ಕಾಂತೀಯ ಲೋಹ ಪರೀಕ್ಷೆ
ಕಾಂತೀಯ ಲೋಹ ಪರೀಕ್ಷೆ ಎಂದರೆ ಲೋಹ ಇಲ್ಲವೆ ಮಿಶ್ರಲೋಹಗಳಿಂದ ಸಿದ್ಧಪಡಿಸಿದ ವಸ್ತುಗಳಲ್ಲಿ ಕಾಣಿಸಿಕೊಳ್ಳಬಹುದಾದ, ವಸ್ತುವಿನ ಉಪಯೋಗವನ್ನು ದುರ್ಬಲಗೊಳಿಸುವ ದೋಷಗಳ ಸ್ಥಾನ, ಲಕ್ಷಣ, ವ್ಯಾಪ್ತಿಗಳ ಬಗ್ಗೆ ಕಾಂತೀಯ ವಿಧಾನಗಳನ್ನು ಅನ್ವಯಿಸಿ ನಡೆಸುವ ಕಾಂತಾಭಿವಾಹ ಪರೀಕ್ಷೆ (ಮ್ಯಾಗ್ನಫ್ಲಕ್ಸ್ ಇನ್‌ಸ್ಪೆಕ್ಷನ್).[೧] ಕಳೆದ 25 ವರ್ಷಗಳಲ್ಲಿ ಲೋಹವಿಜ್ಞಾನದಲ್ಲಿ (ಮೆಟಲರ್ಜಿ) ಆಗಿರುವ ಪ್ರಗತಿಯ ಪರಿಣಾಮವಾಗಿ ಅನೇಕ ಹೊಸಬಗೆಯ ಮಿಶ್ರಲೋಹಗಳು (ಅಲಾಯ್ಸ್) ತಯಾರಾಗಿವೆ. ಕೈಗಾರಿಕಾ ಸಂಸ್ಥೆಗಳು ಈ ಹೊಸ ಮಿಶ್ರಲೋಹಗಳಿಂದ ತಮಗೆ ಅವಶ್ಯವೆನಿಸಿದ ಯಂತ್ರಗಳನ್ನೂ ಸಾಧನಗಳನ್ನೂ ನಿರ್ಮಿಸಿಕೊಳ್ಳುತ್ತಿವೆ. ಕಬ್ಬಿಣ, ಉಕ್ಕು ಮುಂತಾದವುಗಳ ಬಳಕೆ ಬಲು ಹಿಂದಿನಿಂದಲೂ ಇದ್ದದ್ದೇ. ಕಬ್ಬಿಣದ ಅಂಶ ಇಲ್ಲದ ಹ್ಯೂಸ್ಲರ್ಸ್ ಎಂಬ ಮಿಶ್ರಲೋಹಗಳಿಂದ ಕೈಗಾರಿಕಾ ಪ್ರಪಂಚದಲ್ಲಿ ಅನೇಕ ವಸ್ತುಗಳು ನಿರ್ಮಾಣವಾಗುತ್ತಿವೆ. ಕಬ್ಬಿಣ ಅಥವಾ ಉಕ್ಕಿಗಿರುವಂತೆಯೇ ಈ ಹೊಸ ಮಿಶ್ರಲೋಹಕ್ಕೆ ಕೂಡ ಕಾಂತಗುಣಗಳನ್ನು ಪಡೆಯುವ ಸಾಮರ್ಥ್ಯವಿದೆ.
ಪರೀಕ್ಷೆಯ ಅಗತ್ಯ
[ಬದಲಾಯಿಸಿ]ಯಂತ್ರಗಳಲ್ಲಿಯ ಕೆಲವೊಂದು ಲೋಹದ ಅಥವಾ ಮಿಶ್ರಲೋಹದ ತುಂಡುಗಳಲ್ಲಿ ಸಾಮಾನ್ಯವಾಗಿ ಕಾಣಬರುವ ಸ್ಥಿತಿಸ್ಥಾಪಕತೆ (ಎಲಾಸ್ಟಿಸಿಟಿ) ವಿರೂಪ ಹೊಂದುವುದುಂಟು. ಈ ವಿರೂಪ ಅಧಿಕಮಟ್ಟಕ್ಕೆ ಏರಿದರೆ ಯಂತ್ರದ ಆ ಭಾಗದಲ್ಲಿ ಒಂದು ಬಗೆಯ ಆಯಾಸ (ಫೆಟೀಗ್) ಉಂಟಾಗಿ ಆ ಭಾಗದ ದೌರ್ಬಲ್ಯ ಕಾಣಿಸಿಕೊಳ್ಳುತ್ತದೆ. ಅನೇಕ ವೇಳೆ ಸಿದ್ಧವಸ್ತುವಿನಲ್ಲಿ ಸೀಳು ಬಿಟ್ಟಿರುವುದೂ ಉಂಟು. ಬಿರುಕುಗಳು ಸ್ಪಷ್ಟವಾಗಿ ಹೊರಮೈಯಲ್ಲಿ ಕಾಣಿಸದೆ ಇದ್ದರೂ ಮೇಲ್ಮೈಯ ತಳದಲ್ಲಿರುವ ಪದರಗಳಲ್ಲಿ ಇರಬಹುದು. ಸ್ಥೂಲದೃಷ್ಟಿಯಿಂದ ದೋಷರಹಿತವೆಂದು ಕಾಣುವ ವಸ್ತುವಿನಲ್ಲಿ ಅದರ ರೂಪ ಮತ್ತು ಗಾತ್ರಗಳಿಗೆ ಅನುಗುಣವಾದ ಸಾಮರ್ಥ್ಯ ಇರುವುದಿಲ್ಲ. ಗಿರಗಿರನೆ ರಭಸದಿಂದ ತಿರುಗುವ ಯಂತ್ರ ಭಾಗಗಳಲ್ಲಿ ಈ ಬಗೆಯ ನ್ಯೂನತೆ ಇದ್ದರೆ ಆ ಯಂತ್ರದಿಂದ ಅನುಕೂಲಕ್ಕಿಂತ ಹಾನಿಯೇ ಹೆಚ್ಚು. ಎರಕಹುಯ್ದು ಸಿದ್ಧಪಡಿಸಿದ ವಸ್ತುಗಳಲ್ಲಿ ಸಾಮಾನ್ಯವಾಗಿ ಇನ್ನೊಂದು ಬಗೆಯ ದೋಷ ಕಾಣಬರುವುದುಂಟು. ಎರಕಹುಯ್ಯುವ ತಂತ್ರಕೌಶಲ ಸ್ವಲ್ಪ ಮೊಟಕಾಗಿದ್ದರೆ, ಕರಗಿಸಿದ ಲೋಹವನ್ನು ಅಚ್ಚಿನೊಳಕ್ಕೆ ಸುರಿಯುವಾಗ ವಾಯು ಗುಳ್ಳೆಗಳು ಸೇರಿಕೊಂಡು ಸಿದ್ಧವಸ್ತುವಿನ ಮೈಯಲ್ಲಿ ಉಳಿದುಹೋಗಿ ಅನೇಕ ತಾವುಗಳಲ್ಲಿ ಟೊಳ್ಳು ಏರ್ಪಡುವುದುಂಟು. ಯಂತ್ರವನ್ನು ಬಳಸುವಾಗ ಅದನ್ನು ಎಷ್ಟು ತೀಕ್ಣ ಒತ್ತಡ ಅಥವಾ ಸೆಳೆತಗಳಿಗೆ ಒಳಪಡಿಸಬಹುದೆಂದು ಯಂತ್ರಶಿಲ್ಪಿಗಳು ನಿರೀಕ್ಷಿಸಿರುತ್ತಾರೊ ಅವಕ್ಕಿಂತಲೂ ತೀರ ಕಡಿಮೆ ಮಟ್ಟ ದಾಟುವ ಮೊದಲೇ ಯಂತ್ರ ಕೆಟ್ಟುಹೋಗಬಹುದು. ಒಳ ಮೈಯಲ್ಲಿದ್ದು ಕಣ್ಣಿಗೂ ಕಾಣದಂತೆ ಅಡಕವಾಗಿರುವ ಈ ವಾಯು ಗುಳ್ಳೆಗಳಿಂದ ರೂಪುಗೊಳ್ಳುವ ಬಿರುಕುಗಳನ್ನು (ಕ್ರ್ಯಾಕ್ಸ್) ಪೂರ್ವಭಾವಿಯಾಗಿಯೇ ಅರಿಯುವುದು ಲೇಸು.
ಪೂರ್ವದ ನಾಶನ ವಿಧಾನ
[ಬದಲಾಯಿಸಿ]ಈ ವಿಧಾನ ಏರ್ಪಡುವುದಕ್ಕಿಂತ ಮೊದಲು ಲೋಹ ಪರೀಕ್ಷೆಯನ್ನು ನಡೆಸುತ್ತಿದ್ದ ಸ್ಥೂಲ ಕ್ರಮ ಹೀಗಿತ್ತು. ಕಾರ್ಖಾನೆಯಲ್ಲಿ ತಯಾರಾದ ಸುಮಾರು 100 ವಸ್ತುಗಳನ್ನು ತಲಾ 10 ಹತ್ತು ಭಾಗಗಳಾಗಿ ವಿಂಗಡಿಸಿಕೊಂಡು ಪ್ರತಿಯೊಂದು ಭಾಗದಿಂದಲೂ ಒಂದೊಂದರಂತೆ ವಸ್ತುವನ್ನು ತೆಗೆದುಕೊಂಡು ಪರೀಕ್ಷಿಸುವುದು. ಅದು ಸಮರ್ಪಕವಾಗಿದ್ದರೆ ಆ ಗುಂಪಿನ ಮಿಕ್ಕ ಒಂಬತ್ತು ಭಾಗಗಳೂ ಯೋಗ್ಯವಾಗಿವೆ ಎಂದು ಒಪ್ಪುವುದು. ಈ ರೀತಿಯ ಅಜಮಾಯಿಷಿಯಿಂದ ಆ ಗುಂಪಿನ ಎಲ್ಲ ಅಂಶಗಳೂ ಪ್ರಾಯಶಃ ಏಕರೀತಿಯಾಗಿವೆ ಎನ್ನಬಹುದೇ ಹೊರತು ಪ್ರತಿಯೊಂದರಲ್ಲೂ ಒಂದೇ ಬಗೆಯ ಗುಣದೋಷಗಳಿವೆ ಎಂದು ಹೇಳುವಂತಿಲ್ಲ. ಪ್ರತಿಯೊಂದನ್ನೂ ವಿಭಜಿಸಿ ಒಂದೊಂದು ಅಂಶವನ್ನೂ ತೀಕ್ಣ ತಪಾಸಣೆಗೆ ಗುರಿಮಾಡಲೇಬೇಕಾಗುತ್ತದೆ. ಹಿಂದಿನ ಈ ಪದ್ಧತಿಯಲ್ಲಿ ಯಂತ್ರದ ಒಂದೊಂದು ಭಾಗವೂ ದೋಷರಹಿತವಾಗಿದೆಯೆ, ಅದರ ವಿವಿಧ ಅಂಗಗಳು ನಿರೀಕ್ಷಿಸಿದಷ್ಟು ದೃಢವಾಗಿವೆಯೆ ಮುಂತಾದವನ್ನು ತಿಳಿಯಬೇಕಾದರೆ ಅದನ್ನು ಬಳಸುವ ಸಂದರ್ಭದಲ್ಲಿ ತಲಪಬಹುದಾದ್ದಕ್ಕಿಂತಲೂ ಹೆಚ್ಚು ತೀಕ್ಣವಾದ ಒತ್ತಡ, ತಾಪ ಅಥವಾ ಆವರ್ತನ ರಭಸವನ್ನು ಪ್ರಯೋಗಿಸಿ, ಯಂತ್ರದ ಭಾಗಗಳು ಈ ಉತ್ಕಟಾವಸ್ಥೆಯನ್ನು ಸಹಿಸಿಕೊಳ್ಳಬಲ್ಲವೇ ಎಂಬುದನ್ನು ತಿಳಿಯಬೇಕಾಗುತ್ತದೆ. ಎಷ್ಟೋ ಸಂದರ್ಭಗಳಲ್ಲಿ ದಾರ್ಢ್ಯದ ಕೊರತೆಯಿಂದ ಕೆಲವುಭಾಗಗಳು ಮುರಿದುಹೋಗುವ ಸಂಭವವೂ ಉಂಟು. ಅಂಥಲ್ಲಿ ಯಂತ್ರದ ಮಿತಿ ತಿಳಿದಂತಾಯಿತೇ ವಿನಾ ಯಂತ್ರ ಮಾತ್ರ ವ್ಯರ್ಥವಾದಂತೆಯೇ. ಈ ತೆರನ ಪರೀಕ್ಷೆಗೆ ನಾಶನ ವಿಧಾನ (ಡಿಸ್ಟ್ರಕ್ಟಿವ್ ಟೆಸ್ಟಿಂಗ್) ಎಂದು ಹೆಸರು.
ಪರೀಕ್ಷಾ ವಿಧಾನ
[ಬದಲಾಯಿಸಿ]ಕಾರ್ಖಾನೆಗಳಲ್ಲಿ ತಯಾರಿಸಿದ ಪದಾರ್ಥಗಳನ್ನು ನಾಶನರಹಿತ ವಿಧಾನದಿಂದ ಪರೀಕ್ಷಿಸಿ ಅವುಗಳ ಬಳಕೆಯ ವಿಚಾರದಲ್ಲಿ ಯಾವ ರೀತಿಯ ಶಂಕೆಯೂ ಇಲ್ಲದಂತೆ ಇರಲು ಪ್ರಯೋಗಗಳು ವಿಪುಲವಾಗಿ ನಡೆದುವು. ಇದರ ಫಲವಾಗಿ ಕಾಂತೀಯ ಪರೀಕ್ಷೆಗಿಂತಲೂ ಆ ವಿಧಾನಗಳು ಉತ್ತಮವಾದದ್ದಿಲ್ಲವೆಂದು ಮನವರಿಕೆ ಆಯಿತು. ಕಾಂತೀಯ ಪರೀಕ್ಷೆ ನಾಶನರಹಿತವಾಗಿದ್ದು ಪರೀಕ್ಷೆಗೆ ಈಡಾದ ಪದಾರ್ಥದ ಯೋಗ್ಯತೆಯನ್ನು ಕಂಡುಕೊಳ್ಳುವುದರಲ್ಲಿ ಕಾಂತ, ಕಾಂತಕ್ಷೇತ್ರ ಮುಂತಾದವು ಪೂರ್ವಸಿದ್ಧತೆಯಾಗಿ ಪ್ರಮುಖಪಾತ್ರ ವಹಿಸುತ್ತವೆ. ಬೇರೆ ಬೇರೆ ಆಕಾರದ ಲೋಹವಸ್ತುಗಳ ಸಂದರ್ಭದಲ್ಲಿ ಕಾಂತಕ್ಷೇತ್ರದ ರೇಖೆಗಳ ನಮೂನೆಗಳನ್ನು ಅಧ್ಯಯನ ಮಾಡಿ ಆ ನಮೂನೆಗಳಿಗೆ ತಕ್ಕಂತೆ ವಸ್ತುಗಳಲ್ಲಿಯ ದೋಷದ ಇರವನ್ನು ಪತ್ತೆಮಾಡುವುದು ಇಲ್ಲಿಯ ಕ್ರಮ.
ಎರಡು ಬೇರೆ ಬೇರೆ ಕಾಂತಕ್ಷೇತ್ರಗಳು ಏಕಕಾಲದಲ್ಲಿ ಒಂದೇ ಸ್ಥಳದಲ್ಲಿರುವಂತೆ ಮಾಡಿದರೆ ಅವು ಪ್ರತ್ಯೇಕವಾಗಿಯಾಗಲಿ ಬೆರೆತುಕೊಂಡಾಗಲಿ ನೀಳವಾಗಿ ಆಗಲಿ ವೃತ್ತಾಕಾರವಾಗಿ ಆಗಲಿ ಇರದೆ ವಿರೂಪ ಪಡೆಯಬಹುದು. ಇಂಥ ಸಂದರ್ಭದಲ್ಲಿ ವಕ್ರರೀತಿಯ ಕ್ಷೇತ್ರ ಏರ್ಪಡುತ್ತದೆ. ಪರೀಕ್ಷೆಗೆ ಈಡಾದ ಪದಾರ್ಥದಲ್ಲಿರುವ ಸೀಳಿಗೆ ಲಂಬವಾಗಿಯೊ ಸಮಾಂತರವಾಗಿಯೊ ಕಾಂತಕ್ಷೇತ್ರವನ್ನು ಉಂಟುಮಾಡಿಕೊಳ್ಳಬಹುದು. ಪರೀಕ್ಷೆಗೆ ಒಳಗಾಗಿರುವ ಪದಾರ್ಥದ ಒಂದು ಭಾಗದಲ್ಲಿ ಬೆಸುಗೆ ಇರಬಹುದು. ಬೆಸೆಯಲು ಬಳಸಿರುವ ಪದಾರ್ಥ ಸ್ವಲ್ಪಭಾಗ ಅಲ್ಲಿ ಉಳಿದಿರುತ್ತದೆ. ಬೆಸುಗೆ ಲೋಹಭಾಗದ ವ್ಯಾಪ್ಯತೆಗೂ (ಪರ್ಮಿಯಬಿಲಿಟಿ) ಉಳಿದ ಕಬ್ಬಿಣ ಭಾಗದ ವ್ಯಾಪ್ಯತೆಗೂ ವ್ಯತ್ಯಾಸ ಇರಬಹುದು. ಇದರಿಂದ ಬೆಸುಗೆ ಇರುವ ಸ್ಥಳದಲ್ಲಿ ಕಾಂತಕ್ಷೇತ್ರ ರೇಖೆಗಳು ಸ್ವಲ್ಪಮಟ್ಟಿಗೆ ಹೊರಕ್ಕೆ ಸೋರಿಹೋಗಬಹುದು. ವೃತ್ತಾಕಾರದ ಕಬ್ಬಿಣದ ಬಳೆ ಸೀಳು ಅಥವಾ ಬಿರುಕು ಬಿಟ್ಟಿದ್ದರೆ ಅಲ್ಲಿ ಹೆಚ್ಚಿನ ಸೋರಿಕೆ ಕಂಡುಬಂದು ಕಾಂತಕ್ಷೇತ್ರ- ರೇಖೆಗಳು ಹೆಚ್ಚಾಗಿ ಹೊರಕ್ಕೆ ಬಂದಿರುತ್ತವೆ. ಕಬ್ಬಿಣದ ಪುಡಿಯನ್ನು ಅಲ್ಲಿ ಸಿಂಪಡಿಸುವುದರಿಂದ ಈ ಸೋರಿಕೆಯನ್ನು ಅರಿಯಬಹುದು.
ಕಾಂತಾಭಿವಾಹ ಪರೀಕ್ಷೆಗೆ ಈಡುಮಾಡಿರುವ ಪದಾರ್ಥದ ಮೇಲೆ ತೀಕ್ಷ್ಣ ಕಾಂತಬಲವನ್ನು ಪ್ರಯೋಗಿಸಿ ಆ ಪದಾರ್ಥದಲ್ಲಿ ಕಾಂತರೇಖೆಗಳು ಉತ್ಪನ್ನವಾಗುವಂತೆ ಮಾಡುವುದು, ಈ ಪರೀಕ್ಷೆಗೆಂದು ವಿಶೇಷ ರೀತಿಯಲ್ಲಿ ತಯಾರಿಸಿರುವ ಕಬ್ಬಿಣ ಅಥವಾ ಇತರ ವಸ್ತುಗಳ ಪುಡಿಯನ್ನು ಕ್ಲುಪ್ತ ಕ್ರಮದಲ್ಲಿ ಉಪಯೋಗಿಸುವುದು, ಇದರಿಂದ ದೊರೆತ ಚಿತ್ರದಲ್ಲಿ ಕಾಂತಕ್ಷೇತ್ರದ ರೇಖೆಗಳ ಸೋರುವಿಕೆಯನ್ನು ಪರೀಕ್ಷಿಸುವುದು ಮುಂತಾದವೆಲ್ಲ ಪ್ರಮುಖ ಹಂತಗಳು. ಪದಾರ್ಥ ದೋಷರಹಿತವಾಗಿದ್ದರೆ ಸೋರುವಿಕೆ ಎಲ್ಲೂ ಕಾಣಬರುವುದಿಲ್ಲ. ಪದಾರ್ಥವನ್ನು ಒಡೆಯದೆಯೇ ಅದರ ಆಂತರಿಕ ರಚನೆ ಯೋಗ್ಯವಾಗಿದೆಯೇ ನೆಮ್ಮದಿಯಾಗಿದೆಯೇ ಎಂಬುದನ್ನು ತಿಳಿಯಲು ಈ ಪದ್ಧತಿ ಬಲುಯುಕ್ತ.
ಉಲ್ಲೇಖಗಳು
[ಬದಲಾಯಿಸಿ]- ↑ The Graduate Engineer (2 November 2021). "What Is MPI (Magnetic Particle Inspection)?". TheGraduateEngineer.com. The Graduate Engineer. Retrieved 16 November 2021.
ಹೆಚ್ಚಿನ ಓದಿಗೆ
[ಬದಲಾಯಿಸಿ]- "Liquid Penetrant and Magnetic Particle Testing at Level 2" (PDF) (PDF). International Atomic Energy Agency. 2000.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Video on Magnetic Particle Inspection, Karlsruhe University of Applied Sciences