ಕಾಂಚೀಪುರಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Kanchipuram
காஞ்சிபுரம்
Kanchi
City
Nickname: 
Kanchi
Country ಭಾರತ
Stateತಮಿಳುನಾಡು
DistrictKanchipuram
Government
 • TypeSpecial Grade Municipality
 • BodyKanchipuram Municipality
Population
 (2011)
 • Total೧,೬೪,೨೬೫
Languages
 • Officialತಮಿಳು
Time zoneUTC+5:30 (IST)
PIN
631501-631503
Telephone code044
Vehicle registrationTN 21
Websitekanchi.tn.nic.in

ಕಾಂಚೀಪುರಂಅಥವಾ ಕಂಚಿ : ಭಾರತದ ಮಹಾ ಪುಣ್ಯಕ್ಷೇತ್ರಗಳಲ್ಲಿ ಒಂದು. ಪ್ರಾಚೀನ ಸಂಸ್ಕೃತಿಯ ನೆಲೆವೀಡಾಗಿದ್ದು ಭವ್ಯ ದೇವಾಲಯಗಳ ಪಟ್ಟಣವೆಂದು ಪ್ರಸಿದ್ಧಿ ಪಡೆದಿದೆ. ದಕ್ಷಿಣ ಭಾರತದ ಇತಿಹಾಸದಲ್ಲಿ ಸಾಕಷ್ಟು ಪ್ರಸಿದ್ಧವೆನಿಸಿದೆ. ಕಾಂಚೀಪುರ, ಕಾಂಜೀವರಂ ಎಂಬ ಹೆಸರುಗಳೂ ಇವೆ. ಚೆನ್ನೈನಿಂದ ನೈಋತ್ಯಕ್ಕೆ 75 ಕಿಮೀ ದೂರದಲ್ಲಿ, ಪಾಲಾರ್ ನದಿಯ ದಡದಲ್ಲಿ ಚೆಂಗಲ್ಪಟ್ಟಿಗೆ 35 ಕಿಮೀ ದೂರದಲ್ಲಿದೆ. ಉತ್ತರ ಅಕ್ಷಾಂಶ 12-50. ಪುರ್ವ ರೇಖಾಂಶ 79-75. ಜನಸಂಖ್ಯೆ 1,64,384 (2011). ಪ್ರಾಚೀನ ಕಾಲದಿಂದಲೂ ಅನೇಕ ಸಂತರು, ಭಕ್ತರು, ಕಲಾವಿದರು, ರಾಜಕಾರಣಿಗಳು, ಸಂಗೀತಗಾರರು. ಶ್ರವಣರು ಹಾಗೂ ತಾತ್ತ್ವಿಕರಿಗೆ ವಿದ್ಯಾಕೇಂದ್ರವೂ ಜನ್ಮಸ್ಥಳವೂ ಆಗಿದೆ. ಅರ್ಥಶಾಸ್ತ್ರ ರಚಿಸಿದ ಚಾಣಕ್ಯ ಮತ್ತು ಕರ್ಣಾಟಕ ಸಂಗೀತದ ಪಿತಾಮಹಾರೆನಿಸಿದ ಶಾಮಶಾಸ್ತ್ರಿಗಳು ಇಲ್ಲಿ ಜನ್ಮವೆತ್ತಿದ್ದಾರೆ. ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಆಡಳಿತಕೇಂದ್ರವಿದು. ಚೆನ್ನೈಗೆ ಹತ್ತಿರದಲ್ಲಿರುವುದರಿಂದ ಹೆಚ್ಚಿನ ಪ್ರಾಮುಖ್ಯ ಪಡೆದಿದೆ. ವ್ಯಾಪಾರ ಮತ್ತು ವಾಣಿಜ್ಯಕೇಂದ್ರ. ಇಲ್ಲಿಯ ಗುಡಿಗೋಪುರಗಳು ಬೃಹತ್ ಪ್ರಮಾಣದಲ್ಲಿದ್ದು ತಮ್ಮ ಶಿಲ್ಪಕಲೆಯ ಭವ್ಯತೆಯಿಂದ ಅದ್ಭುತ ಎನಿಸಿವೆ. ಶಿವಕಂಚಿ, ವಿಷ್ಣುಕಂಚಿ ಎಂದು ನಗರ ಎರಡು ವಿಭಾಗಗಳಾಗಿದೆ. ಶಿವಕಂಚಿಯಲ್ಲಿ ಸುಪ್ರಸಿದ್ಧ ಕಾಮಾಕ್ಷಿ, ಏಕಾಂಬರೇಶ್ವರ, ಕೈಲಾಸನಾಥ ದೇವಸ್ಥಾನಗಳಿವೆ. ಶಂಕರಾಚಾರ್ಯರ ಪೀಠಗಳಲ್ಲಿ ಒಂದಾದ ಕಾಮಕೋಟಿ ಪೀಠವಿರುವುದೂ ಇಲ್ಲೆ. ವಿಷ್ಣುಕಂಚಿಯಲ್ಲಿ ವರದರಾಜಸ್ವಾಮಿ ದೇವಸ್ಥಾನವಿದೆ. ವರ್ಷಂಪ್ರತಿ ಇಲ್ಲಿ ನಡೆಯುವ ಉತ್ಸವಗಳಿಗೆ ದಕ್ಷಿಣ ಭಾರತದಿಂದಲೇ ಅಲ್ಲದೆ ಉತ್ತರ ಭಾರತದಿಂದಲೂ ಅಸಂಖ್ಯಾತ ಯಾತ್ರಾರ್ಥಿಗಳು ಆಗಮಿಸುತ್ತಾರೆ. ಇದು ವಿದ್ಯಾಕೆಂದ್ರವೆನಿಸಿದೆ. ಇಲ್ಲಿ ಧರ್ಮದರ್ಶಿಗಳು ನಡೆಸುವ ಎರಡು ಕಾಲೇಜುಗಳಲ್ಲದೆ, ಏಳು ಪ್ರೌಢಶಾಲೆಗಳಿವೆ. ಭಕ್ತವತ್ಸಲಂ ತಾಂತ್ರಿಕ ಶಿಕ್ಷಣಶಾಲೆಯೊಂದು ಸ್ಥಾಪಿತವಾಗಿದೆ. ಸಂಸ್ಕೃತವಿದ್ಯೆಗೆ ಹೇಗೊ ಹಾಗೆ ತಮಿಳು ವಿದ್ಯಾಸಾಹಿತ್ಯಗಳಿಗೂ ಈ ಪಟ್ಟಣ ಹೆಸರುವಾಸಿಯಾಗಿದೆ. ಇದು ಆಧುನಿಕ ಜೀವನದ ಎಲ್ಲ ಸೌಲಭ್ಯಗಳೂ ಇರುವ ಪ್ರವಾಸಿಕೇಂದ್ರ ಎನಿಸಿದೆ. ಇಲ್ಲಿ ಉತ್ತಮವಾದ ಜಿಲ್ಲಾಮಟ್ಟದ ಗ್ರಂಥಾಲಯವಿದೆ. 32 ನಗರಸಭಾಸದಸ್ಯರುಗಳನ್ನೊಳಗೊಂಡ ಪ್ರಥಮ ದರ್ಜೆಯ ನಗರಸಭೆಯಿದೆ. ಸಿಮೆಂಟ್ ಹಾಗೂ ಟಾರ್ ರಸ್ತೆಗಳು ವಿಪುಲವಾಗಿವೆ. ಬಸ್ಸು ಹಾಗೂ ರೈಲು ಸೌಕರ್ಯಗಳಿವೆ.

weaving with threads hanging from a loom
Silk Sari Weaving at Kanchipuram

ಇದು ರೇಷ್ಮೆ ನೇಯ್ಗೆಯಲ್ಲಿ ಜಗದ್ವಿಖ್ಯಾತವೆನಿಸಿದೆ. ಇಲ್ಲಿ ತಯಾರಾದ ರೇಷ್ಮೆ ಸೀರೆಗಳಿಗೆ ವಿದೇಶಗಳಿಂದ ಹೆಚ್ಚಿನ ಬೇಡಿಕೆಯಿದೆ. ಇಲ್ಲಿ 8,000 ಕ್ಕೂ ಮೇಲ್ಪಟ್ಟು ರೇಷ್ಮೆ ಕೈಮಗ್ಗಗಳಿವೆ. ಅಲ್ಲದೆ ಸಹಕಾರಿ ಬೆಂಕಿಕಡ್ಡಿ ಕಾರ್ಖಾನೆಯಿದೆ. ಇಲ್ಲಿನ ವ್ಯವಸಾಯೋತ್ಪನ್ನಗಳಿಗೆ ಅತಿ ಹೆಚ್ಚಿನ ಮಾರುಕಟ್ಟೆಯಿದೆ. ಬೊಂಬಿನಿಂದ ತಯಾರಾಗುವ ಹಲವು ವಸ್ತುಗಳು, ಬುಟ್ಟಿ ಹೆಣಿಗೆ, ಮಣ್ಣಿನ ಪಾತ್ರೆಗಳು ಮುಂತಾದ ಕುಶಲ ಕೈಗಾರಿಕೆಗಳಿಗೆ ಪ್ರಸಿದ್ಧಿ ಪಡೆದಿದೆ.

ಇತಿಹಾಸ[ಬದಲಾಯಿಸಿ]

precinct of a temple with sculptures on either side
Sculptures inside Kanchipuram Kailasanathar Temple – the oldest existing temple in the city

ಪುರಾತನ ಪಟ್ಟಣದ ಇತಿಹಾಸ ಗಮನಾರ್ಹ. ದಕ್ಷಿಣ ದೇಶದ ಮತಚರಿತ್ರೆಯಲ್ಲಿ ಇದರ ಪಾತ್ರ ಮಹತ್ತರವಾದುದು. ಇದು ಎರಡು ಸಾವಿರ ವರ್ಷಗಳ ಹಿಂದೆ ದಕ್ಷಿಣದಲ್ಲಿ ಬೌದ್ಧಧರ್ಮ ಮುಖ್ಯ ಕೇಂದ್ರವಾಗಿತ್ತು. ಶಂಕರಾಚಾರ್ಯರು ಇದನ್ನು ಶೈವ ಮತ್ತು ವೈಷ್ಣವ ಕೇಂದ್ರವಾಗಿ ಪರಿವರ್ತಿಸಿದರು. ಕಂಚಿಯ ಒಂದು ಭಾಗದಲ್ಲಿ ಬೌದ್ಧಸ್ತೂಪಗಳಿದ್ದುವೆಂದು ಹ್ಯೂಯೆನ್ತ್ಸಾಂಗ್ ಹೇಳಿದ್ದಾನಾದರೂ ಅದಕ್ಕೆ ಸರಿಯಾದ ರುಜುವಾತುಗಳು ಇನ್ನೂ ಸಿಕ್ಕಿಲ್ಲ. ಊರಿನ ಇನ್ನೊಂದು ಭಾಗ ಶೈವದೇವಾಲಯಗಳುಳ್ಳದ್ದು, ಮತ್ತೊಂದು ವೈಷ್ಣವ ದೇವಾಲಯಗಳುಳ್ಳದ್ದು, ಕಾಮಾಕ್ಷಿ ದೇವಾಲಯ ಶಂಕರಾಚಾರ್ಯರಿಂದ ಸ್ಥಾಪಿತವಾದುದೆಂದು ಪ್ರಸಿದ್ಧವಾಗಿದೆ. ವೈಷ್ಣವ ದೇವಾಲಯಗಳಲ್ಲಿ ವರದಸ್ವಾಮಿಯ ದೇವಸ್ಥಾನ ಪ್ರಸಿದ್ಧವಾದುದ್ದು. ರಾಮಾನುಜಾಚಾರ್ಯರು ಶ್ರೀರಂಗಕ್ಕೆ ಹೋಗುವುದಕ್ಕೆ ಮುಂಚೆ ಕಂಚೀ ಪುರ್ಣರ ಶಿಷ್ಯರಾದ ವರದರಾಜಸ್ವಾಮಿಗೆ ಸೇವೆ ಸಲ್ಲಿಸುತ್ತಿದ್ದರು. ಶಂಕರಾಚಾರ್ಯರು ಜೈನವಿದ್ವಾಂಸರೊಡನೆ ಚರ್ಚೆ ನಡೆಸಿದರೆಂದು ಐತಿಹ್ಯವಿರುವುದರಿಂದ ಆ ಕಾಲದಲ್ಲಿ ಕಂಚಿಯಲ್ಲಿ ಜೈನಧರ್ಮದವರೂ ಗಣ್ಯರಾಗಿದ್ದಿರಬೇಕು. ಈಗಲೂ ಕಂಚಿಯಲ್ಲಿ ಒಂದು ಪುರಾತನ ಜೈನ ದೇವಾಲಯವಿದೆ. ಗುರುನಾನಕ್ ಕಂಚಿಯಲ್ಲಿ ತನ್ನ ಧರ್ಮಪ್ರಚಾರ ಮಾಡಿದನೆಂದು ಐತಿಹ್ಯವಿದೆ. ಇದಕ್ಕೆ ಸಾಕ್ಷಿಯಾಗಿ ಇಲ್ಲಿ ಒಂದು ಸಿಖ್ಖರ ಮಠವಿದೆ. ಕಾಲಕ್ರಮದಲ್ಲಿ ಕಂಚಿ ಮುಸಲ್ಮಾನರ ದಾಳಿಗೆ ಸಿಕ್ಕಿ ಅಪಾರ ನಷ್ಟಕ್ಕೊಳಗಾಯಿತು. ಇಲ್ಲಿಯ ಕೆಲವು ದೇವಸ್ಥಾನಗಳು ನೆಲಸಮವಾದುವು. ದೊಡ್ಡ ಮಂಟಪಗಳು ಮಸೀದಿಗಳಾಗಿ ಮಾರ್ಪಟ್ಟುವು. ಮದ್ರಾಸ್ ಪ್ರಾಂತ್ಯ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟ ಮೇಲೆ ಕ್ರೈಸ್ತರ ಚರ್ಚುಗಳು ನಿರ್ಮಾಣವಾದುವು.

painting depicting attack by modern weapon resulting in army getting blasted
The Battle of Pollilur, fought near Kanchipuram in 1780

ಪ್ರ.ಶ.ಪು. 150ರಲ್ಲೇ ಪತಂಜಲಿ ಕಂಚಿಯ ವಿಚಾರವನ್ನು ಪ್ರಸ್ತಾಪಿಸಿದ್ದಾನೆ. ದಕ್ಷಿಣ ಭಾರತದಲ್ಲಿ 5ನೆಯ ಶತಮಾನದಲ್ಲಿದ್ದ ತೊಂಡಮಂಡಲಂ ಪ್ರದೇಶಕ್ಕೆ ಕಂಚಿ ರಾಜಧಾನಿಯಾಗಿತ್ತು. ಶಾಸನಾಧಾರದಂತೆ ಈ ಪ್ರದೇಶವನ್ನು ಪಲ್ಲವರು ಆಳುತ್ತಿದ್ದರೆಂದು ಗೊತ್ತಾಗುವುದು. ಇವರಿಗೆ ತೊಂಡಮಾನ್ ರಾಜರೆಂದು ಹೆಸರಿತ್ತೆಂದು ತಮಿಳು ಸಾಹಿತ್ಯದಿಂದ ತಿಳಿದುಬರುತ್ತದೆ. ವಿಷ್ಣುಗೋಪ ಎಂಬಾತ ಪಲ್ಲವ ರಾಜನಾಗಿದ್ದನೆಂದೂ ಉತ್ತರದಿಂದ ದಂಡೆತ್ತಿ ಬಂದ ಸಮುದ್ರಗುಪ್ತ ಇವನನ್ನು ಸೋಲಿಸಿದನೆಂದೂ ಇತಿಹಾಸ ಹೇಳುತ್ತದೆ. ಉತ್ತರದಲ್ಲಿ ಕೃಷ್ಣಾನದಿಯವರೆಗೂ ದಕ್ಷಿಣದಲ್ಲಿ ಪಾಂಡ್ಯರ ಮಧುರೆ ಹೊರವಲಯದವರೆಗೂ ಪಲ್ಲವರ ಆಳ್ವಿಕೆ ಹರಡಿತ್ತು. ಈ ಸಮುದ್ರದಲ್ಲಿ ಕಂಚಿ ದಕ್ಷಿಣದ ಮಹತ್ತ್ವದ ಪಟ್ಟಣವೆನಿಸಿತ್ತು; ಉತ್ತಮ ಶಿಕ್ಷಣ ಹಾಗೂ ವಿಶ್ವವಿದ್ಯಾನಿಲಯ ಕೇಂದ್ರವಾಗಿತ್ತು. ಪಲ್ಲವರು ಸಂಸ್ಕೃತದ ಅಭಿಮಾನಿಗಳೂ ಪ್ರತಿಪಾದಕರೂ ಆಗಿದ್ದು ಅವರ ಶಾಸನಗಳೆಲ್ಲ ಆ ಭಾಷೆಯಲ್ಲೇ ಇವೆ. ಅಂದು ಕಂಚಿಯಿಂದ ಸಂಸ್ಕೃತ ಪ್ರಸಾರ ಅವ್ಯಾಹತವಾಗಿ ನಡೆದಿತ್ತು. ದಕ್ಷಿಣದಲ್ಲಿ ಮಾತ್ರವಲ್ಲದೆ, ದೂರಪ್ರಾಚ್ಯದಲ್ಲಿದ್ದ ಭಾರತೀಯ ಸ್ವಾಸ್ಥ್ಯಗಳಿಗೂ ಅದು ಹರಡಿ ಜನಪ್ರಿಯತೆ ಗಳಿಸಿತ್ತು. ಪಲ್ಲವರು ತಮ್ಮದೇ ಆದ ವೈಶಿಷ್ಟ್ಯಮಯ ಶಿಲ್ಪಕಲಾವೈಭವವನ್ನು ನಿರ್ಮಾಣ ಮಾಡಿದರು. ಮುಂದೆ ಆಕ್ರಮಣ ನಡೆಸಿದೆ ರಾಜ ವಂಶೀಕರು ಇಲ್ಲಿನ ಕಲಾ ವೈಭವಕ್ಕೆ ಮುಗ್ದರಾಗಿ ತಮ್ಮ ರಾಜ್ಯಗಳಲ್ಲಿ ಇದನ್ನು ಬೆಳೆಸಿ ಪೋಷಿಸಿದ ನಿದರ್ಶನಗಳು ಕಂಡುಬರುತ್ತವೆ. ಹ್ಯೂಯೆನ್ತ್ಸಾಂಗ್ ಇಲ್ಲಿನ ವಿಶ್ವವಿದ್ಯಾನಿಲಯದ ಶ್ರೇಷ್ಠತೆಯನ್ನು ಕೊಂಡಾಡಿದ್ದಾನೆ. ತರ್ಕಶಾಸ್ತ್ರನಿಪುಣನೂ ನ್ಯಾಯಭಾಷ್ಯದ ಕರ್ತೃವೂ ಆದ ವಾತ್ಸಾಯನ ಕಂಚಿಯಲ್ಲಿ ಅಂದು ಪಂಡಿತನಾಗಿದ್ದನೆಂದೂ ಆತ ಹೇಳಿದ್ದಾನೆ. ಇಂಥ ಶಿಕ್ಷಣಕೇಂದ್ರವಾದ ಈ ಪಟ್ಟಣದಲ್ಲಿ ಅನೇಕ ಮಹಿಮಾನ್ವಿತರು ಶಿಕ್ಷಣ ಪಡೆದರು. ವಿಶಿಷ್ಟಾದ್ವೈತ ಧರ್ಮಸ್ಥಾಪನಾಚಾರ್ಯರಾದ ರಾಮಾನುಜಾಚಾರ್ಯರು ಮೊಟ್ಟಮೊದಲು ಇಲ್ಲಿ ಶಿಕ್ಷಣ ಹೊಂದಿದರು. 5ನೆಯ ಶತಮಾನದಲ್ಲಿ ಕದಂಬಕುಲದ ಮಯೂರಶರ್ಮ ಉನ್ನತಶಿಕ್ಷಣಕ್ಕಾಗಿ ಕಂಚಿಗೆ ಬಂದಿದ್ದನೆಂದು ಶಾಸನಗಳು ತಿಳಿಸುತ್ತವೆ. ಈ ಸಂದರ್ಭದಲ್ಲಿ ನಡೆದ ಒಂದು ಘಟನೆ ಅತ್ಯಂತ ಗಮನಾರ್ಹ. ಶಿವಮೊಗ್ಗ ಜಿಲ್ಲೆಯ ತಾಳಗುಂದದ ಬ್ರಾಹ್ಮಣ ವರ್ಗದ ಈ ಮಯೂರಶರ್ಮ ತನ್ನ ಗುರು ವೀರಶರ್ಮನೊಂದಿಗೆ ಕಂಚಿಯ ಘಟಿಕಾಶ್ರಮದಲ್ಲಿ ವೇದಾಧ್ಯಯನ ಮಾಡಲು ತೆರಳಿದಾಗಿ ಅಲ್ಲಿನ ಪಲ್ಲವರಾಜನ ಅಶ್ವಾರೋಹಿ ಕಾವಲುಗಾರರಿಂದ ಅವಮಾನಿತನಾಗಿ ನೊಂದನೆಂದೂ ಆಗ್ಗೆ ಅವನಲ್ಲಿ ಸೇಡಿನ ಕಿಡಿ ಹೊತ್ತಿ, ಕಡೆಗೆ ಯುದ್ಧಕಲೆಯನ್ನು ಹಸ್ತಗತಮಾಡಿಕೊಳ್ಳಲು ನಿರ್ಧರಿಸಿದನೆಂದೂ ಹೇಳಲಾಗಿದೆ. ಕಡೆಗೆ ತನ್ನ ನಿರ್ಧಾರದಂತೆ ಅವನು ಖಡ್ಗವನ್ನು ಹಿಡಿದು ದಿಗ್ವಿಜಯಕ್ಕೆ ಹೊರಟು ಪಲ್ಲವರಾಜ್ಯದ ಗಡಿಯನ್ನು ರಕ್ಷಿಸುತ್ತಿದ್ದ ಕಾವಲು ಅಧಿಕಾರಿಗಳನ್ನು ಸೋಲಿಸಿ ಅನೇಕ ಪ್ರದೇಶಗಳನ್ನು ಆಕ್ರಮಿಸಿಕೊಂಡನೆಂತಲೂ ಆಗ್ಗೆ ಪಲ್ಲವರು ಮಣಿಯಬೇಕಾಯಿತೆಂದೂ ಇತಿಹಾಸ ಹೇಳುತ್ತದೆ. ಕಂಚಿಯ ಚರಿತ್ರೆಯಲ್ಲಿ ಈ ಘಟನೆ ಅತಿ ಮುಖ್ಯವಾಗಿ ಪರಿಣಮಿಸಿತು. ಇಷ್ಟೇ ಅಲ್ಲ, ಇನ್ನೊಂದು ಬಗೆಯಲ್ಲಿಯೂ ಕಂಚಿ ಗಮನಾರ್ಹವಾದುದು. ಚಾಲುಕ್ಯ ಅರಸನಾದ ಎರಡನೆಯ ಪುಲಿಕೇಶಿಯನ್ನು ಪಲ್ಲವ ನರಸಿಂಹ ಸೋಲಿಸಿದ್ದರಿಂದ ಚಾಲುಕ್ಯರ ಆಳ್ವಿಕೆಗೆ ಭಾರಿ ಪೆಟ್ಟು ಬಿದ್ದಂತಾಯಿತು. ಆದರೆ ಚಾಲುಕ್ಯರ ಎರಡನೆಯ ವಿಕ್ರಮಾದಿತ್ಯ ಸೇಡು ತೀರಿಸಿಕೊಳ್ಳಲು ಸಮಯ ಕಾಯುತ್ತಿದ್ದು, ಕಡೆಗೊಮ್ಮೆ ದಂಡೆತ್ತಿಬಂದು ಕಂಚಿಯನ್ನು ವಶಪಡಿಸಿಕೊಂಡ; ಪಲ್ಲವ ಸಿಂಹಾಸನಕ್ಕೆ ಹಾತೊರೆಯುತ್ತಿದ್ದ ವಿರೋಧವಾದಗಳಿಗೆ ಸಿಂಹಾಸನ ದಕ್ಕುವಂತೆ ಮಾಡಿದ. ಈ ಸಂದರ್ಭದಲ್ಲಿ ವಿಕ್ರಮಾದಿತ್ಯ ಕಂಚಿಯಿಂದ ಹಿಂತಿರುಗುವಾಗ ಅಲ್ಲಿನ ಪ್ರಖ್ಯಾತ ಶಿಲ್ಪಿ ಸರ್ವಸಿದ್ಧಿ ಆಚಾರ್ಯನನ್ನು ಕರೆದೊಯ್ದು ಅವನಿಂದ ದೇವಾಲಯಗಳನ್ನು ತನ್ನ ರಾಜ್ಯದಲ್ಲಿ ನಿರ್ಮಿಸಿದನೆಂದು ಇತಿಹಾಸದಿಂದ ತಿಳಿದುಬರುತ್ತದೆ. ಪಲ್ಲವರ ತರುವಾಯ ಚೋಳರು ಮುನ್ನೂರು ವರ್ಷಗಳ ತನಕ ಅಲ್ಲಿ ರಾಜ್ಯಭಾರ ನಡೆಸಿದರು. ಅಷ್ಟರಲ್ಲೇ ಮುಸಲ್ಮಾನರ ದಾಳಿ ಮೊದಲಾಯಿತು. ಕ್ವಿಲಾನಿನ ವೀರ ಕವಿವರ್ಮನ್ ಕುಲಶೇಖರ ಅವರ ದಾಳಿಯನ್ನು ಅಡಗಿಸಿ ಕಂಚಿಯಲ್ಲಿ ತಾನೇ ಅರಸನಾಗಿ ಪಟ್ಟಾಭಿಷಿಕ್ತನಾದ. ಇದಕ್ಕೂ ಪುರ್ವದಲ್ಲಿ ರಾಷ್ಟ್ರಕೂಟದ ಮೂರನೆಯ ಕೃಷ್ಣ ಕಂಚಿಯನ್ನು ವಶಪಡಿಸಿಕೊಂಡಿದ್ದನೆಂದು ಇತಿಹಾಸ ಹೇಳುತ್ತದೆ. ಹೀಗೆ ಕಂಚಿ ಇತಿಹಾಸಪ್ರಸಿದ್ಧವಾಗಿ ಕೆಲವು ರಾಜವಂಶದವರ ಹಸ್ತಕ್ಷೇಪಕ್ಕೆ ಒಳಗಾಯಿತು. 14ನೆಯ ಶತಮಾನದಲ್ಲಿ ಕಂಚಿ ವಿಜಯನಗರ ರಾಜ್ಯದ ರಾಜಧಾನಿಯಾಗದಿದ್ದರೂ ತೊಂಡಮಂಡಲದ ಮುಖ್ಯಪಟ್ಟಣವಾಗಿ ಶೋಭಿಸಿತು. ವಿಜಯನಗರದ ರಾಜರು ಇಲ್ಲಿಗೆ ಪದೇ ಪದೇ ಬಂದು ಇಲ್ಲಿನ ದೇವರುಗಳಿಗೆ ಸೇವೆ ಸಲ್ಲಿಸುತ್ತಿದ್ದರು. ಕೆಲವು ರಾಜರ ಪಟ್ಟಾಭಿಷೇಕ ಕಂಚಿಯಲ್ಲಿ ನಡೆಯಿತು. ಈ ರಾಜರ ಕಾಲದಲ್ಲಿ ಕಂಚಿಯ ದೇವಸ್ಥಾನಗಳು ತುಂಬ ವಿಸ್ತರಿಸಿದುವು.

ದೇವಸ್ಥಾನಗಳು[ಬದಲಾಯಿಸಿ]

temple tower with a lake in the foreground
Ekambareswarar temple – the largest temple in the city
Two pillars with hanging stone chain
Sculpted pillars and stone chain in Varadarajar temple

ಈಗಲೂ ಕಂಚಿ ಪ್ರಸಿದ್ಧ ಯಾತ್ರಾಸ್ಥಳವೆನಿಸಿದೆ. ಅಲ್ಲಿನ ಏಕಾಂಬರ ದೇವಸ್ಥಾನ ಇಡೀ ಭಾರತದಲ್ಲೇ ಅತ್ಯಂತ ದೊಡ್ಡ ದೇವಸ್ಥಾನ. ಅದರ ಗೋಪುರದ ಎತ್ತರ 57.24 ಮೀ. ಅದರ ಪೌಳಿಯ ಗೋಡೆ ಇಪ್ಪತ್ತೈದು ಎಕರೆ ಪ್ರದೇಶವನ್ನು ಒಳಗೊಂಡಿದೆ. ಕೇಂದ್ರ ದೇವಸ್ಥಾನದ ಸುತ್ತ ಅರುವತ್ತುಮೂರು ಪುರಾತನರ ವಿಗ್ರಹಗಳಿವೆ. ಇತ್ತೀಚೆಗೆ ನಾಟುಕೋಟಿ ಶೆಟ್ಟರು ಶಿಥಿಲವಾಗಿದ್ದ ಭಾಗಗಳನ್ನು ಹತ್ತಿಪ್ಪತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಸರಿಪಡಿಸಿರುತ್ತಾರೆ. ಏಕಾಂಬರನಾಥ ದೇವಸ್ಥಾನವನ್ನು ಬಿಟ್ಟರೆ ಉಳಿದ ಶೈವ ದೇವಸ್ಥಾನಗಳಲ್ಲಿ ಕಾಮಾಕ್ಷಿ ದೇವಸ್ಥಾನ ಪ್ರಸಿದ್ಧವಾದುದು. ಮೊದಲಿಗೆ ಈ ದೇವಸ್ಥಾನದಲ್ಲಿ ಪಶುಬಲಿ ಯಥೇಷ್ಟವಾಗಿ ನಡೆಯುತ್ತಿತ್ತು. ಶಂಕರಾಚಾರ್ಯರು ಈ ದುಷ್ಟ ಸಂಪ್ರದಾಯವನ್ನು ತಪ್ಪಿಸಿ ಸಾತ್ತ್ವಿಕ ಪುಜೆ ನಡೆಯುವಂತೆ ಕಟ್ಟುಮಾಡಿದರು. ಇಲ್ಲಿದ್ದ ಪುಜಾರಿಗಳನ್ನು ಓಡಿಸಿ ತಮ್ಮ ಸ್ಥಳದಿಂದ ನಂಬೂದರಿ ಬ್ರಾಹ್ಮಣರನ್ನು ಕರೆಸಿ ಅವರನ್ನು ಅರ್ಚಕರನ್ನಾಗಿ ನೇಮಿಸಿದರು. ಈಗಲೂ ಇಲ್ಲಿನ ಅರ್ಚಕರು ಆ ಸಂತತಿಯವರೇ ಆಗಿದ್ದಾರೆ. ವಿಷ್ಣುಕಂಚಿಯಲ್ಲಿ ತುಂಬ ಪ್ರಸಿದ್ಧವಾದದ್ದು ವರದರಾಜಸ್ವಾಮಿ ದೇವಸ್ಥಾನ. ಅದರಲ್ಲಿ ಚೋಳರ ಮತ್ತು ವಿಜಯನಗರ ರಾಜರ ಶಾಸನಗಳಿವೆ. ದೇವಸ್ಥಾನದ ಉದ್ದ 1,200 ಅಡಿ, ಅಗಲ 800 ಅಡಿ. ವಿಸ್ತಾರದಲ್ಲಿ ಇದು ಇತರ ದೇವಸ್ಥಾನಗಳಿಗಿಂತ ದೊಡ್ಡದಾದರೂ ಏಕಾಂಬರನಾಥ ದೇವಸ್ಥಾನದಷ್ಟು ದೊಡ್ಡದಲ್ಲ. ಏಕಾಂಬರನಾಥ ದೇವಸ್ಥಾನದಲ್ಲಿ ಶೈವಪುರಾತನರಿಗೆ ಪುಜೆ ಸಲ್ಲುವಂತೆ ಈ ದೇವಸ್ಥಾನದಲ್ಲಿ ವಿಷ್ಣುಭಕ್ತರಾದ ಆಳ್ವಾರುಗಳಿಗೆ ಮತ್ತು ರಾಮಾನುಜಾಚಾರ್ಯರಿಗೆ ಪುಜೆ ಸಲ್ಲುತ್ತದೆ. ಕಂಚಿಯಲ್ಲಿ ನಡೆಯುವ ಉತ್ಸವಗಳೆಲ್ಲೆಲ್ಲ ವರದರಾಜಸ್ವಾಮಿಯ ಉತ್ಸವಗಳು ತುಂಬ ಜನಮೆಚ್ಚಿನವು. ನಿತ್ಯೋತ್ಸವ, ಮಾಸೋತ್ಸವಗಳು ವಿಜೃಂಭಣೆಯಿಂದ ಜರುಗುತ್ತದೆ. ಇಲ್ಲಿನ ಸಂವತ್ಸರೋತ್ಸವ ಹತ್ತುಹನ್ನೆರಡು ದಿನಗಳ ಕಾಲ ನಡೆಯುತ್ತದೆ. ಇಲ್ಲಿ ನಡೆಯುವ ದೇವರ ಮೆರವಣಿಗೆಯ ಬಳಸು ಆರು ಮೈಲಿ; ಉತ್ಸವ ವಿಷ್ಣುಕಂಚಿಯಿಂದ ಶಿವಕಂಚಿಗೆ ಹೋಗಿ ಮತ್ತೆ ವಿಷ್ಣುಕಂಚಿಗೆ ಹಿಂತಿರುಗುತ್ತದೆ. ಇಲ್ಲಿಯ ಸ್ಥಳಪುರಾಣದ ಪ್ರಕಾರ ಶಿವನೂ ವಿಷ್ಣುವೂ ಭಾವ ಮೈದುನರು. ವಾರ್ಷಿಕೋತ್ಸವದ ಏಳನೆಯ ದಿವಸ ಹೊರಟ ಮೆರವಣಿಗೆ ಕೆಲವು ಕಾಲ ಏಕಾಂಬರ ದೇವಾಲಯದ ಮುಂದೆ ತಂಗುತ್ತದೆ.

ಉತ್ಖನನಗಳು[ಬದಲಾಯಿಸಿ]

ಇಲ್ಲಿ ಹಲವಾರು ಬಾರಿ ನಡೆದ ಪ್ರ್ರಾಕ್ತನ ಶಾಸ್ತ್ರೀಯ ಉತ್ಖನನಗಳು ಕಂಚಿಯ ಇತಿಹಾಸದ ಆರಂಭಕಾಲದ ಮಾಹಿತಿಗಳನ್ನು ಒದಗಿಸಿಕೊಡುತ್ತವೆ. ಪಾಲೆಯರ ದಿಬ್ಬ ಅಥವಾ ಪಲ್ಲವ ಮೇಟು ಎಂಬ ಇತ್ತರವಾದ ಸ್ಥಳದಲ್ಲಿ 1952-53ರಲ್ಲಿ ನಡೆಸಿದ ಉತ್ಖನನದಿಂದ ಪಲ್ಲವರ ಕಾಲಕ್ಕೆ ನಿರ್ದೇಶಿಸಬಹುದಾದ ಯಾವ ಮಾಹಿತಿಗಳೂ ದೊರಕಿರಲಿಲ್ಲ. ಅನೇಕ ಶಂಖಗಳೂ ಶಂಖಗಳಿಂದ ಮಾಡಿದ ಬಳೆಯ ಚೂರುಗಳೂ ದೊರಕಿದುವು. ಆನಂತರ 1965-66ರಲ್ಲಿ ಅದೇ ಇಲಾಖೆಯವರು ಉತ್ಖನನ ನಡೆಸಿದರು. ಇತ್ತೀಚೆಗೆ 1968-69ಮತ್ತು 1969-70ರಲ್ಲಿ ಮದರಾಸು ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ವಿಭಾಗದವರು ಉತ್ಖನನಗಳನ್ನು ನಡೆಸಿದರು. ಈ ಸಂಶೋಧನೆಗಳಿಂದ ಕಂಚಿ ಪ್ರ.ಶ.ದ ಆರಂಭ ಕಾಲದಿಂದಲೂ ನಾಗರಿಕತೆಯ ಕೇಂದ್ರವಾಗಿತ್ತೆಂದು ತಿಳಿದುಬರುತ್ತದೆ. ಪ್ರ.ಶ.ದ ಮೊದಲೆರಡು ಶತಮಾನಗಳಲ್ಲಿ ರೋಮನರು ದಕ್ಷಿಣ ಭಾರತದೊಡನೆ ವಾಣಿಜ್ಯ ಸಂಬಂಧ ಪಡೆದಿದ್ದ ಸಂಗತಿ ಪುರ್ವತೀರದಲ್ಲಿ ಪಾಂಡಿಚೇರಿಯ ಬಳಿಯಿರುವ ಅರಿಕಮೇಡು ಮತ್ತು ಕಾವೇರಿಯ ಮುಖಜಭೂಮಿಯಲ್ಲಿರುವ ಕಾವೇರಿ ಪುಂಪಟ್ಟಿನಮ್ ಉತ್ಖನನಗಳಿಂದ ತಿಳಿದು ಬಂದಿದೆ. (ನೋಡಿ- ಅರಿಕಮೇಡು) (ನೋಡಿ- ಕಾವೇರಿ-ಪೊಂಪಟ್ಟಿನಂ) ಒಳಪ್ರದೇಶದಲ್ಲಿ ಅವರ ವ್ಯಾಪಾರ ಕೇಂದ್ರಗಳಿದ್ದುದಕ್ಕೆ ದಕ್ಷಿಣ ಭಾರತದ ಹಲವಾರು ಭಾಗಗಳಲ್ಲಿ ದೊರೆತಿರುವ ಅವರ ನಾಣ್ಯಗಳು ಮತ್ತಿತರ ಅವಶೇಷಗಳು ಸಾಕ್ಷಿಗಳಾಗಿವೆ. ಚಿತ್ರದುರ್ಗದ ಪರಿಸರದಲ್ಲಿರುವ ಚಂದ್ರವಳ್ಳಿ, ಕಾವೇರಿ ದಂಡೆಯಲ್ಲಿ ತಿರುಚಿರಾಪಳ್ಳಿಯ ಭಾಗವಾದ ಪ್ರಾಚೀನ ಚೋಳ ರಾಜಧಾನಿ ಉರೈಯೂರುಗಳಲ್ಲಿ ನಡೆದ ಉತ್ಖನನಗಳೂ ಈ ವಿಷಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನೊದಗಿಸಿವೆ. ಪ್ರಸ್ತುತ ಕಂಚಿ ಉತ್ಖನನಗಳು ಸಹ ಸಮಕಾಲೀನ ರೋಮನರ ಅವಶೇಷಗಳನ್ನು ಒದಗಿಸಿವೆ. ಪ್ರ.ಶ.ದ ಆರಂಭಕಾಲಕ್ಕೆ ನಿರ್ದೇಶಿಸಿಬಹುದಾದ ಪದರಗಳಲ್ಲಿ ರೋಮನರು ಎಣ್ಣೆ ಮತ್ತು ಮದ್ಯಗಳ ದಾಸ್ತಾನಿಗೆ ಉಪಯೋಗಿಸುತ್ತಿದ್ದ ಸುಟ್ಟ ಮಣ್ಣಿನ ನೀಳವಾದ ಹೂಜಿಗಳು (ಅಂಪೋರ) 36ಕ್ಕೂ ಹೆಚ್ಚು ಸಂಖ್ಯೆಯಲ್ಲಿ ದೊರಕಿ, ಇಲ್ಲಿದ್ದ ರೋಮನರ ವ್ಯಾಪಾರಕೋಠಿಯಪ್ರಾಮುಖ್ಯವನ್ನು ತೋರಿಸುತ್ತದೆ. ಸು. ಅದೇ ಕಾಲಕ್ಕೆ ನಿರ್ದೇಶಿಸಬಹುದಾದ ಸುಟ್ಟ ಇಟ್ಟಿಗೆಯ ಕಟ್ಟಡವೊಂದರ ಅವಶೇಷಗಳೂ ಬೆಳಕಿಗೆ ಬಂದಿವೆ. ಸರಾಸರಿ 18´9´3 ಅಂಗುಲಗಳ ಅಳತೆಯ ಇಟ್ಟಿಗೆಗಳು ದಕ್ಷಿಣ ಭಾರತದಲ್ಲಿ ಶಾತವಾಹನರ ಕಾಲದಿಂದ ಹಲವಾರು ಶತಮಾನಗಳವರೆಗೂ ಬಳಕೆಯಲ್ಲಿದ್ದುವು. ಈ ಉತ್ಖನನಗಳಲ್ಲಿ ಬೆಳಕಿಗೆ ಬಂದ ಮತ್ತೊಂದು ಮುಖ್ಯ ಸಂಗತಿಯೆಂದರೆ ಮಧ್ಯ ಚಾರಿತ್ರಿಕ ಯುಗಕ್ಕೆ ನಿರ್ದೇಶಿಸಬಹುದಾದ ಸುಟ್ಟಮಣ್ಣಿನ ಬಳೆಯಾಕಾರದ ವಲಯಗಳಿಂದ ಪಕ್ಕಗಳನ್ನು ಭದ್ರಪಡಿಸಿದ ನೀರಿನ ಬಾವಿಗಳು. ಈ ರೀತಿಯ ಬಾವಿಗಳು ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದ್ದುವು. ಇವಲ್ಲದೆ ವಿವಿಧ ರೀತಿಯ ಮಡಕೆ ಚೂರುಗಳನ್ನು ಮಣಿಗಳು, ಬಳೆ ಚೂರುಗಳು, ಸುಟ್ಟಮಣ್ಣಿನ ವಸ್ತುಗಳು ಮತ್ತು ಕೆಲವು ಪುರಾತನ ನಾಣ್ಯಗಳು ದೊರಕಿ ಅಂದಂದಿನ ಜನಜೀವನದ ಮೇಲೆ ಬೆಳಕನ್ನು ಬೀರಿವೆ.

ಪ್ರಾಕ್ತನ ವಿಚಾರ[ಬದಲಾಯಿಸಿ]

ಪ್ರ.ಶ. 2ನೆಯ ಶತಮಾನಕ್ಕೂ ಮೊದಲು ಮರ, ಇಟ್ಟಿಗೆ, ಗಾರೆಗಳಿಂದ ಕಟ್ಟಿದುವೆಂದು ಹೇಳಲಾದ ಏಕಾಂಬರೇಶ್ವರ, ತಿರುವೇರ್ಕಾ, ತಿರುಮೇಟ್ರಳಿ, ಕಚ್ಛಪೇಶ್ವರ ಮುಂತಾದ ದೇವಾಲಯಗಳ ವಿಷಯ ಪ್ರಸ್ತಾಪವಾಗಿದ್ದರೂ ಅವುಗಳ ಜೀರ್ಣೋದ್ಧಾರಕಾಲದಲ್ಲಿ ಕಲ್ಲನ್ನು ಬಳಸಲಾಗಿದೆ. ಮೊಟ್ಟಮೊದಲಿಗೆ ಈ ಪ್ರಾಂತ್ಯದಲ್ಲಿ ದೇವಾಲಯ ನಿರ್ಮಾಣಕ್ಕೆ ಕಲ್ಲನ್ನು ಉಪಯೋಗಕ್ಕೆ ತಂದ ಮೊದಲನೆಯದು ಮಹೇಂದ್ರ ಪಲ್ಲವನಕಾಲದ (ಪ್ರ.ಶ. 610-30) ದೇವಾಲಯವಾವುದೂ ಕಂಚಿಯಲ್ಲಿ ಈಗಿಲ್ಲದಿದ್ದರೂ ಅವನ ಕಾಲದ ದೇವಾಲಯವೊಂದರ ಶಾಸನಗಳಿಂದೊಡಗೂಡಿದ ಕೆಲವು ಕಂಬಗಳು ಏಕಾಂಬರೇಶ್ವರ ದೇವಾಲಯದಲ್ಲಿ ಕಂಡುಬಂದಿವೆ. ಇಲ್ಲಿನ ದೇವಮಂದಿರಗಳು, ಮೂರ್ತಿಗಳು ದಕ್ಷಿಣ ಭಾರತದ ಕಲಾವೈಭವದ ಔನತ್ಯವನ್ನು ಸೂಚಿಸುತ್ತವೆ. ಪಲ್ಲವ ರಾಜಸಿಂಹ ಕಟ್ಟಿಸಿದ ರಾಜಸಿಂಹೇಶ್ವರಗೃಹವೇ (ಪ್ರ.ಶ. 7ನೆಯ ಶತಮಾನ) ಕೈಲಾಸನಾಥ ದೇವಾಲಯ, ಎರಡನೆಯ ವಿಕ್ರಮಾದಿತ್ಯ ಕಂಚಿಯನ್ನು ಗೆದ್ದು ಅಲ್ಲಿಯ ಸಂಪತ್ತನ್ನು ಸ್ವಾಧೀನಪಡಿಸಿಕೊಂಡು ಈ ಭವ್ಯವೂ ಸುಂದರವೂ ಆದ ಶಿವಾಲಯವನ್ನು ನೋಡಿ ಭಕ್ತಿಭರದಿಂದ ಆ ಸಂಪತ್ತನ್ನೆಲ್ಲ ಈ ದೇವಾಲಯಕ್ಕೆ ದಾನಮಾಡಿದನೆಂದು ಅಲ್ಲಿ ಕೊರೆದಿರುವ ಅವನ ಕನ್ನಡ ಶಾಸನದಿಂದ ಗೊತ್ತಾಗುತ್ತದೆ. ಈ ದೇವಾಲಯ ಶುದ್ಧವಾದ ದ್ರಾವಿಡ (ದಕ್ಷಿಣ) ಶೈಲಿಯಲ್ಲಿ ಕಟ್ಟಿದ್ದಾಗಿದೆ. ಇದಕ್ಕೆ ಪಲ್ಲವ ಶೈಲಿಯೆಂದೂ ಹೆಸರಿದೆ. ಇಲ್ಲಿಯ ಶಿವ, ಸೋಮಸ್ಕಂದ ಮೂರ್ತಿಗಳೂ ಮಹಿಷಾಸುರಮರ್ದಿನಿಯ ಮೂರ್ತಿಯೂ ನಟರಾಜನ ವಿಗ್ರಹಗಳೂ ಪಲ್ಲವಶಿಲ್ಪದ ಖ್ಯಾತ ಮಾದರಿಗಳು. ವೈಕುಂಠ ಪೆರುಮಾಳ್, ಮುಕ್ತೇಶ್ವರ, ಮತಂಗೇಶ್ವರ, ಐರಾವತೇಶ್ವರ ಮೊದಲಾದ ದೇವಸ್ಥಾನಗಳು ಪಲ್ಲವ ಶೈಲಿಯಲ್ಲಿದ್ದು ಗರ್ಭಗೃಹ, ಅರ್ಧಮಂಟಪ, ವಿಮಾನಗಳಿಂದಲೂ ಕುಸುರಿ ರೇಖಾಚಿತ್ರಗಳುಳ್ಳ ಕಂಬ ಮತ್ತು ವಿವಿಧ ಸುಂದರ ಸ್ತ್ರೀಪುರುಷರ ಶಿಲ್ಪಗಳಿಂದಲೂ ಅಲಂಕೃತವಾಗಿ ಸುಂದರವಾಗಿವೆ. ಚೋಳರು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಇಲ್ಲಿ ಅನೇಕ ದೇವಮಂದಿರಗಳನ್ನು ಕಟ್ಟಿಸಿದ್ದಾರೆ. ಸೊಕ್ಕೇಶ್ವರ, ಪಾಂಡವ ಪೆರುಮಾಳ್, ಜ್ವರಹರೇಶ್ವರ, ಕಾಮಾಕ್ಷಿ ದೇವಾಲಯಗಳು ತಮ್ಮ ಎತ್ತರವಾದ ಭವ್ಯ ವಿಮಾನಗಳಿಂದ ಕಲಾವಿದರ ಚಿತ್ತವನ್ನು ಆಕರ್ಷಿಸುತ್ತವೆ. ವಿಜಯನಗರದ ಅರಸರು ಹೊಸತಾಗಿ ದೇವಾಲಯಗಳನ್ನು ಕಟ್ಟಿಸದಿದ್ದರೂ ಹಳೆಯ ಮಂದಿರ ಗಳನ್ನು ಜೀರ್ಣೋದ್ಧಾರ ಮಾಡಿ, ಅನೇಕ ಮಂಟಪ, ಪ್ರಾಕಾರ, ಗೋಪುರಗಳನ್ನು ಜೋಡಿಸಿ ವಿಸ್ತಾರಗೊಳಿಸಿ ಅಲ್ಲಿನ ವಾಸ್ತುಶಿಲ್ಪದ ಭವ್ಯತೆಯನ್ನು ಹೆಚ್ಚಿಸಿದ್ದಾರೆ. ಕೃಷ್ಣದೇವಾಲಯ ಏಕಾಂಬರೇಶ್ವರ ದೇವಾಲಯದ ದಕ್ಷಿಣಗೋಪುರವನ್ನು ಕಟ್ಟಿಸಿದ. ಇದು ದಕ್ಷಿಣ ಹಿಂದೂಸ್ಥಾನ ದಲ್ಲಿಯೇ ಎಲ್ಲಕ್ಕೂ ಎತ್ತರವೂ ಅಗಲವೂ ಆದುದಾಗಿದೆ. ಹಂಪೆಯ ವಿಜಯ ವಿಟ್ಠಲನ ಗುಡಿಯ ಕಲಾ ಕುಶಲತೆಯನ್ನು ಇಲ್ಲಿ ಕಾಣಬಹುದು. ಹರಿಹರ (ಪ್ರ.ಶ. 1393) ಕಾಮಾಕ್ಷಿ ಗುಡಿಯ ವಿಮಾನವನ್ನು ಕಟ್ಟಿಸಿದ. ಇಲ್ಲಿಯ ಕಲ್ಲಿನ ಮಂಟಪದಲ್ಲಿ ಕೂಡಿಸಲ್ಪಟ್ಟ ಕೂರ್ಮನ ವಿಗ್ರಹ ಅತ್ಯಂತ ಸುಂದರವಾಗಿದೆ. ನೂರು ಕಂಬದ ವರದರಾಜಮಂದಿರದ ಭವ್ಯವಾದ ಮಂಟಪ ಕೆತ್ತನೆಯ ಕುಶಲತೆಯ ಪರಿಕಾಷ್ಠೆಯನ್ನು ತೋರಿಸುತ್ತದೆ. ಏಕಾಂಬರೇಶ್ವರ ಗುಡಿ, ಕಾಮಾಕ್ಷಿ ಗುಡಿ ಮತ್ತು ವರದರಾಜ ಮಂದಿರಗಳು ಶಿಲ್ಪಕಲೆಯ ಆಗರ ಗಳೆನಿಸಿವೆ. ಕಂಚಿಯಲ್ಲಿ ಶೈವ, ವೈಷ್ಣವ ಮಂದಿರಗಳಲ್ಲದೆ ಜೈನ ತೀರ್ಥಂಕರರ ಮತ್ತು ಬುದ್ಧನ ವಿಗ್ರಹಗಳೂ ವಿಶೇಷವಾಗಿ ಸಿಕ್ಕಿವೆ. ಜೈನರ ಚಂದ್ರಪ್ರಭ ಮತ್ತು ವರ್ಧಮಾನರ ಬಸದಿಗಳು ಪಲ್ಲವ ಶೈಲಿಯಲ್ಲಿ ಕಟ್ಟಿದವಾಗಿವೆ. ವರ್ಧಮಾನ ಬಸದಿಯ ಸಂಗೀತ ಮಂಟಪದ ಒಳ ಛತ್ತಿನಲ್ಲಿಯೂ ಮುಖ ಮಂಟಪದಲ್ಲಿಯೂ 11ನೆಯ ಶತಮಾನದ ಬಣ್ಣದ ಚಿತ್ರಗಳು ತೀರ್ಥಂಕರರ ಜೀವನ ಚರಿತ್ರೆಯನ್ನು ಚಿತ್ರಿಸುತ್ತವೆ. ಕಾಂಚೀ ನಗರ ದಕ್ಷಿಣದ ವಾಸ್ತು ಮತ್ತು ಮೂರ್ತಿ ಶಿಲ್ಪದ ಬೆಳೆವಣಿಗೆಯ ಕ್ರಮವನ್ನು ತೋರಿಸುವ ಭವ್ಯ ಪ್ರದರ್ಶನಾಲಯವೆಂದು ಹೇಳಬಹುದು. ಬಾದಾಮಿ, ಪಟ್ಟದಕಲ್ಲು, ಐಹೊಳೆಗಳು ಚಾಲುಕ್ಯ ಶಿಲ್ಪದ ಮಾದರಿಗಳಾದರೆ ಕಂಚಿ, ಮಹಾಬಲಿಪುರ, ತಿರುಕ್ಕುಳಿಕ್ಕುನ್ರಂ ಮೊದಲಾದ ಕ್ಷೇತ್ರಗಳು ಪಲ್ಲವ ಮತ್ತು ಚೋಳರ ಮಾದರಿಗಳಾಗಿವೆ. (ಆರ್.ಎಸ್.ಪಿ) ಅನಂತರದ 2ನೆಯ ನರಸಿಂಹವರ್ಮ ರಾಜಸಿಂಹನಿಂದ (ಪ್ರ.ಶ. 690-728) ನಿರ್ಮಿಸಲ್ಪಟ್ಟ ರಾಜಸಿಂಹೇಶ್ವರ ಅಥವಾ ಕೈಲಾಸನಾಥ ದೇವಾಲಯ ಪಲ್ಲವನಿರ್ಮಿತ ವಾಸ್ತುಶಿಲ್ಪಗಳಲ್ಲೇ ಅತ್ಯಂತ ಸುಂದರವಾದುದು. ಸುಂದರವಾದ ಗರ್ಭಗುಡಿಯ ಮೇಲಿರುವ ವಿಮಾನ, ಕಂಬಗಳಿಂದ ಕೂಡಿದ ಮಂಟಪ, ಮುಂಭಾಗ ಮತ್ತು ಸುತ್ತಲೂ ಪ್ರಾಕಾರದಲ್ಲಿರುವ 58 ಪುಟ್ಟ ಗುಡಿಗಳೂ ಅವುಗಳಲ್ಲಿರುವ ಮೆದುವಾದ ಮರಳುಗಲ್ಲಿನಿಂದ ಮಾಡಲ್ಪಟ್ಟಿರುವ ಶಿವ ವಿಗ್ರಹಗಳೂ ಈ ದೇವಾಲಯದ ಹಿರಿಮೆಯ ಪ್ರತೀಕಗಳು. ಮೊದಲಿಗೆ ಈ ವಿಗ್ರಹಗಳನ್ನು ಅಲಂಕರಿಸಲು ಬಳಸಿದ ಆ ಬಣ್ಣಗಳ ಚಿಹ್ನೆಗಳು ಮಾತ್ರ ಈಗ ಉಳಿದುಬಂದಿದೆ. ಈ ಮಂದಿರದ ಕಂಬವೊಂದರ ಮೇಲೆ ಚಾಲುಕ್ಯ ಅರಸ 2ನೆಯ ವಿಕ್ರಮಾದಿತ್ಯ ಕಂಚಿಯನ್ನು ಗೆದ್ದಾಗ ಕೆತ್ತಿಸಿದ ಕನ್ನಡ ಶಾಸನ ಕಂಡುಬರುತ್ತದೆ. ಅನಂತರ ನಿರ್ಮಿತವಾದ ವೈಕುಂಠ ಪೆರುಮಾಳ್ ದೇವಾಲಯ ಅಮೋಘವಾಗಿದ್ದು ಚಾರಿತ್ರಿಕ ದೃಷ್ಟಿಯಲ್ಲಿ ಪಲ್ಲವನಿರ್ಮಿತ ಮಂದಿರಗಳಲ್ಲಿ ಅತ್ಯಂತ ಗಣ್ಯವಾದುದಾಗಿದೆ. ನಂದಿವರ್ಮ ಪಲ್ಲವ ಮಲ್ಲನಿಂದ ನಿರ್ಮಿತವಾದ ಇದಕ್ಕೆ ಪರಮೇಶ್ವರ ವಿಣ್ಣಗರವೆಂದೂ ಹೆಸರಿದೆ. ಗರ್ಭಗುಡಿ, ಅಂತರಾಳ, ಕಂಬಗಳಿಂದ ಕೂಡಿದ ಮಂಟಪ ಮತ್ತು ಚಾವಣಿಯುಳ್ಳ ಮೊಗಸಾಲೆಗಳಿಂದ ಕೂಡಿರುವ ಈ ದೇವಾಲಯದ ವಿಮಾನ ನಾಲ್ಕಂತಸ್ತುಗಳಲ್ಲಿ ಪ್ರತಿಯೊಂದರಲ್ಲೂ ಒಂದು ಗುಡಿಯಿದ್ದು ಎರಡಂತಸ್ತುಗಳಿಗೊಂದರಂತೆ ಪ್ರದಕ್ಷಿಣೆಪಥವೂ ಇದೆ. ಇಲ್ಲಿ ಅನೇಕ ಶಿಲಾಶಾಸನಗಳಿವೆ. ಪಲ್ಲವ ವಾಸ್ತುಶೈಲಿಯ ಔನ್ನತ್ಯವನ್ನು ಈ ದೇವಾಲಯದಲ್ಲಿ ನೋಡಬಹುದು. ಮೇಲಿನೆರಡು ದೇವಾಲಯಗಳೂ ರಾಜಸಿಂಹಶೈಲಿಗೆ ಸೇರಿದುವು. ಅನಂತರ ನಿರ್ಮಿತವಾದ ನಂದಿವರ್ಮ ಪಲ್ಲವ ಮಲ್ಲನ ಶೈಲಿಗೆ ಸೇರಿದ ಮತ್ತು ಆತನ ರಾಣಿಯಿಂದ ನಿರ್ಮಿತವಾದ ಮುಕ್ತೇಶ್ವರ ಶಿವಾಲಯ ಮಹಾದೇವೀಶ್ವರವೆಂದು ಶಾಸನಗಳಲ್ಲಿ ಕರೆಯಲ್ಪಟ್ಟಿದೆ. ಎತ್ತರವಾದ ಜಗತಿಯ ಮೇಲಿರುವ ಈ ಮಂದಿರದಲ್ಲಿ ಗರ್ಭಗೃಹವಿದ್ದು ಮುಂಭಾಗದಲ್ಲಿ ಅಂತರಾಳಗಳಿವೆ. ಶಿವಲಿಂಗದ ಹಿಂಬದಿಯ ಗೋಡೆಯ ಮೇಲೆ ಸೋಮಾಸ್ಕಂ ವಿಗ್ರಹ ಕೆತ್ತಲ್ಪಟ್ಟಿವೆ. ಇಲ್ಲಿನ ಕಂಬಗಳ ಬುಡದಲ್ಲಿ ಸಿಂಹಗಳು ರೂಪಿತವಾಗಿವೆ. ಈ ಎರಡೂ ರಾಜಸಿಂಹ ವಾಸ್ತುಶೈಲಿಯ ಲಕ್ಷಣಗಳು. ಅಂತರಾಳದಲ್ಲಿ ರಾವಣಾನುಗ್ರಹ ಮತ್ತು ನೃತ್ಯ ಭಂಗಿಯಲ್ಲಿರುವ ಶಿವಮೂರ್ತಿಗಳ ಕೆತ್ತನೆಗಳಿವೆ. ಪಕ್ಕದಲ್ಲಿರುವ ಮಾತಂಗೇಶ್ವರ ದೇವಾಲಯ ನಂದಿವರ್ಮನ ಕಾಲಕ್ಕೆ ಸೇರಿದುದು. ಪುಟ್ಟದಾದ ವಾಲೀಶ್ವರನ ಮಂದಿರವೂ ಈ ಕಾಲಕ್ಕೆ ಸೇರುತ್ತದೆ. ಇಲ್ಲಿನ ಲಿಂಗದ ಮೇಲೆ 32 ಪಟ್ಟಿಗಳಿವೆ. ಹಿಂಬದಿಯ ಗೋಡೆಯಲ್ಲಿ ಸೋಮಾಸ್ಕಂಧ ಫಲಕದ ಬದಲು ಉಮಾಮಹೇಶ್ವರರ ಕೆತ್ತನೆಯಿದೆ. ಇದಲ್ಲದೆ ಐರಾವತೇಶ್ವರ, ತ್ರಿಪುರಾಂತಕೇಶ್ವರ, ಜಲಂಧರೇಶ್ವರ ಮೊದಲಾದ ಹಲವಾರು ದೇವಾಲಯಗಳು ಪಲ್ಲವರ ಕಾಲಕ್ಕೆ ಸೇರುತ್ತದೆ. ಅನಂತರ ಬಂದ ಚೋಳರ ಕಾಲದ ಹಲವಾರು ದೇವಾಲಯಗಳು ಇಲ್ಲವೆ. ಅವುಗಳಲ್ಲಿ ಮುಖ್ಯವಾದುವೆಂದರೆ ಚೊಕ್ಕೀಶ್ವರ, ಅನೇಕ ತಂಗಾವಥ, ಜ್ವರಹರೇಶ್ವರ ಪಾಂಡವ ಪೆರುಮಾಳ್ ಮುಂತಾದವು. ಚೊಕ್ಕೀಶ್ವರ ದೇವಾಲಯ ಮೊದಲ ಪರಾಂತಕನ ಕಾಲಕ್ಕೆ ಸೇರುತ್ತದೆ. ಅನೇಕ ತಂಗಾವಥ ದೇವಾಲಯದ ಕರ್ತೃ ಮೊದಲನೆಯ ಕುಲೋತ್ತುಂಗ ಚೋಳ. ಈಗ ಜನಪ್ರಿಯವಾಗಿ ಪುಜೆಗೊಳ್ಳುತ್ತಿರುವ ಮುಖ್ಯ ದೇವಾಲಯಗಳಾದ ಏಕಾಂಬರೇಶ್ವರ, ವರದರಾಜ ಪೆರುಮಾಳ್ ಮತ್ತು ಕಾಮಾಕ್ಷಿ ದೇವಾಲಯಗಳು ವಿಜಯನಗರದ ಕಾಲದಲ್ಲಿ ಬಹುಮಟ್ಟಿಗೆ ಜೀರ್ಣೋದ್ಧಾರಗೊಂಡಿವೆ. ಏಕಾಂಬರೇಶ್ವರ ದೇವಾಲಯದ ಒಳಭಾಗ, ಗರ್ಭಗೃಹ ಮತ್ತು ಅದರ ಪರಿಸರಗಳು ಮೂರನೆಯ ಕುಲೋತ್ತುಂಗನ ಕಾಲಕ್ಕೆ ಸೇರಬಹುದು. ಈ ವಿಶಾಲ ದೇವಾಲಯ ಕಂಚಿಯಲ್ಲೇ ಅತ್ಯಂತ ಎತ್ತರವಾದ ಗೋಪುರಗಳನ್ನು ಹೊಂದಿದೆ. ಒಂಬತ್ತು ಅಂತಸ್ತುಗಳುಳ್ಳ ದಕ್ಷಿಣ ಭಾರತದ ಎತ್ತರವಾದ ಗೋಪುರಗಳನ್ನು ಹೊಂದಿದೆ. ಒಂಬತ್ತು ಅಂತಸ್ತುಗಳುಳ್ಳ ದಕ್ಷಿಣ ಭಾರತದ ಎತ್ತರವಾದ ಗೋಪುರಗಳಲ್ಲೊಂದಾದ ದಕ್ಷಿಣದ ಗೋಪುರ ಶ್ರೀಕೃಷ್ಣ ದೇವರಾಯ ನಿರ್ಮಿತ. ಆದಿಶಂಕರಾಚಾರ್ಯರ ಕಾಲಕ್ಕಿಂತಲೂ ಇದು ಹಳೆಯದೆಂದೂ ಇಲ್ಲಿರುವ ಶ್ರೀಚಕ್ರ ಅವರಿಂದ ಸ್ಥಾಪಿಸಲ್ಪಟ್ಟಿತೆಂದೂ ಪ್ರತೀತಿಗಳಿದ್ದರೂ ಈಗಿನ ಕಟ್ಟಡದ ಹಲಭಾಗಗಳು ಪ್ರ.ಶ. 12ನೆಯ ಶತಮಾನಕ್ಕೆ ಸೇರುತ್ತವೆ. ಮತ್ತೊಂದು ಮುಖ್ಯ ಮಂದಿರವಾದ ವರದರಾಜ ದೇವಾಲಯ ಹಸ್ತಿಗಿರಿ ಎಂಬ ಗುಡ್ಡದ ಮೇಲೆ ಸ್ಥಾಪಿತವಾಗಿದೆ. ಈ ಮಂದಿರದ ವಿಶಿಷ್ಟ ಲಕ್ಷಣವೆಂದರೆ ಗರ್ಭಗುಡಿ ಎರಡನೆಯ ಅಂತಸ್ತಿನಲ್ಲಿದೆ. ವಿಜಯನಗರ ವಾಸ್ತುಶೈಲಿಯ ಮುಖ್ಯ ಲಕ್ಷಣಗಳನ್ನು ಇಲ್ಲಿ ಕಾಣಬಹುದು. ಕಂಬಗಳ ಮೇಲಿನ ಮೂರ್ತಿಶಿಲ್ಪಗಳು ಜೀವಂತಸುಂದರ ಕಲಾಕೃತಿಗಳಾಗಿವೆ. ಇದರ ಪಕ್ಕದಲ್ಲಿರುವ ಜೈನಕಂಚಿಯೆಂದು ಹೆಸರಾದ ತಿರುಪ್ಪರುತ್ತಿ ಕುಂಡ್ರಮ್ ಜೈನಬಸದಿಗಳಿಂದಲೂ ಇತರ ಅವಶೇಷಗಳಿಂದಲೂ ಕೂಡಿದೆ. ಇಲ್ಲಿರುವ ಎರಡು ಬಸದಿಗಳಲ್ಲಿ ಸಣ್ಣದಾದ ಚಂದ್ರಪ್ರಭಾಲಯ ಪಲ್ಲವ ಕಾಲಕ್ಕೂ ದೊಡ್ಡದಾದ ವರ್ಧಮಾನ ಬಸದಿ ಚೋಳರ ಕಾಲಕ್ಕೂ ಸೇರುತ್ತದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: