ಅರೇಬಿಯನ್ ಮರುಭೂಮಿ
.
ಅರೇಬಿಯನ್ ಮರುಭೂಮಿ ಅರೇಬಿಯಾ ಜಂಬೂದ್ವೀಪದ ಬಹುಪಾಲನ್ನು ಆವರಿಸಿರುವ ಬೃಹತ್ ವಿಸ್ತೀರ್ಣದ ಬೆಂಗಾಡು. ಯೆಮೆನ್‌ನಿಂದ ಪರ್ಶಿಯನ್ ಕೊಲ್ಲಿಯವರೆಗೆ ಹಾಗೂ ಒಮಾನ್ ನಿಂದ ಜೋರ್ಡಾನ್ ಮತ್ತು ಇರಾಖ್‌ವರೆಗೆ ವ್ಯಾಪಿಸಿರುವ ಅರೇಬಿಯನ್ ಮರುಭೂಮಿಯ ಒಟ್ಟು ಹರವು ೨೩,೩೦,೦೦೦ ಚ.ಕಿ.ಮೀ. ಗಳಷ್ಟು. ಇದರ ಸರಿಸುಮಾರು ಮಧ್ಯಭಾಗದಲ್ಲಿರುವ ರಬ್ ಅಲ್-ಖಾಲಿ ಯು ಬರಿಯ ಮರಳನ್ನು ಬಿಟ್ಟು ಇನ್ನೇನೂ ಇಲ್ಲದಿರುವ ಪ್ರದೇಶಗಳ ಪೈಕಿ ಜಗತ್ತಿನಲ್ಲಿಯೇ ವಿಸ್ತಾರದಲ್ಲಿ ಹಿರಿದು. ಇಂತಹ ಕ್ರೂರ ಪ್ರಕೃತಿಯ ನಡುವೆ ಸಹ ಮರಳುಗಾಡಿನ ಜಿಂಕೆ , ಓರಿಕ್ಸ್, ಮರಳ ಬೆಕ್ಕು ಮತ್ತು ಕೆಲ ಹಲ್ಲಿಯ ಜಾತಿಯ ಪ್ರಾಣಿಗಳು ಮರುಭೂಮಿಯ ಜೀವನಕ್ಕೆ ಹೊಂದಿಕೊಂಡು ಬಾಳುತ್ತಿವೆ. ವಿಪರೀತ ಹವಾಗುಣವುಳ್ಳ ಈ ಪ್ರದೇಶದಲ್ಲಿ ಋತುಮಾನಕ್ಕನುಗುಣವಾಗಿ ಹಗಲಿನ ತಾಪಮಾನ ಕುದಿಯುವಷ್ಟಾದರೆ ರಾತ್ರಿಯ ವೇಳೆ ಹೆಪ್ಪುಗಟ್ಟಿಸುವ ತಂಪು. ಇಲ್ಲಿನ ಪರಿಸರದಲ್ಲಿ ಕೆಲವೇ ಜಾತಿಯ ಸಸ್ಯಗಳ ಹೊರತಾಗಿ ಹೆಚ್ಚಿನ ಜೀವವೈವಿಧ್ಯ ಕಾಣಬರುವುದಿಲ್ಲ.
ವಾತಾವರಣ
[ಬದಲಾಯಿಸಿ]ಅರೇಬಿಯನ್ ಮರುಭೂಮಿಯ ಬಹುತೇಕ ಭಾಗ ಅತಿ ಶುಷ್ಕ ವಾತಾವರಣವನ್ನು ಹೊಂದಿದೆ. ಸರಾಸರಿ ವಾರ್ಷಿಕ ಮಳೆಯು ೩೫ ಮಿ.ಮೀ. ಗಿಂತ ಕಡಿಮೆ. ತಾಪಮಾನವು ಹಗಲಿನಲ್ಲಿ ೪೦ ರಿಂದ ೫೦ ಡಿಗ್ರಿ ಸೆಲ್ಸಿಯಸ್ ಇದ್ದರೆ ರಾತ್ರಿಯ ಹೊತ್ತು ೫ ರಿಂದ ೧೫ ಡಿ. ಸೆ.ನಷ್ಟು. ಚಳಿಗಾಲದಲ್ಲಿ ರಾತ್ರಿಯ ತಾಪಮಾನ ಶೂನ್ಯವನ್ನು ತಲುಪುವುದೂ ಇದೆ.
ಸಸ್ಯ ವೈವಿಧ್ಯ
[ಬದಲಾಯಿಸಿ]ಅರೇಬಿಯನ್ ಮರುಭೂಮಿಯಲ್ಲಿ ಸಸ್ಯ ವೈವಿಧ್ಯ ಬಲು ಕಡಿಮೆ. ಮಧ್ಯಭಾಗದಲ್ಲಿ ೨೦ ಬಗೆಯ ಸಸ್ಯಗಳಿದ್ದರೆ ಅಂಚಿನಲ್ಲಿ ೧೭ ಬಗೆಯ ಗಿಡಮರಗಳು ಕಾಣಬರುತ್ತವೆ. ಇವ್ಗಳ ಪಕಿ ಎರಡೂ ತಳಿಯ ಸಸ್ಯಗಳು ಮಾತ್ರ ಮರುಭೂಮಿಯಲ್ಲಿ ಸ್ಸರ್ವತ್ರಿಕವಾಗಿ ಕಾಣುತ್ತವೆ. ಬಹಳಷ್ಟು ಸಸ್ಯಗಳು ಗಿಡಗಳೆ ಆಗಿದ್ದು ಕೆಲವೇ ಜಾತಿಯ ಮರಗಳನ್ನು ಕಾಣಬಹುದು. ಇವುಗಳಲ್ಲಿ ಖರ್ಜೂರದ ಮರ ಬಲು ಮುಖ್ಯವಾದುದು.
ಮರುಭೂಮಿಯಲ್ಲಿನ ರಾಷ್ಟ್ರಗಳು ಮತ್ತು ಜನಜೀವನ
[ಬದಲಾಯಿಸಿ]ಮರುಭೂಮಿಯ ಹೆಚ್ಚಿನ ಭಾಗ ಸೌದಿ ಅರೇಬಿಯಾದಲ್ಲಿ ಇದೆ. ಮರುಭೂಮಿಯ ಉಳಿದ ಅಂಶ [[ಈಜಿಪ್ಟ್]ನ ಸೈನಾಯ್, ಇರಾಖ್, ಜೋರ್ಡಾನ್,ಸಿರಿಯಾ, ಖತಾರ್, ಯು.ಎ.ಇ.,ಒಮಾನ್, ಯೆಮೆನ್ ಮತ್ತು ಕುವೈಟ್ ರಾಷ್ಟ್ರಗಳಲ್ಲಿದೆ. ಈ ಮರುಭೂಮಿಯ ಪ್ರದೇಶದಲ್ಲಿ ವಾಸಿಸುವ ಜನರಲ್ಲಿ ಅರಬರು, ಕುರ್ದ್, ತುರ್ಕ್ಮೆನಿ ಮತ್ತು ಅಸ್ಸೀರಿಯನ್ ಜನಾಂಗದವರು ಸೇರಿದ್ದಾರೆ. ಮುಖ್ಯ ಭಾಷೆಗಳು ಅರಾಬಿಕ್, ಕುರ್ದಿಶ್, ಅರಮೈಕ್ ಮತ್ತು ಆರ್ಮೇನಿಯನ್ ನುಡಿಗಳು.