ವಿಷಯಕ್ಕೆ ಹೋಗು

ಉಂಬಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಂಬಳಿ ಎಂದರೆ ರಾಜರು ಮತ್ತು ಶ್ರೀಮಂತರು ದೇವಸ್ಥಾನ, ಮಠಗಳಂಥ ಧಾರ್ಮಿಕ ಸಂಸ್ಥೆಗಳಿಗೆ, ವಿದ್ವಾಂಸರಿಗೆ, ಗಮನಾರ್ಹವಾದ ಸೇವೆಯನ್ನು ಸಲ್ಲಿಸಿದವರಿಗೆ, ಯುದ್ಧದಲ್ಲಿ ನೆರವಾದವರಿಗೆ, ಅಧಿಕಾರಿಗಳಿಗೆ ಜಮೀನುಗಳನ್ನು ದತ್ತಿಗಳಾಗಿ ಬಿಟ್ಟುಕೊಟ್ಟು ಅವುಗಳ ಕಂದಾಯವನ್ನು ಮಾಫಿ ಮಾಡುತ್ತಿದ್ದರು. ಇಂಥ ಹೊಲಗಳೇ ಉಂಬಳಿ ಜಮೀನುಗಳು. ಉಂಬಳಿ ಎನ್ನುವುದು ತೆರಿಗೆಯನ್ನು ತೆಗೆದುಹಾಕಿದ್ದನ್ನು ಸೂಚಿಸುತ್ತದೆ.

ಉಂಬಳಿ ಎನ್ನುವ ಪದ ವಾಸ್ತವವಾಗಿ ಪ್ರಾಕೃತದ ಮೂಲಕ ಕನ್ನಡಕ್ಕೆ ಬಂದಿದೆ. ಅಶೋಕನ ರುಮ್ಮಿಂದೈ ಸ್ತಂಭಶಾಸನದಲ್ಲಿ ಬರುವ ಉಬಲಿಕೆ ಎಂಬ ಮಾತಿಗೆ ತೆರಿಗೆಯಿಂದ ಮುಕ್ತವಾದದ್ದು ಎಂದರ್ಥ. ಇದರ ಸಂಸ್ಕೃತ ರೂಪ ಉದ್ಬಲಿಕ. ಇದಕ್ಕೂ ಇದೇ ರೀತಿಯ ಇನ್ನೊಂದು ಪದವಾದ ಉಚ್ಛುಲ್ಕಕ್ಕೂ (ಉತ್+ಶುಲ್ಕ) ಒಂದೇ ಅರ್ಥ. ಬುದ್ಧನ ಜನ್ಮಸ್ಥಳವಾದ ರುಮಿಂದೈ (ಲುಮ್ಮಿನಿ, ಲುಂಬಿಣಿ) ಗ್ರಾಮದ ತೆರಿಗೆಗಳನ್ನು ಅಶೋಕ ತೆಗೆದುಹಾಕಿದನೆಂದು ಆ ಶಾಸನದಲ್ಲಿದೆ. ಸಂಸ್ಕೃತ ಉದ್ಬಲಿ ಪ್ರಾಕೃತ ಉಬ್ಬಲಿ > (ಕ)>ಕನ್ನಡ ಉಂಬಳಿ. ಈ ಪದ ತಮಿಳಿನಲ್ಲೂ (ಉಂಬಳಂ ಉಂಬಳಿಕ್ಕೈ), ತೆಲುಗಿನಲ್ಲೂ (ಉಂಬಳಮು) ಇದೇ ಅರ್ಥದಲ್ಲಿ ಬಳಕೆಯಲ್ಲಿದೆ. ಕನ್ನಡದಲ್ಲಿ ಉಂಬಳಿ ಜಮೀನು ಎಂಬುದು ಈಗಲೂ ಜೀವಂತವಾಗಿರುವ ಉಕ್ತಿಯಾಗಿದೆ.

ಉಂಬಳಿ ಎನ್ನುವ ಮಾತು ಹಿಂದಿನ ಅನೇಕ ಕನ್ನಡ ಶಾಸನಗಳಲ್ಲಿ ಕಂಡುಬರುತ್ತದೆ. ಇದೇ ಅರ್ಥದಲ್ಲಿ ಬಳಕೆಯಾಗಿರುವ ಬೇರೆ ಬೇರೆ ಪದಗಳು ಹೀಗಿವೆ; ಮಾನ್ಯ, ಸರ್ವ-ಮಾನ್ಯ, ಸರ್ವ-ನಮಸ್ಯ, ನಮಸ್ಯ-ವೃತ್ತಿ. ಹಲ್ಮಿಡಿ ಶಾಸನದಲ್ಲಿ ಬರುವ ಅ-ಕರ ಎಂಬುದು ತೆರಿಗೆಗಳನ್ನು ತೆಗೆದುಹಾಕಿದ್ದನ್ನು ಸೂಚಿಸುತ್ತದೆ. ತಮಿಳಿನ ಸಂಗಂ ಸಾಹಿತ್ಯದಲ್ಲಿ ತೆರಿಗೆಗಳನ್ನು ತೆಗೆದುಹಾಕಿದ ಭೂಮಿಗಳನ್ನು ಪುರವು, ಇಱುಯಿಲಿ ನಿಲಂ ಎಂದು ಕರೆದಿದೆ. (ಇಱು-ನೆಲಗಂದಾಯ).

ಉಂಬಳಿಗಳನ್ನು ಸಾಮಾನ್ಯವಾಗಿ ದೇವಸ್ಥಾನಗಳಿಗೆ, ಮಠಗಳಿಗೆ, ಸತ್ರಗಳಿಗೆ, ಸನ್ಯಾಸಿಗಳಿಗೆ, ವಿದ್ವಾಂಸರಾದ ಬ್ರಾಹ್ಮಣರಿಗೆ ಬಿಟ್ಟುಕೊಡುತ್ತಿದ್ದರು. ರಾಜನ ಪರವಾಗಿ, ಊರಿನ ಪರವಾಗಿ ಹೋರಾಡಿ ಮಡಿದ ಅಥವಾ ಗೆದ್ದು ಬಂದ ಶೂರರಿಗೂ ಉಂಬಳಿಗಳನ್ನು ಬಿಟ್ಟುಕೊಡುತ್ತಿದ್ದು ದುಂಟು; ಅಥವಾ ಗಣನೀಯವಾದ ಸೇವೆಯನ್ನು ಸಲ್ಲಿಸಿದ ರಾಜ್ಯಾಧಿಕಾರಿಗಳಿಗೂ ಉಂಬಳಿಗಳನ್ನು ಬಿಟ್ಟುಕೊಡುತ್ತಿದ್ದರು. ಆಗಲೇ ಸೂಚಿಸಿದಂತೆ ಉಂಬಳಿ ಜಮೀನುಗಳಿಗೆ ಕಂದಾಯವಿರುತ್ತಿರಲಿಲ್ಲ; ಮತ್ತು ಅವುಗಳನ್ನು ವಂಶಪಾರಂಪರ್ಯವಾಗಿ ಅನುಭವಿಸಿಕೊಂಡು ಬರಲಿ ಎಂದು ಶಾಸನಗಳನ್ನು ಹಾಕಿಸಿಕೊಡುತ್ತಿದ್ದರು. (ಕೆಲವು ಸಾರಿ ಅರುವಣವೆಂಬ ಸಾಂಕೇತಿಕ ಅಲ್ಪ ತೆರಿಗೆಯನ್ನು ಹಾಕಿದ ದತ್ತಿಗಳನ್ನು ಕೊಡುತ್ತಿದ್ದರು). ಈ ಕೆಳಗಿನ ಎರಡು ಶಾಸನಗಳು ಉಂಬಳಿ ಜಮೀನುಗಳ ವಿಷಯವನ್ನು ಹೇಳುತ್ತವೆ:

“ಶುಭಮಸ್ತು || ನಂದನ ಸಂವತ್ಸರದ ಕಾರ್ತೀಕ ಶು. 5 ರಲ್ಲೂ ಶ್ರೀಮತು ಅಚುತುರಾಯ ಮಹಾರಾಯರ ಕಾರ್ಯಕೆ ಕರ್ತರಾದ ಬಾಚರಸಯನವರ ಕುಮಾರ ರಾಮಪಯನವರೂ ಸಿಂಗಟಿಗೆಱುಯ ಲಿಂಗಣ ಗಡಗೆ ದಂಡಿಗೆಯ ಉಂಬಳಿಗೆ ಹೆರಡಿಗಟದ ಗ್ರಾಮವನ್ನೂ ಚತುಸೀಮೆವೊಳಗಾದ ಗದ್ದೆ ಹೊಲ ಸುವರ್ನಾದಾಯ ಸಹವಾಗಿ ಪಾಲಿಸದೆಉ ನಂಮ ಬೂದಿಹಾಳ ಸೀಮೆಯ ಪಾರುಪತ್ಯಗಾಱ ಲಖರಾಜನ ತಿಂಮಪಯನ ಕಳುಹಿ...ದ ಶಾಸನದ ಕೊಡಗಿಯ ಕಲನೂ...ನೆಟಿಸಿ ಕೋಟಿ ಉ ಯೀ ಗ್ರಾಮವನೂ ಆಗುಮಾಡಿಕೊಂಡು ಸುಖದಲುಯಿಹುದು ಶ್ರೀ ಶ್ರೀ ಶ್ರೀ" (ಕಡೂರು ತಾಲೂಕಿನ ಹೇರಳಗಟ್ಟದ ಶಾಸನ).

ತುಮಕೂರು ತಾಲೂಕಿನ ಕರಿಕೆರೆ ಗ್ರಾಮದ ಶಾಸನದ ಕೆಲವು ಭಾಗಗಳು ಹೀಗಿವೆ: “ಶ್ರೀಮನುಮಹಾನಾಡಪ್ರಭು ಬಿಡ್ಸವರದ ಮುಂಮಡಿ ಚಿಕ್ಕಪ್ಪಗೌಡ ರೈಯನವರು ನಂಮ ಅಳಿಯ .......ಕೆರೆಯಪಗೌಡ ನಂಮ ಹೆಣುಮಗಳ ಕ...ಂಮಗೆ ಕೊಟ ಗ್ರಾಮ ಉಂಬಳಿಯ ಕ್ರಮವೆಂತೆಂದರೆ ಕೋರಯ ಮಾಗಣಿಗೆ ಸಲುವ ಬ್ರಂಹ್ಮ ಸಮುದ್ರದ ಕಾಲುವಳಿ ಕರಿಕೆರೆ ಗ್ರಾಮವನು ಉಂಬಳಿಯಾಗಿ ಕೊಟ್ಟೆವಾ....ಆಚಂದ್ರಾರ್ಕಸ್ಥಾಯಿಯಾಗಿ....ಪುತ್ರ ಪೌತ್ರ ಪಾರಂಪರ್ಯವಾಗಿ ಅನುಭವಿಸಿ...”

ಹೀಗೆ ರಾಜನೊ ಇತರರೊ ತಾವು ಕೊಟ್ಟ ಉಂಬಳಿ ಜಮೀನುಗಳಿಗೆ ಶಾಸನವನ್ನು ಬರೆಯಿಸಿಕೊಟ್ಟು, ಆ ಜಮೀನುಗಳು ತೆರಿಗೆಗಳಿಂದ ವಿಮುಕ್ತವಾಗಿವೆಯೆಂಬ ಸಂಗತಿಯನ್ನು ಇತರ ಅಧಿಕಾರಿಗಳಿಗೆ ತಿಳಿಸುತ್ತಿದ್ದರು. ಉದಾಹರಣೆಗೆ, ಹಿರೇಹಡಗಲಿ ತಾಮ್ರಪಟಗಳಲ್ಲಿ ಪಲ್ಲವದೊರೆ ಶಿವಸ್ಕಂದವರ್ಮ ತಾನು ಬ್ರಾಹ್ಮಣರಿಗೆ ಕೊಟ್ಟಿರುವ ದತ್ತಿಯ ವಿಷಯವನ್ನು ರಾಜಕುಮಾರ, ಸೇನಾಪತಿ, ರಾಷ್ಟ್ರಿಕ, ದೇಶಾಧಿಕೃತ, ಅಮಾತ್ಯ ಮುಂತಾದ ಅಧಿಕಾರಿಗಳಿಗೆ ತಿಳಿಸಿದ್ದಾನೆ. ತಮ್ಮ ದತ್ತಿಗಳನ್ನು ಮುಂದಿನ ದೊರೆಗಳು ಪಾಲಿಸಿಕೊಂಡು ಬರಬೇಕೆಂದು ದಾನಿಗಳು ನಿರೀಕ್ಷಿಸುತ್ತಿದ್ದರು. ಒಮ್ಮೊಮ್ಮೆ ಅಪಹೃತವಾದ ದತ್ತಿಗಳನ್ನು ಮುಂದಿನ ದೊರೆಗಳು ಮತ್ತೆ ಹಿಂದಕ್ಕೆ ಕೊಡಿಸಿರುವ ಉದಾಹರಣೆಗಳೂ ಶಾಸನಗಳಲ್ಲಿ ದೊರಕುತ್ತವೆ. ಉದಾಹರಣೆಗೆ, ಶಿವಮೊಗ್ಗ ಜಿಲ್ಲೆಯ ಮಳವಳ್ಳಿಯ ಪ್ರಾಕೃತ ಶಾಸನದಲ್ಲಿ ಕದಂಬರ ದೊರೆಯೊಬ್ಬ ಹಿಂದಿನ ದತ್ತಿಯನ್ನು ಪುನರ್ಭರಣ ಮಾಡಿಕೊಟ್ಟಿರುವ ಸಂಗತಿ ಉಕ್ತವಾಗಿದೆ.

ಬ್ರಿಟಿಷರು ಭಾರತದ ಆಡಳಿತವನ್ನು ವಹಿಸಿಕೊಂಡಾಗ ಎದುರಿಸಬೇಕಾದ ಸಮಸ್ಯೆಗಳಲ್ಲಿ ಉಂಬಳಿ ಅಥವಾ ಇನಾಂ ಜಮೀನುಗಳಿಗೆ ಸಂಬಂಧಿಸಿದ ಸಮಸ್ಯೆಯೂ ಒಂದಾಗಿತ್ತು. ಅನೇಕರು ಸಣ್ಣ, ದೊಡ್ಡ ಜಮೀನುಗಳನ್ನೋ ಅಥವಾ ಇಡೀ ಗ್ರಾಮಗಳನ್ನೋ ಉಂಬಳಿ ಯನ್ನಾಗಿ ಅನುಭವಿಸುತ್ತಿದ್ದದ್ದು ಅವರ ಗಮನಕ್ಕೆ ಬಂದಿತು. ಕೆಲವು ಬಾರಿ ದುರ್ಬಲ ಆಡಳಿತ, ರಾಜಕೀಯ ಅಸ್ಥಿರತೆಗಳನ್ನುಪಯೋಗಿಸಿಕೊಂಡು ಇನಾಂ ದಾಖಲೆಗಳನ್ನು ಕೃತಕವಾಗಿ ಸೃಷ್ಟಿಸಿರುವ ನಿದರ್ಶನಗಳೂ ಇದ್ದವು. ಇಂಥ ಕ್ರಮಬದ್ಧವಲ್ಲದ ಜಮೀನುಗಳನ್ನು ವಶಪಡಿಸಿಕೊಳ್ಳುವುದರಲ್ಲಿ ಅವರು ಆತುರ ತೋರಿದರು. ಇದರಿಂದ ಕ್ರಮಬದ್ಧ ಇನಾಂದಾರರು ಕೂಡ ಸರಿಯಾದ ದಾಖಲೆಗಳನ್ನು ತೋರಿಸಲು ಅಸಮರ್ಥರಾದಾಗ ಕಿರುಕುಳವನ್ನು ಅನುಭವಿಸಬೇಕಾಯಿತು. ಬಹುಸಂಖ್ಯೆಯ ಇನಾಮುಗಳನ್ನು ಇದ್ದಕ್ಕಿದಂತೆ ರದ್ದು ಪಡಿಸಿದಾಗ ದೇಶದಲ್ಲಿ ಅಶಾಂತಿ ಮೂಡಿತು. 1822ರಲ್ಲಿ ಭಾರತ ಸರ್ಕಾರ ಹೊರಡಿಸಿದ ಘೋಷಣೆಯಲ್ಲಿ ಇನಾಂ ರದ್ದಿಯಾಯ್ತಿಯ ಬಗ್ಗೆ ನಿಧಾನವಾಗಿ ಮುಂದುವರಿಯಲಾಗುವುದೆಂದು ಭರವಸೆ ನೀಡಲಾಯಿತು. ಸ್ವಾತಂತ್ರ್ಯಾನಂತರ ಮೈಸೂರು ದೇಶದಲ್ಲಿ 1954ರ ಇನಾಂ ರದ್ದು ಕಾಯಿದೆಯ ಪ್ರಕಾರ ಇನಾಂ ಮತ್ತು ಜೋಡಿಗಳನ್ನು (ಜೋಡಿ = ಕಡಿಮೆ ಕಂದಾಯದ ದತ್ತಿಗಳು) ರದ್ದುಪಡಿಸಲಾಯಿತು.

ಉತ್ತರಾಧಿಕಾರಕ್ಕೆ ಕೆಲವು ನಿರ್ಬಂಧಗಳನ್ನು ಕಲ್ಪಿಸಿ ನೀಡಿದ ಉಂಬಳಿಗಳಿಗೂ ಇಂಗ್ಲಿಷ್ ನ್ಯಾಯದಲ್ಲಿ ಪುರಸ್ಕಾರವುಂಟು. ಆ ಆಸ್ತಿ ಕೆಲವು ನಿರ್ದಿಷ್ಟ ಕರಾರುಗಳಿಗೆ ಒಳಪಟ್ಟು ಉತ್ತರಾಧಿಕಾರಿಗಳಿಗೆ ಸಲ್ಲಬೇಕೆಂದಾಗಲಿ, ಕೆಲವು ನಿರ್ದಿಷ್ಟ ಉತ್ತರಾಧಿಕಾರಿಗಳಿಗೆ ಮಾತ್ರ ಅದು ಸಲ್ಲತಕ್ಕದ್ದೆಂದಾಗಲಿ ಉಂಬಳಿ ನೀಡಿದವ ವಿಧಿಸಬಹುದಾಗಿದೆ. ಊಳಿಗಮಾನ್ಯ ವ್ಯವಸ್ಥೆಯ ಕಾಲದಲ್ಲಿ ಐರೋಪ್ಯ ರಾಷ್ಟ್ರಗಳಲ್ಲಿ ಈ ಪದ್ಧತಿ ಜಾರಿಯಲ್ಲಿತ್ತು.

"https://kn.wikipedia.org/w/index.php?title=ಉಂಬಳಿ&oldid=960482" ಇಂದ ಪಡೆಯಲ್ಪಟ್ಟಿದೆ