ಕಾಖಂಡಕಿ ಮಹಿಪತಿದಾಸರು
ಕನ್ನಡ ಹರಿದಾಸ ಸಾಹಿತ್ಯ ಪಂಥದ ಕಾಖಂಡಕಿಯ ಮಹಿಪತಿದಾಸರು ತಮ್ಮ ವಿಶಿಷ್ಟವಾದ ಕಿರ್ತನೆಗಳಿಂದ ಜನ ಸಾಮಾನ್ಯರಲ್ಲಿ ಭಕ್ತಿ ಜಾಗೃತಿಯನ್ನು ಮಾಡಿದರು. ಹರಿದಾಸ ಸಾಹಿತ್ಯದ ಕವಿಗಳು ಹಾಗೂ ಆದಿಲ್ ಶಾಹಿ ಆಸ್ಥಾನದಲ್ಲಿ ಕೋಶಾಧಿಕಾರಿಗಳಾಗಿದ್ದರು.
ಜನನ
[ಬದಲಾಯಿಸಿ]ಜನನ - ಕ್ರಿ.ಶ.೧೬೧೧ ರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಐಗಳಿ ಗ್ರಾಮದಲ್ಲಿ ಜನಿಸಿದರು. ೧೬೮೧ ವೃಂದಾವನ ರಾಗಿದ್ದಾರೆ.
ಬಾಲ್ಯ
[ಬದಲಾಯಿಸಿ]ಇವರ ಮೂಲ ಹೆಸರು ಗುರುರಾಯರು. ಗುರು ಭಾಸ್ಕರ ಸ್ವಾಮಿಗಳು. ಮಹಾಮಹಿಮರಾದ ಮಹಿಪತಿದಾಸರ ಪೂರ್ವಜರು ಮೂಲತಃ ಬಾಗಲಕೋಟೆಯವರು. ಅಲ್ಲಿರುವಷ್ಟು ಕಾಲ ಈ ಮನೆತನದವರನ್ನು ‘‘ಕಾಥವಟೆ’’ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಈ ಮನೆತನದ ಹಿರಿಯರಾದ ರಂಗಭಟ್ಟರು ತಮ್ಮ ಬಾಲ್ಯದಲ್ಲಿಯೇ ವಿದ್ಯಾಭ್ಯಾಸಕ್ಕೆಂದು ಕಾಶಿಗೆ ಪ್ರಯಾಣ ಮಾಡಿದರು. ಅವರು ವಿದ್ಯಾರ್ಜನೆಯನ್ನು ಮುಗಿಸಿ ಮರಳಿದಾಗ ವಿಜಯಪುರವು ಆದಿಲ್ಶಾಹಿ ರಾಜ್ಯದ ರಾಜಧಾನಿಯಾಗಿತ್ತು. ಆದುದರಿಂದ ರಂಗಭಟ್ಟರು ಸಹ ವಿಜಯಪುರ ನಗರವನ್ನೇ ತಮ್ಮ ವಾಸಸ್ಥಾನವಾಗಿ ಆರಿಸಿಕೊಂಡರು. ಈ ರಂಗಭಟ್ಟರಿಗೆ ಕೋನೇರಿರಾಯ ಎಂಬ ಮಗನಿದ್ದು ಅವರು ತಂದೆಯಂತೆಯೇ ವೈದಿಕ ವೃತ್ತಿಯಲ್ಲಿ ಜೀವಿಸುತ್ತಿದ್ದರು. ಕೋನೇರಿರಾಯರಿಗೆ ಗುರುರಾಯ ಹಾಗೂ ಮಹಿಪತಿರಾಯ ಎಂಬ ಇಬ್ಬರು ಗಂಡು ಮಕ್ಕಳಿದ್ದರು. ಮಹಿಪತಿರಾಯ ಹುಟ್ಟಿದ್ದು ೧೭೧೧ ರಲ್ಲಿ. ಕೃಷ್ಣಾತೀರದ ಕೊಲ್ಲಾರ ನಿವಾಸಿಗಳಾದ ಪ್ರಹ್ಲಾದ ಕೃಷ್ಣಾಚಾರ್ಯರು ಈ ಮನೆತನಕ್ಕೆ ಕುಲಗುರುಗಳಾಗಿದ್ದರು. ಇವರು ಮಹಿಪತಿರಾಯರ ಜನ್ಮ ಕುಂಡಲಿಯನ್ನು ಅಭ್ಯಾಸ ಮಾಡಿ ಈ ಹುಡುಗನು ಉನ್ನತವಾದ ರಾಜವೈಭವವನ್ನು ಪಡೆಯುವನೆಂದೂ ಮಹಾಯೋಗಿಯಾಗಿ ಜೀವಿಸುತ್ತಾನೆಂದೂ ತಮ್ಮ ಭವಿಷ್ಯ ಸಾರಿದರು.
ಪರಿಚಯ
[ಬದಲಾಯಿಸಿ]ಕನ್ನಡ ಸಾರಸ್ವತ ಲೋಕಕ್ಕೆ ದಾಸಸಾಹಿತ್ಯದ ಕೊಡುಗೆ ಅನನ್ಯ. ಶಾಸ್ತ್ರವಿಚಾರಗಳನ್ನು ಸರಳವಾಗಿ ಪದ್ಯಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸಿದ ಕೀರ್ತಿ ದಾಸರಿಗೆ ಸಲ್ಲಬೇಕು. ಪುರಂದರ ಮತ್ತು ಕನಕದಾಸರ ನಂತರದ ಅವಧಿಯಲ್ಲಿ ವಿಜಯದಾಸರ ಕಾಲ ಪ್ರಾರಂಭವಾಗುವ ಮುನ್ನ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಕಾಖಂಡಕಿಯ ಗ್ರಾಮದಲ್ಲಿ ವಾಸವಿದ್ದ ಮಹಿಪತಿದಾಸರು ಮತ್ತು ಅವರ ವಂಶಜರಿಂದ ದಾಸಸಾಹಿತ್ಯ ಸಮೃದ್ಧವಾಗಿ ಬೆಳೆಯಿತು.
ವೈದಿಕ ವೃತ್ತಿಯಲ್ಲಿದ್ದು ರಾಜ್ಯವಾಳುವ ಬಾದಶಹನ ಆತ್ಮೀಯ ಅಧಿಕಾರಿಯಾದರು. ಆತ್ಮೋದ್ಧಾರದ ಮಾರ್ಗ ಕಂಡುಕೊಳ್ಳಲು ಸಂತೋಷದಿಂದ ಅಧಿಕಾರ-ಅಂತಸ್ತುಗಳನ್ನು ತ್ಯಜಿಸಿದರು. ನೂರಾರು ಮಂದಿಗೆ ಸಾರ್ಥಕ ಜೀವನ ನಡೆಸಲು ಮಾರ್ಗದರ್ಶನ ಮಾಡಿದರು.
‘ಸರ್ವೋತ್ತುಮನ ಸ್ತುತಿಸಲಿಕ್ಕೆ ಸರಿಬೆಸದಕ್ಷರದೆಣಿಕ್ಯಾಕೆ, ಯತಿ ಛಲ ಗಣ ಪ್ರಾಸವ್ಯಾಕೆ’ ಎಂದು ಕಾಖಂಡಕಿ ಮಹಿಪತಿ ದಾಸರು ಕೇಳಿದ್ದಾರೆ. ದಾಸರೆಲ್ಲ ಸಾಹಿತಿಗೆ ಅವಶ್ಯಕವಾದ ರೀತಿಯಲ್ಲಿ ಅಧ್ಯಯನವನ್ನು ಮಾಡಿದವರಲ್ಲ. ಒಬ್ಬಿಬ್ಬರನ್ನು ಬಿಟ್ಟರೆ ಅವರು ಲೌಕಿಕ ಕಾವ್ಯಗಳನ್ನಾಗಲೀ, ಕಾವ್ಯ ಲಕ್ಷಣಗಳನ್ನಾಗಲೀ ಗಮನಿಸಿದವರಲ್ಲ. ಭಕ್ತಿಯ ನೆಲೆಯಲ್ಲಿ ಸೃಷ್ಟಿಯಾದ ಈ ಕೃತಿಗಳಿಗೆ ಅದರ ಅಗತ್ಯವೂ ಇರಲಿಲ್ಲ.
- ದಿವಾನ ಪದವಿಯಿಂದ ದಾಸತ್ವಕ್ಕೆ
ಮಹಿಪತಿದಾಸರ ಹಿರಿಯರು ಬಾಗಲಕೋಟ ಮೂಲದವರು. ಸಂಚಾರ ಮಾಡುತ್ತ ವಿಜಯಪುರಕ್ಕೆ ಬಂದರು. ಅನಂತರ ಮಹಿಪತಿದಾಸರು ಕಾಖಂಡಕಿಗೆ ಬಂದು ನೆಲೆಸಿದರು. ಮಹಿಪತಿಯು ಮಹಿಪತಿದಾಸರಾದದ್ದರ ಹಿಂದೆ ರೋಚಕ ಇತಿಹಾಸವಿದೆ. ಆದಿಲ್ಶಾಹಿ ಅರಸರು ವಿಜಯಪುರವನ್ನು ಆಳುತ್ತಿದ್ದ ಕಾಲ. ನರಸಿಂಹದೇಗುಲದಲ್ಲಿ ಪುರಾಣ ಹೇಳುತ್ತಿದ್ದ ಮಹಿಪತಿಯು ಅರಸನ ಕಣ್ಣಿಗೆ ಬಿದ್ದ. ತಮ್ಮ ಪಾಂಡಿತ್ಯದಿಂದ ಸಹಜವಾಗಿ ಆದಿಲ್ಶಾಹಿ ಅರಸನ ಆಸ್ಥಾನದಲ್ಲಿ ದಿವಾನ ಹುದ್ದೆ ಅರಸಿ ಬಂತು. ಒಂದು ದಿನ ರಾಜನ ಆಸ್ಥಾನಕ್ಕೆ ತೆರಳುತ್ತಿದ್ದಾಗ ಅಣ್ಣ ತಂಗಿಯರಾಗಿದ್ದ ಶಾಹನುಂಗ ಮತ್ತು ಶಹಾನುಂಗಿ ಎಂಬ ಸೂಫಿ ಸಂತರ ಕಣ್ಣಿಗೆ ಬಿದ್ದರು. ಅವರೊಂದಿಗೆ ನಡೆದ ಸಂಭಾಷಣೆಯೇ ಬದುಕಿನ ದಿಕ್ಕಿನ ತಿರುವಾಯಿತು. ಸೂಫಿಸಂತರ ಸೂಚನೆಯ ಮೇರೆಗೆ ಮಹಿಪತಿದಾಸರು ವಿಜಯಪುರ ಸಮೀಪದ ಸಾರವಾಡ ಗ್ರಾಮದಲ್ಲಿ ವಾಸವಿದ್ದ ಭಾಸ್ಕರಸ್ವಾಮಿಗಳಲ್ಲಿಗೆ ಹೋಗಿ ಅವರನ್ನು ಗುರುಗಳನ್ನಾಗಿ ಮಾಡಿಕೊಂಡರು. ಅನಂತರ ಸಂಚಾರ ಮಾಡುತ್ತ ಹೋಗಿ ತಲುಪಿದ್ದು ಕಾಖಂಡಕಿಗೆ. ಕಾಖಂಡಕಿ ಗ್ರಾಮ ಅಗ್ರಹಾರವಾಗಿತ್ತು. ಇಲ್ಲಿಗೆ ಆಗಮಿಸಿದಾಗ ಊರ ಜನರಿಂದ ಭವ್ಯ ಸ್ವಾಗತ ದೊರಕಿತು. ಊರ ಹೊರಗಿನ ಹೊಲದಲ್ಲಿನ ಬನ್ನಿ ಗಿಡದ ಬುಡದಲ್ಲಿ ಯೋಗಾನುಷ್ಠಾನಕ್ಕೆ ತೊಡಗಿದರು. 11 ವರ್ಷಗಳ ಯೋಗಾನುಷ್ಠಾನವನ್ನು
- ಯೋಗಾನುಷ್ಠಾನ
ಯೋಗಾನುಷ್ಠಾನದಿಂದ ಅಪರೋಕ್ಷ ಜ್ಞಾನದ ಗುರಿ ಮುಟ್ಟಿದರು. ಸ್ವಾನಂದವನ್ನು ಆನಂದಿಸಿದರು. ಅದರ ಅನುಭೂತಿಯನ್ನು ಪದ್ಯಗಳಲ್ಲಿ/ಕೀರ್ತನೆಗಳಲ್ಲಿ ಹಿಡಿದಿಟ್ಟರು. ಮಹಿಪತಿದಾಸರು ಒಟ್ಟು 14 ಅಂಕಿತಗಳಲ್ಲಿ ಪದ್ಯಗಳನ್ನು ಬರೆದಿದ್ದನ್ನು ಗುರುತಿಸಲಾಗಿದೆ. ಇನ್ನೊಂದು ವಿಶಿಷ್ಟ ಪ್ರಯೋಗವನ್ನು ದಾಸರು ಮಾಡಿದ್ದಾರೆ. ಒಂದೇ ಪದ್ಯದಲ್ಲಿ ಕನ್ನಡ, ಮರಾಠಿ, ಪಾರ್ಸಿ – ಹೀಗೆ ವಿವಿಧ ಭಾಷೆಯ ಪದಗಳನ್ನು ಬಳಸಿದ್ದಾರೆ. [೧]
ಕುಟುಂಬದ ಹಿನ್ನಲೆ
[ಬದಲಾಯಿಸಿ]ಮಹಿಪತಿದಾಸರಿಗೆ ಇಬ್ಬರು ಗಂಡುಮಕ್ಕಳು. ಹಿರಿಯವನ ಹೆಸರು ದೇವರಾಯ. ಎರಡನೆಯವನ ಹೆಸರು ಕೃಷ್ಣರಾಯ. ಹಿರಿಯ ಮಗ ದೇವರಾಯ ಸಿಂದಗಿ ತಾಲೂಕಿನ ಜಾಲವಾದದಲ್ಲಿ ಆಡಳಿತ ನಡೆಸಿದರೂ ಕೊನೆಗೆ ಅಲೌಕಿಕ ಬದುಕಿಗೆ ಬಂದಿರಬೇಕು. ಜಾಲವಾದಿಯಲ್ಲಿ ದೇವರಾಯರ ವೃಂದಾವನವಿದೆ. ಎರಡನೆಯ ಮಗ ಕೂಡ ತಂದೆಯ ದಾರಿಯಲ್ಲಿಯೇ ನಡೆದು ಕೃಷ್ಣದಾಸರೆನಿಸಿದರು. ತಂದೆಯನ್ನೇ ಗುರುವನ್ನಾಗಿಸಿಕೊಂಡು ನೂರಾರು ಕೃತಿಗಳನ್ನು ರಚಿಸಿದರು. ಮಹಿಪತಿದಾಸರ ಮನೆತನದಲ್ಲಿ ಅವರ ಮೊಮ್ಮಕ್ಕಳು, ಮರಿಮಕ್ಕಳು ಪದ್ಯಗಳನ್ನು ರಚಿಸಿದ್ದಾರೆ. ಮಹಿಪತಿದಾಸರು ಅನುಷ್ಠಾನ ಮಾಡಿದ ಕಾಖಂಡಕಿ ಗ್ರಾಮದಲ್ಲಿನ ಸ್ಥಳದಲ್ಲಿ ಶಾಲಿಗ್ರಾಮಗಳನ್ನು ಬಳಸಿ ನಿರ್ವಿುಸಿದ ವೃಂದಾವನವಿದೆ. ಮಹಿಪತಿದಾಸರು ಬಳಸಿದ ಯೋಗದಂಡವಿದೆ.
ಪ್ರತಿವರ್ಷ ಕಾರ್ತಿಕ ಕೃಷ್ಣ ದಶಮಿಯಿಂದ ಮಾರ್ಗಶೀರ್ಷ ಶುದ್ಧ ದ್ವಿತೀಯಾವರೆಗೆ ಶ್ರೀ ಲಕ್ಷಿ್ಮೕವೆಂಕಟೇಶ ದೇವರ ಉತ್ಸವದೊಂದಿಗೆ ಮಹಿಪತಿದಾಸರ ಆರಾಧನೆ ನಡೆಯುತ್ತದೆ. ಛಟ್ಟಿ ಅಮವಾಸ್ಯೆಯನ್ನು ಮಹಿಪತಿದಾಸರ ಪುಣ್ಯತಿಥಿಯಾಗಿ ಆಚರಿಸಲಾಗುತ್ತದೆ. ಗೋಪಾಳಕಾಲಾದೊಂದಿಗೆ ಉತ್ಸವ ಸಂಪನ್ನವಾಗುತ್ತದೆ.
- ಕೋಶಾಧಿಕಾರಿ
ಮಕ್ಕಳಿಗೆ ಸರಿಯಾದ ಅಭ್ಯಾಸ ದೊರೆಯಬೇಕೆಂದು ಕೋನೇರಿರಾಯರ ಅಪೇಕ್ಷೆ. ಅವರು ಗುರುರಾಯರನ್ನೂ ಮಹಿಪತಿರಾಯರನ್ನೂ ಶ್ರೇಷ್ಠ ವಿದ್ವಾಂಸರಲ್ಲಿಗೆ ಕಳುಹಿಸಿದರು. ವೇದ-ಉಪನಿಷತ್ತು-ಭಗವದ್ಗೀತೆ ಮೊದಲಾದ ಶಾಸ್ತ್ರಗ್ರಂಥಗಳಲ್ಲಿ ಅವರು ಪರಿಣಿತರಾಗುವಂತೆ ಎಚ್ಚರವಹಿಸಿದರು. ಆದುದರಿಂದ ಮಕ್ಕಳಿಬ್ಬರೂ ಸಂಸ್ಕೃತ ಸಾಹಿತ್ಯದಲ್ಲಿ ಮಹಾ ಪಾಂಡಿತ್ಯವನ್ನು ಸಂಪಾದಿಸಿದರು.
ಮಹಿಪತಿರಾಯರು ತಮ್ಮ ವಿದ್ಯಾಭ್ಯಾಸ ಮುಗಿದ ನಂತರ ವಂಶಪಾರಂಪರ್ಯವಾಗಿ ಬಂದ ವೈದಿಕ ವೃತ್ತಿಯನ್ನೇ ಅವಲಂಬಿಸಿ ರಾಮಾಯಣ-ಮಹಾಭಾರತ ಗ್ರಂಥಗಳನ್ನು ಪ್ರವಚನ ರೂಪದಲ್ಲಿ ಹೇಳಲಾರಂಭಿಸಿದರು. ಸುಶ್ರಾವ್ಯವಾದ ಕಂಠದಿಂದ ಹೊರ ಹೊಮ್ಮುವ ಸಂಸ್ಕೃತ ಶ್ಲೋಕಗಳಿಗೆ ಅವರು ಕನ್ನಡ, ಮರಾಠಿ, ಉರ್ದು ಮೊದಲಾದ ಭಾಷೆಗಳಲ್ಲಿ ಅರ್ಥ ವಿವರಣೆಯನ್ನೀಯುತ್ತಿದ್ದರು. ಸಂಸ್ಕೃತದಂತೆ ಉಳಿದೆಲ್ಲ ಭಾಷೆಗಳ ಮೇಲೂ ಅವರು ಪ್ರಭುತ್ವವನ್ನು ಪಡೆದಿದ್ದರು. ಆದುದರಿಂದ ಮಹಿಪತಿರಾಯರ ಪ್ರವಚನವೆಂದರೆ ಎಲ್ಲಾ ಭಾಷೆಯವರೂ ಎಲ್ಲಾ ಮತೀಯರೂ ಒಂದು ಸೇರಲಾರಂಭಿಸಿದರು.
ದಿನಗಳೆದಂತೆಲ್ಲಾ ರಾಯರು ಖವಾಸ್ ಖಾನರಿಗೆ ಪ್ರೀತಿ ಪಾತ್ರರಾಗತೊಡಗಿದರು. ಅವರ ನಡೆ-ನುಡಿ- ಶೀಲ-ಸದಾಚಾರ ಸಂಪನ್ನತೆ ಮೊದಲಾದವುಗಳಿಗೆ ಮಾರು ಹೋದ ಸಚಿವರು ಮಹಿಪತಿರಾಯರನ್ನು ತಮ್ಮ ಕರುಣಿಕನನ್ನಾಗಿ ನಿಯಮಿಸಿಕೊಂಡರು. ಹೀಗಾಗಿ ವೈದಿಕ ವೃತ್ತಿಯಲ್ಲಿ ಜೀವಿಸುತ್ತಿದ್ದ ರಾಯರಿಗೆ ಸರಕಾರಿಯ ಚಾಕರಿ ಅಂಟಿಕೊಂಡಿತು.
- ಮಹಿಪತಿರಾಯರು ಆದೀಲಶಹನಿಗೆ ಆಪ್ತಸಚಿವರಾದರು.
ಒಂದು ಸಲ ಬಾದಶಹರ ಲೆಕ್ಕಪತ್ರದಲ್ಲಿ ಬಿಕ್ಕಟ್ಟು ತಲೆದೋರಿತು. ಅವರು ಈ ಮಾತನ್ನು ಸಚಿವರಾದ ಖವಾಸ್ಖಾನರಲ್ಲಿಯೂ ಹೇಳಿದರು. ಆಗ ಖಾನ್ ಸಾಹೇಬರು ಮಹಿಪತಿರಾಯರನ್ನು ಬರಮಾಡಿಕೊಂಡು ರಾಜ್ಯದ ಲೆಕ್ಕ ಪತ್ರಗಳನ್ನು ಸರಿಪಡಿಸಿಕೊಡುವಂತೆ, ಹೇಳಿದರು. ಮಹಿಪತಿ ರಾಯರಿಗೆ ಗಾಬರಿ. ಇಂಥ ಪ್ರಮಾಣದ ಇಷ್ಟು ಹೊಣೆಗಾರಿಕೆಯ ಕೆಲಸವನ್ನು ಅವರೊಬ್ಬರೇ ಮಾಡಬೇಕಾಗಿತ್ತು. ಮನದಲ್ಲಿಯೇ ತಮ್ಮ ಕುಲದೇವರನ್ನು ಸ್ಮರಿಸಿ ಲೆಕ್ಕ ಪತ್ರದ ಒಂದೊಂದೇ ಕಡತವನ್ನು ಪರಿಶೀಲನೆ ಮಾಡುತ್ತ ಹೋದರು. ಕೊನೆಗೆ ತಪ್ಪು ಎಲ್ಲಿದೆ ಎಂಬುದು ಸ್ಪಷ್ಟವಾಗಿ ತಿಳಿಯಿತು. ಅದನ್ನು ಬಾದಶಹರಿಗೆ ತೋರಿಸಿದರು. ಅಹಮ್ಮದ್ ಆದಿಲ್ಶಹನಿಗೆ ಪರಮಾನಂದವಾಯಿತು. ಆತನು ಮಹಿಪತಿರಾಯರನ್ನು ಯೋಗ್ಯರೀತಿಯಿಂದ ಸನ್ಮಾನ ಮಾಡಿದ. ಅವರನ್ನು ತನ್ನಲ್ಲೆ ಕೆಲಸಕ್ಕೆ ಉಳಿಸಿಕೊಳ್ಳಬೇಕೆಂದು ಬಾದಶಹನಿಗೆ ಎನ್ನಿಸಿತು. ಖವಾಸ್ಖಾನರಿಗೆ ಹೇಳಿ ಅವರನ್ನು ಒಪ್ಪಿಸಿದ. ಮಹಿಪತಿರಾಯರನ್ನು ತನ್ನ ಆಪ್ತ ಸಚಿವರೆಂದು ನೇಮಿಸಿಕೊಂಡನು. [೨]
ಬೃಂದಾವನ
[ಬದಲಾಯಿಸಿ]ಬೃಂದಾವನ ವಿಜಯಪುರ ಜಿಲ್ಲೆಯ ಕಾಖಂಡಕಿಯಲ್ಲಿದೆ.
ಜ್ಞಾನದ ನಡಿ ಬ್ಯಾರೆ ಸಮ್ಮರಿ
[ಬದಲಾಯಿಸಿ]೧.ಆಧ್ಯಾತ್ಮದ ವಿದ್ಯೆ ಅಧ್ಯಕ್ಷಾಗಬೇಕು ಸಾಧ್ಯ ದ್ರುವ|ಪ|.
ಕನ್ನಡಿಯೊಳಗಿನ ತಾಗಂಟು ಸನ್ನಿಧವಾಗುವದೆ ಕೈಗೊಟ್ಟು||ಅ.ಪ||.
ಉಲ್ಲೇಖಗಳು
[ಬದಲಾಯಿಸಿ]- ↑ https://www.prajavani.net/article/%E0%B2%A8%E0%B2%BF%E0%B2%B0%E0%B3%8D%E0%B2%B2%E0%B2%95%E0%B3%8D%E0%B2%B7%E0%B3%8D%E0%B2%AF%E0%B2%95%E0%B3%8D%E0%B2%95%E0%B3%86-%E0%B2%92%E0%B2%B3%E0%B2%97%E0%B2%BE%E0%B2%A6-%E0%B2%87%E0%B2%AC%E0%B3%8D%E0%B2%AC%E0%B2%B0%E0%B3%81-%E0%B2%AE%E0%B2%B9%E0%B2%BE%E0%B2%A8%E0%B3%8D-%E0%B2%B8%E0%B2%BE%E0%B2%A7%E0%B2%95%E0%B2%B0-%E0%B2%B8%E0%B2%AE%E0%B2%BE%E0%B2%A7%E0%B2%BF
- ↑ http://vijayavani.net/%E0%B2%85%E0%B2%A8%E0%B2%A8%E0%B3%8D%E0%B2%AF-%E0%B2%B9%E0%B2%B0%E0%B2%BF%E0%B2%AD%E0%B2%95%E0%B3%8D%E0%B2%A4-%E0%B2%AE%E0%B2%B9%E0%B2%BF%E0%B2%AA%E0%B2%A4%E0%B2%BF%E0%B2%A6%E0%B2%BE%E0%B2%B8%E0%B2%B0/