ಆಮ್ಲಜನಕ ಕೊರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಮ್ಲಜನಕ ಕೊರೆ ಎಂದರೆ ಯಾವ ಕಾರಣದಿಂದಲೇ ಆಗಲಿ ಮೈಯಲ್ಲಿನ ಊತಕಗಳಿಗೆ (ಟಿಷ್ಯೂಸ್) ಸಾಕಷ್ಟು ಆಮ್ಲಜನಕ (ಆಕ್ಸಿಜನ್) ದೊರೆಯದಾಗುವ ಸ್ಥಿತಿ.

ಆಮ್ಲಜನಕ ಚಿತ್ರ

ಇದು ತೀರ ಸಾಮಾನ್ಯವಾದರೂ ರೋಗಗಳಲ್ಲಿ ತೊಡಕಿನ ಲಕ್ಷಣವಾಗಿರುವುದೇ ಹೆಚ್ಚು. ಇದರಲ್ಲಿ ನಾಲ್ಕು ಬಗೆಗಳಿವೆ:

  1. ಧಮನಿಗಳ ಮೂಲಕ ಊತಕಗಳಿಗೆ ಹರಿವ ರಕ್ತದಲ್ಲಿ ಆಮ್ಲಜನಕದ ಒತ್ತಡ ರಕ್ತ ಬಣ್ಣಕವನ್ನು (ಹೀಮೋಗ್ಲೋಬಿನ್) ಪೂರಕಗೊಳಿಸಲು ಸಾಲದಂತಿರುವ ರಕ್ತಾಮ್ಲಜನಕ ಕೊರೆಯದು (ಅನಾಕ್ಸೀಮಿಕ್).
  2. ರಕ್ತಬಣ್ಣಕದ ತುಂಬ ಆಮ್ಲಜನಕ ತುಂಬಿದ್ದರೂ ರಕ್ತಬಣ್ಣಕವೇ ಸಾಲದಾಗಿ ಆಮ್ಲಜನಕ ಹೊತ್ತು ಸಾಗಿಸುವ ರಕ್ತದ ಬಲ ಕುಂದಿರುವ ರಕ್ತಕೊರೆಯದು (ಅನೀಮಿಕ್)
  3. ಎಲ್ಲ ರೀತಿಗಳಲ್ಲೂ ರಕ್ತ ಚೆನ್ನಾಗಿದ್ದರೂ ಒಂದು ಅಂಗದಲ್ಲಿ ರಕ್ತದ ಹರಿವು ತೀರ ಕಡಿಮೆಯಾಗಿರುವ ಮಂದಹರಿವಿನದು (ಸ್ಟ್ಯಾಗ್ನೆಂಟ್)
  4. ಸಯನೈಡಿನಂತೆ, ಯಾವುದಾದರೂ ವಿಷ ಊತಕಗಳ ಜೀವಕಣಗಳಿಗೆ ಹತ್ತಿ, ಆಮ್ಲಜನಕವನ್ನು ಸರಿಯಾಗಿ ಬಳಸಲಾಗದಿರುವ ಊತಕವಿಷಯದ್ದು (ಹಿಸ್ಟೋಟಾಕ್ಸಿಕ್) ರಕ್ತ, ಗುಂಡಿಗೆ, ರಕ್ತ ಸುತ್ತಾಟ, ಫುಪ್ಪುಸ ಇವುಗಳ ರೋಗಗಳಲ್ಲೂ ಆಮ್ಲಜನಕಕೊರೆ ಏಳಬಹುದು.

ರಕ್ತಾಮ್ಲಜನಕಕೊರೆ[ಬದಲಾಯಿಸಿ]

ರೋಗಗಳಲ್ಲಿ ಕಾಣುವುದಲ್ಲದೆ, ಅನೇಕ ವೇಳೆ ಆಮ್ಲಜನಕಕೊರೆ ಎತ್ತರದಲ್ಲಿ ವಿಮಾನ ಹಾರಾಟದಲ್ಲೂ ಪರ್ವತದ ಎತ್ತರಗಳಲ್ಲೂ ಆಗುತ್ತದೆ. ವಿಮಾನಚಾಲಕ ಈ ವಿರಳವಾದ ಗಾಳಿಯೊಳಕ್ಕೆ ಸರಕ್ಕನೆ ಏರಿದರೆ, ಪರ್ವತ ಏರುವವ ನಿಧಾನವಾಗಿ ಹತ್ತುವನು. ವಿಮಾನದಲ್ಲಿ ಏರಲು ಚಾಲಕನಿಗೆ ಶ್ರಮ ಬೇಕಿಲ್ಲ. ಪರ್ವತ ಏರುವವ ಬಹುಮಟ್ಟಿಗೆ ತನ್ನ ಮೈ ಸ್ನಾಯುದುಡಿತದ ಯತ್ನದಿಂದ ದಣಿಯುತ್ತಾನೆ. ಪರ್ವತ ಹತ್ತುವವ ಹಾಸಿಗೆಯಲ್ಲಿ ಪಕ್ಕಕ್ಕೆ ಹೊರಳಲೂ ಎರಡು ಬಾರಿ ಯೋಚಿಸುವನು. ಆದ್ದರಿಂದ ಇವರಿಬ್ಬರ ಮೇಲಿನ ಪರಿಣಾಮಗಳೂ ಬೇರೆ ಬೇರೆ.

ನಿಧಾನವಾಗಿ ಆಮ್ಲಜನಕಕೊರೆ ಯಾದರೆ, ಅವನಿಗೆ ಗೊತ್ತಾಗದೆಯೇ ಮಂಕುಕವಿದಂತಾಗುವನು. ಆಮ್ಲಜನಕಕೊರೆ ಸರಕ್ಕನೆ ತೀವ್ರವಾದರೆ, ಮಿತಿಗೆಟ್ಟು ಮದ್ಯಸಾರ ಕುಡಿದವನಂತೆ ವರ್ತಿಸುವನು. ತಲೆನೋವು, ಮನಗುಂದುವೆ, ನಿರಾಸಕ್ತಿ ತೂಕಡಿಕೆ ಇಲ್ಲವೇ ಉದ್ರೇಕಗಳಿಂದ ಮೈಮೇಲೆ ಪರಿವೆಯಿಲ್ಲದೆ ಕುಣಿದಾಡಬಹುದು. ಕೂಗಾಡಿ, ಜಗಳಗಂಟಿಯಾಗಿ ಕಚ್ಚಾಡಬಹುದು. ಯಾವುದು ಅಪಾಯಕರ ಯಾವುದಲ್ಲ ಎನ್ನುವುದೂ ತಿಳಿಯದಿರಬಹುದು. ಇಂಗಾಲಮಾನಾಕ್ಸೈಡು ವಿಷವೇರಿದ ಗಣಿ ಕೆಲಸಗಾರರನಿಗೆ ತನ್ನ ಕೈಸುಟ್ಟಿದ್ದೇ ತಿಳಿಯದಿರುವನು. ಹೀಗಿದ್ದರೂ ತಾನೂ ಎಂದಿನಂತೆ ಚೆನ್ನಾಗೇ ಇರುವೆ ಎಂದುಕೊಳ್ಳುತ್ತಾನೆ. ನೆನಪು ಅಳಿದು ಹೊತ್ತುಗೊತ್ತು ಇಲ್ಲವಾಗುವನು, ಕೆಲವೇ ಹೆಜ್ಜೆಗಳನ್ನು ಇರಿಸಿ ಮೈಲಿಗಳೇ ನಡೆದೆನೆಂದು ತಿಳಿವನು. ಅರಿವಿಗಿಂತಲೂ ತಿಳಿವೇ ಕುಂದಿರುತ್ತದೆ. ಕಣ್ಣುಬಿಟ್ಟು ನೋಡುತ್ತಿದ್ದರೂ ಏನು ನೋಡುವೆನೆಂದು ಗೊತ್ತಿರದು. ಬರೆದ, ಅಚ್ಚುಹಾಕಿದ ಪದಗಳನ್ನು ಅರ್ಥಮಾಡಿಕೊಳ್ಳಲು ತೊಡರಿಸುತ್ತಾನೆ. ನೋವು ಕೂಡ ಅವನಿಗೆ ಗೊತ್ತಾಗದು. ಬಲು ಎತ್ತರದಲ್ಲಿ ಹಾರಾಡುವ ವಿಮಾನಚಾಲಕನ ಇಲ್ಲವೇ ಕಡಲಿನಾಳದ ಕೆಲಸಗಾರನ ಆಮ್ಲಜನಕ ಪೂರೈಕೆಯನ್ನು ನಿಲ್ಲಿಸಬಿಟ್ಟರೆ, ಗಣಿಕೆಲಸಗಾರ ಮೀಥೇನ್ ಅನಿಲ ತುಂಬಿರುವ ದೊಗರಿನಲ್ಲಿ ತಲೆಹಾಕಿದರೆ ಬಲವಾದ ಏಟು ತಿಂದವನಂತೆ 45 ಸೆಕೆಂಡುಗಳಲ್ಲೇ ಅರಿವು ತಪ್ಪಿ ಕುಸಿದು ಬೀಳುವನು. ಕೂಡಲೇ ಆಮ್ಲಜನಕವನ್ನು ಒದಗಿಸದಿದ್ದಲ್ಲಿ ತುಸು ಹೊತ್ತಿನಲ್ಲೇ ಅಸು ನೀಗುವನು. ಆಮ್ಲಜನಕ ಕೊಟ್ಟಕೂಡಲೇ ಎಚ್ಚರವಾಗುವನು. ಕೊರೆತುಂಬಿದ ಕೂಡಲೇ ಸರಕ್ಕನೆ ಬಲಗೊಂಡು, ಕಣ್ಣಿನ ಪಾಟವ ಹೆಚ್ಚಿ ಅವನಿಗೇ ಅಚ್ಚರಿಯಾಗುತ್ತದೆ. ಒಂದೊಂದು ಅರಿವೂ ಸರಕ್ಕನೆ ಕಳೆದುಹೋಗಿ ಕೊನೆಗೆ ಕಿವಿಕೇಳುವುದೂ ಹೋಗಿರುತ್ತದೆ. ಆಮ್ಲಜನಕ ಕೊರೆಯ ತೀವ್ರತೆ, ಅವಧಿಗಳಿಗೆ ತಕ್ಕಂತೆ ತಡವಾಗಿ ಹಲವಾರು ಪರಿಣಾಮಗಳು ತಲೆದೋರುತ್ತವೆ. ಆಮ್ಲಜನಕ ಕೊರೆಯ ಆವರಣದಲ್ಲಿದ್ದ ಗಣಿಗಳ ಪರೀಕ್ಷಕನೊಬ್ಬ ಮೇಲಕ್ಕೆ ಬಂದಕೂಡಲೇ ಅಲ್ಲಿ ನಿಂತಿದ್ದವರ ಕೈಗಳನ್ನು ಕುಲುಕಿದ. ಹಾಗೇ ವೈದ್ಯನೂ ಕೈ ನೀಡಿದ. ಇದು ನನಗೆ ಅವಮಾನವೆಂದು, ಸರಕ್ಕನೆ ಅಂಗಿಕಳಚಿ, ಜಗಳಕ್ಕೇ ನಿಂತ. ಹೀಗೆ ಚೇತರಿಸಿಕೊಂಡಮೇಲೆ ಯಾರೋ ಹೊಡೆದು ಕೆಡವಿದರೆಂದೇ ಭಾವಿಸಿ ಸಿಕ್ಕಿದವರನ್ನೆಲ್ಲ ಹೊಡೆಯಬಹುದು.

ಆವರಣದಲ್ಲಿ ತುಸು ವ್ಯತ್ಯಾಸವಾದರೂ ಆಮ್ಲಜನಕಕೊರೆಯ ರೋಗಿಯಲ್ಲಿ ಹೆಚ್ಚಿನ ವ್ಯತ್ಯಾಸಗಳು ತೋರಬಹುದು. ಫುಪ್ಪುಸದಲ್ಲಿ ರೋಗದಿಂದ ಕೆಟ್ಟಿರುವ ಭಾಗವನ್ನು ಶಸ್ತ್ರಕ್ರಿಯೆಯಿಂದ ತೆಗೆದುಹಾಕಿದಮೇಲೆ ಆಮ್ಲಜನಕಕೊರೆ ಕೂರಾಗಿ (ಅಕ್ಯೂಟ್) ತಲೆದೋರಬಹುದು. ಆಗ ರೋಗಿ ಹಿಂದೂ ಮುಂದೂ ಏನೂ ತಿಳಿಯದಾಗುವನು. ತಾನೆಲ್ಲಿರುವೆನೆಂದೇ ಗೊತ್ತಿರದೆ ತಬ್ಬಿಬ್ಬಾಗುವನು. ಮಂಚದಿಂದ ಇಳಿದು ಓಡಬಹುದು. ಬಹಳ ಗಲಾಟೆ ಮಾಡಬಹುದು. ಪರ್ವತ ಏರುವವ ಸಾಮಾನ್ಯವಾಗಿ ಪರ್ವತ ನರಳಿಕೆ (ಮೌಂಟನ್ ಸಿಕ್ನೆಸ್) ಅನುಭವಿಸುತ್ತಾನೆ. ಎತ್ತರಕ್ಕೇರಿದ ಕೆಲವೇ ತಾಸುಗಳಲ್ಲಿ, ಸಾಮಾನ್ಯವಾಗಿ ರಾತ್ರಿ ಹೊತ್ತು ಬೇನೆಯ ಲಕ್ಷಣಗಳು ತಲೆದೋರುವುವು. ಇದರ ಲಕ್ಷಣಗಳು ಹಲವಾರು ತೆರ. ಮಿದುಳಿನ ದೆಸೆಯಿಂದ, ತಲೆನೋವು, ಆಲಸಿಕೆ, ದಣಿವು, ನಿದ್ದೆಗೇಡು, ಕಣ್ಣು ಕಿವಿಗಳ ಕುಂದು, ಮನಗುಂದುವೆ, ಹೀಗೆಲ್ಲ ಅರೆತಲೆಬೇನೆಯಲ್ಲಿ ಇದ್ದಂತೆಲ್ಲ ಇರುವುವು. ಗುಂಡಿಗೆಯ ಬಡಿತ ಗತಿತಪ್ಪಿ ಎದೆನೋವು, ಎದೆಮಿಡಿತ ಆಗಬಹುದು. ರಕ್ತದ ಹರಿವು ಕುಂದಿ ಕೈಕಾಲುಗಳು ತಣ್ಣಗಾಗಿ, ನೀಲಿಗಟ್ಟಿ ಮಿಡಿಯಬಹುದು. ತುಸು ದುಡಿದರೂ ಏದುಸಿರಾಗಿ ಉಸಿರಾಟದ ತೆರನೇ ಬದಲಾಗಿ ನಿಟ್ಟುಸಿರು ಬಿಡುವಂತಾಗುತ್ತದೆ, ವಾಕರಿಕೆ, ವಾಂತಿ, ಹಸಿವುಗೊರೆ, ಸುತ್ತು (ಪರ್ವತ ನರಳಿಕೆ) ಎತ್ತರಕ್ಕೇರಿದ 8-12 ತಾಸುಗಳಲ್ಲೇ ತೋರಿಬಂದು ಕೆಳಗಿಳಿದ ಮೇಲೂ ಇರಬಹುದು ಆದ್ದರಿಂದಲೇ ಆಮ್ಲಜನಕಕೊರೆ ಎಲ್ಲೊ ತುಸುವೇ ಇದ್ದರೆ, ಗೊತ್ತಾಗದೆಯೇ ಇದ್ದುಬಿಟ್ಟು, ಎಷ್ಟೋ ಹೊತ್ತಿನ ಮೇಲೆ ಕೆಡುಕು ಮಾಡಬಹುದು. ಬಹಳ ಮಂದಿಗಳಲ್ಲಿ ಹೀಗಾಗುವುದು ಆಪೂರ್ವವೇನೂ ಅಲ್ಲ. ಆಮ್ಲಜನಕಕೊರೆ ತೀವ್ರವಾದರೆ ಆಮೇಲೆ ತಡವಾಗಿ ಕಂಡುಬರುವ ಪರಿಣಾಮಗಳು ಭಯಂಕರ, ಇದಕ್ಕೋಸ್ಕರವೇ, ಆಮ್ಲಜನಕ ಕೊರೆ ಯಂತ್ರವನ್ನು ನಿಲ್ಲಿಸುವುದೇ ಅಲ್ಲದೆ ಅದನ್ನೇ ಹಾಳುಗೆಡವುತ್ತದೆ ಎಂದು ಜೆ. ಎಸ್. ಹಾಲ್ಡೇನ್ ಹೇಳಿದ್ದು. ಗೌರೀಶಂಕರ ಶಿಖರದ ಏರುಗರು 26,700' ಎತ್ತರದಲ್ಲಿ ಮಾಂಸ ತಿನ್ನಲು ಕಷ್ಟಪಡಬೇಕಾಯಿತು. ಬಾಯಾರಿಕೆಯೂ ಹೆಚ್ಚಿತ್ತು. ಆ ಏರಿನ ಮಟ್ಟಗಳಲ್ಲೇ ವಾಸವಾಗಿದ್ದರೆ, 2-3 ದಿವಸಗಳಲ್ಲಿ ಇವೆಲ್ಲ ಇಳಿಯುತ್ತವೆ. ಅಂದರೆ, ಅಲ್ಲಿನ ಹವ, ಆವರಣಗಳು ಒಗ್ಗಿ, ಹವದೊಗ್ಗಿಕೆ (ಅಕ್ಲೈಮೆಟೈಸೇಷನ್) ಆಗುವುದು. ಆದರೆ ಎಷ್ಟೇ ಹವಾಗುಣಕ್ಕೆ ಒಗ್ಗಿಕೊಂಡರೂ ಕಡಲಿನ ಮಟ್ಟದಲ್ಲಿ ಆಗುವಷ್ಟು ಕೆಲಸ ದುಡಿತವನ್ನು 14,000' ಎತ್ತರದಲ್ಲಿ ಮಾಡಲಾರ, ಅದೇ ಎತ್ತರದ ಮಟ್ಟದಲ್ಲಿ ಹುಟ್ಟಿ ಬಾಳುವವರು ಮಾತ್ರ ದುಡಿಯಬಲ್ಲರು. ಆದರೆ ಪಯಣಿಗರು ಎಷ್ಟೇ ತಿಂಗಳು, ವರ್ಷಗಳೇ ಅಲ್ಲಿ ಉಳಿದುಕೊಂಡರೂ ತಾವು ತಗ್ಗಿನ ಮಟ್ಟಗಳಲ್ಲಿ ದುಡಿವಷ್ಟು ಕೆಲಸಗಳನ್ನು ಇಲ್ಲಿ ಮಾಡುವುದು ಎಂದಿಗೂ ಆಗದು. ಪರ್ವತದ ಪ್ರವಾಸದಲ್ಲಾಗಲಿ ವಿಮಾನದಲ್ಲಾಗಲಿ ಎತ್ತರಗಳ ಮಟ್ಟಕ್ಕೇರಿದ ಕೆಟ್ಟ ಪರಿಣಾಮಗಳು ರಕ್ತದ ಸ್ಥಿತಿಗೆ ತಕ್ಕಂತೆ ತೋರಿಬರುತ್ತವೆ. ಜೀವ, ಆರೋಗ್ಯಗಳಿಗೆ ಸಂಬಂಧಿಸಿದ ಗುಂಡಿಗೆ, ಮಿದುಳು, ಸ್ನಾಯುಗಳು, ಗ್ರಂಥಿಗಳು ಇತ್ಯಾದಿಗಳ ಸದ್ಯ ಊತಕಗಳಲ್ಲೇ ಅವಕ್ಕೆ ಬಲು ಮುಖ್ಯವಾದ ಆಮ್ಲಜನಕಗೂಡಿಕೆ (ಆಕ್ಸಿಡೇಷನ್) ಆಗುವುದು. ಆಮ್ಲಜನಕ ಕೊರೆ ಯಾವಕಾರಣದಿಂದಲೇ ಏಳಲಿ, ಮೈಯ ಬೇರೆ ಬೇರೆ ಜೀವಕಣಗಳ ಪರಿಣಾಮ ಬೇರೆಬೇರೆಯಾಗಿರುತ್ತದೆ. ಕೇಂದ್ರ ನರ ಮಂಡಲದ ನರಕಣಗಳಂತೂ ಈ ಕೊರೆಯನ್ನು ಕೆಲವೇ ಮಿನಿಟುಗಳು ತಡೆಯಲಾರವು. ಬಲು ಬೇಗನೆ ಹಾಳಾಗುತ್ತವೆ. ಇವನ್ನೆಲ್ಲ ಮೊದಲು ಪೆಟ್ಟು ತಿನ್ನುವುದು ಮಿದುಳು. ಯೋಚನೆಗಳಿಗೆ, ಚಿಂತನೆಗಳಿಗೆ ಅಲ್ಲದೆ, ನಾಡಿವೇಗ, ಉಸಿರಾಟದ ಆಳ, ವೇಗ ಇತ್ಯಾದಿ ತೆರನ ಮೈಯ ಇತರ ನಿಜ ಗೆಲಸಗಳೂ ಸರಿಯಾಗಿ ನಡೆವಂತೆ ಮಿದುಳು ನೋಡಿಕೊಳ್ಳುತ್ತದೆ. ಕೊನೆಯದಾಗಿ, ಎತ್ತರದ ಮಟ್ಟಗಳಲ್ಲಿ ತೊಂದರೆಗೀಡಾಗಿಸುವ ಸ್ಥಿತಿಗಳನ್ನು ಗಮನಿಸುವುದೆಂದರೆ ಮಿದುಳಿಗೆ ಸಾಕಷ್ಟು ಆಮ್ಲಜನಕ ದೊರೆವುದೆಂದು ನೋಡುವುದು ಎಂದಾಯಿತು.

ಫುಪ್ಪುಸದಿಂದ ಮಿದುಳಿಗೆ ರಕ್ತ ಆಮ್ಲಜನಕವನ್ನು ಸಾಗಿಸುತ್ತದೆ. ರಕ್ತಬಣ್ಣಕ (ಹಿಮೋಗ್ಲಾಬಿನ್) ಅಂದರೆ ರಕ್ತದಲ್ಲಿರುವ ಕೆಂಬಣ್ಣದ ವಸ್ತು, ಆಮ್ಲಜನಕದೊಂದಿಗೆ ಸಡಿಲವಾಗಿ ಸಂಯೋಗವಾಗುತ್ತದೆ. ಫುಪ್ಪುಸ ಬಿಟ್ಟು ಮುಂದೆ ಸಾಗುವ ರಕ್ತಬಣ್ಣದ ಒಟ್ಟು ಪ್ರಮಾಣದಲ್ಲಿ, ಎಷ್ಟು ಪಾಲು ಆಮ್ಲಜನಕವನ್ನು ಹೊತ್ತು ಸಾಗುತ್ತದೆ ಎನ್ನುವುದು ಫುಪ್ಪುಸದ ಗಾಳಿಗೂಡುಗಳಲ್ಲಿನ (ಆಲ್ವಿಯೋಲೈ) ಆಮ್ಲಜನಕದ ಒತ್ತಡವನ್ನು ಅನುಸರಿಸುವುದು. ಈ ಒತ್ತಡ ಮತ್ತೆ, ಗಾಳಿಯಲ್ಲಿನ ಆಮ್ಲಜನಕದ ಒತ್ತಡಕ್ಕೆ ಅನುಗುಣವಾಗಿರುವುದು. ಯಾವ ಏರಿನ ಮಟ್ಟದಲ್ಲೇ ಆಗಲಿ, ಅಲ್ಲಿನ ಆವರಣದ ಒತ್ತಡದಲ್ಲಿ ನೂರಕ್ಕೆ 21 ರಷ್ಟು ಆಮ್ಲಜನಕ ಇರುವುದರಿಂದ, ಮಾನವ ಎತ್ತರಗಳಿಗೆ ಏರಿದಂತೆಲ್ಲ ಅವನ ಪುಪ್ಪುಸಗಳ ಗಾಳಿಗೂಡುಗಳಲ್ಲಿನ ಆಮ್ಲಜನಕದ ಒತ್ತಡವೂ ಇಳಿಯುತ್ತ ಹೋಗುವುದು. ಸಾಮಾನ್ಯ ಆವರಣದ ಒತ್ತಡಗಳಲ್ಲಿ ಇರುವ ಆಮ್ಲಜನಕದ ಒತ್ತಡ ರಕ್ತಬಣ್ಣಕ ಪೂರ್ತಿ ತುಂಬುವಷ್ಟು ಇರುವುದು.

ಹವದೊಗ್ಗಿಕೆ[ಬದಲಾಯಿಸಿ]

ಆಮ್ಲಜನಕಕೊರೆ ವಿಪರೀತವಾಗದಿದ್ದಲ್ಲಿ ಮಾನವನ ಮೈ ಚೆನ್ನಾಗಿ ಹೊಂದಿಕೊಳ್ಳಬಹುದು. ಎತ್ತರಗಳಿಗೆ ಏರುವವರಲ್ಲಿ ಇದನ್ನು ಬಲು ಸರಳವಾಗಿ ರಕ್ತಾಮ್ಲಜನಕಕೊರೆಯಾಗಿ ಕಾಣಬಹುದು. ಆಮ್ಲಜನಕಕೊರೆಗೆ ಹೊಂದಾಣಿಕೆಗಳು ಕೆಲವಂತೂ ಕಡಲ ಮಟ್ಟದಿಂದ ಏರಲು ಮೊದಲು ಮಾಡಿದಾಗಲೇ ಕಾಲಿಡುತ್ತವೆ. ಎತ್ತರ ಏರಿದಂತೆಲ್ಲ, ಹೆಚ್ಚು ಹೊತ್ತು ಅಲ್ಲೇ ಇದ್ದಂತೆಲ್ಲ ಉಳಿದವೂ ತಲೆಹಾಕುತ್ತವೆ. ಆಮ್ಲಜನಕಕೊರೆಯ ಒತ್ತಡವನ್ನು ತಡೆದುಕೊಳ್ಳಲು ಈ ಹೊಂದಾಣಿಕೆ ನೆರವಾಗುತ್ತವೆ. ದ.ಅಮೆರಿಕದ ಆಂಡೀಸ್ ಪರ್ವತಗಳಲ್ಲಿ 17,500' ಎತ್ತರದಲ್ಲಿ ಮನೆ ಮಾಡಿಕೊಂಡಿರುವರು. 19,000' ಆಳದ ಗಣಿಯಲ್ಲೂ ಅಷ್ಟೇ ಸುಲಭವಾಗಿ ದುಡಿವ ಜನರಿದ್ದಾರೆ. ಅವರಲ್ಲಿ ಹವದೊಗ್ಗಿಕೆ ಚೆನ್ನಾಗಿರುವುದು. ಅವರು ಆಮ್ಲಜನಕಕೊರೆಯ ಪರಿಸರಕ್ಕೆ ಚೆನ್ನಾಗಿ ಒಗ್ಗಿಕೊಂಡಿರುವರು, ಆ ಜನಾಂಗವೇ ಬಹುಮಟ್ಟಿಗೆ ಒಗ್ಗಿಕೊಂಡಿರುವುದೆಂದು ಹೇಳಲೂಬಹುದು. ಹವದೊಗ್ಗಿಕೆ ಪೂರ್ತಿ ಆದ ಹಾಗೆಲ್ಲ, ಆಮ್ಲಜನಕಕೊರೆಗೆ ಒಡ್ಡಿದಾಗ ತೋರುವ ಲಕ್ಷಣಗಳೂ ತಗ್ಗುತ್ತವೆ. ಹಸಿವು ಎಂದಿನಂತೆ ಇರುವುದು; ಎಳೆಯರ ಬೆಳೆವಣಿಗೆ ಒಂದೇ ಸಮನಾಗಿರುವುದು; ಬೆಳೆದವರ ಮೈ ತೂಕ ಇಳಿಯದು; ಸಂತಾನಬಲ ಎಂದಿನಂತಿರುತ್ತದೆ; ಆರೋಗ್ಯದ ಲವಲವಿಕೆ ಇರುವುದು. ಅನುಕೂಲಕರ ಸಂದರ್ಭಗಳಲ್ಲಿ, ಆಮ್ಲಜನಕಕೊರೆ ನಿಧಾನವಾಗಿ ಬಂದರೆ, ಮೈ ಒಗ್ಗಿಕೊಳ್ಳುತ್ತದೆ. ಪರ್ವತದ 14,100' ಎತ್ತರದಲ್ಲಿ ಮೈ ಆಲಸಿಕೆ, ದಣಿವು, ಏರುಸಿರು ಇವೆಲ್ಲ 10 ದಿನಗಳಲ್ಲಿ ಇಲ್ಲವಾಗಿ ಎಂದಿನಂತೆ ಗೆಲುವಾದರು. ಹಾಗೇ ರೋಗದಲ್ಲಿ ಕಾಣಬರುವ ಆಮ್ಲಜನಕಕೊರೆಯ ಸುಳಿವೇ ಬಹದ ದಿನಗಳು ಹೊರಗಾಣದೆ, ಕೊನೆಗೆ ಒಗ್ಗಿದಂತಾದಾಗ ಇದ್ದಕ್ಕಿದ್ದ ಹಾಗೆ ತೋರಬಹುದು.

ಏರುಮಟ್ಟದ ಆಮ್ಲಜನಕದೊಂದಿಗೆ ಹೊಂದಿಕೊಳ್ಳುವುದರಲ್ಲೂ ಆಮ್ಲಜನಕಕೊರೆಯೊಂದಿಗಿನ ಬೇನೆಗಳಲ್ಲೂ ಮೈಯ ಊತಕಗಳಲ್ಲಿನ ಆಮ್ಲಜನಕದ ಇಳಿದ ಒತ್ತಡವನ್ನು ಇನ್ನೂ ತಡೆದುಕೊಳ್ಳುವಂಥ ಮಟ್ಟಗಳಿಗೆ ಏರಿಸುವ ಕ್ರಮಗತಿಗಳು ಕೊನೆಗೆ ಜಾರಿ ಆಗುತ್ತದೆ. ಹವದೊಗ್ಗಿಕೆ ಆದಂತೆಲ್ಲ, ಉಸಿರಾಡುವಾಗ ಫುಪ್ಪುಸಗಳ ಗಾಳಿಯಾಟ (ವೆಂಟಿಲೇಷನ್) ಇನ್ನೂ ಚೆನ್ನಾಗಿರುವುದು. ನೇರವಾಗೊ ಬಳಸಾಗೊ ಮೂತ್ರಪಿಂಡಗಳು, ಅಡ್ರಿನಲ್‍ಗಳು, ನರಮಂಡಲವೂ ಇದರಲ್ಲಿ ಪಾಲುಗೊಳ್ಳುತ್ತವೆ. ಗಾಳಿಯಾಟ ಹೆಚ್ಚುವ ಮುಂಚೆಯೇ, ರಕ್ತದಲ್ಲಿ ಆಮ್ಲಜನಕ ಕುಗ್ಗಿದ ಒತ್ತಡವನ್ನು ಸರಿಗಟ್ಟಲು, ಗುಂಡಿಗೆ ಇನ್ನಷ್ಟು ರಕ್ತವನ್ನು ತಳ್ಳುತ್ತಿರಬೇಕು. ಉಸಿರಾಟ ಹೊಂದಿಕೊಂಡಂತೆಲ್ಲ ಗುಂಡಿಗೆ ರಕ್ತ ಸುತ್ತಾಟಗಳ ಮೇಲಿನ ಬೇಡಿಕೆಗಳು ತಗ್ಗುತ್ತವೆ. ಆದರೆ ವ್ಯಾಯಾಮದಲ್ಲಿ ಆಗುವಂತೆ, ಮೈಮೇಲಿನ ಬೇಡಿಕೆ ಬಂದಾಗೆಲ್ಲ ರಕ್ತ ಮಂಡಲ ಬಲವಾಗಿ ದುಡಿಯುತ್ತದೆ. ಸಣ್ಣ ರಕ್ತನಾಳಗಳು ಹಿಗ್ಗಿಯೊ ಹೆಚ್ಚಿಕೊಂಡೊ ಊತಕಗಳಿಗೆ ರಕ್ತ ಇನ್ನೂ ಚೆನ್ನಾಗಿ ಸೇರಿದುದರ ಪರಿಣಾಮ ಇದು.

ರಕ್ತಾಮ್ಲಜನಕಕೊರೆಯಲ್ಲಿ ಮೈಯಲ್ಲಿನ ಊತಕಗಳಿಗೆ ಮೂರು ರೀತಿಗಳಲ್ಲಿ ತೊಡಕಾಗುವುದು: ರಕ್ತದಲ್ಲಿನ ಆಮ್ಲಜನಕದ ಒತ್ತಡ ಇಳಿದಿರುವುದರಿಂದ ಊತಕಗಳಲ್ಲಿ ಆಮ್ಲಜನಕದ ಬಳಕೆ ತಗ್ಗಿರುವುದು; ರಕ್ತದಲ್ಲಿ ಆಮ್ಲಜನಕ ತಗ್ಗಿರುವುದರಿಂದ, ಆಮ್ಲಜನಕದ ಹೆಚ್ಚಿನ ಬೇಡಿಕೆಗಳು ಬರುವ ಯಾವ ಚಟುವಟಿಕೆಯೂ ಆಗುವಂತಿಲ್ಲ; ಇಂಗಾಲ ಡೈಆಕ್ಸೈಡಿನ ಒತ್ತಡ ತಗ್ಗಿರುವಾಗ ರಕ್ತಬಣ್ಣಕ ಆಮ್ಲಜನಕವನ್ನು ಸುಲಭವಾಗಿ ಬಿಟ್ಟುಕೊಡದ್ದರಿಂದ, ರಕ್ತದಲ್ಲಿರುವ ಆಮ್ಲಜನಕ ಊತಕಗಳಿಗೆ ಕೂಡಲೇ ದೊರೆಯದು. ಆಮ್ಲಜನಕಕೊರೆಯ ಮೊದಮೊದಲ ಹೊಂದಾಣಿಕೆಗಳಲ್ಲಿ ರಕ್ತದಲ್ಲಿ ಆಮ್ಲಜನಕವನ್ನು ಸಾಗಿಸುವ ಸಂಯುಕ್ತವಾದ, ರಕ್ತಬಣ್ಣಕದ ಹೆಚ್ಚಳಿಕೆಯೂ ಒಂದು. ಆಮ್ಲಜನಕ ಒತ್ತಡ ಇಳಿದಾಗ ರಕ್ತವನ್ನು ತಯಾರಿಸುವ ಮೂಳೆಯೊಳಗಿನ ಕೆಂಪು ಮಜ್ಜೆ ಚುರುಕಾಗುತ್ತದೆ. ರಕ್ತದೊಳಕ್ಕೆ ಮತ್ತಷ್ಟು ಕೆಂಪುರಕ್ತ ಕಣಗಳನ್ನು ಬಿಡುವುದು. ಇದರಿಂದ ರಕ್ತಬಣ್ಣಕದ ಪ್ರಮಾಣವೂ ಹೆಚ್ಚಿದಂತಾಗಿ, ಮೊದಲಿಗಿಂತಲೂ ಇನ್ನೂ ಹೆಚ್ಚು ಆಮ್ಲಜನಕವನ್ನು ಸಾಗಿಸಿ, ಕೊರೆಯಾಗಿರುವ ಆಮ್ಲಜನಕ ಪೂರೈಕೆಯನ್ನು ಸರಿಪಡಿಸುವುದು

ಫುಪ್ಪುಸಗಳ ಗಾಳಿಯಾಟ ಹೆಚ್ಚಿದ ಹಾಗೆಲ್ಲ, ಫುಪ್ಪುಸಗಳಲ್ಲಿನ ಆಮ್ಲಜನಕದ ಒತ್ತಡವೂ ಏರುತ್ತದೆ. ಅದೇ ಹೊತ್ತಿನಲ್ಲಿ, ಇಂಗಾಲದ ಡೈ ಆಕ್ಸೈಡು ಎಂದಿಗಿಂತ ಬೇಗನೆ ಹೊರಬಿದ್ದು ಅದರ ಒತ್ತಡ ಕುಸಿಯುವುದು. ಇದರಿಂದ ಧಮನಿಯಲ್ಲಿನ ರಕ್ತದಲ್ಲಿ ಇದರ ಒತ್ತಡ ಇಳಿದು, ಜಲಜನಕ ಅಯಾನಿನ ಸಾಂದ್ರತೆಯನ್ನು ಇಳಿಸುತ್ತದೆ. ಅಂದರೆ, ರಕ್ತದ ಆಮ್ಲತೆಯನ್ನು ಹೆಚ್ಚಿಸುತ್ತದೆ. ಯಾವ ಕಾರಣದಿಂದಲೇ ಆಗಲಿ, ಎದೆಯಲ್ಲಿ ನೋವಿದ್ದರೆ, ಉಸಿರಾಡುವಾಗ ಪಕ್ಕೆಯಲ್ಲಿ ಚಳುಕು ಹಿಡಿದರೆ, ಇಲ್ಲವೇ ರೋಗ, ಪೆಟ್ಟುಗಳಿಂದ ಮಿದುಳಲ್ಲಿನ ಉಸಿರಾಟದ ಕೇಂದ್ರ ಕಟ್ಟಿದ್ದರೆ, ಉಸಿರಾಟದ ನರಗಳು, ಸ್ನಾಯುಗಳ ರೋಗವಿದ್ದರೆ ಮೇಲ್ಮೇಲಿನ ಉಸಿರಾಟವಾಗಿ ರಕ್ತಾಮ್ಲಜನಕ ಕೊರೆಯಾಗುತ್ತದೆ. ಹೊರಗಣ ಇಲ್ಲವೇ ಒಳಗಣ ಅಡಚಣೆಯಿಂದ ಫುಪ್ಪುಸ ಸಾಕಷ್ಟು ಹಿಗ್ಗಲಾರದಂತಾದರೆ, ಪುಪ್ಪುಸದ ಗಾಳಿಗೂಡಗಳಲ್ಲಿ ಗಟ್ಟಿ ಇಲ್ಲವೇ ದ್ರವ ಪದಾರ್ಥ ಸೇರಿಕೊಂಡರೆ, ಅಲ್ಲಿ ಹರಿವ ರಕ್ತ ಸಾಕಷ್ಟು ಆಮ್ಲಜನಕವನ್ನು ಹೀರಿಕೊಳ್ಳಲಾರದು.

ಇಂದಿನ ಇಂಗಾಲ ಡಯಾಕ್ಸೈಡಿನ ಒತ್ತಡವೂ ರಕ್ತದಲ್ಲಿನ ಜಲಜನಕ ಅಯಾನಿನ ಸಾಂದ್ರತೆಯೂ ಸಾಮಾನ್ಯವಾಗಿ ಉಸಿರಾಟಕ್ಕೆ ಚೋದನೆಗಳು. ಆದರೆ ಆಮ್ಲಜನಕಕೊರೆಯಲ್ಲಿ ಈ ಚೋದನೆಗಳಿರವು. ಇಷ್ಟಾದರೂ ಆಮ್ಲಜನಕಕೊರೆಗೆ ಒಡ್ಡಿರುವ ಕಾಲ ಹೆಚ್ಚಿದಂತೆಲ್ಲ, ರಕ್ತದ ಜಲಜನಕ ಅಯಾನಿನ ಸಾಂದ್ರತೆ ಬರುಬರುತ್ತ ಇಂದಿನ ಮಟ್ಟಕ್ಕೇರುವಂತೆ (ಆಮ್ಲಗೊಳ್ಳುವಂತೆ), ಮೂತ್ರಪಿಂಡಗಳು ಮೂತ್ರದಲ್ಲಿ ಹೆಚ್ಚು ಹೆಚ್ಚಾಗಿ ಕ್ಷಾರಗಳನ್ನು ಹೊರದೂಡುತ್ತವೆ. ಆಗ ಆಮ್ಲಜನಕ ಏರುವುದು, ಧಮನಿಯ ರಕ್ತದಲ್ಲಿನ ಆಮ್ಲಜನಕದ ಒತ್ತಡ ಯಾವಾಗಲೂ ಫುಪ್ಪುಸದಲ್ಲಿನದಕ್ಕೆ ಅನುಗುಣವಾಗಿರುವುದು.

ಬರೀ ಗಾಳಿಗಿಂತಲೂ ಪೂರ್ತಿ ಆಮ್ಲಜನಕವನ್ನೇ ಉಸಿರಲ್ಲಿ ಸೇದಿಕೊಳ್ಳುವುದರಿಂದ ಬಲು ಎತ್ತರಗಳಿಗೆ ಹೋಗಬಹುದು. ಗೌರೀಶಂಕರ ಶಿಖರ ಏರುವವರು ಹಾಗೆ ಬಳಸಿದ್ದರಿಂದ ಶಿಖರ ಮುಟ್ಟುವಂತಾದರು. ಆದರೆ ಹಾಗೆ ಹೆಚ್ಚಿನ ಆಮ್ಲಜನಕ ಬಳಸಿ ಮುಟ್ಟುವ ಏರುಮಟ್ಟಕ್ಕೂ ಒಂದು ಗೊತ್ತಾದ ಮಿತಿಯಿದೆ. ಪುಪ್ಪುಸದಲ್ಲಿನ ಆಮ್ಲಜನಕದ ಒತ್ತಡ 17,000' ಎತ್ತರದಲ್ಲಿ ಗಾಳಿಯಲ್ಲಿನ ಉಸಿರಾಟದಲ್ಲಿ ಇರುವಷ್ಟೇ ಸುಮಾರಾಗಿ ಬರೀ ಆಮ್ಲಜನಕದ ಉಸಿರಾಟದಲ್ಲೂ ಇರುವುದು. ಹವ ಒಗ್ಗಿದವನಿಗೆ ಎರಡು ಕಡೆಗಳಲ್ಲೂ ತೊಂದರೆಯೇ, 44,000' ಮೀರಿದ ಎತ್ತರಗಳಿಗೆ ಹಾರುವ ವಿಮಾನ ಚಾಲಕರಿಗೆ ಸಾಕಷ್ಟು ಗಾಳಿ, ಆಮ್ಲಜನಕದ ಒತ್ತಡಗಳು ಒದಗಬೇಕಾದರೆ, ಒತ್ತಡವಿರುವ ಕವಚ ತೊಡುಗೆಯನ್ನೂ ವಿಮಾನ ಕೋಣೆಯನ್ನೂ ಅಳವಡಿಸಬೇಕು. ರಕ್ತಕೊರೆಯ ಆಮ್ಲಜನಕಕೊರೆ: ಈ ಬೇನೆಯಲ್ಲಿ, ಬೇಕಿರುವ ಆಮ್ಲಜನಕವನ್ನು ಒದಗಿಸುವ ರಕ್ತಬಣ್ಣಕ ರಕ್ತದಲ್ಲಿ ಸಾಕಷ್ಟು ಪ್ರಮಾಣದಲ್ಲಿರದು. ರಕ್ತಕೊರೆಯಲ್ಲಿ (ಅನೀಮಿಯ), ಇದರ ಪ್ರಮಾಣ ಕಂಡಹಾಗೇ ಕಡಿಮೆ ಇರುತ್ತದೆ. ಇದು ರಕ್ತಾಮ್ಲಜನಕಕೊರೆಯದರಷ್ಟು ಕೆಡುಕಿನದಲ್ಲ. ರಕ್ತದಲ್ಲಿನ ಆಮ್ಲಜನಕದ ಒತ್ತಡ ಸರಿಯಾಗಿರುವುದರಿಂದ ಊತಕಗಳು ಇದನ್ನು ಬಳಸುವ ವೇಗವೂ ಸರಿಯಾಗಿರುವುದು. ವಿರಾಮದಲ್ಲಿ ಇರುವ ತನಕ ರೋಗಿಗೆ ತೊಂದರೆಯೇ ಇಲ್ಲ. ಆದರೆ, ತುತ್ತಿನ ಹೊತ್ತಿನಲ್ಲಿ ಸರಕ್ಕನೆ ಹೆಚ್ಚಿನ ಕೆಲಸ ಮಾಡಲು ಮಾತ್ರ ಆಗದೆ ಕುಸಿಯುವನು. ಕೇಡಿನ ರಕ್ತಕೊರೆ (ಪರ್ನೀಸಿಯಸ್ ಅನೀಮಿಯ) ತೆರನ ತೀವ್ರವಾದ ರಕ್ತ ಕೊರೆಯಲ್ಲಿ ಎಂದಿನಷ್ಟು ಆಮ್ಲಜನಕವನ್ನೂ ಮೈಯಿಂದ ಬಹಳ ರಕ್ತಸುರಿದು ಹೋದ ಮೇಲೆ, ಅದರ ಬೇಡಿಕೆಗಳನ್ನು ಪೂರೈಸಲು ಮೈಯಲ್ಲಿ ರಕ್ತಸಾಕಷ್ಟು ಇಲ್ಲದಾಗಬಹುದು.

ಮೊದಮೊದಲು ಆಮ್ಲಜನಕಕೊರೆಯೇ ಚೋದಕವಾಗಿ ಗುಂಡಿಗೆ ಚೆನ್ನಾಗಿ ಬಡಿಯುತ್ತಿರುವುದು. ರಕ್ತದ ಒತ್ತಡ ತುಸು ಏರಬಹುದು. ಹೊಟ್ಟೆ ಚರ್ಮಗಳಿಗೆ ಸಾಗುವ ರಕ್ತ ಕಡಿಮೆಯಾಗಿ, ಮಿದುಳು, ಗುಂಡಿಗೆಗಳಿಗೆ ಹೆಚ್ಚು ರಕ್ತ ನುಗ್ಗುತ್ತದೆ. ಆಮೇಲೆ ಗುಂಡಿಗೆ ವೇಗ ಹೆಚ್ಚಿದರೂ ಒತ್ತಳ್ಳುವ ಬಲ ಕುಂದುವುದು. ರಕ್ತದಲ್ಲಿ ಸಾಕಷ್ಟು ಆಮ್ಲಜನಕ ಇಲ್ಲದ್ದರಿಂದ, ತುಟಿ, ಕಣ್ಣು, ಅಂಗೈ, ಅಂಗಾಲುಗಳು ಬಿಳಚಿಕೊಳ್ಳುತ್ತದೆ.

ಕೂಸು ಹುಟ್ಟುವಾಗಲೇ ಬಂದಿರುವ ಗುಂಡಿಗೆಯ ಕೆಲವು ರಚನೆಯ ವಿಕಾರಗಳಲ್ಲಿ ಗುಂಡಿಗೆಯಿಂದ ಹೊರಬಿದ್ದ ರಕ್ತ ಪುಪ್ಪುಸಗಳಿಗೆ ಹೋಗದೆ ನೇರವಾಗಿ ಸಿರಗಳಿಗೆ ನುಗ್ಗುವುದರಿಂದ ಆಮ್ಲಜನಕಕೊರೆ ಆಗುತ್ತದೆ. ಇಲ್ಲಿ ಧಮನಿಯ ರಕ್ತದಲ್ಲಿ ಆಮ್ಲಜನಕ ಇರುವುದೂ ತೀರ ಕಡಿಮೆ. ರಕ್ತಾಮ್ಲಜನಕಕೊರೆ ಹಲವಾರು ಕಾರಣಗಳಿಂದ ಬಂದಿದ್ದರೆ ಬಲು ಅಪಾಯಕರ. ಪುಪ್ಪುಸ ಉರಿತ (ನ್ಯುಮೋನಿಂiÀi) ಆಗಿರುವವ ಎಂದಿಗೂ ರಕ್ತಾಮ್ಲಜನಕ ಕೊರೆ ಅನುಭವಿಸುವವನೇ. 16,000' ಮೀರಿದ ಎತ್ತರಗಳಲ್ಲಿ ಇದ್ದರಂತೂ ಸಾಮಾನ್ಯವಾಗಿ ಬದುಕಲಾರ.

ಇರುವ ರಕ್ತಬಣ್ಣದ ಸದ್ಯಕ್ಕೆ ಕೆಲಸಕ್ಕೆ ಬಾರದಂತಾಗುವ ಮೂರು ಸ್ಥಿತಿಗಳಿವೆ: ಕಲ್ಲಿದ್ದಲಿನ ಅನಿಲದ (ಇಂಗಾಲ ಡೈಆಕ್ಸೈಡಿನ) ವಿಷವೇರಿಕೆ. ಕಂದುರಕ್ತಬಣ್ಣಕತೆ (ಮೆತೀಮೊಗ್ಲಾಬಿನೀಯ), ಗಂಧಕ ರಕ್ತಬಣ್ಣಕತೆ (ಸಲ್ಫ್‍ಹೀಮೊಗ್ಲಾಬಿನೀಮಿಯ). ಮೊದಲಿನ ಎರಡು ಬಲು ಮುಖ್ಯವಾದುವು.

ಕಲ್ಲಿದ್ದಲೇ ಅಲ್ಲದೆ ಬೇರೆ ಮೂಲಗಳಿಂದಲೂ ಇಂಗಾಲದ ಮಾನಾಕ್ಸೈಡು ತಯಾರಾಗಬಹುದು. ಆಳದ ಗಣಿಗಳಲ್ಲಿ ಇದೊಂದು ಆಗಾಗ್ಗೆ ತಲೆದೋರುವ ಅಪಾಯ ಮುಖ್ಯವಾಗಿ ಒಳಗೆ ಸುಟ್ಟುರಿಸುವ ಚಲನ ಯಂತ್ರಗಳಿಂದ ಹೊರ ಬೀಳುವ ಅರೆಬರೆ ಸುಟ್ಟುಗಿಸಿದ ಅನಿಲಗಳಿಂದ ಬೇಕಾದಷ್ಟು ಮಂದಿ ಸತ್ತಿದ್ದಾರೆ. ಆದರೆ ನಮ್ಮ ಬಹುಪಾಲು ಸಾವುಗಳಿಗೆ ಕಾರಣ ಸಾಮಾನ್ಯ ಇದ್ದಲಿನ ಇಲ್ಲವೇ ಸೌದೆಯ ಒಲೆಗಳು. ರಾತ್ರಿಹೊತ್ತು ಚಳಿಗಾಲದಲ್ಲಿ ಬೆಚ್ಚಗಿರಿಸಲೋಸುಗ ಕಿಟಿಕಿ ಬಾಗಿಲುಗಳನ್ನೆಲ್ಲ ಭದ್ರವಾಗಿ ಮುಚ್ಚಿಬಿಟ್ಟು ಬೆಂಕಿ ಉರಿಸಿ ಮಲಗಿದಾಗ, ಬೆಳಗ್ಗೆ ನೋಡಿದರೆ ಅಲ್ಲಿದ್ದವರು ಹೆಣಗಳಾಗಿರುತ್ತಾರೆ. ಇಲ್ಲಿ ಇಂಧನ ಅರೆಬರೆ ಉರಿದಾಗ ಇಂಗಾಲದ ಮಾನಾಕ್ಸೈಡ್ ಅನಿಲ ತಯಾರಾಗುತ್ತದೆ. ರಕ್ತ ಬಣ್ಣದ ಆಮ್ಲಜನಕದ 250 ರಷ್ಟು ಹೆಚ್ಚು ಬಲವಾಗಿ ಇಂಗಾಲ ಮಾನಾಕ್ಸೈಡ್‍ನೊಂದಿಗೆ ಕೂಡಿ ಕಚ್ಚಿಕೊಂಡು ಕಾರ್ಬಾಕ್ಸಿ ರಕ್ತಬಣ್ಣಕ ಆಗುತ್ತದೆ. ಇದರಿಂದ ಆಮ್ಲಜನಕದ ಸಾಗಣಿಕೆ ಆತಂಕ. ಒಬ್ಬರು ಇಂಗಾಲದ ಮಾನಾಕ್ಸೈಡಿಂದ ಅರಿವು ತಪ್ಪಲು ಮೈಯಲ್ಲಿರುವ ಅರೆಪಾಲಿಗೂ ಹೆಚ್ಚುಪಾಲು ರಕ್ತಬಣ್ಣಕ ಇಂಗಾಲದ ಮಾನಾಕ್ಸೈಡೊಂದಿಗೆ ಕೂಡಿರಬೇಕು. ಹೊರ ಆವರಣದಲ್ಲಿ ಸಾವಿರದಲ್ಲಿ ಒಂದು ಭಾಗಕ್ಕೂ ಕಡಿಮೆ ಈ ಅನಿಲವಿದ್ದರೂ ಹೀಗಾಗುತ್ತದೆ. ಆದರೆ ಹೀಗಾಗಲು ಈ ಅನಿಲದ 500 ಮಿ.ಲೀ.ಗಳಷ್ಟಾದರು ಮೈಯಲ್ಲಿ ಸೇರಿರಬೇಕು. ಇದಕ್ಕೆ ಒಂದು ತಾಸು ಹಿಡಿಯಬಹುದು. ಇದರ ಪರಿಣಾಮ ಒಬ್ಬೊಬ್ಬರಲ್ಲಿ ಒಂದೊಂದು ತೆರನಾಗಿ ಇರುವುದಾದರೂ ಶೇಕಡ ಸುಮಾರು 30-40ರಷ್ಟು ಸೇರಿಕೊಂಡರೆ ತಲೆನೋವೂ 50-60ರಷ್ಟು ಸೇರಿದರೆ ಅರಿವಿಲ್ಲದಾಗುವುದೂ, 75ರಷ್ಟಕ್ಕೆ ಸಾವೂ ಆಗಬಹುದು. ಅಲ್ಲದೆ, ಬೇರೆ ಕಾರಣಗಳಿಂದಾದ ಶೇಕಡ 50ರ ರಕ್ತಕೊರೆ ಇದ್ದವನು ಕೆಲಸ ದುಡಿಯಬಲ್ಲ. ಆದರೆ ಅದೇ ಶೇಕಡ 50ರಷ್ಟು ಇಂಗಾಲದ ಮಾನಾಕ್ಸೈಡ್ ಇದ್ದರೆ ಹೆಳವನಾಗಿ ಬಿದ್ದಿರುವನು. ಈ ಅನಿಲವಿರದ ಗಾಳಿಯನ್ನು ಉಸಿರಲ್ಲಿ ಚೆನ್ನಾಗಿ ತೆಗೆದುಕೊಳ್ಳುತ್ತಿದ್ದರೆ, ರಕ್ತದಲ್ಲಿನ ಇಂಗಾಲದ ಮಾನಾಕ್ಸೈಡ್ ನಿಧಾನವಾಗಿ ಕಳೆದುಹೋಗುತ್ತದೆ. ಅಚ್ಚ ಆಮ್ಲಜನಕವನ್ನು ತೆಗೆದುಕೊಂಡರಂತೂ ಇನ್ನೂ ಬೇಗನೆ ಹೋಗುವುದು ಅಪಾಯಕರ ಇಂಗಾಲದ ಮಾನಾಕ್ಸೈಡಿನ ಪ್ರಮಾಣಗಳಿಗೆ ಒಡ್ಡಿ ಸಿಕ್ಕಿಬಿದ್ದರೆ, ಮಿದುಳಿನ ಕೆಲವು ನರಕಣಗಳು ಸರಿಪಡಿಸಲಾಗದಷ್ಟು ಹಾಳಾಗಬಹುದು. ಇದರಿಂದ ಮುಂದೆ ಅವನ ಬುದ್ಧಿಗೆಲಸದಲ್ಲಿ ವ್ಯತ್ಯಾಸವಾಗಬಹುದು. ಬುದ್ಧಿ ಕೆಡಬಹುದು. (ನೋಡಿ- ಇಂಗಾಲದ-ಮಾನಾಕ್ಸೈಡ್-ವಿಷವೇರಿಕೆ)

ರಕ್ತಬಣ್ಣದ ಒಂದು ಪಾಲಾದರೂ ಕೆಲಸಕ್ಕೆ ಭಾರದಂತಾಗುವ ಇನ್ನೊಂದು ಬೇನೆ ಕಂದುರಕ್ತಬಣ್ಣಕತೆ. ಅನಿಲೀನ್, ನೈಟ್ರೈಟ್‍ಗಳು, ನೈಟ್ರೊಬೆಂಜೀನು ಇತ್ಯಾದಿಗಳನ್ನು ಉಸಿರಲ್ಲಿ ಎಳೆದುಕೊಂಡರೆ ರಕ್ತದಲ್ಲಿ ಆಮ್ಲಜನಕವನ್ನು ಹೊತ್ತು ಸಾಗಿಸುವ, ಆಮ್ಲ ರಕ್ತಬಣ್ಣಕ (ಅಕ್ಸಿಹೀಮೊಗ್ಲಾಬಿನ್), ಮೈಗೆ ಆಮ್ಲಜನಕವನ್ನು ಒದಗಿಸದ ಕಂದುರಕ್ತಬಣ್ಣಕವಾಗುತ್ತದೆ. ರಕ್ತಕಣಗಳೂ ಕೆಡುತ್ತವೆ. ಕೆಟ್ಟರುವ ಗಾಳಿಯ ಸೇವನೆ ನಿಲ್ಲಿಸಿದರೆ, ವಿಷವೇರಿಕೆ ಬಲವಾಗಿರದಾಗ ಬೇಗನೆ ಸರಿಹೋಗುವುದು. ಕೆಂಪು ರಕ್ತಕಣಗಳನ್ನು ಬಹಳ ಹಾಳುಗೆಡುವುದರಿಂದ ಕ್ಲೋರೇಟು, ಬ್ರೋಮೇಟುಗಳಿಂದ ಹೀಗಾಗುವುದು ಇನ್ನೂ ಕೆಡುಕು.

ಆಮ್ಲಜನಕವನ್ನು ರಕ್ತಬಣ್ಣಕ ಹೊತ್ತು ಸಾಗಿಸಲಾಯಿಸುವ ಗಂಧಕರಕ್ತಬಣ್ಣಕ ಇನ್ನೊಂದಿದೆ. ಆಸಿಟನಲೈಡು, ಸಲ್ಪಾನಿಲೇಮೈಡು, ಮತ್ತಿತರ ಬೆಂಜೀನ್ ಉತ್ಪನ್ನಗಳ ಸೇವನೆಯಿಂದ ಹೀಗಾಗಬಹುದು. ಕೆಲವೇಳೆ ಇದು ಮೈಯಲ್ಲಿ ತಂತಾನಾಗೇ ಹುಟ್ಟಿಕೊಳ್ಳಬಹುದು.

ಮಂದಹರಿವ ಆಮ್ಲಜನಕಕೊರೆ[ಬದಲಾಯಿಸಿ]

ಯಾವುದಾದರೂ ಅಂಗದಲ್ಲೋ ಅಂಗ ಭಾಗದಲ್ಲೋ ಇಲ್ಲವೇ ಮೈಯಲ್ಲಿ ಹೀಗಾಗಬಹುದು. ಮೈಯಲ್ಲಿ ಹೀಗಾಗಲು ಹಲವಾರು ಕಾರಣಗಳಿವೆ. ಗುಂಡಿಗೆ ರೋಗಿಗಳಲ್ಲಿ ಮೈಗೆಲ್ಲ ಸಾಕಷ್ಟು ವೇಗದಲ್ಲಿ ರಕ್ತವನ್ನು ಒತ್ತಳ್ಳುವುದರಲ್ಲಿ ಗುಂಡಿಗೆ ಸೋಲಬಹುದು. ರಕ್ತ ಮತ್ತೆ ಗುಂಡಿಗೆಗೆ ಬರುವುದು ಕುಗ್ಗಿ, ಇದ್ದಲ್ಲೇ ಇರುವಾಗ ರಕ್ತವನ್ನು ಮುಂದಕ್ಕೆ ತಳ್ಳಿ ಹರಿಸಲು ಕಷ್ಟವಾಗಬಹುದು. ಹೊಟ್ಟೆಗೆ ಬಲವಾಗಿ ಬಿದ್ದ ಪೆಟ್ಟುಗಳಿಂದಲೋ ಶಸ್ತ್ರಕ್ರಿಯೆಗಳಿಂದಲೋ ಒಳಗಿನ ಅಂಗಗಳು ಹೊರಗಾಳಿಗೆ ಒಡ್ಡಿದಾಗ, ಶಸ್ತ್ರಕ್ರಿಯೆಯ ಸೊಕ್ಕೆ (ಷಾಕ್) ಆಗಿ ರೋಗಿ ಸುತ್ತುಬಿದ್ದು, ರಕ್ತದ ಸುತ್ತಾಟ ತೀರ ಕುಂದಿ, ಊತಕಗಳಿಗೆ ಸಾಕಷ್ಟು ಆಮ್ಲಜನಕ ದೊರೆಯದಾಗುತ್ತದೆ. ಇಲ್ಲಿರುವ ತೊಡಕು, ರಕ್ತ ಬಲು ನಿಧಾನವಾಗಿ ಹರಿದೋ ನಿಂತುಹೋಗಿಯೋ ರಕ್ತದಲ್ಲಿನ ಆಮ್ಲಜನಕವೆಲ್ಲ ಇದ್ದಲ್ಲೇ ಬಳಕೆ ಆಗಿಬಿಟ್ಟು ಮುಂದೆ, ಆಮ್ಲಜನಕಗೂಡಿದ ರಕ್ತ ಏನೇನೂ ಸಾಲದಾಗುತ್ತದೆ, ಆಮ್ಲಜನಕಕೊರೆಯ ಪೆಟ್ಟು ಹೆಚ್ಚಾಗಿ ಮಿದುಳು ಈಲಿಗೆ (ಲಿವರ್) ಬೀಳುವುದು. ಗಾಯ ಪೆಟ್ಟುಗಳಾಗಿ ಮೈಯಲ್ಲಿನ ರಕ್ತ ವಿಪರೀತ ಸುರಿದುಹೋದರೂ ರಕ್ತ ಮೈಯಲ್ಲೆಲ್ಲ ಹರಿಯಲು ಸಾಕಾಗದೆ ಕೂಡ ಹೀಗಾಗಬಹುದು. ಹರವು ಮಂದವಾದಾಗ ರಕ್ತದಲ್ಲಿನ ಇಂಗಾಲದ ಡೈಆಕ್ಸೈಡ್ ಹೆಚ್ಚಾಗುವುದರಿಂದ ಆಮ್ಲಜನಕವನ್ನು ಕಳೆದುಕೊಳ್ಳುತ್ತದೆ.

ಮೈಯಲ್ಲಿ ಎಲ್ಲಾದರೂ ಒಂದೆಡೆಯಲ್ಲಿ ರಕ್ತದ ಹರಿವನ್ನು ನಿಧಾನಗೊಳಿಸಿದರೆ, ಇಲ್ಲವೇ ಆತಂಕಿಸಿದರೆ, ಆ ಎಡೆಯ ಮುಂದಹರಿವ ಆಮ್ಲಜನಕಕೊರೆಯಾಗುವುದು. ಇಲ್ಲಿ ಮುಖ್ಯವಾಗಿ ಗುಂಡಿಗೆ ಮೂತ್ರಪಿಂಡಗಳಿಗೆ ತೊಂದರೆ, ರೇನಾಡನ ರೋಗ, ಬರ್ಜರನ ರೋಗಗಳಲ್ಲಿ (ನೋಡಿ- ಬರ್ಜರನ-ರೋಗ) ಕೈಕಾಲುಗಳಲ್ಲಿ ರಕ್ತ ಹರಿವಿನ ತಡೆಯಾಗುವುದು ಇದರ ಉದಾಹರಣೆಗಳು. ರಕ್ತ ಸುರಿದು ಹೋಗುವುದನ್ನು ತಡೆಯಲು ಕಾಕುವ ತಿರುಚೊತ್ತು (ಟೊರ್ನಿಕೆ), ಎರ್ಗಟ್ (ನೋಡಿ- ಎರ್ಗಟ್) ವಿಷವೇರಿಕೆ, ಚಳಿಗೊಡ್ಡಿಕೆ ಇತರ ಕಾರಣಗಳು.

ಊತಕವಿಷದ ಆಮ್ಲಜನಕಕೊರೆ[ಬದಲಾಯಿಸಿ]

ರಕ್ತದಲ್ಲಿ ಸಾಕಷ್ಟು ಆಮ್ಲಜನಕ ಇರುವುದಲ್ಲದೆ, ಅದರ ಒತ್ತಡ ಎಂದಿನಷ್ಟೇ ಇದ್ದರೂ ಇರುವ ಆಮ್ಲಜನಕವನ್ನು ಮೈಯಲ್ಲಿನ ಊತಕಗಳ ಜೀವಕಣಗಳು ಎತ್ತಿಕೊಂಡು ಬಳಸಲಾರವು. ಸಯನೈಡುಗಳು ಆಮ್ಲಜನಕದ ಬಳಕೆಗೆ ನೆರವಾಗುವ ಕಣಬಣ್ಣಕ (ಸೈಟೊಕ್ರೋಂ) ಆಕ್ಸೈಡುದೊಳೆಯನ್ನು ಜೋಗರಿಸಿ, ಜೀವಕಣಗಳ ಆಮ್ಲಜನಕ ಬಳಕೆಯನ್ನು ಕುಂದಿಸುವುದು ಗೊತ್ತಿರುವ ವಿಷಯ. ಆದರೂ ಜೀವಕಣಗಳ ಉಸಿರಾಟವನ್ನು ಕುಂದಿಸುವ ಯಾವ ಕಾರಣದಿಂದಲಾದರೂ ಹೀಗಾಗಬಹುದು. ಅಫೀಮಿನ ತೆರನ ಮಂಪರಿಕಗಳು, ಮದ್ಯಸಾರ, ಫಾರ್ಮಾಲ್ಡಿಹೈಡು, ಅಸಿಟೋಮ ಅರಿವಳಿಕ (ಅನೀಸ್ತೆಟಿಕ್) ವಸ್ತುಗಳೂ ಕಾರಣವಾಗಬಹುದು. ಈ ಕಾರಕಗಳಿಂದ ಈ ಕೊರೆಯಾಗುವುದಂತೂ ಬಲು ಅಪರೂಪವೇ.

ವಿಜ್ಞಾನ