ಉದ್ಭಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉದ್ಭಟ ಅಲಂಕಾರ ಶಾಸ್ತ್ರದಲ್ಲಿ ಗಣ್ಯನಾದ ಈತ ಕಾಶ್ಮೀರದವನು. ಕ್ರಿ.ಶ. 779ರಿಂದ 813ರವರೆಗೆ ಅಲ್ಲಿ ಆಳಿದ ಜಯಾಪೀಡನೆಂಬ ರಾಜನ ಆಸ್ಥಾನದಲ್ಲಿ ಸಭಾಪತಿಯಾಗಿದ್ದ ಉದ್ಭಟನೆಂಬುವನು ಇವನೇ ಎಂದು ಕಾಶ್ಮೀರದಲ್ಲಿ ಪ್ರತೀತಿ ಇದೆ.

ಪರಿಚಯ[ಬದಲಾಯಿಸಿ]

  • ಉದ್ಭಟನಿಂದ ರಚಿತವಾದ ಉಪಲಬ್ಧ ಗ್ರಂಥ 'ಅಲಂಕಾರ ಸಾರಸಂಗ್ರಹ' ಎಂಬುದು ಪ್ರಕಟವಾಗಿದೆ. ಇದಕ್ಕೆ ಪ್ರತೀಹಾರೇಂದು ರಾಜನ (10ನೆಯ ಶತಮಾನ) ಲಘುವೃತ್ತಿ ಎಂಬ ವ್ಯಾಖ್ಯಾನವಿದೆ; ರಾಜಾನಕತಿಲಕನ ಉದ್ಭಟ ವಿವೇಕ (ಅಥವಾ ಉದ್ಭಟ ವಿಚಾರ) ಅದರ ಮೇಲಣ ಮತ್ತೊಂದು ವ್ಯಾಖ್ಯಾನ. ಭರತನ ನಾಟ್ಯಶಾಸ್ತ್ರಕ್ಕೆ ಟೀಕೆಯನ್ನು ಬರೆದಿರುವ ಹಲವಾರು ಆಲಂಕಾರಿಕರಲ್ಲಿ ಉದ್ಭಟನೂ ಒಬ್ಬನೆಂದು ಕೆಲವು ಆಧಾರಗಳಿಂದ ತಿಳಿದು ಬಂದಿದೆ.
  • ಅಲ್ಲದೆ, ಈತ ಭಾಮಹನ ಕಾವ್ಯಾಲಂಕಾರದ ಮೇಲೆ ಭಾಮಹವಿವರಣ (ಅಥವಾ ಭಾಮಹವೃತ್ತಿ) ಎಂಬ ವ್ಯಾಖ್ಯಾನವನ್ನು ಬರೆದನೆಂದು ಹೇಳಲು ಆಧಾರಗಳಿವೆ. ಅಲಂಕಾರಸಾರ ಸಂಗ್ರಹದ ಉದಾಹರಣ ಶ್ಲೋಕಗಳು ಉದ್ಭಟನಿಂದಲೇ ರಚಿತವಾದ ಕುಮಾರಸಂಭವ ಎಂಬ ಕಾವ್ಯದಿಂದ ಆರಿಸಿಕೊಂಡು ಪ್ರತೀಹಾರೇಂದು ರಾಜ ಹೇಳಿದ್ದಾನೆ. ಆದರೆ ಈ ಕಾವ್ಯವಾಗಲಿ ಮೇಲ್ಕಂಡ ಟೀಕೆಯಾಗಲಿ, ಭಾಮಹವಿವರಣವಾಗಲಿ ದೊರೆತಿಲ್ಲ.

ಕೃತಿಗಳು[ಬದಲಾಯಿಸಿ]

  • ಉದ್ಭಟನ ಪ್ರಸಿದ್ಧ ಗ್ರಂಥವೆಂದರೆ ಅವನ ಅಲಂಕಾರ ಸಾರಸಂಗ್ರಹ ಅಥವಾ ಕಾವ್ಯಾಲಂಕಾ ರಸಾರ ಸಂಗ್ರಹ. ಇದರಲ್ಲಿ ತೊಂಬತ್ತು ಉದಾಹರಣೆಗಳಿಂದ ಕೂಡಿದ ನಲವತ್ತೊಂದು ಅಲಂಕಾರಗಳ ವಿಮರ್ಶೆಯನ್ನೊಳಗೊಂಡ ಆರು ವರ್ಗಗಳಿವೆ. ಉದ್ಭಟ ಇದರಲ್ಲಿ ಭಾಮಹನನ್ನೇ ಅನುಸರಿಸಿ ದ್ದರೂ ತನ್ನ ವೈಶಿಷ್ಟ್ಯವನ್ನೂ ವ್ಯಕ್ತಪಡಿಸಿದ್ದಾನೆ.
  • ಗ್ರಾಮ್ಯ ಉಪನಾಗರಿಕಾ ಎಂಬ ವೃತ್ತಿಗಳ ಆಧಾರದ ಮೇಲೆ ಭಾಮಹ ಗ್ರಾಮ್ಯಾನುಪ್ರಾಸ, ಲಾಟಾನುಪ್ರಾಸ, ವೃತ್ತ್ಯನುಪ್ರಾಸ ಎಂಬುದಾಗಿ ವಿಂಗಡಿಸಿ, ಕಡೆಯದನ್ನು ಗ್ರಾಮ್ಯಾ (ಕೋಮಲಾ), ಪರುಷಾ, ಉಪನಾಗರಿಕಾ ಎಂಬ ವೃತ್ತಿಗಳ ದೃಷ್ಟಿಯಲ್ಲಿ ಪುನರ್ವಿಭಜನೆ ಮಾಡಿರುವಂತೆ ತೋರುತ್ತದೆ. ಹೀಗೆ, ಅನುಪ್ರಾಸಕ್ಕೆ ಆವಶ್ಯಕವಾದ ಸ್ವನ ಸಮಾಯೋಗಕ್ಕೆ ಸಾಮಾನ್ಯವಾಗಿ ಅನ್ವಯಿಸುವ ಈ ಮೂರು ವೃತ್ತಿಗಳನ್ನು ಮೊದಲು ಗುರುತಿಸಿದವ ಉದ್ಭಟನೆಂಬುದು ಪ್ರತೀಹಾರೇಂದು ರಾಜನ ಮತ.
  • ಇಷ್ಟೇ ಅಲ್ಲದೆ, ಉಪಮೆಯ ವಿಧಗಳಿಗೆ ವ್ಯಾಕರಣದ ಆಧಾರ ನಿರೂಪಣೆಯನ್ನು ಪರಿಣಾಮಕಾರಿಯಾದ ಕ್ರಮದಲ್ಲಿ ಮೊದಲು ಮಾಡಿದವ ಉದ್ಭಟ. ಈ ಆಧಾರದ ವಿಚಾರವನ್ನು ಕುರಿತು ಒಂದು ಸೂಚನೆ ಮಾತ್ರ ಭಾಮಹನಲ್ಲಿ ಕಂಡುಬರುತ್ತದೆ. ದಂಡಿ ಭಾಮಹರ ತರುವಾಯದಲ್ಲೇ ಬಂದ ಅಲಂಕಾರ ಪಂಥಕ್ಕೆ ಸೇರಿದ ಉದ್ಭಟನಿಗೆ ವಿಮರ್ಶೆಯ ಪರಿಚಯವಿದ್ದಿತೆಂದು ಧಾರಾಳವಾಗಿ ಹೇಳಬಹುದು.
  • ಏಕೆಂದರೆ ಆತ ವಿಭಾವ, ಸ್ಥಾಯೀ, ಸಂಚಾರೀ, ಅನುಭಾವ-ಎಂಬ ಪಾರಿಭಾಷಿಕ ಪದಗಳನ್ನು ಪ್ರಯೋಗಿಸುವುದಲ್ಲದೆ ಭರತನ ಎಂಟು ರಸಗಳ ಜೊತೆಗೆ ಶಾಂತವನ್ನೂ ಸೇರಿಸಿ ಹೇಳಿದ್ದಾನೆ. ಆದರೆ ಇವೆಲ್ಲವೂ ರಸವತ್ ಎಂಬ ಅಲಂಕಾರದಲ್ಲೇ ಅಡಕವಾಗಿವೆಯೆಂದು ಅವನ ಮತ. ಒಟ್ಟಿನಲ್ಲಿ ಭರತನ ನಾಟ್ಯಶಾಸ್ತ್ರಕ್ಕೆ ಸಂಬಂಧಪಟ್ಟ ರಸ ವಿಮರ್ಶೆಯನ್ನು ಬಲ್ಲವನಾಗಿದ್ದರೂ ಉದ್ಭಟ ಕೇವಲ ಭಾಮಹ ಮತಾನುಯಾಯಿ.
  • ಅಲಂಕಾರಶಾಸ್ತ್ರದಲ್ಲಿ ಉದ್ಭಟನ ಪ್ರಭಾವ ವಿಶೇಷವಾಗಿದೆ. ಅವನ ಪ್ರಸಿದ್ಧಿ ಭಾಮಹನನ್ನೂ ಹಿಂದೆ ಬೀಳುವಂತೆ ಮಾಡುವಷ್ಟು ಹಿರಿದಾಗಿತ್ತು. ಅನಂತರ ಬಂದ ಅನೇಕ ಆಲಂಕಾರಿಕರು-ಅವನೊಡನೆ ಭಿನ್ನಾಭಿಪ್ರಾಯವುಳ್ಳವರೂ-ಅವನನ್ನು ಅತ್ಯಂತ ಗೌರವದಿಂದ ಕಂಡಿದ್ದಾರೆ. ಇದಕ್ಕೆ ಅವರ ತತ್ತಭವದ್ಭಿರುದ್ಭಟಾದಿಭಿಃ (ಧ್ವನ್ಯಾಲೋಕ), ತಾವದ್ಭಾಮಹೋದ್ಭಟ ಪ್ರಭೃತಯಃ (ಅಲಂಕಾರಸರ್ವಸ್ವ) ಮುಂತಾದ ಮಾತುಗಳು ಸೂಕ್ತ ನಿದರ್ಶನಗಳಾಗಿವೆ.

ಉಲ್ಲೇಖಗಳು[ಬದಲಾಯಿಸಿ]

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಉದ್ಭಟ&oldid=1019350" ಇಂದ ಪಡೆಯಲ್ಪಟ್ಟಿದೆ