ವಿಷಯಕ್ಕೆ ಹೋಗು

ಆಸನ (ಯೋಗ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಜ್ರಾಸನ
ಪದ್ಮಾಸನ (ಸ್ತ್ರೀ)
ಪದ್ಮಾಸನ (ಪುರುಷ)

ಯೋಗದಲ್ಲಿ, ಆಸನ ಎಂದರೆ ಅಭ್ಯಾಸಿಯು ಕುಳಿತುಕೊಳ್ಳುವ ಭಂಗಿ.[] ಯೋಗಸೂತ್ರಗಳಲ್ಲಿ, ಪತಂಜಲಿಯು "ಆಸನ"ವನ್ನು "ದೃಢ, ಆದರೆ ಆರಾಮದ ಸ್ಥಿತಿಯಲ್ಲಿ ಕುಳಿತುಕೊಂಡಿರುವುದು" ಎಂದು ವ್ಯಾಖ್ಯಾನಿಸುತ್ತಾನೆ. ವಿಸ್ತಾರವಾದ ಅವಧಿಯವರೆಗೆ ಕುಳಿತುಕೊಳ್ಳುವ ಸಾಮರ್ಥ್ಯವು ತನ್ನ ಪದ್ಧತಿಯಾದ ಅಷ್ಟಾಂಗ ಯೋಗದ ಎಂಟು ಅಂಗಗಳಲ್ಲಿ ಒಂದು ಎಂದು ಪತಂಜಲಿಯು ಹೇಳುತ್ತಾನೆ.

ಆಸನಗಳನ್ನು ದೈಹಿಕ ವ್ಯಾಯಾಮವಾಗಿಯೂ ಮಾಡಲಾಗುತ್ತದೆ. ಆಗ ಇವನ್ನು ಕೆಲವೊಮ್ಮೆ "ಯೋಗ ಭಂಗಿಗಳು" ಎಂದು ಸೂಚಿಸಲಾಗುತ್ತದೆ. ಕೆಲವು ಆಸನಗಳನ್ನು ಕೇವಲ ಆರೋಗ್ಯದ ಉದ್ದೇಶಗಳಿಗಾಗಿ ಮಾಡಲಾಗುತ್ತದೆ. ಆಸನಗಳು ಉತ್ತಮ ಆರೋಗ್ಯವನ್ನು ಪ್ರೋತ್ಸಾಹಿಸುತ್ತವೆ, ಆದರೆ ದೈಹಿಕ ವ್ಯಾಯಾಮಗಳಿಗೆ ಹೋಲಿಸಿದರೆ ಭಿನ್ನ ರೀತಿಗಳಲ್ಲಿ. ದೇಹವನ್ನು ಭಂಗಿಗಳಲ್ಲಿ ಇರಿಸುವುದು ಅರಿವು, ವಿಶ್ರಾಂತಿ ಮತ್ತು ಏಕಾಗ್ರತೆಯನ್ನು ವಿಕಾಸಗೊಳಿಸುತ್ತದೆ.

ಯೋಗಸೂತ್ರಗಳಲ್ಲಿ, ಪತಂಜಲಿಯು ಆಸನವನ್ನು ಶಾಸ್ತ್ರೀಯ ಅಥವಾ ರಾಜ ಯೋಗದ ಎಂಟು ಅಂಗಗಳಲ್ಲಿ ಮೂರನೆಯದೆಂದು ವರ್ಣಿಸುತ್ತಾನೆ. ಆಸನಗಳೆಂದರೆ ಯೋಗಾಭ್ಯಾಸದ ದೈಹಿಕ ಚಲನೆಗಳು ಮತ್ತು, ಪ್ರಾಣಾಯಾಮ ಅಥವಾ ಉಸಿರಾಟದ ತಂತ್ರಗಳ ಸಂಯೋಜನೆಯಲ್ಲಿ, ಹಠ ಯೋಗವೆಂದು ಸೂಚಿಸಲಾದ ಯೋಗಶೈಲಿಯನ್ನು ರಚಿಸುತ್ತವೆ. ಯೋಗಸೂತ್ರದಲ್ಲಿ, ಪತಂಜಲಿಯು ಆಸನವನ್ನು "ಸ್ಥಿರ ಮತ್ತು ಆರಾಮದಾಯಕ ಭಂಗಿ" ಎಂದು ವಿವರಿಸುತ್ತಾನೆ, ಮತ್ತು ನಿರ್ದಿಷ್ಟವಾಗಿ ಧ್ಯಾನಾಭ್ಯಾಸಕ್ಕೆ ಬಳಸಲಾಗುವ, ಕುಳಿತುಕೊಂಡು ಮಾಡುವ, ಧ್ಯಾನದ ಭಂಗಿಗಳನ್ನು ಸೂಚಿಸುತ್ತಾನೆ. ಧ್ಯಾನವು ಸಮಾಧಿಗೆ (ಅತೀಂದ್ರಿಯ ಆತ್ಮ ಸಾಕ್ಷಾತ್ಕಾರ) ಮಾರ್ಗವಾಗಿದೆ ಎಂದು ಅವನು ಮುಂದೆ ಸೂಚಿಸುತ್ತಾನೆ.

ಅಷ್ಟಾಂಗ ಯೋಗದ ಎಂಟು ಅಂಗಗಳೆಂದರೆ, ಕ್ರಮವಾಗಿ, ಯಮಗಳು (ಸಾಮಾಜಿಕ ನಡವಳಿಕೆಯ ನಿಯಮಾವಳಿಗಳು), ನಿಯಮಗಳು (ಸ್ವಂತದ ಆಚಾರವಿಧಿಗಳು), ಆಸನಗಳು (ಭಂಗಿಗಳು), ಪ್ರಾಣಾಯಾಮ (ಉಸಿರಾಟದ ಕ್ರಿಯೆ), ಪ್ರತ್ಯಾಹಾರ (ಇಂದ್ರಿಯಗಳನ್ನು ಹಿಂದೆಸರಿಸುವುದು ಅಥವಾ ನಿರಾಸಕ್ತಿ), ಧಾರಣ (ಏಕಾಗ್ರತೆ), ಧ್ಯಾನ, ಮತ್ತು ಸಮಾಧಿ (ಆತ್ಮದ ಸಾಕ್ಷಾತ್ಕಾರ ಮತ್ತು ಬ್ರಹ್ಮನ್‍ನೊಂದಿಗೆ ಐಕ್ಯವಾಗುವುದು).

ಆಸನವನ್ನು ಅಭ್ಯಾಸ ಮಾಡಲು ಏಕೈಕ ನಿಯಮವೆಂದರೆ "ಸ್ಥಿರ ಹಾಗೂ ಆರಾಮವಾಗಿರುವುದು" ಎಂದು ಯೋಗಸೂತ್ರಗಳಲ್ಲಿ ಪತಂಜಲಿಯು ಸಲಹೆ ನೀಡುತ್ತಾನೆ. ದೇಹವನ್ನು ಸಮತೋಲನದ ಸ್ಥಿತಿಯಲ್ಲಿ ಹಿಡಿದಿಡಲಾಗುತ್ತದೆ ಮತ್ತು ಅಭ್ಯಾಸಿಯು ಯಾವುದೇ ಅಸೌಖ್ಯವನ್ನು ಅನುಭವಿಸುವುದಿಲ್ಲ. ದೇಹದ ಹತೋಟಿಯನ್ನು ಇಟ್ಟುಕೊಳ್ಳುವಲ್ಲಿ ಪ್ರವೀಣನಾದಾಗ, ಅಭ್ಯಾಸಿಗಳು ಬಿಸಿ/ತಂಪು, ಹಸಿವು/ಪೂರ್ಣ ಸಂತೃಪ್ತಿ, ಸುಖ/ದುಃಖದ ಉಭಯತ್ವದಿಂದ ಮುಕ್ತರಾಗಿರುತ್ತಾರೆ ಎಂದು ನಂಬಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "Patanjali Yoga sutras" by Swami Prabhavananda, published by the Sri Ramakrishna Math ISBN 81-7120-221-7 p. 111
"https://kn.wikipedia.org/w/index.php?title=ಆಸನ_(ಯೋಗ)&oldid=852981" ಇಂದ ಪಡೆಯಲ್ಪಟ್ಟಿದೆ