ಅಜಿತ

ವಿಕಿಪೀಡಿಯ ಇಂದ
Jump to navigation Jump to search

ಅಜಿತ ಪ್ರ.ಶ.ಪು 5ನೆಯ ಶತಮಾನದ ಒಬ್ಬ ನಾಸ್ತಿಕ. ಭೌತಿಕವಾದಿ, ನಿಶ್ಚಯಜ್ಞಾನ ಸಾಧ್ಯವಿಲ್ಲವೆಂದು ವಾದಿಸಿದವ. ಮಾನವಕೇಶದಿಂದ ರಚಿತವಾದ ನೀಳುಡುಪನ್ನು ಧರಿಸುತ್ತಿದ್ದುದರಿಂದ ಇವನನ್ನು ಕೇಶಕಂಬಲಿನ್ ಎಂದೂ ಕರೆಯುತ್ತಾರೆ.

ತತ್ವಗಳು[ಬದಲಾಯಿಸಿ]

ಇವನ ವಾದ ಹೀಗಿದೆ: ಮನುಷ್ಯ ಮತ್ತು ಪ್ರಪಂಚ ಇವು ನೀರು, ಗಾಳಿ,ಬೆಂಕಿ ಮತ್ತು ಭೂಮಿ ಎಂಬ ನಾಲ್ಕು ಪದಾರ್ಥಗಳಿಂದ ಉಂಟಾಗಿವೆ; ಇವುಗಳ ವ್ಯತ್ಯಸ್ತ ಪ್ರಮಾಣದ ಸಂಯೋಜನೆಯಿಂದಲೇ ಪ್ರಪಂಚ ಹುಟ್ಟಿಕೊಂಡಿತು. ಇಂದ್ರಿಯಗಳ ಮೂಲಕ ಮಾತ್ರವೇ ಜ್ಞಾನಾರ್ಜನೆ ಸಾಧ್ಯವಾದ್ದರಿಂದ ಕೇವಲ ಒಳನೋಟದ ಮೂಲಕ ಅದು ಎಂದಿಗೂ ಸಾಧನೆಯಾಗಲಾರದು. ಗ್ರಹಿಕೆಯನ್ನು ತರ್ಕದಿಂದ ಶಾಸ್ತ್ರೀಕರಿಸಿದಾಗ ಅದು ಇನ್ನಷ್ಟು ಮಿಥ್ಯವಾಗುತ್ತದೆ. ಭಾವೋದ್ರೇಕದಿಂದ ಈ ಇಂದ್ರಿಯಗಳು ಮತ್ತು ಆಲೋಚನಾಶಕ್ತಿ ದಾರಿತಪ್ಪುತ್ತವೆ. ಜ್ಞಾನವೆನ್ನಿಸಿಕೊಂಡದ್ದು ಕೂಡ ದುರಾಶೆ ಮತ್ತು ದುರಹಂಕಾರಗಳಿಂದ ಇನ್ನಷ್ಟು ಕಲುಷಿತಗೊಳ್ಳುತ್ತದೆ. ವೇದಗಳು ಅಹಂಕಾರಮೂಲವಾಗಿ ಬ್ರಾಹ್ಮಣರ `ವಾಂತಿ'ಯಾಗಿವೆ. ದಡ್ಡರೇ ಆಗಲಿ, ಜಾಣರೇ ಆಗಲಿ ದೇಹದಿಂದ ಬೇರ್ಪಡುವುದು ಮಾತ್ರವೇ ಅಲ್ಲದೆ, ಅವರೆಲ್ಲ ನಿರ್ನಾಮರಾಗುತ್ತಾರೆ. ಸಾವನ್ನಪ್ಪಿದವನು ಸಂಪುರ್ಣವಾಗಿ ಇಲ್ಲವಾಗುತ್ತಾನೆ. ತ್ಯಾಗದಿಂದ ಲಾಭವೂ ಇಲ್ಲ,ದುಷ್ಟತನದಿಂದ ಮತ್ತು ದುರಾಚಾರದಿಂದ ನಷ್ಟವೂ ಇಲ್ಲ. ಆಹ್ಲಾದದಂಥ ವಿಷಯದಲ್ಲಿ ಯಾರಿಗಾದರೂ ಸಂಬಂಧವಿದ್ದರೆ ಅದು ಅವರಿಂದ ಸ್ವೀಕೃತವಾಗಬಹುದು ಅಥವಾ ಆಗದಿರಬಹದು ಮತ್ತು ಅವರು ಅದನ್ನು ಅನುಭವಿಸಬಹುದಿತ್ತು ಅಥವಾ ಬಿಡಬಹುದಿತ್ತು. ಅದು ಯಾವ ವ್ಯತ್ಯಾಸವನ್ನೂ ಉಂಟುಮಾಡುವುದಿಲ್ಲ. ದಾನಧರ್ಮಗಳನ್ನೇ ಆಗಲಿ, ಯಜ್ಞಯಾಗಗಳನ್ನೇ ಆಗಲಿ ಮಾಡುವುದರಲ್ಲಿ ಹುರುಳಿಲ್ಲ. ಜೀವ ಹೋದ ಮೇಲೆ ಏನೂ ಇಲ್ಲ. ಮುಂದಿನ ಪ್ರಪಂಚ ಅಥವಾ ಮುಂದಿನ ಜನ್ಮಗಳೂ ಇಲ್ಲ; ಒಳಿತು ಕೆಡುಕುಗಳ ಆಚಾರದಿಂದ ಫಲವೂ ಇಲ್ಲ. ಆದ್ಧರಿಂದ, ಬೌದ್ಧರಿಂದ, ಜೈನರಿಂದ ಮತ್ತು ಹಿಂದೂಗಳಿಂದ ಈ ಪಂಥಕ್ಕೆ ಪ್ರೋತ್ಸಾಹ ಸಿಕ್ಕಲಿಲ್ಲ.

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಅಜಿತ&oldid=612061" ಇಂದ ಪಡೆಯಲ್ಪಟ್ಟಿದೆ