ಕಮಾಚಿ ಹುಲ್ಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Cymbopogon
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
C. nardus
Binomial name
Cymbopogon nardus


ಕಮಾಚಿ ಹುಲ್ಲು ಏಷಿಯಾ ಮೂಲದ ಒಂದು ಜಾತಿಯ ಹುಲ್ಲು.

ವೈಜ್ಞಾನಿಕ ಹೆಸರು[ಬದಲಾಯಿಸಿ]

ಪೋಯೇಸಿ ಕುಟುಂಬ. ಇದರ ಶಾಸ್ತ್ರೀಯ ನಾಮ ಸಿಂಬೋಪೋಗಾನ್ ನಾರ್ಡಸ್ ಎಂದು.

ಪ್ರಭೇದಗಳು[ಬದಲಾಯಿಸಿ]

ಇದರಲ್ಲಿ ಮುಖ್ಯವಾಗಿ ಎರಡು ಪ್ರಭೇದಗಳಿವೆ-ಸಿಂಬೋಪೋಗಾನ್ ನಾರ್ಡಸ್ ಲೀನಾಬಾಟು ಮತ್ತು ಸಿ. ನಾರ್ಡಸ್ ಮಹಾವೆಂಗಿನಿ. ಸಿ.ನಾರ್ಡಸ್ ಮಹಾವೆಂಗಿನಿ ಭೇದವನ್ನು ಕೆಲವರು ಸಿಂಬೋಪೋಗಾನ್ ವಿಂಟರೇನಿಯಸ್ ಪ್ರಭೇದ ಎಂದೂ ಕರೆಯುತ್ತಾರೆ. ಎರಡು ಬಗೆಗಳನ್ನೂ ಶ್ರೀಲಂಕ ಮತ್ತು ಜಾವ ದ್ವೀಪಗಳಲ್ಲಿ ಯಥೇಚ್ಛವಾಗಿ ಬೆಳೆಸುತ್ತಾರೆ. ಅಲ್ಲದೆ ಆಫ್ರಿಕ, ಆಸ್ಟ್ರೇಲಿಯ ಮತ್ತು ಏಷ್ಯದ ಉಷ್ಣವಲಯಗಳಲ್ಲಿ ಇವು ಸ್ವಾಭಾವಿಕವಾಗಿ ಬೆಳೆಯುತ್ತವೆ. ಇದರ ಇನ್ನೊಂದು ವಿಧವಾದ ಸಿಂಬೋಪೋಗಾನ್ ಕನ್ಫರ್ಟಿಫ್ಲೋರಸ್ ಎಂಬ ಹುಲ್ಲು ನೀಲಗಿರಿ, ಅಣ್ಣಾಮಲೈ ಹಾಗೂ ಅಸ್ಸಾಮಿನ ಈಶಾನ್ಯ ಭಾಗಗಳ ಬೆಟ್ಟಪ್ರದೇಶಗಳಲ್ಲಿ ಬೆಳೆಯುತ್ತದೆ. ಕರ್ನಾಟಕ ಮತ್ತು ಪಂಜಾಬ್‍ಗಳಲ್ಲಿ ಕಾಣಬರುವ ಈ ಪ್ರಭೇದ ಸ್ಥಳೀಯವಾಗಿರಬಹುದು ಇಲ್ಲವೆ ಯಾವುದೋ ಒಂದು ಕಾಲದಲ್ಲಿ ಬೇರೆ ಕಡೆಯಿಂದ ತಂದು ರೂಢಿಸಿದ್ದಾಗಿರಬಹುದು.

ಲಕ್ಷಣಗಳು[ಬದಲಾಯಿಸಿ]

ಕಮಾಚಿ ಹುಲ್ಲು ಸು. 4'-6' ಎತ್ತರ ಬೆಳೆಯುತ್ತದೆ. ಇತರ ಹುಲ್ಲುಗಳಲ್ಲಿರುವಂತೆಯೇ ಇದರಲ್ಲೂ ತೊಡಕುಬೇರೂ ಉದ್ದವಾದ ಎಸಳಿನಂತಿರುವ ಎಲೆಗಳೂ ಇವೆ. ಎಲೆಗಳಲ್ಲಿ ಸಮಾನಾಂತರ ನಾಳವಿನ್ಯಾಸವಿದೆ. ಹೂಗೊಂಚಲು ಸಂಕೀರ್ಣಪುಷ್ಪಗುಚ್ಛ ಮಾದರಿಯದು. ಬಹುವಾಗಿ ಕವಲೊಡೆದು ವಿಪುಲ ಸಂಖ್ಯೆಯ ಪುಟ್ಟ ಪುಟ್ಟ ಹೂಗುಂಪುಗಳನ್ನು (ಸ್ಪೈಕ್ಲೆಟ್) ಹೊಂದಿರುತ್ತದೆ.

ಉಪಯೋಗಗಳು[ಬದಲಾಯಿಸಿ]

ಈ ಹುಲ್ಲಿನಿಂದ ಸಿಟ್ರೊನೆಲ ತೈಲವನ್ನು ತೆಗೆಯುತ್ತಾರೆ. ನಸುಹಳದಿ ಬಣ್ಣದ ಈ ಎಣ್ಣೆಯನ್ನು ಶ್ರೀಲಂಕ ಮತ್ತು ಜಾವ ದ್ವೀಪಗಳಲ್ಲಿ ಒಣಗಿಸಿದ ಎಲೆಗಳಿಂದ ಆಸವೀಕರಣದ (ಆವಿ ಬಟ್ಟಿಯಿಳಿಸುವಿಕೆಯ) ಮೂಲಕ ಹೊರ ತೆಗೆಯುತ್ತಾರೆ. ಸಾಧಾರಣವಾಗಿ ಕೃಷಿ ಮಾಡಿದ 8 ತಿಂಗಳ ಅನಂತರ ಹುಲ್ಲು ಎಣ್ಣೆ ತೆಗೆಯಲು ಯೋಗ್ಯವಾಗುತ್ತದೆ. ಹುಲ್ಲನ್ನು ವರ್ಷಕ್ಕೆ ನಾಲ್ಕು ಸಲ ಕಟಾವು ಮಾಡುತ್ತಾರೆ. ಎಣ್ಣೆಯ ಸರಾಸರಿ ವಾರ್ಷಿಕ ಉತ್ಪನ್ನ ಎಕರೆಗೆ 68 ಪೌಂಡುಗಳು. ಈ ಎಣ್ಣೆಯಲ್ಲಿ ಹಲವಾರು ಬಗೆಯ ಸಂಯುಕ್ತಗಳಿವೆ. ಇವುಗಳಲ್ಲಿ ಆಲ್ಕೊಹಾಲ್, ಜಿರಾನಿಯಾಲ್, ಸಿಟ್ರೊನೆಲ್ಲಾಲ್, ಮೀಥೈಲ್ ಯೂಜಿನಾಲ್, ಬೊರಿನಿಯಾಲ್, ಮೀಥೈಲ್ ಹೆಪಟೋನ್ ಮತ್ತು ಫಾರ್ನೆಸಾಲ್ ಇವು ಮುಖ್ಯವಾದುವು. ಸಿಂಬೋಪೋಗಾನ್ ನಾರ್ಡಸಿನಿಂದ ದೊರೆತ ಎಣ್ಣೆ ಬೇರೆ ಪ್ರಭೇದಗಳಿಂದ ದೊರೆತ ಎಣ್ಣೆಗಿಂತ ಅಷ್ಟು ಉತ್ತಮವಾದುದೇನಲ್ಲ. ಆದ್ದರಿಂದ ಇದನ್ನು ಕಡಿಮೆ ದರ್ಜೆಯ ಸುಗಂಧದ್ರವ್ಯಗಳನ್ನೂ ಸಾಬೂನುಗಳನ್ನೂ ಪಾಲಿಷ್ ಮತ್ತು ಕೀಟ ನಿರೋಧಕಗಳನ್ನೂ ತಯಾರಿಸಲು ಉಪಯೋಗಿಸುತ್ತಾರೆ. ಅಲ್ಲದೆ ಸಾಮಾನ್ಯವಾಗಿ ಸೊಳ್ಳೆಗಳ ನಿರ್ಮೂಲನಕ್ಕೆ ಪ್ರತಿರೋಧಕವಾಗಿಯೂ ಬಳಸುತ್ತಾರೆ. ಜಾವದಲ್ಲಿ ಇದನ್ನು ಕ್ಲಿಷ್ಟಸಾವಯವ ಸಂಯುಕ್ತಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಅಲ್ಲದೆ ಸಾಬೂನುಗಳಿಗೆ ಸುವಾಸನೆ ಕೊಡಲೂ ಬಳಸುತ್ತಾರೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಉಲ್ಲೇಖಗಳು[ಬದಲಾಯಿಸಿ]