ಸಿರಿಭೂವಲಯಸಾಗರರತ್ನಮಂಜೂಷ
ಗೋಚರ
ಸಿರಿಭೂವಲಯವೆಂದರೆ, ಸಂಪದ್ಭರಿತವಾದ ಭೂ ಪ್ರದೇಶವೆಂದರ್ಥ. ಇದು ಕನ್ನಡದ ಒಂದು ಪ್ರಾಚೀನ ಕಾವ್ಯದ ಹೆಸರೂ ಹೌದು! ‘ಸರ್ವಭಾಷಾಮಯೀಭಾಷಾ ಸಿರಿಭೂವಲಯ’ ಎಂಬುದು ಈ ಗ್ರಂಥದ ಪೂರ್ಣಹೆಸರು. ಸಿರಿಭೂವಲಯವು ಜಗತ್ತಿನ ಮೊಟ್ಟ ಮೊದಲನೇ ವಿಶ್ವಕೋಶವಾಗಿದೆ. ಪ್ರಂಚದಲ್ಲಿ ಇಂದಿಗೂ ಉಳಿದುಬಂದಿರುವ ಏಕೈಕ ಕನ್ನಡ ಪ್ರಾಚೀನ ಅಂಕಕಾವ್ಯವಾಗಿದೆ. ಈ ಅಚ್ಚರಿಯ ಕಾವ್ಯವನ್ನು ರಚಿಸಿದವನು ಯಾಪನೀಯವೆಂಬ ದಿಗಂಬರ ಜೈನಸಂಪ್ರದಾಯಕ್ಕೆ ಸೇರಿದ ಕುಮುದೇಂದುಮುನಿ.
ಕವಿ ಪರಿಚಯ
[ಬದಲಾಯಿಸಿ]- ಕರ್ನಾಟಕದ ಗಿರಿಧಾಮವಾಗಿ ಪ್ರಖ್ಯಾತವಾದ ಚಿಕ್ಕಬಳ್ಳಾಪುರ ಜಿಲ್ಲೆಯ ಸಮೀಪದ ನಂದಿಬೆಟ್ಟದ ತಪ್ಪಲಿನಲ್ಲಿರುವ ‘ಯಲವಳ್ಳಿ’ ಎಂಬುದು ಕುಮುದೇಂದುವಿನ ವಾಸಸ್ಥಳ. ಕ್ರಿ.ಶ. 800ರ ಸುಮಾರಿನಲ್ಲಿ ಈ ಸಿರಿಭೂವಲಯ ಗ್ರಂಥವು ರಚನೆಯಾಗಿದೆ. ಕುಮುದೇಂದುಮುನಿಯು ‘ಯಲವಭೂರಿಸಿ’ ಎಂದು ಪ್ರಖ್ಯಾತನಾಗಿದ್ದವನು.
- ಜಗತ್ತಿನ ಅತ್ಯಂತ ಅಚ್ಚರಿಯ ಸಂಗತಿಯೆಂಬಂತೆ ತಾನು ರಚಿಸಿದ ಕನ್ನಡ ಅಂಕಕಾವ್ಯದ ಹೆಸರು, ತನ್ನ ಚಿರಿಪರಿಚಿತ ಹೆಸರು, ತನ್ನ ವಾಸಸ್ಥಳ ಈ ಮೂರು ಮಹತ್ವದ ಸಂಗತಿಗಳನ್ನು ಒಂದೇ ಶಬ್ದದಲ್ಲಿ ಸೂಚಿಸುವಂತೆ ಈ ವಿಶ್ವಕೋಶಕ್ಕೆ ‘ಸಿರಿಭೂವಲಯ’ ಎಂದು ಹೆಸರಿಡಲಾಗಿದೆ! ‘ಸಿರಿಭೂವಲಯ’ ಎದು ಗ್ರಂಥದ ಹೆಸರು. ಇದನ್ನು ಹಿಂದುಮುಂದಾಗಿ (ಬಲದಿಂದ ಎಡಕ್ಕೆ) ಓದಿದರೆ; ಬರುವ ‘ಯಲವಭೂರಿಸಿ’ ಎಂಬುದು ಕವಿಯ ಹೆಸರು. ‘ಯಲವ’ (ಯಲವಳ್ಳಿ) ಎಂಬುದು ಕವಿಯ ವಾಸಸ್ಥಳ!
- ಜೈನಸಂಪ್ರದಾಯದಲ್ಲಿ ಪ್ರಸಿದ್ಧರಾದ ವೀರಸೇನಾಚಾರ್ಯ ಹಾಗೂ ಜಿನಸೇನಾಚಾರ್ಯರು ಕುಮುದೇಂದುವಿನ ಗುರುಪರಂಪರೆಯವರು.ತಲಕಾಡಿನ ಗಂಗರಸ ಸೈಗೊಟ್ಟ ಸಿವಮಾರ ಹಾಗೂ ರಾಷ್ಟ್ರಕೂಟ ಅಮೋಘವರ್ಷನಿಗೆ ಗುರುವಾಗಿದ್ದವನು ಕುಮು ದೇಂದುಮುನಿ. ಸ್ವತಃ ಕವಿಯೇ ತನ್ನ ಕಾವ್ಯದಲ್ಲಿ ಖಚಿತವಾಗಿ ಸೂಚಿಸಿರುವ ಮಾಹಿತಿಗಳು ಇವು. ಜಗತ್ತಿನ 718 ಭಾಷೆಗಳಿಗೆ ಸೇರಿದ; 363 ಮತ ಸಿದ್ಧಾಂತಗಳ ಸಮನ್ವಯ;
- ಜ್ಞಾನ-ವಿಜ್ಞಾನಗಳಿಗೆ ಸಂಬಂಧಿಸಿದಂತೆ ಜಗತ್ತಿನಲ್ಲಿರುವ ಎಲ್ಲ ಶಾಸ್ತ್ರಗಳ ಮಾಹಿತಿಗಳ ಸಾರವೂ ನೂರುಸಾವಿರಲಕ್ಷಕೋಟಿ ಶ್ಲೋಕಗಳ ವ್ಯಾಪ್ತಿಯಲ್ಲಿ ಇಲ್ಲಿ ಅಡಕವಾಗಿದೆ ಎಂಬುದು ಕವಿಯ ಘೋಷಣೆ! ಈ ಅಚ್ಚರಿಯ ಗ್ರಂಥದ ಸ್ವಲ್ಪಭಾಗವನ್ನು ರಾಷ್ಟ್ರೀಯ ಪ್ರಾಚ್ಯಪತ್ರಾಗಾರದಲ್ಲಿ ಮೈಕ್ರೋಫಿಲಂ ರೂಪದಲ್ಲಿ ಸಂರಕ್ಷಿಸುವ ಏರ್ಪಾಟು ಮಾಡಿದವರು ಭಾರತದ ಪ್ರಥಮ ರಾಷ್ಟ್ರಪತಿ ಡಾ| ರಾಜೇಂದ್ರಪ್ರಸಾದರು. ಹೀಗಿದ್ದೂ, ಇಂಥದೊಂದು ಪ್ರಾಚೀನ ಕನ್ನಡ ಅಂಕಕಾವ್ಯ ಇರುವುದೆಂಬ ವಿಚಾರವೇ ಒಂದು ಕಲ್ಪನೆ ಎಂಬುದು ಇಂದಿಗೂ ಕೆಲವು ವಿದ್ವಾಂಸರ ಅನಿಸಿಕೆಯಾಗಿದೆ!
ಗ್ರಂಥ ಪರಿಚಯ
[ಬದಲಾಯಿಸಿ]- ಆದಿತೀರ್ಥಂಕರ ಋಷಭದೇವನಿಂದಾರಂಭಿಸಿ, 24 ಜನ ತೀರ್ಥಂಕರರಿಂದ ಪ್ರವಹಿಸಿದ ದಿವ್ಯಧ್ವನಿಯ ಸಾರವು, ಪ್ರಭಾವಸೇನ ಹಾಗೂ ಭೂತಬಲಿಯೆಂಬ ಪ್ರಾಚೀನ ವಿದ್ವಾಂಸರ ಮೂಲಕ ತನ್ನ ವರೆವಿಗೂ ಹರಿದುಬಂದಿರುವ ಖಚಿತವಾದ ಹಾದಿಯ ಮಾಹಿತಿಯನ್ನು ಕುಮುದೇಂದುಮುನಿಯು ಸ್ಪಷ್ಟವಾಗಿ ನಿರೂಪಿಸಿದ್ದಾನೆ. ತಾನು ನವಮಾಂಕ ಕ್ರಮದಲ್ಲಿ ರೂಪಿಸಿರುವ ಅಂಕಭೂವಲಯದೊಂದಿಗೆ; ಸುವಿಶಾಲವಾದ ತಾಳೆಯೋಲೆಯಲ್ಲಿ ಅಕ್ಷರಭೂವಲಯವೂ ಪ್ರಚಲಿತವಿದ್ದ ಮಾಹಿತಿಯನ್ನು ಕುಮುದೇಂದುಮುನಿಯು ಸೂಚಿಸಿರುವುಂಟು.
- ಇದುವರೆವಿಗೂ ಅಗಿಹೋದ ಕನ್ನಡ ಅಥವಾ ಸಂಸ್ಕøತಭಾಷೆಯ ಯಾವೊಬ್ಬ ಕವಿಚರಿತ್ರೆಕಾರನಾಗಲೀ; ಸಾಹಿತ್ಯಚರಿತ್ರೆಕಾರನಾಗಲೀ ಕುಮುದೇಂದುಮುನಿ ಹಾಗೂ ಅವನ ಸಿರಿಭೂವಲಯದ ವಿಚಾರವಾಗಿ ಯಾವ ಮಾಹಿತಿಯನ್ನೂ ಸೂಚಿಸಿಲ್ಲ ಎಂಬುದು ಗಮನಾರ್ಹವಾದ ಸಂಗತಿಯಾಗಿದೆ. ಕುಮುದೇಂದುವು ರಚಿಸಿದ ಅಂಕಭೂವಲಯವನ್ನು ಮುಂದೆ ಮಲ್ಲಿಕಬ್ಬೆಯೆಂಬ ಸಾಧ್ವಿಯು ಪ್ರತಿಪಿಲಿಮಾಡಿಸಿ; ತನ್ನ ಗುರು ಮಾಘಣನಂದಿಗೆ ಶಾಸ್ತ್ರದಾನ ಮಾಡಿದಳೆಂದೂ;
- ಆ ಪ್ರತಿಲಿಪಿಗಳ ಪೈಕಿ ಒಂದು ಪ್ರತಿಯು ಕಳೆದ ಶತಮಾನದ ಪ್ರಾರಂಭದವರೆವಿಗೂ ದೊಡ್ಡಬೆಲೆ ಎಂಬ ಗ್ರಾಮದಲ್ಲಿ ನೆಲೆಸಿದ್ದ ಧರಣೇಂದ್ರ ಪಂಡಿತರಲ್ಲಿ ವಂಶಪಾರಂಪರ್ಯವಾಗಿ ಉಳಿದುಬಂದಿತ್ತೆಂಬ ಖಚಿತ ಮಾಹಿತಿಯೂ ಇದೆ. ಆಸ್ಥಾನ ವಿದ್ವಾಂಸರಾಗಿದ್ದ ಧರಣೇಂದ್ರ ಪಂಡಿತರು ಶತಾವಧಾನಿಗಳೆಂದೂ; ಆಯುರ್ವೇದ ಪಂಡಿತರೆಂದೂ ಪ್ರಖ್ಯಾತರಾಗಿದ್ದವರು. ಅಂಕಿಗಳ ರೂಪದಲ್ಲೇ ಅವರು ಸಿರಿಭೂವಲಯವನ್ನು ಓದಬಲ್ಲವರಾಗಿದರೆಂಬ ಮಾಹಿತಿಯೂ ಪ್ರಚಲಿತವಿದೆ.
- ಈ ಕಾವ್ಯದ ಅಧ್ಯಯನದಿಂದ ಅವರು ಹಲವಾರು ಜನೋಪಯೋಗಿ ಕಾರ್ಯಗಳನ್ನು ಮಾಡಿ ಪ್ರಸಿದ್ಧಿಪಡೆದವರು; ಇದರ ಪರಿಣಾಮವಾಗಿ ಸಮಕಾಲೀನ ವಿದ್ವಾಂಸರ ಅಸೂಯೆಗೂ ಪಾತ್ರರಾಗಿದ್ದವರು! ಕ್ರಿ.ಶ.1913ರ ಸುಮಾರಿನಲ್ಲಿ ಧರಣೇಂದ್ರಪಂಡಿತರು ಕಾಲವಶರಾದನಂತರ ಈ ಅಚ್ಚರಿಯ ಅಂಕಕಾವ್ಯವು ಬೆಂಗಳೂರಿನಲ್ಲಿ ನೆಲೆಸಿದ್ದ ಆಯುರ್ವೇದ ಔಷಧಗಳ ಮಾರಾಟದ ಪ್ರತಿನಿಧಿಯಾಗಿದ್ದ ಯಲ್ಲಪ್ಪಶಾಸ್ತ್ರಿಯೆಂಬುವವರ ಸ್ವಾಧೀನಕ್ಕೆ ಸೇರಿತು.
- ಈ ಗ್ರಂಥವನ್ನು ಸಂಪಾದಿಸುವುದಕ್ಕಾಗಿಯೇ ಇವರು ಧರಣೇಂದ್ರಪಂಡಿತರ ವಂಶಜರೊಂದಿಗೆ ವಿವಾಹ ಸಂಬಂಧ ಬೆಳೆಸಿದರೆಂಬ ವಿಚಾರವಿದೆ. ಆದರೆ ಈ ಶಾಸ್ತ್ರಿಯವರಿಗೆ ಅಂಕಿಗಳ ರೂಪದಲ್ಲಿದ್ದ ಈ ಕಾವ್ಯದ ರಹಸ್ಯವನ್ನರಿಯಲು ಸಾಧ್ಯವಾಗಿರಲಿಲ್ಲ.
ಸಿರಿಭೂವಲಯ ಗ್ರಂಥದಲ್ಲಿ 16000 ಪುಟಗಳಿವೆ. ಈ ಪುಟಗಳನ್ನು ‘ಚಕ್ರ’ ಎಂದು ಕರೆಯಲಾಗುತ್ತದೆ.ಪ್ರತಿಯೊಂದು ಚಕ್ರದಲ್ಲೂ ಸುಮಾರು 6 ಅಂಗುಲ ಉದ್ದಗಲದ ಒಂದು ದೊಡ್ಡ ಚೌಕಾಕೃತಿ ಇರುತ್ತದೆ. - ಇದನ್ನು ಉದ್ದಸಾಲಿನಲ್ಲಿ 27 ಹಾಗೂ ಅಡ್ಡಸಾಲಿನಲ್ಲಿ 27 ಚಿಕ್ಕ ಚಿಕ್ಕ ಮನೆಗಳಿರುವಂತೆ ಒಟ್ಟು 729 ಮನೆಗಳಾಗಿ ವಿಭಾಗಿಸಲಾಗಿರುತ್ತದೆ. ಈ ಸಣ್ಣ ಚೌಕಗಳಲ್ಲಿ 1 ರಿಂದ 64ರ ವರೆಗಿನ ಕನ್ನಡ ಅಂಕಿಗಳನ್ನು ಸೂತ್ರಬದ್ಧವಾಗಿ ತುಂಬಲಾಗಿರುತ್ತದೆ.
ಸರ್ವಭಾಷಾಮಯೀಭಾಷಾ ಕನ್ನಡ ವರ್ಣಮಾಲೆಯಲ್ಲಿ ‘ಅ’ಕಾರದಿಂದ ‘ಹ’ಕಾರದವರೆವಿಗೆ 60 ಧ್ವನಿಸಂಕೇತಗಳು ಹಾಗೂ 4 ಯೋಗವಾಹಗಳಿರುತ್ತವೆ. - 64 ಅಂಕಿಗಳು ಈ 64 ಅಕ್ಷರಗಳನ್ನು ಪ್ರತಿನಿಧಿಸುತ್ತವೆ. ಚಕ್ರದಲ್ಲಿ ಅಂಕಿಗಳಿರುವ ಚೌಕದಲ್ಲಿ ಅಂಕಿಯು ಪ್ರತಿನಿಧಿಸುವ ಅಕ್ಷರವನ್ನು ಅಳವಡಿಸಿದಾಗ, ಅಕ್ಷರಚಕ್ರವು ಸಿದ್ಧವಾಗುತ್ತದೆ. ಈ ಅಕ್ಷರಚಕ್ರವನ್ನು ಸುಮಾರು 40 ಬೇರೆ ಬೇರೆ ಬಂಧಗಳಲ್ಲಿ ಓದಿದಾಗ, ಬೇರೆ ಬೇರೆ ಭಾಷೆಗಳಲ್ಲಿ ಮೂಲಸಾಹಿತ್ಯವು ದೊರೆಯುತ್ತದೆ. !
- ಈಗ ‘ಶ್ರೇಢಿ’ ಹಾಗೂ ‘ನವಮಾಂಕಶ್ರೇಢಿ’ ಬಂಧದಲ್ಲಿ ಮೂಲ ಕನ್ನಡ ಸಾಹಿತ್ಯವನ್ನು ಬಿಡಿಸಲಾಗಿದೆ. ಇವುಗಳ ಒಟ್ಟು ಸಂಖ್ಯೆ ಆರುಲಕ್ಷ! ಇದರಲ್ಲಿ ಅಶ್ವಗತಿ; ಸ್ತಂಬಕಾವ್ಯ; ಸರ್ಪಬಂಧ; ಜೋಡಿನಾಗರ ಇತ್ಯಾದಿ ಕ್ರಮಗಳಲ್ಲಿ ಅಂತರ್ಸಾಹಿತ್ಯವಾಗಿ, ಅಕ್ಷರಕ್ಕೆ ಲಕ್ಷಶ್ಲೋಕದಂತೆ ಬೇರೆ ಬೇರೆ ಭಾಷೆಗಳ ಸಾಹಿತ್ಯವು ಉಗಮವಾಗುತ್ತದೆ. ಈ ಕ್ರಮದಲ್ಲಿ ಜಗತ್ತಿನ ಸಾಹಿತ್ಯರಾಶಿಯೆಲ್ಲವೂ ‘ನೂರುಸಾವಿರಲಕ್ಷಕೋಟಿ’ ಶ್ಲೋಕಗಳ ವ್ಯಾಪ್ತಿಯಲ್ಲಿ ಸಿರಿಭೂವಲಯದಲ್ಲಿ ಅಡಗಿಕೊಂಡಿವೆ!
- ಗ್ರಂಥವನ್ನು 9 ಖಂಡಗಳಾಗಿ ವಿಂಗಡಿಸಲಾಗಿದೆ. ಪ್ರಥಮ ಖಂಡದಲ್ಲಿ 59 ಅಧ್ಯಾಯಗಳಿವೆ. ಪ್ರಥಮಖಂಡದ ಅಂಕಚಕ್ರಗಳು (1270) ಹಾಗೂ ಸಂಬಂಧಿಸಿದ ಮೂಲಸಾಹಿತ್ಯದ ನಕಲುಪ್ರತಿಯು ಮಾತ್ರ ದೆಹಲಿಯಲ್ಲಿ ಸಂರಕ್ಷಿತವಾಗಿದೆ. ಉಳಿದ ಅಂಕಚಕ್ರಗಳು ಏನಾದುವೆಂಬುದು ಖಚಿತವಾಗಿ ತಿಳಿಯದು.
- ಈಗ ಪ್ರಕಟವಾಗಿರುವಷ್ಟು ಮೂಲಸಾಹಿತ್ಯ ಹಾಗೂ ಅಂತರ್ಸಾಹಿತ್ಯದಲ್ಲೇ, ಅಂಕಗಣಿತ; ಆಕಾಶಗಮನ; ಆಯುರ್ವೇದ; ಭೌತಶಾಸ್ತ್ರ; ರಸಾಯನಶಾಸ್ತ್ರ; ಗಣಕಯಂತ್ರಕ್ರಮ; ನೃತ್ಯಶಾಸ್ತ್ರ; ಧರ್ಮಶಾಸ್ತ್ರ ಇತ್ಯಾದಿ ಜಗತ್ತಿನ ಸಕಲ ಜ್ಞಾನ-ವಿಜ್ಞಾನಗಳಿಗೆ ಸಂಬಂಧಿಸಿದ ಮಾಹಿತಿಗಳೂ ಲಭ್ಯವಾಗುತ್ತವೆ!
ಸಂರಕ್ಷಣೆ
[ಬದಲಾಯಿಸಿ]- ಅದಮ್ಯವಾದ ಕನ್ನಡಾಭಿಮನಿಯಾಗಿದ್ದ ಕರ್ಲಮಂಗಲಂ ಶ್ರೀಕಂಠಯ್ಯನೆಂಬ ಉತ್ಸಾಹೀ ಯುವ ವಿದ್ವಾಂಸರೊಬ್ಬರ ತೀವ್ರತರ ಶ್ರಮದಿಂದಾಗಿ, ಈ ರಹಸ್ಯಮಯವಾದ ಅಜ್ಞಾತ ಅಂಕಕಾವ್ಯವು 1950ರ ಸುಮಾರಿಗೆ ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ವ್ಯಾಪಕವಾಗಿ ಪ್ರಚಾರಕ್ಕೆ ಬರಲು ಅವಕಾಶ ವಾಯಿತು.ಅಂಕರೂಪದ ಸಿರಿಭೂವಲಯದ ರಹಸ್ಯವನ್ನು ಹೊರಗೆಡಹುವ ದಿಸೆಯಲ್ಲಿ ಕೆ. ಶ್ರೀಕಂಠಯ್ಯನವರು ದೇಶಾದ್ಯಂತ ಸಂಚರಿಸಿ; ಹಲವಾರು ಭಾಷೆಗಳನ್ನು ಕಲಿತು; ಮಹತ್ತರವಾದ ಪಾಂಡಿತ್ಯ ಗಳಿಸಿಕೊಂಡರು.
- ದೇಶಾದ್ಯಂತ ಪ್ರಸಿದ್ಧವಾದ ಅನೇಕ ಗ್ರಂಥಾಲಯಗಳನ್ನು ಸಂದರ್ಶಿಸಿ; ತಮ್ಮ ಪ್ರಯತ್ನದಲ್ಲಿ ಯಶಸ್ಸುಗಳಿಸಿದರು. ಬಹಳ ಕಠಿಣವಾದ ಈ ಸಾಹಸಕಾರ್ಯ ಸಾಧಿಸುವ ದಿಸೆಯಲ್ಲಿ, ಇವರಿಗೆ ಯಾವುದೋ ಮೂಲದಿಂದ ಅಕ್ಷರಭೂವಲಯದ ಪ್ರತಿಯು ದೊರೆತಿರುವುದು ಖಚಿತಸಂಗತಿ. ಈ ಮಾಹಿತಿಯನ್ನು ಗುಪ್ತವಾಗಿರಿಸಿದ ಈ ವಿದ್ವಾಂಸರು ಅಂಕಿಗಳ ರೂಪದ ಸಿರಿಭೂವಲಯವನ್ನು ಅಕ್ಷರರೂಪಕ್ಕೆ ಪರಿವರ್ತಿಸುವ ಕಾರ್ಯದಲ್ಲಿ ನಿರತರಾಗಿ, ಅದರಲ್ಲಿ ಯಶಸ್ಸು ಪಡೆದರೆಂದು ಊಹಿಸಿ, ನಿರ್ಧರಿಸಬಹುದಾಗಿದೆ.
ಸಿರಿಭೂವಲಯದ ರಚನಾಕ್ರಮ
[ಬದಲಾಯಿಸಿ]- ಕೆ. ಶ್ರೀಕಂಠಯ್ಯನವರ ತೀವ್ರ ಶ್ರಮದ ಫಲವಾಗಿ ಅಂಕರೂಪದ ಸಿರಿಭೂವಲಯದ ಅಕ್ಷರರೂಪಾಂತರ ಪ್ರಚಾರಕ್ಕೆ ಬರಲು ಅವಕಾಶವಾಗಿದೆ. 1950ರ ಸುಮಾರಿನಲ್ಲಿ ಇದೊಂದು ಅನೂಹ್ಯವಾದ ಸಂಶೋಧನೆ ಎನಿಸಿಕೊಂಡದ್ದು ಸಹಜ ಸಂಗತಿ. ಅಂದಿನ ಕನ್ನಡ ಸಾರಸ್ವತಲೋಕವು ಈ ನೂತನ ಸಂಶೋಧನೆಯನ್ನು ಮುಕ್ತಮನಸ್ಸಿನಿಂದ ಮಾನ್ಯಮಾಡಲೇಯಿಲ್ಲ! ಇದಕ್ಕೆ ಮೂಲಕಾರಣ:
- ಸಿರಿಭೂವಲಯದ ರಚನಾಕ್ರಮವು ವಿದ್ವಾಂಸರಿಗೆ ಸರಳವಾಗಿ ಅರ್ಥವಾಗುವ ಪೂರ್ಣಾಕ್ಷರ ಹಾಗೂ ಒತ್ತಕ್ಷರ ಕ್ರಮದಲ್ಲಿರದೇ, ಸ್ವರ ಹಾಗೂ ವ್ಯಂಜನಾಕ್ಷರಗಳು ಮೂಲರೂಪದಲ್ಲಿರುವುದು ಹಾಗೂ ಈ ಅಚ್ಚರಿಯ ಸಂಶೋಧನೆ ಮಾಡಿದ ಕೆ. ಶ್ರೀಕಂಠಯ್ಯನವರ ಶಿಕ್ಷಣಾರ್ಹತೆಯು ಕೇವಲ ಪ್ರಾಥಮಿಕ 3ನೇ ತರಗತಿಯವರೆವಿಗೆ ಇದ್ದುದು!!
- ವೇದಮಂತ್ರಗಳಿರುವುದು ದೇವನಾಗರೀ ಲಿಪಿಯಲ್ಲಿಲ್ಲ; ಅದಕ್ಕೆ ಅದರದೇ ಆದ ಒಂದು ಗುಪ್ತಲಿಪಿಯ ಕ್ರಮವಿದೆ ಎಂದು ಪ್ರತಿಪಾದಿಸುತ್ತಿದ್ದ ಮಹರ್ಷಿ ದೇವರಾತರೆಂಬುವವರಲ್ಲಿ ಈ ಸಿರಿಭೂವಲಯದ ಅಂಕಾಕ್ಷರಗಳ ಸಂಬಂಧ ಕುರಿತ ಸಂಶೋಧನೆಯು ಆಸಕ್ತಿಯನ್ನುಂಟುಮಾಡಿತು. ಕೆ. ಶ್ರೀಕಂಠಯ್ಯನವರ ಸಂಪರ್ಕಬೆಳೆಸಿ, ಈ ಅಚ್ಚರಿಯ ಕಾವ್ಯದ ವಿಚಾರವನ್ನು ವಿವರವಾಗಿ ತಿಳಿದರು.
- ಭಾರತದ ಪ್ರಥಮ ರಾಷ್ಟ್ರಪತಿ ಡಾ| ರಾಜೇಂದ್ರ ಪ್ರಸಾದರು ದೇವರಾತರ ಆಪ್ತವಲಯದವರು. ಈ ಕಾರಣದಿಂದಾಗಿ, ಸಿರಿಭೂವಲಯಕ್ಕೆ ಸಂಬಂಧಿಸಿದ ಮಾಹಿತಿಗಳು ಕೇಂದ್ರ ಸರ್ಕಾರದಿಂದ ಮೈಕ್ರೋಫಿಲಂ ರೂಪದಲ್ಲಿ ಸುಲಭವಾಗಿ ಸಂರಕ್ಷಣೆಯಾಯಿತು. ಈ ರೀತಿಯಲ್ಲಿ ಕೆ. ಶ್ರೀಕಂಠಯ್ಯನವರು ಸಿರಿಭೂವಲಯದ ಕಾರಣದಿಂದಾಗಿ ಹೆಚ್ಚಿನ ಪ್ರಚಾರ; ಪ್ರಸಿದ್ಧಿ ಪಡೆಯುವುದನ್ನು ಸಹಿಸದ ಸಮಕಾಲೀನ ವಿದ್ವಾಂಸರು,
- ಕವಿಯ ಕಾಲ; ಸಾಹಿತ್ಯದಲ್ಲಿ ಬಳಸಿರುವ ಛಂದಸ್ಸಿನ ಕಾಲ; ಬಳಸಿರುವ ಭಾಷೆಯ ಸ್ವರೂಪ ಇತ್ಯಾದಿಗಳ ನೆಪದಲ್ಲಿ ಸಿರಿಭೂವಲಯವು 9ನೇ ಶತಮಾದಷ್ಟು ಪ್ರಾಚೀನ ಕಾವ್ಯವೇ ಅಲ್ಲ ಎಂದು ತಕರಾರು ತೆಗೆದರು. ಇದರೊಂದಿಗೆ ಸಿರಿಭೂವಲಯದ ಮೂಲ ಅಂಕಚಕ್ರಗಳ ವಾರಸು ದಾರರಾಗಿದ್ದ ಯಲ್ಲಪ್ಪಶಾಸ್ತ್ರಿಯವರು ತಾವೇ ಈ ಅಂಕಾಕ್ಷರಗಳ ಸಂಶೋಧನೆಮಾಡಿದ್ದು ಎಂದು ಸಭೆ ಸಮಾರಂಭಗಳಲ್ಲಿ ಪತ್ರಿಕಾ ಹೇಳಿಕೆಗಳ ಮೂಲಕ ಪ್ರಚಾರ ಪ್ರಾರಂಭಿಸಿದರು. ಇದರ ಪರಿಣಾಮವಾಗಿ ಈ ಸಂಶೋಧನೆಯನ್ನು ಮುದ್ರಿಸುವ ಕಾರ್ಯ ವಿಳಂಬವಾಯಿತು.
- ಈ ಎಲ್ಲ ಗೊಂದಲಗಳ ನಡುವೆಯೂ ಕನ್ನಡ ಬೆರಳಚ್ಚುಯಂತ್ರಶಿಲ್ಪಿ ಕೆ. ಅನಂತಸುಬ್ಬರಾಯರ ರಾಯಭಾರದಿಂದಾಗಿ, ಸಿರಿಭೂವಲಯದ ಅಕ್ಷರ ಅವತರಣಿಕೆಯ ಮೊದಲನೇ ಭಾಗವು 1952ರಲ್ಲಿ, ಎರಡನೇ ಭಾಗವು 1955ರಲ್ಲಿ ಪ್ರಕಟವಾದುವು. ಇವುಗಳ ಒಟ್ಟುವ್ಯಾಪ್ತಿ ಸುಮಾರು 200 ಪುಟಗಳು. ಇವುಗಳಲ್ಲಿ ಯಲ್ಲಪ್ಪಶಾಸ್ತ್ರಿಯವರೇ ಸಂಶೋಧಕರೆಂಬ ಮಾಹಿತಿ ನಮೂದಾಯಿತು! ಮುಂದೆ ಪ್ರಭಾವೀ ರಾಜಕಾರಣಿಗಳ ನೆರವಿನೊಂದಿಗೆ,ರಾಷ್ಟ್ರೀಯ ಪ್ರಾಚ್ಯಪತ್ರಾಗಾರದಲ್ಲಿ ಸಂರಕ್ಷಿತವಾಗಿದ್ದ ಸಾಹಿತ್ಯದಲ್ಲೂ ಈ ಮಹನೀಯರು ಹಸ್ತಕ್ಷೇಪ ನಡೆಸಲು ಅವಕಾಶವಾಯಿತು.
- ಸಿರಿಭೂವಲಯದ ವಿಚಾರವಾಗಿ ವಿದ್ವಾಂಸರ ವಲಯದಲ್ಲಿ ತಲೆದೋರಿದ ಸಂಶಯಗಳ ನಿವಾರಣೆಗಾಗಿ ಮೈಸೂರು ವಿಶ್ವವಿದ್ಯಾಲಯದ ಪ್ರಸಿದ್ಧ ಇತಿಹಾಸ ಪ್ರಾಧ್ಯಾಪಕರಾಗಿದ್ದ ಡಾ| ಎಸ್. ಶ್ರೀಕಂಠಶಾಸ್ತ್ರಿಯವರ ಕೂಲಂಕಶವಾಗಿ ಪರಿಶೀಲನೆ ನಡೆಸಿ, ಯಲ್ಲಪ್ಪಶಾಸ್ತ್ರಿಯವರ ವಶದಲ್ಲಿದ್ದ ಅಂಕಚಕ್ರಗಳ ಅಂದಿನ ಸ್ಥಿತಿಗತಿಯನ್ನೂ; ಕೆ. ಶ್ರೀಕಂಠಯ್ಯನವರ ಸಂಶೋಧನೆಯ ಮಾಹಿತಿಗಳು ಮೂಲ ಗ್ರಂಥದ ಖಚಿತ ಮಾಹಿತಿಗಳು ಎಂಬ ಅತಿ ಪ್ರಮುಖವಾದ ಖಚಿತಮಾಹಿತಿಯನ್ನೂ ಸೂಚಿಸಿದರು. ಕಾಲಕ್ರಮದಲ್ಲಿ ಈ ವಿದ್ವಾಂಸರ ಜೀವನಾವಧಿಯು ಮುಕ್ತಾಯವಾಯಿತು.
ಸಿರಿಭೂವಲಯದ ರಚನೆಯ ರಹಸ್ಯ
[ಬದಲಾಯಿಸಿ]- ಜಗತ್ತಿನ ಅಮೂಲ್ಯವಾದ ಸಾಹಿತ್ಯಸಾಗರವನ್ನೆಲ್ಲ ಕನ್ನಡ ಅಂಕಿಗಳರೂಪದಲ್ಲಿ ಗುಪ್ತವಾಗಿ ಸಂರಕ್ಷಿಸುವ ಕಾರ್ಯವಾದ ಈ ಸಿರಿಭೂವಲಯದ ರಚನೆಯ ರಹಸ್ಯಕ್ಕಿಂತಲೂ ಮಿಗಿಲಾದ ನಿಗೂಢಗಳನ್ನೊಳಗೊಂಡ ಹಲವಾರು ಘಟನೆಗಳೊಂದಿಗೆ, 1964ರಿಂದ ಈ ಸಿರಿಭೂವಲಯದ ವಿಚಾರವು ಕತ್ತಲಕೋಣೆಯನ್ನು ಸೇರಿ ಹೆಚ್ಚು ಪ್ರಚಾರವಿಲ್ಲದೇ ಮೂಲೆಗುಂಪಾಗಿತ್ತು.
- ಈ ಅಚ್ಚರಿಯ ಗ್ರಂಥದ ಸಂಶೋಧಕರು ಹಾಗೂ ಸಂರಕ್ಷಕರೊಂದಿಗೆ ಆಕಸ್ಮಿಕವಾಗಿ ಪರಿಚಯಹೊಂದಿದ ಕೆ. ಅನಂತಸುಬ್ಬರಾಯರು, ಈ ಗ್ರಂಥದ ಅಂಕಚಕ್ರಗಳ ಪುನರ್‍ನಿರ್ಮಾಣದ ಕಾರ್ಯದಲ್ಲಿ ನೇರವಾಗಿ ಭಾಗವಹಿಸಿದವರು. ತಮ್ಮ ಜೀವಮಾನಪೂರ್ತ ಈ ಮಹೋನ್ನತವಾದ ಗ್ರಂಥದ ಪ್ರಚಾರಕಾರ್ಯ ನಡೆಸಿದವರು. ತಮ್ಮ ಅಭಿಮಾನಿಯಾಗಿದ್ದ ಹಾಸನದ ಸುಧಾರ್ಥಿಯನ್ನು ಈ ಸಿರಿಭೂವಲಯಗ್ರಂಥದ ಪರಿಚಯಕಾರ್ಯ ನಿರ್ವಹಿಸುವುದಕ್ಕಾಗಿಯೇ ವಿಶೇಷವಾಗಿ ಸಿದ್ಧಗೊಳಿಸಿ, ತಮ್ಮ ಜೀವಿತದಲ್ಲಿ ಸಾರ್ಥಕ್ಯ ಪಡೆದವರು ಕೆ. ಅನಂತಸುಬ್ಬರಾಯರು.
- ಈ ಮಹನೀಯರಿಂದ ಸಿರಿಭೂವಲಯದ ಆಳವಾದ ಸೇವೆಯ ದೀಕ್ಷೆ ಪಡೆದು; ಗ್ರಂಥದ ಅಧ್ಯಯನಕ್ಕೆ ಸಂಬಂಧಿಸಿದ ಸೂಕ್ಷ್ಮಗಳನ್ನೂ ಮನನ ಮಾಡಿಕೊಂಡ ಸುಧಾರ್ಥಿಯು, ಸುಮಾರು 27 ವರ್ಷಗಳಕಾಲ ಅಧ್ಯಯನ ನಡೆಸಿದ್ದಂತೆಯೇ, ಬೆಂಗಳೂರಿನ ಪುಸ್ತಕಶಕ್ತಿ ಪ್ರಕಾಶನದವರು ಸಿರಿಭೂವಲಯದ ಗ್ರಂಥ ಸಂರಕ್ಷರಾಗಿದ್ದ ಯಲ್ಲಪ್ಪಶಾಸ್ತ್ರಿಯವರ ಪುತ್ರ ಎಂ.ವೈ. ಧರ್ಮಪಾಲ್ ಅವರ ಸಹಯೋಗದೊಂದಿಗೆ ಸಿರಿಭೂವಲಯದ 1952ರ ಆವೃತ್ತಿಯನ್ನು ಪುನರ್ಮುದ್ರಿಸುವ ಕಾರ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಚಾಲನೆ ನೀಡಿರುವ ಮಾಹಿತಿಯು ಪ್ರಚಾರವಾಯಿತು. *ಸಿರಿಭೂವಲಯದ ಸಂಶೋಧನೆಯ ವಿಚಾರದಲ್ಲಿ ಇಲ್ಲದ ಇತಿಹಾಸ ನಿರ್ಮಿಸುವ ದಿಸೆಯಲ್ಲಿ ಯಲ್ಲಪ್ಪಶಾಸ್ತ್ರಿಯವರು ಪ್ರಾರಂಭಿಸಿದ್ದ ಕಾರ್ಯವನ್ನು ಮುಂದುವರೆಸಿ; ಸಾರ್ಥಕ ಪಡಿಸುವುದು ಅವರ ಪುತ್ರ ಧರ್ಮಪಾಲರ ಮೂಲಗುರಿಯಾಗಿತ್ತು. ನಾಡಿನ ಸುಪ್ರಸಿದ್ಧ ವಿದ್ವಾಂಸರಾದ ಡಾ| ಟಿ.ವಿ. ವೆಂಕಟಾಚಲಶಾಸ್ತ್ರಿಯವರ ನಾಯಕತ್ವದಲ್ಲಿ ಹಲವಾರು ವಿದ್ವಾಂಸರ ತಂಡವು ಸೂಕ್ತ ಪರಿಷ್ಕರಣೆಯ ಹೆಸರಿನಲ್ಲಿ ಈ ಪುನರ್ಮುದ್ರಣ ಕಾರ್ಯದಲ್ಲಿ ತಲ್ಲೀನವಾಯಿತು.
- ನಾಡಿನ ಪ್ರಸಿದ್ಧ ವಿದ್ವಾಂಸರು; ರಾಜಕಾರಣಿಗಳು ಈ ಪ್ರಯತ್ನಕ್ಕೆ ಬೆಂಬಲವಾಗಿ ನಿಂತರು. ಸಮೂಹ ಮಾಧ್ಯಮಗಳಲ್ಲಿ ಸಾಕಷ್ಟು ವ್ಯಾಪಕವಾಗಿ ಪ್ರಚಾರ ನಡೆಸಲಾಯಿತು.
ಕನ್ನಡದ ಪ್ರಾಚೀನ ಕೃತಿಯೊಂದರ ಸಂಶೋಧನೆಯ ಪುನರುದ್ಧಾರದ ಹೆಸರಿನಲ್ಲಿ ಅರ್ಥಸಂಪಾದನೆಯ ಮೂಲ ಉದ್ದೇಶದಿಂದ ಆರಂಭವಾದ ಈ ಮರುಮುದ್ರಣದ ಕಾರ್ಯವು ಸಾಕಷ್ಟು ಯಶಸ್ವಿಯಾಗಿ ಮುನ್ನಡೆದು; ಸಿರಿಭೂವಲಯ ಕಾವ್ಯ ಹಾಗೂ ಕವಿಯನ್ನು ಕುರಿತಂತೆ ಕೆಲವೊಂದು ಉಪಯುಕ್ತ ಮಾಹಿತಿಗಳನ್ನು ಸಂಗ್ರಹಿಸುವುದರೊಂದಿಗೆ; ಮುಂದಿನ ಸಂಶೋಧಕರಿಗೆ ಇನ್ನಿಲ್ಲದಷ್ಟು ಗೊಂದಲಗಳನ್ನು ನಿರ್ಮಿಸುವಲ್ಲೂ ಯಶಸ್ವಿಯಾಯಿತು! - ಈ ಕಾರ್ಯದ ಯಶಸ್ಸು ಮುನ್ನಡೆದಿರುವಂತೆಯೇ, ಹಾಸನದ ಸುಧಾರ್ಥಿಯು ರೂಪಿಸಿದ ‘ಸರ್ವಭಾಷಾಮಯೀಭಾಷಾ ಸಿರಿಭೂವಲಯಸಾರ’ ಎಂಬ ಪರಿಚಯ ಗ್ರಂಥವು 2010ರಲ್ಲಿ ಪ್ರಕಟವಾಯಿತು. ಕುಮುದೇಂದುಮುನಿಯ ಸಿರಿಭೂವಲಯದ ಸಮಗ್ರ ಇತಿಹಾಸವನ್ನು ಸರಳವಾಗಿ ಪರಿಚಯಿಸುವುದರೊಂದಿಗೆ, 1952 ರಿಂದ ಈಚೆಗೆ ಈ ಅಚ್ಚರಿಯ ಗ್ರಂಥದ ವಿಚಾರವಾಗಿ ನಡೆದಿರುವ; ನಡೆಯಿತೆಂದು ನಿರೂಪಿಸಲಾಗಿರುವ; ನಡೆಯಬೇಕಾಗಿದ್ದ ಚಟುವಟಿಕೆಗಳ ಖಚಿತವಾದ ಮಾಹಿತಿಗಳನ್ನು ಈ ಪರಿಚಯ ಗ್ರಂಥದಲ್ಲಿ ನಿರೂಪಿಸಲಾಯಿತು.
- ಇದಕ್ಕೆ ಸಂಬಂಧಿಸಿದ ವಿವರಗಳನ್ನು ಓದುಗರು ‘ಸರ್ವಭಾಷಾಮಯೀಭಾಷಾ ಸಿರಿಭೂವಲಯಸಾರ’ ದಲ್ಲಿಯೂ; ‘ಸಿರಿಭೂವಲಯಸಾಗರರತ್ನಮಂಜೂಷ’ ದಲ್ಲಿಯೂ ನೋಡಬಹುದಾಗಿದೆ. ಅಲ್ಲದೇ; ‘ಸಿರಿಭೂವಲಯದ ಒಂದು ಮಿಂಚುನೋಟ’ ‘ಸಿರಿಭೂವಲಯಾಂತರ್ಗತ ಭಗವದ್ಗೀತಾ’ ‘ಸಿರಿಭೂವಲಯದ ಒಳನೋಟ’ ಎಂಬ ಕಿರುಹೊತ್ತಿಗೆಗಳೂ ಪ್ರಕಟವಾಗಿವೆ. ಇವುಗಳ ಸಂಕ್ಷಿಪ್ತ ಹಿಂದಿ ಭಾವಾನುವಾದವು ‘ಸಿರಿಭೂವಲಯಕಿ ಏಕ್ ಝಾಂಕಿ’ ಎಂದು ಪ್ರಕಟವಾಗಿದೆ.
- ಈ ಮಾಹಿತಿಗಳೊಂದಿಗೆ, ಸಿರಿಭೂವಲಯದ 34 ರಿಂದ 50ನೇ ಅಧ್ಯಾಯದ ವರೆಗಿನ ಮೂಲಸಾಹಿತ್ಯವನ್ನೂ ಸೇರಿಸಿ; ಅದರ ಇಂಗ್ಲಿಷ್ ಭಾವಾನುವಾದವನ್ನೂ ಪ್ರಕಟಿಸುವ ಸಿದ್ಧತೆ ಸಾಗಿದೆ. ಇದಿಷ್ಟೂ ಕಳೆದ 1200 ವರ್ಷಗಳಹಿಂದೆ ಕನ್ನಡ ಅಂಕರೂಪದಲ್ಲಿ ಪರಿವರ್ತನೆಗೊಂಡು, ಇಂದಿಗೂ ಉಳಿದುಬಂದಿರುವ ‘ಸರ್ವಭಾಷಾಮಯೀಭಾಷಾ ಸಿರಿಭೂವಲಯ’ ಎಂಬ ಪ್ರಾಚೀನ ಕನ್ನಡ ಅಂಕಕಾವ್ಯದ ಸಮಗ್ರ ಇತಿಹಾಸದ ಖಚಿತವಾದ ಸಂಕ್ಷಿಪ್ತ ಮಾಹಿತಿಯಾಗಿದೆ.