ಕುಬಟೂರು
ಕುಬಟೂರು | |
---|---|
ಹಳ್ಳಿ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಶಿವಮೊಗ್ಗ |
Languages | |
• Official | Kannada |
Time zone | UTC+5:30 (IST) |
ಕುಬಟೂರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿ ಶಿರಾಳ ಕೊಪ್ಪದಿಂದ 6 ಮೈ. ಉತ್ತರಕ್ಕಿರುವ ಇತಿಹಾಸಪ್ರಸಿದ್ಧ ಗ್ರಾಮ. ಇದು ಚಂದ್ರಹಾಸನ ರಾಜಧಾನಿಯಾಗಿದ್ದ ಕುಂತಳನಗರ ಎಂದು ಸ್ಧಳಪ್ರತೀತಿ. ಶಾಸನಗಳಲ್ಲಿ ಬನವಾಸಿ ಪ್ರಾಂತ್ಯದ ಒಂದು ಮುಖ್ಯ ಸ್ಧಳವಾಗಿತ್ತು.
ಇತಿಹಾಸ
[ಬದಲಾಯಿಸಿ]ಇದರ ಪ್ರಾಚೀನತೆ ರಾಷ್ಟ್ರಕೂಟರ ಆಳ್ವಿಕೆಯ ಕಾಲದಷ್ಟು ಹಿಂದಿನದು. ಇಲ್ಲಿ ಆ ಕಾಲದ ಶಾಸನಗಳಲ್ಲದೆ ಹಲವು ವಾಸ್ತುಕಲಾ ಅವಶೇಷಗಳೂ ಉಳಿದುಬಂದಿವೆ.
ವಾಸ್ತು ಶಿಲ್ಪ
[ಬದಲಾಯಿಸಿ]ಸು. 8-9ನೆಯ ಶತಮಾನಗಳಲ್ಲಿ ಕಟ್ಟಲಾದ ರಾಮೇಶ್ವರ ದೇವಾಲಯ ಅಂಥ ಕಟ್ಟಡಗಳಲ್ಲೊಂದು; ಗರ್ಭಗೃಹ, ಪ್ರದಕ್ಷಿಣಪಥ ಮತ್ತು ರಂಗಮಂಟಪವಷ್ಟೇ ಇರುವ ಈ ಚಿಕ್ಕಗುಡಿಯ ಒಳಚಾವಣಿಯಲ್ಲಿ ಅಷ್ಟದಿಕ್ವಾಲಕರ ಮತ್ತು ತಾಂಡವಮೂರ್ತಿಯ ವಿಗ್ರಹಗಳೂ ನವರಂಗದಲ್ಲಿ ಸಪ್ತಮಾತೃಕೆಯರು, ಮಹಿಷಾಸುರಮರ್ದಿನಿ ಮುಂತಾದ ವಿಗ್ರಹಗಳೂ ಇವೆ. ಮೋಹಕವಾದ ಈ ಶಿಲ್ಪಗಳೆಲ್ಲ ರಾಷ್ಟ್ರಕೂಟರ ಕಾಲದವು. 1077ರಲ್ಲಿ ಕಟ್ಟಲಾದ ಪಾರ್ಶ್ವನಾಥ ಬಸದಿ ಚಾಳುಕ್ಯ ಶೈಲಿಯ ಸಣ್ಣ ಗುಡಿ; ಇದರಲ್ಲಿಯ ಪಾರ್ಶ್ವನಾಥ ವಿಗ್ರಹ ಒಂದು ಉತ್ತಮ ಕಲಾಕೃತಿ. ಸು. 1100 ರ ಕೈಟಭೇಶ್ವರ ದೇವಾಲಯ ಈ ಊರಿನಲ್ಲಿರುವ ಅತ್ಯಂತ ಭವ್ಯ ಕಟ್ಟಡ. ಗರ್ಭಗೃಹ, ಸುಖನಾಸಿ ಮತ್ತು ಮುಖಮಂಟಪವಿರುವ ಈ ಗುಡಿ ಚಾಳುಕ್ಯ ಶೈಲಿಯ ಅತಿದೊಡ್ಡ ದೇವಾಲಯಗಳಲ್ಲಿ ಒಂದು. ಪರಿಷ್ಕೃತ ತಲವಿನ್ಯಾಸ, ಕಟ್ಟಡದ ವಿವಿಧಾಂಗಗಳ ಸೂಕ್ತಪ್ರಮಾಣ, ಆಕರ್ಷಕ ವಿಮಾನ, ನಾಜೂಕಿನ ಕಂಬಗಳು ಮತ್ತು ಸುಂದರ ಕೆತ್ತನೆ-ಇವುಗಳಿಂದ ಕೂಡಿರುವ ಈ ದೇವಾಲಯ ಕರ್ಣಾಟಕದ ಹಿಂದು ಉತ್ತಮ ವಾಸ್ತುಕೃತಿಯೆಂದು ಪರಿಗಣಿತವಾಗಿದೆ. ಮುಂದೆ ಹೊಯ್ಸಳ ಶೈಲಿಯಲ್ಲಿ ಪ್ರಚಲಿತವಾದ ಹಲವು ವಾಸ್ತುವೈಶಿಷ್ಟ್ಯಗಳ ಮೂಲ ಮಾದರಿಗಳು ಈ ದೇವಾಲಯದಲ್ಲಿವೆಯೆಂಬುದು ಕಲಾಚರಿತ್ರಕಾರರ ಅಭಿಪ್ರಾಯ.