ವಿಷಯಕ್ಕೆ ಹೋಗು

ಒಡ್ಡುದಾರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಒಡ್ಡುದಾರಿ ಎತ್ತರಿಸಿರುವ ಕಟ್ಟೆಯ ಮೇಲಿನ ರಸ್ತೆ; ಅಥವಾ ಜೌಗು ಅಥವಾ ತಗ್ಗಿನಲ್ಲಿರುವ ಜಾಗಕ್ಕೆ ಅಡ್ಡಲಾಗಿರುವ ಒಡ್ಡು; ಎಂದರೆ ಪಾದಗಳಿಂದ ಭದ್ರವಾಗಿ ತುಳಿದಿರುವ ಒಂದು ರಸ್ತೆ; ಅಥವಾ ಕಲ್ಲು ಹಾಕಿಸಿರುವ ಅಥವಾ ಮೇಲ್ಮೈ ಇರುವ ಕಾಲುದಾರಿ (ಕಾಸ್ವೇ). ಹರಿಯುವ ಪ್ರವಾಹಕ್ಕೆ ಅಡ್ಡಿಯಾಗದಂತೆ ನೀರನ್ನು ಹರಿಯಬಿಟ್ಟು ಪ್ರವಾಹ ಅಥವಾ ಪಾತ್ರದ ಚಲನವಲನಗಳಿಂದ ರಸ್ತೆಗೆ ಅಪಾಯವಾಗದಂತೆ ನಿರ್ಮಿಸಲಾಗುವ ಅರ್ಥದಲ್ಲಿ ಎಂಜಿನಿಯರಿಂಗ್ ಶಾಸ್ತ್ರದಲ್ಲಿ ಈ ಪದವನ್ನು ಬಳಸಲಾಗುತ್ತದೆ. ಒಡ್ಡುದಾರಿಯನ್ನು ಸಾಮಾನ್ಯವಾಗಿ ನದಿಯ ಪಾತ್ರಮಟ್ಟದಲ್ಲೇ ಆ ಪಾತ್ರ ಸಂಕುಚಿಸದಂತೆ ಅಳವಡಿಸಲಾಗುತ್ತದೆ. ಇದೇ ಮಾದರಿಯ ರಸ್ತೆಯನ್ನು ನಿರ್ಮಿಸಿ ಅದನ್ನು ಸುವ್ಯವಸ್ಥೆಯಲ್ಲಿಟ್ಟುಕೊಳ್ಳುವ ಅರ್ಥದಲ್ಲಿಯೂ ಈ ಪದವನ್ನು ಬಳಸಲಾಗುತ್ತದೆ.

ಬೆಳವಣಿಗೆ[ಬದಲಾಯಿಸಿ]

ವ್ಯಾಪಕವಾಗಿ ಒಡ್ಡುದಾರಿಯೆಂದರೆ ಸಂಚಾರದ ರಸ್ತೆಯನ್ನು ಹಳ್ಳದ ಅಥವಾ ಹೊಳೆಯ ಮೇಲೆ ಮಳೆಗಾಲದಲ್ಲಿ ಸಾಗಿಸುವ ಕಟ್ಟಡ. ಇದು ಭಾರತದ ರಸ್ತೆಗಳ ಮೇಲೆ ತಯಾರಾದದ್ದು 19ನೆಯ ಶತಮಾನದಲ್ಲಿ. ಇದಕ್ಕೆ ಮುಂಚೆ ಹೊಳೆಗಳನ್ನು ಬೇಸಿಗೆಯಲ್ಲಿ ಕಾಲುನಡಿಗೆಯಿಂದಲೂ ಕೆಲವು ನಿರ್ದಿಷ್ಟವಾದ ಸ್ಥಳಗಳಲ್ಲಿ ಗಾಡಿಗಳ ಮೇಲೂ ದಾಟಬಹುದಾಗಿತ್ತು. ಆದರೆ ಸಾಮಾನ್ಯವಾಗಿ ದೋಣಿಗಳ ಮೇಲೆ ದಾಟುವುದೇ ರೂಢಿ. ಎರಡು ದೋಣಿಗಳನ್ನು ಪಕ್ಕದಲ್ಲಿ ಸೇರಿಸಿ ಕಟ್ಟಿದ ಹರಿಗೋಲಿನ (ಇದಕ್ಕೆ ಜಂಗಾಲ್, ತೆಪ್ಪ ಎಂಬ ಹೆಸರುಗಳಿವೆ) ಮೇಲೆ ಸಾಗಿಸಬೇಕಾಗಿತ್ತು. ಈಗಲೂ ಪಶ್ಚಿಮದ ಕರಾವಳಿಯಲ್ಲಿ ನದಿಗಳು ಸಮುದ್ರವನ್ನು ಸೇರುವ ಕೆಲವು ಕಡೆಗಳಲ್ಲಿ ಹೀಗೆಯೇ ದಾಟಬೇಕು. ಒಡ್ಡುದಾರಿಯ ಮುಂದಿನ ಹೆಜ್ಜೆಯೇ ಗಾಡಿಯ ಸೇತುವೆ. ಸ್ಕಾಟ್ಲೆಂಡಿನ ಮ್ಯಾಕಡಮ್ (1756-1836) ತನ್ನ ಹೆಸರಿನಲ್ಲಿ ಈಗ ಪ್ರಖ್ಯಾತವಾಗಿರುವ ರಸ್ತೆಯನ್ನು 1815-29ರ ಅವಧಿಯಲ್ಲಿ ಲಂಡನ್ನಿನಿಂದ ಹಾಲಿಹೆಡ್ಡಿಗೆ ತಯಾರಿಸಿದ. ಇದೇ ರಸ್ತೆಯ ಮೇಲೆ ವೆಲ್ಪರ್ಡ್ (1757-1834) 1826ರಲ್ಲಿ ಮಿನೈ ಜಲಸಂಧಿಯ ಮೇಲೆ ಕಬ್ಬಿಣದ ತೂಗು ಸೇತುವೆಯನ್ನು ಕಟ್ಟಿದ, ಆಮೇಲೆ ಎಲ್ಲೆಲ್ಲಿಯೂ ಭದ್ರವಾದ ರಸ್ತೆಗಳನ್ನೂ ಹೊಳೆಗಳಿಗೆ ಅಡ್ಡಲಾಗಿ ಸೇತುವೆಗಳನ್ನೂ ಕಟ್ಟುವುದು ಪ್ರಾರಂಭವಾಯಿತು.

ಭಾರತದಲ್ಲಿ[ಬದಲಾಯಿಸಿ]

Route of the Grand Trunk Road

ಸೇತುವೆಯನ್ನು ಕಟ್ಟಲು ಬೇಕಾಗುವ ಹಣ ದೊರಕದೆ ಇರುವ ಕಡೆಗಳಲ್ಲಿ ಒಡ್ಡುದಾರಿಗಳನ್ನು ಕಟ್ಟಿದ್ದಾರೆ. ಭಾರತದಲ್ಲಿ ಮೊದಲು ಪಕ್ಕ ರಸ್ತೆಗಳು ತಯಾರಾದದ್ದು ಬ್ರಿಟಿಷ್ ಸೇನೆಯನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ವೇಗವಾಗಿ ಸಾಗಿಸುವುದಕ್ಕಾಗಿ. ಪೂರ್ವ ದಿಕ್ಕಿನಲ್ಲಿ ಕೋಲ್ಕತ್ತದಿಂದ ಪಶ್ಚಿಮದಲ್ಲಿ ಪೆಷಾವರಿನವರೆಗೆ 2415 ಕಿಮೀ ಉದ್ದದ ಗ್ರ್ಯಾಂಡ್ ಟ್ರಂಕ್ ರಸ್ತೆಯನ್ನು 1830-35ರ ಅವಧಿಯಲ್ಲಿ ತಯಾರಿಸಿದರು. ಈ ರಸ್ತೆ ಗಂಗಾನದಿಯನ್ನು ಕಾಶಿಯ ಬಳಿಯಲ್ಲಿ ದಾಟಿ ಮುಂದೆ ಸಿಂಧು ನದಿಯನ್ನು ತಾತ್ಕಾಲಿಕವಾದ ದೋಣಿಯ ಸೇತುವೆಯ ಮೇಲೆ ಹಾಯುತ್ತಿತ್ತು. ಇದೇ ರಸ್ತೆಯ ಮೇಲೆ ಶೋಣಾ ನದಿಯ ಮೇಲೆ ಒಂದು ಒಡ್ಡುದಾರಿಯನ್ನು ಕಟ್ಟಿದ್ದಾರೆ. ಇದರ ಉದ್ದ 3473.17 ಮೀ, ಅಗಲ 5 ಮೀ. ಮೊದಲು ನದಿಯ ದಡಗಳನ್ನು 20ಕ್ಕೆ ಒಂದರ ಇಳಿಜಾರಿನಲ್ಲಿ ಕತ್ತರಿಸಿ ನದಿಯ ತಳದಲ್ಲಿ ಎರಡು ಸಾಲು ದಸಿಗಳ (ಪೈಲ್ಸ್‌) ಮಧ್ಯೆ ಮರಳನ್ನು ಅಗೆಯುವಾಗ ಅದು ಜಾರದ ಹಾಗೆ ಬಿದಿರಿನ ಚೌಕಟ್ಟುಗಳು ಮತ್ತು ಚಾಪೆಗಳನ್ನು ನಿಲ್ಲಿಸಿ ಚೌಕಟ್ಟುಗಳನ್ನು ಭದ್ರವಾಗಿ ಹಿಡಿದು ನಿಲ್ಲಿಸುವುದಕ್ಕಾಗಿ ಒಡ್ಡುದಾರಿಯ ತಳಪಾಯದಲ್ಲಿ ಕಾಡುಮರದ ಕಂಬಗಳನ್ನು ಸಮಾಂತರವಾದ ಎರಡು ಸಾಲುಗಳಲ್ಲಿ 4.55ಮೀ ಆಳಕ್ಕೆ ಹೊಡೆದು ಇಳಿಸಿದ್ದಾರೆ. ತಳಪಾಯದ ಮೇಲೆ ಹೊಳೆಯ ಕಲ್ಲಿನ ಜೊತೆಗೆ ಸುಣ್ಣವನ್ನು ಬೆರೆಸಿ ತಯಾರಿಸಿದ ಕಾಂಕ್ರಿಟನ್ನು ಗೋಣಿ ಚೀಲಗಳಲ್ಲಿ ತುಂಬಿ ಹರಡಿದ್ದಾರೆ. ಅದರ ಮೇಲೆ 2ಳಿ´ ಮಂದವಾದ ಕಲ್ಲುಗಾರೆಯಿದೆ. ಇದು ನದಿಯ ಮಹಾ ಪ್ರವಾಹದಲ್ಲಿಯೂ ಕೊಚ್ಚಿ ಹೋಗದಷ್ಟು ಗಟ್ಟಿಯಾಗಿದೆ. ಈ ಕಲ್ಲುಗಾರೆಯ ಮೇಲೆ ಒಡ್ಡುದಾರಿಯ ಅಗಲದಲ್ಲಿ ಒಂದು 2.73 ಮೀ ಉದ್ದ, ಇನ್ನೊಂದು 2.12 ಮೀ. ಉದ್ದದ ಚಪ್ಪಡಿಗಳನ್ನು ಎಸೆಯನ್ನು ತಪ್ಪಿಸಿ ಭದ್ರವಾಗಿ ಕೂರಿಸಿದ್ದಾರೆ. ಚಪ್ಪಡಿಗಳ ಅಗಲ 0.45 ಮೀ, ದಪ್ಪ 0.30 ಮೀ. ಈ ಒಡ್ಡುದಾರಿಗಳನ್ನು ಹೊಳೆ ಪ್ರವಾಹದಲ್ಲಿರುವಾಗ ಉಪಯೋಗಿಸುವುಕ್ಕಾಗುವುದಿಲ್ಲ.

ವಾಯವ್ಯ ಪ್ರಾಂತ್ಯ ಮತ್ತು ಸಿಂಧು ಪ್ರಾಂತ್ಯದಲ್ಲಿ ಬ್ರಿಟಿಷರು ಮೊದಲು ರಸ್ತೆಗಳನ್ನೂ ಒಡ್ಡುದಾರಿಗಳನ್ನೂ ಕೆಲವು ಕಡೆ ಮರದ ಇಲ್ಲವೆ ಕಲ್ಲುಗಾರೆಯ ಸೇತುವೆಗಳನ್ನೂ ನಿರ್ಮಿಸಿದರು. 1840ರಲ್ಲಿ ಆಗ್ರದಿಂದ ಮುಂಬಯಿಗೆ ಇಂದೂರ್, ಗ್ವಾಲಿಯರ್ ಮತ್ತು ನಾಸಿಕದ ಮಾರ್ಗವಾಗಿ ರಸ್ತೆಯ ನಿರ್ಮಾಣ ಪ್ರಾರಂಭವಾಯಿತು. ಗ್ರೇಟ್ ಡೆಕ್ಕನ್ ರಸ್ತೆ 1956ರಲ್ಲಿ ಪ್ರಾರಂಭವಾಯಿತು. ಈ ರಸ್ತೆಗಳ ಮೇಲೆ ಅನೇಕ ಒಡ್ಡುದಾರಿಗಳಿದ್ದುವು. 1870ರಲ್ಲಿ ಮೈಸೂರು ಸೀಮೆಯಲ್ಲಿ 2898 ಕಿಮೀ ರಸ್ತೆಗಳಿದ್ದುವು. ಇವುಗಳಲ್ಲಿ 805 ಕಿಮೀ ರಸ್ತೆಗೆ ಜಲ್ಲಿಯನ್ನು ಹಾಕಿ ಹೊಳೆಗಳ ಮೇಲೆ ಸೇತುವೆಗಳನ್ನು ಕಟ್ಟಿದ್ದರು. ಬಯಲು ಸೀಮೆಯಲ್ಲಿ ಮಣ್ಣಿನ ರಸ್ತೆಗಳ ಮೇಲೆ ಒಡ್ಡುದಾರಿಗಳಿದ್ದುವು. ಮಲೆನಾಡಿನಲ್ಲಿ ಅವೂ ಇರಲಿಲ್ಲ. ದೋಣಿಗಳ ನೆರವಿನಿಂದ ಹೊಳೆಗಳನ್ನು ದಾಟಬೇಕಾಗಿತ್ತು. ಇಂದಿಗೂ ಬಯಲು ಸೀಮೆಯಲ್ಲಿ ಸಣ್ಣ ಹೊಳೆಗಳ ಮೇಲೆ ಒಡ್ಡುದಾರಿಗಳಿವೆ. ಇವುಗಳಲ್ಲಿ ಎತ್ತಿನ ಗಾಡಿಗಳ ಮತ್ತು ಮೋಟಾರಿನ ಚಕ್ರಗಳು ಉರುಳುವ ಕಡೆ ಎರಡು ಸಾಲುಗಳಲ್ಲಿ 0.45ಮೀ ಅಗಲವಾದ ಕಲ್ಲಿನ ಚಪ್ಪಡಿಗಳನ್ನು ಕಾಂಕ್ರಿಟಿನ ಅಡಿಪಾಯದ ಮೇಲಿನ ಕಲ್ಲುಗಾರೆಯ ಮೇಲೆ ಉದ್ದವಾಗಿ ಹಾಸಿದ್ದಾರೆ. ಕೆಲವು ಕಡೆ ಚಪ್ಪಡಿಗಳ ಕೆಳಗಡೆ ಕಲ್ಲುಗಾರೆಯ ಕಂಬಗಳ ನಡುವೆ ಸುಮಾರಾದ ಪ್ರವಾಹ ಹರಿದು ಹೋಗುವ ಹಾಗೆ ಹಲವು ಕಿರಿದಾದ ಉದ್ದವಾದ ಕಣ್ಣÄಗಳನ್ನು ಬಿಟ್ಟಿರುತ್ತಾರೆ. ಆದರೂ ನವೆಂಬರ್ ತಿಂಗಳಿನಲ್ಲಿ ಈಶಾನ್ಯ ಮಾರುತದ ಮಳೆ ಅನಿರೀಕ್ಷಿತವಾಗಿ ಬಲವಾಗಿ ಸುರಿದಾಗ ಕೋಲಾರ ಜಿಲ್ಲೆ ಮತ್ತು ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಹಳ್ಳ ತಾನಾಗಿ ಇಳಿಯುವವರೆಗೂ ಯಾವ ವಾಹನವೂ ಅದನ್ನು ದಾಟಲಾಗುವುದಿಲ್ಲ.

1853ರಲ್ಲಿ ಮುಂಬೈಯಿಂದ ಥಾಣಾದವರೆಗೆ 32 ಕಿಮೀ ರೈಲ್ವೆ ಮಾರ್ಗವನ್ನು ಸಾರ್ವಜನಿಕರ ಉಪಯೋಗಕ್ಕಾಗಿ ತೆರೆದರು. ಸೈನ್ಯಗಳನ್ನು ಸಾಗಿಸುವುದಕ್ಕೂ ಜನಗಳು, ಸಾಮಾನು ಇವನ್ನು ಒಯ್ಯುವುದಕ್ಕೂ ರೈಲ್ವೆಯ ಉಪಯೋಗ ಹೆಚ್ಚೆಂದು ಕಾಣಿಸಿದ್ದರಿಂದ ಬ್ರಿಟಿಷ್ ಸರ್ಕಾರದ ಗಮನ ರೈಲ್ವೆಗಳ ಕಡೆಗೆ ತಿರುಗಿತು. 1893ರ ವೇಳೆಗೆ 27370 ಕಿಮೀ ಉದ್ದದ ರೈಲ್ವೆ ಮಾರ್ಗಗಳನ್ನು ಸಾರ್ವಜನಿಕರ ಉಪಯೋಗಕ್ಕಾಗಿ ತೆರೆಯಲಾಯಿತು. ಈ ಸಂದರ್ಭದಲ್ಲಿ ಗಂಗಾ, ಯಮುನಾ, ಸಿಂಧು, ಗೋದಾವರಿ, ಕೃಷ್ಣ, ಕಾವೇರಿ ಮೊದಲಾದ ನದಿಗಳ ಮೇಲೆ ರೈಲ್ವೆ ಗರ್ಡರಿನ ಸೇತುವೆಗಳಿಗಾಗಿ ವಿಶೇಷ ಹಣ ವೆಚ್ಚವಾಯಿತು. ಆಮೇಲೆ ರೈಲ್ವೆಗೂ ರಸ್ತೆಗೂ ಪೈಪೋಟಿಯಾಗಿ ನದಿಗಳ ಮೇಲೆ ರಸ್ತೆಯ ಸೇತುವೆಗಳನ್ನು ಕಟ್ಟುವ ಕೆಲಸ ಸಾವಕಾಶವಾಯಿತು. ಆಗ ಹಳೆಯ ಒಡ್ಡುದಾರಿಗಳಿಂದ ಬಹಳ ಉಪಕಾರವಾಯಿತು. ಮತ್ತೆ ರಸ್ತೆಗೆ ಪ್ರಾಮುಖ್ಯ ಬಂದದ್ದು ಈ ಶತಮಾನದಲ್ಲಿ ಮೋಟಾರು ಕಾರು ಸಾರ್ವತ್ರಿಕವಾಗಿ ಉಪಯೋಗಕ್ಕೆ ಬಂದಮೇಲೆ, ಆಗ ನದಿಗಳ ಮೇಲೆ ಆಧುನಿಕ ಸೇತುವೆಗಳ ನಿರ್ಮಾಣ ಅನಿವಾರ್ಯವಾಯಿತು. ಆದರೂ ಈಗಲೂ ಹಳೆಯ ಒಡ್ಡುದಾರಿಗಳು ಕೆಲವು ಕಡೆ ಇನ್ನೂ ಬಳಕೆಯಲ್ಲಿವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: