚಾರ ಹುಟ್ಟಿತ್ತು.
  • ವಸ್ತುವು ಹಲವು ಪಾರ್ಶ್ವಗಳುಳ್ಳದ್ದಾಗಿರುವಾಗ ಹೆಸರು ವಾಚಕರ ಗಮನವನ್ನೆಲ್ಲ ಒಂದೇ ಪಾರ್ಶ್ವದಲ್ಲಿ ಎಳೆದು ನಿಲ್ಲಿಸಿ, ಉಳಿದ ಭಾಗಗಳನ್ನು ಮಬ್ಬುಮಾಡುವ ಅಪಾಯವಿರುತ್ತದೆ. ಆದುದರಿಂದ ಯಾವ ಸಾಹಿತ್ಯ ಕೃತಿಯನ್ನು ಓದಿ ಗ್ರಹಿಸಬೇಕಾದರೂ ಲೇಖಕನು ಇಟ್ಟಿರುವ ಹೆಸರನ್ನು ಆರಂಭದಲ್ಲಿಯೇ ಪ್ರತ್ಯೇಕಿಸುವುದು ಕ್ಷೇಮ.
  • ಇವೆಲ್ಲವನ್ನೂ ಸಮಗ್ರವಾಗಿ ಧ್ವನಿಸುವ ಹೆಸರು ನನಗೆ ತಿಳಿಯಲಿಲ್ಲ. ಹಸ್ತಪ್ರತಿಯನ್ನು ಓದಿ ವಿವರವಾಗಿ ಟೀಕೆ ಟಿಪ್ಪಣಿ ಮಾಡಿ, ತಿದ್ದಲು ಸಹಾಯಕರಾದ ದಿಲ್ಲಿ ಆಕಾಶವಾಣಿಯ ಎಂ.ಶಂಕರ್, ಬೆಂಗಳೂರಿನ ಎಂ.ಎಸ್.ಕೆ. ಪ್ರಭು ಇವರಿಗೂ ಹೊಳೆಯಲಿಲ್ಲ.
  • ಹೆಸರಿಡದೆ ಪ್ರಕಟವಾಗುವುದು ಸಾಧ್ಯವಿಲ್ಲ. ಪ್ರಕಟಣೆಯ ಘಟ್ಟದಲ್ಲಿ ಯಾವುದೋ ಒಂದನ್ನು ಇಡಲೇಬೇಕೆಂದು ಹಟಹಿಡಿದಾಗ, `ಗೃಹಭಂಗ' ಎಂದು ಮನಸ್ಸಿಗೆ ಬಂತು, ಇಟ್ಟಿದ್ದೇನೆ.

ಕಥಾವಸ್ತು[ಬದಲಾಯಿಸಿ]

  • ಸರಳವಾದ ಆಡುನುಡಿಯಲ್ಲಿ ಲೇಖಕರ ವಿವರಣೆ ಮೂಡಿಬಂದಿರುವುದರಿಂದ ಇಲ್ಲಿನ ಚಿತ್ರಣ ನಮ್ಮ ಸುತ್ತಮುತ್ತವೇ ನಡೆದ ಘಟನೆಗಳು ಎನಿಸುತ್ತವೆ. ಬ್ರೀಟಿಷರ ಕಾಲದ ಹಳ್ಳಿಗಳು ಹಾಗು ಹಳ್ಳಿಯ ಸೊಗಡು ಕಾದಂಬರಿಯಲ್ಲಿ ನೈಜವಾಗಿ ಮೂಡಿ ಬಂದಿದೆ.
  • ಅನೇಕ ಪಾತ್ರಗಳಲ್ಲಿ ಕಥೆಗೆ ಆಧಾರ ಪಾತ್ರ ಎಂದು ಹೇಳಬಹುದಾದ “ನಂಜಮ್ಮ” ಬದುಕನ್ನು ಸ್ವೀಕರಿಸುವ ರೀತಿ, ಆಕೆ ಅನುಸರಿಸಿದ ನೈತಿಕ ಪದ್ದತಿಗಳು, ಅನ್ಯಾಯದ ವಿರುದ್ದ ಸಿಡಿದು ಬೀಳುವ ಪರಿ ಎಲ್ಲವೂ ಸುಂದರವಾಗಿ ಮೂಡಿದೆ.
  • ಅತ್ತೆ, ಸೊಸೆ ಹಾಗು ಮಗಳ ಮೂಲಕ ಮೂರು ತಲೆಮಾರುಗಳ ಹೆಣ್ಣಿನ ಸಂವೇದನೆಗಳನ್ನು, ಕಾದಂಬರಿಯಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದಾರೆ. ಜೊತೆಗೆ ಮಾದೇವಯ್ಯನವರ ಪಾತ್ರ, ಅಲೆಮಾರಿ ಬದುಕಿನಲ್ಲೂ ಸಂಸ್ಕೃತಿ ಹೇಗೆ ಕಾಪಾಡಿಕೊಂಡರು ಎಂದು ಬಿಂಬಿತವಾಗುತ್ತದೆ.
  • ಅದಲ್ಲದೆ ಒಬ್ಬ ತಾಯಿ (ಗಂಗಮ್ಮ) ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದೆ, ಸರ್ವಾಧಿಕಾರಿ ಧೋರಣೆಯಿಂದ ಬದುಕಿದರೆ, ಮಕ್ಕಳು ಹೇಗೆ ಹದಗೆಡುತ್ತಾರೆ ಎನ್ನುವುದೂ ಕೂಡ ಬದುಕಿನ ಪಾಠವಾಗಿ ಸಾಬೀತಾಗುತ್ತದೆ.
  • ಆದರೆ ಪೇಟೆಯಲ್ಲಿ ಬೆಳೆದು, ಮದುವೆ ಆಗಿ ಹಳ್ಳಿಗೆ ಬಂದು, ಹಳ್ಳಿಯ ಸಂಸ್ಕೃತಿಗೆ ಒಗ್ಗದೆ, ಪೇಟೆಯ ಧ್ಯಾನದಲ್ಲೇ ದಿನಕಳೆಯುವ ಹೆಣ್ಣಿನ ಇನ್ನೊಂದು ಮುಖ ಚಿತ್ರಿತವಾಗಿದೆ. ಇದರಿಂದ ಕುಟುಂಬದ ಮೇಲಾಗುವ ಪರಿಣಾಮವೂ ಚಿತ್ರಿತವಾಗಿದೆ.
  • ಸಾವಿನ ದವಡೆಯಲ್ಲಿ, ಸಿಕ್ಕಿದ ಮಕ್ಕಳನ್ನು ಕಂಡು ನಂಜಮ್ಮ ಕೊರಗುವ ಸ್ಥಿತಿ, ಹಾಗು ಸಾವು ಸಾರ್ವಕಾಲಿಕ ಸತ್ಯ ಎಂದು ನಂಬಿ ಮತ್ತೆ ಬದುಕಿಗೆ ಮುಖ ಮಾಡುವ ರೀತಿ, ಬದುಕಿನ ನೈಜತೆಯನ್ನು ಬಿಂಬಿಸುತ್ತದೆ.
  • ನಂಜಮ್ಮನ ಕುಟುಂಬ ನಾಶವಾಗಿ, ನಂಜಮ್ಮನ ಕೊನೆ ಮಗ “ವಿಶ್ವ” ನನ್ನು ಮಾದೇವಯ್ಯನವರು ಕರೆದುಕೊಂಡು ಊರು ಬಿಟ್ಟು ಹೋಗುವಾಗ, ವಿಶ್ವನ ಅಪ್ಪನ ನಿರ್ಲಿಪ್ತತೆ, ಅವನ ಉದಾಸೀನತೆಯನ್ನು ತೋರಿಸುತ್ತದೆ.

ಗೃಹಭಂಗ ಕಿರುತೆರೆ ಧಾರಾವಾಹಿಯಾಗಿ[ಬದಲಾಯಿಸಿ]

  • ಈ ಕೃತಿಯ ಟಿವಿ ರೂಪಾಂತರ ೨೦೦೪-೨೦೦೫ ರಲ್ಲಿ ಈಟಿವಿ ವಾಹಿನಿಯಲ್ಲಿ ಪ್ರಸಾರವಾಯಿತು. ಜೀವನದ ಏರಿಳಿತಗಳಿಂದ ಧೃತಿಗೆಡದೆ ಜೀವನವನ್ನು ಕೇವಲ ಜೀವನವಾಗಿಯೆ ಕಾಣುವಂತ ಓರ್ವ ಅತಿ ಸಾಧಾರಣ ಗೃಹಿಣಿಯ ಕಥೆ.
  • ಈ ಧಾರಾವಾಹಿಯ ನಿರ್ದೇಶಕರು ಗಿರೀಶ್ ಕಾಸರವಳ್ಳಿ ಹಾಗೂ ಮುಖ್ಯ ಪಾತ್ರದಲ್ಲಿ ಮಾಳವಿಕಾ ಅವಿನಾಶ್ ನಟಿಸಿದ್ದಾರೆ. ಇದರ ಶೀರ್ಷಿಕೆ ಗೀತೆಯನ್ನು ರತ್ನಮಾಲಾ ಪ್ರಕಾಶ್ ಹಾಡಿದ್ದಾರೆ.
  • ಗೀತೆಯ ಒಂದು ಸಾಲು - "ಎಲ್ಲ ಸಹಿಸಿ ಮುಂದೆ ಪಯಣ ಬದುಕೇ ವಿಸ್ಮಯರಂಗ..." ಈ ಕೃತಿಯ ಸಮಸ್ತ ಭಾವವನ್ನು ಪ್ರತಿಬಿಂಬಿಸುತ್ತಿದೆ ಎಂಬುದು ಧಾರಾವಾಹಿ ವೀಕ್ಷಿಸಿದವರ ಅಭಿಪ್ರಾಯವಾಗಿದೆ. ಗೃಹಭಂಗ ಭೈರಪ್ಪನವರ ಜೀವನವನ್ನೇ ಬಿಂಬಿಸುತ್ತದೆ ಎಂಬುದು ವಿಮರ್ಶಕರ ಅಭಿಪ್ರಾಯವಾಗಿದೆ.

ಹೊರಗಿನ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಗೃಹಭಂಗ&oldid=1054888" ಇಂದ ಪಡೆಯಲ್ಪಟ್ಟಿದೆ