ಬಿಲ್ಹಣ
ವಿಕ್ರಮಾಂಕದೇವ
ಹಿನ್ನೆಲೆ
[ಬದಲಾಯಿಸಿ]ಕಾಲ 11ನೆಯ ಶತಮಾನದ ಉತ್ತರಾರ್ಧ, ಕಾಶ್ಮೀರದವ. ಜನ್ಮಭೂಮಿ ಪ್ರವರಪುರಕ್ಕೆ ಸುಮಾರು 5 ಕಿಮೀ ದೂರದಲ್ಲಿರುವ ಖೋಣ ಮುಖ. ಜಾತಿಯಲ್ಲಿ ಮಧ್ಯದೇಶೀ ಬ್ರಾಹ್ಮಣ. ಮುತ್ತಾತ ಮುಕ್ತಿಕಲಶ, ತಾತ ರಾಜಕಲಶ, ತಂದೆ ಜ್ಯೇಷ್ಠಕಲಶ. ಎಲ್ಲರೂ ಅಗ್ನಿಹೋತ್ರಿಗಳು; ವೇದ, ವೇದಾಂತ ಹಾಗೂ ಶಾಸ್ತ್ರ ಪ್ರವೀಣರು. ಜ್ಯೇಷ್ಠಕಲಶ ಮಹಾ ಭಾಷ್ಯಕ್ಕೆ ಒಂದು ವ್ಯಾಖ್ಯಾನ ಬರೆದಿರುವನೆನ್ನಲಾಗಿದೆ. ತಾಯಿ ನಾಗದೇವಿ; ಅಣ್ಣ ಇಷ್ಟಾರಾಮ; ತಮ್ಮ ಆನಂದ. ವಿದ್ಯಾಭ್ಯಾಸ ಕಾಶ್ಮೀರದಲ್ಲಿ. ಈತನ ವಂಶದಲ್ಲಿ ವ್ಯಾಕರಣ ಮತ್ತು ಅಲಂಕಾರಶಾಸ್ತ್ರಕ್ಕೆ ಹೆಚ್ಚು ಆದ್ಯತೆ.
ಪ್ರವಾಸ
[ಬದಲಾಯಿಸಿ]ವಿದ್ಯಾವಂತನಾದ ಮೇಲೆ ಪಾಂಡಿತ್ಯ ಪ್ರದರ್ಶನಕ್ಕಾಗಿ ಭಾರತ ಯಾತ್ರೆ ಮಾಡಿದ. ಈ ಸಂಪ್ರದಾಯ ಬಾಣನೇ ಮುಂತಾದ ಬಹಳ ಕವಿಗಳಲ್ಲಿ ಕಂಡುಬರುವುದು. ಕಾಶ್ಮೀರ, ಬೃಂದಾವನ, ಮಥುರಾ, ಕಾಶಿ, ಕನ್ಯಾಕುಬ್ಜ, ಧಾರಾ, ಗುಜರಾತ್ ಮುಂತಾದ ಊರುಗಳಲ್ಲಿ ಸುತ್ತಿ ದಕ್ಷಿಣ ಭಾರತದ ಕಲ್ಯಾಣನಗರದ ಚಾಲುಕ್ಯ ವಂಶದ ರಾಜನಾದ ಆರನೆಯ ವಿಕ್ರಮಾದಿತ್ಯನ (1073-1127) ಆಸ್ಥಾನಕ್ಕೆ ಬಂದ. ಗುಣಗ್ರಾಹಿಯಾದ ರಾಜ ಈತನನ್ನು ಸತ್ಕರಿಸಿ ವಿದ್ಯಾಪತಿ ಎಂಬ ಉಪಾಧಿಕೊಟ್ಟ. ಜೀವನಪೂರ್ತಿ ಅಲ್ಲಿಯೇ ಇದ್ದ. ಕೊನೆಯ ದಿನಗಳನ್ನು ಕಾಶಿಯಲ್ಲೋ ಗಂಗಾನದಿ ದಡದಲ್ಲೊ ಕಳೆದಿರಬೇಕು ಎನ್ನಲಾಗಿದೆ.
ಕಾವ್ಯಗಳು
[ಬದಲಾಯಿಸಿ]ಇವನ ಮೂರು ಕಾವ್ಯಗಳು ಪ್ರಸಿದ್ಧವಾಗಿವೆ. 1. ವಿಕ್ರಮಾಂಕದೇವ ಚರಿತೆ, ಇದು ಮಹಾಕಾವ್ಯ. 2. ಕರ್ಣಸುಂದರಿ (ನಾಟಿಕಾ). 3. ಚೋರಪಂಚಾಶಿಕಾ (ಗೀತನಾಟಕ).
ವಿಕ್ರಮಾಂಕದೇವ ಚರಿತ ಐತಿಹಾಸಿಕ ಮಹಾಕಾವ್ಯ. ಇದರಲ್ಲಿ ವೀರರಸ ಪ್ರಧಾನವಾಗಿದೆ. ನಾಟಕದಲ್ಲಿ ಶೃಂಗಾರರಸ ಪ್ರಧಾನವಾಗಿದೆ. ಚೋರಪಂಚಾಶಿಕಾದಲ್ಲಿ ವಿಶೇಷವಾಗಿ ವಿಯೋಗ ಪ್ರಾಚುರ್ಯವಿದೆ. ಮೂರೂ ಪ್ರಖ್ಯಾತ ಕಾವ್ಯ ಗ್ರಂಥಗಳು.
ವಿಕ್ರಮಾಂಕದೇವ ಚರಿತೆ
[ಬದಲಾಯಿಸಿ]ಚಾಲುಕ್ಯ ವಂಶದ ರಾಜನಾದ ವಿಕ್ರಮಾದಿತ್ಯನ ಐತಿಹಾಸಿಕ ಚರಿತೆಯ ವರ್ಣನೆಯಿದೆ. ವೀರರಸದಿಂದ ಕೂಡಿದ ಈ ಮಹಾಕಾವ್ಯದಲ್ಲಿ ಋತುಗಳ ಮತ್ತು ಪ್ರಕೃತಿ ಚಿತ್ರಣ ಸೊಗಸಾಗಿ ಬಂದಿದೆ. ವೈದರ್ಭಿ ಶೈಲಿಯಲ್ಲಿ ರಚಿತವಾಗಿರುವ ಇದರ ಭಾಷೆ ಸರಳ ಮತ್ತು ಸ್ಪಷ್ಟ. ಕಾಳಿದಾಸನ ಪ್ರಭಾವ ವಿಶೇಷವಾಗಿ ಕಾಣಬರುತ್ತದೆ. ಅರ್ಥಾಲಂಕಾರಗಳಂತೆ ಅನುಪ್ರಾಸವನ್ನೂ ಅತಿಯಾಗಿ ಬಳಸಿಲ್ಲ. ವಸಂತದ ಸುಂದರ ವರ್ಣನೆ. ಪುಷ್ಪಾವಚಯ, ಸಹಸ್ನಾನ ಮಧುಪಾನದ ವಿಸ್ತಾರವರ್ಣನೆ ಇವೆ. ಒಂದು ಸರ್ಗದಲ್ಲಿ ಪ್ರರ್ತಿಯಾಗಿ ಸ್ನಾನದ ದೃಶ್ಯಗಳನ್ನು ವರ್ಣಿಸಿದೆ. ಅನಂತರ ವರ್ಷಕಾಲದ ಸುಂದರ ವರ್ಣನೆ ಬರುತ್ತದೆ. 16ನೆಯ ಸರ್ಗದಲ್ಲಿ ಬೇಟೆಯ ವರ್ಣನೆಯಿದೆ. ಕೊನೆಯ ಸರ್ಗದಲ್ಲಿ ಕವಿಯ ಆತ್ಮಕಥೆ ಇದೆ. ಇವನ ವರ್ಣನೆಗಳಲ್ಲಿ ಕವಿಯ ಸ್ವಚ್ಛವಾದ ಪ್ರತಿಭೆ, ಉನ್ನತವಾದ ಕಲ್ಪನೆ, ಕಮನೀಯವಾದ ಪದಗಳ ಜೋಡಣೆ, ರೋಚಕವಾದ ಯಥಾರ್ಥತೆ ಪದೇ ಪದೇ ಕಂಡು ಬರುತ್ತವೆ.
ಕರ್ಣಸುಂದರೀ
[ಬದಲಾಯಿಸಿ]ಕವಿ ಚಾಲುಕ್ಯ ರಾಜಾಸ್ಥಾನದಲ್ಲಿದ್ದಾಗ ಈ ನಾಟಕ ಬರೆದದ್ದು. ವಿಕ್ರಮ ದೇವ (ಚಾಲುಕ್ಯರಾಜ) ತನಗಿತ್ತ ಮಾನಮನ್ನಣೆಗೆ ಮಾರುಹೋಗಿ ಆ ಚಾಲುಕ್ಯವಂಶದ ರಾಜನೊಬ್ಬ ಕರ್ಣದೇವ (ಭೀಮದೇವನ ಮಗ) ವಿದ್ಯಾಧರಸುಂದರಿಯೋರ್ವಳೊಡನೆ ಬೆಳೆದ ಪ್ರೇಮ ಕಥೆಯೊಂದನ್ನು ಇಲ್ಲಿ ಚಿತ್ರಿಸಲಾಗಿದೆ. ರತ್ನಾವಳಿಯನ್ನು ಅನುಸರಿಸಿ ಬರೆದಿರುವ ಈ ನಾಟಕಾ ಕರ್ಣದೇವ ವಿದ್ಯಾಧರ ಯುವತಿ ಈರ್ವರ ಪ್ರೇಮ ಪ್ರಪಂಚ. ಸ್ತ್ರೀಪಾತ್ರಬಹುಲ ಹಾಗೂ ನಾಯಿಕಾ ಪ್ರಧಾನದಿಂದ ಈ ನಾಟಕ ನಾಟಿಕವೆನ್ನಬಹುದು. ರಾಜನ ಗುಣಾತಿಶಯಗಳನ್ನು ಮೆಚ್ಚಿದ ವಿದ್ಯಾಧರ ಯುವತಿ ಕೊನೆಗೆ ಕರ್ಣದೇವನನ್ನೇ ಮದುವೆಯಾಗುತ್ತಾಳೆ. ಚಾಲುಕ್ಯ ರಾಜರು ಮಹಿಮಾ ಶಾಲಿಗಳು, ಧೀರೋದಾತ್ತರು ಎಂದು ಸಾರಲು ಕವಿ ಈ ಕೃತಿಯನ್ನು ರಚಿಸಿ ತನ್ನ ಕೃತಜ್ಞತೆಯನ್ನು ಅರ್ಪಿಸಿದಂತಿದೆ. ಇದು ಲಲಿತಪದ ಬಂಧ, ಪ್ರಸಾದ, ಮಾಧುರ್ಯ ಗುಣಗಳಿಂದ ಕೂಡಿದೆ.
ಚೋರಾಪಂಚಾಶಿಕಾ
[ಬದಲಾಯಿಸಿ]ಇದು ನೂರಾರು ಪದ್ಯದ, ಪ್ರೇಮಿಗಳೀರ್ವರ ಮಧುರ ಬಾಂಧವ್ಯವನ್ನು ಉನ್ಮಾದಕ ಶೃಂಗಾರದಿಂದ ಚಿತ್ರಿಸಿರುವ ರಸಿಕ ಕಾವ್ಯ. ಈ ರಸಿಕ ಕೃತಿಗೆ ಗಣಪತಿಶರ್ಮ ಮತ್ತು ರಾಮೋಪಾಧ್ಯಾಯ ಬಸವೇಶ್ವರ ಎಂಬವರು ವ್ಯಾಖ್ಯಾನ ಬರೆದಿದ್ದಾರೆ.
ಕಾಶ್ಮೀರಿ ಶೈವಸಂಪ್ರದಾಯದವನಾದ ಈತ ಶಿವಸ್ತುತಿ ಎಂಬ ಕಾವ್ಯನ್ನೂ ಬರೆದಿದ್ದಾನೆ ಎನ್ನಲಾಗಿದೆ.