ಅಂತ್ಯೇಷ್ಟಿ
ಅಂತ್ಯೇಷ್ಟಿ ಅಥವಾ ಹಿಂದೂ ಶವಸಂಸ್ಕಾರ; ಅಂತಿಮ ಸಂಸ್ಕಾರ, ಹಿಂದೂ ಸಮಾಜದ ಒಂದು ಪ್ರಮುಖ ಸಂಸ್ಕಾರ. ಅಂತಹ ವಿಧಿಗಳ ವಿಸ್ತಾರವಾದ ಗ್ರಂಥಗಳು ಲಭ್ಯವಿವೆ, ವಿಶೇಷವಾಗಿ ಗರುಡ ಪುರಾಣದಲ್ಲಿ. ಸಿದ್ಧಾಂತ ಮತ್ತು ಆಚರಣೆಯಲ್ಲಿ ವ್ಯಾಪಕ ಅಸಂಗತತೆಯಿದೆ, ಮತ್ತು ವಿಧಾನಗಳು ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗುತ್ತವೆ. ಉತ್ತರಕರ್ಮ: ಸತ್ತ ಮೇಲೆ ಮಾಡುವ ಕರ್ಮ. ಉತ್ತರಕ್ರಿಯೆ, ಅಂತ್ಯಕ್ರಿಯೆ ಅಂತ್ಯೇಷ್ಟಿ ಎಂದೂ ಕರೆಯುತ್ತಾರೆ. ಮನುಷ್ಯ ಜೀವಂತನಾಗಿರುವಾಗ ಮಾಡತಕ್ಕ ಜಾತಕರ್ಮಾದಿ ಸಂಸ್ಕಾರಗಳು ಪೂರ್ವಕ್ರಿಯೆಗಳಾದರೆ ಮರಣೋತ್ತರ ಕಾಲದಲ್ಲಿ ಮಾಡುವ ಶರೀರದಹನ ಅಸ್ಥಿಸಂಚಯನ, ಪಿಂಡದಾನ, ಉದಕದಾನ, ಏಕೋದ್ದಿಷ್ಟ ಶ್ರಾದ್ಧ. ಸಪಿಂಡೀಕರಣಶ್ರಾದ್ಧ ಮೊದಲಾದವು ಅಪರಕ್ರಿಯೆ ಅಥವಾ ಉತ್ತರಕರ್ಮಗಳು. ಇದನ್ನು ಮಾಡುವಾಗ ಕರ್ತೃವಿಗೆ ಆಶೌಚವಿರುತ್ತದೆ. ಜೀವಿತಕಾಲದಲ್ಲಿ ಯಾಗ ಮಾಡಿದವ ಸತ್ತರೆ ಅವನಿಗೆ ಮಾಡುವ ಉತ್ತರಕರ್ಮ ವಿಧಿಯ ಕ್ರಮದಲ್ಲಿ ವ್ಯತ್ಯಾಸಗಳಿವೆ. ಆತ ಇಟ್ಟುಕೊಂಡಿದ್ದ ಧಾರಾಗ್ನಿ, ಹೋಮ ಸಾಧನ ಪದಾರ್ಥಗಳು-ಇವೆಲ್ಲ ಅವನೊಡನೆಯೇ ನಷ್ಟವಾಗುತ್ತವೆ. ಪ್ರಾಣ ಹೋದ ಮೇಲೆ ನಿರ್ಜೀವವಾದ ಪಾರ್ಥಿವ ಶರೀರವನ್ನು, ಹೋಮಮಾಡಿ ಸಿದ್ಧಪಡಿಸಿದ ಅಗ್ನಿಯಲ್ಲಿ ಸುಡುವ ವರ್ಗ ಒಂದು. ಅದನ್ನು ಭೂಮಿಯಲ್ಲಿ ಸಮಾಧಿ ಮಾಡುವ ವರ್ಗ ಮತ್ತೊಂದು. ಸಂನ್ಯಾಸಿಗಳು ಸತ್ತರೆ ಅವರ ಶರೀರವನ್ನು ಉದ್ದಿಷ್ಟ ಸ್ಥಳದಲ್ಲಿ ಸಮಾಧಿ ಮಾಡುತ್ತಾರೆ. ಹಿಂದುಗಳಲ್ಲಿ ಯಾವ ವರ್ಗದವರೇ ಆಗಲಿ ಹೆಣವನ್ನು ಬಿದಿರಿನಿಂದ ತಯಾರಿಸಿದ ಚಟ್ಟದಲ್ಲಿಟ್ಟು, ನಾಲ್ಕು ಮಂದಿ ಹೊತ್ತು ಊರಿನ ಹೊರಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಅದಕ್ಕೆ ಸಂಸ್ಕಾರಗಳನ್ನು ನಡೆಸುತ್ತಾರೆ. ಶವವನ್ನು ಸಾಗಿಸುವಾಗ ಶವದ ಮುಖ ಊರನ್ನು ನೋಡುವಂತಿರಬಾರದು. ಸುಡುವ ಅಥವಾ ಹೂಳುವ ನಿವೇಶನಕ್ಕೆ ಶ್ಮಶಾನವೆಂದು ಹೆಸರು. ಊರ ಹೊರಗಿನ ಈ ನಿರ್ದಿಷ್ಟ ನಿವೇಶನ ಈ ಉತ್ತರಕರ್ಮಕ್ಕಾಗಿಯೇ ಮೀಸಲಾದ ಜಾಗ. ಸತ್ತ ಮಾರನೆಯ ದಿನ ಅಥವಾ ಮೂರನೆಯ ದಿನ ಸುಟ್ಟ ಅಥವಾ ಹೂಳಿರುವ ಸ್ಥಳಕ್ಕೆ ಮತ್ತೆ ಹೋಗಿ ಸತ್ತ ಆ ಚೇತನವನ್ನು ಉದ್ದೇಶಿಸಿ ಹಾಲು ತುಪ್ಪ ಮೊದಲಾದವನ್ನು ಅಲ್ಲಿ ಹಾಕುತ್ತಾರೆ. ಶರೀರವನ್ನು ಬಿಟ್ಟು ಹೋದ ಚೇತನ ಪ್ರೇತವಾಗುತ್ತದೆಯೆಂಬುದು ವೈದಿಕ ನಂಬಿಕೆ. ಆ ಪ್ರೇತತ್ವವನ್ನು ನಿವೃತ್ತಿಗೊಳಿಸಿ ಪಿತೃತ್ವವನ್ನು ಪಡೆಯುವಂತೆ ಮಾಡುವ ಕ್ರಿಯೆಯೇ ಉತ್ತರಕ್ರಿಯೆ. ಶರೀರವನ್ನು ಸುಟ್ಟ ಮಾರನೆಯ ದಿನ ಅಸ್ಥಿಸಂಚಯನ ಎಂದರೆ ಮೂಳೆ ಮೊದಲಾದ ವನ್ನು ಸಂಗ್ರಹಿಸಿ ಪವಿತ್ರವಾದ ತೀರ್ಥ ಅಥವಾ ನದಿಯಲ್ಲಿ ಮಂತ್ರಪೂರ್ವಕ ವಿಸರ್ಜಿಸುವುದು. ಅಂದೇ ಉತ್ತರಕ್ರಿಯೆಗೆ ಪ್ರಾರಂಭ. ಸತ್ತ ಪ್ರೇತರೂಪಿಯಾದ ಚೇತನವನ್ನು ಪಾಷಾಣದಲ್ಲಿ (ಕಲ್ಲಿನಲ್ಲಿ) ಆವಾಹನೆ ಮಾಡಿ ಅದನ್ನು ಒಂದು ಗುಳಿಯಲ್ಲಿಟ್ಟು ಅದಕ್ಕೆ ಪ್ರತಿ ನಿತ್ಯವೂ ಪಿಂಡ (ಅನ್ನದ ಉಂಡೆ), ತಿಲೋದಕಗಳನ್ನು (ಎಳ್ಳು ನೀರು) ಮಂತ್ರಪೂರ್ವಕ ಬಿಟ್ಟು ತೃಪ್ತಿಪಡಿಸುತ್ತಾರೆ. ಹತ್ತನೆಯ ದಿನದಲ್ಲಿ ಅದಕ್ಕೆ ಪ್ರಭೂತ ಬಲಿಯನ್ನು ಕೊಟ್ಟು ಕಲ್ಲನ್ನು ವಿಸರ್ಜನೆ ಮಾಡುತ್ತಾರೆ. ಅಲ್ಲಿಂದ ಮುಂದೆ ಅದಕ್ಕೆ ಪಿತೃತ್ವ ಪ್ರಾಪ್ತಿ. ಆ ಬಳಿಕ ಹನ್ನೊಂದನೆಯ ದಿನ ಆ ಚೇತನವನ್ನು ಮಾತ್ರ ಉದ್ದೇಶಿಸಿ ಮಾಡುವ ಶ್ರಾದ್ಧಕ್ಕೆ ಏಕೋದ್ದಿಷ್ಟ ಶ್ರಾದ್ಧವೆಂದು ಹೆಸರು. ಈ ಶ್ರಾದ್ಧವನ್ನು ಮಾಡಿದ ಮೇಲೆ ಸಪಿಂಡೀಕರಣ ಶ್ರಾದ್ಧವನ್ನು ಮಾಡಿ ಆ ಚೇತನವನ್ನು ಪಿತೃಗಳ ವರ್ಗಕ್ಕೆ (ಗುಂಪಿಗೆ) ಸೇರಿಸುತ್ತಾರೆ. ಈ ಸಪಿಂಡೀಕರಣ ಶ್ರಾದ್ಧವನ್ನು ಹನ್ನೆರಡನೆಯ ದಿನದಲ್ಲಾಗಲೀ ಅಥವಾ ವರ್ಷಾಂತ್ಯದೊಳಗೆ ಶಾಸ್ತ್ರದಲ್ಲಿ ತಿಳಿಸಿರುವ ನಿಯಮದಂತೆ ಗೊತ್ತಾದ ದಿನದಲ್ಲಾಗಲೀ ಮಾಡಬಹುದು. ಹೀಗೆ, ಸತ್ತ ಬಳಿಕ ಪಾರ್ಥಿವ ಶರೀರವನ್ನು ಸಂಸ್ಕರಿಸಿ ಪ್ರೇತತ್ವವನ್ನು ನೀಗಿಸಿ ಪಿತೃವರ್ಗಕ್ಕೆ ಸೇರಿಸುವವರೆಗಿನ ಕರ್ಮವೇ ಉತ್ತರಕರ್ಮ. ಈ ಕರ್ಮಗಳನ್ನು ಮಾಡುವಾತ ಅನೇಕ ನಿಯಮಗಳಿಗೆ ಬದ್ಧನಾಗಿರಬೇಕು. ಇದು ನಡೆಯುವವರೆಗೂ ಸಪಿಂಡ ಬಂಧುವರ್ಗದಲ್ಲಿ ಯಾವ ಶುಭಕಾರ್ಯವೂ ನಡೆಯುವಂತಿಲ್ಲ. ಉತ್ತರಕ್ತಿಯೆ ನಡೆಸುವುದರಲ್ಲಿ ಮೊದಲನೆಯ ಹಕ್ಕು ಹಿರಿಯ ಮಗನದು. ಅವನು ಆ ವೇಳೆಯಲ್ಲಿಲ್ಲದೆ ಉಳಿದ ಮಕ್ಕಳಲ್ಲಿ ಯಾರು ಕ್ರಿಯೆ ಮಾಡಿದ್ದರೂ ಹಿರಿಯನ ಕರ್ತವ್ಯ ತಪ್ಪುವಂತಿಲ್ಲ. ಗಂಡುಮಕ್ಕಳಿಲ್ಲದಿದ್ದಾಗ ಸ್ಮೃತಿಗ್ರಂಥಗಳಲ್ಲಿ ತಿಳಿಸಿರುವ ಕ್ರಮದಂತೆ ಇತರ ಬಂಧುವರ್ಗದಲ್ಲಿ ಮತ್ತೆ ಯಾರಾದರೂ ಈ ಕರ್ಮವನ್ನು ಮಾಡಬಹುದು.