ಅವಮೂಲ್ಯನ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಅವಮೂಲ್ಯನಒಂದು ವಸ್ತು ಅಥವಾ ಆಸ್ತಿ ಹಳೆಯದಾಗುವುದು, ನಶಿಸುವುದು, ಮಾರುಕಟ್ಟೆ ಬೆಲೆ ಕುಗ್ಗುವುದು ಆಸ್ತಿ ನಷ್ಟವಾಗುವುದು ಅಥವಾ ಅದರ ಮೌಲ್ಯ ಕುಗ್ಗುವುದು. ಇಂಥ ಕ್ರಿಯೆಗೆ ಅವಮೂಲ್ಯನ, ಮೌಲ್ಯಹ್ರಾಸ, ಅಪಮೌಲ್ಯ (ಡಿಪ್ರಿಷಿಯೇಷನ್) ಎಂಬ ಹೆಸರುಗಳಿವೆ.

ವಸ್ತುವಿನ ಬೆಲೆಯಲ್ಲಿ ಅವಮೂಲ್ಯನ[ಬದಲಾಯಿಸಿ]

ಲಾಭಗಳಿಕೆಯ ಸಾಮರ್ಥ್ಯ ಕುಗ್ಗಿದಾಗ ಎಲ್ಲ ಆಸ್ತಿಗಳೂ ಅವಮೂಲ್ಯನಕ್ಕೆ ಗುರಿಯಾಗುತ್ತವೆ. ಸಾಮಾನ್ಯವಾಗಿ ಆಸ್ತಿಯನ್ನು ಬಳಸಬಹುದಾದ ಕಾಲ, ರಿಪೇರಿ ಮತ್ತು ಹೊಸ ಸಾಧನಗಳ ಸೇರಿಕೆ, ಆಸ್ತಿಯ ಮೂಲಬೆಲೆ-ಇವುಗಳಂತೆಯೇ ಇದೂ ಉದ್ದಿಮೆ ವೆಚ್ಚಗಳಲ್ಲಿ ಒಂದಾಗಿದೆ.ಪ್ರತಿವರ್ಷ ಮೂಲಬೆಲೆಯ ಗೊತ್ತಾದ ಸೇಕಡವಾರು ಭಾಗ ಹಣವನ್ನು ಅದು ನಶಿಸುವ ಲೆಕ್ಕದ ಮೇಲೆ ಕಳೆಯುವುದು ಇಲ್ಲವೇ ವರ್ಷಕ್ಕೆ ಇಷ್ಟೆಂದು ಎಣಿಕೆ ಹಾಕುವುದು. ಇಲ್ಲವೇ ವರ್ಷಂಪ್ರತಿ ಅವಮೂಲ್ಯನ ನಿಧಿಯನ್ನು ಕೂಡಿಸುವುದು - ಈ ರೀತಿ ಆಸ್ತಿಯ ಅವಮೂಲ್ಯನವನ್ನು ಎದುರಿಸಬೇಕಾಗುತ್ತದೆ.

ಹಣದ ಅವಮೂಲ್ಯನ[ಬದಲಾಯಿಸಿ]

ಒಂದು ರಾಷ್ಟ್ರದ ಹಣದ ಮೌಲ್ಯದ ವಿಷಯದಲ್ಲೂ ಅವಮೂಲ್ಯನ (ಡಿವ್ಯಾಲ್ಯುಯೇಷನ್) ಸಂಭವಿಸಬಹುದು. ಅಂದರೆ ಒಂದು ಚಾಲ್ತಿ ಹಣದ ಬಾಹ್ಯಮೌಲ್ಯವನ್ನು ವಿದೇಶಿ ಚಾಲ್ತಿ ಹಣದಲ್ಲಿ ಇಲ್ಲವೆ ಸ್ವರ್ಣದಲ್ಲಿ ಅಧಿಕೃತವಾಗಿ ತಗ್ಗಿಸುವುದೇ ಅವಮೂಲ್ಯನ, ಉದಾಹರಣೆಗಾಗಿ, ಭಾರತ 1966ರ ಜೂನ್ 6 ರಂದು ತನ್ನ ಚಾಲ್ತಿ ಹಣವಾದ ರೂಪಾಯಿಯನ್ನು ಅಮೆರಿಕದ ಡಾಲರು ಮತ್ತು ಇಂಗ್ಲೆಂಡಿನ ಸ್ಟರ್ಲಿಂಗಿನಲ್ಲಿ ಅವಮೂಲ್ಯನ ಮಾಡಿತು. ಅಂದರೆ ಅವಮೂಲ್ಯನದ ಮೊದಲು ಭಾರತದ 4.76 ರೂ.ಗಳಿಂದ ಅಮೆರಿಕದ ಒಂದು ಡಾಲರನ್ನು ಇಲ್ಲವೆ 13.33 ರೂಪಾಯಿಗಳು ಇಂಗ್ಲೆಂಡಿನ ಒಂದು ಪೌಂಡು ಸ್ಟರ್ಲಿಂಗನ್ನು ಕೊಂಡುಕೊಳ್ಳಲಾಗುತ್ತಿತ್ತು. ಅವಮೂಲ್ಯನದ ತರುವಾಯ ಒಂದು ಡಾಲರನ್ನು ಕೊಂಡುಕೊಳ್ಳಲು ಭಾರತ 7.50 ರೂಪಾಯಿಗಳನ್ನು ಇಲ್ಲವೆ ಒಂದು ಪೌಂಡನ್ನು ಕೊಂಡು ಕೊಳ್ಳಲು 21 ರೂಪಾಯಿಗಳನ್ನು ತೆರಬೇಕು. ಅವಮೂಲ್ಯನದ ಮೊದಲು ರೂಪಾಯಿಯ ಬಾಹ್ಯಮೌಲ್ಯ 0.186621 ಗ್ರಾಂ ಸ್ವರ್ಣಕ್ಕೆ ಸಮಾನವಾಗಿತ್ತು. ಅವಮೂಲ್ಯನದಿಂದಾಗಿ, ಬಾಹ್ಯಮೌಲ್ಯವನ್ನು 0.118161 ಗ್ರಾಂ ಸ್ವರ್ಣಕ್ಕೆ ಸ್ವೀಕರಿಸಲಾಯಿತು. ಅಂದರೆ ಅವಮೂಲ್ಯನದ ಮೊದಲು ನೂರು ರೂಪಾಯಿಗಳ ಬಾಹ್ಯಮೌಲ್ಯ 18.66 ಗ್ರಾಂ ಸ್ವರ್ಣಕ್ಕೆ ಸಮಾನವಾಗಿತ್ತು. ಆದ್ದರಿಂದ ರೂಪಾಯಿ ಹಾಗೂ ಸ್ವರ್ಣಮೌಲ್ಯ ಪ್ರಮಾಣದಲ್ಲಿ ರೂಪಾಯಿಯ ಮೌಲ್ಯ ಶೇ.36.5 ತಗ್ಗಿತು. ಅವಮೂಲ್ಯನದ ತರುವಾಯ ಅಮೆರಿಕಕ್ಕೆ ಇಲ್ಲವೆ ಇಂಗ್ಲೆಂಡಿಗೆ ರೂಪಾಯಿ ಶೇ.36.5 ಅಗ್ಗವಾದವು ಎಂದರ್ಥ. ಅಂದರೆ ಭಾರತದ ನಿರ್ಯಾತಗಳು (ರಫ್ತು : ಎಕ್ಸ್‌ಪೊರ್ಟ್) ಅಮೆರಿಕಕ್ಕೆ ಇಲ್ಲವೆ ಇಂಗ್ಲೆಂಡಿಗೆ ಶೇ.36.5 ಅಗ್ಗವಾದವು ಎಂದರ್ಥ. ಭಾರತಕ್ಕೆ ಡಾಲರು ಇಲ್ಲವೆ ಪೌಂಡ್ ಸ್ಟರ್ಲಿಂಗ್ ಶೇ.57.5 ರಷ್ಟು ತುಟ್ಟಿಯಾದವು. ಅಂದರೆ ಭಾರತಕ್ಕೆ ಆಯಾತಗಳು (ಇಂಪೋರ್ಟ್ಸ್‌) ಶೇ.57.5ರಷ್ಟು ತುಟ್ಟಿಯಾದವು ಎಂದರ್ಥ. ಆದ್ದರಿಂದ ಒಂದು ದೇಶದ ಚಾಲ್ತಿಹಣದ ಅವಮೂಲ್ಯನ ಇನ್ನೊಂದು ದೇಶದ ಚಾಲ್ತಿಹಣದ ಅತಿಮೌಲ್ಯಕ್ಕೆ ಸಮಾನವಾದುದಲ್ಲ. ಅನೇಕ ದೇಶಗಳು ತಮ್ಮ ಚಾಲ್ತಿಹಣಗಳ ಅವಮೂಲ್ಯನವನ್ನು ಆಗಾಗ ಬೇರೆ ಬೇರೆ ಕಾರಣಗಳಿಗಾಗಿ ಮಾಡುತ್ತ ಬಂದಿವೆ. ಇವುಗಳಲ್ಲಿ ಮುಖ್ಯವಾದವು ಫ್ರಾನ್ಸ್‌, ರಷ್ಯ, ಜರ್ಮನಿ, ಇಟಲಿ, ಪೋಲೆಂಡ್, ಹಂಗರಿ, ಆಸ್ಟ್ರಿಯ, ರೊಮೇನಿಯ, ಗ್ರೀಸ್, ಪೋರ್ಚುಗಲ್, ಅರ್ಜೆಂಟೈನ, ಬೆಲ್ಜಿಯಂ, ಬಲ್ಗೇರಿಯ, ಫಿನ್ಲೆಂಡ್, ಇಂಗ್ಲೆಂಡ್, ಯೂಗೋಸ್ಲೋವಾಕಿಯ, ಚೆಕೊಸ್ಲೋವೇಕಿಯ, ಭಾರತ ಮುಂತಾದವು. ಆದರೆ ಒಂದನೆಯ ಮಹಾಯುದ್ಧದ ಪುರ್ವದಲ್ಲಿ ವಿದೇಶಿ ತೆರಿಗೆಯ ಸಮತೋಲನದಲ್ಲಿರುವ ಕೊರೆಯನ್ನು ಸರಿಪಡಿಸಲು ಅವಮೂಲ್ಯನ ಉತ್ಕೃಷ್ಟ ನೀತಿಯೆಂದು ಪರಿಗಣಿಸಲಾಗಲಿಲ್ಲ. ಇದು ಬಳಕೆಗೆ ಬಂದುದು ಒಂದನೆಯ ಮಹಾಯುದ್ಧದ ಅನಂತರ. ಅನೇಕ ದೇಶಗಳು ಪ್ರತಿಕೂಲ ವಿದೇಶಿತೆರಿಗೆಯ ಸಮತೋಲನಕ್ಕೊಳಗಾದರೂ ಈ ಶತಮಾನದ ನಾಲ್ಕನೆಯ ದಶಕದ ತನಕ ಅವಮೂಲ್ಯನವನ್ನು ಕಾರ್ಯಗತ ಮಾಡಿರಲಿಲ್ಲ. ವಿದೇಶಿ ತೆರಿಗೆಯ ಸಮತೋಲನವನ್ನು (ಡಿಸ್ಈಕ್ವಿಲಿಬ್ರಿಯಂ) ಎದುರಿಸುತ್ತಿರುವ ಇಂಗ್ಲೆಂಡ್ 1949ರಲ್ಲಿ ತನ್ನ ಚಾಲ್ತಿ ಹಣ ಪೌಂಡು ಸ್ಟರ್ಲಿಂಗನ್ನು ಅವಮೌಲ್ಯನಗೊಳಿಸಿತು. ಜೊತೆಗೆ ಇತರ 19 ಚಾಲ್ತಿಹಣಗಳ ಅವಮೌಲ್ಯನವೂ ಆಯಿತು. ಅವುಗಳಲ್ಲಿ ಭಾರತದ ರೂಪಾಯಿಯೂ ಒಂದು. ಕೆಲವು ವೇಳೆ ಕೆಲವು ದೇಶಗಳು ಹೆಚ್ಚಿನ ಆರ್ಥಿಕ ನೆರವನ್ನು ತಮ್ಮ ಆರ್ಥಿಕ ಏಳಿಗೆಗಾಗಿ ಬರಮಾಡಿಕೊಳ್ಳಲು ಚಾಲ್ತಿಹಣಗಳ ಅವಮೂಲ್ಯನ ಮಾಡುತ್ತವೆ. ಉದಾ: ಗ್ರೀಸ್ ದೇಶ ತನ್ನ ಚಾಲ್ತಿಹಣ ಡ್ರ್ಯಾಕ್ಮವನ್ನು 1953ರಲ್ಲಿ, ಮೆಕ್ಸಿಕೊ ತನ್ನ ಚಾಲ್ತಿಹಣ ಪೆಸೊವನ್ನು 1954ರಲ್ಲಿ, ಸ್ಪೇನ್ ತನ್ನ ಚಾಲ್ತಿಹಣ ಫೆಸೆಟಾವನ್ನು 1959ರಲ್ಲಿ ಅವಮೂಲ್ಯನ ಮಾಡಿದವು. 1966ರಲ್ಲಿ ಭಾರತ ರೂಪಾಯಿಯ ಅವಮೂಲ್ಯನ ಮಾಡುವ ಉದ್ದೇಶ ಇದೇ ಆಗಿತ್ತು.

ಒಂದು ದೇಶದ ಧಾರಣೆ ಅತಿಯಾಗಿ ಏರುತ್ತಿದ್ದರೆ, ಆ ದೇಶದ ಚಾಲ್ತಿಹಣದ ಮೌಲ್ಯ ಇಳಿಯುತ್ತದೆ. ಆ ದೇಶದ ಧಾರಣೆ ಏರಿದಂತೆ, ಇನ್ನಿತರ ದೇಶಗಳ ಧಾರಣೆ ಏರಿದರೆ, ಇನ್ನಿತರ ದೇಶಗಳ ಚಾಲ್ತಿಹಣವನ್ನು ಕೊಂಡುಕೊಳ್ಳುವುದು ಕಷ್ಟವಲ್ಲ. ಆದರೆ ಒಂದು ದೇಶದ ಧಾರಣೆ ಅತಿಯಾಗಿ ಏರುತ್ತಿದ್ದರೆ, ಆ ದೇಶ ಇತರ ದೇಶಗಳ ಚಾಲ್ತಿಹಣವನ್ನು ಕೊಂಡುಕೊಳ್ಳಲು ಹೆಚ್ಚಿನ ಹಣವನ್ನು ತೆರಬೇಕು. ಇದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಆ ದೇಶದ ನಿರ್ಯಾತಗಳು ತುಟ್ಟಿಯಾಗುತ್ತವೆ. ಅದರಿಂದಾಗಿ ಅವು ತಮ್ಮ ಸ್ಪರ್ಧಾತ್ಮಕ ಗುಣಗಳನ್ನು ಕಳೆದುಕೊಳ್ಳುತ್ತವೆ. ಹೀಗಾದಾಗ ಆ ದೇಶಗಳ ಆಯಾತಗಳು (ಇಂಪೋರ್ಸ್‌) ಹೆಚ್ಚಾದರೆ, ಆ ದೇಶಕ್ಕೆ ಇತರ ದೇಶಗಳು ತೆರಬೇಕಾದ ಹಣಕ್ಕಿಂತ, ಅದು ಬೇರೆ ದೇಶಗಳಿಗೆ ಕೊಡುವ ಹಣ ಹೆಚ್ಚಾಗುತ್ತದೆ. ಇನ್ನಿತರ ಬಾಬುಗಳಿಂದ ಬರುವ ಗಳಿಕೆ ಈ ಅಂತರವನ್ನು ಸರಿಪಡಿಸದಿದ್ದರೆ, ಆ ದೇಶದ ವಿದೇಶಿ ತೆರಿಗೆಯಲ್ಲಿ ಸಮತೋಲನವಿರುವುದಿಲ್ಲ; ಅದರಲ್ಲಿ ಕೊರೆ ಹುಟ್ಟುತ್ತದೆ. ಇದನ್ನು ಸರಿಪಡಿಸಲೋಸುಗ ಅಂತಾರಾಷ್ಟ್ರೀಯ ದ್ರವ್ಯನಿಧಿ ಆಗಾಗ ಅಲ್ಪಾವಧಿ ನೆರವು ನೀಡಿದರೂ ಅಷ್ಟು ಪ್ರಯೋಜನವಾಗುವುದಿಲ್ಲ. ಇಂಥ ಸ್ಥಿತಿ ಆ ದೇಶದ ಆರ್ಥಿಕ ಏಳಿಗೆಗೆ ಅಹಿತ. ಆದ್ದರಿಂದ ಇದನ್ನು ಸರಿಪಡಿಸಬೇಕು. ಇದನ್ನು ನಿರ್ಯಾತಗಳನ್ನು ಹಿಗ್ಗಿಸಿ, ಆಯಾತಗಳನ್ನು ಕುಗ್ಗಿಸಿ ಸರಿಪಡಿಸಬಹುದು; ಇಲ್ಲವೆ ಆ ದೇಶದ ಚಾಲ್ತಿಹಣದ ಬಾಹ್ಯಮೌಲ್ಯವನ್ನು ಬೇರೆ ದೇಶಗಳ ಚಾಲ್ತಿಹಣಗಳಲ್ಲಿ ಇಲ್ಲವೆ ಸ್ವರ್ಣದಲ್ಲಿ ಅಧಿಕೃತವಾಗಿ ತಗ್ಗಿಸುವುದರಿಂದಲೂ ಸಾಧ್ಯ. ಅವಮೂಲ್ಯನ ಮಾಡಿದ ದೇಶ ತನ್ನ ನಿರ್ಯಾತಗಳ ಧಾರಣೆಯನ್ನು ಅವಮೌಲ್ಯನದಿಂದ ಇಳಿಸಿದರೂ ಅವುಗಳಿಗೆ ಅನುಕೂಲ ಗಿರಾಕಿ ಇರುತ್ತದೆಂದು ಹೇಳಲಾಗುವುದಿಲ್ಲ; ಏಕೆಂದರೆ, ಇದು ವಿದೇಶೀ ಗ್ರಾಹಕರ ಮಾನಸಿಕ ಪ್ರವೃತ್ತಿ, ಅವರ ಆಯದ ಸ್ಥಿತಿ, ರಾಜಕೀಯ ನೀತಿ ಧೋರಣೆಗಳು ಇತ್ಯಾದಿ ಅಂಶಗಳನ್ನು ಅವಲಂಬಿಸಿದೆ. ಈ ದೇಶದ ಜೊತೆಯಲ್ಲಿ ಇತರ ದೇಶಗಳೂ ತಮ್ಮ ಹಣವನ್ನು ಅವಮೌಲ್ಯನಗೊಳಿಸಿ ರಫ್ತು ವಿಚಾರದಲ್ಲಿ ಪೈಪೋಟಿ ನಡೆಸುವುವೋ ಎನ್ನುವ ಅಂಶವೂ ಮುಖ್ಯ. ಅವಮೌಲ್ಯನದಿಂದ ಅದೃಶ್ಯ ನಿರ್ಯಾತಗಳು ತುಂಬ ಹೆಚ್ಚುವುವೆಂದು ತಿಳಿಯುವುದು; ಅವಮೂಲ್ಯನ ಮಾಡಿದ ದೇಶಕ್ಕೆ ಹೆಚ್ಚು ಹೆಚ್ಚು ವಿದೇಶೀಯರು ಪ್ರವಾಸ ಕೈಗೊಳ್ಳುವರೆಂದು ಬಗೆಯುವುದು; ವಿದೇಶೀ ಖಾಸಗಿ ಬಂಡವಾಳ ಹೂಡಿಕೆ ಹೆಚ್ಚುವುದೆಂದು ಗ್ರಹಿಸುವುದು- ಇವುಗಳೆಲ್ಲ ಯಶಸ್ವಿಯಾಗಬೇಕಾದರೆ ಅವಮೂಲ್ಯನ ಮಾಡಿದ ದೇಶದ ಆರ್ಥಿಕ ಆಯವ್ಯಯ ಮತ್ತು ರಾಜಕೀಯ ನೀತಿ, ಚಟುವಟಿಕೆಗಳು ಯಥೋಚಿತವಾಗಿರಬೇಕಾಗುತ್ತದೆ. ಈ ವಿಷಯಗಳನ್ನು ಸೂಕ್ಷ್ಮವಾಗಿ ವಿವೇಚಿಸಿ ಅವಮೂಲ್ಯನ ಮಾಡಿದಾಗ ಪರಿಸ್ಥಿತಿ ಅನುಕೂಲವಿದ್ದರೆ, ಅವಮೂಲ್ಯನದಿಂದ ನಿರ್ಯಾತ ಧಾರಣೆ ಇಳಿದು ನಿರ್ಯಾತಗಳ ಗಿರಾಕಿ ವಿದೇಶೀ ಮಾರುಕಟ್ಟೆಗಳಲ್ಲಿ ಹೆಚ್ಚುತ್ತದೆ. ಗಿರಾಕಿ ಹೆಚ್ಚಿದಂತೆ, ಅದೇ ಪ್ರಮಾಣದಲ್ಲಿ ನಿರ್ಯಾತ ಸರಕುಗಳನ್ನು ಸರಬರಾಜು ಮಾಡಿದರೆ ವಿದೇಶಿವಿನಿಮಯದ ಗಳಿಕೆಯೂ ಹೆಚ್ಚುತ್ತದೆ. ವಿದೇಶೀ ತೆರಿಗೆಯ ಸಮತೋಲನದಲ್ಲಿರುವ ಕೊರೆ, ಶಿಲ್ಕು ತಗ್ಗುತ್ತದೆ. ಕ್ರಮೇಣ ಮೂಲಭೂತ ಸಮತೋಲ ಸರಿಹೋಗುತ್ತದೆ.

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: