ಅಜಿಲರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೇಣೂರಿನಲ್ಲಿ ವೀರ ತಿಮ್ಮಣ್ಣಾಜಿಲರಿಂದ ಸ್ಥಾಪಿತವಾದ ಏಕಶಿಲಾ ಬಾಹುಬಲಿಯ ವಿಗ್ರಹ

ಅಜಿಲರು ತುಳುನಾಡಿನ ಅರಸುಮನೆತನಗಳಲ್ಲಿ ಒಂದು. ಇವರು ದಕ್ಷಿಣ ಕನ್ನಡ ಜಿಲ್ಲೆಯ ವೇಣೂರನ್ನು ಕೇಂದ್ರವನ್ನಾಗಿಸಿಕೊಂಡು ಆಡಳಿತ ನಡೆಸಿದರು. ಈ ವಂಶದ ಮೊದಲ ಉಲ್ಲೇಖ ಕಂಡುಬರುವುದು ೧೩೪೦ರ ತೆಂಕಕಾರಂದೂರು ಎಂಬಲ್ಲಿಯ ಶಾಸನದಲ್ಲಿ. ಹೊಯ್ಸಳರ ಆಳ್ವಿಕೆಯ ಅಧೀನದಲ್ಲಿದ್ದ ಇವರು ಮುಂದೆ ವಿಜಯನಗರದ ಆಡಳಿತವನ್ನು ಒಪ್ಪಿಕೊಂಡಿದ್ದರು ಎಂದು ತಿಳಿದುಬರುತ್ತದೆ.

ಇತಿಹಾಸ[ಬದಲಾಯಿಸಿ]

  • ಈಗ ತಿಳಿದಿರುವಂತೆ ೧೩೪೦ರ ಶಾಸನದಲ್ಲಿ ಈ ವಂಶಜರ ಬಗೆಗಿನ ಮೊದಲ ಉಲ್ಲೇಖವಿದೆ. ಅಲ್ಲಿಂದ ಮುಂದೆ ೧೭೫೦ರ ತನಕ ಸುಮಾರು ೧೩ ಮಂದಿ ಅರಸರ ಹೆಸರುಗಳು ವಿವಿಧ ಶಾಸನಗಳಲ್ಲಿ ಉಲ್ಲೇಖಗೊಂಡಿವೆ. ಈ ಪೈಕಿ ೧೬೦೦ರಿಂದ ೧೬೨೦ರ ತನಕ ರಾಜ್ಯವನ್ನಾಳಿದ ತಿಮ್ಮಾಣ್ಣಾಜಿಲ ಹೆಸರುವಾಸಿಯಾಗಿದ್ದಾನೆ. ಇವನು ೧೬೦೪ರಲ್ಲಿ ವೇಣೂರಿನಲ್ಲಿ ೩೫ ಅಡಿ ಎತ್ತರದ ಬಾಹುಬಲಿಯ ಏಕಶಿಲಾ ವಿಗ್ರಹವನ್ನು ಸ್ಥಾಪಿಸಿದ್ದಾನೆ. ಕಾಲಾನಂತರ ಇವರು ತಮ್ಮ ರಾಜಧಾನಿಯನ್ನು ಸಮೀಪದ ಅಳದಂಗಡಿ ಎಂಬಲ್ಲಿಗೆ ಸ್ಥಳಾಂತರಿಸಿದರು.
  • ವಿಜಯನಗರ ಸಾಮ್ರಾಜ್ಯದೊಂದಿಗೆ ತುಳುನಾಡು ವಿಲೀನಗೊಂಡ ಅನಂತರ ಅಲ್ಲಿ ತಲೆಯೆತ್ತಿದ ಹಲವು ಸ್ಥಳೀಕ ಮನೆತನಗಳಲ್ಲಿ ಒಂದು.[೧] ಮೊದಲು ವೇಣೂರಿನಿಂದ ಮತ್ತು ಅನಂತರ ಆಲದಂಗಡಿಯಿಂದ ಇವರು ಆಳಿದ ಸಂಸ್ಥಾನಕ್ಕೆ ಪೂಂಜಳಿ ಅಥವಾ ಪುಂಜಳಿಕೆಯ ರಾಜ್ಯ ಮತ್ತು ಅಳುವ ರಾಜ್ಯ ಎಂಬ ಹೆಸರುಗಳಿದ್ದುವು. ಇವರು ತಮ್ಮನ್ನು ಸಾಳುವ ವಂಶದವರೆಂದು ಕರೆದುಕೊಳ್ಳುತ್ತಿದ್ದರು. ವೇಣೂರಿನ ಮಹಾಲಿಂಗೇಶ್ವರ ಇವರ ಕುಲದೇವತೆಯಾದರೂ ಇವರು ಜೈನಧರ್ಮಾವಲಂಬಿಗಳಾಗಿದ್ದರು. 1408ರ ವಿಜಯನಗರದ ಶಾಸನವೊಂದರಲ್ಲಿ ಅಜಿಲರು ಬಂಗ ಮತ್ತು ಚೌಟ ಮನೆತನಗಳ ಅರಸುಗಳೊಂದಿಗೆ ಆಡಳಿತ ಕ್ಷೇತ್ರದಲ್ಲಿ ವಿಜಯನಗರ ರಾಜ್ಯಪಾಲನ ಸಹಾಯಕರಾಗಿ 1405ರಲ್ಲಿ ಕಾಣಿಸಿಕೊಳ್ಳುತ್ತಾರೆ.

ಅಜಿಲರ ಕೊಡುಗೆ[ಬದಲಾಯಿಸಿ]

ಅಜಿಲ ಅರಸುಗಳ ಪೈಕಿ ಮುಖ್ಯನಾದವನು 4ನೆಯ ವೀರತಿಮ್ಮರಾಜ ಒಡೆಯ. ರಾಜಕುಮಾರನ ಅಳಿಯನೂ ಪಾಂಡ್ಯಕದೇವಿಯ ಮಗನೂ ಜೈನಗುರು ಚಾರುಕೀರ್ತಿದೇವರ ಪ್ರಿಯಾಗ್ರಶಿಷ್ಯನೂ ಆಗಿದ್ದ ಈ ತಿಮ್ಮರಾಜನೇ ವೇಣೂರಿಗೊಮ್ಮಟ ಶಿಲಾಮೂರ್ತಿಯನ್ನು ಸ್ಥಾಪಿಸಿದ. ಇವನ ರಾಣಿ ಪಾಂಡ್ಯಕದೇವಿ ಅಥವಾ ವರ್ಧಮಾನಕ್ಕ ಗೊಮ್ಮಟನ ಎಡಭಾಗದಲ್ಲಿ ಚಂದ್ರನಾಥ ಚೈತ್ಯಾಲಯವನ್ನೂ ಇವನ ಮತ್ತೊಬ್ಬ ರಾಣಿ ಪಾರ್ಶ್ವದೇವಿ ಅಥವಾ ಬಿನಾಣೆ ಗೊಮ್ಮಟನ ಬಲಭಾಗದಲ್ಲಿ ಶಾಂತೀಶ್ವರ ಚೈತ್ಯಾಲಯವನ್ನೂ ಕಟ್ಟಿಸಿದರು. ಅಜಿಲರ ರಾಣಿ ಮದುರಕದೇವಿಯನ್ನು 1622ರ ಒಂದು ಶಾಸನದಲ್ಲಿ ಜೈನಗುರು ಲಲಿತಕೀರ್ತಿ ಭಟ್ಟಾರಕದೇವರ ಪ್ರಿಯಾಗ್ರಶಿಷ್ಯನೆಂದು ವರ್ಣಿಸಲಾಗಿದೆ. ಇವಳು ತನ್ನ ರಾಜಧಾನಿ ಆಲದಂಗಡಿಯಲ್ಲಿ ಒಂದು ಅರಮನೆಯನ್ನೂ ಒಂದು ಜೈನಬಸದಿಯನ್ನೂ ಅರ್ಧನಾರೀಶ್ವರ ಮತ್ತು ಸೋಮನಾಥ ದೇವಾಲಯಗಳನ್ನೂ ಕಟ್ಟಿಸಿದಳು. ವೇಣೂರಿನಲ್ಲಿ ಅಜಿಲರು ಕಟ್ಟಿಸಿಕೊಂಡಿದ್ದ ಅರಮನೆಗೆ ಏಳುಪ್ಪರಿಗೆಗಳಿದ್ದವೆಂಬ ಪ್ರತೀತಿಯಿದ್ದು, ಇಂದು ಆ ಅರಮನೆಯ ನಿವೇಶನದಲ್ಲಿ ತಳಪಾಯದ ಕುರುಹುಗಳೂ ಕಲ್ಲಿನ ಎರಡು ಆನೆಗಳೂ ಕಾಣಸಿಗುತ್ತವೆ. ಅಜಿಲಮೊಗರು ಎಂಬ ಸಣ್ಣ ಗ್ರಾಮದಲ್ಲಿರುವ ಮಸೀದಿಯ ನಿರ್ಮಾಪಕ ಒಬ್ಬ ಅಜಿಲ ಅರಸು ಎಂಬ ಐತಿಹ್ಯವಿದೆ. ಆ ಅರಸ ಯಾವುದೋ ರೋಗದಿಂದ ಬಳಲುತ್ತಿದ್ದಾಗ ಸೈಯದ್ ಬಾಬಾ ಫಕ್ರುದ್ದಿನ್ ಎಂಬ ಪಷಿರ್ಯ ದೇಶದ ಗುರು ಆ ರೋಗವನ್ನು ಗುಣಪಡಿಸಿದ ಕಾರಣ ಅಜಿಲ ಆ ಮಸೀದಿಯನ್ನು ಕಟ್ಟಿಸಿದನಂತೆ. ಹೈದರನ ಕಾಲದಲ್ಲಿ ಅಜಿಲರ ಆಳ್ವಿಕೆ ಕೊನೆಗಂಡಿತು. ಆಲದಂಗಡಿ ಮತ್ತು ಬಂಗಾಡಿ ಎಂಬೀ ಸ್ಥಳಗಳಲ್ಲಿ ಅಜಿಲ ವಂಶದವರು ಇಂದಿಗೂ ವಾಸಿಸುತ್ತಿದ್ದಾರೆ.[೨]

ಅಚರಣೆಗಳು[ಬದಲಾಯಿಸಿ]

ಅಜಿಲರು ಜೈನ ಧರ್ಮಾವಲಂಬಿಗಳು.ಇವರಲ್ಲಿ ಅಳಿಯ ಸಂತಾನ ಪದ್ಧತಿ ರೂಢಿಯಲ್ಲಿತ್ತು. ಇವರು ಜೈನರಾಗಿದ್ದರೂ ಇವರ ಕುಲದೇವರು ಹಿಂದೂ ಧರ್ಮದ ಮಹಾಲಿಂಗೇಶ್ವರ. ಇವರು ವೀರಶೈವ ಧರ್ಮ ಕ್ಕೂ ತಕ್ಕ ಆಶ್ರಯ ಕೊಟ್ಟಿದ್ದರು.

ಹೆಚ್ಚಿನ ಓದಿಗೆ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. https://www.upayuktha.com/2021/10/Webinar-on-Tulunada-Arasu-Ajila-family.html
  2. cite news |url=https://prajaprakasha.com/?p=7499
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಅಜಿಲರು&oldid=1171706" ಇಂದ ಪಡೆಯಲ್ಪಟ್ಟಿದೆ