ವಿಷಯಕ್ಕೆ ಹೋಗು

ಯುಗಾದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯುಗಾದಿ
Ugadi Pachadi with New Year prayer puja tray
ಪರ್ಯಾಯ ಹೆಸರುಗಳುYugadi, Samvatsaradi
Telugu and Kannada New Year
ಆಚರಿಸಲಾಗುತ್ತದೆHindus in ಆಂಧ್ರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ,ತೆಲಂಗಾಣ
ರೀತಿReligious (Hindu), social, cultural
ಆಚರಣೆಗಳುKolam-Rangoli, visiting Temples, Feast with Holige and Bevu Bella
ಆರಂಭಚೈತ್ರ ಮಾಸದ ಮೊದಲ ದಿನ
ಆವರ್ತನAnnual
ಸಂಬಂಧಪಟ್ಟ ಹಬ್ಬಗಳುಮೇಷ ಸಂಕ್ರಾಂತಿ, ಗುಡಿ ಪಾಡ್ವ, ಮತ್ತು ಇತರ ಪ್ರಾದೇಶಿಕ ಹಿಂದೂ ಹೊಸ ವರ್ಷದ ದಿನ

ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. "ಯುಗಾದಿ" ಪದದ ಉತ್ಪತ್ತಿ "ಯುಗ+ಆದಿ" - ಹೊಸ ಯುಗದ ಆರಂಭ ಎಂದು.

ಯುಗಾದಿ ಶುಭಾಶಯ ಕೋರುವ ಶುಭಾಶಯ ಪತ್ರ
ಒಬ್ಬಟ್ಟು/ಹೋಳಿಗೆ -prepared on Ugadi in Andhra Pradesh and Karnataka.

ಸಾಂಪ್ರದಾಯಿಕ ಆಚರಣೆಗಳು

[ಬದಲಾಯಿಸಿ]
  • ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಕೆಲವೆಂದರೆ ಸೂರ್ಯ ನಮಸ್ಕಾರ, ಪಂಚಾಂಗದ ಪೂಜೆ, ಹಾಗೂ ಸರ್ವೇ-ಸಾಮಾನ್ಯವಾಗಿ "ಬೇವು-ಬೆಲ್ಲ." ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿನ್ನಲಾಗುತ್ತದೆ. ಯುಗಾದಿಯೆಂದರೆ ಹೊಸವರ್ಷದ ಆರಂಭದ ದಿನವಾದರೂ ಭಾರತದಲ್ಲಿ ಈ ದಿನವನ್ನು ನಿರ್ಧರಿಸುವ ರೀತಿ ಹಲವಾರಿವೆ.
  • ಮುಖ್ಯವಾಗಿ ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪ್ರಭೇದಗಳಿದ್ದು, ಹಿಂದೂ ಧರ್ಮದ ವೇದಾಂಗ ಜ್ಯೋತಿಷ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತವೆ. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಾಂದ್ರಮಾನ ಹಾಗೂ ಸೂರ್ಯನ ಗತಿಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ. ಕರ್ನಾಟಕದಲ್ಲಿ ಚಾಂದ್ರಮಾನಪದ್ಧತಿ ಮೊದಲಿನಿಂದ ರೂಢಿಯಲ್ಲಿದೆ.
  • ಭೂಮಿಯಿಂದ ನೋಡಿದಾಗ, ಸೂರ್ಯ, ಚಂದ್ರ, ಗ್ರಹಗಳು ನಕ್ಷತ್ರಮಂಡಲದಿಂದಾದ ರಾಶಿಚಕ್ರದಲ್ಲಿ ದಿನೇ ದಿನೇ ಸ್ವಲ್ಪ ಸ್ವಲ್ಪವಾಗಿ ಸಂಚರಿಸಿದಂತೆ ಕಾಣುತ್ತವೆ. ವೇದಾಂಗ ಜ್ಯೋತಿಷದಂತೆ, ಮೊದಲ ನಕ್ಷತ್ರ ಅಶ್ವಿನಿ - ಅಂದರೆ ಮೇಷ ರಾಶಿಯ ೦ - ೧೩:೨೦ ಭಾಗ (ಡಿಗ್ರಿ). ಅಲ್ಲಿ ಸೂರ್ಯನಿದ್ದಾಗ ಭೂಮಿಯ ಉತ್ತರಾರ್ಧಗೋಳದಲ್ಲಿ ಸಸ್ಯಗಳಲ್ಲಿ ಚಿಗುರು ಕಾಣುತ್ತದೆ; ಅಂದರೆ ಹೊಸಹುಟ್ಟು.
  • ಆದ್ದರಿಂದ ಅಶ್ವಿನೀ ನಕ್ಷತ್ರಕ್ಕೆ ರವಿಯು ಪ್ರವೇಶಿಸುವ ಕಾಲವನ್ನು ಹೊಸವರ್ಷ ಎಂದು ಪರಿಗಣಿಸುತ್ತಾರೆ. ಇದೇ ಸೌರಮಾನ ಯುಗಾದಿ. ಸಾಮಾನ್ಯವಾಗಿ ಈಗ ಇದು ಏಪ್ರಿಲ್ ೧೪ ಅಥವಾ ೧೫ ನೇ ತಾರೀಖಿಗೆ ಬೀಳುತ್ತದೆ. ಆದರೆ ಚಂದ್ರನ ಗತಿ ಅತಿವೇಗವಾದ್ದರಿಂದ ಪ್ರತಿ ಪ್ರದಕ್ಷಿಣೆಗೂ ಒಂದೊಂದು ತಿಂಗಳಾಗಿ, ಹನ್ನೆರಡು ಪ್ರದಕ್ಷಿಣೆಗಳಿಗೆ ಸರಿಯಾಗಿ ಒಂದು ಚಾಂದ್ರಮಾನ ಸಂವತ್ಸರವಾಗುತ್ತದೆ.
  • ರವಿಚಂದ್ರರ ಗತಿಯನ್ನವಲಂಬಿಸಿ, ೧೧ ರಿಂದ ೧೩ ಪೂರ್ಣಿಮೆ/ಅಮಾವಾಸ್ಯೆಗಳಿಗೊಂದು ಚಾಂದ್ರಮಾನ ಯುಗಾದಿಯಾಗುತ್ತದೆ. ಈ ಯುಗಾದಿನಿರ್ಣಯದ ಹಿಂದೆ ವೇದಾಂಗ ಜ್ಯೋತಿಷದ ಮಹತ್ತರ ಸಾಧನೆಗಳೇ ಅಡಗಿವೆ; ಅದರಿಂದ ನಮ್ಮ ಪೂರ್ವಿಕರ ಖಗೋಲಗಣಿತದ ಅಪಾರ ಜ್ಞಾನ ವ್ಯಕ್ತವಾಗುತ್ತದೆ. []

ಹಬ್ಬದ ಆಚರಣೆಯ ವಿಧಾನ

[ಬದಲಾಯಿಸಿ]
  • ಈ ಹಬ್ಬವನ್ನು ಹೆಚ್ಚಾಗಿ ಕರ್ನಾಟಕ ,ಆಂಧ್ರ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸುವರು. ಆಂಧ್ರ ಮತ್ತು ಕರ್ನಾಟಕಗಳಲ್ಲಿ ಇದು ಯುಗಾದಿಯಾದರೆ, ಮಹಾರಾಷ್ಟ್ರದಲ್ಲಿ ಗುಡಿಪಾಡ್ ಪಾಡ್ಯಮಿ ದಿವಸ ಗುಡಿಯನ್ನು ಏರಿಸುವುದೇ ಗುಡಿಪಾಡ್ವ - ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ 'ಗುಡಿ' ಎಂದು ಮೂಲೆಯಲ್ಲಿ ಇರಿಸುವರು. ಇದು ಹೊಸ ವರುಷದ ಆಗಮನಕ್ಕೆ ಬಾವುಟವನ್ನು ಹಾರಿಸುವುದರ ಸಂಕೇತ.
  • ಹುಣಿಸೇಹಣ್ಣು, ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವು ಇತ್ಯಾದಿಗಳ ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ಎಂಬ ಹೆಸರಿನ ಪದಾರ್ಥವನ್ನು ಸೇವಿಸುವರು. ಅಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇರುವುದು.
  • ತಳಿರು ತೋರಣವನ್ನು (ಎಳೆಯ ಹಸಿರು ಮಾವಿನೆಲೆ ಮಧ್ಯೆ ಮಧ್ಯೆ ಬೇವಿನ ಎಲೆ ಹೂಗಳ ಗೊಂಚಲು) ಮನೆಗಳ ಮುಂಬಾಗಿಲಿಗೆ ಮತ್ತು ದೇವರ ಮನೆಯ ಬಾಗಿಲಿಗೆ ತಳಿರು ತೋರಣವಾಗಿ ಕಟ್ಟುವರು.
  • ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಯನ್ನಿಡುವರು. ಮುಂಜಾನೆ ಬೇಗನೆದ್ದು ಅಭ್ಯಂಜನ (ಎಣ್ಣೆ ಸೀಗೇಕಾಯಿಯಿಂದ ತಲೆಯನ್ನು ತೊಳೆದುಕೊಳ್ಳುವುದು) ಮಾಡಿ ಪುಣ್ಯಾಹ ಮಂತ್ರಗಳನ್ನು ಉಚ್ಚರಿಸಿ ಮಾವಿನೆಲೆಯಿಂದ ಮನೆಯ ಎಲ್ಲ ಕಡೆ ಕಳಶದ ನೀರನ್ನು ಸಿಂಪಡಿಸುವರು. ನಂತರ ಹೊಸ ಬಟ್ಟೆ ಧರಿಸಿ ಪಂಚಾಂಗವನ್ನು ಮನೆಯ ಹಿರಿಯರು ಓದುವರು ಮತ್ತೆಲ್ಲರೂ ಅದನ್ನು ಕೇಳುವರು.
  • ಪಂಚಾಂಗ ದಿನಸೂಚಿಯಷ್ಟೆ ಅಲ್ಲದೇ ಆ ವರುಷದಲ್ಲಿ ಮಳೆ ಬೆಳೆ ಹೇಗಿದೆ, ರಾಶಿಫಲ, ಮದುವೆ ಉಪನಯನಗಳಿಗೆ ಒಳ್ಳೆಯ ಮುಹೂರ್ತಗಳು, ಒಟ್ಟರೆ ಜನಜೀವನದ ಸ್ಥಿತಿಯನ್ನು ಸೂಚಿಸಿರುವುದು. ಅಂದು ಹಿರಿಯ ಕಿರಿಯರೆಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ ಸಂತೋಷದಿಂದ ಹಾಡಿ ನಲಿವರು.
  • ಖಣಿ ಇಡುವುದು : ಕರಾವಳಿಯ ಸೌರಮಾನ ಯುಗಾದಿಯ ವಿಶೇಷತೆ ಖಣಿ ಇಡುವುದು. ಬಾಳೆ ಎಲೆ, ತಟ್ಟೆಯಲಿ ಅಕ್ಕಿ ಹಾಕಿ ಅದರ ಮೇಲೆ ತೆಂಗಿನಕಾಯಿ, ಸೌತೇಕಾಯಿ, ರವಿಕೆ ಕಣ, ಹೊಸ ಬಟ್ಟೆ, ಚಿನ್ನ, ಬತ್ತದ ತೆನೆ, ಹಣ್ಣು, ದೇವರ ಪ್ರತಿಮೆ ಅದರ ಮುಂದೆ ಒಂದು ಕನ್ನಡಿ ಇಟ್ಟು, ಆ ಕನ್ನಡಿಯಲಿ ದೇವರ ಪ್ರತಿಮೆ ಹಾಗೂ ತಟ್ಟೆಯಲಿ ಇಟ್ಟಂತಹ ವಸ್ತುಗಳನ್ನು ಕಾಣುವ ಹಾಗೆ ಇಡುತ್ತಾರೆ. ವನ್ನು ಇಟ್ಟು ದೇವರ ಮುಂದೆ ಹಿಂದಿನ ರಾತ್ರಿ ಮಲಗುವ ಮುನ್ನ ಇಡುತ್ತಾರೆ. ಯುಗಾದಿ ಹಬ್ಬದಂದು ಬೆಳಿಗ್ಗೆ ಬೇಗ ಎದ್ದು ದೇವರ ದೀಪ ಹಚ್ಚಿ ಖಣಿಯಲ್ಲಿನ ಕನ್ನಡಿಯಲಿ ದೇವ ದರ್ಶನ ಪಡೆಯುವುದು ಅಂದಿನ ವಿಶೇಷ. ನಂತರ ಸ್ನಾನ, ಹೋಳಿಗೆ ಚಿತ್ರಾನ್ನದೂಟ, ದೇಗುಲಕ್ಕೆ ಹಾಗೂ ಹಿರಿಯರ ಭೇಟಿ, ಪಂಚಾಂಗ ಶ್ರವಣ.[]

ಅಂದಿನ ವಿಶೇಷ ತಿನಿಸು

[ಬದಲಾಯಿಸಿ]
  • ಒಬ್ಬಟ್ಟು ಅಥವಾ ಹೋಳಿಗೆ. ತೆಂಗಿನಕಾಯಿ ಹೂರಣದಲ್ಲಿ ಮಾಡಿದ ಹೋಳಿಗೆ ಬಹಳ ದಿನ ಇರದೇ ಕೆಡುವುದೆಂದು ಕಡಲೆ ಅಥವಾ ತೊಗರೀ ಬೇಳೆಯ ಹೂರಣದಲ್ಲಿ ಮಾಡುವರು. *ಇದನ್ನೇ ಮರಾಠಿಯಲ್ಲಿ ಪೂರಣ ಪೋಳಿ ಎಂದು ಕರೆವರು. ಸಂಜೆಯ ವೇಳೆಯಲ್ಲಿ ಗುರು ಹಿರಿಯರ ಮನೆಗಳಿಗೆ ಹೋಗಿ ಅವರಿಗೆ ಕಾಲುಮುಟ್ಟಿ ನಮಸ್ಕರಿಸಿ ಅವರ ಆಶೀರ್ವಾದ ಪಡೆವರು.
  • ಮನೆಯ ಹೆಂಗಸರು ಹೊಸದಾಗಿ ಬರುವ ಮಾವಿನಕಾಯಿಯಿಂದ ಉಪ್ಪಿನಕಾಯಿಯನ್ನು ಮಾಡುವರು.

ಬೇವು-ಬೆಲ್ಲ

[ಬದಲಾಯಿಸಿ]

ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು. ತಿಂದ ಮೇಲೆ ಬೆಲ್ಲವು ಹೊಟ್ಟೆಯೊಳಗೆ ಉರಿಯ ಅಥವಾ ಶಾಖವನ್ನು ಉಂಟು ಮಾಡಿದರೆ ಬೇವು ಆ ಉರಿಯ ಶಮನಕಾರಿ. ಬೇವು - ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಹೇಳುವ ಒಂದು ಶ್ಲೋಕ ಹೀಗಿದೆ:

  • ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ|
  • ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ|| - ಅದರರ್ಥ ಹೀಗಿದೆ - ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ.*[]

ಯುಗಾದಿ ಕವಿತೆ

[ಬದಲಾಯಿಸಿ]

"ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ
ಹೊಂಗೆ ಹೂವ ತೊಂಗಲಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಿ ಬರುತ್ತಿದೆ
ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವ ಕಳೆಯ ತರುತಿದೆ
ವರುಷಕೊಂದು ಹೊಸತು ಜನ್ಮ ವರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ
ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೆ ಏತಕೋ
ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ"||ಯುಗ ಯುಗಾದಿ ಕಳೆದರು||[]

ಪ್ರತಿ ಜೀವಕ (Antibiotic)


ನೂರು ವರುಷ ಧೀರ್ಘ ಆಯುಷ್ಯ

ಸದೃಢ ದೇಹ ಮನಸಿನ ಆರೋಗ್ಯ

ಸ್ವಾಸ್ಥ್ಯ ಸಂಪತ್ತಿನ ಪ್ರಾಪ್ತಿಗಾಗಿಯೂ

ಸಕಲ ಅರಿಷ್ಟ ನಿವಾರಣೆಗಾಗಿಯೂ

ಪ್ರತಿದಿನ ಬೇವು ಬೆಲ್ಲ ಸೇವನೆ ಮಾಡಿ


ಸೌಂದರ್ಯ ವರ್ಧಕವೂ ಹೌದು

ಚರ್ಮ ವ್ಯಾಧಿ ನಿವಾರಕವೂ ಹೌದು

ರೋಗ ನಿರೋಧಕ ಶಕ್ತಿ ಪ್ರತೀಕವು

ಪ್ರಭಲ ಬ್ಯಾಕ್ಟಿರಿಯ ಪ್ರತಿ ಜೀವಕವು

ಔಷಧೀಯ ಗುಣವುಳ್ಳ ಈ ಕಹಿ ಬೇವು


ನೈಸರ್ಗಿಕ ಮಧುಮೇಹ ನಿಯಂತ್ರಕ

ವಿಷದಂತ ಬಿಳಿ ಸಕ್ಕರೆ ಪರ್ಯಾಯಕ

ಖನಿಜ ಪೋಷಕಾಂಶಗಳ ಆಗರವಂತೆ

ಶ್ವಾಸಕೋಶ ಕರುಳ ಸ್ವಚ್ಚತೆ ಕಾರ್ಯವಂತೆ

ಬೆಲ್ಲ ಸೇವನೆಯಿಂದ ಇವೆಲ್ಲವೂ ಲಭ್ಯವಂತೆ


ವೈಜಾನಿಕ ಹಿನ್ನೆಲೆಯುಳ್ಳ ಆಚರಣೆ

ನಮ್ಮ ಹಿಂದೂ ಸಂಸ್ಕೃತಿಯ ಪ್ರತೀಕ

ದೀಪವನು ನಂದಿಸಿ ಕೇಕು ಕತ್ತರಿಸಿ

ಕುಡಿದು ತಿಂದು ಮಜಾ ಮಾಡುವ

ಪಾಶ್ಚತ್ಯರ ಅನುಸರಣೆ ಅಂತ್ಯವಾಗಲಿ


ಕರಗಿ ಹೋಗಲಿ ಈ ರೋಗ ರುಜಿನ

ಚಿಗುರಿ ಹಸನಾಗಲಿ ಎಲ್ಲರ ಜೀವನ

ಹೊಸ ವರ್ಷದ ಆದಿ ಇಲ್ಲಿಂದ ಸಾಗಲಿ

ಸಹ ಬಾಳ್ವೆಗೆ ಯುಗಾದಿ ನಾಂದಿಯಾಗಲಿ

ನವ ವರುಷ ಬದುಕಿಗೆ ಹರುಷವನ್ನು ತರಲಿ


ವಿನೋದ್ ವಾಲ್ಮೀಕಿ ಸೊರಬ.

ಉಲ್ಲೇಖಗಳು

[ಬದಲಾಯಿಸಿ]
  1. "2020 Chaitra Navratri, Vasanta Navratri Calendar for New Delhi, NCT, India". Drikpanchang: Hindu Calendar for the World. Retrieved 16 March 2020.
  2. [Maithily Jagannathan (2005). South Indian Hindu Festivals and Traditions. Abhinav Publications. pp. 77–78. ISBN 978-81-7017-415-8.]
  3. [Jeaneane D. Fowler (1997). Hinduism: Beliefs and Practices. Sussex Academic Press. pp. 72–73.]
  4. "ಯುಗಾದಿ ಪರ್ವದಲ್ಲಿ 'ಪಂಚಾಂಗ ಶ್ರವಣ';ಉಮಾ ಅನಂತ್‌;28 Mar, 2017". Archived from the original on 2017-03-27. Retrieved 2017-03-28.
  5. ದ.ರಾ.ಬೇಂದ್ರೆಯವರ ನಾದಲೀಲೆ;

6.ಯುಗಾದಿ ಉಲ್ಲೇಖಗಳು ಮತ್ತು ಶುಭಾಶಯಗಳು.

"https://kn.wikipedia.org/w/index.php?title=ಯುಗಾದಿ&oldid=1258272" ಇಂದ ಪಡೆಯಲ್ಪಟ್ಟಿದೆ