ಅಮೈಡುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಾವಯವ ಆಮ್ಲದ ಅಮೈಡಿನ ಸಾಮಾನ್ಯ ರಚನೆ

ಅಮೈಡು[೧][೨][೩] ರಾಸಾಯನಿಕ ಸಂಶ್ಲೇಷಣೆಗಳಲ್ಲಿ ಪ್ರಮುಖ ಮಧ್ಯವರ್ತಿಗಳಾಗಿರುವ ರಾಸಾಯನಿಕ ಸಂಯುಕ್ತಗಳ ಒಂದು ಗುಂಪಿನ ಹೆಸರು. ಅಮೋನಿಯದಲ್ಲಿರುವ ಒಂದು ಜಲಜನಕ ಪರಮಾಣುವಿಗೆ ಬದಲಾಗಿ ಯಾವುದೇ ಸಾವಯವ ಆಮ್ಲದಿಂದ ಜನ್ಯವಾದ ಏಸೈಲ್ ಅಣ್ವಂಗವನ್ನಾಗಲೀ (ರ‍್ಯಾಡಿಕಲ್) ನಿರವಯವ ಲೋಹದ ಮೂಲವಸ್ತು ಒಂದರ ಪರಮಾಣುವನ್ನಾಗಲೀ ಇಟ್ಟಾಗ ಒದಗುವ ಸಂಯುಕ್ತವೇ ಅಮೈಡು.

ಉದಾಹರಣೆಗಳು[ಬದಲಾಯಿಸಿ]

ನಿರವಯವ ಲೋಹದ ಅಮೈಡಿಗೆ ಪೊಟಾಸಿಯಂ ಅಮೈಡನ್ನೂ (K-NH2) ಸಾವಯವ ಆಮ್ಲದ ಅಮೈಡಿಗೆ ಅಸಿಟಮೈಡನ್ನೂ (CH3-CO-NH2) ಉದಾಹರಿಸಬಹುದು. ಸಲ್ಫನಿಲಮೈಡು H2N-C6H4-SO2NH2 ಸಲ್ಫೋನಿಕ್ ಆಮ್ಲದಿಂದ ಆದ ಅಮೈಡು.

ಸಾವಯವ ಅಮೈಡುಗಳ ಗುಣಗಳು[ಬದಲಾಯಿಸಿ]

ಸಾವಯವ ಅಮೈಡುಗಳಲ್ಲಿ ಬಹುತೇಕ ಸ್ಫಟಿಕರೂಪದ ಘನವಸ್ತುಗಳು. ಇವನ್ನು ಆಮ್ಲ ಅಥವಾ ಕ್ಷಾರಗಳ ಜೊತೆಯಲ್ಲಿ ಕೂಡಿಸಿ ಕುದಿಸಿದರೆ ಸುಲಭವಾಗಿ ವಿಭಜನೆ ಹೊಂದಿ ಆಯಾ ಆಮ್ಲವನ್ನೂ ಅಮೋನಿಯವನ್ನೂ ಕೊಡುತ್ತವೆ. ಇವು ಕಡಿಮೆ ಉಷ್ಣತೆಯಲ್ಲಿ ಕರಗುವ ಕಾರಣ, ಸಾವಯವ ಆಮ್ಲಗಳನ್ನು ಗುರುತಿಸುವಲ್ಲಿ ಇವನ್ನು ಉಪಯೋಗಿಸಲಾಗುತ್ತದೆ.

ಅಮೈಡುಗಳ ಉಪಯೋಗಗಳು[ಬದಲಾಯಿಸಿ]

ಸರಳರೂಪದ ಅಮೈಡುಗಳು (ಉದಾ: ಅಸಿಟಮೈಡ್) ಅಷ್ಟಾಗಿ ಕೈಗಾರಿಕಾ ಪ್ರಾಮುಖ್ಯವನ್ನು ಹೊಂದಿಲ್ಲವಾದರೂ ಅವುಗಳ ಕೆಲವು ಜನ್ಯವಸ್ತುಗಳು (ಡಿರವೆಟಿವ್ಸ್) ಉತ್ತಮೋತ್ತಮ ವಿಲಯಕಗಳಾಗಿವೆ. ಸಲ್ಫನಿಲಮೈಡು ಎಂಬ ಹಿಂದೆ ಹೆಸರಿಸಿದ ಸಲ್ಫೋನಿಕ್ ಆಮ್ಲದ ಅಮೈಡಿನಿಂದ ಜನ್ಯವಾದ ಹಲವಾರು ಸಂಯುಕ್ತಗಳು ಸಲ್ಫಮದ್ದುಗಳೆಂದು ಹೆಸರಾಗಿವೆ. ಉದಾಹರಣೆಗೆ ಸಲ್ಫಪಿರಿಡಿನ್, ಸಲ್ಫಡಯನ್, ಸಲ್ಫಗ್ವಾನಡೀನ್ ಇತ್ಯಾದಿ.

ಉಲ್ಲೇಖಗಳು[ಬದಲಾಯಿಸಿ]

  1. "Amide definition and meaning - Collins English Dictionary". www.collinsdictionary.com. Retrieved 15 April 2018.
  2. "amide". The American Heritage Dictionary of the English Language (5th ed.). HarperCollins.
  3. "amide - Definition of amide in English by Oxford Dictionaries". Oxford Dictionaries – English. Archived from the original on 2 April 2015. Retrieved 15 April 2018.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: