ವಿಷಯಕ್ಕೆ ಹೋಗು

ಭಾಮಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾಮಹ
ಭಾಮಹನ ಕಾವ್ಯಾಲಂಕಾರ ಭರತನ ಅನಂತರದ ಮೊದಲನೆಯ ಮಾನ್ಯ ಗ್ರಂಥ. ಕವಿಗಳ, ಅಲಂಕಾರಿಕ ಕೈಗನ್ನಡಿ. ಕಾವ್ಯದಲ್ಲಿ ಅಲಂಕಾರಗಳ ಮಹತ್ತ್ವವನ್ನು ಪ್ರತಿಪಾದಿಸುತ್ತ ಭಾಮಹ ಅಲಂಕಾರಗಳಿಲ್ಲದೆ ಕಾವ್ಯತ್ವ ಸಿದ್ಧಿಸುವುದಿಲ್ಲವೆಂದು ಸ್ವಷ್ಟವಾಗಿ ಹೇಳಿದ್ದಾನೆ. ನ ಕಾಂತಮಪಿ ನಿರ್ಭೂಷಂ ವಿಭಾತಿ ವನಿತಾ ಮುಖಂ- ಅಂದರೆ ಹೆಣ್ಣಿನ ಮುಖ ಅಂದವಾತಿದ್ದರೂ ಒಡವೆಗಳಿಲ್ಲದಿದ್ದರೆ ಶೋಬಿಸುವುದಿಲ್ಲ. ಅಂತೆಯೇ ಅಲಂಕಾರಗಳಿಲ್ಲದೆ ಕಾವ್ಯ ಶೋಭಿಸದು. ಹೀಗೆ ಹೇಳಿದ ಭಾಮಹ ರೀತಿ ಗುಣಾದಿಗಳನ್ನು ಅಲಂಕಾರಗಳಿಗೇ ಅಧೀನಗೊಳಿಸಿದ್ದಾನೆ. ರಸವನ್ನು ಅಲಂಕಾರಗಳಲ್ಲಿಯೇ ಒಂದೆಂದು ಪರಿಭಾವಿಸಿ ರಸವದಲಂಕಾರ ಎಂದು ಕರೆದಿದ್ದಾನೆ. ಕಾವ್ಯದೋಷಗಳ ವಿವರಣೆಯನ್ನು ದೀರ್ಘವಾಗಿ ಮಾಡಿದ್ದಾನೆ.

ಕವಿ-ಕಾಲ-ಕೃತಿ

[ಬದಲಾಯಿಸಿ]

ಕ್ರಿ.ಶ.6-7 ಶತಮಾನದಲ್ಲಿ ಬಾಳಿದ ಪ್ರಸಿದ್ಧ ಆಲಂಕಾರಿಕ. ಕಾಶ್ಮೀರ ಜನ್ಮಸ್ಥಳ. ರಕ್ರಿಲಗೋಮಿ ಎಂಬಾತನ ಮಗ. ಕಾವ್ಯಾಲಂಕಾರ ಎಂಬ ಸಂಸ್ಕೃತ ಅಲಂಕಾರಶಾಸ್ತ್ರ ಗ್ರಂಥದ ಕರ್ತೃ. ಇದರಲ್ಲಿ 6 ಪರಿಚ್ಛೇದಗಳಿದ್ದು; ಸುಮಾರು 400 ಶ್ಲೋಕಗಳಿವೆ.

  • ಮೊದಲನೆಯ ಪರಿಚ್ಛೇದದಲ್ಲಿ ಕಾವ್ಯದ ಸಾಧನ. ಲಕ್ಷಣ ಮತ್ತು ಭೇದಗಳ ವರ್ಣನೆ ಇದೆ (ಕಾವ್ಯಶರೀರ ನಿರ್ಣಯ 60 ಶ್ಲೋಕಗಳು).
  • ಎರಡನೆಯ ಮತ್ತು ಮೂರನೆಯ ಪರಿಚ್ಛೇದಗಳಲ್ಲಿ ಅಲಂಕಾರಗಳ ವರ್ಣನೆ ಇದೆ. (ಅಲಂಕಾರಗಳ ವಿವರಣೆ-160 ಶ್ಲೋಕಗಳು).
  • ನಾಲ್ಕನೆಯ ಪರಿಚ್ಛೇದದಲ್ಲಿ ದೋಷಗಳ ವರ್ಣನೆಯೂ (ದೋಷಗಳ ನಿದರ್ಶನ-50 ಶ್ಲೋಕಗಳು),
  • ಐದನೆಯ ಪರಿಚ್ಛೇದದಲ್ಲಿ ನ್ಯಾಯ ವಿರೋಧಿಯಾದ ದೋಷಗಳ ವಿಮರ್ಶೆಯೂ (ನ್ಯಾಯನಿರ್ಣಯ-70 ಶ್ಲೋಕಗಳು),
  • ಆರನೆಯ ಪರಿಚ್ಛೇದಗಳು ವಿವಾದಾಸ್ಪದ ಪದಗಳ ಶುದ್ಧರೂಪ ಕುರಿತ (ಶಬ್ದಶುದ್ಧಿ-60 ಶ್ಲೋಕಗಳು), ನಿರ್ಣಯವೂ ಇವೆ.

ಭಾಮಹನ ಕಾವ್ಯ ಸೂತ್ರ

[ಬದಲಾಯಿಸಿ]

ಭಾಮಹನ ಕಾವ್ಯಸೂತ್ರಗಳು ಸಂಸ್ಕೃತ ಅಲಂಕಾರ ಶಾಸ್ತ್ರದಲ್ಲಿ ವಿಶೇಷ ಸ್ಥಾನ ಪಡೆದಿವೆ. ಇವು ಎಲ್ಲ ಅಲಂಕಾರಿಕರಿಗೂ ಕವಿಗಳಿಗೂ ಮಾರ್ಗದರ್ಶಕವಾಗಿವೆ. ಈ ಸೂತ್ರಗಳಲ್ಲಿ ಕೆಲವು ಈ ರೀತಿ ಇವೆ

  • ಶಬ್ದ ಮತ್ತು ಅರ್ಥಗಳ ಸಾಮರಸ್ಯವೇ ಕಾವ್ಯ-ಶಬ್ದಾರ್ಥೌ ಸಹಿತೌ ಕಾವ್ಯಂ;
  • ಭರತ ಹೇಳಿರುವ ಹತ್ತು ಗುಣಗಳು ಓಜಸ್ಸು, ಪ್ರಸಾದ, ಮತ್ತು ಮಾಧುರ್ಯ ಎಂಬ ಮೂರು ಗುಣಗಳಲ್ಲಿಯೇ ಅಂತರ್ಗತವಾಗಿವೆ;
  • ವಕ್ರೋಕ್ತಿಯೇ ಎಲ್ಲ ಅಲಂಕಾರಗಳ ಮೂಲ;
  • ಹತ್ತು ವಿಧವಾದ ದೋಷಗಳ ವಿವೇಚನೆ.

ಕಾವ್ಯತ್ವದ ಬಗೆಗೆ ಭಾಮಹನ ಹೇಳಿಕೆ

[ಬದಲಾಯಿಸಿ]

ಕಾವ್ಯದಲ್ಲಿ ಅಲಂಕಾರಗಳ ಮಹತ್ತ್ವವನ್ನು ಪ್ರತಿಪಾದಿಸುತ್ತ ಭಾಮಹ ಅಲಂಕಾರಗಳಿಲ್ಲದೆ ಕಾವ್ಯತ್ವ ಸಿದ್ಧಿಸುವುದಿಲ್ಲವೆಂದು ಸ್ವಷ್ಟವಾಗಿ ಹೇಳಿದ್ದಾನೆ. 'ನ ಕಾಂತಮಪಿ ನಿರ್ಭೂಷಂ ವಿಭಾತಿ ವನಿತಾ ಮುಖಂ'- ಅಂದರೆ ಹೆಣ್ಣಿನ ಮುಖ ಅಂದವಾತಿದ್ದರೂ ಒಡವೆಗಳಿಲ್ಲದಿದ್ದರೆ ಶೋಬಿಸುವುದಿಲ್ಲ. ಅಂತೆಯೇ ಅಲಂಕಾರಗಳಿಲ್ಲದೆ ಕಾವ್ಯ ಶೋಭಿಸದು. ಹೀಗೆ ಹೇಳಿದ ಭಾಮಹ ರೀತಿ ಗುಣಾದಿಗಳನ್ನು ಅಲಂಕಾರಗಳಿಗೇ ಅಧೀನಗೊಳಿಸಿದ್ದಾನೆ. ರಸವನ್ನು ಅಲಂಕಾರಗಳಲ್ಲಿಯೇ ಒಂದೆಂದು ಪರಿಭಾವಿಸಿ ರಸವದಲಂಕಾರ ಎಂದು ಕರೆದಿದ್ದಾನೆ. ಕಾವ್ಯದೋಷಗಳ ವಿವರಣೆಯನ್ನು ದೀರ್ಘವಾಗಿ ಮಾಡಿದ್ದಾನೆ. ಅನೇಕ ಉದಾಹರಣೆಗಳ ಸಹಿತ ಸ್ವಷ್ಟಪಡಿಸಿದ್ದಾನೆ. ಶಬ್ದದೋಷಗಳಲ್ಲಿ ಶೃತಿದುಷ್ಟ, ಅರ್ಥದುಷ್ಟ, ಕಲ್ಪನಾದುಷ್ಟ, ಶೃತಿಕಷ್ಟ ಎಂಬ ನಾಲ್ಕು ಬಗೆಯನ್ನು ಹೇಳಿದ್ದಾನೆ. ಕೊನೆಯಲ್ಲಿ ಹೇಳುವ ಒಂದು ಮಾತು ಗಮನರ್ಹವಾದದ್ದು-ಸನ್ನಿವೇಶ ವಿಶೇಷದಿಂದ ದೋಷಗಳೂ ಗುಣಗಳಾಗಬಹುದು-ಎಂದು ಔಚಿತ್ಯದ ಕಡೆಗೆ ತನ್ನ ದೃಷ್ಟಿಯನ್ನು ಹೊರಳಿಸಿದ್ದಾನೆ.


ಉಲ್ಲೇಖ

[ಬದಲಾಯಿಸಿ]


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಭಾಮಹ&oldid=1023939" ಇಂದ ಪಡೆಯಲ್ಪಟ್ಟಿದೆ