ವಿಷಯಕ್ಕೆ ಹೋಗು

ಅನೇಕತ್ವವಾದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅನೇಕತ್ವವಾದ ಅಂತಿಮಸತ್ಯ ಒಂದಕ್ಕಿಂತ ಹೆಚ್ಚಿನದಲ್ಲ ಎಂದು ಏಕತ್ವವಾದ ಹೇಳಿದರೆ ಅನೇಕತ್ವವಾದ ಸತ್ಯ ಒಂದೇ ಅಲ್ಲ ಎರಡಿರಬಹುದು ಅಥವಾ ಇನ್ನೂ ಅನೇಕ ಇರಬಹುದು ಎಂಬ ವಾದವನ್ನು ಪ್ರತಿಪಾದಿಸುತ್ತದೆ.

ಅನೇಕತ್ವವಾದದ ಉಗಮ[ಬದಲಾಯಿಸಿ]

ಸತ್ಯ ಅನೇಕವಾಗಿದ್ದಲ್ಲಿ ಎಲ್ಲವೂ ಒಂದೇ ಮೌಲ್ಯ ಅಥವಾ ದರ್ಜೆಯದೇ ಅಥವಾ ಅವುಗಳಲ್ಲಿ ತಾರತಮ್ಯವೇನಾದರೂ ಇದೆಯೇ ಎಂಬ ಪ್ರಶ್ನೆ ಏಳುತ್ತದೆ. ಇನ್ನೊಂದು ವಿಧವಾಗಿಯೂ ಪ್ರಶ್ನೆಮಾಡಬಹುದು. ಇವು ಸಚೇತನವಾದುವೆ ಅಥವಾ ಜಡಜಗತ್ತಿಗೆ ಸೇರಿದ ಸತ್ಯಗಳು ಮಾತ್ರವೆ ಅಥವಾ ಚೇತನಾಚೇತನಗಳೆರಡರಲ್ಲಿಯೂ ಅನೇಕತ್ವವಿದೆಯೆ ಎಂಬ ಪ್ರಶ್ನೆಗಳನ್ನು ಹಾಕಬಹುದು. ಒಂದೇ ಸತ್ಯದಲ್ಲಿ ಗುಣಗಳ ಅನೇಕತ್ವವಿದೆ ಎಂದು ಕೆಲವು ಅನೇಕತ್ವವಾದಿಗಳು ನಿರೂಪಿಸಿರುತ್ತಾರೆ. ಎರಡೇ ಸತ್ಯಗಳನ್ನು ಅನೇಕತ್ವವೆಂದು ಹೇಳುವುದು ದ್ವೈತವಾದ. ಅನೇಕತ್ವವನ್ನು ಹೇಳಿ ಆ ಸತ್ಯಗಳಲ್ಲಿ ಪರಸ್ಪರ ಸಂಬಂಧವೇನಾದರೂ ಇದೆಯೆ ಅಥವಾ ಒಂದೊಂದೂ ಸ್ವತಂತ್ರವಾದುದೆ ಎಂಬ ಪ್ರಶ್ನೆಗಳಿಗೆ ಅನೇಕತ್ವವಾದಿಗಳಾದ ದಾರ್ಶನಿಕರು ಉತ್ತರ ಕೊಡಲು ಪ್ರಯತ್ನಿಸಿದ್ದಾರೆ. ಹಾಗೆಯೆ ಮೇಲಿನ ಪ್ರಶ್ನೆಗಳನ್ನೂ ಪರೀಕ್ಷಿಸಿದ್ದಾರೆ. ಅನೇಕತ್ವ ತೋರಿಕೆ ಮಾತ್ರವೇ ಇದೆ ಎಂದು ನಿಷ್ಪ್ರಪಂಚವಾದಿಗಳೂ ಅದ್ವೈತ ದರ್ಶನಕಾರರೂ ಹೇಳಿದರು. ಹಿಂದೂದರ್ಶನಗಳಲ್ಲಿ ಅದ್ವೈತ ಜೀವಾತ್ಮ ಪರಮಾತ್ಮರೆಂಬ ಭೇದವನ್ನು ಖಂಡಿಸಿ ಜಗತ್ತನ್ನು ಮಿಥ್ಯೆ ಎಂದು ಹೇಳಿ ಏಕತ್ವವನ್ನು ಪ್ರತಿಪಾದಿಸಿದೆ. ದ್ವೈತದರ್ಶನವೂ ವಿಶಿಷ್ಟಾದ್ವೈತವೂ ಜೀವಾತ್ಮ ಪರಮಾತ್ಮರ ಭೇದವನ್ನು ಒಪ್ಪಿಕೊಂಡು ಅನೇಕರಾದ ಜೀವಾತ್ಮರು ಮುಕ್ತರಾದಾಗಲೂ ಪರಮಾತ್ಮನಿಂದ ಬೇರೆಯಾಗಿಯೆ ಉಳಿಯುತ್ತಾರೆಂದು ಅನೇಕತ್ವವಾದವನ್ನು ಸಮರ್ಥಿಸುತ್ತವೆ. ದ್ವೈತದರ್ಶನ ಪಂಚಭೇದಗಳಿಂದಲೂ ಚರಾಚರಜಗತ್ತಿನಲ್ಲಿ, ಪ್ರಕೃತಿ ಪುರುಷರಲ್ಲಿ ತಾರತಮ್ಯಗಳಿಂದಲೂ ಅನೇಕತ್ವವಿದೆ ಎಂದು ವಾದಿಸುತ್ತದೆ. ಪಾಶ್ಚಾತ್ಯ ಅನೇಕತ್ವವಾದಿಗಳು ಚೇತನಶಕ್ತಿಯಲ್ಲಿ ಪ್ರತಿಯೊಂದು ಭಾಗಕ್ಕೂ ತನ್ನದೇ ಆದ ಪ್ರತ್ಯೇಕ ಅನುಭವವಿದೆಯಾದುದರಿಂದಲೇ ಅದು ಬೆಳೆದು ಅಭಿವೃದ್ಧಿಯಾಗುತ್ತದೆ ಎಂದು ನಿರೂಪಿಸಿದ್ದಾರೆ. ಇವರಲ್ಲಿ ಮುಖ್ಯರಾದವರು ಲೀಬ್ನಿಟ್ಸ್, ಮ್ಯಾಕ್ಟ್‍ಗಟ್ಸ್ ಮತ್ತು ಜೇಮ್ಸ್ ವಾರ್ಡ್.

ಲೀಬ್ನಿಟ್ಸ್[ಬದಲಾಯಿಸಿ]

ಲೀಬ್ನಿಟ್ಸ್ 17ನೆಯ ಶತಮಾನದ ಅಂತ್ಯದಲ್ಲಿ ಅನೇಕತ್ವವಾದವನ್ನು ತನ್ನದೇ ಆದ ಒಂದು ಶೈಲಿಯಲ್ಲಿ ನಿರೂಪಿಸಿದೆ. ಈತನ ಪ್ರಕಾರ ಜಡವಾದುದಾವುದೂ ಸತ್ಯವಲ್ಲ. ಅದು ತೋರಿಕೆಯೆ ಹೊರತು ವಾಸ್ತವವಾದುದಲ್ಲ. ವಿಶ್ವ ಚೇತನಮಯವಾದುದು ಮತ್ತು ಅಸಂಖ್ಯಾತ ಚೇತನಾಣುಗಳಿಂದ (ಮೊನ್ಯಾಡ್ಸ್) ತುಂಬಿದುದು. ಪ್ರತಿಯೊಂದು ಜೇತನಾಣುವೂ ತನ್ನದೇ ವೈಶಿಷ್ಟ್ಯವನ್ನೂ ವ್ಯಕ್ತಿತ್ವವನ್ನೂ ಹೊಂದಿದೆ. ಅದರ ವ್ಯಕ್ತಿತ್ವ ಇದರ ಚೇತನಾಣುಗಳಿಂದ ಬದಲಾವಣೆಯಾಗುವಂಥದಲ್ಲ; ಚೇತನ ಶಕ್ತಿಯನ್ನು ಪೂರ್ತಿಯಾಗಿ ಹೊಂದಿರುವುದಿಲ್ಲ. ಸುಪ್ತಸ್ಥಿತಿಯಲ್ಲಿ ಇರಬಹುದು. ಕೆಲವು ಸ್ವಪ್ನಾವಸ್ಥೆಯಲ್ಲಿ ಇದ್ದಂತೆ ಇರಬಹುದು. ಮತ್ತೆ ಕೆಲವು ಇನ್ನೂ ಸ್ಪಷ್ಟವಾದ ಜಾಗೃತಾವಸ್ಥೆಯನ್ನು ಹೊಂದಿರಬಹುದು. ಸಂಪೂರ್ಣ ಚೇತನವಾದ ವ್ಯಕ್ತಿ ದೇವರೊಬ್ಬನೆ. ಪ್ರತಿಯೊಂದು ಚೇತನಾಣುವಿಗೂ ಅಂತರ್ಗತವಾದ ಕ್ರಿಯಾಶಕ್ತಿ ಇದೆ. ಇತರ ಚೇತನಾಣುಗಳ ಸಹಾಯದಿಂದ ಅದು ಕ್ರಿಯೆಯನ್ನು ಮಾಡುವುದಿಲ್ಲ. ಎಲ್ಲವೂ ಸ್ವಸಂಪೂರ್ಣವಾಗಿಯೆ ಭಗವಂತನಿಂದ ಸೃಷ್ಟಿಸಲ್ಪಟ್ಟವು. ಅವನು ಸೃಷ್ಟಿಸುವಾಗಲೇ ಅವುಗಳ ಸ್ವತಂತ್ರ ಇರುವಿಕೆಯನ್ನು ಉಂಟುಮಾಡಿದ್ದಾನೆ. ಅವನಿಂದಲೆ ಚೇತನಾಣುಗಳು ಅಭಿವ್ಯಕ್ತವಾಗಿ ಬಂದಿವೆ. ಪ್ರತಿಯೊಂದು ಚೇತನಾಣುವೂ ವಿಶ್ವವನ್ನು ಪ್ರತಿನಿಧಿಸುತ್ತದೆ. ಯಾವುದೇ ಒಂದು ಚೇತನಾಣುವೂ ಇರದಿದ್ದಲ್ಲಿ ವಿಶ್ವವೇ ಬದಲಾಗಿರುತ್ತಿತ್ತು. ಪ್ರತಿಯೊಂದು ಚೇತನಾಣುವೂ ದೋಷರಹಿತವಾದ ಗಡಿಯಾರದಂತೆ ತನ್ನ ಕ್ರಿಯೆಯನ್ನು ಮಾಡುತ್ತಿರುತ್ತದೆ. ಅದು ಬದಲಾವಣೆ ಹೊಂದಿದರೂ ಇತರ ಚೇತನಾಣುಗಳ ಬದಲಾವಣೆಯನ್ನು ಅನುಸರಿಸುವಂತೆ ಮೊದಲೇ ನಿಯಮಿಸಲ್ಪಟ್ಟಿರುತ್ತದೆ. ಪರಮಾತ್ಮನಿಂದ ವಿಶ್ವದಲ್ಲಿ ಸಾಮರಸ್ಯ ಪೂರ್ವಭಾವಿಯಾಗಿ ಸ್ಥಾಪಿಸಲ್ಪಟ್ಟಿದೆ. ಆ ಸಾಮರಸ್ಯ ಸ್ವಲ್ಪವೂ ವ್ಯತ್ಯಾಸವಾಗದಂತೆ ಚೇತನಾಣುಗಳು ಸ್ವತಂತ್ರವಾಗಿ ಜೀವಿಸುತ್ತವೆ. ಚೇತನಾಣುಗಳಲ್ಲಿ ಕೆಲವು ಪ್ರಧಾನವಾದುವು. ಕೆಲವು ಅಧೀನವಾದುವು. ಹೆಚ್ಚಾದ ವಿಷಯಗ್ರಹಣಶಕ್ತಿಯನ್ನು ಪಡೆದವು ಪ್ರಧಾನವಾದುವು. ಚೇತನಾಣುಗಳ ಸಂಘಟನೆಯಿಂದ ಮಾನವ, ಪ್ರಾಣಿ, ಸಸ್ಯಗಳು ರೂಪಿಸಲ್ಪಟ್ಟಿದೆ. ಮಾನವನಲ್ಲಿ ವಿಚಾರಶಕ್ತಿ ಪ್ರಧಾನವಾಗಿದ್ದು ಅವನ ವಿಕಾಸಕ್ಕೆ ಅನುಗುಣವಾದ ಅಂಶಗಳೆಲ್ಲವೂ ಅವನು ಜನಿಸುವಾಗಲೆ ಅವ್ಯಕ್ತರೀತಿಯಲ್ಲಿ ಅಡಗಿರುತ್ತದೆ. ಪ್ರಧಾನವಾದ ಚೇತನಾಣುವೇ ಆತ್ಮ. ಕ್ರಿಯಾಶಕ್ತಿ ಇರುವ ಚೇತನಾಣುಗಳಿಗೆ ಕ್ರಿಯಾಶಕ್ತಿ ಹೀನವಾದ ಚೇತನಾಣುಗಳು ಅಧೀನ. ಹೀಗೆ ಆತ್ಮಕ್ಕೆ ದೇಹ ಅಧೀನ. ದೇಹಕ್ಕೆ ವಿಷಯಗ್ರಹಣಶಕ್ತಿ ಇಲ್ಲ. ಆದರೆ ಅದೂ ಆತ್ಮದಂತೆಯೆ ಅಭೌತಿಕ. ಎಲ್ಲ ಚೇತನಾಣುಗಳೂ ಯಾವಾಗಲೂ ಒಂದು ಚೇತನಶಕ್ತಿ ಇರುವುದಿಲ್ಲ. ಹೀಗೆ ಆತ್ಮವೂ ಕೆಲವು ವೇಳೆ ತನ್ನ ವಿಷಯಗ್ರಹಣಶಕ್ತಿಯಲ್ಲಿ ಕುಗ್ಗಿ ದೇಹದಂತೆಯೆ ಕ್ರಿಯಾಶಕ್ತಿಯನ್ನು ಕಳೆದುಕೊಳ್ಳಬಹುದು.ಚೇತನಾಣುಗಳ ಸಂಘಟನೆ ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಮಾನವ ಶರೀರದಲ್ಲಿರುವ ಕೆಲವು ಚೇತನಾಣುಗಳು ಹೋಗುತ್ತಿರುತ್ತವೆ. ಕೆಲವು ಹೊಸದಾಗಿ ಬಂದು ಸೇರುತ್ತಿರುತ್ತವೆ. ವಿಷಯಗ್ರಹಣಶಕ್ತಿ ಕಡಿಮೆ ಇರುವ ಚೇತನಾಣುಗಳಿಂದ ಪ್ರಾಣಿ ಮತ್ತು ಸಸ್ಯಗಳು ಆಗಿವೆ. ಲೀಬ್ನಿಟ್ಸ್ ಮುಂದೆ ಬರುವ ಮುಖ್ಯವಾದ ಪಾಶ್ಚಾತ್ಯ ದಾರ್ಶನಿಕರೆಲ್ಲರ ಮೇಲೂ ತನ್ನ ತತ್ತ್ವದಿಂದ (ಮೊನ್ಯಾಡಾಲಜಿ) ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವವನ್ನು ಬೀರಿದ್ದಾನೆ.

ಮ್ಯಾಕ್ಟ್‍ಗರ್ಟ್[ಬದಲಾಯಿಸಿ]

ಈತ ಹೆಗೆಲ್‍ನ ಶಿಷ್ಯವೃಂದಕ್ಕೆ ಸೇರಿದವನೆನ್ನಬಹುದು. 19ನೆಯ ಶತಮಾನದಲ್ಲಿ ಅನೇಕತ್ವವಾದವನ್ನು ಪಾಶ್ಚಾತ್ಯರಲ್ಲಿ ಪ್ರತಿಪಾದಿಸಿದ. ಈತ ಮತಸಂಬಂದವಿಲ್ಲದ ಅನೇಕತ್ವವಾದಿ. ಇವನ ಹಿಂದೆ ಹೆಗಲ್, ಬ್ರಾಡ್ಲೆ, ಬೊಸಾಂಕೆ ಮೊದಲಾದವರು ಏಕತ್ವವಾದಿಗಳಾಗಿದ್ದರು. ಹೆಗೆಲ್‍ನ ತತ್ತ್ವವನ್ನು ಸ್ಥೂಲವಾಗಿ ಒಪ್ಪಿಕೊಂಡರೂ ಈತ ಏಕತ್ವವನ್ನು ಖಂಡಿಸಿದ. ಲೀಬ್ನಿಟ್ಸ್‍ನಿಂದಲೂ ಪ್ರಭಾವಿತನಾದ. ಆದರೆ ಈತ ಅನೇಕತ್ವ ಸ್ವತಸ್ಸಿದ್ದವೆಂದು ಹೇಳಿ ಅದನ್ನು ಇಂದ್ರಿಯ ಜನಿತವಾದ ಅನುಭವದಿಂದ ಸಮರ್ಥಿಸಿದ. ವಸ್ತುವಿನ ಭೇದಗಳು ಸ್ಪಷ್ಟವಾಗಿವೆಯೆಂದೂ ಅವುಗಳಲ್ಲಿ ಗುಣಭೇದವಿರುವುದರಿಂದ ಅವು ಅನೇಕವಾಗಿವೆಯೆಂದೂ ಅವುಗಳಿಗೆ ಪರಸ್ಪರ ಸಂಬಂಧವಿದೆಯೆಂದೂ ವಾದಿಸಿದ. ಗುಣಸಂಬಂಧವಿಲ್ಲದಿದ್ದರೂ ಎಲ್ಲ ವಸ್ತುಗಳಿಗೂ ಪರಸ್ಪರಸಂಬಂಧವಿರಲೇಬೇಕು ಎಂದು ಇವನ ಅಭಿಪ್ರಾಯ. ವಸ್ತುಗಳೆಲ್ಲ ವಿಶ್ವದ ಭಾಗಗಳು. ಆದರೆ ವಿಶ್ವದಲ್ಲಿ ಪೂರ್ಣತ್ವವಿದೆ. ಈ ಪೂರ್ಣತ್ವದ ಭಾಗಗಳು ಪೂರ್ಣತ್ವಕ್ಕೆ ಸಂಬಂಧಿಸಿದುವುಗಳಾಗಿ ಹೊಂದಿಕೊಂಡಿರುವುದರಿಂದ ವಿಶ್ವನೈಜವಾದ ಏಕತ್ವವನ್ನು ಹೊಂದಿದೆ.ವಸ್ತುಗಳು ಭಿನ್ನತೆಯನ್ನು ಹೊಂದಿರುತ್ತವೆ. ಈ ಭಿನ್ನತೆ ಅತಿ ತೊಡಕಾಗಿದ್ದರೂ ಅವುಗಳಲ್ಲಿ ಒಂದು ಹೊಂದಿಕೆಯನ್ನು ಕಾಣಬಹುದು. ಕಾರ್ಯಕಾರಣ ಸಂಬಂಧದಿಂದ ಮಾತ್ರ ಈ ತೊಡಕನ್ನು ಬಿಡಿಸಬಹುದು. ಒಂದೇ ವಸ್ತು ವಿಭಾಗವಾಗುತ್ತ ಬಂದು ಹಂತಹಂತವಾದ ಭಿನ್ನತೆ ಏರ್ಪಟ್ಟಿದೆ. ಒಂದು ವಸ್ತುವಿನ ಭಾಗಗಳೆಲ್ಲವನ್ನೂ ಅವುಗಳ ಸಂಬಂಧವನ್ನೂ ಅರಿತರೆ ಮಾತ್ರ ವಸ್ತುವನ್ನು ಅರಿಯಬಹುದು. ಮ್ಯಾಕ್ಟ್‍ಗರ್ಟ್ ಏಕತ್ವವನ್ನು ಸಂಪೂರ್ಣವಾಗಿ ಖಂಡಿಸಿಲ್ಲವೆನ್ನಬಹುದು. ಆದರೆ ಅನೇಕತ್ವದ ಕಡೆಗೆ ಅವನ ಮನಸ್ಸು ವಾಲಿದೆ.ವಿಶ್ವದ ಸತ್ಯ ಭಾವಪ್ರಧಾನವಾದುದೆಂದೂ ಚೇತನಾಮಯವಾದುದೆಂದೂ ಮುಂದೆ ಆತ ಹೇಳಿದ್ದಾನೆ. ಸತ್ಯದ ಸ್ವರೂಪ ಭಿನ್ನತೆಯಲ್ಲಿ ಹೆಚ್ಚು ಸ್ಪಷ್ಟವಾಗಿದೆ. ವಿದ್ಯಾಸಂಸ್ಥೆಯಲ್ಲಿರುವ ವಿದ್ಯಾರ್ಥಿಗಳು ಸಂಸ್ಥೆಗಿಂತ ಸತ್ಯ ಎನ್ನಬಹುದು ಉದಾಹರಣೆ ಕೊಡುತ್ತಾನೆ. ಅಂದರೆ ಅನೇಕತ್ವವೇ ಹೆಚ್ಚು ವಾಸ್ತವವಾದುದು. ಪ್ರತಿಯೊಂದು ಚೇತನವೂ ಸ್ವತಂತ್ರವಾದುದೆಂದು ಅದರ ಅಸ್ತಿತ್ವಕ್ಕೆ ದೇವರಾಗಲಿ ಮತ್ತೊಂದು ಪರವಸ್ತುವಾಗಲಿ ಕಾರಣವಲ್ಲವೆಂದು ಇವನ ವಾದ. ವ್ಯಕ್ತಿತ್ವ-ವೈಶಿಷ್ಟ್ಯವನ್ನು ಸಮರ್ಥಿಸಿದವರಲ್ಲಿ ಈತ ಅಗ್ರಗಣ್ಯ. ಆತ್ಮ ಅನಾದಿ, ಅನಂತನೆಂದೂ ಅದನ್ನು ಸೃಷ್ಟಿಸುವುದಕ್ಕೆ ಬೇರಾವುದೂ ಕಾರಣವಲ್ಲವೆಂದೂ ಇವನ ಅಭಿಪ್ರಾಯ. ಕಾಲವೆನ್ನುವುದು ಬರಿ ತೋರಿಕೆಯೆಂದೂ ವ್ಯಕ್ತಿತ್ವ ಅನಾದಿಯಾದಂತೆ ಕಾಲಾತೀತವೆಂದೂ ಮರಣದಿಂದ ಜೀವ ನಾಶವಾಗುವುದಿಲ್ಲವೆಂದೂ ಈತ ಹೇಳಿದ್ದಾನೆ. ಇವನು ಭಗವಂತನನ್ನು ಒಪ್ಪಿಕೊಳ್ಳುವ ಅವಶ್ಯಕತೆಯೇ ಇಲ್ಲವೆನ್ನುತ್ತಾನೆ. ಇವನ ವಾದವನ್ನು ಬುದ್ಧನ ತತ್ತ್ವಕ್ಕೆ ಹೋಲಿಸಬಹುದು.ಭಿನ್ನ ಭಿನ್ನವಾದ ವ್ಯಕ್ತಿಗಳು ಪರಸ್ಪರ ಪ್ರೇಮದಿಂದ ಒಂದುಗೂಡಿರುವುದು ಸ್ವಾಭಾವಿಕವೆಂದೂ ಮಿತ್ರತ್ವವೇ ವಿಶ್ವದ ನಿಯಮವೆಂದೂ ಈತ ಹೇಳಿ ಸತ್ಯವನ್ನು ಮುಟ್ಟಬೇಕಾದರೆ ಸದ್ಗುಣದಿಂದಲೇ ಸಾಧ್ಯವೆಂದೂ ಪ್ರೇಮದ ಪರಿಪೂರ್ಣತೆಯೇ ಸತ್ಯದ ನೆಲೆಯೆಂದೂ ತಿಳಿಸಿದ್ದಾನೆ.

ಜೇಮ್ಸ್ ವಾರ್ಡ್[ಬದಲಾಯಿಸಿ]

ಮ್ಯಾಕ್ಟ್‍ಗರ್ಟನ ಸಮಕಾಲೀನ. ವಿಜ್ಞಾನದಲ್ಲಿ ಪಂಡಿತ, ಮನಶ್ಯಾಸ್ತ್ರಜ್ಞರಲ್ಲಿ ಪ್ರಸಿದ್ಧ. ವ್ಯಕ್ತಿಗೂ ಮನೋಧರ್ಮ ವಿಶಿಷ್ಟವಾದುದು. ಯಾವ ಎರಡು ವ್ಯಕಿಗಳೂ ಒಂದೇ ವಿಧವಲ್ಲವೆಂದು ಈತ ವಾದಿಸಿದ. ಲೀಬ್ನಿಟ್ಸನ ಚೇತನಾಣುಗಳ ತತ್ತ್ವವನ್ನು ಈತ ಸಂಪೂರ್ಣವಾಗಿ ಅಂಗೀಕರಿಸಿದ್ದಾನೆ. ಆದರೆ ಚೇತನಾಣುಗಳಿಗೆ ಪೂರ್ವಭಾವಿಯಾದ ಸಾಮರಸ್ಯ ಇರುವುದೆಂದು ಒಪ್ಪಕೊಂಡಿಲ್ಲ. ಪ್ರತಿಯೊಂದು ವ್ಯಕ್ತಿಯೂ ತನ್ನ ಅನುಭವವನ್ನು ಸ್ವತಂತ್ರವಾಗಿ ಇಚ್ಛಾನುಸಾರವಾಗಿ ರೂಪಿಸಿಕೊಳ್ಳುತ್ತಾನೆ. ಬದುಕುವ ಇಚ್ಛೆ ಅವನಲ್ಲಿ ಪ್ರಧಾನವಾಗಿರುತ್ತದೆ. ಅವನ ಕ್ರಿಯೆಗಳೆಲ್ಲವೂ ಉದ್ದೇಶಪೂರ್ವಕವಾಗಿ ನಡೆಯುತ್ತವೆ. ಅವು ಪೂರ್ವ ನಿಯಮಿತವಾದುವಲ್ಲ. ವಿಶ್ವ ಪರಸ್ಪರಸಂಬಂಧವುಳ್ಳ ಎರಡು ತತ್ತ್ವಗಳನ್ನು ಪ್ರತಿಪಾದಿಸುತ್ತದೆ. ವಾಸ್ತವಿಕ ಜಗತ್ತು ವೈಜ್ಞಾನಿಕ ನಿಯಮಗಳಿಗನುಸಾರವಾಗಿ ಯಾಂತ್ರಿಕವಾಗಿ ಬದಲಾವಣೆಯಾಗುತ್ತಿರುತ್ತದೆ. ಇದರಲ್ಲಿ ನಾವು ಯಾವ ತತ್ತ್ವವನ್ನಾಗಲಿ ಉದ್ದೇಶವನ್ನಾಗಲಿ ಕಾಣುವುದಿಲ್ಲ. ಚೇತನಜಗತ್ತು ಅರ್ಥಗರ್ಭಿತವಾದುದು. ಪ್ರತಿಯೊಂದು ಕ್ರಿಯೆಯೂ ಚೇತನದಲ್ಲಿ ಉದ್ದೇಶಪೂರ್ವಕವಾದುದು. ಪರಮಸತ್ಯವಾದ ಈಶ್ವರನನ್ನು ಸಾಕ್ಷಾತ್ಕಾರವಾಡಿಕೊಳ್ಳುವುದೇ ಈ ಉದ್ದೇಶ. ಈ ವಿಧವಾದ ವಾರ್ಡ್ ತನ್ನ ಈಶ್ವರವಾದವನ್ನೂ ನೈಸರ್ಗಿಕತತ್ತ್ವವಾದವನ್ನು (ನ್ಯಾಚುರಲಿಸಮ್) ಪರಸ್ಪರ ವಿರೋಧವಿಲ್ಲದಂತೆ ಪ್ರತಿಪಾದಿಸಲು ಪ್ರಯತ್ನಿಸಿದ್ದಾನೆ. ಈಶ್ವರ ಜೀವಾತ್ಮರಿಗೆ ಸ್ವಾತಂತ್ರ್ಯವನ್ನು ಕೊಟ್ಟು ತನ್ನ ಸ್ವಾತಂತ್ರ್ಯವನ್ನು ಪರಿಮಿತಿಗೊಳಿಸಿಕೊಂಡಿದ್ದಾನೆ, ತನ್ನೊಡನೆ ವಿಶ್ವದ ಪ್ರಗತಿಯನ್ನು ಸಾಧಿಸುವ ಸಹವರ್ತಿಗಳಂತೆ ಮಾನವರನ್ನು ಸೃಷ್ಟಿಸಿದ್ದಾನೆ. ಹೀಗೆ ಮಾನಸಿಕವಾಗಿ ಎಲ್ಲ ಚೇತನಾಣುಗಳೂ ಒಂದು ಪರಿಪೂರ್ಣತೆಯ ಕಡೆಗೆ ಸಾಗಿ ತಮ್ಮ ವ್ಯಕ್ತಿತ್ವವನ್ನು ಕಳೆದುಕೊಳ್ಳದೆ ಏಕತ್ವವನ್ನು ಅನೇಕತ್ವದ ಮೂಲಕ ಸಾಧಿಸುತ್ತವೆ. ನೈತಿಕ ಆಧಾರದಿಂದ ವಾರ್ಡ್ ಈಶ್ವರನನ್ನೂ ಚೇತನಾಣುಗಳ ಅಮರತ್ವವನ್ನೂ ಸಿದ್ಧಾಂತಮಾಡಲು ಪ್ರಯತ್ನಿಸಿದ್ದಾನೆ. ವಾಸ್ತವಿಕ ಜಗತ್ತಿನಲ್ಲಿ ವಿಜ್ಞಾನಪದ್ಧತಿ ಪೂರ್ಣಸತ್ಯವನ್ನು ಕಾಣಲು ಅಸಮರ್ಥವಾದುದೆಂದೂ ವಿಶ್ವದ ಒಂದು ಮುಖವನ್ನು ಮಾತ್ರ ವಿವರಿಸುವುದೆಂದೂ ಹೇಳಿದ್ದಾನೆ. ವಿಜ್ಞಾನಕ್ಕಿಂತಲೂ ಇತಿಹಾಸ ಸತ್ಯವನ್ನು ಅಂದರೆ ಜೀವನದ ವಾಸ್ತವಾಂಶಗಳನ್ನು ಚೆನ್ನಾಗಿ ಸ್ಪಷ್ಟಪಡಿಸುತ್ತದೆಂದು ಹೇಳಿದ್ದಾನೆ. ಏಕೆಂದರೆ ವೈಜ್ಞಾನಿಕಪದ್ಧತಿ ವಿಶ್ವದಲ್ಲಿ ಯಾಂತ್ರಿಕವಾಗಿ ನಡೆಯುವ ಘಟನೆಗಳನ್ನು ಮಾತ್ರ ಒಂದು ಸಾಮಾನ್ಯದೃಷ್ಟಿಯಿಂದ ಒಂದೇ ಸೂತ್ರಕ್ಕನುಸಾರವಾಗಿ ಒಂದೇ ರೀತಿಯಾಗಿ ನಡೆಯುವಂತೆ ತೋರಿಸುತ್ತದೆ. ಆದರೆ ಜೀವನದ ಮೌಲ್ಯಕ್ಕಾಗಲಿ ಧ್ಯೇಯಕ್ಕಾಗಲಿ ಉದ್ದೇಶಕ್ಕಾಗಲಿ ಇದರಲ್ಲಿ ಸ್ಥಾನವಿಲ್ಲ. ಇತಿಹಾಸದಲ್ಲಿ ಮಾನವಜೀವನದ ನೈತಿಕಸಾಧನೆ, ಸ್ವಾತಂತ್ರ್ಯ, ಮೌಲ್ಯಗಳು-ಇವನ್ನು ಕಾಣುತ್ತೇವೆ. ಆದರೆ ಇವೆರಡೂ ಪರಸ್ಪರ ವಿರೋಧವಾದವೆಂದು ಭಾವಿಸಕೂಡದು. ಜಡಜಗತ್ತಿನಲ್ಲಿ ಮತ್ತು ಚೇತನದಲ್ಲಿ ಪರಸ್ಪರಸಂಬಂಧವನ್ನು ಕಾಣುವುದೇ ದಾರ್ಶನಿಕಮಾರ್ಗದ ಗುರಿ. ಅನೇಕತ್ವಕ್ಕೂ ಈಶ್ವರನಿಗೂ ಸಂಬಂಧವನ್ನು ಕಾಣಬೇಕು. ಚೇತನಾಣುಗಳು ವಿಕಾಸವಾಗುತ್ತ ಮಾನವಮಟ್ಟವನ್ನೂ ಮೀರಬಹುದೆಂದೂ ವಿಕಾಸವಾದ ಉದ್ದೇಶ ಪೂರ್ವವಾದ ರಚನಾಕೌಶಲ್ಯವನ್ನು ವಿವರಿಸುವುದಿಲ್ಲವಾದರೂ ಜಗತ್ತಿನ ವಿಕಾಸವನ್ನು ಚೆನ್ನಾಗಿ ಅರ್ಥಮಾಡಿಕೊಡುವುದೆಂದೂ ಹೇಳಿದ್ದಾನೆ.ವಾರ್ಡ್ ಅನೇಕತ್ವವಾದ ವಿಶ್ವದ ಏಕತ್ವವನ್ನು ಖಂಡಿಸಿಲ್ಲ. ಅಂತಿಮವಾಗಿ ಅನೇಕ ಏಕದಲ್ಲಿಯೇ ಪರಿಪೂರ್ಣತೆಯನ್ನು ಹೊಂದುವುದೆಂದೂ ವೈಜ್ಞಾನಿಕ ಅಂಶಗಳನ್ನು ಪರಿಪೂರ್ಣತ್ವದ ದೃಷ್ಟಿಯಿಂದ ವಿವರಿಸಲು ದರ್ಶನಮಾರ್ಗವೇ ಯುಕ್ತವಾದುದೆಂದೂ ಹೇಳುತ್ತದೆ.

ಪಾಶ್ಚಾತ್ಯ ದೃಷ್ಟಿ[ಬದಲಾಯಿಸಿ]

ಪಾಶ್ಚಾತ್ಯ ಅನೇಕತ್ವವಾದಿಗಳು ಚೇತನಾಣುಗಳ ಅನುಭವದಲ್ಲಿ ಒಂದು ವಿಧವಾದ ಪರಸ್ಪರಸಂಬಂಧವುಂಟೆಂದೂ ಅವುಗಳೆಲ್ಲವೂ ಒಂದೇ ಪೂರ್ಣತ್ವದ ಭಾಗಗಳೆಂದೂ ಆ ಪೂರ್ಣತ್ವ ಭಾಗಗಳ ಬೆಳೆವಣಿಗೆಯ ರೀತಿಯನ್ನೂ ಕ್ರಮವನ್ನೂ ಹತೋಟಿಯಲ್ಲಿಟ್ಟುಕೊಂಡಿರುವುದೆಂದೂ ಹೇಳಿದ್ದಾನೆ. ಅದಲ್ಲದೆ ಪರಸ್ಪರಸಂಬಂಧದಿಂದ ಅಭಿವೃದ್ಧಿಯಾಗಬೇಕಾದರೆ ಅವಕ್ಕೆ ಒಂದೇ ಪ್ರಕೃತಿ ಅಥವಾ ಆವರಣ, ಸೌಹಾರ್ದಗಳಿರಬೇಕೆಂದು ವಾದಿಸಿದ್ದಾರೆ. ಅಂದರೆ ಏಕತ್ವದಲ್ಲಿ ಅನೇಕತ್ವ ಎಂಬ ಭಾವನೆಯನ್ನು ಪ್ರತಿಪಾದಿಸಿದ್ದಾರೆ.ಹಿಂದೂದರ್ಶನಗಳಲ್ಲಿಯೂ ಅನೇಕತ್ವವಾದವನ್ನು ಪ್ರತಿಪಾದಿಸಲಾಗಿದೆ. ದ್ವೈತದರ್ಶನದಲ್ಲಿ ಹಿಂದೆ ಹೇಳಿದಂತೆ ಒಂದು ವಿಧಾವಾದ ಅನೇಕತ್ವವಾದವಿದೆ. ಮೂಲಬೌದ್ಧದರ್ಶನದಲ್ಲಿಯೂ ಜೈನ,ಸಾಂಖ್ಯ ಮತ್ತು ಸಾಂಖ್ಯದರ್ಶನಗಳಲ್ಲಿ ಅನೇಕತ್ವವಾದ ಸ್ಪಷ್ಟವಾಗಿದೆ.

ಬೌದ್ಧದರ್ಶನ[ಬದಲಾಯಿಸಿ]

ಇದರ ಪ್ರಕಾರ ಸರ್ವವಸ್ತುಗಳು ಸ್ವಲಕ್ಷಣಯುತವಾದುವು. ಕ್ಷಣಿಕವಾದುವು. ನಾನು ಎಂಬ ಜ್ಞಾನಕ್ಕೆ ಇತರ ದರ್ಶನಗಳಲ್ಲಿ ಆತ್ಮ ಎಂಬ ಸಂಕೇತವಿದೆ. ಆದರೆ ವಿಜ್ಞಾವೆಂಬ ವಸ್ತುವೆ ಬೌದ್ಧದರ್ಶನದಲ್ಲಿ ಜೀವಾತ್ಮಸ್ಥಾನದಲ್ಲಿದೆ. ಇದು ಪ್ರತಿಕ್ಷಣದಲ್ಲಿ ಹುಟ್ಟಿ ನಾಶವಾಗುತ್ತಿದ್ದರೂ ಸಂತತಪ್ರವಾಹರೂಪವಾಗಿ ಸ್ಥಿರವಾದ ವಸ್ತುವಿನಂತೆ ಕೆಲಸವನ್ನು ಮಾಡುತ್ತಿದ್ದು ಅಸಂಖ್ಯಾತಸಂತತಿಗಳಾಗಿ ಬೆಳೆದು ಅಸಂಖ್ಯಾತ ಜೀವಾತ್ಮರುಗಳಂತೆ ಕಾಣಿಸಿಕೊಳ್ಳುತ್ತದೆ. ಈ ಸಂತತಿಯಲ್ಲಿಯೆ ಸಂಸ್ಕಾರವಾಸನೆ ಎಂಬ ಶಕ್ತಿ ಇರುವುದು. ಕರ್ಮವಾಸನೆ, ಜ್ಞಾನವಾಸನೆ ಎಂಬ ಎರಡು ವಿಧವಾದ ವಾಸನೆಗಳಿವೆ. ಕರ್ಮವಾಸನೆ, ಎಂದರೆ ಪುಣ್ಯಪಾಪಗಳು, ಜ್ಞಾನವಾಸನೆ ಎಂದರೆ ಸ್ಮರಣೆಗೆ ಹೇತುವಾದ ಸಂಸ್ಕಾರ. ಈ ವಿಜ್ಞಾನ ನಾರಕ, ಭೂತ, ದೇವ, ಮನುಷ್ಯ, ತಿರ್ಯಕ್ ಎಂಬ ಐದು ವಿಧ ಶರೀರಗಳಲ್ಲಿ ಆಕಾಶದಲ್ಲಿರುವ ಪ್ರಭೆಯಂತೆಯೂ ಬೆಂಕಿಯಲ್ಲಿರುವ ಜ್ವಾಲೆಯಂತೆಯೂ ನೀರಿಲ್ಲಿರುವ ಗುಳ್ಳೆಯಂತೆಯೂ ಅಂಟಿಯೂ ಅಂಟದೆ ಅಂತರಾಳದಲ್ಲಿರುವುದು. ಪ್ರಕೃತಿ ಕ್ಷಣಿಕವಾದ ಅಣುಗಳಿಂದ ತುಂಬಿಕೊಂಡಿದೆ. ವಿಜ್ಞಾನಸಂತತಿ ಸೂಕ್ಷ್ಮಚಿತ್ತವೆಂಬ ರೂಪದಲ್ಲಿ ಕರ್ಮವಾಸನೆಯಿಂದ ಜನಿಸುತ್ತದೆ. ಅವಿದ್ಯೆ, ನಾಮರೂಪ, ಷಡಾಯತನ, ಸ್ವರ್ಶವೇದನ, ತೃಷಾ, ಭವ, ಜಾತಿ, ಮರಣ, ವ್ಯಾಧಿರೂಪವಾಗಿ ಕಾರ್ಯಕಾರಣ ಪ್ರಕ್ರಿಯೆಯನ್ನೂ ಹೊಂದುತ್ತ ಚಕ್ರರೂಪವಾಗಿ ತಿರುಗುತ್ತಿರುವುದು. ಈ ಕಾರ್ಯಕಾರಣ ಪ್ರಕ್ರಿಯೆಯೇ ಆಧ್ಯಾತ್ಮಪ್ರತ್ಯಯೋಪನಿಂಬಂಧನ. ದೇಹಕ್ಕೆ ಪೃಥ್ವಿಯಿಂದ ಕಾಠಿಣ್ಯ, ಜಲದಿಂದ ಮಾರ್ದವ, ತೇಜಸ್ಸಿನಿಂದ ಆಹಾರ ಪರಿಪಾಕ, ವಾಯುವಿನಿಂದ ಉಚ್ಛ್ವಾಸ ನಿಃಶ್ವಾಸ, ಆಕಾಶದಿಂದ ಅನಾವರಣ ಬರುವುದು. ವಿಜ್ಞಾನವೆಂಬ ಧಾತು ಚಿತ್ತಚೈತ್ತಾತ್ಮಕವಾಗಿ ಸಹಾಯ ಮಾಡುವುದು. ಸ್ಕಂದಪಂಚಕವೇ ಜೀವಸ್ಥಾನದಲ್ಲಿರುವುದು. ಆತ್ಮನಿಲ್ಲ, ಪೃಕೃತಿ ಪುರುಷ, ಈಶ್ವರ, ಪರಮಾಣು ಮೊದಲಾದ ನಿತ್ಯವಸ್ತುಗಳಿಲ್ಲ ಎಂಬ ಈ ವಾದವನ್ನು ನೈರಾತ್ಯವಾದವೆಂದೂ ಕರೆಯಲಾಗಿದೆ. ಸಕಲವಸ್ತುಗಳೂ ಕಾರಣಗಳಿಂದ ಹುಟ್ಟಿದುವು ಎಂದು ಪ್ರತೀತ್ಯ ಸಮುತ್ಪಾದ (ಅದು ಉಂಟಾಗಲಾಗಿ, ಇದು ಉಂಟಾಗುತ್ತದೆ) ಎಂಬ ಮಾತುಗಳಲ್ಲಿ ನಿರ್ದೇಶಿಸಲಾಗಿದೆ. ಮೂಲಕಾರಣನಾದ ಈಶ್ವರ ಪ್ರಕೃತಿ ಎಂಬುದನ್ನು ಈ ದರ್ಶನ ಅಂಗೀಕರಿಸಿಲ್ಲ. ಸ್ಕಂದಪಂಚಕದ ಕಾರಣ ಸಮಾವೇಶವನ್ನು ಸಮುದಾಯ ಎನ್ನಲಾಗಿದೆ. ಇದರ ಅತ್ಯಂತವಿನಾಶಕ್ಕೆ ಅಂದರೆ ದುಃಖಮಯವಾದ ಸಂಸಾರನಿವಾರಣೆಗೆ ವಿಶುದ್ಧ ಜ್ಞಾನವೇ ಉಪಾಯ. ವಸ್ತುಗಳು ಸ್ಥಿರವೆಂಬ ಭಾವನೆಯೇ ದುಃಖಮಯವಾದ ಸಂಸಾರಕ್ಕೆ ಮೂಲಕಾರಣ. ಕ್ಷಣಿಕವೆಂಬ ಭಾವನೆಯೇ ಪರಮವೈರಾಗ್ಯಕ್ಕೆ ಸಾಧಕ. ಎಣ್ಣೆ ತೀರಿಹೋದರೆ ಬತ್ತಿ ಆರಿಹೋಗುವಂತೆ ವಿಜ್ಞಾನವೆಂಬ ಆತ್ಮನಿಗೆ ರಾಗವೆಂಬ ಆಶೆ ತೀರಿಹೋದರೆ ಮೋಕ್ಷವಾಗುವುದು, ನಿರ್ವಾಣ ಲಭಿಸುವುದು. ಮೂಲ ಬೌದ್ಧದರ್ಶನ ಸರ್ವವಸ್ತುಗಳ ಅಸ್ತಿತ್ವವನ್ನು ಹೇಳಿ ಅನೇಕತ್ವವನ್ನು ಪ್ರತಿಪಾದಿಸಿತು, ಆನಂತರ ವಿಜ್ಞಾನವೊಂದೇ ಸತ್ಯ ಎಂದು ಹೇಳಿ ಅನೇಕತ್ವವನ್ನು ಸಂಕುಚಿತಮಾಡಿತು. ಕೊನೆಗೆ ವಿಜ್ಞಾನವನ್ನೂ ಬಿಟ್ಟು ಶೂನ್ಯ ಮಾತ್ರ ಸತ್ಯವೆಂದು ಹೇಳಿ ಮೂಲ ಬೌದ್ಧದರ್ಶನದ ಅನೇಕತ್ವವಾದವನ್ನು ಬಿಟ್ಟುಬಿಡಲಾಯಿತು.

ಜೈನದರ್ಶನ[ಬದಲಾಯಿಸಿ]

ಇದರಲ್ಲಿ ಅನೇಕತ್ವವಾದ ಅನೇಕಾಂತವಾದದ ರೂಪದಲ್ಲಿದೆ. ಆತ್ಮ ಸರ್ವಸ್ವಭಾವಧರ್ಮದಲ್ಲಿಯೂ ಇದೆ ಎಂದು ಅನೇಕಾಂತವಾದ ಹೇಳುತ್ತದೆ. ಸತ್ತ್ವ, ದ್ರವ್ಯತ್ವ, ಕಾರ್ಯತ್ವ, ಕಾರಣತ್ವ ಮೊದಲಾದ ಸರ್ವವಿಷಯಗಳಲ್ಲೂ ಅನೇಕತಾವಾದವನ್ನು ಹೇಳಲಾಗಿದೆ. ಆತ್ಮಾದಿಸಕಲವಸ್ತುಗಳಿಗೂ ಉತ್ಪತ್ತಿ ಉಂಟು, ವಿನಾಶವುಂಟು, ಸ್ಥಿರತ್ವವೂ ಉಂಟು. ಪೂರ್ವಾಕಾರ ಹೋದುದರಿಂದ ವಿನಾಶವಾದಂತಾಯಿತು. ಪಾರ್ಥಿವಶರೀರ ಸ್ಥಿರವಾಗಿರುವುದರಿಂದ ಸ್ಥಿರವೆಂದೂ ಆಯಿತು. ಸ್ವರ್ಗದಲ್ಲಿ ಮನುಷ್ಯಭಾವ ಹೋಗಿ ದೇವಭಾವ ಬರುವುದು. ಆದರೆ ಉಭಯಾವಸ್ಥೆಗಳಲ್ಲೂ ಆತ್ಮಭಾವವಿರುವುದು. ವಸ್ತುವಿಗೆ ದ್ರವ್ಯವೆಂದೂ ಆಕಾರಗಳಿಗೆ ಪರ್ಯಾಯವೆಂದೂ ಈ ಸಿದ್ಧಾಂತ ಹೇಳಿದೆ. ದ್ರವ್ಯಾಂಶದಲ್ಲಿ ನಿತ್ಯತ್ವವೂ ಪರ್ಯಾಯಂಶದಲ್ಲಿ ಅನಿತ್ಯತ್ವವೂ ಇರುವುದರಿಂದ ಅನೇಕಾಂತವಾಯಿತು. ಒಂದು ವಸ್ತುವಿನಲ್ಲಿ ವಿರುದ್ಧಾಂಶಗಳು ಒಬ್ಬನೇ ಮನುಷ್ಯ. ಪಿತ, ಪುತ್ರ, ಜಾಮಾತ, ಮಾತುಳ ಎಂಬುದಾಗಿ ವ್ಯವಹರಿಸಲ್ಪಡುವಂತೆ ದ್ರವ್ಯಗಳೆಲ್ಲವೂ ಸಾವಯವ ಆಗಿರುವುದು; ಅಸಂಖ್ಯಾಂಶ, ಅಸಂಖ್ಯಾತ ಪ್ರದೇಶಗಳುಳ್ಳವು ಎಂದು ಅರ್ಥ. ದ್ರವ್ಯಗಳು ಆರು, ಜೀವ ಜ್ಞಾನಸ್ವರೂಪವಾಗಿರುವುದರಿಂದ ಚೇತನ ದ್ರವ್ಯ. ಉಳಿದವು ಅಚೇತನ ದ್ರವ್ಯಗಳು. ಜೀವದ್ರವ್ಯವೊಂದೇ ಕರ್ತೃದ್ರವ್ಯ. ಉಳಿದವು ಕಾರಣದ್ರವ್ಯಗಳು. ಧರ್ಮ, ಅಧರ್ಮ, ಆಕಾಶ, ಕಾಲ ಎಂಬ ನಾಲ್ಕು ದ್ರವ್ಯಗಳು ಸರ್ವವ್ಯಾಪಕಗಳಾಗಿರುವುವು. ಅಣುರೂಪವಾಗಿಯೂ ಸ್ಕಂದರೂಪವಾಗಿಯೂ ಇರುವ ಭೂತಭೌತಿಕಪ್ರಪಂಚದ ಮೂಲಕಾರಣದ್ರವ್ಯಕ್ಕೆ ಪುದ್ಗಣವೆಂದು ಹೆಸರು. ಅಣುಗಳ ಪುಂಜವೇ ಪುದ್ಗಲ. ಅದರಲ್ಲೂ ಅಸಂಖ್ಯಾತ ಪರಮಾಣುಗಳು ಅಸಂಖ್ಯಾತವಾದುವು. ಪುದ್ಗಲ ರೂಪರಸಗಂಧ ಸ್ಪರ್ಶಗುಣಸ್ವಭಾವವುಳ್ಳದ್ದು. ಅಣುಗಳಿಂದ ಸ್ಕಂದಗಳೂ, ಸ್ಕಂದಗಳಿಂದ ಅಣುಗಳೂ ಉದಯಿಸುವುವು. ಜೀವ ಎಂದರೆ ಜ್ಞಾನದರ್ಶನಸ್ವರೂಪಿಯಾದ ಚೈತನ್ಯ ವಸ್ತು. ಜೀವ ಪ್ರತಿಕ್ಷಣದಲ್ಲು ಚಲನೆಯೆಂಬ ವಿಕಾರವನ್ನು ಹೊಂದುತ್ತಿರುವನು. ದುಃಖರಾಗದ್ವೇಷಾದಿ ಪರ್ಯಾಯಗಳು ಆಗಂತುಕಗಳು. ಜ್ಞಾನ, ದರ್ಶನ, ಸುಖ ಮೊದಲಾದ ಪರ್ಯಾಯಗಳು ಸ್ವಭಾವಿಕಗಳು. ಜ್ಞಾನಪ್ರಭೆಯ ಆವರಣದ ಕ್ಷಯದಿಂದ ಸರ್ವಜ್ಞರಾದ ಮಹಾಪುರುಷರು ಪ್ರವಾಹರೂಪವಾಗಿ ಬಂದು ಪ್ರಪಂಚಾನುಗ್ರಹಕ್ಕಾಗಿ ತತ್ತ್ವೋಪದೇಶವನ್ನು ಮಾಡುತ್ತಿರುವರು. ಆದ್ದರಿಂದ ಅನಾದಿಸರ್ವಜ್ಞವೆಂಬ ಪರಮೇಶ್ವರ ಬೇಕಾಗಿಲ್ಲ. ಪ್ರಪಂಚಕ್ಕೆ ಸೃಷ್ಟಿ ಪ್ರಳಯಗಳಿಲ್ಲದುದರಿಂದ ನಿತ್ಯಸರ್ವಶಕ್ತನೂ ನಿತ್ಯಪರಮಕಾರುಣಿಕನೂ ಬೇಕಾಗಿಲ್ಲ. ಬೀಜಾಂಕುರ ನ್ಯಾಯದಿಂದ ಸರ್ವಜ್ಞಪರಂಪರೆಯೂ ಪ್ರವಚನಪರಂಪರೆಯೂ ನಡೆಯುತ್ತವೆಂದು ಜೈನದರ್ಶನದ ನಿರ್ಣಯ. ಜೀವರುಗಳು ಮುಕ್ತಸ್ಥಿತಿಯಲ್ಲೂ ಪ್ರತ್ಯೇಕ ಪ್ರತ್ಯೇಕವಾಗಿಯೇ ಉಳಿದಿರುತ್ತಾರೆ. ಜೀವನದಲ್ಲಿ ಸಮ್ಯಗ್ದರ್ಶನ, ಸಮ್ಯಗ್‍ಜ್ಞಾನ, ಸಮ್ಯಗ್ಜಾರಿತ್ರ ಎಂಬ ರತ್ನತ್ರಯಪ್ರಾಪ್ತಿವುಳ್ಳವನು ಭವ್ಯ. ಅದಿಲ್ಲದವನು ಅಭವ್ಯ. ಜನ್ಮಪರಂಪರೆಯಲ್ಲಿರುವವನು ಬುದ್ಧ. ಮಹಾತ್ಮರ ಅನುಗ್ರಹದಿಂದಲೂ ಜನ್ಮಾಂತರಸುಕೃತದಿಂದಲೂ ಸಮ್ಯಗ್ದರ್ಶನವೂ ಜಿನೋಕ್ತತತ್ತ್ವಗಳಿಂದ ಸಮ್ಯಗ್‍ಜ್ಞಾನವೂ ಉಂಟಾಗುತ್ತದೆ. ಪಾಪಪರಿಹಾರದಿಂದ ಸಮ್ಯಗ್‍ಚಾರಿತ್ರ ಉಂಟಾಗುತ್ತದೆ. ಒಳ್ಳೆಯ ಕೆಲಸ ಮಾಡುವುದಕ್ಕಿಂತಲೂ ಪಂಚವ್ರತಗಳಲ್ಲಿ ಹೇಳಿರುವ ಐದು ಪ್ರಕಾರಗಳಿಂದ ಕೆಟ್ಟದ್ದನ್ನು ಬಿಡುವುದೇ ಉತ್ತಮವೆಂದು ಈ ದರ್ಶನದ ಬೋಧೆ.

ಸಾಂಖ್ಯದರ್ಶನ[ಬದಲಾಯಿಸಿ]

ಬೌದ್ಧಮತಕ್ಕೆ ಪ್ರತಿಯಾಗಿ ಇದು ಸರ್ವವಸ್ತುಗಳಿಗೂ ಸತ್ಯವೆಂಬ ಭಾವವನ್ನು ಕೊಟ್ಟಿದೆ. ಸರ್ವವೂ ಸತ್ಯವಾದುದು. ಒಂದು ವಸ್ತುವನ್ನು ಮತ್ತೊಂದು ವಸ್ತುವಾಗಿ ತಿಳಿಯುವುದೆ ಭ್ರಮೆ. ಸತ್ತ್ವವೆಂದರೆ ಪ್ರಕೃತಿ. ಪುರುಷನೆಂದರೆ ಆತ್ಮ. ಇವುಗಳಿಗಿರುವ ವ್ಯತ್ಯಾಸನಿಶ್ಚಯಕ್ಕೆ ಅನ್ಯತಾಖ್ಯಾತಿ ಎಂದು ಹೇಳಿದೆ. ಮೊದಲ ತತ್ತ್ವವೇ ಮೂಲಪ್ರಕೃತಿ. ಇದೇ ಮಹಾಸಮುದ್ರದಂತೆ ಸರ್ವದೇಶ ಸರ್ವಕಾಲ ಸರ್ವವಸ್ತುಗಳನ್ನು ವ್ಯಾಪಿಸಿಕೊಂಡಿರುವುದರಿಂದ ಇದೇ ಬ್ರಹ್ಮ. ಪುರುಷ ಇಂದ್ರಿಯಗಳ ಮೂಲಕ ವಸ್ತುಗಳನ್ನು ತಿಳಿದುಕೊಳ್ಳುತ್ತಾನೆ. ಆತ್ಮಪದಕ್ಕೆ ಚೇತನ, ಚೈತನ್ಯ ಪುರುಷ, ಚಿಚ್ಛಕ್ತಿ ಮುಂತಾದ ಅರ್ಥಗಳಿವೆ. ಆದರೆ ಅದಕ್ಕೆ ಯಾವ ಗುಣವೂ ಇಲ್ಲ, ದೋಷವೂ ಇಲ್ಲ, ಶಕ್ತಿಯೂ ಇಲ್ಲ, ವಿಶೇಷವೂ ಇಲ್ಲ. ಅದು ಶುದ್ಧವಾದ ಕನ್ನಡಿಯಂತಿರುವುದು. ಇಂಥ ಚಿತ್‍ಶಕ್ತಿಗಳೆಂಬ ಯಾವ ಸ್ವಭಾವವನ್ನು ಹೇಳಿರುವರೋ ಅವೆಲ್ಲವನ್ನೂ ಸಂಖ್ಯಾಕಾರರು ಬುದ್ಧಿಗೇ ಹೇಳಿರುವರು. ಪ್ರಕೃತಿ ಅಚೇತನವಾದುದರಿಂದ ಇಚ್ಛಾಶಕ್ತಿಯಿಲ್ಲದೆ ಪಂಗುಸ್ಥಾನದಲ್ಲಿಯೂ ಇದ್ದು ಅಧಪಂಗುನ್ಯಾಯದಿಂದ ಸೃಷ್ಟ್ಯಾದಿಸಕಲವ್ಯಾಪಾರಗಳು ನಡೆಯುವುವು. ಪುರುಷನಿಗೆ ಕೈವಲ್ಯ ಬೇಕಾಗಿರುವುದರಿಂದ ಪ್ರಕೃತಿ ಪ್ರಕೃತವಸ್ತುಗಳಿರಬೇಕು. ಆ ವಸ್ತುಗಳು ಭೋಗ್ಯಗಳಾದುದರಿಂದ ಭೋಕ್ತ (ಪುರುಷ) ಬೇಕು. ಸರ್ವವಸ್ತುಗಳೂ ಸರ್ವಸ್ವಭಾವವುಳ್ಳವು. ಅಂದರೆ ತ್ರಿಗುಣಯುಕ್ತವಾದವು. ಸುಖ ದುಃಖ ಮೋಹ ಸ್ವಭಾವವುಳ್ಳವು. ಪ್ರಾಚೀನವಾಸನೆಯೆಂಬ ಕರ್ಮಕ್ಕಧೀನವಾಗಿ ಪುರುಷನಲ್ಲಿ ಒಂದೊಂದು ಕಾಲದಲ್ಲಿ ಒಂದೊಂದು ಗುಣ ಉತ್ಕಟವಾಗಿ ಪ್ರಬಲವಾಗುವುದು. ಪುರುಷಾರ್ಥವೆಂಬ ಪದ ಸಾಂಖ್ಯದರ್ಶನದಲ್ಲಿಯೆ ಪ್ರಾರಂಭವಾಯಿತು. ಪ್ರಕೃತಿ ಎಂಬ ಮೂಲತತ್ತ್ವ ಸ್ವಾರ್ಥಕ್ಕಾಗಿ ಯಾವ ವ್ಯಾಪಾರವನ್ನೂ ಮಾಡುವುದಿಲ್ಲ; ಪುರುಷಾರ್ಥಕ್ಕಾಗಿಯೂ ಪರಾರ್ಥಕ್ಕಾಗಿಯೂ ಮಾಡುತ್ತದೆ. ಪುರುಷನೆಂಬ ಜೀವಾತ್ಮನಿಗೆ ಅವುಗಳ ಉಪಯೋಗ. ಅವುಗಳಲ್ಲಿ ಅನುಕೂಲವಾಗಿಯೂ ಪ್ರತಿಕೂಲವಾಗಿಯೂ ತಿಳಿಯುವ, ಸುಖದುಃಖಗಳನ್ನು ಅನುಭವಿಸುವ, ಸರ್ವವೂ ದೃಶ್ಯವಾಗಿರುವ ಪ್ರಕೃತಿಗೆ ದ್ರಷ್ಟಾ ಆಗಿರುವ ಜೀವಾತ್ಮ ಭೋಕ್ತø. ಅವನ ಭೋಕ್ತøತ್ವದಲ್ಲಿ ವ್ಯತ್ಯಾಸವಿರುವುದರಿಂದ ಅಸಂಖ್ಯಾತ ಜೀವಾತ್ಮರಲ್ಲಿ ಭೇದಗಳಿವೆ. ತತ್ತ್ವಜ್ಞಾನವೇ ದುಃಖನಿವೃತ್ತಿಗೆ ಸಾಧನವೆಂದು ಸಾಂಖ್ಯರ ಮತ. ಪ್ರಕೃತಿ ಪುರುಷರ ಸಂಯೋಗವೆಂಬ ಅಜ್ಞಾನದಿಂದ ಬಂಧನ. ಪುರುಷನಿಗೆ ರಾಜನ ಸ್ಥಾನವನ್ನೂ ಬುದ್ಧಿಗೆ ಮಂತ್ರಿಯ ಸ್ಥಾನವನ್ನೂ ಸಾಂಖ್ಯದರ್ಶನದಲ್ಲಿ ಕೊಡಲಾಗಿದೆ. ಪುರುಷ ಉದಾಸೀನ, ನಿರ್ಲಿಪ್ತ, ಸರ್ವಸಾಕ್ಷಿಯಾಗಿ ಬುದ್ಧಿಗೆ ಸರ್ವಾಧಿಕಾರವನ್ನು ಕೊಟ್ಟಿದ್ದಾನೆ. ಕೊನೆಯಲ್ಲಿ ಭೋಗದಿಂದ ವೈರಾಗ್ಯವುಂಟಾಗಿ ಪುರುಷನಿಗೆ ಬುದ್ಧಿಯ ಮೂಲಕ ಬಂಧಮೋಕ್ಷವೆಂದು ಹೇಳಿದ್ದಾರೆ. ಪ್ರಕೃತಿಯೊಡನೆ ಸೇರಿರುವವರೆಗೂ ಬಂಧ. ಕೈವಲ್ಯವೆಂದರೆ ಪ್ರಕೃತಿಯಿಂದ ಅಗಲುವಿಕೆ. ಸಾಂಖ್ಯದರ್ಶನಕಾರರು ಈಶ್ವರನನ್ನು ಒಪ್ಪಿಕೊಂಡಿಲ್ಲ. ಸೃಷ್ಟಿಪೂರ್ವದಲ್ಲಿ ಜೀವಾತ್ಮರಿಗೆ ದೇಹೇಂದ್ರಿಯಾದಿಗಳಿಲ್ಲದಿರುವುದರಿಂದ ಸುಖದುಃಖಗಳಿಲ್ಲ. ಪ್ರಳಯಕಾಲದಲ್ಲಿ ಮುಕ್ತಪ್ರಾಯರಾಗಿರುತ್ತಾರೆ. ಅಂಥವರಿಗೆ ದೇಹೇಂದ್ರಿಯಾದಿಗಳನ್ನು ಕೊಟ್ಟು ದುಃಖಪಡಿಸುವುದು. ಈಶ್ವರನಿಗೆ ಯುಕ್ತವಲ್ಲ. ಅವನು ಸ್ವಾರ್ಥಿಯಲ್ಲ; ಪರಾರ್ಥಕ್ಕಾಗಿ ಸೃಷ್ಟಿ ಮಾಡಬೇಕಾದರೆ ಕರುಣೆಗೆ ಪಾತ್ರರಿರಬೇಕು. ಆದರೆ ಸೃಷ್ಟಿಗೆ ಮುಂಚೆ ಜೀವಾತ್ಮರಿಗೆ ದುಃಖವೇ ಇಲ್ಲದಿರುವುದರಿಂದ ಅವರಿಗೆ ದಯೆಯ ಆವಶ್ಯಕತೆ ಇಲ್ಲ. ಹೀಗೆ ತರ್ಕಮಾಡಿ ಸಾಂಖ್ಯರು ಈಶ್ವರನನ್ನು ನಿರಾಕರಿಸಿದ್ದಾರೆ. (ಇಲ್ಲಿ ಮ್ಯಾಕ್ಟ್‍ಗರ್ಟಿನ ವಾದದ ಛಾಯೆಯನ್ನು ಕಾಣಬಹುದು). ನ್ಯಾಯವೈಶೇಷಿಕದರ್ಶನದಲ್ಲೂ ಅನೇಕತ್ವವಾದವಿದೆ. ಪ್ರಪಂಚವನ್ನು ದ್ರವ್ಯ, ಗುಣ, ಕರ್ಮ, ಸಾಮಾನ್ಯ, ವಿಶೇಷ, ಸಮವಾಯ ಮತ್ತು ಅಭಾವವೆಂದು ಏಳು ಪದಾರ್ಥಗಳಾಗಿ ವಿಂಗಡಿಸಲಾಗಿದೆ. ಆತ್ಮನಾತ್ಮವಿವೇಕಕ್ಕಾಗಿ ಪ್ರಮಾಣ, ಪ್ರಮೇಯ, ಸಂಶಯ, ಪ್ರಯೋಜನ, ದೃಷ್ಟಾಂತ, ಸಿದ್ಧಾಂತ, ಅವಯವ, ತರ್ಕ, ನಿರ್ಣಯ, ನಾದ, ಜಲ್ವ, ವಿತಂಡ, ಹೇತ್ವಾಭಾಸ, ಫಲ, ಜಾತಿ, ನಿಗ್ರಹಸ್ಥಾನ ಎಂಬ ಹದಿನಾರು ಪದಾರ್ಥಗಳು ಆವಶ್ಯಕ. ಸಕಲವಸ್ತುಗಳಿಗೂ ಸತ್ತ್ವರೂಪ ಉಂಟು. ಅಸತ್‍ಸ್ವರೂಪವೂ ಉಂಟು. ಘಟಪಟಾದಿ ವಸ್ತುಗಳೂ ಅವುಗಳ ಅಭಾವಗಳೂ ಉಂಟು. ಆಕಾಶಾದಿ ಕೆಲವು ನಿತ್ಯದ ವಸ್ತುಗಳೂ. ಗವಾಶ್ವಾದಿಗಳು ಅನಿತ್ಯಗಳು. ಆತ್ಮನೆಂದರೆ ಸರ್ವವನ್ನೂ ನೋಡತಕ್ಕವನು, ಅನುಭವಿಸತಕ್ಕವನು, ತಿಳಿಯತಕ್ಕವನು, ಮೋಕ್ಷಕ್ಕೆ ಅಧಿಕಾರಿ. ಇವನ ಭೋಗಕ್ಕೆ ಆಶ್ರಯ ಶರೀರ. ಇಂದ್ರಿಯಗಳೇ ಸಾಧನಗಳು. ವಿಷಯಗಳೇ ಅರ್ಥಗಳೂ. ಬುದ್ಧಿಯೇ ಭೋಗ. ಪ್ರಳಯಕಾಲದಲ್ಲಿ ಪರಮಾಣುಗಳು ಸ್ವತಂತ್ರಗಳಾಗಿ ಬೇರೆ ಬೇರೆ ಇರುವುವು. ಸೃಷ್ಟಿಗೆ ಪ್ರಾರಂಭವಾದರೆ ಎರಡು ಮೂರು ಪರಮಾಣು ಸೇರಿ ಕ್ರಮವಾಗಿ ವಸ್ತುಗಳಾಗುವುವು. ಆಗ ಯಾವ ಮನುಷ್ಯಾದಿಗಳೂ ಇಲ್ಲದಿರುವುದರಿಂದ ಅವುಗಳನ್ನು ಸೇರಿಸುವಂಥ ಪುರುಷನೇ ಪರಮಾತ್ಮ. ಪ್ರಪಂಚಕ್ಕೆ ಕರ್ತ. ಪರಮಾತ್ಮನನ್ನು ಶಾಸ್ತ್ರಾಧಾರವಿಲ್ಲದೆ, ತರ್ಕದಿಂದಲೂ ಸಾಧಿಸಬಹುದೆಂದು ನ್ಯಾಯವೈಶೇಷಿಕಮತ. ಪರಮಾತ್ಮತತ್ತ್ವ ಪ್ರಪಂಚಕ್ಕಿಂತ, ಜೀವಾತ್ಮರಿಗಿಂತ ಅತ್ಯಂತ ಭಿನ್ನವಾಗಿ ಇರುವುದರಿಂದಲೂ ವೇದಾಂತದಲ್ಲಿ ಹೇಳುವಂತೆ, ಅದು ಸರ್ವಾಂತರ್ಯಾಮಿಯಲ್ಲದಿರುವುದರಿಂದಲೂ ಅದರ ಅಂಗೀಕಾರದಿಂದ ಅನೇಕತ್ವಕ್ಕೆ ವಿಶೇಷಚ್ಯುತಿ ಆಗುವುದಿಲ್ಲ. ಹೀಗಿದ್ದರೂ ಸಾಮಾನ್ಯ ಮತ್ತು ಸಮುದಾಯ ಪದಾರ್ಥಗಳ ದೆಸೆಯಿಂದ ಅನೇಕತ್ವವಾದ ಸ್ವಲ್ಪ ಮಾರ್ಪಾಡಾಗುತ್ತದೆ. ಸಾಮಾನ್ಯವೆಂದರೆ ಒಂದೇ ಜಾತಿಯ ಅನೇಕ ದ್ರವ್ಯಗಳಲ್ಲಿ ಅನುಗತವಾಗಿರುವ ಒಂದು ಸಮಾನಧರ್ಮ. ಇದರಿಂದ ಒಂದು ದೃಷ್ಟಿಯಲ್ಲಿ ಒಂದು ಜಾತಿಯ ವ್ಯಕ್ತಿಗಳಲ್ಲಿ ಕಿಂಚಿತ್ ಏಕತ್ವವನ್ನು ಅಂಗೀಕರಿಸಿದಂತಾಯಿತು. ಸಮವಾಯುವೆಂದರೆ ನಿಕಟವಾದ ಸಂಬಂಧ. ದ್ರವ್ಯ ಮತ್ತು ಗುಣ, ಕರ್ತ ಮತ್ತು ಕರ್ಮ, ಸಾಮಾನ್ಯ ಮತ್ತು ವಿಶೇಷ ವ್ಯಕ್ತಿಗಳು ಮತ್ತು ವಿಶೇಷ. ಕಾರ್ಯ ಮತ್ತು ಕಾರಣ-ಇವುಗಳಲ್ಲಿ ಪರಸ್ಪರನಿಕಟಸಂಬಂಧವಿದೆ ಎಂದಂತಾಯಿತು. ಪದಾರ್ಥಗಳು ಭಿನ್ನವಾಗಿದ್ದರೂ ಈ ಸಂಬಂಧದ ದ್ರಷ್ಟಿಯಿಂದ ಏಕತ್ವಕ್ಕೆ ಸಮರ್ಥನೆ ದೊರೆಯುತ್ತದೆ.

ಏಕತ್ವ ಮತ್ತು ಅನೇಕತ್ವ[ಬದಲಾಯಿಸಿ]

ಅನೇಕತ್ವವಾದಿಗಳು ಚೇತನಗಳ ಅನುಭವದಲ್ಲಿ ಒಂದಕ್ಕೂ ಮತ್ತೊಂದಕ್ಕೂ ಪರಸ್ಪರಸಂಬಂಧವುಂಟೆಂದೂ ಅವುಗಳೆಲ್ಲವೂ ಒಂದೇ ಪೂರ್ಣತ್ವದ ಭಾಗಗಳೆಂದೂ ಆ ಪೂರ್ಣತ್ವ ಭಾಗಗಳ ಬೆಳೆವಣಿಗೆಯ ರೀತಿಯನ್ನೂ ಕ್ರಮವನ್ನೂ ಹತೋಟಿಯಲ್ಲಿಟ್ಟುಕೊಂಡಿರುವುದೆಂದೂ ಹೇಳಿದ್ದಾರೆ. ಹೀಗೆ ಏಕತ್ವದಲ್ಲಿ ಅನೇಕತ್ವ ಎಂಬ ಭಾವನೆ ಪ್ರತಿಪಾದಿತವಾಗಿದೆ. ಪರಸ್ಪರಸಂಬಂಧವಾದ ಅಭಿವೃದ್ಧಿಯಾಗಬೇಕಾದರೆ ಒಂದೇ ಪ್ರಕೃತಿ ಅಥವಾ ಆವರಣ ಅವುಗಳಿಗಿರಬೇಕೆಂದು ವಾದಿಸಿದ್ದಾರೆ. ಅವೆಲ್ಲವೂ ಅಂತಿಮವಾಗಿ ಒಂದೇ ಸತ್ಯದ ಪರಿಪೂರ್ಣತೆಯನ್ನು ಅನೇಕ ಮುಖಗಳಿಂದ ಪ್ರತಿಪಾದಿಸುತ್ತವೆಂದು ಹೇಳುವುದರಿಂದ ಏಕತ್ವಕ್ಕೂ ಅನೇಕತ್ವಕ್ಕೂ ವಿರೋಧವಿಲ್ಲ. ಜಡಜಗತ್ತನ್ನು ಮಾತ್ರ ಸತ್ಯವೆನ್ನುವ ನಾಸ್ತಿಕರು ಅಣುಗಳ ಅನೇಕತ್ವವನ್ನು ಹೇಳುತ್ತಾರೆ. ಅವರೂ ಅಣುಗಳು ಸತತವಾಗಿ ಚಲಿಸುತ್ತ ಗರ್ಜಿಸುತ್ತ ಪರಸ್ಪರ ಪ್ರಭಾವವನ್ನು ಬೀರುತ್ತಿರುತ್ತವೆಂದು ವಾದಿಸುತ್ತಾರೆ. ಇವರು ಅವುಗಳ ಇರುವಿಕೆಯಲ್ಲಾಗಲಿ ನಾಶದಲ್ಲಾಗಲಿ ಉದ್ದೇಶವನ್ನು ಕಾಣುವುದಿಲ್ಲ. ಆದರೆ ಆಸ್ತಿಕರಾದ ಅನೇಕತ್ವವಾದಿಗಳು ಚರಾಚರಜಗತ್ತಿನಲ್ಲಿರುವ ಅನೇಕತ್ವಕ್ಕೆ ಸೃಷ್ಟಿಕರ್ತನ ಉದ್ದೇಶಕಲ್ಪನೆಯ ಸಂಬಂಧವನ್ನು ತರುತ್ತಾರೆ. ಆತ ಅನಂತಕೋಟಿಬ್ರಹ್ಮಾಂಡಗಳನ್ನು ಜೀವರಾಶಿಗಳನ್ನು ಸೃಷ್ಟಿಸಿ ಅವುಗಳ ಸ್ಥಿತಿ ಮತ್ತು ಲಯಗಳಿಗೆ ಕಾರಣನಾಗುತ್ತಾನೆಂದೂ ಹೇಳುತ್ತಾರೆ. ಹೀಗೆ ಪರಮಾತ್ಮ ಏಕತ್ವಕ್ಕೆ ಕಾರಣವೆಂದಂತಾಯಿತು. ಅಂತಿಮವಾಗಿ ಅನೇಕತ್ವದಲ್ಲಿ ಯಾವುದಾದರೂ ಒಂದು ರೀತಿಯಲ್ಲಿ ಏಕತ್ವದ ಸಮರ್ಥನೆಯನ್ನೂ ಕಾಣಬಹುದು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]