ವಿಷಯಕ್ಕೆ ಹೋಗು

ಗುಂಡೇರಿ

Coordinates: 13°59′40″N 76°11′04″E / 13.9944°N 76.1844°E / 13.9944; 76.1844
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Gunderi
Village
Gunderi is located in Karnataka
Gunderi
Gunderi
Location in Karnataka, India
Gunderi is located in India
Gunderi
Gunderi
Gunderi (India)
Coordinates: 13°59′40″N 76°11′04″E / 13.9944°N 76.1844°E / 13.9944; 76.1844
Country India
Stateಕರ್ನಾಟಕ
DistrictChitradurga
Government
 • BodyGram panchayat
Languages
 • OfficialKannada
Time zoneUTC+5:30 (IST)
PIN
577 526
Telephone code08191
ISO 3166 codeIN-KA
Vehicle registrationKA-16
Websitekarnataka.gov.in

ಗುಂಡೇರಿ ದಕ್ಷಿಣ ಭಾರತದ ಕರ್ನಾಟಕ ರಾಜ್ಯದ ಒಂದು ಹಳ್ಳಿ. ಇದು ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಹೋಳಲ್ಕೆರೆ ತಾಲ್ಲೂಕಿನಲ್ಲಿದೆ .

ಇತಿಹಾಸ

[ಬದಲಾಯಿಸಿ]

ಹೊಳಲ್ಕೆರೆಯಿಂದ ೫ ಕಿ,ಮೀ. ದಕ್ಷಿಣಕ್ಕೆ ಇರುವ ಗುಂಡೇರಿ ಮೂಲತಃ ಶಾಸನಸ್ತ ಗ್ರಾಮವಾಗಿದೆ. ಐತಿಹಾಸಿಕ ಸ್ಥಳವಾದ ಈ ಗ್ರಾಮಕ್ಕೆ ಹಿಂದೆ ಸೋಮನಾಥನಹಳ್ಳಿ, ಗುಂಡಿಕೆರೆ ಎಂಬ ಹೆಸರು ಇದ್ದಿತ್ತು. ಕೆರೆಯ ಮಧ್ಯವಿರುವ ಸೋಮನಾಥೇಶ್ವರ ದೇವರಿನಿಂದ ಸೋಮನಾಥನಹಳ್ಳಿ ಎಂದು, ತಗ್ಗಿನ ಜಾಗದಲ್ಲಿದ್ದು ಸುತ್ತಮುತ್ತಲ ಗುಡ್ಡಗಳಿಂದ ಹರಿದು ಬರುವ ನೀರು ಇಲ್ಲಿನ ಕೆರೆಯಲ್ಲಿ ನಿಲ್ಲುತ್ತಿದ್ದ ಕಾರಣ ಗುಂಡಿಕೆರೆ ಎಂತಲೂ ಹೆಸರಾಯಿತು, ಮುಂದೆ ಇದೇ ಗುಂಡೇರಿ ಎಂದು ಹೆಸರಾಗಲು ಕಾರಣವೆಂದು ಹೇಳಲಾಗಿದೆ.

ಗ್ರಾಮ ಪಂಚಾಯಿತಿ ಮುಖ್ಯ ಕೇಂದ್ರವಾದ ಗುಂಡೇರಿ ಪಂಚಾಯಿತಿಗೆ ಗುಂಡೇರಿ, ಗುಂಡೇರಿಕಾವಲು, ಮಾಳೇನಹಳ್ಳಿ, ಮಾಳೇನಹಳ್ಳಿಕಾವಲು (ಚಿಕ್ಕೋನಹಳ್ಳಿ) ಇಡೆಹಳ್ಳಿ ಮತ್ತು ಹೊಳಲ್ಕೆರೆ ಲಂಬಾಣಿಹಟ್ಟಿ ಸೇರುತ್ತವೆ.

ಗ್ರಾಮದ ಪರಿಚಯ

[ಬದಲಾಯಿಸಿ]

ಗುಂಡೇರಿ ಗ್ರಾಮ ಅಡಿಕೆ ಬೆಳೆಗೆ ಹೆಸರುವಾಸಿ ಗ್ರಾಮದ ಸುತ್ತಮುತ್ತಲು ಇರುವ ವಿಶಾಲ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು ಐದು ನೂರು ಎಕರೆಯಷ್ಟು ಅಡಿಕೆ ತೋಟ ಬೆಳೆದು ನಿಂತಿದೆ. ಇದಲ್ಲದೆ ಗ್ರಾಮದ ಸುತ್ತ ಇನ್ನೂ ಎರಡು ಸಾವಿರ ಎಕರೆಯಲ್ಲಿ ಅಡಿಕೆ ತೋಟಗಳನ್ನು ಬೆಳೆಯಲಾಗಿದೆ ಮತ್ತು ಗುಂಡೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಲ್ಲಾ ಹಳ್ಳಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ತೋಟಗಳನ್ನು ಕಾಣಬಹುದು. ಈ ಗ್ರಾಮವು ಸುತ್ತಮುತ್ತ ಎತ್ತಕಡೆ ನೋಡಿದರೂ ಬರೀ ಅಡಿಕೆ ತೋಟಗಳ ಗಮನ ಸೆಳೆಯುತ್ತವೆ, ಜಿಲ್ಲೆಯಲ್ಲಿ ಅತಿ ಎತ್ತರದ ಅಡಿಕೆ ತೆಂಗಿನ ಮರಗಳನ್ನು ಹೊಂದಿರುವ ತೋಟಗಳು ಎಂಬ ಹೆಗ್ಗಳಿಕೆಯೂ ಈ ಗುಂಡೇರಿ ಗ್ರಾಮಕ್ಕೆ ಇದೆ, ಈ ಗ್ರಾಮದ ಸುತ್ತಮುತ್ತಲೂ ಗುಡ್ಡ ಬೆಟ್ಟಗಳನ್ನು ಹೊಂದಿರುವ ತಗ್ಗು ಪ್ರದೇಶವಾಗಿದ್ದು ಸದಾ ಹಸಿರಿನಿಂದ ಕಂಗೊಳಿಸುತ್ತದೆ. ಅರೆ ಮಲೆನಾಡಿನ ರೀತಿ ಕಂಗೊಳಿಸುವ ಈ ಗ್ರಾಮ ಮಧ್ಯಕರ್ನಾಟಕ ಭಾಗವಾಗಿದೆ, ಈ ಗ್ರಾಮವು ಸುಮಾರು 95% ರಷ್ಟು ಅಡಿಕೆ ಬೆಳೆಗೆ ಅವಲಂಬಿತವಾಗಿದ್ದು ಗ್ರಾಮದ ವಾಣಿಜ್ಯ ಬೆಳೆ ಅಡಿಕೆ ಅಗಿದೆ ,ಜೋತೆಗೆ ತೆಂಗು ಮತ್ತು ದಾಳಿಂಬೆ ಬೆಳೆಗಳನ್ನು ತೋಟಗಾರಿಕೆ ಬೆಳೆಯಾಗಿ ಬೆಳೆಯಲಾಗುತ್ತದೆ, ಮತ್ತು ಈ ಗುಂಡೇರಿ ಗ್ರಾಮವು ಆದರ್ಶ ಗ್ರಾಮ ಎಂದು ಗುರುತಿಸಿಕೊಂಡಿತ್ತು ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಗೆ ಪಾತ್ರವಾಗಿದೆ.

ಗ್ರಾಮದ ಉತ್ತರಕ್ಕೆ ೩೦೦ ಎಕರೆಗೂ ಅಧಿಕ ಜಾಗದಲ್ಲಿ ವ್ಯಾಪಿಸಿದ ಕೆರಯಿದ್ದು, ಲೋಕದೊಳಲು ಬೆಟ್ಟ ಸಾಲುಗಳಿಂದ ಹರಿದು ಬರುವ ಹಿರೇಹಳ್ಳದ ನೀರು ಈ ಕೆರೆಗೆ ಸೇರುತ್ತದೆ, ಕೋಡಿ ಬಿದ್ದು ಮುಂದೆ ಮಾಳೇನಹಳ್ಳಿ ಮೂಲಕ ಹರಿದು ಮಲ್ಲಾಡಿಹಳ್ಳಿ ಬಳಿಯ ಹಿರೇಹಳ್ಳಕ್ಕೆ ಸೇರಿ (ಚನ್ನಗಿರಿ ತಾಲ್ಲೂಕು) ಸೂಳೆಕೆರೆಗೆ ತಲುಪುತ್ತದೆ,

   ಐತಿಹಾಸಿಕವಾಗಿ ಗುಂಡೇರಿ ಗ್ರಾಮ ಈಗ ಹಾಳೂರು (ಗ್ರಾಮದ ಪಶ್ಚಿಮಕ್ಕೆ) ಎಂದು ಹೇಳಲಾಗುವ ಸ್ಥಳದಲ್ಲಿತ್ತು,ಹಿಂದೆ ಇಲ್ಲಿ ಚಾರ್ವಾಕರು (ನಾಸ್ತಿಕರು) ಎಂಬ ಪಂಥದವರು ಯಜ್ಞ-ಯಾಗಾದಿಗಳನ್ನು ನಡೆಸುತ್ತಿದ್ದರು, ಆದ್ದರಿಂದ ಇದನ್ನು ಚಾರುವಾಕ ಪಟ್ಟಣ ಎಂಬ ಹೆಸರು ಇತ್ತು, ಗ್ರಾಮದಲ್ಲಿ ಮುಖ್ಯವಾಗಿ ಲಿಂಗಾಯತರು, ಈಡಿಗ, ಅಗಸ, ಮುಸ್ಲಿಂ ಮುಂತಾದ ಎಲ್ಲಾ ಜನಾಂಗದವರು ವಾಸವಾಗಿದ್ದಾರೆ, ಹಿಂದಿನಿಂದಲೂ ಗ್ರಾಮದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಿದ್ದ ಕಾರಣ ಉನ್ನತ ವ್ಯಾಸಂಗಕ್ಕೆ, ಹುದ್ದೆಗಳಿಗೆ ಹಲವಾರು ಜನರು ಆಯ್ಕೆಯಾಗಿದ್ದಾರೆ, ಹೊಳಲ್ಕೆರೆ ತಾಲ್ಲೂಕಿನ ಮಾದರಿ ಗ್ರಾಮವಾದ ಗುಂಡೇರಿ ಸಂಪೂರ್ಣವಾಗಿ ವಿಮಾ ಗ್ರಾಮವಾಗಿದೆ. ಅಡಿಕೆ ಕೃಷಿಯೇ ಗ್ರಾಮದ ಆರ್ಥಿಕತೆಯ ಮೂಲವಾಗಿದೆ. ಅಡಿಕೆ ಸಂಬಂಧಿತ ಕಾರ್ಮಿಕರು, ಕೃಷಿಕರು ಇಲ್ಲಿದ್ದು ,ಅಡಿಕೆಯ ವಹಿವಾಟು ಉತ್ತಮ ರೀತಿಯಲ್ಲಿ ನಡೆಯುತ್ತದೆ,

ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಪ್ರೌಢಶಾಲಾ ಹಂತದವರೆಗೂ ಶಿಕ್ಷಣ ಲಭ್ಯವಿದೆ, ಇದರ ಜೊತೆಗೆ ಖಾಸಗಿ ಶಾಲೆಗಳು ಇವೆ, ಗ್ರಾಮದ ಹೊರಭಾಗದಲ್ಲಿ ಸರ್ಕಾರಿ ಬೀಜೋತ್ಪಾದನಾ ಕೇಂದ್ರವಿದೆ, ಗ್ರಾಮದ ಉತ್ತರಕ್ಕೆ ೨ ಕಿ,ಮೀ ದೂರದಲ್ಲಿ ಹಿಂದೆ ಮೈಸೂರು ಅರಸರು ಕಾವಲು ಪ್ರದೇಶವನ್ನು ಹಳ್ಳಿಕಾರ್- ಅಮೃತ್ ಮಹಲ್ ದೇಸಿ ಹಸು - ಎತ್ತುಗಳ ಸಂವರ್ಧನಾ ಕೇಂದ್ರಕ್ಕಾಗಿ ಬಿಟ್ಟಿದ್ದರು. ಈಗ ಅದು ಕಂಡು ಬರುವುದಿಲ್ಲ.ಇದನ್ನು ಮಾದರಿ ಗ್ರಾಮವೆಂದು ಕೆನರಾ ಬ್ಯಾಂಕಿನವರು ದತ್ತು ಗ್ರಾಮವಾಗಿ ಪರಿಗಣಿಸಿದ್ದಾರೆ.

ಗ್ರಾಮದ ಅಂಕಿ ಅಂಶ.

[ಬದಲಾಯಿಸಿ]

ಭೌಗೋಳಿಕ ವಿಸ್ತೀರ್ಣ : ೩೪೮೬,೨೯ ಹೆಕ್ಟೇರ್

ಒಟ್ಟು ಮನೆ    ; ೫೬೩

ಒಟ್ಟು ಜನಸಂಖ್ಯೆ : ೨೬೭೬

ಗುಂಡೇರಿಗೆ ಹತ್ತಿರದ ಜಿಲ್ಲೆಗಳು

[ಬದಲಾಯಿಸಿ]

ಗುಂಡೇರಿಯು ತನ್ನ ಜಿಲ್ಲೆ ಚಿತ್ರದುರ್ಗದಿಂದ ಸುಮಾರು 35.3 ಕಿಲೋಮೀಟರ್ ದೂರದಲ್ಲಿದೆ. ಗುಂಡೇರಿಯಿಂದ 58.2 ಕಿ.ಮೀ ದೂರದಲ್ಲಿರುವ ದಾವಣಗೆರೆ ಹತ್ತಿರದ ಇನ್ನೊಂದು ಜಿಲ್ಲೆ. ಗುಂಡೇರಿಯಿಂದ ಸುತ್ತಮುತ್ತಲಿನ ಜಿಲ್ಲೆಗಳು ಕೆಳಕಂಡಂತಿವೆ. ದಾವಣಗೆರೆ (ದಾವಣಗೆರೆ) ಜಿಲ್ಲೆಯ 58.2 ಕಿ.ಮೀ. ಶಿವಮೊಗ್ಗ (ಶಿಮೊಗ್ಗಾ) ಜಿಲ್ಲೆಯ 75.8 ಕಿ.ಮೀ. ಹಾಸನ (ಹಾಸನ್) ಜಿಲ್ಲೆ 110.0 ಕಿ.ಮೀ. ಚಿಕ್ಕಮಗಳೂರು (ಚಿಕ್ಕಮಗಳೂರು) ಜಿಲ್ಲೆ 116.5 ಕಿ.ಮೀ.

ಗುಂಡೇರಿಯಲ್ಲಿ ಮತ್ತು ಹತ್ತಿರದ ರೈಲು ನಿಲ್ದಾಣ

[ಬದಲಾಯಿಸಿ]

ಗುಂಡೇರಿಗೆ ಸಮೀಪದ ರೈಲ್ವೆ ನಿಲ್ದಾಣವೆಂದರೆ ಹೊಳಲ್ಕೆರೆ. ಇದು ಸುಮಾರು 6.5 ಕಿಲೋಮೀಟರ್ ದೂರದಲ್ಲಿದೆ. ಕೆಳಗಿನ ಕೋಷ್ಟಕವು ಇತರ ರೈಲ್ವೇ ನಿಲ್ದಾಣಗಳನ್ನು ಮತ್ತು ಅದರ ದೂರವನ್ನು ತೋರಿಸುತ್ತದೆ. ಹೊಳಲ್ಕೆರೆ ರೈಲು ನಿಲ್ದಾಣ 6.5 ಕಿ.ಮೀ. ರಾಮಗಿರಿ ರೈಲು ನಿಲ್ದಾಣ 6.8 ಕಿ.ಮೀ. ಚಿಕ್ಕಜಾಜೂರ್ ಜಿ.ಎನ್ ರೈಲು ನಿಲ್ದಾಣ 15.2 ಕೆ.ಎಂ. ಹೊಸದುರ್ಗ ರಸ್ತೆ ರೈಲು ನಿಲ್ದಾಣ 23.6 ಕಿ.ಮೀ. ಶಿವನಿ ರೈಲು ನಿಲ್ದಾಣ 24.0 ಕೆ.ಎಂ.

ಗುಂಡೇರಿ ಗ್ರಾಮದಲ್ಲಿರುವ ಮಂದಿರಗಳ ವಿವರ.

[ಬದಲಾಯಿಸಿ]

೧. ಸೋಮನಾಥೇಶ್ವರ ದೇವಾಲಯ :

[ಬದಲಾಯಿಸಿ]

ಗುಂಡೇರಿ ಕೆರೆಯ ಮಧ್ಯದಲ್ಲಿ ಜೀರ್ಣಾವಸ್ಥೆ ತಲುಪಿರುವ ಈ ಮಂದಿರವು ಹೊಯ್ಸಳ ಶೈಲಿಯಲ್ಲಿದ್ದು, ೧೨ - ೧೩ ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಪೂರ್ವಾಭಿಮುಖಿವಾಗಿರುವ ಈ ಗುಡಿಯು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ.ಕೆರೆ ತುಂಬಿದಾಗ ಮುಳುಗಡೆಯಾಗಿ, ಒಣಗಿದಾಗ ಮತ್ತೆ ಕಾಣುತ್ತದೆ.

ಗ್ರಾಮದ ಕೆರೆಯ ಮಧ್ಯೆ ಇರುವ ಪ್ರಾಚೀನ ದೇವಾಲಯವಿದು. ಗರ್ಭಗೃಹ ,ಅಂತರಾಳ ಹಾಗೂ ಮುಂಭಾಗದಲ್ಲಿ ನಂದಿ ಮಂಟಪಗಳಿಂದ ಕೂಡಿರುವ ದೇವಾಲಯವಾಗಿದೆ. ಗರ್ಭಗೃಹದಲ್ಲಿ ಮೂರುವರೆ ಅಡಿಗಳೆತ್ತರದ ಪ್ರತಿಷ್ಟಾಪನಾ ಶಿವಲಿಂಗವಿದೆ. ಇದನ್ನು ಕಪ್ಪುಶಿಲೆಯನ್ನು ಬಳಸಿ ನಯವಾಗಿ ಕಡೆಯಲಾಗಿದೆ. ಗರ್ಭಗೃಹದ ಬಾಗಿಲುಗಳು ಸರಳವಾಗಿದ್ದು, ಲಲಾಟದಲ್ಲಿ ಗಜಲಕ್ಷ್ಮೀ ಶಿಲ್ಪವಿದೆ. ದೇವಾಲಯವನ್ನು ಕಣಶಿಲೆ ಬಳಸಿ ಕಟ್ಟಲಾಗಿದೆ. ದೇಗುಲದ ಅಂತರಾಳದ ಮುಂದೆ ಬಲಕ್ಕೆ ಗಣೇಶ ಮತ್ತು ಎಡಕ್ಕೆ ವೀರಭದ್ರನ ಶಿಲ್ಪಗಳಿವೆ. ವೀರಭದ್ರ ಶಿಲ್ಪವು ಭಗ್ನವಾಗಿದೆ. ಗಣೇಶ ಶಿಲ್ಪದ ಕೆಳಗಿನ ಕೈಗಳು ಭಗ್ನವಾಗಿವೆ. ಮೇಲಿನ ಅಂಕುಶ ಮತ್ತು ಪಾಶಗಳಿವೆ. ಸುಖಾಸೀನನಾಗಿ ಕುಳಿತಿರುವ ಗಣೇಶನು ಕರಂಡ ಮುಕುಟನಾಗಿದ್ದು, ಮೇಲೆ ಕೀರ್ತಿಮುಖದ ಅಲಂಕರಣೆಯಿದೆ. ದೇವಾಲಯದ ಗರ್ಭಗೃಹದ ಮೇಲೆ ಯಾವುದೇ ಶಿಖರವು ಉಳಿದಿರುವುದಿಲ್ಲ.

೨.  ಈಶ್ವರ ದೇವಾಲಯ :

[ಬದಲಾಯಿಸಿ]

ಗ್ರಾಮದ ಮುಂಭಾಗದಲ್ಲಿ ಈ ಮಂದಿರ ಉತ್ತಮ ಸ್ಥಿತಿಯಲ್ಲಿದ್ದು ೧೬-೧೭ ನೇ ಶತಮಾನದಲ್ಲಿ ಪಾಳೇಯಗಾರರ ಶೈಲಿಯಲ್ಲಿ ನಿರ್ಮಿಸಲಾಗಿದೆ. ಪೂರ್ವಾಭಿಮುಖಿಯಾಗಿರುವ ಈ ಮಂದಿರದಲ್ಲಿ ಗರ್ಭಗೃಹ. ಅಂತರಾಳದ ಇಕ್ಕೆಲಗಳಲ್ಲಿ ಎರಡು ಗರ್ಭಗೃಹಗಳು, ನವರಂಗ ಹಾಗೂ ಮುಖಮಂಟಪಗಳಿರುವ ದೇವಾಲಯವಾಗಿದೆ. ಮುಖ್ಯ ಗರ್ಭಗೃಹದಲ್ಲಿ ಶಿವಲಿಂಗವಿದೆ. ಅಂತರಾಳದಲ್ಲಿ ನಂದಿಯ ಚಿಕ್ಕದಾದ ಶಿಲ್ಪವಿದೆ. ಎಡಬದಿಯ ಗರ್ಭಗೃಹದಲ್ಲಿ ನವಗ್ರಹಗಳಿದ್ದರೆ, ಬಲಬದಿಯ ಗರ್ಭಗೃಹದಲ್ಲಿ ನಂದಿಯನ್ನು ಇಟ್ಟು ಆರಾಧಿಸಲಾಗುತ್ತದೆ. ನವರಂಗದಲ್ಲಿ ನಾಲ್ಕು ಕಂಬಗಳಿವೆ. ಅವುಗಳನ್ನು ಬಹುಮುಖಗಳಲ್ಲಿ  ಕಡೆದಿದ್ದಾರೆ. ಕಂಬಗಳ ಮೇಲೆ ವೃತ್ತಾಕಾರದ ಹಲಗೆ, ಚಚ್ಚೌಕ ಫಲಕ ಮತ್ತು ಬೋದಿಗೆಗಳಿವೆ. ಮುಂಬದಿಯ ನಾಲ್ಕು ಕಂಬಗಳು ಚಚ್ಚೌಕ ಮತ್ತು ಅಷ್ಟಮುಖಗಳಲ್ಲಿವೆ. ದೇವಾಲಯದ ಮುಂದೆ ದೀಪಸ್ತಂಭವಿದ್ದು ಅದರ ಬುಡದಲ್ಲಿ ಎರಡು ಭೈರವನ ಪಾದಗಳನ್ನು ಇಡಲಾಗಿದೆ. ಈ ದೇವಾಲಯದ ಬಳಿ ಅಚ್ಯುತರಾಯನ ಕಾಲದ ಶಿಲಾಶಾಸನವಿದೆ. ಕ್ರಿ.ಶ ೧೫೩೬ಕ್ಕೆ ಸೇರಿದ ಶಾಸನವಿದು. ವೀರಭದ್ರ ದೇವರ ಅಮೃತಪಡಿಗಾಗಿ ನೈವೇದ್ಯಗಳಿಗೆಂದು ದಾನದತ್ತಿ ನೀಡಿದ ವಿವರವಿದೆ.

೩. ವೀರಭದ್ರ ದೇವಾಲಯ :

[ಬದಲಾಯಿಸಿ]

ಗ್ರಾಮದ ಮಧ್ಯಭಾಗದಲ್ಲಿರುವ ಈ ದೇವಾಲಯ ೧೬-೧೭ ನೇ ಶತಮಾನದಲ್ಲಿ ಪಾಳೆಯಗಾರರ ಶೈಲಿಯಲ್ಲಿ ಉತ್ತರಾಭಿಮುಖವಾಗಿ ನಿರ್ಮಿಸಲಾಗಿದ್ದು ಉತ್ತಮ ಸಂರಕ್ಷಣಾ ಸ್ಥಿತಿಯಲ್ಲಿದೆ, ಗರ್ಭಗೃಹ, ಅಂತರಾಳ ಮತ್ತು ಸಭಾ ಮಂಟಪಗಳಿಂದ ದೇವಾಲಯವಿದು. ಗರ್ಭಗೃಹದಲ್ಲಿ ಮೂರುವರೆ ಅಡಿಗಳೆತ್ತರದ ವೀರಭದ್ರನ ಸುಂದರ ಮೂರ್ತಿಯನ್ನು

ಪ್ರತಿಷ್ಟಾಪಿಸಿರುವರು. ಬಾಗಿಲುವಾಡಗಳು ಸರಳವಾಗಿವೆ. ಸಭಾಮಂಟಪದ ನಾಲ್ಕು ಕಂಬಗಳನ್ನು ಬಹುಮುಖಗಳಲ್ಲಿ ಕಡೆದಿದ್ದಾರೆ. ವೀರಭದ್ರ ದೇವರ ಅಮೃತಪಡಿಗಾಗಿ ನೈವೇದ್ಯಗಳಿಗೆಂದು ಅಚ್ಯುತರಾಯನ ಕಾಲದ ಕ್ರಿ.ಶ. ೧೫೩೯ ರಲ್ಲಿ ಚೌಡಪ್ಪನಾಯಕನ

ನಿರೂಪದಿಂದ ಕಸವರಾವುತರು ತೋಟವೊಂದನ್ನು ದತ್ತಿ ನೀಡಿದ ವಿವರವಿದೆ.  

ಈ ಗ್ರಾಮದಲ್ಲಿ ಆಂಜನೇಯ. ಕರಿಯಮ್ಮ, ಕುಕ್ಕುವಾಡೇಶ್ವರಿ. ಕೊಲ್ಲಾಪುರದಮ್ಮ,ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ದೇವಾಲಯಗಳಿವೆ.

೪. ಇತರ ಶಾಸನಗಳು :

[ಬದಲಾಯಿಸಿ]

ಗುಂಡೇರಿ-ಮಾಳೇನಹಳ್ಳಿ ಗ್ರಾಮದ ಮಧ್ಯದ ಕಲ್ಲುಕಂಬದ ಹಾಳು ಮಂಟಪದಲ್ಲಿರುವ ಕಲ್ಲಿನ ಶಾಸನದ ವಿವರ.

ಗುಂಡೇರಿಯ ಮಾಳೇನಹಳ್ಳಿ ರಸ್ತೆಯಲ್ಲಿರುವ ಹಾಳುಮಂಟಪದಲ್ಲಿರುವ ಕ್ರಿ.ಶ ೯೬೯ ರ ಶಾಸನವು ರಾಷ್ಟ್ರಕೂಟ ಅರಸ ಅಕಾಲವರ್ಷನ ಮಹಾಮಂಡಲೇಶ್ವರನಾದ ಸೂದ್ರಕಯ್ಯನು ಸಿಡಿಲಂಕರಾಮನು ಮಾಡಿಸಿದ ಸಿಡಿಲೇಶ್ವರ ದೇವಾಲಯಕ್ಕೆ ಕಾಲ್ಗೆರೆಯ ಸಿಡಿಲಯ್ಯನ ಕಾಲನ್ನು ತೊಳೆದು ಭೂಮಿದಾನ ಮಾಡಿದನೆಂದು ಹೇಳಿದೆ. ಕೂಡವಾಡಿ ೩೦೦ರ ಲೋಕಾಯ್ತವೊಳಲು ಗುಣ್ಡೆರದಲ್ಲಿ ೨೪ ಮತ್ತರು ಕರಿಯ ೧೦೦೦ ಬಳ್ಳಿಯ ತೋಟವನ್ನು ದತ್ತಿಯಾಗಿ ನೀಡಿದನೆಂದು ಹೇಳಿದೆ. ಇದರಿಂದ ಈ ಹಾಳೂರಿನಲ್ಲಿದ್ದ ಸಿಡಿಲೇಶ್ವರ ದೇವಾಲಯವು ಇಟ್ಟಿಗೆ, ಕಲ್ಲುಗಳನ್ನು ಬಳಸಿದ್ದ ದೇವಾಲಯವಾಗಿದ್ದು  ಕಾಲಾಂತರದಲ್ಲಿ ಭಗ್ನವಾಗಿರುವ ಸಾಧ್ಯತೆಯಿದೆ. ಹೊಳಲ್ಕೆರೆ ತಾಲೂಕಿನ ಗಂಗಸಮುದ್ರದಲ್ಲಿ ರಾಷ್ಟ್ರಕೂಟ ಕಾಲದ ದೇವಾಲಯವಿದ್ದು, ಅದರ ಸಾಲಿಗೆ ಭಗ್ನವಾದ  ಸಿಡಿಲೇಶ್ವರ ದೇವಾಲಯವು ಸೇರಿದ್ದುದು ಗಣನೀಯ ಅಂಶ. ಈ ಶಾಸನದಲ್ಲಿ ಲೋಕದೊಳಲು ಲೋಕಾಯ್ತವೊಳಲು ಎಂದೂ ಗುಂಡೇರಿ ಗ್ರಾಮವನ್ನು ಗುಣ್ಡೆರ ಎಂದೂ ಕರೆಯಲಾಗಿದೆ.

ಗುಂಡೇರಿ ಹಳೇ ಊರು ನಿವೇಶನದಲ್ಲಿನ ಶಾಸನ :

ಈ ಗ್ರಾಮದ ಕ್ರಿ.ಶ ೧೫೫೬ ಕ್ಕೆ ಸೇರಿದ ಸದಾಶಿವರಾಯನ ಕಾಲದ ಶಾಸನವು ಹಡಪದ ಕೃಷ್ಣಪ್ಪನಾಯಕನ ಮಗನಾದ ವೆಂಕಟಾದ್ರಿನಾಯಕನು ಗುಂಡೇರಿಯ ಚೆನ್ನಕೇಶವ ದೇವರ ಅರ್ಚನ ವೃತ್ತಿಗೆ (ಅರ್ಚಕರಿಗೆ) ಕೊಟ್ಟ ಗ್ರಾಮಶಾಸನವೆಂದಿದೆ. ಅಲ್ಲದೆ  ಬಾಗೂರು  ಸೀಮೆಗೆ ಸೇರಿದ ಗುಂಡೇರಿ ಕಾವಲು ಬಳಿಯ ನರಸಾಪುರವನ್ನು ವೆಂಕಟಾಪುರವೆಂಬ ಪ್ರತಿನಾಮದಿಂದ ಕಟ್ಟಿಸಿ ತಮ್ಮ ತಂದೆಗೆ ಪುಣ್ಯವಾಗಲೆಂದು ಸ್ವಾಮಿಯ ಶ್ರೀಪಾದಕ್ಕೆ ಧಾರೆಯನೆರೆದು ಅರ್ಪಿಸಿದನೆಂದಿದೆ. ಇದನ್ನು ಮೀರಿದವರು ಕಾಶಿಯಲ್ಲಿ ಗೋಹತ್ಯೆ, ತಂದೆ-ತಾಯಿ ಯರನ್ನು ಕೊಂದ ಪಾಪಕ್ಕೆ ಗುರಿಯಾಗುವರು ಎಂಬ ಶಾಪಾಶಯವಿದೆ. ಇದನ್ನು ೧೫೫೯ ಕ್ಕೆ ಸೇರಿದ ಜನವರಿ ತಿಂಗಳ ಮಕರ ಸಂಕ್ರಾಂತಿಯ ಶುಕ್ರವಾರದ ಪುಣ್ಯಕಾಲದಲ್ಲಿ ಮಾಡಲಾಗಿದೆ. ಶ್ರೀ ಮನ್ ಮಹಾರಾಜಾಧಿರಾಜ ಪರಮೇಶ್ವರ ಶ್ರೀ ವೀರ ಪ್ರತಾಪ ಸದಾಶಿವರಾಯ ಕಾಲದ್ದು .ಇದನ್ನು ಪಾಲಿಸಿದವರಿಗೆ ಪುಣ್ಯವಾಗಲಿ ಎಂದಿದೆ.

5.ಹಾಲಸ್ವಾಮಿಗಳ ಗದ್ದುಗೆ ಮಠ:

[ಬದಲಾಯಿಸಿ]
ವೈಶಾಖ ಶುದ್ಧ ತ್ರಯೋದಶಿ ಈ ಭಾಗದ ಸಂಸ್ಕೃತಿಯ ಸಂಸ್ಕಾರ ಹರಿಕಾರರು ಮನೆಯ ಮನಗಳ ಜ್ಞಾನದ ನಂದಾದೀಪ ಬೆಳಗಿದ ಮಹಾಚೇತನ ನಡೆದಾಡುವ ದೇವರು ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ
ಶ್ರೀ ಗುರು ಹಾಲಸೋಮೇಶ್ವರ ಹಾಲಸ್ವಾಮೀಜಿಯವರು (ಗುಂಡೇರಿ ಕರಿಹಾಲಸ್ವಾಮಿ ಜೀ)

ಹಾಲಸ್ವಾಮಿಗಳ ಗದ್ದುಗೆ ಮಠವು ಗ್ರಾಮದ ಪ್ರಾಥಮಿಕ ಶಾಲೆ ಬಳಿಯಲ್ಲಿದೆ.  15 -16 ನೇ ಶತಮಾನದಲ್ಲಿ ಇಲ್ಲಿ ನೆಲೆಸಿದ್ದ ಸ್ವಾಮಿಗಳ ಗದ್ದುಗೆ ಮಠ ಇದಾಗಿದೆ.  ಸಾವಿರಾರು ಭಕ್ತರು ಈ ಸ್ವಾಮಿಗಳಿಗೆ ನಡೆದುಕೊಳ್ಳುತ್ತಾರೆ. ದರ್ಶನಕ್ಕಾಗಿ ಆಗಮಿಸುತ್ತಾರೆ .ಇವರ ಮೂಲ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ರಾಂಪುರ.  ಅಲ್ಲಿ ಶಾಖಾ ಮಠವಿದ್ದು ಅಲ್ಲಿಂದ ಗುಂಡೇರಿಗೆ ಭಕ್ತರು ಆಗಮಿಸಿ ಆಶೀರ್ವಾದ ಪಡೆಯುತ್ತಾರೆ. ಹಿಂದೆ  ಸ್ವಾಮಿಗಳು ತಪಸ್ಸು ಮಾಡುತ್ತಿದ್ದ ಸ್ಥಳ ಎನ್ನಲಾದ ಜಾಗವು  ಗ್ರಾಮದ ಉತ್ತರಕ್ಕೆ ಹಾಲಸ್ವಾಮಿ ಬೆಟ್ಟದ ಮೇಲಿದ್ದು,ಅಲ್ಲಿ ಈಗ ಈಶ್ವರ ಮಂದಿರವಿದ್ದು ಪ್ರತಿ ಸೋಮವಾರ ವಿಶೇಷ ಪೂಜೆ, ಪ್ರಾರ್ಥನೆ ಇರುತ್ತದೆ.

"https://kn.wikipedia.org/w/index.php?title=ಗುಂಡೇರಿ&oldid=1229215" ಇಂದ ಪಡೆಯಲ್ಪಟ್ಟಿದೆ