ಅನಂತೇಶ್ವರ ದೇವಸ್ಥಾನ, ಉಡುಪಿ
ಅನಂತೇಶ್ವರ ದೇವಾಲಯ, ಉಡುಪಿ | |
---|---|
ಭೂಗೋಳ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಉಡುಪಿ ಜಿಲ್ಲೆ |
ಸ್ಥಳ | ಉಡುಪಿ |
ವಾಸ್ತುಶಿಲ್ಪ | |
ವಾಸ್ತುಶಿಲ್ಪ ಶೈಲಿ | Kerala temple architecture |
ಇತಿಹಾಸ ಮತ್ತು ಆಡಳಿತ | |
ಸೃಷ್ಟಿಕರ್ತ | ಆಳುಪ ರಾಜವಂಶ |
ಕರ್ನಾಟಕದಲ್ಲಿ ಕಂಡುಬರುವ ಪುರಾತನ ದೇವಾಲಯಗಳಲ್ಲಿ ಒಂದು ಅನಂತೇಶ್ವರ ದೇವಾಲಯ. ಈ ದೇವಾಲಯವು ಭಗವಾನ್ ಅನಂತೇಶ್ವರ ಪರಶುರಾಮನಿಗೆ (ವಿಷ್ಣುವಿನ ಅವತಾರ) ಸಮರ್ಪಿತವಾದ ಐತಿಹಾಸಿಕ ಹಿಂದೂ ದೇವಾಲಯವಾಗಿದೆ. ಈ ದೇವಾಲಯವು ಉಡುಪಿಯಲ್ಲಿದೆ. ಉಡುಪಿಯ ರಥಬೀದಿಯ ಮಧ್ಯೆ ಎರಡು ಪುರಾತನ ದೇವಾಲಯಗಳಿವೆ. ಅದರಲ್ಲಿ ಒಂದು ಅನಂತೇಶ್ವರ ದೇವಾಲಯ[೧]
ಹಿನ್ನೆಲೆ
[ಬದಲಾಯಿಸಿ]ಉಡುಪಿ ಅನಂತೇಶ್ವರ ದೇವಸ್ಥಾನವು ೮ ನೇ ಶತಮಾನದಲ್ಲಿ ಅಲೂಪರ ಆಳ್ವಿಕೆಯಲ್ಲಿ ನಿರ್ಮಿಸಲಾದ ಐತಿಹಾಸಿಕ ಹಿಂದೂ ದೇವಾಲಯವಾಗಿದೆ. ಉಡುಪಿಯ ಮಂಜೇಶ್ವರದಲ್ಲಿರುವ ಈ ದೇವಾಲಯವನ್ನು 'ಮಂಜುಳ ಕ್ಷೇತ್ರ' ಮತ್ತು ೧೮ ಊರುಗಳ ದೇವಾಲಯ ಎಂದೂ ಕರೆಯುತ್ತಾರೆ. ಶ್ರೀ ಅನಂತೇಶ್ವರ ದೇವಾಲಯವು ಉಡುಪಿಯ ಪುರಾತನ ದೇವಾಲಯಗಳಲ್ಲೊಂದಾಗಿದ್ದು, ಈ ಗ್ರಾಮಕ್ಕೆ ಶಿವಳ್ಳಿ ಎಂದು ಹೆಸರು ಬರಲು ಕಾರಣವಾದ ದೇವಾಲಯವಾಗಿದೆ. ಈ ದೇವಾಲಯವನ್ನು ಕೇಂದ್ರವಾಗಿಸಿ ನೆಲೆಗೊಂಡ ಬ್ರಾಹ್ಮಣ ಸಮುದಾಯವು ಶಿವಳ್ಳಿ ಬ್ರಾಹ್ಮಣರು ಎಂದು ಹೆಸರಾದರು.
ಶಿವಳ್ಳಿಯ ಮೂಲರೂಪ “ಶಿವಳ್ಳಿ” ಎಂಬುದು ಕೆಲವರ ಅಭಿಪ್ರಾಯ. ಪ್ರಾಚೀನ ಗ್ರಂಥಗಳಲ್ಲಿ ಇದನ್ನು ಶಿವಬೆಳ್ಳಿ ಎಂದು ಕರೆದಿದ್ದಾರೆ. ಮುಂದೆ ಈ ಮಾತೇ ಸಂಸ್ಕೃತದಲ್ಲಿ ರೂಪ್ಯಪೀಠ, ರಜತಪೀಠ ಎಂದೆಲ್ಲಾ ಪ್ರಸಿದ್ಧವಾಯಿತು. ಹೀಗೆ ಉಡುಪಿಗೆ ಈ ದೇವಾಲಯದಿಂದ ರೂಪ್ಯ-ಪೀಠಪುರ ಎಂಬ ಹೆಸರೂ ಬಂತು.[೨]
ಇತಿಹಾಸ
[ಬದಲಾಯಿಸಿ]ಈ ಪ್ರದೇಶವನ್ನು ಪ್ರಾಚೀನವಾಗಿ ಶಿವಳ್ಳಿ ಎಂದು ಕರೆಯಲಾಗುತ್ತಿತ್ತು. ಸ್ಥಳೀಯರು ಇದನ್ನು ಶಿವ-ಬೆಳ್ಳಿ ಎಂದೂ ಕೆಲವೊಮ್ಮೆ ರಜತಪೀಠಪುರ ಎಂದೂ ಕರೆಯುತ್ತಾರೆ. ಪರಶುರಾಮನ ಕಟ್ಟಾ ಅನುಯಾಯಿಯಾಗಿದ್ದ ರಾಮಭೋಜನು ಇಲ್ಲಿಯ ರಾಜನಾಗಿ ಪಟ್ಟಾಭಿಷೇಕ ಮಾಡಿದ್ದರಿಂದ ಇದಕ್ಕೆ ರಾಜತಪೀಠ ಪುರ ಎಂಬ ಹೆಸರು ಬಂದಿದೆ ಎಂದು ಇತಿಹಾಸ ಹೇಳುತ್ತದೆ.
ಒಮ್ಮೆ ರಾಮಭೋಜನು ಯಜ್ಞವನ್ನು ಮಾಡಲು ಬಯಸಿದನು. ಯಜ್ಞವನ್ನು ಮಾಡುವ ಸಮಯದಲ್ಲಿ ಒಂದು ಹಾವು ಪ್ರತ್ಯಕ್ಷವಾಯಿತು ಮತ್ತು ತಿಳಿಯದೆ ತಪ್ಪಾಗಿ ಕೊಲ್ಲಲ್ಪಟ್ಟಿತು. ಸರ್ಪ ದೋಷದಿಂದ (ಹಾವನ್ನು ಕೊಂದ ಪಾಪದಿಂದ) ಮುಕ್ತಿ ಹೊಂದಲು ರಾಜನು ಪರಶುರಾಮನ ಸೂಚನೆಯಂತೆ ಬೆಳ್ಳಿಯ ಪೀಠವನ್ನು (ರಜತ ಪೀಠ) ನಿರ್ಮಿಸಲು ನಿರ್ಧರಿಸಿದನು. ಅಂತೆಯೇ ಈ ಪೀಠದಲ್ಲಿ ಹಾವುಗಳ ಚಿತ್ರಗಳನ್ನು ಕೆತ್ತಲಾಗಿದೆ.
ಇನ್ನೊಂದು ಕಥೆಯ ಪ್ರಕಾರ ಶಿವನು ಲಿಂಗದ ರೂಪದಲ್ಲಿ ಬೆಳ್ಳಿಯ ಪೀಠವನ್ನು ಆಕ್ರಮಿಸಿಕೊಂಡನು. ಪರಶುರಾಮನು ಲಿಂಗವನ್ನು ಅನಂತನ ರೂಪದಲ್ಲಿ ಪ್ರತಿಷ್ಠಾಪಿಸುವಂತೆ ಶಿವನು ವಿನಂತಿಸಿದನು ಹಾಗಾಗಿ ಅನಂತೇಶ್ವರ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಅನಂತೇಶ್ವರ ದೇವಸ್ಥಾನದ ಕಥೆ ಹುಟ್ಟಿಕೊಂಡಿದ್ದು ಹೀಗೆ.[೩]
ಈ ದೇವಾಲಯವು ಹಿಂದೆ ಪಡು ದೇವಾಲಯವೆಂದು ಕರೆಯಲ್ಪಡುತ್ತಿತ್ತು. ಒಂದು ನಂಬಿಕೆಯ ಪ್ರಕಾರ, ಪಾಂಡವರು ತಮ್ಮ ವನವಾಸದ ಅವಧಿಯಲ್ಲಿ ಈ ದೇವಾಲಯವನ್ನು ನಿರ್ಮಿಸಿದರೆಂದು ಹೇಳಲಾಗುತ್ತದೆ. ಪಡು ದೇವಾಲಯದ ಮಹಾದೇವರು ಎಂದು ಪ್ರಾಚೀನ ಶಾಸನಗಳಲ್ಲಿ ಉಲ್ಲೇಖ ಇದೆ ಹಾಗೂ ಅದರ ಪೂರ್ವದಲ್ಲಿರುವ ಚಂದ್ರೇಶ್ವರನ ಮಂದಿರವೇ ಮೂಡು ದೇವಾಲಯವಾಗಿದೆ.
ವೈಶಿಷ್ಟ್ಯ
[ಬದಲಾಯಿಸಿ]ಮೈಸೂರಿನ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಹ್ಯಾದ್ರಿ ಖಂಡ ಎಂಬ ಕನ್ನಡ ಕಾವ್ಯ ಪ್ರಕಟವಾಗಿದೆ. ಆ ಕಾವ್ಯದ ಆಧಾರದ ಮೇಲೆ ಹೇಳುವುದಾದರೆ ಅನಂತೇಶ್ವರ ದೇವಾಲಯ ಶಿವಾಲಯವೇ ಸರಿ. ಅದು ವಿಷ್ಣುವಿನ ಆಲಯವೆಂದು ಪರಿವರ್ತಿಸಿದವರು ಮಾಧ್ವರು.
ಈ ದೇವಸ್ಥಾನದಲ್ಲಿ ಆರಾಧನೆಗೊಳ್ಳುತ್ತಿರುವ ಮುಖ್ಯ ದೇವತೆ ಅನಂತೇಶ್ವರನ ರೂಪದಲ್ಲಿರುವ ಶ್ರೀನಾರಾಯಣ. ಅನಂತ ಅಂದರೆ ಶೇಷ, ಅನಂತೇಶ್ವರ ಅಂದರೆ ಶೇಷ ಶಯನನಾದ ನಾರಾಯಣ ಎಂದರ್ಥ.[೪] ಈ ದೇವಾಲಯವು ನಾರಾಯಣನನ್ನು(ಪರಶುರಾಮ) ಲಿಂಗ ರೂಪದಲ್ಲಿ ಪೂಜಿಸುವ ದೇವಾಲಯವಾಗಿದೆ. ಇಲ್ಲಿರುವ ಮೂರ್ತಿ ಶೈವರಿಗೆ ಶಿವ ವೈಷ್ಣವರಿಗೆ ವಿಷ್ಣುವೂ ಹೌದು. ಹಾಗಾಗಿ ಇದೊಂದು ಹರಿಹರ ಕ್ಷೇತ್ರವಾಗಿದೆ.[೫]
ಮಧ್ವಾಚಾರ್ಯರ ತಂದೆ ಈ ದೇವಸ್ಥಾನದ ಅರ್ಚಕರಾಗಿದ್ದರು ಎಂದು ಐತಿಹ್ಯ. ಅವರು ಇಲ್ಲಿಂದ ಪಾಜಕಕ್ಕೆ ನೆಲೆಸಿದಾಗ ಈ ಅಧಿ ದೇವರ ನೆನಪಿಗಾಗಿ ಒಂದು ಅನಂತ ಪದ್ಮನಾಭನ ಪ್ರತೀಕವನ್ನು ತಮ್ಮ ಉಪಾಸ್ಯ ಮೂರ್ತಿಯಾಗಿ ಪಾಜಕದಲ್ಲಿ ತಂದಿಟ್ಟುಕೊಂಡರು. ಆ ವಿಗ್ರಹ ಈಗಲೂ ಅಲ್ಲಿ ಪೂಜೆಗೊಳ್ಳುತ್ತಿದೆ. ಈ ಅಧಿದೈವತದ ಸೇವೆಯನ್ನು ನಡಿಲ್ಲಾಯ ದಂಪತಿಗಳು ಹರಕೆ ಹೊತ್ತು ನಡೆಸಿದ ಫಲವಾಗಿಯೇ ಮಧ್ವಾಚಾರ್ಯರ ಅವತಾರವಾಯಿತು ಎಂದು ಮಧ್ವವಿಜಯ ಹೇಳುತ್ತದೆ.[೬]
ಆಚಾರ್ಯ ಮಧ್ವರು ತನ್ನ ಶಿಷ್ಯರಿಗೆ ಪ್ರವಚನ ನಡೆಸುತ್ತಿದ್ದುದ್ದು ಈ ದೇವಾಲಯದ ಒಳ ಆವರಣದಲ್ಲಿ ಆಚಾರ್ಯರು ಇಲ್ಲಿ ಐತರೇಯ ಪ್ರವಚನ ಮಾಡುತ್ತಿದ್ದಾಗ ಮುಗಿಲಿನಿಂದ ಪುಷ್ಪವೃಷ್ಟಿಯಾದ ಪ್ರಸಂಗವನ್ನು ಮಧ್ವವಿಜಯ ಉಲ್ಲೇಖಿಸುತ್ತದೆ. ಆಚಾರ್ಯರು ಪ್ರವಚನ ಮಾಡುವಾಗ ಕೂಡುತ್ತಿದ್ದ ಶಿಲಾಫಲಕ ಈಗಲೂ ಅಲ್ಲಿ ಪೂಜೆಗೊಳ್ಳುತ್ತಿದೆ. ಆ ಫಲಕದ ಮೇಲೆ ಬೇರೆ ವಿಗ್ರಹವಿಲ್ಲ.[೭]
ಈ ದೇವಾಲಯವು ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಪುತ್ತಿಗೆ ಮಠದಿಂದ ನಿರ್ವಹಿಸಲ್ಪಡುತ್ತದೆ. ಇದು ಮೂಡು ದೇವಾಲಯವೆಂದು ಕರೆಯಲ್ಪಡುವ ಶಿವನ ಚಂದ್ರಮೌಳೇಶ್ವರ ದೇವಸ್ಥಾನದ ಸಮೀಪದಲ್ಲಿದೆ.
ಅನಂತೇಶ್ವರ ದೇವಾಲಯದ ವಾಸ್ತುಶಿಲ್ಪ
[ಬದಲಾಯಿಸಿ]ಈ ದೇವಾಲಯದಲ್ಲಿ ನಾಲ್ಕು ದುರ್ಗಾಲಯಗಳು (ದುರ್ಗೆಯ ದೇವಸ್ಥಾನ) ಮತ್ತು ನಾಗಾಲಯಗಳು (ಸುಬ್ರಹ್ಮಣ್ಯ ದೇವಸ್ಥಾನ) ಇವೆ. ದೇವಾಲಯವು ಮರ ಮತ್ತು ಕಲ್ಲಿನಲ್ಲಿ ಸಂಕೀರ್ಣವಾದ ಕೆತ್ತನೆಗಳನ್ನು ಹೊಂದಿದೆ. ದೇವಸ್ಥಾನದೊಳಗೆ ಪುರಾತನ ಮಾದರಿಯ ಒಂದು ಸುತ್ತಿನ ಪೌಳಿ ಇದೆ.[೮] ಗರ್ಭ ಗುಡಿಯಿಂದ ಹೊರ ಬರುವಾಗ ಅನೆಕಲ್ಲಿನ ಮಾದರಿಯ ಮೆಟ್ಟಿಲುಗಳು ಹಾಗೂ ಪ್ರದಕ್ಷಿಣೆ ಬೀದಿ ಇದೆ. ದೇವಾಲಯವು ಎರಡು ಅಂತಸ್ತಿನ ದೊಡ್ಡ ಗರ್ಭ ಗೃಹವನ್ನು ಹೊಂದಿದ್ದು, ಅದಕ್ಕೆ ಅಂಟಿಕೊಂಡೇ ಮುಖ ಮಂಟಪವಿದೆ. ಇದರ ಪಕ್ಕದಲ್ಲಿ ಮಧ್ವಾಚಾರ್ಯರು ತಮ್ಮ ಶಿಷ್ಯರಿಗೆ ಪಾಠ ಹೇಳುತ್ತಿದ್ದರು ಎನ್ನಲಾದ ಸನ್ನಿಧಾನದ ಶಿಲಾ ಫಲಕವಿದೆ.[೯]
ಅನಾದಿ ಸಂಪ್ರದಾಯ
[ಬದಲಾಯಿಸಿ]ಅಮರ ಕಾಲದಿಂದಲೂ, ಶ್ರೀ ಅನಂತೇಶ್ವರ ದೇವಾಲಯವು ವೇದಗಳು, ವೇದಾಂತ ಮತ್ತು ಉಪನಿಷತ್ತುಗಳ ಪಾಠಗಳನ್ನು ನೀಡತ್ತಾ ಪ್ರಸಿದ್ಧಿ ಪಡೆದಿದೆ. ಈ ದೇವಾಲಯದಲ್ಲಿಯೇ ಶ್ರೀ ಮಧ್ವಾಚಾರ್ಯರು ತಮ್ಮ ಗುರುಗಳಾದ ಶ್ರೀ ಅಚ್ಯುತಪ್ರೇಕ್ಷಾಚಾರ್ಯರಿಂದ ಪಾಠಗಳನ್ನು ಪಡೆದರು ಎಂದು ಹೇಳಲಾಗುತ್ತದೆ. ಶ್ರೀ ಸ್ಕಂದಪುರಾಣದಲ್ಲಿ ಅನಂತೇಶ್ವರನನ್ನು ವಿವರವಾಗಿ ವಿವರಿಸಲಾಗಿದೆ.[೧೦]
ಸಹ ನೋಡಿ
[ಬದಲಾಯಿಸಿ]
ಉಲ್ಲೇಖಗಳು
[ಬದಲಾಯಿಸಿ]- ↑ https://kannada.oneindia.com/photos/annual-festival-of-famous-ananteshwar-temple-in-udupi-oi99897.html#photos-6
- ↑ https://itms.kar.nic.in/hrcehome/history.php?tid=163
- ↑ https://www.udupilive.in/city-guide/lord-annantheshwara-temple-in-udupi#:~:text=The%20Anantheshwara%20temple%20dates%20back%20its%20existence%20to,towns%27.%20This%20place%20was%20anciently%20known%20as%20Sivalli
- ↑ https://kannada.oneindia.com/photos/annual-festival-of-famous-ananteshwar-temple-in-udupi-oi99897.html
- ↑ https://kannada.oneindia.com/photos/annual-festival-of-famous-ananteshwar-temple-in-udupi-oi99897.html#photos-6
- ↑ https://itms.kar.nic.in/hrcehome/history.php?tid=163
- ↑ https://itms.kar.nic.in/hrcehome/history.php?tid=163
- ↑ https://kannada.oneindia.com/photos/annual-festival-of-famous-ananteshwar-temple-in-udupi-oi99897.html
- ↑ https://kannada.oneindia.com/photos/annual-festival-of-famous-ananteshwar-temple-in-udupi-oi99897.html
- ↑ https://www.udupilive.in/city-guide/lord-annantheshwara-temple-in-udupi#:~:text=The%20Anantheshwara%20temple%20dates%20back%20its%20existence%20to,towns%27.%20This%20place%20was%20anciently%20known%20as%20Sivalli