ಉದಂತಗಳು
ಉದಂತಗಳು: ಸಾಮಾನ್ಯವಾಗಿ ಪ್ರಕೃತಿಗೆ ಸಂಬಂಧಪಟ್ಟ ಅಥವಾ ಸಂಸ್ಕೃತಿಗೆ ಸಂಬಂಧಪಟ್ಟ ಮುಖ್ಯವಾದ ಘಟನೆಗಳನ್ನು ಒಂದು ಕ್ರಮವಾದ ರೀತಿಯಲ್ಲಿ ಕಾಲಾನುಕ್ರಮವಾಗಿ ನಿರೂಪಿಸುವ ಪ್ರಾಚೀನ ದಾಖಲೆಗಳು (ಕ್ರಾನಿಕಲ್ಸ್). ಟೀಕೆ, ಟಿಪ್ಪಣಿಗಳಿಲ್ಲದೆ ವಿಷಯಗಳನ್ನು ಮಾತ್ರ ಸಂಗ್ರಹಿಸಿಕೊಟ್ಟಲ್ಲಿ, ಅಂಥ ಉದಂತಗಳು ಇತಿಹಾಸ ಗ್ರಂಥಗಳಿಂದ ಬೇರೆಯಾಗಿ ನಿಲ್ಲುತ್ತವೆ. ಏಕೆಂದರೆ ಚರಿತ್ರೆ ವಿಷಯಗಳನ್ನು ನಿರೂಪಿಸುವುದಲ್ಲದೆ, ಮಾನವನ ನಡವಳಿಕೆಗಳನ್ನು, ಇತಿಹಾಸದ ಘಟನೆಗಳನ್ನು ವಿಶ್ಲೇಷಿಸುತ್ತದೆ. ಸಾಮಾನ್ಯವಾಗಿ ಎಲ್ಲ ಉದಂತಕರ್ತೃವೂ ತನಗೆ ಸೌಕರ್ಯವಾದ ವಿಷಯಗಳನ್ನು ಮಾತ್ರ ಆರಿಸಿಕೊಂಡು ಒಂದು ಮತದ ಬಗ್ಗೆಯೋ ಒಂದು ರಾಜವಂಶದ ಬಗ್ಗೆಯೋ ಉತ್ಪ್ರೇಕ್ಷೆಯಿಂದ ಕೂಡಿದ ಗ್ರಂಥವನ್ನು ರಚಿಸುತ್ತಾನೆ. ಒಂದು ತತ್ತ್ವವನ್ನು ಬೋಧನೆ ಮಾಡಲೂ ಒಂದು ಉದಂತವನ್ನು ಬರೆಯಬಹುದು. ಎಲ್ಲ ಘಟನೆಗಳ ಹಿಂದೆ ಪರಮಾತ್ಮನ ಕೈವಾಡವಿದೆ ಎಂಬುದೇ ಕ್ರೈಸ್ತ ಉದಂತಕಾರರ ದೃಢ ನಂಬಿಕೆ. ಮನುಷ್ಯರೆಲ್ಲ, ಅವರು ನಡೆಸುವ ಚಟುವಟಿಕೆಗಳೆಲ್ಲ ಪರಮಾತ್ಮನ ನಿಶನದಿಂದಲೇ ರೂಪಿತ-ಎಂಬ ಅಭಿಪ್ರಾಯವನ್ನು ಮಠಾಧಿಪತಿಗಳು ತಾವು ಬರೆದ ಉದಂತಗಳಲ್ಲಿ ವ್ಯಕ್ತಪಡಿಸಿದ್ದಾರೆ.
ಇತಿಹಾಸ
[ಬದಲಾಯಿಸಿ]ಆಯಾ ದೇಶಗಳಿಗೆ ಸಂಬಂಧಪಟ್ಟ, ಸುವ್ಯವಸ್ಥಿತವಾಗಿ ಇತಿಹಾಸವನ್ನು ನಿರೂಪಿಸುವ ಉದಂತಗಳು ಬೆಳಕಿಗೆ ಬಂದುವು. ಈ ರೀತಿ ಪ್ರಾರಂಭವಾದ ಕಾರ್ಯ 19ನೆಯ ಶತಮಾನದ ಹೊತ್ತಿಗೆ ಜರ್ಮನಿಯ ತಜ್ಞರ ಕೈಕೆಳಗೆ ಉನ್ನತಮಟ್ಟವನ್ನು ಮುಟ್ಟಿತು. ಪ್ರಾಚೀನ ಭಾರತೀಯರು ಇತಿಹಾಸ, ಉದಂತಗಳನ್ನುಳಿದು ಮಿಕ್ಕ ಎಲ್ಲ ಕ್ಷೇತ್ರಗಳಲ್ಲೂ ಗಮನಾರ್ಹವಾದ, ಶ್ರೇಷ್ಠಮಟ್ಟದ ವ್ಯವಸಾಯ ಮಾಡಿದ್ದಾರೆ. ಭಾರತೀಯರ ಸಾಹಿತ್ಯಸಂಪತ್ತಿನಲ್ಲಿ ದೊರಕಿರುವ ಉದಂತಗಳು ಕೆಲವೇ ಕೆಲವು. ಕಲ್ಹಣನ ರಾಜತರಂಗಿಣಿ, ಬಿಲ್ಹಣನ ವಿಕ್ರಮಾಂಕ ದೇವಚರಿತ, ಬಾಣಭಟ್ಟನ ಹರ್ಷಚರಿತೆಯೇ ಮೊದಲಾದ ಕೆಲವು ಉದಂತಗಳನ್ನು ಇಲ್ಲಿ ಉದಾಹರಿಸಬಹುದು : ಪ್ರಾಚೀನ ಭಾರತೀಯರಲ್ಲಿ ಆಧ್ಯಾತ್ಮಿಕ ದೃಷ್ಟಿಕೋನವೇ ಪ್ರಧಾನವಾಗಿದ್ದು ದರಿಂದ ಈ ರೀತಿ ಇತಿಹಾಸವನ್ನು ಸಮಗ್ರವಾಗಿ ಆಧುನಿಕ ರೀತಿಯಲ್ಲಿ ಬರೆಯಲಿಲ್ಲವೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಆದರೂ ಪುರಾಣಗಳಲ್ಲಿ ದೊರೆಯುವ ರಾಜರ ವಂಶಾವಳಿಗಳು, ಶಾಸನಗಳು ಮೊದಲಾದ ಇತಿಹಾಸಕ್ಕೆ ಸಂಬಂಧಪಟ್ಟ ಆಧಾರಗಳನ್ನು ನೋಡಿದಾಗ ಭಾರತೀಯರು ಉದಂತ ಬರೆದಿಡುವ ಕ್ರಮವನ್ನು ಸಂಪೂರ್ಣವಾಗಿ ಕೈಬಿಟ್ಟಿರಲಿಲ್ಲವೆಂದು ಕಾಣುತ್ತದೆ. ಮುಸ್ಲಿಮರ ಮತ್ತು ಮರಾಠರ ಕಾಲದಲ್ಲಿ ಅನೇಕ ಉದಂತಗಳು ಹುಟ್ಟಿದುವು. ಇಂಥ ಹಳೆಯ ಉದಂತಗಳನ್ನು ಸಂಗ್ರಹಿಸಿ, ವೈಜ್ಞಾನಿಕ ದೃಷ್ಟಿಯಿಂದ ಅಭ್ಯಾಸಮಾಡಿ, ಮೌಲ್ಯ ಕಟ್ಟುವ ಕಾರ್ಯ ಭಾರತದಲ್ಲಿ ಈಚೆಗೆ ಬ್ರಿಟಿಷ್ ಮತ್ತು ಐರೋಪ್ಯ ತಜ್ಞರಿಂದ ಪ್ರಾರಂಭವಾಗಿ ಈಗಲೂ ಮುಂದುವರಿಯುತ್ತಿದೆ.
ಯಹೂದಿ ಉದಂತದಲ್ಲಿರುವ ವಿಷಯಗಳು
[ಬದಲಾಯಿಸಿ]ಯೆಹೂದಿಗಳ ರಾಜಕೀಯ, ಸಾಂಸ್ಕೃತಿಕ ಮತ್ತು ಮತೀಯ ವಿಷಯಗಳನ್ನು ಒಳಗೊಂಡ ಪ್ರಾಚೀನ ಗ್ರಂಥಗಳನ್ನೂ ಕ್ರಾನಿಕಲ್ಸ್ (ಉದಂತ) ಎಂದು ಕರೆಯುತ್ತಾರೆ. ಉದಂತ ಯೆಹೂದಿಗಳ ಇತಿಹಾಸವನ್ನು ನಿರ್ಧರಿಸುವಲ್ಲಿ ಅತ್ಯಂತ ಉಪಯುಕ್ತವಾಗಿದೆ. ಇವುಗಳನ್ನು ಎರಡು ಸಂಪುಟಗಳಾಗಿ ವಿಂಗಡಿಸಿದ್ದಾರೆ. ಮತೀಯ ಪುರೋಹಿತ ವರ್ಗದವರ ಇತಿಹಾಸ, ಯಹೂದಿಗಳಲ್ಲಿ ಪ್ರಖ್ಯಾತ ಚಕ್ರವರ್ತಿಗಳಾದ ಡೇವಿಡ್ ಮತ್ತು ಸಾಲಮನ್ರ ವಿಷಯಗಳು, ಜೂಡಾದ ಬುಡಕಟ್ಟಿನವರ ಚರಿತ್ರೆ-ಇವೇ ಮೊದಲಾದ ಹತ್ತಾರು ವಿಷಯಗಳನ್ನು ಉದಂತ ತಿಳಿಸುತ್ತದೆ. ಉದಂತದಲ್ಲಿ ಅಡಕವಾಗಿರುವ ವಿಷಯಗಳನ್ನು ಈ ಕೆಳಕಂಡಂತೆ ಪಟ್ಟಿ ಮಾಡಬಹುದು: (ಅ) ಒಂದನೆಯ ಉದಂತ: ಭಾಗ ಒಂದು: ಆ್ಯಡಂನಿಂದ ಹಿಡಿದು ನೋವನ ಮಕ್ಕಳವರೆಗೆ ಮುಖ್ಯವಾಗಿ ಶೆಮ್ಮು ಸಂತತಿಯಿಂದ ಈಸೋವರೆಗೆ, ಅಲ್ಲದೆ ಇಸ್ರೇಲ್ ಮತ್ತು ಅದರ ವಂಶಿಕರೇ ಮೊದಲಾದವರ ವಂಶಾವಳಿಗಳನ್ನು ಕೊಡುತ್ತದೆ. ಕೊನೆಯ ಹನ್ನೆರಡು ಪದ್ಯಗಳು ಈಡೋಮಿಟಿಷ್ ರಾಜರುಗಳ ಮತ್ತು ಪಾಳೆಯಗಾರರ ಪಟ್ಟಿಯನ್ನು ಕೊಡುತ್ತದೆ. ಬೇರೆ ಬೇರೆ ಕಾಲದ ವಿಷಯಗಳನ್ನು ಈ ವಂಶಾವಳಿಗಳ ಮಧ್ಯೆ ವಿವರಿಸುವ ಕ್ರಮವನ್ನು ಕಾಣಬಹುದಾಗಿದೆ. ಸಾಲನ ವಂಶಾವಳಿ ಕೊನೆಗೆ ಬರುತ್ತದೆ. (ಆ) ಒಂದನೆಯ ಉದಂತ : ಭಾಗ ಎರಡು: ಇದು ಮುಖ್ಯವಾಗಿ ಯೆಹೂದಿಗಳಲ್ಲಿ ಪ್ರಖ್ಯಾತನಾಗಿದ್ದ ಡೇವಿಡ್ನ ರಾಜ್ಯಾಡಳಿತವನ್ನು ನಿರೂಪಿಸುತ್ತದೆ. ಈ ಭಾಗ ಮೊದಲು ಸಾಲ್ ದೊರೆ ನಡೆಸಿದ ಕೊನೆಯ ಯುದ್ಧ ಮತ್ತು ಅವನ ಸಾವಿನಿಂದ ಪ್ರಾರಂಭವಾಗುತ್ತದೆ. ಕೊನೆಯಲ್ಲಿ ಡೇವಿಡ್ನ ಮಗನಾದ ಸಾಲಮನ್ ಸಿಂಹಾಸನವನ್ನೇರಿದ ವಿಷಯ ಬರುತ್ತದೆ. (ಇ) ಎರಡನೆಯ ಉದಂತ : ಭಾಗ ಒಂದು: ಈ ಭಾಗ ಸಾಲಮನ್ನನ ರಾಜ್ಯಾಡಳಿತಕ್ಕೆ ಸಂಬಂಧಿಸಿದ್ದಾಗಿದೆ. ಮೊದಲನೆಯ ಅಧ್ಯಾಯ ಗಿಬಿಯಾನಿನಲ್ಲಿ ಸಾಲಮನ್ ನಡೆಸಿದ ಯಜ್ಞದ ವಿಷಯವನ್ನು ತಿಳಿಸುತ್ತದೆ. ಅವನ ವೈಭವಪುರಿತ ಜೀವನ, ಇಸ್ರೇಲಿನಲ್ಲಿ ಅವನು ಕಟ್ಟಿಸಿದ ಪ್ರಸಿದ್ಧವಾದ ದೇವಾಲಯ, ಅವನ ಪ್ರಾರ್ಥನೆಗಳು, ದರ್ಶನ, ವೈಭವ, ಯಜ್ಞಗಳು ಮತ್ತು ಅವನ ಸಾವೇ ಮೊದಲಾದ ವಿಷಯಗಳು ಈ ಭಾಗದಲ್ಲಿ ಬಂದಿವೆ. (ಈ) ಎರಡನೆಯ ಉದಂತ : ಭಾಗ ಎರಡು : ಈ ಭಾಗ ಜೂಡಾ ರಾಜ್ಯದ ಮೊದಲಿನಿಂದ ಜೆರೂಸೆಲಂ ನಗರ ಅವನತಿಗೊಂಡು, ರಾಜ್ಯ ಇಬ್ಭಾಗವಾಗುವವರೆಗಿನ ಇತಿಹಾಸವನ್ನು ತಿಳಿಸುತ್ತದೆ. ಸೈರಸ್ಸನ ಪುನರುತ್ಥಾನದ ಶಾಸನ ಕೊನೆಗೆ ಬರುತ್ತದೆ. ಇದಲ್ಲದೆ ಹಲವಾರು ರಾಜರ ವಿಷಯಗಳು ನಿರೂಪಿತವಾಗಿವೆ.
ಪ್ರಸ್ತುತತೆ
[ಬದಲಾಯಿಸಿ]ಉದಂತದಲ್ಲಿ ಅಡಕವಾಗಿರುವ ವಿಷಯಗಳು ಇತಿಹಾಸ ದೃಷ್ಟಿಯಲ್ಲಿ ಎಷ್ಟರ ಮಟ್ಟಿಗೆ ಸಮಂಜಸವಾಗಿವೆ ಎಂಬುದರ ಬಗ್ಗೆ ಭಿನ್ನಾಭಿಪ್ರಾಯವಿದೆ. ಉದಂತ ಕೊಡುವ ಹಲವಾರು ವಿಷಯಗಳು ಐತಿಹಾಸಿಕವಾಗಿ ಅಷ್ಟಾಗಿ ನಿರ್ದುಷ್ಟವಾಗಿ ನಿರೂಪಿತವಾಗಿಲ್ಲ ಎಂಬುದು ಕೆಲವರ ಅಭಿಪ್ರಾಯ. ಒಂದೇ ಹೆಸರನ್ನು ಇಬ್ಬರು ಬೇರೆ ಬೇರೆ ವ್ಯಕ್ತಿಗಳಿಗೆ ಕೊಡುವ ಕ್ರಮವೂ ಉಂಟು. ಇತಿಹಾಸದ ಅಂಶಗಳನ್ನು ಅನೇಕ ವೇಳೆ ಉದಂತಗಳು ಉತ್ಪ್ರೇಕ್ಷೆಯಿಂದ ನೋಡುತ್ತವೆ. ಆದ್ದರಿಂದ ಉದಂತವನ್ನು ಬಹಳ ಎಚ್ಚರಿಕೆಯಿಂದ ಅಭ್ಯಾಸ ಮಾಡಬೇಕೆಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಉದಂತವನ್ನು ಯೆಹೂದಿಗಳ ಬೈಬಲ್ ಎಂದು ಕರೆಯುವುದುಂಟು. ಅಲ್ಲದೆ ಇದಕ್ಕೆ ವಿವರಣೆ (ಆ್ಯನಲ್ಸ್) ಮತ್ತು ರಾಜರುಗಳ ಗ್ರಂಥ (ಬುಕ್ ಆಫ್ ಕಿಂಗ್ಸ್) ಎಂಬ ಹೆಸರುಗಳೂ ಇವೆ. ಉದಂತ ಅಥವಾ ಕ್ರಾನಿಕಲ್ಸ್ ಎಂಬ ಹೆಸರನ್ನು ಇತ್ತೀಚಿಗೆ ಕೊಟ್ಟವ ಜರೋಮ್ ಎಂಬುವನು. ಮೂಲತಃ ಉದಂತಗಳು ಪ್ರಸಿದ್ಧವಾದ ಇಜ಼್ರ-ನೆಹಿಮಿಯಾ ಗ್ರಂಥದಲ್ಲಿ ಅಡಕವಾಗಿದ್ದುವು. ಅನಂತರ ಅವನ್ನು ಬೇರ್ಪಡಿಸಿ ಎರಡು ಸಂಪುಟಗಳಾಗಿ ವಿಭಾಗಮಾಡಲಾಯಿತು. ಈ ಸಂಗ್ರಹಗಳು ಗ್ರೀಕರ ಕಾಲದಲ್ಲಿ ರಚಿತವಾದುವು. ಅಂದರೆ ಇವನ್ನು ಅಲೆಕ್ಸಾಂಡರನ ಮರಣ (ಪ್ರಶ.ಪು. 323) ಮತ್ತು ಮಕಬ್ಬೀಸ್ ದಂಗೆಗಳ (ಪ್ರಶ.ಪು. 167) ನಡುವಣ ಕಾಲದಲ್ಲಿ ರಚಿಸಲಾಯಿತೆಂಬ ಅಭಿಪ್ರಾಯವಿದೆ. ಯೆಹೂದಿ ಮತದವರ ಕರುಣೆ ಔದಾರ್ಯಗಳೇ ಮೊದಲಾದ ಗುಣಗಳ ಪ್ರಶಂಸೆ ಇಲ್ಲಿದೆ; ಮಠಾಧಿಪತಿಗಳ ಇತಿಹಾಸ ಮತ್ತು ಅವರು ಸಲ್ಲಿಸಿದ ಸೇವೆಗಳ ವರ್ಣನೆ ಇದೆ; ಸಾಮ್ಯುಯಲ್ ರಾಜರುಗಳ ಇತಿಹಾಸವಿದೆ. ಕ್ರೈಸ್ತ ಮತ ಸಂಬಂಧವಾದ ಕೆಲವು ಗ್ರಂಥಗಳು ಪಟ್ಟಿಯಲ್ಲಿ ಇಲ್ಲದೆ ಇರುವುದು ಬಹುಶಃ ಒಂದು ಆಕಸ್ಮಿಕವಾಗಿರಬೇಕೆಂದು ಪಂಡಿತರು ಅಭಿಪ್ರಾಯಪಡುತ್ತಾರೆ. ಉದಂತ, ಇಜ಼್ರ ಮತ್ತು ನೆಹಿನಿಯಾಗಳ ಶೈಲಿಗಳಲ್ಲಿ ಸಾಮ್ಯವಿರುವುದರಿಂದ ಇವು ಮೂಲತಃ ಒಂದೇ ಕೃತಿಯಲ್ಲಡಕವಾಗಿದ್ದುವೆಂದು ದೃಢವಾಗಿ ಹೇಳಬಹುದು. ಮತೀಯ ದೃಷ್ಟಿಯಿಂದ ನೋಡಿದಾಗಲೂ ಮತ್ತು ಉದಂತದಲ್ಲಿ ಬರುವ ಕಡೆಯ ಅಪೂರ್ವ ವಾಕ್ಯ ಸಮೂಹವೂ ಇಜ಼್ರದಲ್ಲೂ ಬಂದು, ಪೂರ್ಣಗೊಂಡಿರುವುದನ್ನು ನೋಡಿದಾಗಲೂ ಈ ಮಾತು ಸ್ಪಷ್ಟವಾಗುತ್ತದೆ. ಮೂಲತಃ ಒಂದೇ ಕೃತಿಯಾಗಿದ್ದ ಈ ಗ್ರಂಥಗಳು ಭಿನ್ನ ವಿಷಯಗಳನ್ನು ಒಳಗೊಂಡಿದ್ದರಿಂದ, ಇವನ್ನು ಅನುಕೂಲಕ್ಕಾಗಿ ಬೇರೆ ಬೇರೆ ಮಾಡಲಾಯಿತೆನ್ನಬಹುದು. ಬೇರೆ ಎಲ್ಲೂ ದೊರೆಯದ ಇತಿಹಾಸದ ಅಂಶಗಳನ್ನೊಳಗೊಂಡ ಉದಂತಗಳು ಇತಿಹಾಸಕಾರರಿಗೆ ಮಹದುಪಕಾರ ಮಾಡಿವೆ. ಈ ಉದಂತಗಳ ಕತೃ ಯಾರು ಎಂಬುದು ಗೊತ್ತಿಲ್ಲ. ಜೋಹನಾನ್ ಎಂಬ ಪುರೋಹಿತ ಇದನ್ನು ಬರೆದನೆನ್ನುವ ಅಭಿಪ್ರಾಯಕ್ಕೆ ಸಾಕಷ್ಟು ಬೆಂಬಲವಿಲ್ಲ. ಉದಂತದ ಕರ್ತೃ (ಆತ ಯಾರೇ ಆಗಿರಲಿ) ಮಠದ ಕೀಳು ನೌಕರರ ಬಗ್ಗೆ ಹೆಚ್ಚಿನ ಸಹಾನುಭೂತಿಯುಳ್ಳ ದೃಷ್ಟಿ ಇದ್ದವನೆಂದು ತಿಳಿದುಬಂದಿರುವುದರಿಂದಲೂ ಆತ ನಾಯಕರ ಬಗೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿರುವುದರಿಂದಲೂ ಉದಂತಗಳನ್ನು ಬರೆದವ ಯೆಹೂದ್ಯರ ದೇವಾಲಯದಲ್ಲಿದ್ದ ನಾಯಕರ ಗುಂಪಿಗೆ ಸೇರಿದವನಾಗಿದ್ದಿರಬಹುದೆಂಬ ಮತ್ತೊಂದು ಅಭಿಪ್ರಾಯವೂ ಇದೆ. ಉದಂತಗಳ ಕಾಲದ ಬಗ್ಗೆ ಪಂಡಿತರಲ್ಲಿ ಭಿನ್ನಾಭಿಪ್ರಾಯಗಳಿವೆ. ಬಹು ಜನಗಳ ಸಾಮಾನ್ಯ ಅಭಿಪ್ರಾಯದಂತೆ ಉದಂತಗಳು ಸುಮಾರು ಪ್ರ.ಶ.ಪು. (250-300) ರ ನಡುವಣ ಅವಧಿಯಲ್ಲಿ ರಚಿತವಾಗಿರಬೇಕು ಎಂಬುದೇ ಆಗಿದೆ. ಉದಂತಗಳು ಹಿಂದೆ ಇದ್ದ ಅನೇಕ ಅಪೂರ್ವ ಗ್ರಂಥಗಳನ್ನು ಉಪಯೋಗಿಸಿಕೊಂಡಿವೆ. ಬೈಬಲಿನಲ್ಲಿ ದೊರಕಿರುವ ಹಲವಾರು ಅಧ್ಯಾಯಗಳಲ್ಲದೆ, ಈಗ ಸಿಕ್ಕದೇ ಇರುವ ಅನೇಕ ಗ್ರಂಥಗಳನ್ನು ಆಧರಿಸಿ ಬರೆದದ್ದಾಗಿದೆ. ಉದಂತಗಳನ್ನು ಬರೆಯುವುದಕ್ಕೆ ಮುಂಚೆ ಇದ್ದ ಹಲವಾರು ಐತಿಹಾಸಿಕ ಕೃತಿಗಳನ್ನು ಸಹ ಆಧಾರವಾಗಿ ಉದಂತಗಳು ಬಳಸಿಕೊಂಡಿವೆ. ಅವುಗಳಲ್ಲಿ ಮುಖ್ಯವಾದುವು: (ಅ) ಜೂಡ ಮತ್ತು ಇಸ್ರೇಲ್ ರಾಜರುಗಳ ಗ್ರಂಥ, (ಆ) ಇಸ್ರೇಲ್ ರಾಜರ ಆಡಳಿತ, (ಇ) ರಾಜರ ಚರಿತ್ರೆಯ ಮಿದ್ರಾಷ್. ಒಟ್ಟಿನಲ್ಲಿ ಹೇಳುವುದಾದರೆ ಉದಂತಗಳು ಉಪಯೋಗಿಸಿ ಕೊಂಡಿರುವ ಆಕರಗ್ರಂಥಗಳು ಯೆಹೂದಿಗಳು ಈಜಿಪ್ಟಿನಿಂದ ಪ್ಯಾಲಿಸ್ಟೈನ್ಗೆ ಬಂದ ಅನಂತರ ರಚಿತವಾದ ಗ್ರಂಥಗಳಾಗಿವೆ. ಇವುಗಳ ಕರ್ತೃವೂ ಹಿಂದೆ ಇದ್ದಂಥ ರಾಜರುಗಳ ವಂಶಾವಳಿಗಳನ್ನು ಬಳಸಿಕೊಂಡಿರಬಹುದು. ಬೇರೆ ಗ್ರಂಥಗಳಲ್ಲಿ ಇಲ್ಲದ ವಿಷಯಗಳನ್ನು ನಿರೂಪಿಸುವಾಗ ಇವುಗಳ ಕರ್ತೃ ತನ್ನ ಆಕರಗ್ರಂಥಗಳಿಂದ ಎಷ್ಟನ್ನು ಪಡೆದಿದ್ದಾನೆ, ಮತ್ತೆಷ್ಟನ್ನು ತಾನೇ ಸ್ವತಃ ಸೇರಿಸಿದ್ದಾನೆ ಎಂದು ವಿಂಗಡಿಸುವುದು ಕಷ್ಟವಾಗಿದೆ. ಯೆಹೂದಿ ಜನಾಂಗದ ಇತಿಹಾಸವನ್ನು, ಮತೀಯ ಭಾವನೆಗಳನ್ನು, ಅವರ ಮಠದ ಆಡಳಿತವನ್ನು, ಮಠಾಧಿಪತಿಗಳ ವಿಷಯಗಳನ್ನು, ಯೆಹೂದಿ ರಾಜರುಗಳ ಚರಿತ್ರೆಯನ್ನು ಮತ್ತು ಪ್ರಾಚೀನ ಗ್ರೀಕರ ಕಾಲದಲ್ಲಿದ್ದ ಮತೀಯ ಭಾವನೆಗಳನ್ನು ತಿಳಿದುಕೊಳ್ಳುವುದರಲ್ಲಿ ಉದಂತಗಳು ಮಾಡಿರುವ ಸಹಾಯ ಅತ್ಯಮೂಲ್ಯವಾಗಿದೆ. ಗ್ರಂಥಕರ್ತೃ ನಾವು ಈಗ ತಿಳಿದುಕೊಂಡಿರುವಂಥ ವೈಜ್ಞಾನಿಕ ದೃಷ್ಟಿಕೋನದಿಂದ ವಿಶ್ಲೇಷಿಸಿ ಇತಿಹಾಸವನ್ನು ಬರೆಯದೇ ಇದ್ದಿರಬಹುದು. ಆದರೂ ಆತ ನಿರೂಪಿಸುವ ಆದರೆ ಬೇರೆ ಎಲ್ಲೂ ದೊರಕದ ವಿಷಯಗಳನ್ನು ಸಂಪೂರ್ಣವಾಗಿ ಸುಳ್ಳೆಂದು ಕೈಬಿಡುವ ಹಾಗಿಲ್ಲ. ಉದಂತಗಳಲ್ಲಿ ಅಡಗಿರುವ ವಿಷಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ವಿದ್ವಾಂಸರು ಎರಡೂ ಬಗೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಉದಂತವನ್ನು ಬರೆಯುವಲ್ಲಿ ಒಂದು ಐತಿಹಾಸಿಕ ಆಧಾರವಿದೆ ಎಂದರೆ, ಮತ್ತೆ ಕೆಲವರು ಅಂಥ ಆಧಾರಗಳಿಲ್ಲ ಎಂದು ಅಭಿಪ್ರಾಯಪಡುತ್ತಾರೆ. ಉದಂತಗಳ ಬಗ್ಗೆ ಮಾತನಾಡುತ್ತ ಎ. ಎಚ್. ಸೇಸ್ ಹೇಳಿರುವ ಮಾತುಗಳು ಗಮನಾರ್ಹವಾಗಿವೆ : ‘ಅಂಕಿ ಅಂಶಗಳ ಬಗ್ಗೆ ಉತ್ಪ್ರೇಕ್ಷೆಯುಳ್ಳ ಗ್ರಂಥಕರ್ತನನ್ನು ನೋಡಿದಾಗ, ಐತಿಹಾಸಿಕ ದೃಷ್ಟಿಯಿಂದ ಆಧಾರರಹಿತ ಹೇಳಿಕೆಗಳನ್ನು ಪರೀಕ್ಷಿಸುವಾಗ ಎಚ್ಚರಿಕೆಯಿಂದಿರಬೇಕು. ಆದರೆ ಅಂಥ ಹೇಳಿಕೆಗಳನ್ನು ಸಂಪೂರ್ಣ ಸುಳ್ಳಿನ ಕಂತೆ, ಬೇಕೆಂತಲೇ ಮಾಡಿದ ತಪ್ಪು, ಕಟ್ಟುಕಥೆ ಎಂದೆಲ್ಲ ಆರೋಪಿಸುವುದು ಅಷ್ಟಾಗಿ ಸರಿಯಾಗಲಾರದು. ನಾವು ಈಗ ಇತಿಹಾಸಕಾರನಲ್ಲಿ ಅಪೇಕ್ಷಿಸುವ ಐತಿಹಾಸಿಕ ಖಚಿತಗುಣ ಆತನಲ್ಲಿ ಇದ್ದಿರಲಿಲ್ಲವೆಂದು ಮಾತ್ರ ಹೇಳಬಹುದು.