ಅಸನ್ಸೋಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಸನ್ಸೋಲ್
ಅಸನ್ಸೋಲ್
city
Population
 (2001)
 • Total೪,೮೬,೩೦೪ (proper Asansol); ೧೦,೬೭,೩೬೯ (greater Asansol)
Websitewww.asansolmycity.com/

ಅಸನ್ಸೋಲ್ ಬಂಗಾಳಿ:আসানসোল ಕಲ್ಲಿದ್ದಲು ಗಣಿಗಾರಿಕೆ ಮತ್ತು ಕೈಗಾರಿಕೆಯ ಮುಖ್ಯನಗರವಾಗಿದೆ ಹಾಗೂ ಭಾರತದ ಅತ್ಯಂತ ಚಟುವಟಿಕೆಯ ವಾಣಿಜ್ಯಕೇಂದ್ರಗಳಲ್ಲಿ ಒಂದಾಗಿದೆ. ಪಶ್ಚಿಮ ಬಂಗಾಳದಲ್ಲಿ ಕೋಲ್ಕತಾ ನಂತರ ಎರಡನೇ ದೊಡ್ಡ ನಗರವಾಗಿದೆ.[೧] ಇದು ರಾಜ್ಯದ ಪಶ್ಚಿಮ ಹೊರವಲಯದ ಬರ್ಧಮಾನ್ ಜಿಲ್ಲೆಯಲ್ಲಿರುವ ಅಸನ್ಸೋಲ್ ಉಪವಿಭಾಗದಲ್ಲಿದೆ. ಇದು ಸಾಮಾನ್ಯವಾಗಿ ಅಧಿಕ ತಲಾದಾಯದೊಂದಿಗೆ ದೊಡ್ಡ ಕಾರ್ಮಿಕ ಶಕ್ತಿಯನ್ನು ಹೊಂದಿದೆ.ಶಿಕ್ಷಣ ಸಂಸ್ಥೆಗಳು,ಉತ್ತಮ ಸಾರಿಗೆ ಸಂಪರ್ಕಗಳು,ಅನೇಕ ವಸತಿ ಸಂಕೀರ್ಣಗಳು ಮತ್ತು ಕೈಗಾರಿಕೆ,ಸಂಸ್ಥೆಗಳು, ಸಾರಿಗೆ ಮತ್ತು ವಾಣಿಜ್ಯಕ್ಕೆ ಸೂಕ್ತವಾದ ಭೂಮಿಯನ್ನು ಹೊಂದಿದೆ. ಅದರ ಒಳನಾಡು ಪ್ರದೇಶ ಬಂಕುರಾ ಮತ್ತು ಪುರುಲಿಯ ಜಿಲ್ಲೆಗಳು ಮತ್ತು ಉತ್ತರ ಬಂಗಾಳವಾಗಿದ್ದು,ಒಡಿಶಾ ಮತ್ತು ಜಾರ್ಖಂಡ್ ರಾಜ್ಯಗಳ ಭಾಗಗಳೊಂದಿಗೆ ಸಂಪರ್ಕ ಹೊಂದಿವೆ. ಅಸನ್ಸೋಲ್ ಶೀಘ್ರದಲ್ಲೇ ದೊಡ್ಡ ನಗರವಾಗಿ ಮೇಲ್ದರ್ಜೆಗೆ ಏರಲಿದೆ. UK ಮೂಲದ ನೀತಿ ಸಂಶೋಧನೆ ಸರ್ಕಾರೇತರ ಸಂಸ್ಥೆಯಾದ ಪರಿಸರ ಮತ್ತು ಅಭಿವೃದ್ಧಿ ಅಂತಾರಾಷ್ಟ್ರೀಯ ಸಂಸ್ಥೆ ಬಿಡುಗಡೆ ಮಾಡಿದ ವರದಿ ಪ್ರಕಾರ,ಅಸನ್ಸೋಲ್ ೪೨ನೇ ಶ್ರೇಯದೊಂದಿಗೆ ವಿಶ್ವದಲ್ಲಿ ಅತೀ ವೇಗದ ಬೆಳವಣಿಗೆಯ ೧೦೦ ನಗರಗಳ ಪಟ್ಟಿಯಲ್ಲಿರುವ ೧೧ ಭಾರತೀಯ ನಗರಗಳ ಪೈಕಿ ಒಂದಾಗಿದೆ.[೨]

ಸ್ಥೂಲ ಅವಲೋಕನ[ಬದಲಾಯಿಸಿ]

ಅಂಡಾಲ್‌ನಿಂದ ಬರಾಕರ್‌ವರೆಗೆ ವ್ಯಾಪ್ತಿ ಹಾಗೂ ರಾಣಿಗಂಜ್,ಜಮುರಿಯ,ಅಸನ್ಸೋಲ್,ಬರ್ನ್‌ಪುರ್,ನೀಮಾಟ್ಪುರ್, ಕುಲ್ಟಿ ಮತ್ತು ಬರಾಕರ್ ಒಳಗೊಂಡು,ಗ್ರಾಂಡ್ ಟಂಕ್ ರಸ್ತೆಯಲ್ಲಿ ೪೦ ಕಿಲೋಮೀಟರ್‌ಗಳ ದೀರ್ಘವ್ಯಾಪ್ತಿ ಹೊಂದಿರುವ ನಗರಗಳ ಸಮೂಹವಾಗಿದ್ದು, ಎಲ್ಲವೂ ಅಸನ್ಸೋಲ್ ಉಪವಿಭಾಗದ ವ್ಯಾಪ್ತಿಗೆ ಬರುತ್ತದೆ. ಬಹುತೇಕ ಹೊಂದಿಕೊಂಡಿರುವ ನಗರ ಕೇಂದ್ರಗಳ ಮಧ್ಯದ ಅಂತರಗಳಲ್ಲಿ ಕಲ್ಲಿದ್ದಲು ಗಣಿಗಳು ಮತ್ತು ಸಣ್ಣ ವಾಸಸ್ಥಳಗಳಿಂದ ತುಂಬಿದೆ. ಇದನ್ನು ಒಂದು ನಗರವೆಂದು ಸೂಕ್ತವಾಗಿ ಪರಿಗಣಿಸಬೇಕು. ಚಿತ್ತರಂಜನ್-ರೂಪನಾರಾಯಣ್‌ಪುರ್ ನಗರ ಕೇಂದ್ರ ಕೂಡ ನಿಕಟ ಸಂಪರ್ಕ ಹೊಂದಿದೆ. ಪನಾಗಢ್‌ನಿಂದ ಬರಾಕಾರ್‌ವರೆಗೆ ಸಂಪೂರ್ಣ ವ್ಯಾಪ್ತಿಯ ಯೋಜನೆ ಉದ್ದೇಶಗಳಿಗಾಗಿ ಅಸೋನ್ಸಲ್ ದುರ್ಗಾಪುರ್ ಅಭಿವೃದ್ಧಿ ಪ್ರಾಧಿಕಾರ (ADDA) ಉಸ್ತುವಾರಿ ವಹಿಸಿದೆ. ಕಲ್ಲಿದ್ದಲು ವಲಯದ ಮುಖ್ಯನಗರವಾಗಿ ಅಸನ್ಸೋಲ್, ತೀವ್ರ ಕೈಗಾರೀಕರಣಗೊಂಡಿದೆ.ಇತ್ತೀಚಿನ ವರ್ಷಗಳಲ್ಲಿ ಸಂಕಷ್ಟ ಕಾಲದಲ್ಲಿ ಅನೇಕ ಕೈಗಾರಿಕೆಗಳು ಪತನಗೊಂಡವು.ಇದರಿಂದ ವ್ಯಾಪಾರಿ ಪಟ್ಟಣವಾಗಿ ಪರಿವರ್ತನೆಯಾಗಲು ದಾರಿ ಕಲ್ಪಿಸಿತು ಹಾಗೂ ಸಾರಿಗೆ ಕೇಂದ್ರವಾಗಿ ತನ್ನ ಸ್ಥಾನವನ್ನು ಬಳಸಿಕೊಂಡಿತು. ಈ ಪ್ರದೇಶದ ದೊಡ್ಡ ಸಂಸ್ಥೆಗಳು ಈಸ್ಟರ್ನ್ ಕೋಲ್‌ಫೀಲ್ಡ್ಸ್(ಕೋಲ್ ಇಂಡಿಯ ಲಿಮಿಟೆಡ್ ಸಹಾಯಕ ಸಂಸ್ಥೆ)ಮತ್ತು ಭಾರತೀಯ ಉಕ್ಕು ಪ್ರಾಧಿಕಾರದ IISCO ಉಕ್ಕು ಘಟಕ. ಉಳಿದ ಪ್ರಮುಖ ಕೈಗಾರಿಕೆಗಳು ಚಿತ್ತರಂಜನ್ ಲೋಕೋಮೋಟಿವ್ ವರ್ಕ್ಸ್,ಹಿಂದುಸ್ತಾನ್ ಕೇಬಲ್ಸ್ ಲಿ.ದಿಸೆರ್‌ಗಢ್ ಪವರ್ ಸಪ್ಲೈ,ದಾಮೋದರ್ ವ್ಯಾಲಿ ಕಾರ್ಪೋರೇಷನ್ (DVC),ಬರ್ನ್ ಸ್ಟಾಂಡರ್ಡ್,ರೆಕಿಟ್ ಎಂಡ್ ಕೋಲ್ಮನ್,ಬರ್ನ್‌ಪುರ್ ಸಿಮೆಂಟ್,ಅಸೋನ್ಸಲ್ ಸಿಮೆಂಟ್ ಮುಂತಾದ ಕೆಲವು ಸಿಮೆಂಟ್ ಘಟಕಗಳು ಹಾಗೂ ಕಬಿತಾ ರಿಫ್ರಾಕ್ಟರೀಸ್ ಮುಂತಾದ ರಿಫ್ರಾಕ್ಟರಿ ಘಟಕಗಳಿವೆ.

ನಕ್ಷೆ
ದಿ ಸ್ಯಾಕ್ರಡ್ ಹಾರ್ಟ್ ಚರ್ಚ್ (1875) ಈಗ ಅಸನ್ಸೋಲ್‌ನ R.C.ಡಯೋಸಿಸ್‌ರ ಮುಖ್ಯ ಚರ್ಚು
ಅಟ್ವಾಲ್ ಸಹೋದರರ ಕಟ್ಟಡ, ಅಸನ್ಸೋಲ್ ಹೆಗ್ಗುರುತು

ಇತಿಹಾಸ[ಬದಲಾಯಿಸಿ]

ಆರಂಭದಲ್ಲಿ ದ್ರಾವಿಡ ಮತ್ತು ಆಸ್ಟ್ರೋಲಾಯಿಡ್ ಸಮೂಹವು ಈ ಪ್ರದೇಶದಲ್ಲಿ ನೆಲೆಸಿತ್ತು. ಸುಮಾರು ಎರಡು ಸಾವಿರದ ಐದುನೂರು ವರ್ಷಗಳ ಹಿಂದೆ,ಇದು ಗಮನಾರ್ಹ ಜೈನ ಚಟುವಟಿಕೆಯ ಪ್ರದೇಶವಾಗಿತ್ತು. ಕೆಲವರ ಪ್ರಕಾರ,ಜೈನ ಧರ್ಮದ ಕೊನೆಯ ತೀರ್ಥಂಕರ,ಮಹಾವೀರ ವರ್ಧಮಾನ ಈ ಪ್ರದೇಶದಲ್ಲಿ ಜೀವಿಸಿ ಕರ್ತವ್ಯನಿರತರಾಗಿದ್ದರು. ಜಿಲ್ಲೆ ಮತ್ತು ಮುಖ್ಯಕೇಂದ್ರ ಪಟ್ಟಣವು ಹೀಗೆ ಬರ್ಧಮಾನ್ ಎಂದು ಹೆಸರಾಯಿತು. ಈ ಪ್ರದೇಶದಲ್ಲಿ ಆರ್ಯನ್ನರ ಪ್ರಭಾವದಿಂದ ಪಶ್ಚಿಮಬಂಗಾಳದಲ್ಲಿ ಜೈನಧರ್ಮ ಹರಡಿತೆಂದು ಕೆಲವರು ಗುರುತಿಸಿದ್ದಾರೆ. ನೆರೆಯ ಜಾರ್ಖಂಡ್‌ನ ಪರೇಶ್‌ನಾಥ್ ಬೆಟ್ಟದ ಜೈನ ಮಂದಿರಗಳಲ್ಲಿ ಪ್ರಮುಖ ಜೈನ ಚಟುವಟಿಕೆಗಳು ಅಸ್ತಿತ್ವದಲ್ಲಿರುವುದಕ್ಕೆ ಸಾಕ್ಷ್ಯಾಧಾರವಿದೆ. ಬರಾಕಾರ್ ನದಿಯ ದಡದಲ್ಲಿರುವ ಬೆಗುನಿಯದಲ್ಲಿ ಪ್ರಾಚೀನ ಜೈನ ಮಂದಿರವಿದೆ ಹಾಗೂ ನೆರೆಯ ಬಂಕುರಾ ಜಿಲ್ಲೆಯ ಮಂದಿರಗಳು ಕೂಡ ಆ ಪ್ರದೇಶದಲ್ಲಿ ಪ್ರಮುಖ ಜೈನ ಚಟುವಟಿಕೆಗಳು ನಡೆದಿರುವ ಬಗ್ಗೆ ಸಾಕ್ಷ್ಯಾಧಾರ ಹೊಂದಿವೆ. ಬಳಿಕ, ಈ ಪ್ರದೇಶವು ವಿಷ್ಣುಪುರ ಸಾಮ್ರಾಜ್ಯದ ಭಾಗವಾಗಿರುವ ಸಾಧ್ಯತೆಯಿದೆ. ಅಲ್ಲಿ ಮಲ್ಲಾ ರಾಜಪ್ರಭುತ್ವವು ಬ್ರಿಟಿಷರು ಆಗಮಿಸುವ ತನಕ ಸುಮಾರು ಒಂದು ಸಾವಿರ ವರ್ಷಗಳ ಕಾಲ ರಾಜ್ಯಭಾರ ಮಾಡಿದರು. ಚೊಟೋಡಿಘರಿ ಗ್ರಾಮದಲ್ಲಿ ವಿಷ್ಣುಪುರ ಶೈಲಿಯ ಮಂದಿರವಿದ್ದು,ವಿಷ್ಣುಪುರದ ಜತೆ ಅದರ ಸಂಪರ್ಕಗಳಿಗೆ ಇಂಗಿತ ಒದಗಿಸಿದೆ. ಈ ಪ್ರದೇಶದ ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯು ನೆರೆಯ ಪ್ರದೇಶಗಳಿಗಿಂತ ಬಂಕುರಾ ಮತ್ತು ವಿಷ್ಣುಪುರ ಜತೆ ನಿಕಟ ಸಂಬಂಧಗಳನ್ನು ಹೊಂದಿದೆ.

ಕಲ್ಲಿದ್ದಲು ಮತ್ತು ರೈಲ್ವೇಸ್[ಬದಲಾಯಿಸಿ]

ಇಸವಿ ೧೭೭೪ರಲ್ಲಿ ಈಸ್ಟ್ ಇಂಡಿಯ ಕಂಪನಿಯ ಸ್ಯುಟೋನಿಯಸ್ ಗ್ರಾಂಟ್ ಹೀಟ್ಲಿ ಮತ್ತು ಜಾನ್ ಸಮ್ಮರ್ ಈ ಪ್ರದೇಶದಲ್ಲಿ ಕಲ್ಲಿದ್ದಲ ನಿಕ್ಷೇಪವನ್ನು ಗುರುತಿಸಿದರು ಹಾಗೂ ಗಣಿಗಾರಿಕೆ ಆರಂಭವಾಯಿತು. ಕಲ್ಲಿದ್ದಲು ಶೋಧನೆ ಮತ್ತು ಗಣಿಗಾರಿಕೆ ಚಟುವಟಿಕೆಗಳನ್ನು ಗೊತ್ತುಗುರಿಯಿಲ್ಲದ ರೀತಿಯಲ್ಲಿ ನಡೆಸಲಾಯಿತು ಮತ್ತು ಕಲ್ಲಿದ್ದಲಿಗೆ ಬೇಡಿಕೆ ಸೀಮಿತವಾಗಿತ್ತು. ಕ್ರಮಬದ್ಧ ಗಣಿಗಾರಿಕೆ ಚಟುವಟಿಕೆಗಳು ೧೮೨೯ರಲ್ಲಿ ಆರಂಭವಾಯಿತು. ಏಜನ್ಸಿ ಹೌಸ್ ಅಲೆಕ್ಸಾಂಡರ್ & Co.ಯ ನೇತೃತ್ವದಲ್ಲಿ,೧೮೩೫ರಲ್ಲಿ ಪ್ರಿನ್ಸ್ ದ್ವಾರಕಾನಾಥ್ ಟಾಗೋರ್ ಕಲ್ಲಿದ್ದಲು ಗಣಿಗಳನ್ನು ಖರೀದಿಸಿದರು ಹಾಗೂ ಕಾರ್ ಮತ್ತು ಟಾಗೋರ್ ಕಂಪೆನಿ ಕ್ಷೇತ್ರದ ನೇತೃತ್ವ ವಹಿಸಿತು. ಸಂಪೂರ್ಣ ೧೯ನೇ ಶತಮಾನ ಮತ್ತು ೨೦ನೇ ಶತಮಾನದ ಬಹುಭಾಗ ಅಸೋನ್ಸಲ್ ಪ್ರದೇಶದ ರಾಣಿಗುಂಜ್ ಕಲ್ಲಿದ್ದಲು ಕ್ಷೇತ್ರಗಳು ರಾಷ್ಟ್ರದ ಪ್ರಮುಖ ಕಲ್ಲಿದ್ದಲು ಉತ್ಪಾದಿಸುವ ಕ್ಷೇತ್ರಗಳಾಗಿದ್ದವು. ವಿಲಿಯಂ ಪ್ರಿನ್ಸೆಪ್ ಆಣತಿ ಮೇರೆಗೆ ಕಾರ್ ಮತ್ತು ಟಾಗೋರ್ ಕಂ.೧೮೪೩ರಲ್ಲಿ ಗಿಲ್ಮೋರ್ ಹಾಂಬ್ರೆ ಎಂಡ್ ಕಂ.ಜತೆ ಕೈಗೂಡಿಸಿ ಬೆಂಗಾಲ್ ಕಲ್ಲಿದ್ದಲು ಕಂ.ರಚನೆಯಾಗಿ ಕಲ್ಲಿದ್ದಲು ಗಣಿಗಾರಿಕೆ ಚಟುವಟಿಕೆಗಳನ್ನು ಆರಂಭಿಸಿತು. ಅವರ ಮುಖ್ಯಕಚೇರಿಯು ಸಾಂಕ್ಟೋರಿಯ ದಲ್ಲಿತ್ತು. ಇತರ ಗಣಿಗಾರಿಕೆ ಕಂಪೆನಿಗಳಲ್ಲಿ ಬೀರ್‌ಬುಮ್ ಕೋಲ್ ಕಂ.ಈಕ್ವಿಟೇಬಲ್ ಕೋಲ್ ಕಂ., ಮಧುರಾಯ್ ಮತ್ತು ಪ್ರಸನ್ನ ದತ್ತ ಕಂ.,ಬರ್ಡ್ ಎಂಡ್ ಕಂ.,ಸೌತ್ ಬರಾಕರ್ ಕೋಲ್ ಕಂ.,ಆಂಡ್ರ್ಯೂ ಯೂಲೆ ಎಂಡ್ ಕಂಪೆನಿ ಲಿ. ಮತ್ತು ಬಾಲ್ಮರ್ ಲಾರ್ವಿ ಸೇರಿವೆ. ಕಲ್ಲಿದ್ದಲಿನ ಶೋಧನೆಯಿಂದ ರೈಲ್ವೆಗೆ ಚಾಲನೆ ಸಿಕ್ಕಿತು. ಭಾರತದಲ್ಲಿ ಮುಂಬಯಿ ಮತ್ತು ಥಾಣೆ ನಡುವೆ ೧೮೫೩ರಲ್ಲಿ ಪ್ರಥಮ ಕಾರ್ಯನಿರ್ವಹಣೆಯ ರೈಲ್ವೆ ಹಳಿಯನ್ನು ಸ್ಥಾಪಿಸಲಾಯಿತು. ಪೂರ್ವ ವಲಯದಲ್ಲಿ ಪ್ರಥಮ ರೈಲು ೧೮೫೪ರಲ್ಲಿ ಹೌರ್ವಾದಿಂದ ಹೂಗ್ಲಿವರೆಗೆ ಸಂಚರಿಸಿತು. ಇದು ಅಧಿಕೃತವಾಗಿ ೧೮೫೫ರಲ್ಲಿ ರಾಣಿಗುಂಜ್‌ವರೆಗೆ ವಿಸ್ತರಿಸಿತು. (೧೯೪ ಕಿಮೀ). ಇಸವಿ ೧೮೬೨ರಲ್ಲಿ ಸಾಹಿಬ್‌ಗಂಜ್ ಲೂಪ್‌ ಮೂಲಕ ವಾರಾಣಸಿವರೆಗೆ ವಿಸ್ತರಿಸಿತು ಮತ್ತು ೧೮೬೬ರಲ್ಲಿ ದೆಹಲಿವರೆಗೆ ವಿಸ್ತರಿಸಿತು. ಅಲಹಾಬಾದ್ ಮೂಲಕ ಮುಂಬಯಿಗೆ ರೈಲ್ವೆ ಮಾರ್ಗವು ೧೮೭೦ರಲ್ಲಿ ಆರಂಭವಾಯಿತು. ಪ್ರಸಕ್ತ ಪಾಟ್ನಾ ಮೂಲಕ ಮುಖ್ಯ ಮಾರ್ಗವು ೧೮೭೧ರಲ್ಲಿ ಕಾರ್ಯಾರಂಭವಾಯಿತು. ಗಯಾ ಮೂಲಕ ಗ್ರಾಂಡ್ ಚಾರ್ಡ್ ೧೯೦೬ರಲ್ಲಿ ಆರಂಭವಾಯಿತು. ಹೌರಾ-ಬರ್ಧಮಾನ್ ಮಾರ್ಗಕ್ಕೆ ೧೯೧೭ರಲ್ಲಿ ಚಾಲನೆ ಸಿಕ್ಕಿತು. ಅಸೋನ್ಸಲ್ ರೈಲ್ವೆ ಚಟುವಟಿಕೆಯ ಮುಖ್ಯ ಕೇಂದ್ರವಾಯಿತು ಹಾಗೂ ಇಂಜಿನ್ ತಯಾರಿಕೆ ಕಾರ್ಖಾನೆಗಳ ಬೆಳವಣಿಗೆಯ ಜತೆ ರೈಲ್ವೆ ವಸಾಹತುಗಳು ಬೆಳೆದವು. ಇದು ಐರೋಪ್ಯ ಮತ್ತು ಆಂಗ್ಲೊ-ಇಂಡಿಯನ್ ಸಮುದಾಯವನ್ನು ಕರೆತಂದಿತು.ಅಸನ್ಸೋಲ್ ಚಟುವಟಿಕೆಯಲ್ಲಿ ಅವರು ಮುಖ್ಯ ಪಾತ್ರ ವಹಿಸಿದರು. ಡುರಾಂಡ್ ಇನ್‌ಸ್ಟಿಟ್ಯೂಟ್(ಈಗ ಸ್ವಾಮಿ ವಿವೇಕಾನಂದ ಇನ್‌ಸ್ಟಿಟ್ಯೂಟ್ ಎಂದು ಮರುನಾಮಕರಣಗೊಂಡಿದೆ)ಏಷ್ಯಾದಲ್ಲಿ ಅತ್ಯಂತ ಹಳೆಯ ರೈಲ್ವೆ ಸಂಸ್ಥೆಯಾಗಿದ್ದು, ಐರೋಪ್ಯ ಮತ್ತು ಆಂಗ್ಲೊ-ಇಂಡಿಯನ್ ಚಟುವಟಿಕೆಯ ಮುಖ್ಯ ಕೇಂದ್ರವಾಗಿತ್ತು. ಈ ಸಮುದಾಯಗಳಿಗೆ ಮುಖ್ಯವಾಗಿ ಅನುಕೂಲವಾಗಲು ಅಸನ್ಸೋಲ್ ಹಳೆಯ ಚರ್ಚುಗಳು ಮತ್ತು ಪ್ರಮುಖ ಶಾಲೆಗಳನ್ನು ನಿರ್ಮಿಸಲಾಗಿತ್ತು. ಈ ಶಾಲೆಗಳಿಗೆ ತುಂಬ ಸಮಯದ ನಂತರ ಭಾರತೀಯರಿಗೆ ಅವಕಾಶ ಕಲ್ಪಿಸಲಾಯಿತು. ಕೈಬೆರಳೆಣಿಕೆಯ ಆರ್ಮೇನಿಯನ್ ಉದ್ಯಮಿಗಳು ಇದ್ದರು. ಹಳೆಯ ಕಾಲದವರು ಅಸನ್ಸೋಲ್‌ನ ಗ್ರೆಗರಿ ಮತ್ತು ಬರ್ನ್‌ಪುರದ ಜೋಹಾನ್ಸ್‌ನಲ್ಲಿರುವ ಕಾರ್ಖಾನೆಗಳನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ. ಅಸನ್ಸೋಲ್ ಈಸ್ಟ್ ಇಂಡಿಯನ್ ರೈಲ್ವೆಯ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದರೆ,ಅಂತಿಮವಾಗಿ ೧೯೨೫ರಲ್ಲಿ ವಿಭಾಗೀಯ ಮುಖ್ಯಕೇಂದ್ರವಾಯಿತು.ಆಡ್ರಾ ಬೆಂಗಾಲ್ ನಾಗ್ಪುರ್ ರೈಲ್ವೆಯ ಮುಖ್ಯ ಕೇಂದ್ರವಾಯಿತು.

ಕೈಗಾರಿಕೆಗಳ ಅಭಿವೃದ್ಧಿ[ಬದಲಾಯಿಸಿ]

ದೇಶದಲ್ಲಿ ರೈಲ್ವೆಗಳ ವ್ಯಾಪಕ ಬೆಳವಣಿಗೆಯಿಂದಾಗಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳ ಬೆಳವಣಿಗೆಗೆ ದಾರಿ ಕಲ್ಪಿಸಿತು. ೧೮೭೦ರಲ್ಲಿ ಜೇಮ್ಸ್ ಎರ್ಸ್ಕೈನ್ ಬೆಂಗಾಲ್ ಐರನ್ ವರ್ಕ್ಸ್ ಸ್ಥಾಪಿಸಿದ.ಇದು ಬಾರಕರ್ ಐರನ್ ವರ್ಕ್ಸ್ ಎಂದು ಹೆಸರುಪಡೆದಿದೆ. ಈ ಬೆಳವಣಿಗೆಗೆ ಕೋಲ್ಕತಾದ ಹೋರೆ ಮಿಲ್ಲರ್ ಎಂಡ್ ಕಂ.ಕಾರಣವೆಂದು ಕೆಲವು ಮೂಲಗಳು ಹೇಳಿವೆ. ಜೇಮ್ಸ್ ಎರ್ಸ್ಕೈನ್ ಈ ಕಂಪೆನಿಯ ನೌಕರನಾಗಿರಲು ಸಾಧ್ಯ. ಇಸವಿ ೧೮೭೫ರಲ್ಲಿ ಕುಲ್ಟಿಯಲ್ಲಿ ಇದ್ದಿಲಿನ ಬದಲಿಗೆ ಕಲ್ಲಿದ್ದಲನ್ನು ಬಳಸಿದ ಊದು ಕುಲುಮೆಯು ೧೮೭೫ರಲ್ಲಿ ಉತ್ಪಾದನೆ ಆರಂಭಿಸಿತು. ಆಗಿನ ದಿನಗಳಲ್ಲಿ,ಈ ಸ್ಥಳವನ್ನು ಕೆಂಡ್ವ ಎಂದು ಸುಲಭವಾಗಿ ಗುರುತಿಸಲಾಗುತ್ತಿತ್ತು. ಕುಲ್ಟಿ ಕೆಂಡ್ವಕ್ಕಿಂತ ಸಣ್ಣ ಗ್ರಾಮವಾಗಿದೆ. ಸ್ಥಳೀಯವಾಗಿ ಲಭ್ಯವಿರುವ ಕಡಿಮೆ ದರ್ಜೆಯ ಕಬ್ಬಿಣದ ಅದಿರನ್ನು ಅದು ಬಳಸಿಕೊಂಡಿತು. ದೇಶದ ಪ್ರಥಮ ಕಬ್ಬಿಣದ ಅದಿರು ಗಣಿಯನ್ನು ೧೯೦೧ರಲ್ಲಿ ಸಿಂಗಭೂಮ್ ಜಿಲ್ಲೆಯ ಪಾನ್ಸಿರಬುರುನಲ್ಲಿ ಅಭಿವೃದ್ಧಿಪಡಿಸಲಾಯಿತು(ಆಗ ಬಂಗಾಳದಲ್ಲಿತ್ತು, ಈಗ ಜಾರ್ಖಂಡ್‌ನಲ್ಲಿದೆ).ಮನೋಹರ್‌ಪುರ್ ಕಬ್ಬಿಣದ ಗಣಿಗಾರಿಕೆಯ ಭಾಗವಾಗಿ ಕುಲ್ಟಿಗೆ ಸಂಪರ್ಕ ಕಲ್ಪಿಸಲಾಯಿತು. ಇಸವಿ ೧೯೦೪ರಲ್ಲಿ ಕುಲ್ಟಿ ಉಕ್ಕನ್ನು ಓಪನ್ ಹರ್ತ್ ಕುಲುಮೆಗಳಲ್ಲಿ ತಯಾರಿಸಿದ ಹಿರಿಮೆ ಪಡೆದುಕೊಂಡಿತು. ಆದಾಗ್ಯೂ, ಆಮದು ವಸ್ತುವಿನ ಕಠಿಣ ಪೈಪೋಟಿಯಿಂದ, ಉಕ್ಕುತಯಾರಿಸುವ ಸೌಲಭ್ಯವನ್ನು ಮುಚ್ಚಲಾಯಿತು. ಪ್ರವರ್ತಕ ಘಟಕದ ಮಾಲೀಕತ್ವವು ಅನೇಕ ಬಾರಿ ಕೈಬದಲಾಯಿಸಿತು. ಮಾರ್ಟಿನ್ ಎಂಡ್ ಕಂ.ಯನ್ನು ಸರ್ ಆಕ್ವಿನ್ ಮಾರ್ಟಿನ್ ಜತೆ ಸ್ಥಾಪಿಸಿದ ಸರ್ ರಾಜೇಂದ್ರನಾಥ್ ಮುಖರ್ಜಿಯವರ ಘಟಕದ ದೂರದೃಷ್ಟಿಯ ನಿಯಂತ್ರಣದಿಂದಾಗಿ ಅದು ಮುಂದುವರಿಯಿತು. ಕನ್ಯಾಪುರ ಎಂಬ ಹೊರವಲಯದಲ್ಲಿ ಸೆನ್-ರಾಲೇಗ್ ಸೈಕಲ್ ಕಾರ್ಖಾನೆಯಿದೆ. ನಂತರ ಕಂಪೆನಿಯು ಸರ್ಕಾರ ಸ್ವಾಧೀನಪಡಿಸಿಕೊಂಡು CCIL ಎಂದು ಮರುನಾಮಕರಣ ಮಾಡಿತು.ಕಾರ್ಖಾನೆಯ ಮಾದರಿಗಳಲ್ಲಿ ರಾಲೇಘ್,ಹಂಬರ್,ಬಾಲಕಾ,ರಡ್ಜ್,ಅರ್ಜುನ್ ಮತ್ತು ಸ್ವಾಥಿ ಸೇರಿದೆ. ಇನ್ನೊಂದು ಪ್ರಮುಖ ಉದ್ಯಮವು ಹಿಂದುಸ್ಥಾನ್ ಪಿಲ್ಕಿಂಗ್‌ಟನ್ ಗಾಜಿನ ಕೈಗಾರಿಕೆಯಾಗಿದ್ದು,ನಗರದ ಮುಖ್ಯ ಪ್ರದೇಶದಲ್ಲಿ ಅದರ ಕಾರ್ಖಾನೆಯಿದೆ. ಕಾರ್ಮಿಕ ಸಮಸ್ಯೆಗಳಿಂದಾಗಿ ಕೈಗಾರಿಕೆಯನ್ನು ಮುಚ್ಚಲಾಯಿತು.

ಬರ್ನ್‌ಪುರದಲ್ಲಿ IISCO ಉಕ್ಕಿನ ಘಟಕ

ಬರ್ನ್ ಎಂಡ್ ಕಂ.೧೯೧೮ರಲ್ಲಿ ಭಾರತೀಯ ಕಬ್ಬಿಣ ಮತ್ತು ಕಲ್ಲಿದ್ದಲು ಕಂಪನಿಯ ತಯಾರಿಕೆಗೆ ಉತ್ತೇಜನ ನೀಡಿತು. G.H.ಪೈರ್‌ಹರ್ಸ್ಟ್ ಘಟಕವನ್ನು ಬರ್ನ್‌ಪುರ್‌(ಆಗ ಹಿರಾಪುರ ಎಂದು ಹೆಸರಾಗಿತ್ತು)ನಲ್ಲಿ ಸ್ಥಾಪಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಸರ್ ರಾಜೇಂದ್ರನಾಥ್ ಮುಖರ್ಜಿ ಮತ್ತು T.ಲೆಸ್ಲಿ ಮಾರ್ಟಿನ್ ಕೂಡ ಇದರ ಜತೆ ಸಂಬಂಧ ಹೊಂದಿದ್ದರು. ಸರ್ ಬಿರೇನ್ ಮುಖರ್ಜಿ ಸ್ವಲ್ವ ಕಾಲದ ನಂತರ ಜತೆಗೂಡಿದರು ಮತ್ತು ಘಟಕದ ಬೆಳವಣಿಗೆಯಲ್ಲಿ ಮುಖ್ಯ ಪಾತ್ರವಹಿಸಿದರು. ಬರ್ನ್‌ಪುರದಲ್ಲಿ ೧೯೨೨ರಲ್ಲಿ ಕಬ್ಬಿಣದ ತಯಾರಿಕೆ ಆರಂಭವಾಯಿತು. ಬೆಂಗಾಲ್ ಐರನ್‌ನ ಕುಲ್ಟಿ ವರ್ಕ್ಸ್ IISCO ಜತೆ ೧೯೩೬ರಲ್ಲಿ ವಿಲೀನಗೊಂಡಿತು. ಬಂಗಾಳದ ಉಕ್ಕುನಿಗಮ(SCOB)೧೯೩೯ರಲ್ಲಿ ಬರ್ನ್‌ಪುರದಲ್ಲಿ ಉಕ್ಕು ತಯಾರಿಕಾ ಸೌಲಭ್ಯಗಳನ್ನು ಸ್ಥಾಪಿಸಿತು. SCOB ೧೯೫೨ರಲ್ಲಿ IISCO ಜತೆ ವಿಲೀನಗೊಂಡಿತು ಮತ್ತು ಮಾರ್ಟಿನ್ ಬರ್ನ್ ಆಗ ಕಂಪೆನಿಯ ವ್ಯವಸ್ಥಾಪನಾ ಏಜೆಂಟ್ ಆಗಿದ್ದರು. ಇಂಡಿಯನ್ ಸ್ಟಾಂಡರ್ಡ್ ವ್ಯಾಗನ್(ISW)(ಬಳಿಕ ಬರ್ನ್ ಸ್ಟಾಂಡರ್ಡ್ ಎಂದು ಮರುಹೆಸರು ಪಡೆಯಿತು)ಬರ್ನ್‌ಪುರದಲ್ಲಿ ಬೋಗಿ ತಯಾರಿಸುವ ಕಾರ್ಖಾನೆಯನ್ನು ಸ್ಥಾಪಿಸಿತು. ವಸಾಹತುಶಾಹಿ ಸಂಸ್ಕೃತಿಯ ಇನ್ನೊಂದು ಮುಖ್ಯ ಬೆಳವಣಿಗೆಯೆಂದರೆ ಕ್ಲಬ್‌ಗಳ ಸ್ಥಾಪನೆ. ಅಸೋನ್‌ಸಲ್ ಕ್ಲಬ್, ಬರ್ನ್‌ಪುರ್ ಕ್ಲಬ್, ಕುಲ್ಟಿ ಕ್ಲಬ್ ಮತ್ತು ದಿಸೇರ್‌ಗಢ್ ಕ್ಲಬ್ ಮುಂತಾದ ಕ್ಲಬ್‌ಗಳ ಸ್ಥಾಪನೆಯ ಹಿರಿಮೆಯು ಬ್ರಿಟಿಷರಿಗೆ ಸಲ್ಲುತ್ತದೆ. ಆರಂಭದ ದಿನಗಳಲ್ಲಿ ಈ ಕ್ಲಬ್‌ಗಳು ಭಾರತೀಯರಿಗೆ ಪ್ರವೇಶ ನೀಡುತ್ತಿರಲಿಲ್ಲ.ಭಾರತೀಯರು ಹಿರಾಪುರ್ ಇಂಡಿಯನ್ ಅಸೋಸಿಯೇಷನ್(ಬಳಿಕ ಭಾರತಿ ಭವನ್ ಎಂದು ಮರುಹೆಸರು ಪಡೆಯಿತು)ಮುಂತಾದ ಅವರದೇ ಆದ ಸಂಘಟನೆಗಳನ್ನು ಹೊಂದಿದ್ದರು. ತರುವಾಯ,ಭಾರತೀಯರು ಬ್ರಿಟಿಷ್ ಕ್ಲಬ್‌ಗಳಲ್ಲಿ ಪ್ರವೇಶಾವಕಾಶ ಪಡೆದರು. ಕಾರ್ಮಿಕ ಸಂಘಟನೆಗಳ ಬೆಳವಣಿಗೆ ಮತ್ತು ಅಭಿವೃದ್ಧಿಯು ಕೈಗಾರಿಕಾ ಕ್ರಾಂತಿಯ ವ್ಯಾವಹಾರಿಕ ಪರಿಣಾಮವಾಗಿದೆ. ಕಾರ್ಮಿಕರ ವೇತನಗಳು ಕಡಿಮೆಯಿತ್ತು,ಆದರೆ ಗ್ರಾಮೀಣ ಪ್ರದೇಶಗಳ ಪರಿಸ್ಥಿತಿ ಶೋಚನೀಯವಾಗಿದ್ದರಿಂದ ನೆರೆಯ ಜಿಲ್ಲೆಗಳಿಂದ ಮಾತ್ರವಲ್ಲದೇ ಬಿಹಾರ ಮತ್ತು ಉತ್ತರಪ್ರದೇಶದಿಂದ(ಆಗ ಸಂಯುಕ್ತ ಪ್ರಾಂತ್ಯಗಳು)ಗಣನೀಯ ಪ್ರಮಾಣದ ಜನಸಂಖ್ಯೆ ಈ ಪ್ರದೇಶಕ್ಕೆ ಹರಿದುಬಂದಿದ್ದಕ್ಕೆ ಸಾಕ್ಷಿಯಾಯಿತು. ವಿಪರೀತ ಭೂಕಂದಾಯದಿಂದ ಮತ್ತು ಅಭಿವೃದ್ಧಿಯ ಕೊರತೆಯ ಭಾರದಿಂದ ಗ್ರಾಮೀಣಪ್ರದೇಶಗಳು ಕುಗ್ಗಿದವು. ಬರಗಾಲಗಳು ಅಲ್ಲಿ ಸಾಮಾನ್ಯ ಲಕ್ಷಣವಾಗಿತ್ತು.

ಸ್ವಾತಂತ್ರ್ಯ ಮತ್ತು ಕೈಗಾರಿಕೆ ಚೇತರಿಕೆ[ಬದಲಾಯಿಸಿ]

ದೇಶವು ೧೯೪೭ರಲ್ಲಿ ಪಡೆದ ಸ್ವಾತಂತ್ರ್ಯದಿಂದ ಮುಂದಿನ ಪ್ರಮುಖ ಆರ್ಥಿಕ ಬದಲಾವಣೆಗೆ ನಾಂದಿಯಾಯಿತು. ದಾಮೋದರ್ ಕಣಿವೆ ನಿಗಮ,ಪ್ರಥಮ ಬಹುಉದ್ದೇಶದ ನದಿ ಕಣಿವೆ ಯೋಜನೆಯು ಮೈಥೋನ್ ಮತ್ತು ಪಾಂಚೆಟ್‌ ನಲ್ಲಿ(ಎರಡೂ ಸ್ಥಳಗಳಲ್ಲಿ ನದಿಯು ಜಾರ್ಖಂಡ್ ಗಡಿಯಾಗಿ ರೂಪುಗೊಂಡಿದೆ) ಅಣೆಕಟ್ಟುಗಳೊಂದಿಗೆ ಪ್ರದೇಶದ ತುದಿಯಲ್ಲಿ ಪ್ರಮುಖ ಉಪಸ್ಥಿತಿಯನ್ನು ಸಾರುತ್ತದೆ. ಅಣೆಕಟ್ಟುಗಳ ಹಿಂದಿನ ಕೃತಕ ಸರೋವರಗಳು ಪ್ರದೇಶದ ನಿಸರ್ಗಸೌಂದರ್ಯಕ್ಕೆ ಗಣನೀಯ ಮೆರುಗು ನೀಡಿದೆ ಮತ್ತು ವಿಹಾರ ಕೇಂದ್ರಗಳಾಗಿ ವರಿವರ್ತಿತವಾಗಿದೆ. ರೈಲ್ವೆಯ ರಾಷ್ಟ್ರೀಕರಣದಿಂದಾಗಿ,ಈಸ್ಟ್ ಇಂಡಿಯ ರೈಲ್ವೆ ಪೂರ್ವ ರೈಲ್ವೆ ವಲಯವಾಯಿತು ಮತ್ತು ಬೆಂಗಾಲ್ ನಾಗ್ಪುರ ರೈಲ್ವೆಯು ನೈರುತ್ಯ ರೈಲ್ವೆ ವಲಯವಾಯಿತು. ಅಸನ್ಸೋಲ್ ಪೂರ್ವ ರೈಲ್ವೆಯ ವಿಭಾಗೀಯ ಮುಖ್ಯ ಕೇಂದ್ರವಾಯಿತು. ಅಂಡಾಲ್ ಏಷ್ಯಾದಲ್ಲೇ ಅತೀ ದೊಡ್ಡ ರೈಲ್ವೆಅಂಗಳವಾಯಿತು. ಅಂಡಾಲ್ಲ್‌ನಲ್ಲಿರುವ ಡೀಸೆಲ್ ರೈಲ್ವೆ ಇಂಜಿನ್ ಶೆಡ್ ೧೦೧ ಇಂಜಿನ್‌ಗಳಿಗೆ ಸ್ಥಳಾವಕಾಶ ನೀಡುತ್ತದೆ ಮತ್ತು ಅಸನ್ಸೋಲ್‌ನಲ್ಲಿನ ವಿದ್ಯುತ್ ಇಂಜಿನ್ ಶೆಡ್ ೧೧೮ ಇಂಜಿನ್‌ಗಳಿಗೆ ಸ್ಥಳಾವಕಾಶ ಕಲ್ಪಿಸುತ್ತದೆ. ಚಿತ್ತರಂಜನ್ ಲೋಕೋಮೋಟಿವ್ ವರ್ಕ್ಸ್(CLW)ಭಾರತದಲ್ಲೇ ಪ್ರಥಮ ರೈಲ್ವೆ ಇಂಜಿನ್ ತಯಾರಿಕೆ ಕಾರ್ಯಾಗಾರವಾಗಿದ್ದು,ಸ್ವಾತಂತ್ರ್ಯ ಯೋಧ,ನಾಯಕ, ರಾಜಕೀಯ ಮುತ್ಸದ್ಧಿ ದೇಶಬಂಧು ಚಿತ್ತರಂಜನ್ ದಾಸ್ ಹೆಸರಿನಲ್ಲಿ ಸ್ಥಾಪಿಸಲಾಗಿದೆ. ಆರಂಭದಲ್ಲಿ ಇದು ಉಗಿ ಇಂಜಿನ್‌ಗಳನ್ನು ತಯಾರಿಸಿತು. ಉತ್ಪಾದನೆ ಚಟುವಟಿಕೆಯು ಭಾರತ ಗಣರಾಜ್ಯವಾದ ದಿನ ಜನವರಿ ೨೬, ೧೯೫೦ರಲ್ಲಿ ಆರಂಭವಾಯಿತು. ಪ್ರಥಮ ಉಗಿ ಇಂಜಿನ್ ದೇಶಬಂಧು ವನ್ನು ರಾಷ್ಟ್ರಕ್ಕೆ ಭಾರತದ ಪ್ರಥಮ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅರ್ಪಿಸಿದರು. ಪ್ರಥಮ CLW ನಿರ್ಮಿತ WAG-೯ ವಿದ್ಯುತ್ ಇಂಜಿನ್ ನವಯುಗ್ ೧೯೯೮ ನವೆಂಬರ್ ೧೪ರಂದು ಆರಂಭವಾಗುವುದರೊಂದಿಗೆ, ಭಾರತವು ೩-ಹಂತದ ತಂತ್ರಜ್ಞಾನದೊಂದಿಗೆ ವಿದ್ಯುತ್ ಇಂಜಿನ್‌ಗಳನ್ನು ಸ್ಥಾಪಿಸುವ ಐದು ರಾಷ್ಟ್ರಗಳ ಸಾಲಿಗೆ ಸೇರಿತು. CLW ೨೦೦೬ರಲ್ಲಿ ದೂರ ಗುರುತಿಸುವ ವ್ಯವಸ್ಥೆಯೊಂದಿಗೆ ಮೂರು-ಹಂತದ ಇಂಜಿನ್ ಡಾ ಸಿಲ್ವರ್‌ ನ್ನು 6,000 hp (4,500 kW)೨೦೦೬ರಲ್ಲಿ ತಯಾರಿಸಿತು[೩] CLW ೨೦೦೬ ಮಾರ್ಚ್ ೩೧ರವರೆಗೆ ೩೩೮೦ ವಿದ್ಯುತ್ ಇಂಜಿನ್‌ಗಳನ್ನು ಉತ್ಪಾದಿಸಿತು. ಸೆನ್ ರಲೇಘ್ ಇಂಡಸ್ಟ್ರೀಸ್ ೧೯೪೯ಲ್ಲಿ ಅಸನ್ಸೋಲ್‌ ಬಳಿಯ ಕನ್ಯಾಪುರ್ ಸೈಕಲ್ ಕಾರ್ಖಾನೆಯಲ್ಲಿ ಉತ್ಪಾದನೆಯನ್ನು ಆರಂಬಿಸಿತು. ಪಿಲ್ಕಿಂಗ್‌ಟನ್ ಅಸನ್ಸೋಲ್‌ನಲ್ಲಿ ಗಾಜಿನ ಕಾರ್ಖಾನೆಯೊಂದನ್ನು ಸ್ಥಾಪಿಸಿತು. ಜೈಕೆ ಗ್ರೂಪ್ ಅಸನ್ಸೋಲ್ ಬಳಿಯ ಜೈಕೆ ನಗರದಲ್ಲಿ ಅಲ್ಯುಮಿನಿಯಂ ಘಟಕವನ್ನು ಸ್ಥಾಪಿಸಿತು. ಧಾಕೇಶ್ವರಿ ವಸ್ತ್ರೋದ್ಯಮ ಗಿರಣಿಯನ್ನು ದಾಮೋದರ್ ದಡದಲ್ಲಿರುವ ಸೂರ್ಯನಗರದಲ್ಲಿ ಸ್ಥಾಪಿಸಲಾಯಿತು. ಬಲ್ಲಬ್‌ಪುರದ ರಾಣಿಗುಂಜ್‌ನಲ್ಲಿ ಬೆಂಗಾಲ್ ಕಾಗದ ಕಾರ್ಖಾನೆಯನ್ನು ಸ್ಥಾಪಿಸಲಾಯಿತು. ಹಿಂದೂಸ್ತಾನ ಕೇಬಲ್ಸ್ ಲಿ.ರೂಪನಾರಾಯಣಪುರದಲ್ಲಿ ತನ್ನ ಘಟಕವನ್ನು ಸ್ಥಾಪಿಸಿತು. ನೆರೆಯ ದುರ್ಗಾಪುರದಲ್ಲಿ ಉಕ್ಕಿನ ಘಟಕ ಸ್ಥಾಪಿಸಲಾಯಿತು ಮತ್ತು ಬರ್ನ್‌ಪುರ್ ಘಟಕವನ್ನು ವಿಸ್ತರಿಸಲಾಯಿತು. ಉಪನಗರಗಳು ಮತ್ತಿತರ ಸೌಲಭ್ಯಗಳು ಗಣನೀಯ ಸಂಖ್ಯೆಯಲ್ಲಿ ವಿಸ್ತರಣೆಗೊಂಡಿತು. ದಾಮೋದರ್ ದಡದಲ್ಲಿರುವ ಪ್ರದೇಶದ ನಿಸರ್ಗದತ್ತ ಉಬ್ಬುತಗ್ಗನ್ನು ಬಳಸಿಕೊಂಡು ನೆಹರು ಪಾರ್ಕ್(ಮುಂಚೆ ಲಹಮೆಯರ್ ಪಾರ್ಕ್) ನಿರ್ಮಿಸಲಾಯಿತು. ಬರ್ನ್‌ಪುರ್ ವಾಯುನೆಲೆಯು ಸಣ್ಣ ವಿಮಾನಗಳಿಗೆ ನೆಲೆ ಕಲ್ಪಿಸುವ ಸಾಮರ್ಥ್ಯ ಹೊಂದಿತು.ಬರ್ನ್‍‌ಪುರ್‌ನಲ್ಲಿ ಉಕ್ಕಿನ ಘಟಕದ ವಿಸ್ತರಣೆಯೊಂದಿಗೆ ಹಳತಾದ ಕುಲ್ಟಿಯ ತೆರೆದ ಊದು ಕುಲುಮೆಗಳನ್ನು ಮುಚ್ಚಲಾಯಿತು ಹಾಗೂ ಕುಲ್ಟಿ ವರ್ಕ್ಸ್ ಪ್ರವರ್ತಕವಾಗಿ ಹೊರಹೊಮ್ಮಿತು ಹಾಗೂ ನಂತರ ದೇಶದ ಅತೀ ದೊಡ್ಡ ಪ್ರಮಾಣದಲ್ಲಿ ಸ್ಪನ್ ಪೈಪ್ ಉತ್ಪಾದಕವೆನಿತು. ಇದು ಫೌಂಡ್ರಿ ಉತ್ಪನ್ನಗಳನ್ನು ಕೂಡ ನಿರ್ಮಿಸಿತು.

ಆರ್ಥಿಕ ಸ್ಥಿತಿ[ಬದಲಾಯಿಸಿ]

ದಾಮೋದರ್ ನದಿಯ ದಂಡೆಯಲ್ಲಿರುವ ನೆಹರು ಪಾರ್ಕ್

ನಗರದ ಆರ್ಥಿಕಸ್ಥಿತಿಯು ಕಲ್ಲಿದ್ದಲು ಮತ್ತು ಉಕ್ಕು ಕೈಗಾರಿಕೆಗಳ ಆಧಾರಿತವಾಗಿದೆ. ದಾಮೋದರ್ ನದಿ ಕಣಿವೆಯಲ್ಲಿರುವ ನಗರವು ಕಾಲಾಂತರದಲ್ಲಿ ವಿಸ್ತರಣೆಯಾಗಿ ಒಂದು ದಶಲಕ್ಷ ಜನಸಂಖ್ಯೆಗೆ ವಿಸ್ತರಿಸಿ,ಭಾರತದಲ್ಲಿ ೨೩ನೇ ಸ್ಥಾನ ಪಡೆಯಿತು. ಕೊಲ್ಕತಾದಿಂದ ೨೦೦ಕಿಮೀ ದೂರದಲ್ಲಿ ಈ ನಗರವಿದೆ.

ಕೈಗಾರಿಕೆ ಕುಸಿತ ಮತ್ತು ಚೇತರಿಕೆ[ಬದಲಾಯಿಸಿ]

ತಂತ್ರಜ್ಞಾನದ ಹಿಂದುಳಿಯುವಿಕೆಯು ಅಸನ್ಸೋಲ್ ಕೈಗಾರಿಕಾ ವಲಯಕ್ಕೆ ವಿನಾಶಕವಾಗಿ ಪರಿಣಮಿಸಿತು. ಬ್ರಿಟಿಷ್ ಕೈಗಾರಿಕೋದ್ಯಮಿಗಳು ತೊರೆದುಹೋದ ನಂತರ,ಭಾರತದ ವ್ಯಾಪಾರೋದ್ಯಮಿಗಳು ಬ್ರಿಟಿಷ್ ಮಾಲೀಕತ್ವದ ಕೈಗಾರಿಕೆಗಳು ಮತ್ತು ಗಣಿಗಳನ್ನು ಸ್ವಾಧೀನಪಡಿಸಿಕೊಂಡರು. ಆದರೆ ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಲು ವಿಫಲರಾಗಿದ್ದರಿಂದ ಕಾರ್ಮಿಕ ಅಶಾಂತಿ ಮತ್ತು ಕೈಗಾರಿಕೆ ಕುಸಿತಕ್ಕೆ ಕಾರಣವಾಯಿತು. ಸರ್ಕಾರ ಮಧ್ಯಪ್ರವೇಶ ಮಾಡಿ ಗಣಿಗಾರಿಕೆ ಮತ್ತು ಅನೇಕ ಕೈಗಾರಿಕೆ ಚಟುವಟಿಕೆಗಳನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತು. ಕೋಕ್ ರಹಿತ ಕಲ್ಲಿದ್ದಲು ಕೈಗಾರಿಕೆಯು ೧೯೭೩ರಲ್ಲಿ ರಾಷ್ಟ್ರೀಕರಣಗೊಂಡಿತು. ರಾಣಿಗುಂಜ್ ಕಲ್ಲಿದ್ದಲುಕ್ಷೇತ್ರಗಳಲ್ಲಿರುವ ಕಲ್ಲಿದ್ದಲು ಗಣಿಗಳನ್ನು ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿ.ಉಸ್ತುವಾರಿಯಲ್ಲಿ ಇರಿಸಲಾಯಿತು.ಕೋಲ್ ಇಂಡಿಯ ಲಿ.ಸಹಾಯಕ ಸಂಸ್ಥೆಯಾದ ಇದರ ಮುಖ್ಯಕಚೇರಿ ಸಾಂಕ್ಟೋರಿಯದಲ್ಲಿದೆ. ಭಾರತದಲ್ಲಿ ಆಗಿನ ಮೂರನೇ ದೊಡ್ಡ ಖಾಸಗಿ ಕಂಪನಿ ದಿ ಇಂಡಿಯನ್ ಐರನ್ ಅಂಡ್ ಸ್ಟೀಲ್ ಕಂಪನಿಯನ್ನು ೧೯೭೨ ಜುಲೈ ೧೪ರಂದು ಸರ್ಕಾರ ಸ್ವಾಧೀನಕ್ಕೆ ತೆಗೆದುಕೊಂಡಿತು. ಇದನ್ನು ೧೯೭೯ರಲ್ಲಿ SAILನ ಸಹಾಯಕ ಸಂಸ್ಥೆಯಾಗಿ ರೂಪಿಸಲಾಯಿತು ಮತ್ತು ೨೦೦೬ರಲ್ಲಿ SAIL ಜತೆ ವಿಲೀನಗೊಳಿಸಲಾಯಿತು. ಕೈಗಾರಿಕೆ ಚಟುವಟಿಕೆ ಕುರಿತ ಒಟ್ಟಾರೆ ಕುಸಿತವು ಮುಂದುವರಿದು,ಅನೇಕ ಕಾರ್ಖಾನೆಗಳು ಬಾಗಿಲು ಮುಚ್ಚಿದವು. ಭಾರತದ ಅರ್ಥವ್ಯವಸ್ಥೆ ೧೯೯೧ರಲ್ಲಿ ಆರಂಭವಾದಾಗಿನಿಂದ ಉಂಟಾದ ಕೈಗಾರಿಕೆ ಬೆಳವಣಿಗೆಯು ಅಸನ್ಸೋಲ್ ಕೈಗಾರಿಕೆ ಪ್ರದೇಶದ ಮೇಲೆ ತನ್ನ ಪರಿಣಾಮವನ್ನು ಇನ್ನೂ ಬೀರಬೇಕಿತ್ತು. ಆದಾಗ್ಯೂ,ಚಿತ್ತರಂಜನ್ ಲೋಕೋಮೋಟಿವ್ ವರ್ಕ್ಸ್‌ನ ಮುಂದುವರಿದ ಅಭಿವೃದ್ಧಿಯೊಂದಿಗೆ,ಪೂರ್ವ ಕಲ್ಲಿದ್ದಲುಕ್ಷೇತ್ರಗಳಲ್ಲಿನ ಚಟುವಟಿಕೆಗಳು ಹಾಗೂ SAILನ IISCO ಉಕ್ಕಿನ ಘಟಕದ ಆಧುನೀಕರಣಕ್ಕೆ ಪ್ರಮುಖ ಬಂಡವಾಳ ಒದಗಿಸುವುದಕ್ಕೆ ಅನುಮತಿ ಸಿಕ್ಕಿದ್ದರಿಂದ ಈ ಪ್ರದೇಶವು ಪುನಃ ಏಳಿಗೆಯಾಗುತ್ತಿದೆ.

ಕಲ್ಲಿದ್ದಲು ರಾಷ್ಟ್ರ[ಬದಲಾಯಿಸಿ]

ಅಸನ್ಸೋಲ್ ಕಲ್ಲಿದ್ದಲು ರಾಷ್ಟ್ರದ ಹೃದಯಭಾಗದಲ್ಲಿದೆ. ರಾಣಿಗುಂಜ್ ಕಲ್ಲಿದ್ದಲುಕ್ಷೇತ್ರ ೧೫೩೦ km² ಪ್ರದೇಶದ ವ್ಯಾಪ್ತಿಯನ್ನು ಹೊಂದಿದೆ. ಇವು ಪಶ್ಚಿಮಬಂಗಾಳದ ನಾಲ್ಕು ಜಿಲ್ಲೆಗಳಾದ-ವರ್ಧಮಾನ್, ವೀರ್‌ಬೂಮ್,ಬಂಕುರಾ ಮತ್ತು ಪುರುಲಿಯದಲ್ಲಿ ಹರಡಿದ್ದು,ಜಾರ್ಖಂಡ್‌ನ ಧನಬಾದ್ ಜಿಲ್ಲೆಯ ಭಾಗವಾಗಿದ್ದರೂ(ಜಾರಿಯ ಕಲ್ಲಿದ್ದಲುಕ್ಷೇತ್ರಗಳು ಕೂಡ ಆ ಜಿಲ್ಲೆಯಲ್ಲಿದೆ)ರಾಣಿಗುಂಜ್ ಕಲ್ಲಿದ್ದಲುಕ್ಷೇತ್ರಗಳ ಹೃದಯಭಾಗವು ಅಸನ್ಸೋಲ್ ಪ್ರದೇಶದಲ್ಲಿದೆ. ಅಸನ್ಸೋಲ್ ಸುತ್ತಮುತ್ತ ಪಾಂಡವೇಶ್ವರ್ ,ಕಾಜೋರಾ ,ಜಾಂಜ್ರಾ ಬಂಕೋಲಾ , ಕೆಂಡಾ ,ಸೋನೆಪುರ್ ,ಕುನುಸ್ಟೋರಿಯ ,ಸತ್‌ಗ್ರಾಂ ,ಸ್ರೀಪುರ ಸೋಡೆಪುರ ಮತ್ತು ಸಲಾನ್ಪುರ ಪ್ರಮುಖ ಕಲ್ಲಿದ್ದಲು ಪ್ರದೇಶಗಳಾಗಿವೆ. ವೀರ್‌ಭೂಮ್ ಜಿಲ್ಲೆಯ ಅಜಯ್ ನದಿಗೆ ಉತ್ತರದಲ್ಲಿರುವ ಕಾಸ್ಟಾ ಕಲ್ಲಿದ್ದಲುಕ್ಷೇತ್ರಗಳು,ದಾಮೋದರ್‌ ನದಿಬದಿಯಲ್ಲಿ ಕ್ರಮವಾಗಿ ಬಂಕುರಾ ಮತ್ತು ಪುರುಲಿಯ ಜಿಲ್ಲೆಯಲ್ಲಿರುವ ಮೈಜಾ ಮತ್ತು ಪರ್ಬೇಲಿಯ, ಧನಬಾದ್ ಜಿಲ್ಲೆಯಲ್ಲಿ ಬರಾಕರ್ ನದಿಬದಿಯ ಮುಗ್ಮಾ ಅಸನ್ಸೋಲ್ ಮಗ್ಗುಲಿನಲ್ಲಿವೆ. ದುರ್ಗಾಪುರ ಉಪವಿಭಾಗದಲ್ಲಿ ಕೇವಲ ಕಲ್ಲಿದ್ದಲುಕ್ಷೇತ್ರಗಳ ಸಣ್ಣ ಭಾಗಗಳಿವೆ. ಭಾರತದಲ್ಲಿ ಕಲ್ಲಿದ್ದಲನ್ನು ರಾಣಿಗುಂಜ್‌ ಬಳಿ ನಾರಾಯಣಕುರಿಯಲ್ಲಿ ಮೊದಲಿಗೆ ಗಣಿಗಾರಿಕೆ ಮೂಲಕ ತೆಗೆಯಲಾಯಿತು. ಸೀತಾರಾಂಪುರ್ ಪ್ರಥಮ ಗಣಿ ರಕ್ಷಣೆ ಕೇಂದ್ರದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಗಣಿಗಾರಿಕೆ ಸುರಕ್ಷತೆ ಮತ್ತು ಸ್ಫೋಟಕ ತಯಾರಿಕೆ ಘಟಕ ಈಗ ಕಾರ್ಯಸ್ಥಗಿತಗೊಳಿಸಿದ್ದರೂ,ಮುಂಚಿನ ಎರಡು ಈಗಲೂ ಕಾರ್ಯನಿರ್ವಹಿಸುತ್ತಿವೆ. ಈ ಪ್ರದೇಶವು ಕಲ್ಲಿದ್ದಲು ಪದರಗಳ ಮೇಲೆ ಕುಳಿತಿದೆ. ಪಶ್ಚಿಮಬಂಗಾಳದಲ್ಲಿ ಕಲ್ಲಿದ್ದಲು ನಿಕ್ಷೇಪಗಳು(ಬಹುತೇಕ ಅಸನ್ಸೋಲ್‌ನಲ್ಲಿ)೨೨.೬೨ ಶತಕೋಟಿ ಟನ್‌ಗಳೆಂದು ಅಂದಾಜು ಮಾಡಲಾಗಿದೆ. ECL ನಲ್ಲಿ ಕಾರ್ಯನಿರ್ವಹಿಸುತ್ತಿರುವ ೧೦೭ ಗಣಿಗಳಿದ್ದು,ಅವುಗಳಲ್ಲಿ ಬಹುತೇಕ ಅಸನ್ಸೋಲ್‌ನಲ್ಲಿದೆ. ಕೋಕ್ ರಹಿತ ಶ್ರೇಷ್ಟ ದರ್ಜೆಯ ಕಲ್ಲಿದ್ದಲನ್ನು ಈ ಪ್ರದೇಶದಿಂದ ಗಣಿಗಾರಿಕೆ ಮಾಡಲಾಗುತ್ತಿದೆ. ಈ ಪ್ರದೇಶದಲ್ಲಿ ಸುಮಾರು ೨ ಶತಮಾನಗಳಿಂದ ಕಲ್ಲಿದ್ದಲು ಗಣಿಗಾರಿಕೆ ನಡೆಯುವುದರೊಂದಿಗೆ,ಮೇಲ್ಪದರಲ್ಲಿರುವ ಬಹುತೇಕ ಕಲ್ಲಿದ್ದಲು ಮುಗಿದಿದ್ದು,ಭೂಗರ್ಭ ಗಣಿಗಾರಿಕೆಯು ಆಳವಾದ ಪದರುಗಳಿಗೆ ವಿಸ್ತರಿಸಿದೆ. ಆದಾಗ್ಯೂ,ಭೂಗರ್ಭದ ಗಣಿಗಳ ಮೇಲ್ಛಾವಣಿಗೆ ಆಸರೆಯಾಗಲು ಉಳಿಸಿದ್ದ,ಕಲ್ಲಿದ್ದಲಿನ ಕಂಬಗಳು ಮತ್ತು ಗೋಡೆಗಳಲ್ಲಿ ಗಣನೀಯ ಪ್ರಮಾಣದ ಕಲ್ಲಿದ್ದಲು ಲಭ್ಯವಿದೆ. ಮೆಲ್ಪದರಲ್ಲಿರುವ ಕಲ್ಲಿದ್ದಲು ಅವಶೇಷಗಳನ್ನು ಓಪನ್ ಕ್ಯಾಸ್ಟ್(ಹಳ್ಳಗಳನ್ನು ತೋಡುವುದು) ವಿಧಾನಗಳ ಮೂಲಕ ಗಣಿಗಾರಿಕೆ ನಡೆಸಬಹುದು. ಭಾರಿ ಗಾತ್ರದ ಮಣ್ಣು ತೆಗೆಯುವ ಉಪಕರಣದ ಬಳಕೆಯಿಂದ ದೊಡ್ಡ ಓಪನ್ ಕ್ಯಾಸ್ಟ್ ಗಣಿಗಳ ಬೆಳವಣಿಗೆ ದಾರಿಯಾಯಿತು. ECL ೨೦೦೪-೨೦೦೫ರಲ್ಲಿ ಒಟ್ಟು ಕಲ್ಲಿದ್ದಲು ಉತ್ಪಾದನೆಯು ೨೭.೨೫ ದಶಲಕ್ಷ ಟನ್‌ಗಳಾಗಿದ್ದು,೨೦೧೧-೧೨ರಲ್ಲಿ ೪೬ ದಶಲಕ್ಷ ಟನ್‌ಗಳಿಗೆ ಏರುವುದೆಂದು ನಿರೀಕ್ಷಿಸಲಾಗಿದೆ. ಇವುಗಳ ಪೈಕಿ ೩೨.೮೪ ದಶಲಕ್ಷ ಟನ್‌ ಕಲ್ಲಿದ್ದಲನ್ನು ಓಪನ್ ಕ್ಯಾಸ್ಟ್ ಗಣಿಗಳಿಂದ ನಿರೀಕ್ಷಿಸಲಾಗಿದೆ. ಈ ಪ್ರದೇಶದ ಮುಖ್ಯ ಯೋಜನೆಯಾದ ಸೋನೆಪುರ್ ಬಾಜಾರಿ ಓಪನ್ ಕ್ಯಾಸ್ಟ್ ಯೋಜನೆಯ ವಾರ್ಷಿಕ ಉತ್ಪಾದನೆಯನ್ನು ೨೦೦೪-೦೫ರಲ್ಲಿ ೩ ದಶಲಕ್ಷ ಟನ್‌ಗಳ ಮಟ್ಟದಿಂದ ೨೦೧೧-೧೨ರಲ್ಲಿ ೮ ದಶಲಕ್ಷ ಟನ್‌ಗಳಿಗೆ ಏರಿಸಲು ಉದ್ದೇಶಿಸಲಾಗಿದೆ. ಭೂಗರ್ಭದ ಕಲ್ಲಿದ್ದಲು ಗಣಿಗಾರಿಕೆಯು ನೆಲಮಟ್ಟದ ಕುಸಿತದ ಸಮಸ್ಯೆಯನ್ನು ಕೂಡ ಜತೆಗೆ ಉಂಟುಮಾಡಿದೆ. ಕಾನೂನಿನ ಪ್ರಕಾರ,ಕಲ್ಲಿದ್ದಲ ನಿಕ್ಷೇಪವನ್ನು ಭೂಗರ್ಭ ಗಣಿಗಾರಿಕೆಯಿಂದ ತೆಗೆದ ನಂತರ ಅದನ್ನು ಮಣ್ಣಿನಿಂದ ಮುಚ್ಚಬೇಕಾಗುತ್ತದೆ. ಆದಾಗ್ಯೂ,ಮುಂಚಿನ ದಿನಗಳಲ್ಲಿ ಕಾನೂನುಗಳು ಇರಲಿಲ್ಲ.ಅದು ಇದ್ದಿದ್ದರೂ ಕೂಡ ಖಾಸಗಿ ಗಣಿ ಮಾಲೀಕರು ದಶಕಗಳ ಕಾಲ ಇವನ್ನು ಉಲ್ಲಂಘಿಸಿ ನೆಲದ ಅಡಿಯಲ್ಲಿ ದೊಡ್ಡ ಅಂತರಗಳನ್ನು ಹಾಗೇ ಉಳಿಸಿದ್ದಾರೆ. ಈ ಪ್ರದೇಶದ ಸ್ಥಳಗಳಲ್ಲಿ ನೆಲವು ಕುಸಿದು,ವ್ಯಾಪಕ ಹಾನಿ ಉಂಟುಮಾಡಿದೆ. ಇಸವಿ ೧೯೫೨ರಲ್ಲಿ,ಧೆಮೊ ಮೇನ್ ಕಲ್ಲಿದ್ದಲುಗಣಿಯಲ್ಲಿ ಮೇಲ್ಛಾವಣಿ ಕುಸಿದು ೧೨ ಜನರು ಸತ್ತಿದ್ದರು. ಇಸವಿ ೧೯೫೪ರಲ್ಲಿ ರಾಣಿಗುಂಜ್ ಬಳಿಯ ನ್ಯೂಟನ್ ಚಿಕ್ಲಿ ಯಲ್ಲಿ ನೀರಿನಲ್ಲಿ ಮುಳುಗಡೆಯಾದ ಫಲವಾಗಿ ೬೩ ಜನರು ಅಸುನೀಗಿದ್ದರು. ೧೯೫೬ರಲ್ಲಿ ನೀರಿನಲ್ಲಿ ಮುಳುಗಿದ್ದರಿಂದ ಬಾರೊ ಧೆಮೊ ಕಲ್ಲಿದ್ದಲು ಗಣಿಯಲ್ಲಿ ೨೮ ಜನರು ಅಸುನೀಗಿದ್ದರು. ಅನಿಲ ಮಿಶ್ರಣಗಳ ಸ್ಫೋಟದಿಂದ ೧೯೫೮ರಲ್ಲಿ ಚಿನಕುರಿ ಯಲ್ಲಿ ೧೭೫ ಜನರು ಅಸುನೀಗಿದ್ದರು. ಅನಿಲಗಳಿಂದ ಬೆಂಕಿ/ಉಸಿರುಗಟ್ಟುವಿಕೆ ಫಲವಾಗಿ ಜಮುರಿಯ ಬಳಿ ನ್ಯೂ ಕೆಂಡಾ ದಲ್ಲಿ ೧೯೯೪ರಲ್ಲಿ ೫೫ ಜನರು ಅಸುನೀಗಿದ್ದರು.[೪] ಬಾರೊ ದೆಮೊ ಕಲ್ಲಿದ್ದಲುಗಣಿ ಅಪಘಾತದಲ್ಲಿ ಜಲಾವೃತವಾದ ಗಣಿಯಿಂದ ಅನೇಕ ಜನರ ಪ್ರಾಣ ಉಳಿಸಿದ ಘಟನೆಯು ಬೆಂಗಾಲಿಯಲ್ಲಿ ಉತ್ಪಲ್ ದತ್ತ ನಿರ್ದೇಶನದ ಅಂಗಾರ್ (೧೯೫೯)ನಾಟಕ ನಿರ್ಮಾಣಕ್ಕೆ ಸ್ಫೂರ್ತಿ ಒದಗಿಸಿತು. ತಪಾಶ್ ಸೇನ್ ಅವರ ಬೆಳಕಿನ ವ್ಯವಸ್ಥೆಯಲ್ಲಿ ಕೋಲ್ಕತಾದಲ್ಲಿ ವೇದಿಕೆಯ ಮೇಲೆ ಗಣಿಯೊಂದರಲ್ಲಿ ಪ್ರವಾಹ ಉಕ್ಕುವ ದೃಶ್ಯವನ್ನು ಸೃಷ್ಟಿಮಾಡಿದ್ದು ಗಮನಾರ್ಹವೆನಿಸಿದೆ.

ಆಡಳಿತ ನಿರ್ವಹಣೆ[ಬದಲಾಯಿಸಿ]

ಬರ್ಧಮಾನ್ ಮುಸ್ಲಿಂ ಆಡಳಿತಗಾರರಿಗೆ ಮುಖ್ಯ ಆಡಳಿತ ಕೇಂದ್ರವಾಗಿತ್ತು ಮತ್ತು ಉಪವಿಭಾಗವು ಈ ಪ್ರದೇಶದಲ್ಲಿ ಮುಸ್ಲಿಂ ಸಾಮ್ರಾಜ್ಯಗಳ ಭಾಗವಾಗಿತ್ತು. ಇದು ನಂತರ ಮುಗಲರ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸುವ ಬರ್ಧಮಾನ್ ರಾಜ್ ಭಾಗವಾಯಿತು. ಆಗಿನ ಸುಬೆ ಬಂಗಾಳದ ನವಾಬ್ ಮಿರ್ ಕಾಸೀಂ ಬರ್ದಮಾನ್‌ನನ್ನು ಮೆಡಿನಾಪುರ್ ಮತ್ತು ಚಿತ್ತಗಾಂಗ್ ಜತೆ ಈಸ್ಟ್ ಇಂಡಿಯ ಕಂಪೆನಿಗೆ ೧೭೬೦ರಲ್ಲಿ ಒಪ್ಪಿಸಿದಾಗ(ಪ್ಲಾಸಿ ಕದನದ ಮೂರು ವರ್ಷಗಳ ನಂತರ)ಈ ಪ್ರದೇಶಲ್ಲಿ ಮಹತ್ವದ ಸಂಗತಿಗಳಿಂದ ಕೂಡಿದ ಅಧ್ಯಾಯಕ್ಕೆ ನಾಂದಿಯಾಯಿತು. ಅಲ್ಲಿಯವರೆಗೆ ಈ ಪ್ರದೇಶವು ಅರಣ್ಯ ಅಥವಾ ಕಾಡುಮೇಡು ಪ್ರದೇಶವಾಗಿದ್ದು,ದೂರದ ಅಂತರಗಳಲ್ಲಿ ಸಣ್ಣ ವಾಸಸ್ಥಳಗಳಿಂದ ಹರಡಿತ್ತು. ಗ್ರಾಮೀಣಪ್ರದೇಶವು ಕಾನೂನುಭಂಜಕರ ಹಾವಳಿಗೆ ತುತ್ತಾಗಿತ್ತು. ಬ್ರಿಟಿಷರ ಆಗಮನದೊಂದಿಗೆ ಆಡಳಿತಾತ್ಮಕ ಬದಲಾವಣೆಗಳು ಮೂಡಲು ಆರಂಭವಾಯಿತು. ಬ್ರಿಟಿಷ್ ಪೋಷಣೆಯಲ್ಲಿ ಬರ್ಧಮಾನ್ ಆಡಳಿತದ ಕಾರ್ಯನಿರ್ವಹಣೆ ಮುಂದುವರಿಯಿತು ಹಾಗೂ ಬ್ರಿಟಿಷ್ ಆಡಳಿತದ ಅಗತ್ಯಗಳಿಗೆ ಹೊಂದುವಂತೆ ಬದಲಾವಣೆಗಳನ್ನು ಮಾಡಲಾಯಿತು. ಒಂದು ಪ್ರಮುಖ ಬದಲಾವಣೆಯು ಪರಗಣದಿಂದ(ಆಡಳಿತಾತ್ಮಕ ವಿಭಾಗ)ದಿಂದ ಠಾಣಾ(ಪೊಲೀಸ್ ಠಾಣೆ) ಬಂಕುರಾ ಜಿಲ್ಲೆಯು ೧೮೩೭ರಲ್ಲಿ ರಚನೆಯಾದಾಗ,ಅಸನ್ಸೋಲ್-ರಾಣಿಗುಂಜ್ ಪ್ರದೇಶವು ಬಂಕುರಾ ಜಿಲ್ಲೆಯ ಭಾಗವಾಗಿತ್ತು. ೧೮೪೭ರಲ್ಲಿ ರಾಣಿಗುಂಜ್ ಉಪವಿಭಾಗವನ್ನು ರಾಣಿಗುಂಜ್,ಕಾಂಕ್ಸಾ ಮತ್ತು ನಿಯಾಮಟ್ಪುರದ ಮೂರು ಪೊಲೀಸ್ ಠಾಣೆಗಳೊಂದಿಗೆ ರಚಿಸಲಾಯಿತು ಹಾಗೂ ಇದನ್ನು ಬರ್ಧಮಾನ್ ಭಾಗವಾಗಿ ಮಾಡಲಾಯಿತು. ೧೯೦೬ರಲ್ಲಿ ಉಪವಿಭಾಗೀಯ ಮುಖ್ಯಕೇಂದ್ರವನ್ನು ಅಸನ್ಸೋಲ್‌ಗೆ ಸ್ಥಳಾಂತರಿಸಲಾಯಿತು ಮತ್ತು ಅದಕ್ಕೆ ಅನುಗುಣವಾಗಿ ಉಪವಿಭಾಗಕ್ಕೆ ಮರುನಾಮಕರಣ ಮಾಡಲಾಯಿತು. ಇಸವಿ ೧೯೧೦ರಲ್ಲಿ,ಅಸನ್ಸೋಲ್ ಉಪವಿಭಾಗದ ಪೊಲೀಸ್ ಠಾಣೆಗಳು ಅಸನ್ಸೋಲ್,ರಾಣಿಗುಂಜ್,ಕಾಂಕ್ಸಾ,ಫರೀದ್‌ಪುರ್ ಮತ್ತು ಬಾರಕ್‌ಪುರ್. ಇಸವಿ ೨೦೦೬ರಲ್ಲಿ ಅಸನ್ಸೋಲ್ ಉಪವಿಭಾಗವು ಕೆಳಗಿನ ಪೊಲೀಸ್ ಠಾಣೆಗಳನ್ನು ಹೊಂದಿತ್ತು:ಚಿತ್ತರಂಜನ್,ಸಲಾನ್‌ಪುರ್,ಬಾರಾಬನಿ, ಅನನ್ಸೋಲ್(ಉತ್ತರ),ಅಸನ್ಸೋಲ್(ದಕ್ಷಿಣ), ರಾಣಿಗುಂಜ್,ಜಮುರಿಯ,ಹಿರಾಪುರ್ ಮತ್ತು ಕುಲ್ಟಿ. ಇಸವಿ ೧೯೬೮ರಲ್ಲಿ ದುರ್ಗಾಪುರ್ ಉಪವಿಭಾಗವನ್ನು ಅಸನ್ಸೋಲ್ ಉಪವಿಭಾಗದಿಂದ ರೂಪಿಸಲಾಯಿತು. ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ ಅಸನ್ಸೋಲ್ ಪೊಲೀಸ್ ಆಡಳಿತದ ಸಂಪೂರ್ಣ ಉಸ್ತುವಾರಿ ವಹಿಸಿದರು. ಅವರಿಗೆ ನೆರವಾದವರು Dy. S.P (ಮುಖ್ಯಕಚೇರಿ), Dy.S.P (SR) and Dy.S.P, DEB ಅಸನ್ಸೋಲ್. ಎವಲಿನ್ ಲಾಡ್ಜ್‌ನಲ್ಲಿ ಪೊಲೀಸ್ ಕಚೇರಿಯಿದ್ದರೂ ನಗರದ ಹೃದಯಭಾಗದಲ್ಲಿರುವ ಅಸನ್ಸೋಲ್ ಪೊಲೀಸ್ ಲೈನ್ಸ್ ಅಸನ್ಸೋಲ್ ಪೊಲೀಸ್‌ನ ಮುಖ್ಯಕಾರ್ಯಾಲಯವಾಗಿದೆ. ಅನನ್ಸೋಲ್ ಸಶಸ್ತ್ರ ಪೊಲೀಸ್ ಇನ್‌ಸ್ಪೆಕ್ಟರ್(API)ಜಿಲ್ಲಾ ಸಶಸ್ತ್ರ ಪೊಲೀಸ್‌ನ ಉಸ್ತುವಾರಿ ವಹಿಸಿದ್ದು,ಅಸನ್ಸೋಲ್‌ನಲ್ಲಿ ನಿಯೋಜಿತರಾಗಿದ್ದಾರೆ. ರಿಸರ್ವ್ ಕಚೇರಿಯು ಪೊಲೀಸ್ ಸಿಬ್ಬಂದಿಯ ವ್ಯವಸ್ಥೆ,ರಜಾ,ವರ್ಗಾವಣೆ ಬಡ್ತಿ ವಿಷಯಗಳ ಉಸ್ತುವಾರಿ ವಹಿಸುತ್ತದೆ. ಇದಿಷ್ಟೇ ಅಲ್ಲದೇ ಜಿಲ್ಲಾ ಗುಪ್ತಚರ ಅಧಿಕಾರಿ-II ಗುಪ್ತಚರ ಸಂಬಂಧಿತ ವಿಷಯಗಳನ್ನು ನಿಭಾಯಿಸುತ್ತಾರೆ. ನೊಂದಾಯಿತ ಸಂಘಟನೆಗಳಾದ ದಿಶಾ ಜಾನಕಾಲಯನ್ ಕೇಂದ್ರ,ಲಚ್ಚಿಪುರ್ ಮತ್ತು ಫೈಜೆಯಾಮ್ ಸಮಿತಿ,ರೈಲ್‌ಪುರ್ ಹಾಗೂ ಉಡಿಚಿ ಸಹಕಾರ ಸಂಘ ಮತ್ತು ನಿಘಾದಲ್ಲಿ ಗುಂಜನ್ ಪರಿಸರ ಪಾರ್ಕ್ ಪರಿಚಯಿಸುವ ಮೂಲಕಅಸನ್ಸೋಲ್ ಉಪವಿಭಾಗೀಯ ಪೊಲೀಸ್ ಆದ್ಯಪ್ರವರ್ತಕ ಕೆಲಸಗಳನ್ನು ಮಾಡಿದೆ. ಈ ಪರಿಕಲ್ಪನೆಯನ್ನು ಆಗಿನ ಅಸನ್ಸೋಲ್ ಹೆಚ್ಚುವರಿ s.p ಸೌಮನ್ ಮಿತ್ರ IPS ಪರಿಚಯಿಸಿದರು. ಅಸನ್ಸೋಲ್ ಒಂದು ನಗರಪಾಲಿಕೆಯಾಗಿದ್ದು,ಅಸನ್ಸೋಲ್ ಪುರಸಭೆಯು ಆಡಳಿತವನ್ನು ನಿರ್ವಹಿಸುತ್ತದೆ. ಅಸನ್ಸೋಲ್ ನಾಗರಿಕ ಅಗತ್ಯಗಳ ಬಗ್ಗೆ ಮೇಲ್ವಿಚಾರಣೆ ವಹಿಸಲು೧೮೫೦ಲ್ಲಿ ಕೇಂದ್ರ ಸಮಿತಿಯೊಂದನ್ನು ರಚಿಸಲಾಯಿತು. ಪುರಸಭೆಯ ಆಡಳಿತವನ್ನು ೧೮೮೫ರಲ್ಲಿ ಅನುಮೋದಿಸಲಾಗಿದ್ದರೂ,ಅದು ೧೮೯೬ರಿಂದ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿತು. ೧೯೯೬ರಲ್ಲಿ ಪಾಲಿಕೆಯ ಸ್ಥಾನಮಾನಕ್ಕೆ ಅದನ್ನು ಮೇಲ್ದರ್ಜೆಗೆ ಏರಿಸಲಾಯಿತು.

ರಾಜಕಾರಣ[ಬದಲಾಯಿಸಿ]

ಇಸವಿ ೨೦೦೬ರ ರಾಜ್ಯ ವಿಧಾನಸಬೆ ಚುನಾವಣೆಗಳಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿ AITCಯ ಕಲ್ಯಾಣ್ ಬ್ಯಾನರ್ಜಿ ಅವರನ್ನು ಸೋಲಿಸಿ CPI (M)ನ ಪ್ರಥ್ವಿ ರಂಜನ್ ಮುಖರ್ಜಿ ಅಸನ್ಸೋಲ್ ಸ್ಥಾನವನ್ನು ಗೆದ್ದುಕೊಂಡರು. ೧೯೯೬ರಲ್ಲಿ INC ಯ ತಪಸ್ ಬ್ಯಾನರ್ಜಿ ಗೌತಮ್ ರಾಯ್ ಚೌಧರಿ ಅವರನ್ನು ಸೋಲಿಸಿದರು. ೧೯೯೧ರಲ್ಲಿ ಗೌತಮ್ ರಾಯ್ ಚೌಧರಿ BJPಯ ಭಜರಂಗಿ ಗುಪ್ತ ಅವರನ್ನು ಸೋಲಿಸಿ ಸ್ಥಾನವನ್ನು ಗೆದ್ದುಕೊಂಡರು.INCಯ ಪ್ರಬುದ್ಧ ಲಾಹಾ ೧೯೮೭ರಲ್ಲಿ ಗೌತಮ್ ರಾಯ್ ಚೌಧರಿ ಅವರನ್ನು ಸೋಲಿಸಿದರು. ೧೯೮೨ರಲ್ಲಿ,CPI (M)ನ ಬಿಜೋಯ್ ಪಾಲ್ ತನ್ನ ಸಮೀಪದ ಪ್ರತಿಸ್ಪರ್ಧಿ INCಯ ಸುಕುಮಾರ್ ಬ್ಯಾನರ್ಜಿ ಅವರನ್ನು ಸೋಲಿಸಿದರು. ೧೯೭೭ರಲ್ಲಿ CPI (M)ನ ಹರ್ಧನ್ ರಾಯ್ INCಯ ಗೋಪಿಕಾ ರಂಜನ್ ಮಿತ್ರಾ ಅವರನ್ನು ಸೋಲಿಸಿದರು.[೫] ೧೯೭೨ರಲ್ಲಿ CPIನ ನಿರಂಜನ್ ದಿಹಿದಾರ್ ಆ ಸ್ಥಾನವನ್ನು ಗೆದ್ದುಕೊಂಡರು. ಇಸವಿ ೧೯೬೯ ಮತ್ತು ೧೯೭೧ರಲ್ಲಿ CPI (M)ನ ಡಾ.ಲೋಕೇಶ್ ಘೋಷ್ ಸ್ಥಾನವನ್ನು ಗೆದ್ದರು. INCಯ ಗೋಪಿಕಾ ರಂಜನ್ ಮಿತ್ರಾ ೧೯೬೭ರಲ್ಲಿ ಈ ಸ್ಥಾನವನ್ನು ಗೆದ್ದರು. CPIನ ಬಿಜಯ್ ಪಾಲ್ ೧೯೬೨ರಲ್ಲಿ ಸ್ಥಾನವನ್ನು ಗೆದ್ದರು. ಇಸವಿ ೧೯೫೭ರಲ್ಲಿ INCಯ ಶಿಬದಾಸ್ ಘಾಟಕ್ ಈ ಸ್ಥಾನವನ್ನು ಗೆದ್ದುಕೊಂಡರು.೧೯೫೨ರಲ್ಲಿ ನಡೆದ ಸ್ವತಂತ್ರಭಾರತದ ಪ್ರಥಮ ಚುನಾವಣೆಯಲ್ಲಿ,ಫಾರ್ವರ್ಡ್ ಬ್ಲಾಕ್‌ನ ಅತೀಂದ್ರ ಕುಮಾರ್ ಬೋಸ್ INCಯ ಯೋಗೇಂದ್ರನಾಥ್ ರಾಯ್ ಅವರನ್ನು ಸೋಲಿಸಿ ಸ್ಥಾನವನ್ನು ಗೆದ್ದುಕೊಂಡರು.[೬] ಅಸನ್ಸೋಲ್(ಲೋಕಸಭಾ ಕ್ಷೇತ್ರ)ವು ಕೆಳಕಂಡ ವಿಧಾನಸಭೆ ವಿಭಾಗಗಳನ್ನು ಒಳಗೊಂಡಿದೆ: ಅಸನ್ಸೋಲ್,ಹಿರಾಪುರ್,ಕುಲ್ಟಿ,ಬಾರಾಬನಿ,ರಾನಿಗುಂಜ್,ಜಮುರಿಯ ಮತ್ತು ಉಕ್ರಾ.[೭] ಪ್ರಥಮ ಲೋಕಸಭೆಗೆ ೧೯೫೧ರಲ್ಲಿ ನಡೆದ ಚುನಾವಣೆಯಲ್ಲಿ ಅಸನ್ಸೋಲ್ ಬುರ್ಡ್ವಾನ್ ಕ್ಷೇತ್ರದ ಭಾಗವಾಗಿತ್ತು. ಸಾಮಾನ್ಯ ಸ್ಥಾನವನ್ನು ಅಮಿತವ ಘೋಷ್ ಗೆದ್ದುಕೊಂಡರೆ,ಪರಿಶಿಷ್ಟ ಜಾತಿಗೆ ಮೀಸಲಿಟ್ಟ ಸ್ಥಾನವನ್ನು ಮೊನೊ ಮೋಹನ್ ದಾಸ್ ಗೆದ್ದುಕೊಂಡರು. ಎರಡನೇ ಲೋಕಸಭೆಗೆ ೧೯೫೭ರಲ್ಲಿ ನಡೆದ ಚುನಾವಣೆಯಲ್ಲಿ, ಅಸನ್ಸೋಲ್ ಕ್ಷೇತ್ರವು ಪ್ರಥಮ ಬಾರಿಗೆ ರಚನೆಯಾಯಿತು. ಮತ್ತೊಮ್ಮೆ ಗೆಲುವು ಗಳಿಸಿದವರು ಅತುಲ್ಯಾ ಘೋಷ್ ಮತ್ತು ಮೊನೊ ಮೋಹನ್ ದಾಸ್. ಮೂರನೇ ಲೋಕಸಭೆಗೆ ನಡೆದ ೧೯೬೨ನೇ ಚುನಾವಣೆಯಲ್ಲಿ,ಅತುಲ್ಯಾ ಘೋಷ್ ಅಸನ್ಸೋಲ್ ಕ್ಷೇತ್ರದಲ್ಲಿ ಗೆಲುವು ಗಳಿಸಿದರು. ನಾಲ್ಕನೇ ಲೋಕಸಭೆಗೆ ನಡೆದ ೧೯೬೭ನೇ ಚುನಾವಣೆಯಲ್ಲಿ,ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮತ್ತು ಕೋಶಾಧಿಕಾರಿ ಅತುಲ್ಯಾ ಘೋಷ್ ಬಂಕುರಾಗೆ ಸ್ಥಳಾಂತರಗೊಂಡರು. ಅಲ್ಲಿ CPIನ J.M.ಬಿಸ್ವಾಸ್‌ಗೆ ಐತಿಹಾಸಿಕ ಕಾಳಗವೆಂದು ಬಣ್ಣಿಸಲಾದ ಚುನಾವಣೆಯಲ್ಲಿ ಸೋಲಪ್ಪಿದರು. ಸಂಯುಕ್ತ ಸಮಾಜವಾದಿ ಪಕ್ಷದ ದೇವೆನ್ ಸೆನ್ ಅಸನ್ಸೋಲ್ ಸ್ಥಾನವನ್ನು ಗೆದ್ದುಕೊಂಡರು. CPI (M)ನ ರಾಬಿನ್ ಸೆನ್ ೧೯೬೧ ಮತ್ತು ೧೯೭೭ರಲ್ಲಿ ಅಸನ್ಸೋಲ್ ಸ್ಥಾನವನ್ನು ಗೆದ್ದುಕೊಂಡರು. ರಾಜ್ಯ ಕಾಂಗ್ರೆಸ್ ನಾಯಕ ಆನಂದ ಗೋಪಾಲ್ ಮುಖರ್ಜಿ ೧೯೮೦ರಲ್ಲಿ ಆ ಸ್ಥಾನವನ್ನು ಪುನಃ ಕಸಿದುಕೊಂಡರು ಮತ್ತು ೧೯೮೪ರಲ್ಲಿ ೮ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಅದನ್ನು ಉಳಿಸಿಕೊಂಡರು. ಇದಾದನಂತರ,ಇದು CPI(M)ನ ಸ್ಥಿರವಾದ ಸ್ಥಾನವಾಯಿತು. ಹರದನ್ ರಾಯ್ ೧೯೮೯, ೧೯೯೧ and ೧೯೯೪ರಲ್ಲಿ ಆ ಸ್ಥಾನವನ್ನು ಗೆದ್ದುಕೊಂಡರು. ಬಿಕಾಶ್ ಚೌಧರಿ ೧೯೯೮ ಮತ್ತು ೨೦೦೪ರಲ್ಲಿ ಆ ಸ್ಥಾನವನ್ನು ಗೆದ್ದುಕೊಂಡರು. ಅಧಿಕಾರಸ್ಥರ ಮರಣದ ನಂತರ,ಬಾಂಗ್ಸಾ ಗೋಪಾಲ್ ಚೌಧರಿ ೨೦೦೫ರ ಉಪಚುನಾವಣೆಯಲ್ಲಿ ಆ ಸ್ಥಾನ ಗೆದ್ದುಕೊಂಡರು.

೧೯೮೪ ಸಿಖ್ ವಿರೋಧಿ ಹತ್ಯಾಕಾಂಡ[ಬದಲಾಯಿಸಿ]

ಅಸನ್ಸೋಲ್ ೧೯೮೪ರ ಸಿಖ್ ವಿರೋಧಿ ಹತ್ಯಾಕಾಂಡಕ್ಕೆ ಬಲಿಪಶುವಾಯಿತು.ಇಂದಿರಾ ಗಾಂಧಿ ಅವರಿಗೆ ನಿಷ್ಠರಾದ ಕಾಂಗ್ರೆಸ್ ರಾಜಕಾರಣಿಗಳಿಂದ ಭುಗಿಲೆದ್ದ ಜನಾಂಗೀಯ ಸೇಡಿನಕಿಡಿ ನವದೆಹಲಿಯನ್ನು ಆವರಿಸಿ,ಸಾವಿರಾರು ಸಿಖ್ಖರು ಬಲಿಯಾದರು.

ಸಾರಿಗೆ[ಬದಲಾಯಿಸಿ]

ಗ್ರಾಂಡ್ ಟ್ರಂಕ್ ರಸ್ತೆ (NH ೨) ಉಪವಿಭಾಗದಲ್ಲಿ ಹಾದುಹೋಗುತ್ತದೆ. ಸುವರ್ಣ ಚತುಷ್ಪಥ ಯೋಜನೆಯ ಭಾಗವಾಗಿ ಹೆದ್ದಾರಿಯನ್ನು ಅಗಲಗೊಳಿಸಲಾಗಿದ್ದು, ಪ್ರತಿಯೊಂದು ದಾರಿಯಲ್ಲಿ ಎರಡು ಲೇನ್ ಸಂಚಾರಕ್ಕೆ ಈಗ ಅವಕಾಶ ನೀಡಲಾಗಿದೆ. ಅಸನ್ಸೋಲ್,ನೀಮ್‌ಪಾಟ್ಪುರ್,ಕುಲ್ಟಿ ಮತ್ತು ಬಾರಕ್‌ಪುರದ ವಾಹನದಟ್ಟಣೆಯ ಪ್ರದೇಶಗಳನ್ನು ತಪ್ಪಿಸಲು ಉಪರಸ್ತೆಯು ಹೆದ್ದಾರಿ ಸಂಚಾರಕ್ಕೆ ಅನುಕೂಲ ಕಲ್ಪಿಸುತ್ತದೆ. ಅಸನ್ಸೋಲ್‌‌ನಿಂದ ಕೋಲ್ಕತಾಗೆ ದಿನನಿತ್ಯ ಸಂಚರಿಸುವ ಬಸ್‌ಗಳಿಂದ ಹಾಗೂ ನಾನ್-ಎಸಿ(ಹವಾನಿಯಂತ್ರಣವಿಲ್ಲದ)ಸರ್ಕಾರಿ ಬಸ್‌ಗಳಿಂದ ರಸ್ತೆಮಾರ್ಗದ ಸಂಪರ್ಕ ಹೊಂದಿದೆ. ಕೋಲ್ಕತಾದಿಂದ ದೆಹಲಿವರೆಗೆ ರೈಲ್ವೆ ಹಳಿಯು ಉಪವಿಭಾಗದ ಮೂಲಕ ಹಾದುಹೋಗಿದ್ದು,ಅಸನ್ಸೋಲ್‌ಗೆ ಸ್ವಲ್ಪ ಪಶ್ಚಿಮದಲ್ಲಿರುವ ಸೀತಾರಾಂಪುರ್ ರೈಲ್ವೆ ಸಂಧಿಯಲ್ಲಿ ಮುಖ್ಯ ಮಾರ್ಗ ಮತ್ತು ಗ್ರಾಂಡ್ ಚಾರ್ಡ್ ಮಾರ್ಗವನ್ನು ಇಬ್ಭಾಗಿಸಿದೆ. ಇನ್ನೊಂದು ರೈಲ್ವೆ ಮಾರ್ಗವು ಅಸನ್ಸೋಲ್‌ಗೆ ಆಡ್ರಾ ಜತೆ ಸಂಪರ್ಕ ಕಲ್ಪಿಸುತ್ತದೆ.ನಂತರ ಪುರುಲಿಯ ಮೂಲಕ ಜಮ್‌ಶೆಡ್‌ಪುರ ಮತ್ತು ಬಂಕುರಾ ಮೂಲಕ ಖರಗ್‌ಪುರಕ್ಕೆ ಸಂಪರ್ಕಿಸುತ್ತದೆ. ಸಾಹಿಬ್‌ಗಂಜ್ ಲೂಪ್‌ನಲ್ಲಿ ಅಂಡಾಳ್ ಜತೆ ಸಯಿಂಥಿಯವನ್ನು ಶಾಖಾ ಮಾರ್ಗ ಸಂಪರ್ಕಿಸಿದೆ. ಕೋಲ್ಕತಾ ಜತೆ ಉತ್ತರ ಭಾರತವನ್ನು ಸಂಪರ್ಕಿಸುವ ಬಹುತೇಕ ಎಲ್ಲ ರೈಲುಗಳು ಅಸನ್ಸೋಲ್‌ನ್ನು ಕೋಲ್ಕತಾದೊಂದಿಗೆ ಮತ್ತು ಉತ್ತರಭಾರತದ ಜತೆ ಸಂಪರ್ಕಿಸಿದೆ. ಹೌರಾ-ಇಂಡೋರ್ ಶಿಪ್ರಾ ಎಕ್ಸ್‌ಪ್ರೆಸ್, ನಗರವನ್ನು ಇಂಡೋರ್,ಭೂಪಾಲ್ ಮತ್ತು ಇತರ ಮಧ್ಯಭಾರತದ ನಗರಗಳ ಜತೆ ಸಂಪರ್ಕಿಸುವ ಏಕೈಕ ರೈಲು ಎನಿಸಿದೆ. ಅಸನ್ಸೋಲ್‌ನ ಬರ್ನ್‌ಪುರದಲ್ಲಿ ವಿಮಾನನಿಲ್ದಾಣವೊಂದು ಪ್ರಸಕ್ತ ಅಸ್ತಿತ್ವದಲ್ಲಿದೆ. ಇನ್ನೊಂದು ವಿಮಾನನಿಲ್ದಾಣವನ್ನು ಮುಂದಿನ ದಶಕದಲ್ಲಿ ಅಸನ್ಸೋಲ್ ಬಳಿಯ ಅಂಡಾಲ್‌ನಲ್ಲಿ ನಿರ್ಮಿಸಲಾಗುವುದು.

ಜನಸಂಖ್ಯಾಶಾಸ್ತ್ರ[ಬದಲಾಯಿಸಿ]

೨೦೦೧ರಲ್ಲಿ ಭಾರತದ ಜನಗಣತಿಯಲ್ಲಿ,[೮] ಅಸನ್ಸೋಲ್ ೧,೦೬೭,೩೬೯ ಜನಸಂಖ್ಯೆಯನ್ನು ಹೊಂದಿದೆ. ಜನಸಂಖ್ಯೆಯಲ್ಲಿ ಪುರುಷರು ೫೧% ಮತ್ತು ಮಹಿಳೆಯರು ೪೭% ರಷ್ಟಿದ್ದಾರೆ. ಅಸನ್ಸೋಲ್ ಸರಾಸರಿ ೭೩% ಸಾಕ್ಷರತೆ ಪ್ರಮಾಣವನ್ನು ಹೊಂದಿದೆ. ಇದು ರಾಷ್ಟ್ರೀಯ ಸರಾಸರಿಗಿಂತ ೫೯.೫% ಹೆಚ್ಚು. ಜನಸಂಖ್ಯೆಯಲ್ಲಿ ೧೧% ೬ ವರ್ಷಕ್ಕಿಂತ ಕಡಿಮೆ ವಯೋಮಿತಿ ಉಳ್ಳವರು.

ಭಾಷೆ[ಬದಲಾಯಿಸಿ]

ಅಸನ್ಸೋಲ್‌ನಲ್ಲಿ ಇಂದು ಅಧಿಕ ಸಂಖ್ಯೆಯಲ್ಲಿ ಬೆಂಗಾಲಿ ಮಾತನಾಡುವ ಜನರಿದ್ದರೂ ಕೂಡ,ಇಂಗ್ಲಿಷ್ ಕೂಡ ವ್ಯಾಪಕವಾಗಿ ಮಾತನಾಡಲಾಗುತ್ತದೆ ಹಾಗೂ ಒಂದೊಮ್ಮೆ ಉದ್ಯಮ ಸಮುದಾಯದ ಭಾಷೆಯಾಗಿತ್ತು. ರೈಲ್ವೆ ಕೆಲಸಗಳು ಬಂದ ನಂತರ,ಗಣನೀಯ ಪ್ರಮಾಣದಲ್ಲಿ ಬ್ರಿಟಿಷ್ ಮತ್ತು ಆಂಗ್ಲೊ-ಇಂಡಿಯನ್ ಜನಸಂಖ್ಯೆಯನ್ನು ಹೊಂದಿದೆ. ಇಂಗ್ಲೀಷ್ ಮಾಧ್ಯಮದ ಶಾಲೆಗಳು ೧೮೭೭ರ ಮುಂಚಿನಿಂದಲೇ ಇಂಗ್ಲೀಷ್‌ನಲ್ಲಿ ಶಿಕ್ಷಣ ನೀಡಲು ಆರಂಭಿಸಿವೆ. ಭಾರತದಲ್ಲಿ ಪ್ರಥಮ ಕ್ರಿಶ್ಚಿಯನ್ ಬ್ರದರ್ ಶಾಲೆ ಸೇಂಟ್ ಪ್ಯಾಟ್ರಿಕ್ಸ್ ಸ್ಕೂಲ್ ೧೮೯೧ರಲ್ಲಿ ಆರಂಭವಾಯಿತು. ಈ ಶಾಲೆ ಮತ್ತು ಇತರೆ ಇಂಗ್ಲೀಷ್ ಮಾಧ್ಯಮದ ಶಾಲೆಗಳಿಗೆ ಸೇರಿದ ವಿದ್ಯಾರ್ಥಿಗಳು ಬ್ರಿಟಿಷ್ ಇಂಡಿಯನ್ ರೈಲ್ವೇಸ್,ಬ್ರಿಟಿಷ್ ಇಂಡಿಯನ್ ಆರ್ಮಿ ಮತ್ತು ಕಲ್ಲಿದ್ದಲು ಗಣಿಗಳನ್ನು ನಿರ್ವಹಿಸುವ ಗಣ್ಯ ಕಾರ್ಮಿಕಶಕ್ತಿಯಾಗಿ ರೂಪುಗೊಂಡರು. ಸ್ವಾತಂತ್ರ್ಯಾನಂತರ ಬಹುತೇಕ ಆಂಗ್ಲೋ-ಇಂಡಿಯನ್ ಸಮುದಾಯವು ಕೆನಡಾ ಮತ್ತು ಆಸ್ಟ್ರೇಲಿಯಕ್ಕೆ ವಲಸೆ ಹೋಯಿತು. ಅಸನ್ಸೋಲ್‌ನಲ್ಲಿ ವಾಸವಿರುವ ಸಮುದಾಯವು ಈಗ ಪ್ರಧಾನವಾಗಿ ಬೆಂಗಾಲಿಗಳಾಗಿದ್ದಾರೆ. ಪೂರ್ವ(ಈಗಿನ ಬಾಂಗ್ಲಾದೇಶ)ಮತ್ತು ಪಶ್ಚಿಮ ಬಂಗಾಳ ಎರಡೂ ಕಡೆಯ ಜನರನ್ನು ಬಂಗಾಳಿ ಸಮುದಾಯ ಪ್ರತಿನಿಧಿಸುತ್ತದೆ ಮತ್ತು ಬಿಹಾರದ ನೆರೆಯ ಜಿಲ್ಲೆಯ ಸಮುದಾಯಗಳ ಜತೆ ಬಲವಾದ ಸಂಪರ್ಕವನ್ನು ಅದು ಹೊಂದಿದೆ. ಇದರ ಫಲವಾಗಿ ಗಮನಾರ್ಹವಾದ ಜನಸಂಖ್ಯೆ ಹಿಂದಿ ಭಾಷಿಕರಾಗಿದ್ದು,ಪಟ್ಟಣದಲ್ಲಿ ಹಿಂದಿಯನ್ನು ಎರಡನೇ ಅತೀ ಹೆಚ್ಚು ಮಾತನಾಡುವ ಭಾಷೆಯನ್ನಾಗಿಸಿದೆ.

ಸಂಸ್ಕೃತಿ[ಬದಲಾಯಿಸಿ]

ಭಾರತದ ವಿವಿಧ ಭಾಗಗಳಿಂದ ಬಂದಿರುವ ಜನರು ಎಲ್ಲ ಮಟ್ಟಗಳಲ್ಲಿ ವೈವಿಧ್ಯಪೂರ್ಣ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳನ್ನು ಸೇರಿಸಿದ್ದಾರೆ. ಬರ್ನ್‌ಪುರ್ ಯುನೈಟೆಡ್ ಕ್ಲಬ್ ಮತ್ತು ಬರ್ನ್‌ಪುರ್ ಕ್ರಿಕೆಟ್ ಕ್ಲಬ್ ಅಭಿವೃದ್ಧಿಯಾಗಿವೆ. ಬ್ಯಾರೆಟ್ ಕ್ಲಬ್ ಮತ್ತು ಕುಲ್ಟಿ ಸಮ್ಮೇಲನಿ ಮುಂತಾದ ಕ್ಲಬ್‌ಗಳು ಕೂಡ ಸಮೃದ್ಧಿಯನ್ನು ಹೊಂದಿವೆ. ಕುಲ್ಟಿಯಲ್ಲಿ ಗಾಲ್ಫ್ ಆಡಲಾಗುತ್ತದೆ ಮತ್ತು ಮೈಥೋನ್‌ನಲ್ಲಿ ಯಾಚಿಂಗ್ ಜನಪ್ರಿಯವಾಗಿದೆ. ೧೯೫೧ರಲ್ಲಿ ಅಸನ್ಸೋಲ್ ರೈಫಲ್ ಕ್ಲಬ್‌ನ್ನು ಚಾಂಡ್‌ಮಾರಿಯಲ್ಲಿ ಸ್ಥಾಪಿಸಲಾಯಿತು. ಎರಡು ಸಾಂಸ್ಕೃತಿಕ ಕೇಂದ್ರಗಳು ಅಸನ್ಸೋಲ್‌ನಲ್ಲಿರುವ ರವೀಂದ್ರ ಭವನ್ ಮತ್ತು ಬರ್ನ್‌ಪುರದ ಭಾರತಿಭವನ್. ಈ ನಗರದ ಇನ್ನೊಂದು ಸಾಂಸ್ಕೃತಿಕ ಕೇಂದ್ರ ಸರತ್ ಮಂಚಾ ಅಸನ್ಸೋಲ್ ಪೊಲೀಸ್ ಲೈನ್ಸ್‌ನಲ್ಲಿದೆ. 'ಬ್ಯಾಂಡ್' ಸಂಸ್ಕೃತಿಯ ಆರಂಭದೊಂದಿಗೆ ಅಸನ್ಸೋಲ್ ಕೆಲವು ಬ್ಯಾಂಡ್‌ಗಳಿಗೆ ಸ್ಥಾನ ಕಲ್ಪಿಸಿದೆ. ಮುಜಿಕ್ ಸ್ಟ್ರೀಟ್ [೯], ಬಹುಬಚನ್ , ಸಿಕ್ತ್ ಸೆನ್ಸ್ ಮತ್ತುದೇಶ್ [೧೦] ಜನಪ್ರಿಯವಾಗಿದೆ. ಸಣ್ಣ ನಿಯತಕಾಲಿಕೆಗಳು ಮತ್ತು ಹೆಸರಾಂತ-ಅಜ್ಞಾತ ಲೇಖಕರು ನಗರವನ್ನು ಬಂಗಾಳಿ ಸಾಹಿತ್ಯದ ಕೇಂದ್ರವಾಗಿಸಿದ್ದಾರೆ.ಉದಾಯಚಲ್ ಸಾಹಿತ್ಯ ಗೋಷ್ಠಿ ಮತ್ತು ಅವರ ನಿಯತಕಾಲಿಕೆ "DIDHITI" ಅವುಗಳಲ್ಲಿ ಗಮನಾರ್ಹವಾಗಿದೆ.ಲೇಖಕರು ಮತ್ತು ಕವಿಗಳಾದ BIKASH GAYEN,PARTHA PRATIM ACHARYYA, MANAS MONDAL, RAJIB BANERJEE, RABIN PRAMANIK ತಮ್ಮ ಕೊಡುಗೆಗಳೊಂದಿಗೆ ನಗರವನ್ನು ಪ್ರಮುಖ ಸಾಹಿತ್ಯ ಕೇಂದ್ರವಾಗಿಸಿದ್ದಾರೆ. ಕ್ವಿಜ್‌(ಸಾಮಾನ್ಯ ಜ್ಞಾನದ ಪರೀಕ್ಷೆ)ನ ಮಹಾನ್ ಸಂಪ್ರದಾಯವನ್ನು ಅಸನ್ಸೋಲ್ ಹೊಂದಿದೆ. ಅಸನ್ಸೋಲ್ ರಾಮಕೃಷ್ಣ ಮಿಶನ್,ಸೇಂಟ್ ಪಾಟ್ರಿಕ್,ಬರ್ನ್‌ಪುರ್ ರಿವರ್‍‌ಸೈಡ್ ಶಾಲೆಗಳು ಈ ಕ್ಷೇತ್ರದಲ್ಲಿ ನಿಜವಾಗಲೂ ಉತ್ತಮವಾಗಿವೆ. ಸುರಜಿತ್ ಚಟರ್ಜಿ,ಸಂಕದೀಪ್ ಸೇನ್‌,ಸಂಕದೀಪ್ ಸೇನ್‌ಗುಪ್ತಾ,ಶಮೀಕ್ ಚಟರ್ಜಿ,ರಾಜೆನ್ ವರ್ಮ,ಕಮಲೇಂದು ಮಿಶ್ರಾ,ಜೊಯಿದೀಪ್ ಮೈತ್ರಾ ಈ ಸಂಪ್ರದಾಯದ ನಿಜವಾದ ಪಾಲಕರು.

ಶಿಕ್ಷಣ[ಬದಲಾಯಿಸಿ]

ಅಸನ್ಸೋಲ್ ಶೈಕ್ಷಣಿಕ ಕೇಂದ್ರವಾಗಿದ್ದು,ಧನಾಬಾದ್‌ನಿಂದ ರಾಣಿಗುಂಜ್‌ವರೆಗೆ ಕಲ್ಲಿದ್ದಲು ವಲಯಕ್ಕೆ ಶೈಕ್ಷಣಿಕ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಕೆಲವು ಶಾಲೆಗಳು [೧೧] ಅಸನ್ಸೋಲ್ ರಾಮಕೃಷ್ಣ ಮಿಷನ್, ಧಾಡ್ಕಾ NCL ವಿದ್ಯಾಮಂದಿರ್, ದಾಮೋಹನಿ ಕಲೆಜೋರಾ ಪ್ರೌಢಶಾಲೆ, ಉಮಾರಾಣಿ ಗೊರೈ ಮಹಿಳಾಕಲ್ಯಾಣ್, ಅರುಣೋದಯ್ ಪ್ರೌಢಶಾಲೆ, ಮಣಿಮಾಲಾ ಗರ್ಲ್ಸ್, ಈಸ್ಟರ್ನ್ ರೈಲ್ವೇಸ್ ಪ್ರೌಢಶಾಲೆ, ದಯಾನಂದ್ ಆಂಗ್ಲೊ ವೇದಿಕ್ ಹೈಯರ್ ಸೆಕೆಂಡರಿ ಸ್ಕೂಲ್, ಸೇಂಟ್ ಪ್ಯಾಟ್ರಿಕ್ಸ್ ಹೈಯರ್ ಸೆಕೆಂಡರಿ ಸ್ಕೂಲ್, ಸೇಂಟ್ ವಿನ್ಸೆಂಟ್ಸ್ ಹೈ ಎಂಡ್ ಟೆಕ್ನಿಕಲ್ ಸ್ಕೂಲ್, ಲೊರೆಟೊ ಕಾನ್ವೆಂಟ್,[೧೨] ಅಸೆಂಬ್ಲಿ ಆಫ್ ಗಾಡ್ ಚರ್ಚ್ ಸ್ಕೂಲ್, ದಿ ಈಸ್ಟರ್ನ್ ರೈಲ್ವೆ ಸ್ಕೂಲ್, ಸುಭಾಸ್‌ಪಲ್ಲಿ ವಿದ್ಯಾನಿಕೇತನ್ ಮತ್ತು ಬರ್ನ್‌ಪುರ್ ರಿವರ್‌ಸೈಡ್ ಸ್ಕೂಲ್ (BRS), DAV ಪಬ್ಲಿಕ್ ಸ್ಕೂಲ್, ಅಸನ್ಸೋಲ್ ಕೊಲೆಜಿಯೇಟ್ ಸ್ಕೂಲ್, ಇಂಡಿಯ ಇಂಟರ್‌ನ್ಯಾಷನಲ್ ಸ್ಕೂಲ್ ಮತ್ತು ಜಹರ್‌ಮಾಲ್ ಜಲನ್ ಇನ್‌ಸ್ಟಿಟ್ಯೂಷನ್ ಇವು ಕೆಲವು ಶಾಲೆಗಳು. ಮುಂಬರುವ Asansol Schools Network ಎಂದು ಕರೆಯುವ ಲಾಭವಿಲ್ಲದ ಆನ್‌ಲೈನ್ ನಿರ್ದೇಶಿಕೆಯು ಅಸನ್ಸೋಲ್ ಜತೆ ಸಂಪರ್ಕವಿರುವ ಎಲ್ಲರನ್ನೂ ಪರಸ್ಪರ ಹುಡುಕಲು ನೆರವಾಗುತ್ತದೆ-http://asansolschools.org/. IISCoಅಧಿಕಾರ ವರ್ಗ ಐದು ಶಾಲೆಗಳನ್ನು ನಡೆಸುತ್ತಿದೆ. ಇನ್ನೂ ನಾಲ್ಕು ಸಾಮಾನ್ಯ ಪದವಿ ಕಾಲೇಜುಗಳಿವೆ. ಬಿಧನ್ ಚಂದ್ರ ಕಾಲೇಜ್ ಮತ್ತು B.B ಕಾಲೇಜು ಸಹಶಿಕ್ಷಣದ ಕಾಲೇಜುಗಳಾಗಿವೆ. ಅಸನ್ಸೊಲ್ ಗರ್ಲ್ಸ್ ಕಾಲೇಜ್ ಅನಸ್ಸೋಲ್‌ನಲ್ಲಿ ವಿದ್ಯಾರ್ಥಿನಿಯರ ಕಾಲೇಜು. ಎಂಜಿನಿಯರಿಂಗ್ ಕಾಲೇಜಾದ ಅಸನ್ಸೋಲ್ ಎಂಜಿನಿಯರಿಂಗ್ ಕಾಲೇಜ್,ಒಂದು ಫಾರ್ಮಸಿ ಕಾಲೇಜ್,ಎರಡು ಪಾಲಿಟೆಕ್ನಿಕ್‌ಗಳು ಮತ್ತು ಒಂದು ಹೋಮಿಯೋಪತಿ ವೈದ್ಯಕೀಯ ಕಾಲೇಜ್.

ಅಭಿವೃದ್ಧಿಗಳು[ಬದಲಾಯಿಸಿ]

ಅಸನ್ಸೋಲ್ ದುರ್ಗಾಪುರ ಅಭಿವೃದ್ಧಿ ಪ್ರಾಧಿಕಾರವು ಇಲ್ಲಿನ ಅಭಿವೃದ್ಧಿಯನ್ನು ಕೈಗೊಂಡಿದೆ. ಕೈಗಾರಿಕೆಗಳು ಮತ್ತು ಉದ್ಯಮಿಗಳಿಗೆ ಪರಿಹಾರಗಳನ್ನು ಒದಗಿಸಲು ಆ ಪ್ರದೇಶದ ಕೈಗಾರೀಕರಣಕ್ಕಾಗಿ ಕೈಗಾರಿಕೆ ಎಸ್ಟೇಟ್‌ಗಳು,ವಸತಿ ಯೋಜನೆಗಳು, ನಗರ ಮೂಲಸೌಲಭ್ಯ ಅಭಿವೃದ್ಧಿಯನ್ನು ADDA ಉತ್ತೇಜಿಸುತ್ತದೆ. ಅದರ ಯೋಜನೆಗಳಲ್ಲಿ ರಸ್ತೆಗಳು,ಸೇತುವೆಗಳು,ಒಳಚರಂಡಿ,ಸಾರಿಗೆ,ನೀರಿನ ಪೂರೈಕೆ,ನೀರಾವರಿ ಸೇರಿವೆ. ಇದು ಶಾಲೆಗಳನ್ನು,ಕಾಲೇಜುಗಳನ್ನು ಮತ್ತು ಮನರಂಜನಾ ಉದ್ಯಾನಗಳನ್ನು ಅಭಿವೃದ್ಧಿಪಡಿಸುತ್ತದೆ.

ಇತ್ತೀಚಿನ ಅಭಿವೃದ್ಧಿಗಳು[ಬದಲಾಯಿಸಿ]

ಸೃಷ್ಟಿನಗರ್[ಬದಲಾಯಿಸಿ]

ನ್ಯೂ ಅಸನ್ಸೋಲ್ ಎಂದೇ ಖ್ಯಾತಿ ಪಡೆದ ಸೃಷ್ಟಿನಗರ್ ಹಸಿರು ಉಪನಗರವಾಗಿ ಹರಡಿಕೊಂಡಿದ್ದು,100 acres (0.40 km2)೫೦೦೦ ಕುಟುಂಬಗಳಿಗೆ ವಸತಿ ಒದಗಿಸಿ ಸುಮಾರು6,000,000 square feet (560,000 m2) ಅಭಿವೃದ್ಧಿಯಾಗಿದೆ. ಇದು ಸುತ್ತಲೂ ಆವರಣದ ವಸತಿ ನಿಲಯಗಳು,ಸಮೂಹ ವಸತಿಗಳು,ಯೋಜಿತ ಗೃಹ ಘಟಕಗಳು,ಬಂಗ್ಲೆಗಳು ಮತ್ತು ಸಾಲಿನ ಮನೆಗಳು,ವಾಣಿಜ್ಯ ಮತ್ತು ಚಿಲ್ಲರೆ ಪ್ರದೇಶ,ಇಟ್ ಪಾರ್ಕ್, ಮೂಲಸೌಲಭ್ಯದೊಂದಿಗೆ ವಿಹಾರಧಾಮ ಕಮ್ ಕ್ಲಬ್ ಒಳಗೊಂಡಿದೆ. ಸೃಷ್ಟಿನಗರದ ಹೃದಯಭಾಗದಲ್ಲಿ ಮುಖ್ಯ ಉದ್ಯಮ ಜಿಲ್ಲೆಯಿದ್ದು, ಹರಡಿಕೊಂಡಿದೆ.ಮಲ್ಟಿಪ್ಲೆಕ್ಸ್‌ನೊಂದಿಗೆ ಶಾಪಿಂಗ್ ಮಾಲ್,ಒಂದು ಹೊಟೆಲ್ ಸಹಿತ IT ಪಾರ್ಕ್,ಜೀವನಶೈಲಿ ಕ್ಲಬ್ ಜತೆ ಮನರಂಜನೆ ಪಾರ್ಕ್ ಒಳಗೊಂಡಿವೆ.20 acres (81,000 m2) ಅಸನ್ಸೋಲ್ ಸೆಂಟ್ರಮ್ ಕೊಲ್ಕತ್ತಾದ ಹೊರಗೆ ಪಶ್ಚಿಮಬಂಗಾಳದಲ್ಲಿ ದೊಡ್ಡ ವ್ಯಾಪಾರ ಮಳಿಗೆಯಾಗಿದ್ದು,ಮಲ್ಟಿಪ್ಲೆಕ್ಸ್ ಒಂದನ್ನು ಒಳಗೊಂಡಿದೆ.

ಗ್ಯಾಲಕ್ಸಿ ಮಾಲ್[ಬದಲಾಯಿಸಿ]

ಶ್ರೀಜನ್ ಡೆವಲಪರ್ಸ್ ಅವಾನಿ ಗ್ರೂಪ್ ಜತೆ ನಗರದ ಹೃದಯಭಾಗದಲ್ಲಿರುವ ಬರ್ನ್‌ಪುರ್ ರಸ್ತೆಯಲ್ಲಿ ಅಂಗಡಿ ಮಳಿಗೆಯೊಂದನ್ನು ನಿರ್ಮಿಸುತ್ತಿದೆ. ಇದು ವ್ಯಾಪಾರಿಮುದ್ರೆ ಹೊಂದಿರುವ ಸರಕುಗಳ ದೊಡ್ಡ ಅಂಗಡಿಗಳು ಮತ್ತು ಮಲ್ಟಿಪ್ಲೆಕ್ಸ್ ಒಳಗೊಂಡಿವೆ. ಈ ಪ್ರದೇಶದಲ್ಲಿ ಇದು ದೊಡ್ಡ ವ್ಯಾಪಾರಿ ಮಳಿಗೆಗಳಲ್ಲಿ ಒಂದಾಗಲಿದೆ.

ಮೆಡಿಕಾ ಸೈನರ್ಜಿ ಆಸ್ಪತ್ರೆ[ಬದಲಾಯಿಸಿ]

ಮೆಡಿಕಾ ಸೈನರ್ಜಿ NH-ಈ ಬೈಪಾಸ್‌ನಲ್ಲಿ ಹೊಸ ಬಹು-ವೈಶಿಷ್ಠ್ಯದ ಆಸ್ಪತ್ರೆಯನ್ನು ಆರಂಭಿಸಲಿದೆ.

B.P ಪೋಡಾರ್ ಆಸ್ಪತ್ರೆಗಳು[ಬದಲಾಯಿಸಿ]

ಕೋಲ್ಕತಾದ B.P ಪೋಡಾರ್ ಆಸ್ಪತ್ರೆಗಳು ಅಸನ್ಸೋಲ್‌ನಲ್ಲಿ ಹೊಸ ಆಸ್ಪತ್ರೆಯನ್ನು ಆರಂಭಿಸಲು ಯೋಜಿಸುತ್ತಿದೆ.

ರಿಲಯನ್ಸ್ ರಿಟೇಲ್[ಬದಲಾಯಿಸಿ]

ರಿಲಯನ್ಸ್ ಪಟ್ಟಣ ಕೇಂದ್ರದ ಅಭಿವೃದ್ಧಿ ಸಲುವಾಗಿ ಅಸನ್ಸೋಲ್‌ನ KSTPಯಲ್ಲಿ ರಿಲಯನ್ಸ್ ರಿಟೇಲ್‌ಗೆ ೧೦.೦ ಎಕರೆಗಳ ಭೂಮಿಯನ್ನು ಮಂಜೂರು ಮಾಡಲಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್(RIL)[ಬದಲಾಯಿಸಿ]

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ಗೆ ರಿಲಯನ್ಸ್ ವಿತರಣೆ ಕೇಂದ್ರದ ಸ್ಥಾಪನೆ ಸಲುವಾಗಿ NH-IIನ ಮೌಜಾ ಗನ್‌ರುಯಿ,JL ನಂ.೧೨ ಅಸನ್ಸೋಲ್‌ನಲ್ಲಿ (೭೭.೭೨ + ೨೨.೨೮) ಎಕರೆಗಳ ಭೂಮಿಯನ್ನು ಮಂಜೂರು ಮಾಡಲಾಗಿದೆ.

ಬ್ಲೂ ಚಿಪ್ ಪ್ರೊಜೆಕ್ಸ್ಟ್ ಪ್ರೈ.ಲಿ.[ಬದಲಾಯಿಸಿ]

ಬ್ಲೂ ಚಿಪ್ಸ್ ಪ್ರಾಜೆಕ್ಸ್ಟ್ ಪ್ರೈ.ಲಿಗೆ ಅಸನ್ಸೋಲ್ KSTPಯ ಸೆನ್-ರೆಲೀಗ್ ರಸ್ತೆಯಲ್ಲಿ ೧೦೩.೦ ಖಾತಾ ಭೂಮಿಯನ್ನು ವಾಣಿಜ್ಯ ಮಳಿಗೆ ನಿರ್ಮಾಣಕ್ಕಾಗಿ ಮಂಜೂರು ಮಾಡಲಾಗಿದೆ. ಈ ಕೆಲಸವು ಇನ್ನೂ ಪ್ರಗತಿಯಲ್ಲಿದೆ.

ಬ್ಲೂ ಲೈಟ್ ಬೆವೆರೇಜಸ್ ಪ್ರೈ.ಲಿ[ಬದಲಾಯಿಸಿ]

ಬ್ಲೂ ಲೈಟ್ ಬೆವರೇಜಸ್ ಪ್ರೈ.ಲಿಗೆ ಜೂಬ್ಲಿ ಕ್ರಾಸಿಂಗ್‌ ಹತ್ತಿರ NH-II ಬೈಪಾಸ್‌ನಲ್ಲಿ ೯೮ ಕಾತಾ,೧೦ ಚಾಟಕ್ ಭೂಮಿಯನ್ನು ಒಂದು ವಾಣಿಜ್ಯ ಮಳಿಗೆ ನಿರ್ಮಾಣಕ್ಕಾಗಿ ಮಂಜೂರು ಮಾಡಲಾಗಿದೆ.

ಉಕ್ಕಿನ ಘಟಕ[ಬದಲಾಯಿಸಿ]

ಸಲಾನ್‌ಪುರದಲ್ಲಿ ಭೂಷಣ್ ಸ್ಟೀಲ್ ಲಿ.ಸಂಯೋಜಿತ ಉಕ್ಕಿನ ಘಟಕದ ಹಿಂದೆಯೇ ತನ್ನ ನೌಕರರಿಗೆ ಖಾಸಗಿ ಉಪನಗರ ನಿರ್ಮಿಸುವುದಕ್ಕಾಗಿ ೮೦೦೦ ಕೋಟಿ ರೂ.ಬಂಡವಾಳವನ್ನು ಹೂಡಲಿದೆ.

ಸುಗಮ್ ಪಾರ್ಕ್[ಬದಲಾಯಿಸಿ]

ಸುಗಮ್ ಪಾರ್ಕ್ ಪ್ರಮುಖ ವಸತಿ ಉಪನಗರವಾಗಿದೆ.

ಅಸನ್ಸೋಲ್ ಪ್ರದೇಶದಲ್ಲಿ CBM ಯೋಜನೆ[ಬದಲಾಯಿಸಿ]

ಗ್ರೇಟ್ ಈಸ್ಟರ್ನ್ ಎನರ್ಜಿ ಕಾರ್ಪೊರೇಷನ್ ಲಿ. ಬರ್ನ್‌ಪುರ್ ನದಿಬದಿಯ ಪ್ರದೇಶದಲ್ಲಿ ಕಲ್ಲಿದ್ದಲು ಪದರದ ಮೀಥೇನ್(CBM)ನ ಶೋಧನೆ ಉತ್ಪಾದನೆ ಮತ್ತು ಮಾರುಕಟ್ಟೆಯನ್ನು ಆರಂಭಿಸಿದೆ. ಕಂಪೆನಿಯು ಕೈಗಾರಿಕೆಗೆ CBM ಅನಿಲ ಪೂರೈಕೆಯನ್ನು ಯಶಸ್ವಿಯಾಗಿ ಆರಂಭಿಸಿದೆ ಹಾಗೂ ಅಸನ್ಸೋಲ್ ಮತ್ತು ದುರ್ಗಾಪುರ್ ಉಪವಿಭಾಗಗಳಲ್ಲಿ IOCL ಸಹಯೋಗದಲ್ಲಿ CNG ಇಂಧನ ತುಂಬುವ ಕೇಂದ್ರವನ್ನು ಆರಂಭಿಸಿದೆ.

ಸಮೀಪದ ಸ್ಥಳಗಳು[ಬದಲಾಯಿಸಿ]

ಅವರು ಬಾಂಗ್ಲಾದೇಶದ ರಾಷ್ಟ್ರ ಕವಿ ಎಂದು ಪರಿಗಣಿತರಾಗಿದ್ದಾರೆ. ಅವರ ಗ್ರಾಮವು ಅಸನ್ಸೋಲ್‌ನಿಂದ ೧೭ ಕಿಮೀ ದೂರದಲ್ಲಿದ್ದು,ಅವರ ಕೃತಿಗಳು ಮತ್ತು ಸ್ಮಾರಕದೊಂದಿಗೆ ಮ್ಯೂಸಿಯಂ ಒಂದನ್ನು ಒಳಗೊಂಡಿದೆ.

 • ಶಾಂತಿನಿಕೇತನ್ - ವಿಶ್ವಭಾರತಿಯನ್ನು ರವೀಂದ್ರನಾಥ್ ಟಾಗೋರ್‌ಸ್ಥಾಪಿಸಿದರು ಮತ್ತು ಈಗ ಕೇಂದ್ರ ವಿಶ್ವವಿದ್ಯಾನಿಲಯ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯೊಂದು ಇಲ್ಲಿದೆ. ಇದು ಅಸನ್ಸೋಲ್‌ನಿಂದ ೯೦ ಕಿಮೀ ದೂರದಲ್ಲಿದೆ.
 • ದುರ್ಗಾಪುರ್ - ಅಸನ್ಸೋಲ್ ಪೂರ್ವಕ್ಕೆ ೫೦ ಕಿಮೀ ದೂರದಲ್ಲಿರುವ ಕೈಗಾರಿಕಾ ನಗರವಾಗಿದ್ದು,ದುರ್ಗಾಪುರ್ ಉಕ್ಕಿನ ಘಟಕವನ್ನು ಹೊಂದಿದೆ.
 • ವಿಷ್ಣುಪುರ್-ಕಂದುಗೆಂಪಿನ ಗಟ್ಟಿ ಜೇಡಿಮಣ್ಣಿನ ಮಂದಿರದ ಪಟ್ಟಣವು ಪ್ರಮುಖ ಕಲೆ ಮತ್ತು ಕರಕುಶಲಕಲೆಯ ತವರಾಗಿದ್ದು,ಅಸನ್ಸೋಲ್‌ನಿಂದ ೧೦೦ ಕಿಮೀ ದೂರದಲ್ಲಿದೆ. ಭಾರತದ ಕರಕುಶಲಕಲೆಗಳ ಸಂಕೇತವಾದ [[ಬಂಕುರಾ ಕುದುರೆ/0}ಯನ್ನು ವಿಷ್ಣುಪುರದ ಬಳಿಯಿರುವ ಪಂಚಮುರಾ|ಬಂಕುರಾ ಕುದುರೆ/0}ಯನ್ನು ವಿಷ್ಣುಪುರದ ಬಳಿಯಿರುವ ಪಂಚಮುರಾ ಬಳಿ ತಯಾರಿಸಲಾಗುತ್ತದೆ. ಇದು ಬಲುಚಾರಿ ಸೀರೆಗೆ ಕೂಡ ತವರಾಗಿದ್ದು,ಆರಂಭದಲ್ಲಿ ರಾಮಾಯಣ ಮತ್ತು ಮಹಾಭಾರತ ಸಂಕೇತಿಸುವ ಜರತಾರಿ ಅಲಂಕಾರದೊಂದಿಗೆ ಹೊಲಿಯುತ್ತಿದ್ದು,ಈಗ ಆಧುನೀಕೃತಗೊಂಡಿದೆ.
 • ಕಲ್ಯಾಣೇಶ್ವರಿ ಮಂದಿರ-ಪ್ರಾರ್ಥನೆ ನೆರವೇರಿಸುವ ದೇವತೆಯ ಮಂದಿರವು ಅಸನ್ಸೋಲ್‌ನಿಂದ ೨೦ ಕಿಮೀ ದೂರದಲ್ಲಿದೆ. ವಿಶೇಷವಾಗಿ ಬಂಜೆಮಹಿಳೆಯರಿಗೆ ಐದು ಶತಮಾನಗಳವರೆಗೆ ಯಾತ್ರಾಸ್ಥಳವಾಗಿದೆ. ಇದುಮೈಥಾನ್‌ನಲ್ಲಿದೆ.
 • ಜಯದೇವ್ ಕೆಂಡುಲಿ –ಸಂಸ್ಕೃತ ಕವಿ ಜೊಯ್‌ದೇಬ್‌ಗೆ ಮುಡುಪಾದ ಮಂದಿರ, ಅಸನ್ಸೋಲ್‌ಗೆ ೮೦ ಕಿಮೀ ದೂರದ ಅಜಯ್ ನದಿ ದಡದಲ್ಲಿದೆ. ಮಕರ ಸಂಕ್ರಾಂತಿ ಮೇಳವು ಬೌಲರ(ಬೇರ್ಪಟ್ಟ ತತ್ವ ಮತ್ತು ತಮ್ಮದೇ ಸಹಜತೆಯೊಂದಿಗೆ ಹಾಡುವ ಧಾರ್ಮಿಕ ಗಾಯಕರು)ಭಾಗವಹಿಸುವಿಕೆಯೊಂದಿಗೆ ಜನವರಿ ಮಧ್ಯಭಾಗದಲ್ಲಿ ನಡೆಯುತ್ತದೆ.
 • ಬಕ್ರೇಶ್ವರ್ – ಬಿಸಿನೀರಿನ ಚಿಲುಮೆ ಮತ್ತು ಮಂದಿರವು ಅಸನ್ಸೋಲ್‌ಗೆ ೭೦ ಕಿಮೀ ದೂರದಲ್ಲಿದೆ.
 • ಜೋಯಿಚಂಡಿ ಪಹಾರ್ – ವಿಹಾರಸ್ಥಳ ಮತ್ತು ಕಲ್ಲುಬಂಡೆಗಳನ್ನು ಹತ್ತುವ ತರಬೇತಿ ಕೇಂದ್ರವಾಗಿದ್ದು, ಅಸನ್ಸೋಲ್‌ಗೆ ೩೦ ಕಿಮೀ ದೂರದಲ್ಲಿದೆ.
 • ಮೈಥೋನ್-ಅಸನ್ಸೋಲ್‌ನಿಂದ ೨೬ ಕಿಮೀ ದೂರದಲ್ಲಿರುವ ಸುಂದರ ಸ್ಥಳ. ಮೈಥೋನ್ ಅಣೆಕಟ್ಟು ಮತ್ತು ಮೈಥೋನ್ ಜಲವಿದ್ಯುತ್ ಕೇಂದ್ರವು ಪ್ರವಾಸಕ್ಕೆ ಗಮನಾರ್ಹವಾದ ಪ್ರದೇಶಗಳು
 • ಗುಂಜಾನ್ ಪರಿಸರ ವಿಜ್ಞಾನದ ಉದ್ಯಾನವನ-ಜಮುರಿಯ P.S.ವ್ಯಾಪ್ತಿಯಲ್ಲಿರುವ ನಿಗಾದ G.T.ರಸ್ತೆಯಲ್ಲಿರುವ ಇದು ಅಸನ್ಸೋಲ್ ಪೊಲೀಸ್‌ರ ಸಮಾಜ ಕಲ್ಯಾಣ ಯೋಜನೆಯಾಗಿದೆ. ಅದಕ್ಕೆ ಮುಂಚೆ ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್‌ನ ಪರಿತ್ಯಜಿಸಿದ O.C.P.ಯಾಗಿದ್ದು,ಕ್ರಿಮಿನಲ್‌ಗಳಿಗೆ ಮತ್ತು ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ವ್ಯಾಪಾರಿಗಳ ತಾಣವಾಗಿತ್ತು.
ಶ್ರೀ ಸೊಮೆನ್ ಮಿತ್ರ,IPS,ಅಸನ್ಸೋಲ್‌ನ ಆಗಿನ ಹೆಚ್ಚುವರಿ S P ಆ ಪ್ರದೇಶವನ್ನು ಅಸನ್ಸೋಲ್ ಪೊಲೀಸರ ನಿಯಂತ್ರಣಕ್ಕೆ ತರಲು ಆರಂಭಿಕ ಕ್ರಮ ಕೈಗೊಂಡರು.

ಸರೋವರದೊಂದಿಗೆ ಸುಮಾರು ೩೦೦ ಎಕರೆ ಭೂಮಿಯನ್ನು ಹೊಂದಿರುವ ಇದು ಅಸನ್ಸೋಲ್ ನಾಗರಿಕರಿಗೆ ಆಕರ್ಷಣೀಯ ಸ್ಥಳವಾಗಿದ್ದು,ಮಿನಿ-ಪ್ರಾಣಿಸಂಗ್ರಹಾಲಯ ಮತ್ತು ಮಕ್ಕಳ ಉದ್ಯಾನವನವನ್ನು ಹೊಂದಿದೆ. ಚಳಿಗಾಲದಲ್ಲಿ,ಸರೋವರವು ನೂರಾರು ವಲಸೆಹಕ್ಕಿಗಳಿಗೆ ನೆಲೆ ಕಲ್ಪಿಸಿದೆ. ಪರಿಸರವಿಜ್ಞಾನ ಪಾರ್ಕ್‌ನಲ್ಲಿ ಆಂಗಲರ್ಸ್ ಕ್ಲಬ್ ಕೂಡ ಇದೆ. ECL, SAIL-ISP ಮತ್ತು ADDA ಸಹಯೋಗದೊಂದಿಗೆ ಈ ಪ್ರದೇಶದ ಅಭಿವೃದ್ಧಿಗೆ ಅಸನ್ಸೋಲ್ ಪೊಲೀಸರು ಪ್ರಕ್ರಿಯೆ ಆರಂಭಿಸಿದ್ದಾರೆ.

ಆಕರಗಳು[ಬದಲಾಯಿಸಿ]

 • ಹಿಸ್ಟರಿ ಆಫ್ ದಿ ಇಂಡಿಯನ್ ಐರನ್ ಎಂಡ್ ಸ್ಟೀಲ್ ಕಂ.ಲಿ. ಡಾ. N.R. ಶ್ರೀನಿವಾಸನ್ ಅವರಿಂದ.
 • ಬರ್ದಮಾನ್ ಜೆಲಾರ್ ಇತಿಹಾಸ್ O ಲೋಕ್ ಸಂಕ್ರಾಂತಿ (ಬರ್ಧಮಾನ್ ಜಿಲ್ಲೆಯ ಇತಿಹಾಸ ಮತ್ತು ಜನಪದ ಕಥೆಗಳು) ಬೆಂಗಾಲಿಯಲ್ಲಿ ಅಕ್ಕಾರಿ ಚಟ್ಟೋಪಾಧ್ಯಾಯ ಅವರಿಂದ.
 • ಈ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಕಂಪೆನಿಗಳ ವೆಬ್‌ಸೈಟ್‌ಗಳು
 • ಚುನಾವಣೆ ಆಯೋಗದ ವೆಬ್‌ಸೈಟ್‌ಗಳು

ಟಿಪ್ಪಣಿಗಳು[ಬದಲಾಯಿಸಿ]

 1. http://www.censusindia.gov.in/towns/wb_towns.pdf
 2. http://www.citymayors.com/statistics/urban_growth1.html
 3. "ಆರ್ಕೈವ್ ನಕಲು". Archived from the original on 2009-09-12. Retrieved 2021-08-09.
 4. "ಆರ್ಕೈವ್ ನಕಲು". Archived from the original on 2010-06-24. Retrieved 2010-04-22.
 5. ಎಲೆಕ್ಷನ್ ಕಮಿಷನ್ Archived 2007-09-30 ವೇಬ್ಯಾಕ್ ಮೆಷಿನ್ ನಲ್ಲಿ. ವಿಧಾನಸಭೆ ಚುನಾವಣೆ ಫಲಿತಾಂಶಗಳು ೧೯೭೭-೨೦೦೬.
 6. ಬಂಡೋಪಾಧ್ಯಾಯ್, ಸಾಂಟಿಮೋಯ್, ಅಸನ್ಸೋಲ್ ಪರಿಕ್ರಮ (ಅಸನ್ಸೋಲ್ ಇತಿಹಾಸ), (Bengali), pp೧೫೭-೧೫೮, ಟ್ರಿನಿಟಿ ಟ್ರಸ್ಟ್, ಚುನಾವಣೆ ಫಲಿತಾಂಶಗಳು ೧೯೫೭-೧೯೭೨.
 7. "General election to the Legislative Assembly, 2001 – List of Parliamentary and Assembly Constituencies" (PDF). West Bengal. Election Commission of India. Retrieved 2007-02-21.
 8. ಲಿಸ್ಟ್ ಆಫ್ ಟೌನ್ಸ್ ಆಫ್ ವೆಸ್ಟ್ ಬೆಂಗಾಲ್ ಎಂಡ್ ದೇರ್ ಪಾಪ್ಯುಲೇಶನ್
 9. "ಆರ್ಕೈವ್ ನಕಲು". Archived from the original on 2010-01-02. Retrieved 2010-04-22.
 10. "ಆರ್ಕೈವ್ ನಕಲು". Archived from the original on 2009-06-20. Retrieved 2010-04-22.
 11. "ಆರ್ಕೈವ್ ನಕಲು". Archived from the original on 2016-10-10. Retrieved 2021-08-09.
 12. ಅಸೆಂಬ್ಲಿ ಆಫ್ ಗಾಡ್ ಚರ್ಚ್ ಸ್ಕೂಲ್

ಬಾಹ್ಯ ಕೊಂಡಿಗಳು[ಬದಲಾಯಿಸಿ]


 1. REDIRECT Template:Million-plus agglomerations in India
 • This is a redirect from a page that was merged into the target page. This page was kept as a redirect to the corresponding main page on the topic it names, in order to preserve this page's edit history after its content was merged into the target page's content. Please do not remove the tag that generates this text (unless the need to recreate content on this page has been demonstrated), nor delete this page. For more information follow the category link.