ಗೋಪಕವಿ
ಗೋಪಕವಿ : - ಕ್ರಿ.ಶ.೧೬೦೦ ರಲ್ಲಿ ವಿಜಯಪುರ ಜಿಲ್ಲೆಯ ಕವಿ.ಇವನ ಮೂಲ ಹೆಸರು ಗೋವಿಂದ ಕವಿ. 16ನೆಯ ಶತಮಾನದ ಉತ್ತರಾರ್ಧದಲ್ಲಿ ಜೀವಿಸಿದ್ದ ಭಾಗವತ ಸಂಪ್ರದಾಯದ ಒಬ್ಬ ಕನ್ನಡ ಕವಿ.
ಜೀವನ
[ಬದಲಾಯಿಸಿ]ತಾನು ಭೀಮರಥೀ ತೀರದ ಬೇಡಬುಯ್ಯರ ಗ್ರಾಮದ ಜ್ಯೋತಿ ಎಂಬ ಕರಣಿಕನ ಮಗನೆಂದೂ ಶ್ರೀಕೃಷ್ಣ ಮದನಗೋಪಾಲ ತನ್ನ ಆರಾಧ್ಯ ದೈವವೆಂದೂ ಹೇಳಿಕೊಂಡಿದ್ದಾನೆ. ಈತ ರಚಿಸಿದ ಕಾವ್ಯಗಳು ಚಿತ್ರಭಾರತ ಮತ್ತು ನಂದಿಮಹಾತ್ಯ್ಮೆ . ಕಾವ್ಯಾರಂಭದಲ್ಲಿ ಕುಮಾರವ್ಯಾಸ, ಲಕ್ಷ್ಮೀಶರನ್ನು ಸ್ತುತಿಸಿದ್ದಾನೆ.
ಕಾವ್ಯ ರಚನೆ
[ಬದಲಾಯಿಸಿ]ಚಿತ್ರಭಾರತದ ಕಾವ್ಯವಸ್ತು ಮಹಾಭಾರತದ್ದೇ ಆಗಿದೆ. ಮೂವತ್ತು ಸಂಧಿಗಳಿಂದ ಕೂಡಿದ ಈ ಕೃತಿ ಭಕ್ತಿಪ್ರಧಾನವಾದುದು. ಕಾವ್ಯದ ಮೊದಲರ್ಧದಲ್ಲಿ ರಾಜಸೂಯಯಾಗ, ದ್ಯೂತಪ್ರಸಂಗ, ವನವಾಸಗಳ ಕಥಾನಿರೂಪಣೆಯಿದೆ. ಉಳಿದರ್ಧ ವತ್ಸಲಾಹರಣಕ್ಕೆ ಮೀಸಲಾಗಿದೆ. ಮರಾಠಿ ಭಾಷೆಯಲ್ಲಿ ಈ ಕಥೆ ಜನಪ್ರಿಯವಾಗಿರುವುದನ್ನು ಗಮನಿಸಿ ಕನ್ನಡದಲ್ಲಿ ತಾನು ರಚಿಸಿರುವುದಾಗಿ ಕವಿ ಹೇಳುತ್ತಾನೆ. ಸಾರಮಿದು ಹರಿಕಥಾಮೃತಂ ಎಂಬ ಮಾತು ಈತನ ಕುಮಾರವ್ಯಾಸ ಪರಂಪರೆಯನ್ನು ಎತ್ತಿ ತೋರಿಸುತ್ತದೆ. ಚಿತ್ರಕವಿತ್ವದ ಚಮತ್ಕಾರ ಇದರಲ್ಲಿ ವಿಶೇಷವಾಗಿ ಕಂಡುಬರುವುದರಿಂದ ಈ ಕೃತಿಗೆ ಚಿತ್ರಭಾರತವೆಂಬ ಹೆಸರು ಸೂಕ್ತವಾಗಿದೆ.
ನಂದಿಮಹಾತ್ಮೆ ಈತನ ಪರಿಪಕ್ವ ಕೃತಿ. ವಾರ್ಧಕ ಷಟ್ಪದಿಯಲ್ಲಿ ರಚಿತವಾಗಿರುವ ಈ ಕೃತಿ 50 ಸಂಧಿಗಳಷ್ಟು ದೀರ್ಘವಾಗಿದೆ. ಇದರ ಕಥಾವಸ್ತುವನ್ನು ಸೂತಪುರಾಣದಿಂದ ಆಯ್ದುಕೊಳ್ಳಲಾಗಿದೆ. ಪಾರ್ವತಿಯನ್ನು ಒಡ್ಡೋಲಗಕ್ಕೆ ಕರೆತರುವಂತೆ ಶಿವನಿಂದ ನಂದಿಗೆ ಅಪ್ಪಣೆಯಾಗುತ್ತದೆ. ನಂದಿ ಇಂದುಧರನ ರೂಪದಿಂದ ಪಾರ್ವತಿಯನ್ನು ಕರೆತರಲು ಹೋಗುತ್ತಾನೆ. ನಂದಿಯನ್ನು ಪಾರ್ವತಿ ಪರಶಿವನೆಂದೇ ಬಗೆದು ಸನ್ಮಾನಿಸುತ್ತಾಳೆ. ಈ ಅಚಾತುರ್ಯಕ್ಕಾಗಿ ಪಶ್ಚಾತ್ತಾಪಗೊಂಡ ನಂದಿ ಪ್ರಾಯಶ್ಚಿತ್ತಕ್ಕಾಗಿ ತಪಸ್ಸು ಮಾಡಲು ತೀರ್ಮಾನಿಸುತ್ತಾನೆ. ತನ್ನ ತಪಸ್ಸಿಗೆ ತಕ್ಕ ಸ್ಥಳವಾವುದೆಂದು ಗಣನಾಥ ಕೂಷ್ಮಾಂಡನನ್ನು ಕೇಳಲು ಆತ ಶ್ರೀಶೈಲ, ಕೇದಾರ, ವಾರಾಣಸಿ, ಕಂಚಿ ಮೊದಲಾದ ಶೈವಕ್ಷೇತ್ರಗಳ ಮಹಿಮೆಯನ್ನು ನಿರೂಪಿಸುತ್ತಾನೆ.