ಅಥಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಥಣಿ
ಅಥಣಿ
village
Population
 (2012)
 • Total೩೫,೦೦೦

ಅಥಣಿ ಬೆಳಗಾವಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಭಾರತದ ಜನಗಣತಿ ಪ್ರಕಾರ ೩೯,೨೦೦ ಜನಸಂಖ್ಯೆಯನ್ನು ಹೊಂದಿರುತ್ತದೆ. ಒಟ್ಟು ಜನಸಂಖ್ಯೆಯು ಸುಮಾರು ೪೦೦,೦೦೦. ಜಿಲ್ಲಾ ಕೇಂದ್ರವಾದ ಬೆಳಗಾವಿ ನಗರದಿಂದ ಸುಮಾರು ೧೨೫ ಕಿ.ಮಿ. ದೂರವಿದ್ದು, ಐತಿಹಸಿಕ ಕೇಂದ್ರವಾದ ವಿಜಯಪುರದಿಂದ ಸುಮಾರು ೭೫ ಕಿ.ಮಿ. ದೂರವಿದೆ. ಮಹಾರಾಷ್ಟ್ರ ಗಡಿಗೆ ಅಂಟಿಕೊಂಡಿರುವ ಅಥಣಿಯು ಬೆಳಗಾವಿ ಜಿಲ್ಲೆಯ ಅತ್ಯಂತ ವಿಶಾಲವಾದ ತಾಲೂಕು ಆಗಿದ್ದು ೧೯೯೫.೫ ಚ.ಕಿ.ಮಿ. ವಿಸ್ತೀರ್ಣ ಹೊಂದಿದೆ. ಇಲ್ಲಿನ ಪ್ರಮುಖ ಕಸುಬು ವ್ಯವಸಾಯವಾಗಿದ್ದು, ಭೂಮಿಯ ಬಹುತೇಕಪಾಲು ಕೃಷಿಗೆ ಬಳಕೆಯಾಗುತ್ತದೆ. ಕಬ್ಬು ಇಲ್ಲಿನ ಪ್ರಮುಖ ಬೆಳೆಯಾಗಿದೆ. ಸುಮಾರು ೪ ಸಕ್ಕರೆ ಕಾರ್ಖಾನೆಗಳಿವೆ. ಕೃಷ್ಣಾ ನದಿಯು ತಾಲೂಕಿನುದ್ದಕ್ಕೂ ಹರಿದು ಹೋಗುವುದರಿಂದ ರೈತರಿಗೆ ಅನುಕೂಲಕರವಾಗಿದೆ. ಅಥಣಿಯು ಸುಮಾರು ೮೯ ಗ್ರಾಮಗಳನ್ನೊಳಗೊಂಡಿದೆ. ಇದಲ್ಲದೆ ಅಥಣಿಯು ಶೈಕ್ಷಣಿಕವಾಗಿಯೂ ಪ್ರಗತಿ ಹೊಂದಿದ್ದು ೩೦೦ರಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳಿದ್ದು, ಸುಮಾರು ೧೫ಕ್ಕೂ ಹೆಚ್ಚು ಮಹಾವಿದ್ಯಾಲಯಗಳನ್ನು ಹೊಂದಿದೆ. ಸುಮಾರು ೬೮% ಜನರು ಶಿಕ್ಷಣವಂತರಿದ್ದಾರೆ. ಗಡಿಯ ಮಹರಾಷ್ಟ್ರದ ನಗರಗಳಾದ ಮಿರಜ, ಸಾಂಗಲಿ, ಜತ್ತ ಹಾಗೂ ರಾಜ್ಯದ ಪ್ರಮುಖ ಮತ್ತು ವಾಣಿಜ್ಯ ನಗರಗಳಿಗೆ ರಸ್ತೆಯ ಸಂಪರ್ಕವನ್ನು ಹೊಂದಿರುತ್ತದೆ.

ಪ್ರೇಕ್ಷಣೀಯ ಸ್ಥಳಗಳು[ಬದಲಾಯಿಸಿ]

ಅಥಣಿಯು ಎಲ್ಲ ಮತಧರ್ಮಗಳ ಸಂಗಮವಾಗಿದ್ದು, ಶಾಂತಿ ಸೌಹಾರ್ದತೆಗೆ ಹೆಸರಾಗಿದೆ. ಚಾರಿತ್ರಿಕ ಹಾಗೂ ಪೌರಾಣಿಕ ಹಿನ್ನೆಲೆಯನ್ನು ಹೊಂದಿರುವ ಅಥಣಿಯು ಶ್ರೀ ಶಿವಯೋಗಿ ಮುರುಘೇಂದ್ರ ಮಹಾಸ್ವಾಮಿಗಳ ತಪೋ ಭೂಮಿ ಪುಣ್ಯ ಕ್ಷೇತ್ರವೆಂದೇ ಪ್ರಸಿದ್ಧವಾಗಿದೆ. ಇದು ಹತ್ತು ಹಲವು ಪ್ರೇಕ್ಷಣಿಯ ಮತ್ತು ಪ್ರವಾಸಿ ತಾಣಗಳನ್ನು ಹೊಂದಿದ್ದು, ಈ ತಾಲೂಕು ಸಾಂಸ್ಕೃತಿಕ ಪರಂಪರೆಯಲ್ಲಿ, ಸಾಹಿತ್ಯಿಕ ಹಾಗೂ ಧಾರ್ಮಿಕ ರಂಗದಲ್ಲಿ ಅಭಿವೃದ್ದಿಯನ್ನು ಕಂಡಿದೆ. ಅಥಣಿ ತಾಲೂಕಿನಲ್ಲಿ ೧೨೦ ಮಠಗಳು ಸ್ಥಾಪನೆಯಾಗಿದ್ದವು ಎಂದು ತಿಳಿದುಬರುತ್ತದೆ. ಆದರೆ ಇಂದು ಗುರುತಿಸಬಹುದಾದ ಕೇವಲ ೧೦ ಮಠಗಳು ಅಸ್ತಿತ್ವದಲ್ಲಿದ್ದು; ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿವೆ. ಇಲ್ಲಿಯ ಧಾರ್ಮಿಕ ಸ್ಥಾನಗಳು ಕರ್ನಾಟಕವಷ್ಟೇ ಅಲ್ಲದೆ ಬೇರೆ ಬೇರೆ ರಾಜ್ಯದ ಭಕ್ತರನ್ನು ಆಕರ್ಷಿಸಿವೆ. ಇಲ್ಲಿರುವ ಪ್ರತಿಮಠಗಳು ತಮ್ಮದೇ ಆದ ಚಾರಿತ್ರಿಕ ಹಿನ್ನೆಲೆ ಹಾಗೂ ವಿಶಿಷ್ಟ ಪರಂಪರೆಯನ್ನು ಹೊಂದಿವೆ. ಇಲ್ಲಿಯ ಧಾರ್ಮಿಕ ಪರಿಸರದ ಹಿನ್ನಲೆಯನ್ನು ಅವಲೋಕಿಸಿದಾಗ ಈ ತಾಲೂಕಿನ ಧರ್ಮ ಪರಂಪರೆ ವೈಶಿಷ್ಟಪೂರ್ಣವಾಗಿ ಬೆಳೆದು ಬಂದಿರುವುದನ್ನು ಕಾಣಬಹುದಾಗಿದೆ.

ದಕ್ಷಿಣದ ಕಾಶಿ

ಅಥಣಿಯಲ್ಲಿ ಗಂಗಾನದಿಯ ಪರ್ಯಾಯ ಹೆಸರಾದ ಭಾಗೀರಥಿ ಹೆಸರಿನ ಹಳ್ಳವು ದಕ್ಷಿಣದಿಂದ ಉತ್ತರಕ್ಕೆ ಹರಿಯುತ್ತ ಮುಂದೆ ಪೂರ್ವದಿಂದ ಪಶ್ಚಿಮಕ್ಕೆ ಹರಿಯುತ್ತ ಹೋಗಿದೆ. ಕಾಶಿಯಲ್ಲಿ ಗಂಗಾನದಿ ಉತ್ತರಕ್ಕಷ್ಟೆ ಹರಿದರೆ ಇಲ್ಲಿ ಭಾಗೀರಥಿ ತೊರೆ ಉತ್ತರಕ್ಕೂ ಮತ್ತು ಪಶ್ಚಿಮಕ್ಕೂ ಹರಿದಿದೆ. ಇದರಿಂದ ಕಾಶಿಗಿಂತಲೂ ಅಧಿಕ ಪುಣ್ಯಸ್ಥಾನ ಹಾಗೂ ದಕ್ಷಿಣದ ಕಾಶಿ ಎಂತಲೂ ಹೆಸರಾಗಿದೆ.[ಸೂಕ್ತ ಉಲ್ಲೇಖನ ಬೇಕು]

ಶ್ರೀ ಸಿದ್ದೇಶ್ವರ ದೇವಾಲಯ

ಪೂರ್ವ ಕಾಲದಲ್ಲಿ ತಪಸ್ವಿಗಳೊಬ್ಬರಲ್ಲಿ ಈ ಸ್ಥಾನದ ಮಾಹಿತಿ ಅರಿತು ಎರಡೂ ದಿಕ್ಕಿಗೆ ತೊರೆ ಹರಿವ ಮಧ್ಯದ ಸ್ಥಳದಲ್ಲಿ ತಮ್ಮ ತಪಃಸ್ಥಾನವನ್ನಾಗಿರಿಸಿಕೊಂಡು ತಪಸ್ಸು ಆಚರಿಸಿದ್ದರು ಹಾಗೂ ಇಲ್ಲಿ ತಮ್ಮ ಆಶ್ರಮ ಕಟ್ಟಿಕೊಂಡು ಅನೇಕ ವಟುಗಳಿಗೆ ವಿದ್ಯೆ ನೀಡಿದರು. ಇವರು ಸಿದ್ದೇಶ್ವರ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದರು. ಅದೇ ಸ್ಥಾನದಲ್ಲಿ ಈ ತಪಸ್ವಿಗಳ ಕರ್ತೃಗದ್ದುಗೆ ಇದೆ. ಈ ಮಹಿಮರ ತಪಃಶಕ್ತಿಗೆ ತಲೆಬಾಗಿ ಅಂದಿನ ವಿಜಾಪುರದ ಆದಿಲ್‌ಶಾಹಿ ಮನೆತನದ ಅರಸು ಈ ಮಹಿಮರ ಕರ್ತೃಗದ್ದುಗೆ ಸುತ್ತ ಗುಮ್ಮುಟಾಕೃತಿಯಿಂದ ಮಂದಿರೊನಿರ್ಮಿಸಿ, ಮೇಲೆ ಅರ್ಧ ಚಂದ್ರಾಕೃತಿ ಸಹಿತ ಕಳಶ ಏರಿಸಿದ. ಅದುವೆ ನಾವಿಂದು ಕಾಣುವ ಸಿದ್ದೇಶ್ವರ ದೇವಾಲಯ. ಇದು ಹಿಂದೂ-ಮುಸ್ಲಿಮರ ಐಕ್ಯತೆಯ ಸಂಕೇತವಾಗಿದೆ. ಈ ದೇವಾಲಯವನ್ನು ಹೊರಗಿನಿಂದ ನೋಡಿದರೆ ಮಸೀದಿಯಂತೆ ತೋರುತ್ತದೆ. ಒಳಗೆ ಗರ್ಭಗುಡಿಯಲ್ಲಿ ಹಿಂದೂ ತಪಸ್ವಿಯ ಕರ್ತೃಗದ್ದುಗೆ ಇದ್ದು ಹಿಂದೂ ಪದ್ಧತಿ ಪ್ರಕಾರ ಪೂಜೆ ನಡೆಯುತ್ತದೆ. ಇಂದಿಗೂ ಹಿಂದೂ-ಮುಸ್ಲಿಂ ಹಾಗೂ ಇನ್ನುಳಿದ ಧರ್ಮದವರು ಜಾತಿ ಭೇದವಿಲ್ಲದೆ ಈ ಮಹಾತ್ಮನಿಗೆ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಇಲ್ಲಿ ಯಾರು ಭಕ್ತಿಯಿಂದ ನಡೆದುಕೊಳ್ಳುವರೊ ಅವರ ಮನೋಕಾಮನೆಗಳನ್ನು ಈ ದೇವ ಪೂರೈಸುತ್ತಾನೆ. ಪೂರೈಸುವ ಸಿದ್ಧ ಅಭಯಹಸ್ತ ಇರುವುದರಿಂದ ಸಿದ್ಧೇಶ್ವರ ಎಂಬ ಅಭಿದಾನ ಈತನಿಗಿದೆ. ಸಿದ್ದೇಶ್ವರನೆ ಇಲ್ಲಿ ಪ್ರಭು ಹಾಗೂ ಗ್ರಾಮದೇವ. ಸಿದ್ಧೇಶ್ವರ ಜಾತ್ರೆ ಕಾರ್ತಿಕ ಮಾಸದಲ್ಲಿ ಜರುಗುವುದು. ಈತ ಇವತ್ತಿಗೂ ತನ್ನ ಮಹಿಮೆಯನ್ನು ತೋರುವನು ಎಂಬುದು ಜನಜನಿತವಾಗಿದೆ. ಈ ತಪಸ್ವಿಗಳ ಸಮಕಾಲೀನ ಇನ್ನೋರ್ವ ತಪಸ್ವಿಗಳಿದ್ದರು ಅವರೇ ಗವಿಸಿದ್ಧೇಶ್ವರ, ಇವರ ಕರ್ತೃಗದ್ದುಗೆ ಇದ್ದ ದೇವಾಲಯವು ಈ ಸಿದ್ಧೇಶ್ವರ ದೇವಾಲಯ ಎದುರಿನ ದಕ್ಷಿಣಕ್ಕಿರುವ ಚಿಕ್ಕ ಗುಡ್ಡದ ಮೇಲಿದೆ. ಇಂದಿಗೂ ಶ್ರಾವಣ ಮಾಸದಲ್ಲಿ ಜಾತ್ರೆ ನಡೆಯುವುದು. ಇಲ್ಲಿ ಎರಡು ಪುರಾತನ ಗವಿಗಳಿದ್ದು ಅವು ಕಾಶಿಗೆ ದಾರಿ ತೋರಿಸುತ್ತವೆ ಎಂಬ ನಂಬಿಕೆಯೂ ಇದೆ. ಈ ಗವಿಗಳು ವೈಶಿಷ್ಟ್ಯಪೂರ್ಣವಾಗಿವೆ.

ಶ್ರೀ ಸುಕ್ಷೇತ್ರ ಗಚ್ಚಿನ ಮಠ

ಅಥಣಿಯ ಪ್ರಸಿದ್ಧವಾದ ಶ್ರೀಗಚ್ಚಿನ ಮಠ ಸ್ಥಾಪನೆ ೧೬ನೇ ಶತಮಾನದಲ್ಲಿ ರೇವಣಸಿದ್ಧ ಸ್ವಾಮಿಗಳಿಂದ ನಡೆಯಿತು. ಇವರು ಲೋಕ ಸಂಚಾರ ಕೈಗೊಂಡು ಇಲ್ಲಿಗೆ ಬಂದು ನೆಲೆಸಿ ಧರ್ಮೋಪದೇಶವನ್ನು ಮಾಡುವುದರ ಮೂಲಕ, ಜನರಲ್ಲಿ ಧರ್ಮ ಜಾಗೃತಿಯನ್ನು ಉಂಟು ಮಾಡುತ್ತ ಅಥಣಿಯಲ್ಲಿ ಮಠವನ್ನು ಸ್ಥಾಪನೆ ಮಾಡಿ ಧಾರ್ಮಿಕ, ಸಾಮಾಜಿಕ, ಕಾರ್ಯಗಳನ್ನು ಹಾಗೂ ಅನ್ನದಾಸೋಹ ನಡೆಯುವಂತೆ ವ್ಯವಸ್ಥೆಗೊಳಿಸಿದರು. ಶ್ರೀ ಮಠವು ಮುರಘಾ ಸಂಪ್ರದಾಯದ ವಿರಕ್ತ ಮಠವಾಗಿದೆ. ಅಂದು ಸ್ಥಾಪನೆಗೊಂಡ ಈ ಮಠದಲ್ಲಿ ಅನೇಕ ಗುರುವರ್ಯರು ತಪಸ್ಸು ಗೈದಿದ್ದಾರೆ. ಶ್ರೀ ಮುರುಘೇಂದ್ರ ಶಿವಯೋಗಿಗಳು (ಕ್ರಿ.ಶ.೧೮೩೬ ರಿಂದ ೧೯೨೧) ಕರ್ನಾಟಕದ ಸಾಂಸ್ಕೃತಿಕ ಧಾರ್ಮಿಕ ಕ್ಷೇತ್ರಕ್ಕೆ ಹಿನ್ನೆಲೆಯಾಗಿ ನಿಂತ ಪುಣ್ಯವ್ಯಕ್ತಿಯೆಂದು ಅವರ ಚರಿತ್ರೆಯಿಂದ ತಿಳಿದು ಬರುತ್ತದೆ. ಶ್ರೀ ಕ್ಷೇತ್ರ ಗಚ್ಚಿನ ಮಠದ ಹೆಸರು ಇತಿಹಾಸ ಪುಟದಲ್ಲಿ ಮೂಡಿರುವುದು ಈ ತಪಸ್ವಿಗಳಿಂದಲೇ. ವೀರಶೈವ ಶಿವಯೋಗದ ಸಾಧಕರಲ್ಲಿ ಪ್ರಮುಖರು. ವೈರಾಗ್ಯ ಮೂರ್ತಿಗಳಾದ ಶ್ರೀ ಶಿವಯೋಗಿಗಳು ಮಠದ ಅಧಿಕಾರ ವಹಿಸಿಕೊಳ್ಳದೇ ಬಸವ ತತ್ವ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡು ನುಡಿದಂತೆ ನಡೆದವರು. ಇದರಿಂದ ಇಲ್ಲಿ ಅನೇಕ ಪವಾಡಗಳಾಗಿವೆ. ಸುಮಾರು ೧೯೧೫ರಲ್ಲಿ ಲೋಕಮಾನ್ಯ ತಿಲಕರು ಇಲ್ಲಿಗೆ ಬಂದಾಗ ಇವರ ದರ್ಶನ ಪಡೆದುಕೊಂಡು, ಭಾರತಕ್ಕೆ ಸ್ವಾತಂತ್ರ್ಯ ಸಿಗುವುದೆ? ಎಂದು ಕೇಳಿದಾಗ, ಇವರು ಸ್ವಾತಂತ್ರ್ಯ ಸಿಗುತ್ತದೆ. ಆದರೆ ಅದನ್ನು ಕಾಣುವ ಭಾಗ್ಯ ನನಗೂ ಇಲ್ಲ, ನಿಮಗೂ ಇಲ್ಲ ಎಂದರು. ಅಂತೆಯೇ ಸ್ವಾತಂತ್ರ್ಯ ಪೂರ್ವದಲ್ಲಿ ಈರ್ವರೂ ಕಾಲವಶರಾದರು. ಮೈಸೂರು ಒಡೆಯರು, ಶಿರಸಂಗಿ ಲಿಂಗರಾಜರು ಅಲ್ಲದೇ ನಾಡಿನ ಇನ್ನೂ ಹೆಸರಾಂತ ಗಣ್ಯರು ಇಲ್ಲಿಗೆ ಭೇಟಿ ನೀಡಿ ಶಿವಯೋಗಿಗಳ ಮತ್ತು ಶ್ರೀ ಮಠದ ದರ್ಶನ ಪಡೆದಿದ್ದಾರೆ. ಪ್ರತಿವರ್ಷ ಶಿವರಾತ್ರಿ ಸಮಯದಲ್ಲಿ ಶರಣ ಸಂಸ್ಕೃತಿ ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ದವನದ ಹುಣ್ಣಿಮೆಯಂದು ಶ್ರೀ ಶಿವಯೋಗಿಗಳ ಜಾತ್ರೆ ರಥೋತ್ಸವ ೫ ದಿನಗಳವರೆಗೆ ವೈಭವ ಹಾಗೂ ಸಂಭ್ರಮದಿಂದ ನಡೆಯುವುದು. ಎಲ್ಲ ಧರ್ಮಿಯರು ಭೇದ ಭಾವವಿಲ್ಲದೆ ಶ್ರದ್ಧೆ ಹಾಗೂ ಭಕ್ತಿಯಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ಇಂದಿಗೂ ಕಾಣಬಹುದಾಗಿದೆ. ಮಠದಲ್ಲಿ ಶ್ರೀ ಶಿವಯೋಗಿಗಳ ಗುರುಗಳಾದ ಶ್ರೀ ಮರುಳಶಂಕರ ಸ್ವಾಮಿಗಳ ಗುದ್ದುಗೆ ಹಾಗೂ ಶಿವಯೋಗಿಗಳ ಸಮಕಾಲೀನರು ಅಂದಿನ ೯ನೇ ಮಠಾಧೀಶರಾದ ಶ್ರೀ ಸಿದ್ಧಲಿಂಗಮಹಾಸ್ವಾಮಿಗಳ ಕರ್ತೃ ಗದ್ದುಗೆಗಳು ಇಲ್ಲಿವೆ. ಇಂದಿಗೂ ತ್ರಿಕಾಲದಲ್ಲಿ ಪೂಜೆ ನಡೆಯುವುದು. ಸಾಕಷ್ಟು ಜನ ಭಕ್ತಿ ಶ್ರದ್ಧೆಯಿಂದ ಈ ಪೂಜೆಯಲ್ಲಿ ಪಾಲುಗೊಳ್ಳುವುದನ್ನು ಕಾಣಬಹುದಾಗಿದೆ. ಅಲ್ಲದೇ ನಾಡಿನ ನಾನಾ ಕಡೆಯಿಂದ ಅಸಂಖ್ಯಾತ ಭಕ್ತರು ಮಠಕ್ಕೆ ಬಂದು ಪೂಜ್ಯರ ರ್ಶನ ಪಡೆಯುವುದನ್ನು ಕಾಣಬಹುದಾಗಿದೆ. ಹೀಗೆ ಶ್ರೀ ಮುರುಘೇಂದ್ರ ಶಿವಯೋಗಿಗಳ ಪ್ರಭಾವ ಅಥಣಿಯನ್ನು ವಿಶ್ವವಿಖ್ಯಾತವನ್ನಾಗಿ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗೋಚರವಾಗುವಂತೆ ಮಾಡಿದೆ. ಇಂದಿನ ಮಠಾಧಿಪತಿಗಳಾದ ಶ್ರೀ.ಮ.ನಿ.ಪ.ಶಂಕರ ಮಹಾಸ್ವಾಮಿಗಳು ಹಲವಾರು ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುವುದನ್ನು ಕಾಣಬಹುದು.

ಮೋಟಗಿ ಮಠ

ಶೂನ್ಯ ಪೀಠದ ದಿವ್ಯ ಪರಂಪರೆಯನ್ನು ಹೊಂದಿದ ಸುಕ್ಷೇತ್ರ ಮೋಟಗಿ ಮಠ ಸುಮಾರು ೩೫೦ ವರ್ಷಗಳ ಸುದೀರ್ಘ ಸಾಂಸ್ಕೃತಿಕ ಐತಿಹ್ಯದೊಂದಿಗೆ ಶೋಭಾಯಮಾನ ವಾಗಿದೆ. ಹಲವಾರು ಪುರಾತನ ಗ್ರಂಥಗಳ ಸಂಗ್ರಹ ಹೊಂದಿದೆ. ಈ ಪೀಠವನ್ನು ೭ ಗುರುಗಳು ಆರೋಹಣ ಮಾಡಿದ್ದು, ಈಗಿನ ಶ್ರೀ ಮ.ನಿ.ಪ.ಪ್ರಭು ಚನ್ನಬಸವ ಮಹಾಸ್ವಾಮಿಜಿಯವರು ೮ನೆಯವರು. ಇದು ಬೆಳಗಾವಿ ಜಿಲ್ಲೆಯ ಕ್ರಿಯಾಶೀಲ ಮಠಗಳಲ್ಲಿ ಒಂದಾಗಿದೆ. ವೈಚಾರಿಕತೆಯನ್ನು ಬಿತ್ತುತ್ತಿರುವ ಶ್ರೀ ಮಠದ ಪೂಜ್ಯರು ಗೊಡ್ಡು ಸಂಪ್ರದಾಯಗಳಿಗೆ ತಿಲಾಂಜಲಿ ಇಟ್ಟಿದ್ದಾರೆ. ದುಶ್ಚಟಗಳ ನಿರ್ಮೂಲನೆಗೆ ಆಂದೋಲನಗಳನ್ನು ಮಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ತಾಲೂಕಿನ ಧರ್ಮ ಜಾಗೃತಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ಸಾಹಿತ್ಯ ಸಂಸ್ಕೃತಿಗಳ ಸಂಗಮವಾಗಿದೆ. ಶ್ರೀ ಚನ್ನಬಸವ, ಶಿವಯೋಗಿಗಳ ಸಾಧನೆಯ ಗರಡಿಯಾದ ಮೋಟಗಿ ಮಠವನ್ನು ಕನ್ನಡದ ಸಾಂಸ್ಕೃತಿಕ ಕೇಂದ್ರವಾಗಿ ರೂಪಿಸಿದ ಶ್ರೇಯಸ್ಸು ಇಂದಿನ ಮಠಾಧಿಪತಿಗಳಿಗೆ ಸಲ್ಲುತ್ತದೆ. ಈ ಮಠವನ್ನು ಮಾನವ ಕಲ್ಯಾಣದತ್ತ ಕರೆದೊಯ್ಯುತ್ತಿರುವ ಪೂಜ್ಯರು ಕ್ರಿಯಾಶೀಲಗುರುಗಳಾಗಿ ಶ್ರೀ ಮೋಟಗಿ ಮಠದ ಕೀರ್ತಿಯನ್ನು ಉನ್ನತೀಕರಣ ಗೊಳಿಸಿರುವರು. ವರ್ಷದುದ್ದಕ್ಕೂ ಅನೇಕ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಕಾಯಕ ಧರ್ಮ ಮನೋಭಾವನೆಯ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರವಹಿಸಿದೆ. ಇಲ್ಲಿ ಶ್ರೀ ಮುರುಘೇಂದ್ರ ಶಿವಯೋಗಿಗಳ, ಚನ್ನಬಸವ ಶಿವಯೋಗಿಗಳ ಮತ್ತು ಹಲವಾರು ತಪಸ್ವಿಗಳ ಕರ್ತೃ ಗದ್ದುಗೆಗಳಿವೆ. ಪ್ರತಿ ವರ್ಷ ಇಲ್ಲಿ ನಡೆಯುವ ಶರಣ ಸಂಸ್ಕೃತಿ ಉತ್ಸವ ಬಹುವೈಶಿಷ್ಟ್ಯ ಪೂರ್ಣವಾಗಿದೆ. ಕರ್ನಾಟಕದ ಗಡಿಭಾಗದಲ್ಲಿ ಕನ್ನಡವನ್ನು ಗಟ್ಟಿಯಾಗಿ ಇರಿಸುವಲ್ಲಿ ಅತ್ಯಂತ ಪ್ರಶಂಸನೀಯ ರೀತಿಯಲ್ಲಿ ಕಾರ್ಯಗೈಯುತ್ತಿದೆ.

ಶೆಟ್ಟರ ಮಠ

ಸುಮಾರು ೧೬೮೦ರಲ್ಲಿ ರುದ್ರಮುನಿ ಹೆಸರಿನ ವಿರಕ್ತಸ್ವಾಮಿಗಳು ಅಥಣಿಗೆ ಬರುತ್ತಾರೆ. ಅವರಿಗೆ ಇಲ್ಲಿನ ಪ್ರಸಿದ್ಧ ಶೆಟ್ಟಿ ಮನೆತನದ ಹಿರಿಯರು ಊರ ಮಧ್ಯದ ತಮ್ಮ ಸ್ಥಳ ಹಾಗೂ ಹೊಲವನ್ನು ದಾನವಾಗಿ ಕೊಟ್ಟು, ಅವರಿಗೆ ಆ ಸ್ಥಳದಲ್ಲಿ ವಾಸಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ. ಭಕ್ತರೆಲ್ಲ ಕೂಡಿ ಕುಮಾರ ಸಮಯದ ಮಠ ಕಟ್ಟುತ್ತಾರೆ. ಆ ಸ್ಥಳವನ್ನು ದಾನವಾಗಿ ಶೆಟ್ಟರು ಕೊಟ್ಟಿದ್ದರಿಂದ ಅದಕ್ಕೆ ಶೆಟ್ಟರ ಮಠವೆಂಬ ಹೆಸರು ಬಂದಿತು. ಇಲ್ಲಿ ಆಗಿ ಹೋದಂತಹ ಮರುಳಸಿದ್ಧ ಶಿವಯೋಗಿಗಳು ತಪಸ್ವಿಗಳು, ಇಷ್ಟಲಿಂಗದೊಡನೆ ಮಾತನಾಡುವ ಅಪೂರ್ವ ಸಿದ್ಧ ಪುರುಷರು ಆಗಿದ್ದರು. ಅಥಣಿಯ ಆಧ್ಯಾತ್ಮದ ಔನ್ಯತ್ತದ ಕೀರ್ತಿಗೆ ಕಳಶವಿತ್ತವರು ಮರುಳಸಿದ್ಧರು. ಇವರ ಬದುಕೆ ಒಂದು ಪವಾಡವಾಗಿತ್ತು. ಮಠದಲ್ಲಿ ಶ್ರೀ ಮರುಳಸಿದ್ಧ ಶಿವಯೋಗಿಗಳ ಕರ್ತೃ ಗದ್ದುಗೆ ಇದೆ. ಇಂದಿನ ಮಠಾಧಿಪತಿಗಳಾದ ಶ್ರೀ ಮ.ನಿ.ಪ್ರ.ಶಂಕರ ಮಹಾಸ್ವಾಮಿಗಳು ಹಲವಾರು ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುವುದನ್ನು ಕಾಣಬಹುದು.

ಗೋಟಖಿಂಡಿ ಮಠ

೧೬೯೦ರಲ್ಲಿ ಶ್ರೀ ಶಿವಲಿಂಗಯ್ಯ ಹೆಸರಿನ ವಿರಕ್ತ ಸ್ವಾಮಿಗಳು ಇಲ್ಲಿಗೆ ಬಂದಾಗ ಅವರಿಗೆ ಊರಿನ ಗೋಟಖಿಂಡಿ ಮನೆತನದ ಹಿರಿಯರು ತಮ್ಮ ಜಾಗೆಯಲ್ಲಿ ಮಠ ಕಟ್ಟಿಸಿಕೊಟ್ಟು ಸ್ವಲ್ಪ ಜಮೀನನ್ನು ದಾನವಾಗಿ ಕೊಟ್ಟರು. ಅದುವೆ ಇಂದಿನ ಗೋಟಖಿಂಡಿ ಮಠ. ಇಲ್ಲಿ ಲಿಂಗೈಕ್ಯ ಮಹಾಂತ ಸ್ವಾಮಿಗಳ ಗದ್ದುಗೆ ಇದೆ. ಈಗ ಈ ಮಠವು ಜಂಗಮಲಿಂಗ ಕ್ಷೇತ್ರವಾದ ಶ್ರೀ ಮೋಟಗಿ ಮಠದ ಪೀಠಾಧಿಪತಿಗಳಾದ ಶ್ರೀ.ಮ.ನಿ.ಪ. ಪ್ರಭು ಚನ್ನಬಸವ ಮಹಾಸ್ವಾಮಿಜಿಯವರ ಅಧೀನದಲ್ಲಿದ್ದು, ಮಠ ನವೀಕರಣಗೊಂಡು ಇಲ್ಲಿಯೂ ಕೂಡ ಅನೇಕ ಧಾರ್ಮಿಕ, ಜನಜಾಗೃತಿಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದುಕೊಂಡು ಬರುತ್ತಿವೆ. ಹೀಗೆ ಅಥಣಿಯು ಗಚ್ಚಿನಮಠ, ಮೋಟಗಿ ಮಠ, ಶೆಟ್ಟರ ಮಠಗಳ ತ್ರಿವೇಣಿ ಸಂಗಮವಾಗಿದೆ. ೬೩ ಪುರಾತನರ ಪೂಜಾ ಮಹೋತ್ಸವದ ಸ್ಮಾರಕವಾಗಿ ೧೯೧೮ರಲ್ಲಿ ಶ್ರೀ ಶಿವಯೋಗಿಗಳ ಪರುಷ ಹಸ್ತದಿಂದ ಲಿಂಗ ಪ್ರತಿಷ್ಠಾಪನೆಯಾಗಿರುವ ಪುರಾತನೇಶ್ವರ ದೇವಾಲಯ ಊರ ಹೊರಗೆ ಇದೆ. ಇಲ್ಲಿಯೇ ಸಮೀಪದಲ್ಲಿಯೇ ಶ್ರೀ ಶಿವಯೋಗಿಗಳು ಅನುಷ್ಠಾನ ಮಾಡಿದ ‘ಗವಿಮಠ’ ಇದೆ. ಪ್ರಶಾಂತ ಸ್ಥಳ ಹಾಗೂ ಅನುಷ್ಠಾನ ಮಾಡಲು ಈ ಮಠದ ಒಳಗೆ ಒಂದು ಸುಂದರವಾದ ಗವಿಯು ಇದೆ. ಇಲ್ಲಿ ಗಚ್ಚಿನ ಮಠದೊಡೆಯರಾದ ೪ನೆಯ ಮತ್ತು ೭ನೆಯ ಶ್ರೀ ಮುರುಘೇಂದ್ರ ಸ್ವಾಮಿಗಳ ಹಾಗೂ ೨ನೇ ಗುರುಶಾಂತ ಸ್ವಾಮಿಗಳ ಗದ್ದುಗೆಗಳಿವೆ. ಇಲ್ಲಿಯೇ ಸ್ವಲ್ಪ ದೂರದಲ್ಲಿ ಶ್ರೀ ಶಿವಯೋಗಿಗಳ ಆಶೀರ್ವಾದದ ಫಲವಾಗಿ ರೂಪುಗೊಂಡ ಹೊಸಗುಂಡ (ಅಪ್ಪಗಳವರ ಗುಂಡ) ಇದೆ. ಶ್ರೀ ಶಿವಯೋಗಿಗಳು ಕೈ ಶೋಭಿಸುತ್ತಿರುವುದನ್ನು ಇಂದಿಗೂ ನೋಡಬಹುದು. ಸಾಕಷ್ಟು ಭಕ್ತ ಸಮೂಹ ಇವುಗಳ ದರ್ಶನ ಪಡೆಯುವುದನ್ನು ಕಾಣಬಹುದಾಗಿದೆ. ಹೀಗೆ ಈ ಮಠಗಳೆಲ್ಲವೂ ಅಪಾರ ಭಕ್ತ ಸಮೂಹ ಹೊಂದಿ ಜಾಗೃತ ಸ್ಥಾನಗಳಾಗಿ ಇಲ್ಲಿಯ ಧಾರ್ಮಿಕ ಪರಿಸರವನ್ನು ಇನ್ನಷ್ಟು ಪವಿತ್ರಗೊಳಿಸಿವೆ. ಕರ್ನಾಟಕದ ಆಧ್ಯಾತ್ಮಿಕ ಕೇಂದ್ರಗಳಾಗಿ ವೀರಶೈವ ಪರಂಪರೆಯ ಪುನಶ್ಚೇತನದಲ್ಲಿ ವಹಿಸಿರುವ ಪಾತ್ರ ಗಮನಾರ್ಹವಾದುದು. ಶರಣ ಸಂಸ್ಕೃತಿಯನ್ನು ಚಾಚುತಪ್ಪದೆ ಅನುಸರಿಸಿಕೊಂಡು ಬಂದ ಈ ಪ್ರದೇಶದ ಮಠಗಳು ಅಥಣಿಗೆ ಆಧ್ಯಾತ್ಮಿಕ ದೀಕ್ಷೆ ನೀಡಿವೆ.

ಅಮೃತ ಲಿಂಗೇಶ್ವರ ದೇವಾಲಯ

ಊರ ಮಧ್ಯದಲ್ಲಿ ಜಕ್ಕಣನ ಶಿಲ್ಪಕಲೆಗಳನ್ನು ನೆನಪಿಸುತ್ತಿರುವ ಅಮೃತ ಲಿಂಗೇಶ್ವರ ಗುಡಿ ಇದೆ. ಇದು ಪುರಾತನ ದೇವಾಲಯ, ಇಲ್ಲಿ ಚಾಲುಕ್ಯ ಶೈಲಿಯ ಕಲಾತ್ಮಕ ಸ್ತಂಭಗಳೊಂದಿಗೆ ನವರಂಗ, ಗರ್ಭಗೃಹ ಮುಖಮಂದಿರ ಇದೆ. ನವರಂಗದ ಜಾಲಂಧ್ರಗಳು ಆಕರ್ಷಿಸುವವು. ಗರ್ಭಗೃಹದಲ್ಲಿ ಒಳ್ಳೆ ಕಲಾತ್ಮಕ ಚಿತ್ರಗಳಿವೆ ಹಾಗೂ ನಂಬಿಕೆಗಳಿರುವ ಶಿಲ್ಪಗಳಿವೆ. ಗರ್ಭಗೃಹದಲ್ಲಿ ಈಶ್ವರ ಮತ್ತು ನಂದಿ ವಿಗ್ರಹ ಇದೆ. ಪ್ರತಿ ದಿನವು ಪೂಜೆ ನಡೆಯುತ್ತದೆ. ಈ ಶಿಖರವು ಹಾನಿಗೊಳಗಾಗಿದೆ. ಸನಿಹದಲ್ಲಿಯೇ ಗಜಾನನ ಮಂದಿರ ಹಾಗೂ ಕಲ್ಲೇಶ್ವರ ದೇವಾಲಯ ಸ್ವಲ್ಪ ಅಂತರದಲ್ಲಿಯೇ ಶ್ರೀ ನರಸಿಂಹ ದೇವಾಲಯ, ವಿರೂಪಾಕ್ಷ ದೇವಾಲಯ, ಮಲ್ಲಿಕಾರ್ಜುನ ದೇವಾಲಯ, ವೀರಣ್ಣನ ದೇವಾಲಯ, ಅಂಬಾಭವಾನಿ ಗುಡಿ, ದಕ್ಷಿಣಕ್ಕೆ ವಿಶಾಲವಾದ ಮಾರುತಿ ಮಂದಿರ, ಸಮೀಪದಲ್ಲಿಯೇ ವಿಶಾಲ ಅಂಗಳದಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯವಿದೆ. ಇವುಗಳಲ್ಲದೆ ಬೀರಪ್ಪನ ಗುಡಿ, ಗಣಪತಿ ದೇವಾಲಯಗಳನ್ನು ಕಾಣಬಹುದಾಗಿದೆ. ಇಲ್ಲಿನ ರಾಮ ಮಂದಿರ ಸಮರ್ಥ ರಾಮದಾಸರಿಂದ ಸ್ಥಾಪಿಸಲ್ಪಟ್ಟಿದೆ.

ಶ್ರೀ ರಾಘವೇಂದ್ರ ಸ್ವಾಮಿಗಳ ಮಠ

ಆಂಧ್ರದಲ್ಲಿಯ ಮಂತ್ರಾಲಯದಷ್ಟು ಪವಿತ್ರತೆಯನ್ನು ಪಡೆದಿರುವ ಅಥಣಿಯ ಶ್ರೀರಾಯರ ಮಠವು ಊರಿನ ಪಶ್ಚಿಮಕ್ಕೆ ಇದ್ದು ಅಭಿನವ ಮಂತ್ರಾಲಯವೆಂದು ಉತ್ತರ ಕರ್ನಾಟಕದಲ್ಲಿ ಪ್ರಖ್ಯಾತಿ ಪಡೆದಿದೆ. ದಿ.ಭೀಮದಾಸರಿಂದ ಸ್ಥಾಪಿಸಲ್ಪಟ್ಟ ರಾಘವೇಂದ್ರ ಸ್ವಾಮಿಗಳ ಈ ಬೃಂದಾವನವು ಕರ್ನಾಟಕ ಮಹಾರಾಷ್ಟ್ರದ ಭಕ್ತ ಸಮೂಹವನ್ನು ಆಕರ್ಷಿಸುತ್ತಿದೆ. ಅಲ್ಲದೆ ಶ್ರಾವಣ ಮಾಸ ಪೌರ್ಣಿಮೆ ಅವಧಿಯಲ್ಲಿ ರಾಘವೇಂದ್ರ ಆರಾಧನಾ ಮಹೋತ್ಸವ ಜರುಗುವುದು. ಸುತ್ತಮುತ್ತಲಿನ ಭಕ್ತಾದಿಗಳು ಪಾಲುಗೊಳ್ಳುವರು. ಇವುಗಳಲ್ಲದೆ ಇಲ್ಲಿ ಅತಿ ಪ್ರಾಚೀನ ದೇವಾಲಯ ರಾಮಲಿಂಗ, ಎಲ್ಲಮ್ಮ, ವಿರೂಪಾಕ್ಷ ಲಿಂಗ, ಗಣಪತಿ ದೇವಾಲಯಗಳ ಜೊತೆಗೆ ಹಲವಾರು ಜೈನ ಬಸದಿಗಳಿವೆ ಮತ್ತು ಮಸೀದಿಗಳೂ ಇವೆ. ಇಲ್ಲಿ ಮಹಾಬೂಬ ಸುಬಾನಿ ದರ್ಗಾ, ಕರಿಮಸೂತಿ ಪ್ರಸಿದ್ಧವಾಗಿವೆ.

ಅವರಖೋಡ

ಅವರ ಖೋಡ ಹನುಮಂತನೆಂದು ಪ್ರಸಿದ್ಧವಾದ ಈ ಗ್ರಾಮ ಅಥಣಿಯಿಂದ ೧೧ ಕಿ.ಮೀ. ದೂರದಲ್ಲಿದೆ. ಅಮರಕೂಟ ಎಂಬುದು ಇದರ ಪ್ರಾಚೀನ ಹೆಸರಾಗಿರಬಹುದೆಂದು ತಿಳಿದುಬರುತ್ತದೆ. ಇಲ್ಲಿಯ ಹನುಮಂತ ದೇವಾಲಯ ಪ್ರಾಚೀನವಾಗಿದೆ. ಹನುಮಂತನ ಮೂರ್ತಿ ಸ್ವಯಂಭೂವಾಗಿದ್ದು, ಜಾಗೃತ ಸ್ಥಾನವೆಂಬ ಪ್ರಸಿದ್ದಿಯನ್ನು ಪಡೆದಿದೆ. ಸಾಕಷ್ಟು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಹನುಮ ಜಯಂತಿಯಂದು ಇಲ್ಲಿ ಉತ್ಸವ, ಅನ್ನಸಂತರ್ಪಣೆ ಕಾರ್ಯಕ್ರಮ ನಡೆದುಕೊಂಡು ಬರುತ್ತದೆ.

ದರೂರ

ಅಥಣಿಯಿಂದ ೧೦ ಕಿ.ಮೀ. ದೂರದಲ್ಲಿರುವ ಕೃಷ್ಣಾ ನದಿಯ ತೀರದ ಊರು. ದೌಮ್ಯನೆಂಬ ಋಷಿಯು ಇಲ್ಲಿ ತಪಸ್ಸು ಮಾಡಿದ ಕಾರಣದಿಂದ ಇದರ ಪ್ರಾಚೀನ ಹೆಸರು ದೌಮ್ಯಪುರ ಎಂದಿದ್ದು, ಇದೇ ನಂತರ ದರೂರ ಆಗಿದೆಯೆಂದು ಹೇಳುತ್ತಾರೆ. ಇಲ್ಲಿ ಅತ್ತಿಮರ ಎಂಬ ಶಾಂತ ತಾಣವೊಂದಿದೆ. ಜನರು ಅದನ್ನು ಬ್ರಹ್ಮನ ವಾಸಸ್ಥಾನದ ಗಿಡವೆಂದು ಪೂಜಿಸುತ್ತಾರೆ. ಈ ಊರಿನ ಮಾರುತಿ ಮೂರ್ತಿ ಪ್ರಸಿದ್ಧವಾಗಿದೆ. ಊರ ಅಗಸೆಯಲ್ಲಿ ಅವ್ವ ನಿಂಗವ್ವನ ಸಮಾಧಿ (ಗುಡಿ) ಇದೆ. ಜನರು ಇಲ್ಲಿ ಭಕ್ತಿಯಿಂದ ನಡೆದುಕೊಳ್ಳುವರು. ನಿಂಗವ್ವ ಗಾಣಿಗರ ಮನೆತನದ ಸಾಧ್ವಿಯಾಗಿದ್ದು ಅವಳ ತಲೆಯಲ್ಲಿ ಎರಡು ಕೋಡುಗಳಿದ್ದುವಂತೆ. ನೀರು ತರುವಾಗ ಕೋಡುಗಳ ಮೇಲೆ ಕೊಡ ತಿರುಗುತ್ತಿತ್ತೆಂದು ಹೇಳುತ್ತಾರೆ. ಧಾರ್ಮಿಕ ಪರಂಪರೆಯ ಅವಳು ಶ್ರೀಶೈಲ ಮಲ್ಲಿಕಾರ್ಜುನನ ಪರಮ ಭಕ್ತಳಾಗಿದ್ದಳು. ಕಾಲ್ನಡಿಗೆಯಿಂದ ಒಂದೇ ದಿನಕ್ಕೆ ಶ್ರೀಶೈಲಕ್ಕೆ ಹೋಗಿ ಮರಳಿ ಬಂದ ಪವಾಡ ಅವಳದು.

ನದಿ ಇಂಗಳಗಾಂವ

ಇದು ಮುರುಘೇಂದ್ರ ಶಿವಯೋಗಿಗಳು ಜನಿಸಿದ ಪವಿತ್ರ ಸ್ಥಳ. ಇವರು ಜನಿಸಿದ ಮನೆಯನ್ನೆ ದೊಡ್ಡ ಮಠವನ್ನಾಗಿ ಮಾಡಲಾಗಿದೆ. ಅಲ್ಲಿ ಅನ್ನದಾನ, ಪುರಾಣ ಪ್ರವಚನಗಳು ನಡೆಯುತ್ತವೆ. ಇಲ್ಲಿ ಬಸವಣ್ಣನ ಗುಡಿ ಇದ್ದು, ಕರಿಯ ಉಸುಕಿನಿಂದ ತಯಾರಾದ ಬಸವಣ್ಣನ ಮೂರ್ತಿಯು ಬಹಳ ಸುಂದರವಾಗಿದೆ. ಬಸವ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಅಚರಿಸುತ್ತಾರೆ.

ತೀರ್ಥ

ಪ್ರಾಚೀನ ಕಾಲದಿಂದಲೂ ತೀರ್ಥಸ್ಥಾನವೆನಿಸಿದ ಈ ಗ್ರಾಮದಲ್ಲಿನ ಒಂದು ಜೈನ ಬಸದಿ ಸುಂದರವಾಗಿದೆ.

ಸಪ್ತಸಾಗರ

ಸಪ್ತಸಾಗರ ಇದು ಪುರಾಣ ಪ್ರಸಿದ್ದಿಯ ಪುಣ್ಯಕ್ಷೇತ್ರವಾಗಿದೆ. ಪೌರಾಣಿಕ ಹಿನ್ನೆಲೆ ಹೊಂದಿದೆ. ಈ ಗ್ರಾಮ ಮಹಾಭಾರತದ ಕಥೆಯೊಂದಿಗೆ ಸಂಬಂಧ ಹೊಂದಿದೆ. ಮಹಾಭಾರತದ ಕೊನೆಯ ಅರಸ ಜನಮೇಜಯನು ಸರ್ಪಯಾಗ ಮಾಡಿದ ಸ್ಥಳವು ಇದೇ ಎಂದು ಹೇಳುತ್ತಾರೆ. ಸರ್ಪಯಾಗ ಪೂರ್ತಿಯಾಗಲಿಲ್ಲವೆಂದು ರಾಜನು ನೊಂದು ತೀರ್ಥಯಾತ್ರೆಗೆ ಹೊರಟಾಗ ಉತ್ತರವಾಹಿನಿ ಕೃಷ್ಣಾನದಿಯ ತಟಾಕದ ಈ ಊರಿನಲ್ಲಿ ಬಕಲಾಬ್ದ ಋಷಿಗಳನ್ನು ಭೆಟ್ಟಿಯಾಗಲು ಅವರು ಸರ್ಪಯಾಗ ಪೂರ್ಣ ಮಾಡಲು ಆಶೀರ್ವದಿಸಿದರಂತೆ. ಇದಕ್ಕೆ ಆಧಾರವೆಂಬಂತೆ ಊರ ಸುತ್ತಲೂ ಕರಿ ಮಣ್ಣಿನ ಭೂಮಿಯಿದ್ದರೂ, ಪೂರ್ವಭಾಗದ ಒಂದು ಸ್ಥಳದಲ್ಲಿ ಮಾತ್ರ ಶುಭ್ರ ಬೂದಿ ಮಾತ್ರ ದೊರೆಯುತ್ತದೆ. ಇದರಿಂದ ವಿಭೂತಿ ತಯಾರಿಸುತ್ತಾರೆ. ಅಲ್ಲದೆ ಪುರಾಣ ಪ್ರಸಿದ್ಧ ಸಪ್ತರ್ಷಿಗಳು ತಮ್ಮೊಡನೆ ತಂದ ಸಪ್ತಸಮುದ್ರಗಳ ನೀರನ್ನು ಉತ್ತರಾಭಿಮುಖಿಯಾದ ಕೃಷ್ಣೆಯಲ್ಲಿ ಬೆರೆಸಿ ಪವಿತ್ರಗೊಳಿಸಿದರೆಂದು, ಅಲ್ಲಿ ಪುಣ್ಯಸ್ನಾನ ಮಾಡಿದರೆ ಜನ್ಮಾಂತರದ ಪಾಪ ತೊಳೆಯುವುದೆಂದು ನಂಬಿಕೆ ಇದೆ. ಇಲ್ಲಿಯ ತಂಪಾದ ಪ್ರಶಾಂತ ಬನದಲ್ಲಿ ಅಗ್ನಿಕುಂಡ ಮತ್ತು ವಿಠ್ಠಲ ಮಂದಿರವಿದ್ದು, ಭಕ್ತಿಪರವಶತೆಯ ತಾಣವಾಗಿದೆ.

ಖವಟಕೊಪ್ಪ

ಇದು ಕೌಂಡಿನ್ಯ ಋಷಿಯ ತಪೋಭೂಮಿಯೆಂದು ತಿಳಿದುಬರುತ್ತದೆ. ಇಲ್ಲಿ ಮಾರುತಿ ಮಂದಿರವಿದ್ದು, ಮಾರುತಿ ಮೂರ್ತಿ ಮನೋಹರವಾಗಿದೆ.

ತೇಗುಣಸಿ

ಇಲ್ಲಿ ವೀರಶೈವ ವಿರಕ್ತ ಮಠವೊಂದು ಪ್ರಸಿದ್ಧವಾಗಿದೆ. ಇಲ್ಲಿಯ ೮ನೆಯ ಪೀಠಾಧಿಕಾರಿಗಳಾದ ಪೂಜ್ಯ ಶ್ರೀಮುರುಘೇಂದ್ರ ಸ್ವಾಮಿಗಳು ತ್ರಿಕಾಲ ಜ್ಞಾನಿಗಳಾಗಿದ್ದರು. ಈಗಲೂ ಮಠದಲ್ಲಿ ಪುರಾಣ ಪ್ರವಚನ, ವಿದ್ವಜ್ಜನರ ಉಪನ್ಯಾಸಗಳು ನಡೆಯುತ್ತಿರುತ್ತವೆ.

ಸತ್ತಿ

ಇಲ್ಲಿ ವೈಷ್ಣವ ಸಂಪ್ರದಾಯದ ಬ್ರಾಹ್ಮಣರು ಹೆಚ್ಚಾಗಿರುವುದು ಕಂಡುಬರುವುದು. ನದಿಯ ದಂಡೆಯಲ್ಲಿ ಶ್ರೀರಾಮನ ಮಂದಿರವಿದೆ. ರಾಮನವಮಿಯಂದು ಇಲ್ಲಿ ಜಾತ್ರೆಯಾಗುತ್ತದೆ. ಊರಲ್ಲಿ ಪುರಾತನ ಈಶ್ವರ ದೇವಾಲಯವಿದೆ. ಇಲ್ಲಿ ಮಸೀದಿಗಳು ಉಂಟು.

ಸವದಿ

ಇಲ್ಲಿ ಕೃಷ್ಣೆ ಉತ್ತರಾಭಿಮುಖವಾಗಿ ಹರಿಯುವುದರಿಂದ ಇದು ಪವಿತ್ರ ಕ್ಷೇತ್ರವೆನಿಸಿದೆ. ಇಲ್ಲಿ ಉತ್ತರೇಶ್ವರ ದೇವಾಲಯವಿದೆ. ಇಲ್ಲಿಯ ದರ್ಗಾ ಕೂಡ ಪ್ರಸಿದ್ಧವಾಗಿದೆ.ಇಲ್ಲಿಯೂ ಒಂದು ಸಂಗನಬಸವೇಶ್ವರ ಎಂಬ ವೀರಶೈವ ವಿರಕ್ತಮಠವಿದೆ. ಇಂದಿಗೂ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆದುಕೊಂಡು ಬರುವುದನ್ನು ಕಾಣಬಹುದಾಗಿದೆ.

ಮಹಿಷವಾಡಗಿ

ದುಷ್ಟರು ಗೋವನ್ನು ಅಪಹರಿಸುತ್ತಿರುವುದನ್ನು ನದಿಯಲ್ಲಿ ಸ್ನಾನ ಮಾಡುತ್ತಿದ್ದ ಮಹಿಷನೆಂಬ ಜಟ್ಟಿ ನೋಡಿ ಆ ಹಸುವಿನ ಬಿಡುಗಡೆಗಾಗಿ ಹೋರಾಡಿ ‘ಹಸು ಇಲ್ಲವೆ ಅಸು’ ಎಂದು ಪ್ರಾಣ ತೆತ್ತನು. ಮಹಿಷನಿಂದ ಊರಿಗೆ ಈ ಹೆಸರು ಬಂತು. ಇಲ್ಲಿಯ ಬಸವಣ್ಣನ ಗುಡಿಯೆದುರು ಇಂದಿಗೂ ಒಂದು ವೀರಗಲ್ಲು ಇದ್ದು ಈ ಘಟನೆಗೆ ಸಾಕ್ಷಿಯಾಗಿದೆ.

ಖಿಳೇಗಾವಿ

ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡ ಗ್ರಾಮವಾಗಿದೆ. ಬಸವಣ್ಣನ (ನಂದಿ) ಸುಪ್ರಸಿದ್ಧ ದೇವಾಲಯದಿಂದಾಗಿ ಇದು ಒಂದು ಪವಿತ್ರ ಕ್ಷೇತ್ರವೆನಿಸಿದೆ. ಇದು ಸ್ವಯಂಭು ಮೂರ್ತಿಯಾಗಿದ್ದು, ಉಳಿಯಿಂದ ಕೆತ್ತಿದ್ದಲ್ಲ ಆದ್ದರಿಂದ ಮಂಗಳಕರ ಎಂಬ ಪ್ರತೀತಿ ಇದೆ. ಪ್ರತಿದಿನ ತ್ರಿಕಾಲಗಳಲ್ಲಿ ಪೂಜೆ ನಡೆಯುತ್ತದೆ. ಕರ್ನಾಟಕ ಮಹಾರಾಷ್ಟ್ರ ಎರಡು ರಾಜ್ಯಗಳಲ್ಲಿ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿದ್ದು, ಶ್ರಾವಣ ತಿಂಗಳಲ್ಲಿ ಹೆಚ್ಚಿನ ಭಕ್ತರು ತಮ್ಮ ಇಷ್ಟ ದೇವರ ಪೂಜೆಗೆ ಬರುತ್ತಾರೆ. ಬಸವ ಜಯಂತಿ ಅಕ್ಷಯ ತೃತಿಯಾ ದಿನ ವಿಶೇಷ ವಾರ್ಷಿಕ ಜಾತ್ರೆ ಮತ್ತು ಉತ್ಸವ ನಡೆಯುತ್ತದೆ.

ಕಾಗವಾಡ

ಇದು ಕರ್ನಾಟಕದ ಗಡಿಗ್ರಾಮ, ಗ್ರಾಮದಲ್ಲಿ ಶಾಂತಿನಾಥ ಜಿನಾಲಯವಿದೆ. ಇದನ್ನು ‘ಕಗ್ಗೂಡರಾಯನ ಗುಡಿ’ ಎಂದು ಕರೆಯುತ್ತಾರೆ. ದೇವಾಲಯದಲ್ಲಿ ಬ್ರಹ್ಮನಾಥ ಮತ್ತು ಪದ್ಮಾವತಿಯವರ (ಯಕ್ಷ-ಯಕ್ಷಿಣಿ) ಸುಂದರ ಶಿಲ್ಪಗಳಿವೆ. ಒಂದು ನೆಲ ಮನೆಯಲ್ಲಿ ನಿಂತ ಭಂಗಿಯ ಪಾರ್ಶ್ವನಾಥ ಜಿನಬಿಂಬವಿದ್ದು ಇನ್ನೊಂದರಲ್ಲಿ ಕುಳಿತ ಭಂಗಿಯ ಶಾಂತಿನಾಥ ಜಿನ ಬಿಂಬವಿದೆ. ಗ್ರಾಮದ ಸರ್ವಧರ್ಮಿಯರೂ ಭಕ್ತಿಯಿಂದ ನಡೆದು ಕೊಳ್ಳುತ್ತಾರೆ. ಇದು ಜಿನಾಲಯವಾಗಿದ್ದರೂ ಕೂಡಾ ಪೂಜಾ ವಿಧಿಗಳು ಲಿಂಗಾಯತ ಪೂಜಾರಿಗಳಿಂದ ನಡೆಯುವುದು ಇಲ್ಲಿನ ಒಂದು ವಿಶೇಷ. ಇದು ಜೈನ ವೀರಶೈವರ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಸಂತೂಬಾಯಿ ಈ ಊರಿನ ಅಧಿದೇವತೆ. ಊರಲ್ಲಿ ಮಹಾದೇವ, ಹಾಲಬಸವಣ್ಣ, ಗಣಪತಿ ರಾಮದೇವ, ಅಂಬಾಬಾಯಿ, ಮರಗುಬಾಯಿ ಮೊದಲಾದ ದೇವಾಲಯಗಳಿವೆ. ಇಲ್ಲಿ ರಾಜಾಬಾಗ ಸವಾರನ ಸ್ಮಾರಕವಿದ್ದು ಇದಕ್ಕೆ ಹಿಂದೂ ಮುಸ್ಲಿಮರೆಲ್ಲರೂ ನಡೆದುಕೊಳ್ಳುತ್ತಾರೆ.

ಶೇಡಬಾಳ

ಶಿಲಾಹಾರದ ದೊರೆಯಾದ ವಿಜಯಾದಿತ್ಯನು ಕ್ರಿ.ಶ.೧೧೫೩ರಲ್ಲಿ ಬರೆಸಿದ ಒಂದು ಶಿಲಾಶಾಸನ ಇಲ್ಲಿಯ ಶ್ರೀ ಬಸವೇಶ್ವರ ದೇವಾಲಯದಲ್ಲಿದೆ. ಇದರ ಆಧಾರದಿಂದ ಈ ರಾಜನು ಊರಿನ ಪ್ರಾಚೀನ ಶ್ರೀ ಶಾಂತಿನಾಥ ಜಿನಾಲಯದ ಭಕ್ತನೆಂದು ತಿಳಿಯುತ್ತದೆ. ಮಹಾವೀರ ಮತ್ತು ಆದಿನಾಥ ಜಿನ ಮಂದಿರಗಳು ಇವೆ. ಇಲ್ಲಿ ೨೪ ತೀರ್ಥಕರ ಸುಂದರ ಮೂರ್ತಿಗಳಿವೆ. ಮುಂದೆ ಮೌನ ಸ್ಥಂಭವಿದೆ. ಇಲ್ಲಿ ಜೈನ ಧರ್ಮದವರು ಹೆಚ್ಚಾಗಿ ಇರುವುದರಿಂದ ಜೈನ ಧರ್ಮಿಯರ ಧಾರ್ಮಿಕ ಪರಿಸರವನ್ನು ಕಾಣಬಹುದಾಗಿದೆ. ಇಲ್ಲಿಯ ಬಸವೇಶ್ವರ ದೇವಾಲಯ ಪ್ರಾಚೀನವಾಗಿದ್ದು ಬಸವಣ್ಣನು ಗ್ರಾಮದ ಮುಖ್ಯ ದೇವತೆ.

ಮಂಗಸೂಳಿ

ಅಥಣಿ ತಾಲೂಕಿನ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಮಂಗಸೂಳಿ ಮಲ್ಲಯ್ಯನ ಕ್ಷೇತ್ರ. ಮಹಾರಾಷ್ಟ್ರ ಭಕ್ತ ಸಮೂಹಕ್ಕೆ ಖಂಡೋಬಾ ಎಂದು ಕಾಣಿಸುತ್ತಾನೆ. ಇದು ಒಂದು ಪ್ರಮುಖ ಪುಣ್ಯ ಕ್ಷೇತ್ರ ಹಾಗೂ ಪೌರಾಣಿಕ ಹಿನ್ನೆಲೆ ಹೊಂದಿದೆ. ಪೌರಾಣಿಕವಾಗಿ ಮಣಿ-ಮಲ್ಲ ದೈತ್ಯರ ಉಪಟಳ ಭೂಲೋಕದಲ್ಲಿ ವಿಪರೀತವಾದಾಗ ಕೈಲಾಸಪತಿ (ಮಲ್ಲಯ್ಯ) ಮಲ್ಲಾಸುರನನ್ನು ವಧೆ ಮಾಡಿ ನಂತರ ಮಣಿ ದೈತ್ಯನನ್ನು ತ್ರಿಶೂಲದಿಂದ ಇರಿದು ಕೊಂದನು. ಈ ವಧಾ ಸ್ಥಾನ ಮಣಿ-ಶೂಲಿ ಮನ್ಸೂಳಿಯಾಗಿ ಇಂದಿನ ಮಂಗಸೂಳಿ ಎಂಬ ರೂಪ ಪಡೆಯಿತೆಂಬ ಪ್ರತೀತವಿದೆ. ಮಲ್ಲಯ್ಯನ ಸುಂದರವಾದ ಪ್ರಾಚೀನ ದೇವಾಲಯವಿದೆ. ಕರ್ನಾಟಕ – ಮಹಾರಾಷ್ಟ್ರಗಳೆರಡರಲ್ಲಿಯೂ ಸಾವಿರಾರು ಭಕ್ತ ಸಮೂಹ ಹೊಂದಿದ್ದು, ಯುಗಾದಿ ಮತ್ತು ನವರಾತ್ರಿ (ಮಹಾನವಮಿ) ಗಳಂದು ವರ್ಷದಲ್ಲಿ ಎರಡು ಬಾರಿ ಜಾತ್ರೆ ನಡೆಯುತ್ತದೆ. ಆನೆಯಿಂದ ಜಗ್ಗಿಸಿದರೂ ಹರಿಯಲಾಗದ ಬೃಹತ್ ಸರಪಳಿಯನ್ನು ಪೂಜಾರಿಗಳು ದೇವರ ಹೆಸರಿನಿಂದ ಹರಿಯುತ್ತಾರೆ. ಕಬ್ಬಿಣದ ಸರಪಳಿ ಹರಿದು ತುಂಡಾಗುತ್ತದೆ. ಅದು ‘ದೇವ ಲೀಲೆ’ ವರ್ಷದ ಮಳೆ ಬೆಳೆ, ಸುಖ ಶಾಂತಿಯನ್ನು ನಿರ್ಧರಿಸುವ ಭವಿಷ್ಯ ವಾಣಿಯೆಂದು ಜನರು ನಂಬುತ್ತಾರೆ. ಕರ್ನಾಟಕ ಮಹಾರಾಷ್ಟ್ರದ ಭಕ್ತರು ಇಲ್ಲಿ ಅನ್ಯೋನ್ಯವಾಗಿದ್ದಾರೆ. ಭಾಷೆ, ಗಡಿ, ವೇಷ-ಭೂಷಣ, ಆಹಾರ, ಅಭಿರುಚಿಗಳನ್ನು ದಾಟಿ ಸರ್ವರನ್ನು ಬೆಸೆಯುವ ಶಕ್ತಿಯಾಗಿ ಮಂಗಸೂಳಿ ಇದೆ. ಚೈತ್ರಮಾಸದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಜರುಗುತ್ತವೆ. ಮೋಳೆ

ಪ್ರಾಚೀನವಾದ ಶ್ರೀ ಸಿದ್ಧೇಶ್ವರ ದೇವಾಲಯವಿದೆ.

ಐನಾಪುರ

ಅಥಣಿ ತಾಲೂಕಿನ ಪ್ರಮುಖ ಗ್ರಾಮಗಳಲ್ಲೊಂದಾದ ಐನಾಪುರವು ಹಲವಾರು ಪ್ರಾಚೀನ ಸ್ಮಾರಕಗಳನ್ನು ಹೊಂದಿದೆ. ಇಲ್ಲಿ ಪ್ರಸಿದ್ಧವಾದ ಸಿದ್ಧೇಶ್ವರ ದೇವಾಲಯವಿದೆ. ಮಕರ ಸಂಕ್ರಮಣಕ್ಕೆ ಜಾತ್ರೆಯಾಗುತ್ತದೆ. ಪಾಂಡವರು ಇಲ್ಲಿ ಯಜ್ಞ ಯಾಗಾದಿಗಳನ್ನು ಮಾಡಿದರೆಂದು ಹೇಳುತ್ತಾರೆ. ಈ ಕುರಿತು ‘ಕೃಷ್ಣ ಮಹಾತ್ಮೆ’ ಗ್ರಂಥದಲ್ಲಿ ಉಲ್ಲೇಖವಿದೆ. ಪೀರಕಾಜಿ ಎಂಬ ಸತ್ಪುರುಷನ ಸಮಾಧಿ ಇಲ್ಲಿದೆ. ಸರ್ವಧರ್ಮಗಳ ಸಾಮರಸ್ಯದ ಪರಿಸರವನ್ನು ಇಲ್ಲಿ ಕಾಣಬಹುದಾಗಿದೆ.

ಉಗಾರ ಬುದ್ರುಕ

ಶ್ರೀ ರಾಮ ದೇವರ ಗುಡಿ ಇದೆ. ಊರಿನಲ್ಲಿ ನರಸಿಂಹ ಮಾರುತಿ, ಪದ್ಮಾವತಿದೇವಿ ಗುಡಿ ಇರುವುದು ವಿರಳ. ಆದ್ದರಿಂದ ಜೈನ-ಜೈನೇತರರೆಲ್ಲರೂ ಭಕ್ತಿಯಿಂದ ನಡೆದು ಕೊಳ್ಳುವುದು ವಿಶಿಷ್ಟವಾಗಿದೆ.

ಉಗಾರ ಖುರ್ದ

ಇಲ್ಲಿ ಮಹಾದೇವಿ ಗುಡಿ, ವಿಠ್ಠಲ ಮಂದಿರ, ಹನುಮಾನ ಮಂದಿರ, ಜೈನ ಬಸದಿಗಳಿವೆ.

ಕುಸನಾಳ

ಇಲ್ಲಿಯ ಜೈನ ಬಸದಿ ಸುಂದರವಾಗಿದೆ. ಬದಿಯಲ್ಲಿ ವಿಠ್ಠಲ ಮಂದಿರವು ಪ್ರಸಿದ್ಧವಾಗಿದೆ. ಭಜನೆ ಪುರಾಣಗಳು ಸದಾ ಕಾಲ ನಡೆಯುತ್ತವೆ.

ಕಟಗೇರಿ

ಇಲ್ಲಿಯ ಲಕ್ಕವ್ವಾ (ಲಕ್ಷ್ಮೀ) ದೇವಾಲಯವು ಪ್ರಸಿದ್ಧವಾಗಿದೆ. ಮೂರ್ತಿ ಅಂದವಾಗಿದೆ. ಭಕ್ತರು ಬಹು ಸಂಖ್ಯೆಯಲ್ಲಿ ನಡೆದುಕೊಳ್ಳುವರು. ವಿಜಯ ದಶಮಿಯಂದು ಜಾತ್ರೆ, ವಿಶೇಷ ಉತ್ಸವ ನಡೆಯುವುದು.

ಕೊಕಟನೂರ

ಇದು ಶಕ್ತಿ ದೇವಿ ಎಲ್ಲಮ್ಮನ ಜಾಗೃತ ಸ್ಥಾನ. ಪರಶುರಾಮ ತನ್ನ ತಂದೆಯ ಆಜ್ಞೆ ಪಾಲಿಸಲು ತಾಯಿ ರೇಣುಕೆಯ ಶಿರಚ್ಛೇಧನ ಮಾಡಿದಾಗ ರುಂಡವು ಇಲ್ಲಿ ಬಂದು ಬಿತ್ತಂತೆ. ಅದೆ ಯಾತ್ರಾ ಸ್ಥಾನವಾಗಿ ಪರಿಣಮಿಸಿದೆಯೆಂದು ನಂಬಿಕೆ ಇದೆ. ಊರಿನ ಹಳ್ಳದ ದಂಡೆಯ ಮೇಲೆ ದೇವಿಯ ದೇವಾಲಯವಿದೆ. ಇದು ಅಪಾರ ಸಂಖ್ಯೆಯ ಭಕ್ತ ಸಮೂಹವನ್ನು ಹೊಂದಿದೆ. ಎಳ್ಳು ಅಮಾವಾಸ್ಯೆಯೆಂದು ದೊಡ್ಡ ಪ್ರಮಾಣದಲ್ಲಿ ಜಾತ್ರೆಯಾಗುತ್ತದೆ. ಮಹಾರಾಷ್ಟ್ರ, ಅಥಣಿ ಹಾಗೂ ಬೇರೆ ಬೇರೆ ತಾಲೂಕುಗಳಿಂದ ಜನ ಬಂದು ಭಕ್ತಿಯಿಂದ ಸೇವೆ ಸಲ್ಲಿಸುವುದನ್ನು ಕಾಣಬಹುದಾಗಿದೆ. ಇಲ್ಲೊಂದು ಕಲ್ಲೇಶ್ವರ ದೇವಾಲಯವಿದೆ. ೧೧ ಶತಮಾನದಷ್ಟು ಪ್ರಾಚೀನವಾಗಿದೆ. ಇಲ್ಲಿಯದು ಜಕ್ಕಣ್ಣ ಶಿಲ್ಪವೆಂದು ಹೇಳುತ್ತಾರೆ. ೨-೩ ಶಿಲಾಶಾಸನಗಳಿವೆ. ಕರ್ನಾಟಕ ಮಹಾರಾಷ್ಟ್ರದ ಅಸಂಖ್ಯಾತ ಭಕ್ತರು ಪಾಲ್ಗೊಳ್ಳುತ್ತಾರೆ. ಇಲ್ಲಿ ಪೋಳ ಸಂಸ್ಥಾನಿಕನ ಅಳಿದುಳಿದ ಕೋಟೆಯಿದೆ. ಊರ ಕೋಟೆ ಸ್ಥಿರವಾಗಿ ನಿಲ್ಲಲು ಬ್ರಾಹ್ಮಣ ಮನೆತನದ ಗರ್ಭಿಣಿ ಸಾಧ್ವಿ ಕೋಣಮ್ಮ ಎಂಬುವಳು ಬಲಿಯಾದಳು. ಇಂದಿಗೂ ಹಳ್ಳದ ದಂಡೆಯಲ್ಲಿ ಕೋಣಮ್ಮನ ಗುಡಿಯಿದೆ. ಅಲ್ಲಿಯು ಪೂಜೆ ನಡೆಯುತ್ತದೆ. ಊರಿನ ದಕ್ಷಿಣ ಭಾಗದಲ್ಲಿ ಕಾಡಸಿದ್ದೇಶ್ವರ ದೇವಾಲಯವಿದೆ.

ತೆಲಸಂಗ

ಇದು ಅಥಣಿಯ ಪೂರ್ವ ಭಾಗದ ದೊಡ್ಡ ಊರು. ಇದು ತೀರ ಪ್ರಾಚೀನ ಗ್ರಾಮವೆಂದು ತಿಳಿದುಬರುತ್ತದೆ. ಶಿಲೆಯ ಸುಂದರ ವಿಷ್ಣು ವಿಗ್ರಹ ಮಣ್ಣಿನಲ್ಲಿ ಹೂತಿದ್ದು, ಇತ್ತೀಚಿಗೆ ದೊರೆತಿದೆ. ಇಲ್ಲಿ ಒಂದು ವೀರಶೈವ ಮಠವಿದೆ. ೧೨ನೇ ಶತಮಾನದಲ್ಲಿದ್ದ ಕಲ್ಯಾಣದ ಶಿವಶರಣರಿಗೆ ತೈಲವನ್ನು ಪೂರೈಸುವ ಜನಗಳಿಂದ ಈ ಊರು ನಿರ್ಮಾಣವಾಗಿ ಈ ಹೆಸರು ಬಂದಿದೆ ಎಂದು ಹೇಳುತ್ತಾರೆ.

ಐಗಳಿ

ಇಲ್ಲಿ ಪೂಜ್ಯ ಅಪ್ಪಯ್ಯ ಸ್ವಾಮಿಗಳ ಮಠವಿದೆ. ಅವರ ಗದ್ದುಗೆಗೆ ನಿತ್ಯ ಪೂಜೆ ನಡೆಯುತ್ತದೆ. ಪ್ರತಿ ವರ್ಷ ಶ್ರಾವಣ ಮತ್ತು ಅಕ್ಷಯ ತೃತೀಯಾಗಳಲ್ಲಿ ಎರಡು ಸಾರಿ ಜಾತ್ರೆ ಆಗುತ್ತದೆ. ಅವರು ಒಬ್ಬ ವಿರಕ್ತ ಯೋಗಿಯಾಗಿದ್ದರು. ಸಿದ್ದಿಪುರುಷರಾಗಿದ್ದರು. ಅವರು ಬರೆದ ಲಿಪಿ ಇಂದಿಗೂ ನೋಡಲು ದೊರಕುತ್ತದೆ. ಅದು ಅಸ್ಪಷ್ಟವಾಗಿದೆ. ಈ ಗ್ರಾಮವು ಅಥಣಿ-ವಿಜಾಪೂರ ಕೂಡು ರಸ್ತೆಯ ಪಕ್ಕದಲ್ಲಿದ್ದು, ದಿಣ್ಣೆಯ ಮೇಲೆ ಶ್ರೀ ಮಾಣಿಕ ಪ್ರಭುಗಳೆಂಬುವರ ಆಶ್ರಮವಿದೆ. ಅಲ್ಲಿ ಒಂದು ದೇವಾಲಯವನ್ನು ನಿರ್ಮಿಸಲಾಗಿದೆ.

ರಾಮತೀರ್ಥ

ಪುರಾಣ ಪ್ರಸಿದ್ದಿಯನ್ನು ಪಡೆದ ರಾಮತೀರ್ಥ ಗ್ರಾಮವು ಅಥಣಿಯಿಂದ ೨೯ ಕಿ.ಮೀ. ದೂರದಲ್ಲಿದೆ. ಇಲ್ಲಿ ಚಾಲುಕ್ಯ ಮಾದರಿಯ ಉಮಾಮಹೇಶ್ವರಿ ದೇವಾಲಯವಿದೆ. ಗುಡಿಯ ಒಳ ಹೊರಗಿನ ಶಿಲ್ಪ ಕಲೆ ಉತ್ಕೃಷ್ಟವಾಗಿದೆ. ಈ ಭಾಗದಲ್ಲಿಯೇ ಇಷ್ಟು ಸುಂದರವಾದ ಗುಡಿ ಇನ್ನೊಂದಿಲ್ಲ. ಇದು ‘ದಕ್ಷಿಣ ಕಾಶಿ’ ಎಂದು ಪ್ರಸಿದ್ದಿ ಹೊಂದಿದೆ. ವನವಾಸದಲ್ಲಿದ್ದ ಶ್ರೀ ರಾಮ ಇಲ್ಲಿಗೆ ಬಂದು ಪೂಜೆ ಸಲ್ಲಿಸಿದನೆಂದು ಪ್ರತೀತಿ ಇದೆ. ಈಶ್ವರನೊಂದಿಗೆ ತನ್ನ ಹೆಸರು ಚಿರಸ್ಥಾಯಿಯಾಗಲೆಂದು ರಾಮೇಶ್ವರ ಎಂದು ನಾಮಕರಣ ಮಾಡಿದನೆಂದು ರಾಮೇಶ್ವರ ಮಹಾತ್ಮೆಯಲ್ಲಿ ಉಲ್ಲೇಖವಿದೆ. ಈ ದೇವಾಲಯವು ವಿಶಾಲವಾಗಿದ್ದು ಆಕರ್ಷಕ ಕೆತ್ತನೆಯಿಂದ ಕೂಡಿದೆ. ದೇವಾಲಯದಲ್ಲಿ ಎರಡು ಪ್ರಾಚೀನ ಶಾಸನಗಳಿವೆ. ಇದು ಬ್ರಹ್ಮ, ವಿಷ್ಣು, ಮಹೇಶ್ವರರು ನೆಲೆಸಿದ ತಾಣವಾದ್ದರಿಂದ ಓಂಕಾರೇಶ್ವರ ಮಂದಿರವೆಂದು ಖ್ಯಾತಿ ಹೊಂದಿದೆ. ದೇವಾಲಯದ ಪ್ರಾಂಗಣದಲ್ಲಿ ನರಸಿಂಹ, ಮಾರುತಿ, ಅಮೃತೇಶ್ವರ, ಕಾಲಭೈರವ ಮತ್ತು ಬ್ರಹ್ಮದೇವ ಗುಡಿಗಳಿವೆ. ರಾಮೇಶ್ವರ ದೇವಾಲಯವು ಸೂಕ್ಷ್ಮ ಕೆತ್ತನೆಯಿಂದ ಕೂಡಿದೆ. ಕಂಬಗಳ ಮೇಲಿನ ದ್ವಾರ ಪಾಲಕರು ಮಧ್ಯದ ಮಹಾದ್ವಾರದ ಮೇಲೆ ಕೆತ್ತಿದ ನಟರಾಜ ಎಲ್ಲವೂ ನಯನ ಮನೋಹರವಾಗಿದೆ. ದೇವಾಲಯದ ಮುಂಭಾಗದ ಬಲಕ್ಕೆ ೬೦-೪೦ ಅಡಿ ವಿಸ್ತೀರ್ಣದಲ್ಲಿ ಕಟ್ಟಿದ ಆಕರ್ಷಕ ಬಾವಿ ಇದೆ. ೭೫ ಅಡಿ ಎತ್ತರದ ಆಕರ್ಷಕ ದೀಪ ಸ್ತಂಭವಿದ್ದು, ದೇವಾಲಯದ ಭವ್ಯತೆಗೆ ಮತ್ತಷ್ಟು ಮೆರಗು ನೀಡಿದೆ. ನಿತ್ಯ ತ್ರಿಕಾಲ ಪೂಜೆ ನಡೆಯುತ್ತಿದ್ದು ಇದೊಂದು ಒಂದು ಜಾಗ್ರತ ಕ್ಷೇತ್ರ ಎಂದು ಹೆಸರು ಪಡೆದಿದೆ. ಮುಖ್ಯ ದೇವಾಲಯದ ಹಿಂಭಾಗದಲ್ಲಿ ನೈಸರ್ಗಿಕ ಗುಹೆ ಇದೆ. ಅಲ್ಲಿ ಆನಂದ ದಾಯಕಿ (ಪಾರ್ವತಿ) ಯ ಚಿಕ್ಕ ದೇವಾಲಯವಿದೆ. ಅಲ್ಲಿರುವ ಒಂದು ಪರ್ವತಕ್ಕೆ ‘ಅಕ್ಷಯ ಪರ್ವತ’ ಎಂಬ ಹೆಸರಿದೆ. ಗಂಗಾ ನದಿಯು ಹಳ್ಳವಾಗಿ ಹರಿದು ಎಂಟು ತೀರ್ಥಗಳನ್ನು ಉಂಟು ಮಾಡಿದೆ. ಈ ಹಳ್ಳ ‘‘ಪಾಪವಿನಾಶಿನಿ’’ ಎಂಬ ಹೆಸರು ಪಡೆದಿದೆ. ಇದು ಬೇಸಿಗೆಯಲ್ಲಿ ಬತ್ತಿ, ಒಂದು ಮಡು ಮಾತ್ರ ಕಾಣುತ್ತದೆ. ಶಿವರಾತ್ರಿ ಸಮಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯುತ್ತಿದ್ದು, ಐದು ದಿನಗಳ ಜಾತ್ರೆ ನಡೆಯುತ್ತದೆ. ಈ ಐದು ದಿನಗಳವರೆಗೆ ನಿರಂತರ ವೇದ ಪಾರಾಯಣ ನಡೆಯುತ್ತದೆ.

ಕೊಟ್ಟಲಗಿ

ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ಹೆಸರಾಗಿದ್ದ ಗ್ರಾಮವಿದು. ಇಲ್ಲಿ ಪ್ರಾಚೀನ ಸಿದ್ದೇಶ್ವರ (ಸಿದರಾಯ) ದೇವಾಲಯವಿದೆ. ಇಲ್ಲಿಯ ಇಟ್ಟಿಗೆಯಿಂದ ರಚಿಸಿದ ತೂಗುಯ್ಯಲೆಯ ದೀಪಸ್ತಂಭ ಅದ್ಭುತವಾಗಿದೆ.

ಕಕಮರಿ

ರಾಮತೀರ್ಥ ನೆರೆಯ ಕಕಮರಿ ಗ್ರಾಮದ ಸುತ್ತಮುತ್ತಲಿನ ಪರಿಸರವು ಶುಕ್ರ ಋಷಿಗಳ ಆಶ್ರಮವಾಗಿತ್ತು. ಆ ಋಷಿಯ ಮಗಳೆ ಕಾಕುಮಾರಿ. ದಂಡಕರಾಜನು ಬೇಟೆಗೆ ಬಂದು ಇವಳನ್ನು ನೋಡಿ ಮೋಹಿಸಿದನೆಂದು ಈ ಕಾರಣಕ್ಕಾಗಿ ಋಷಿಯ ಕೋಪಕ್ಕೊಳಗಾಗಿ ಮಗಳು ಹೆಣ್ಣು ಹುಲಿಯಾದಳೆಂದು, ನಂತರ ಪಾಪ ವಿಮೋಚನೆ ಯಾಯಿತು ಎನ್ನುತ್ತಾರೆ. ಇವಳ ಹೆಸರೇ ಊರಿಗೆ ರೂಢವಾಗಿದೆ. ಇವಳು ಅಮ್ಮಾಜಿ ದೇವಿಯಾಗಿ ಕಕಮರಿಯಲ್ಲಿ ವಾಸವಾಗಿದ್ದಾಳೆ. ಅಮ್ಮಾಜೇಶ್ವರಿ ಎಂಬ ಹೆಸರಿನ ದೇವಾಲಯವಿದ್ದು, ಗ್ರಾಮ ದೇವತೆಯಾಗಿ ನೆಲೆ ನಿಂತು ನಂಬಿ ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದೇವಿಯಾಗಿದ್ದಾಳೆ. ಜಾತ್ರೆ ಉತ್ಸವಗಳು ನಡೆಯುತ್ತವೆ. ಇವುಗಳಲ್ಲದೆ ಗುಂಡೇವಾಡಿ ಹಾಗೂ ಯಕ್ಕಂಚಿಯ ಕಾಡಸಿದ್ದೇಶ್ವರ ದೇವಾಲಯ ದೇವ ರಡ್ಡೇರಹಟ್ಟಿಯ ಮಡ್ಡಿ ಬಸವಣ್ಣನ ಗುಡಿ, ಕೋಹಳ್ಳಿಯ ಸಂಗಮೇಶ್ವರ ಗುಡಿ, ಚಿಕ್ಕಟ್ಟಿಯ ಬಸವಣ್ಣನ ಗುಡಿ ಇವು ತಾಲೂಕಿನಲ್ಲಿ ನೋಡಬೇಕಾದ ಇತರ ಧಾರ್ಮಿಕ ಪ್ರೇಕ್ಷಣೀಯ ಸ್ಥಳಗಳಾಗಿವೆ. ಒಟ್ಟಿನಲ್ಲಿ ಅಥಣಿ ಹಲವು ಧರ್ಮಗಳ ಸಂಗಮ ಈ ಎಲ್ಲ ಧರ್ಮಿಯರಲ್ಲಿ ಸಾಮರಸ್ಯವಿರುವುದು ಇಲ್ಲಿಯ ಪರಿಸರದ ವಿಶೇಷವೆಂದು ಹೇಳುವರು. ಅಥಣಿ ತಾಲೂಕಿನಲ್ಲಿ ವೀರಶೈವ, ಜೈನ, ವೈಷ್ಣವ ಹಾಗೂ ಮುಸ್ಲಿಂ ಧರ್ಮಗಳ ಜನರು ಹೆಚ್ಚಾಗಿದ್ದಾರೆ. ಈ ಎಲ್ಲ ಧರ್ಮಿಯರ ಮಠ, ಮಂದಿರ, ಬಸದಿ ಹಾಗೂ ಮಸೀದಿಗಳು ಈ ತಾಲೂಕಿನಲ್ಲಿ ಹೇರಳವಾಗಿವೆ. ಒಂದು ಚರ್ಚು ಅಥಣಿಯಲ್ಲಿದೆ. ಹಾಗೆಯೇ ವೀರಶೈವ ಗುರುಗಳು, ಜೈನ ಮುನಿಗಳು ಹೆಚ್ಚಾಗಿದ್ದಾರೆ. ತಾಲೂಕಿನ ಪ್ರಮುಖ ಗ್ರಾಮಗಳು ತಮ್ಮದೇ ಆದ ಕಾರಣಕ್ಕಾಗಿ ವಿಶೇಷತೆಯನ್ನು ಹೊಂದಿವೆ. ಕಟಗೇರಿ ಲಕ್ಕವ್ವ, ಜೂಗುಳದ ಪಾರ್ವತಿದೇವಿ, ಕಾಗವಾಡದ ಸಂತೋಬಾಯಿ ಮುಂತಾದ ಕ್ಷೇತ್ರಗಳು ಸ್ತ್ರೀ ದೇವತೆಗಳು. ಅಥಣಿ ಪರಿಸರದಲ್ಲಿನ ಧಾರ್ಮಿಕ ತಾಣಗಳ ಶಿಲ್ಪಕಲಾ ವೈಭವಗಳನ್ನು ಗಮನಿಸಿದಾಗ ಅವು ಈ ಪ್ರದೇಶದ ಗತಕಾಲದ ಸಾಂಸ್ಕೃತಿಕ ಶ್ರೀಮಂತಿಕೆಯಿಂದ ತುಂಬಿ ತುಳುಕುತ್ತಿದ್ದವು ಎಂಬುದಕ್ಕೆ ಅಥಣಿಯ ಅಮೃತಲಿಂಗೇಶ್ವರ ದೇವಸ್ಥಾನ, ನಂದಗಾಂವಿಯ ಹಾಳು ಸುರಿಯುತ್ತಿರುವ ಶಿವಾಲಯ, ಜಿನಾಲಯಗಳು, ಮಂಗಸೂಳಿಯ ಮಲ್ಲಯ್ಯ, ಬಳ್ಳಿಗೇರಿಯ ಬಸವಣ್ಣ, ಖಿಳೇಗಾಂವಿಯ ಬಸವಣ್ಣ, ಕೊಕಟನೂರಿನ ಎಲ್ಲಮ್ಮದೇವಿ, ರಾಮತೀರ್ಥ ದೇವಾಲಯ ಮೊದಲಾದವು ಇತಿಹಾಸಕ್ಕೆ ಮೂಕ ಸಾಕ್ಷಿಯಾಗಿ ನಿಂತಿವೆ. ಈ ದೇವಾಲಯಗಳು, ಮಠ, ಮಂದಿರ, ಮಸೀದಿ, ಚರ್ಚುಗಳು ಜನತೆಯ ಸಂಸ್ಕೃತಿಯನ್ನು, ಧಾರ್ಮಿಕ ಮನೋಭಾವವನ್ನು ಬೆಳೆಸಿಕೊಂಡು ಎಲ್ಲ ಧರ್ಮಿಯರೂ ಪರಸ್ಪರ ಪ್ರೀತಿ ವಿಶ್ವಾಸದೊಂದಿಗೆ ಅನ್ಯೋನ್ಯವಾಗಿ, ಯಾವ ಮತಿೀಯ ಗಲಭೆಗಳಿಲ್ಲದೆ ಬದುಕುವುದಕ್ಕೆ ಪ್ರೇರಕ ಶಕ್ತಿಗಳಾಗಿ ನಿಂತಿವೆ. ಅಲ್ಲದೆ ನಾಡಿನ ವಿಶಿಷ್ಟ ಪರಂಪರೆಯನ್ನು ಮುನ್ನಡೆಸಿಕೊಂಡು ಬರುತ್ತಿರುವ ಕನ್ನಡ ನಾಡಿನ ದೊಡ್ಡ ಆಸ್ತಿಯಾಗಿ ಉಳಿದಿವೆ. ಹೀಗೆ ದೇವಾಲಯಗಳ ತಾಣವೇ ಅಥಣಿಯಾಗಿದೆ.

ಜನಸಂಖ್ಯೆ[ಬದಲಾಯಿಸಿ]

೨೦೧೧ ರ ಭಾರತದ ಜನಗಣತಿಯ ಪ್ರಕಾರ,[೧] ಅತಣಿ ತಾಲ್ಲೂಕಿನ ಜನಸಂಖ್ಯೆಯು ೨೩,೦೦೦ ಆಗಿತ್ತು. ಪುರುಷರು ೫೧% ನಷ್ಟು ಜನಸಂಖ್ಯೆ ಮತ್ತು ೪೯% ನಷ್ಟು ಮಹಿಳೆಯರಲ್ಲಿದ್ದಾರೆ .ಅತಣಿ ೬೭%ನಷ್ಟು ಸರಾಸರಿ ಸಾಕ್ಷರತೆ ಪ್ರಮಾಣವನ್ನು ಹೊಂದಿದ್ದು, ಇದು ರಾಷ್ಟ್ರೀಯ ಸರಾಸರಿ ೫೯.೫% ಗಿಂತ ಹೆಚ್ಚಾಗಿದೆ; ಪುರುಷರಲ್ಲಿ ೫೭% ಮತ್ತು ೪೩% ರಷ್ಟು ಮಹಿಳೆಯರು ಸಾಕ್ಷರರಾಗಿದ್ದಾರೆ.

ಕೃಷಿ[ಬದಲಾಯಿಸಿ]

ಅಥಣಿ ಯಲ್ಲಿ ಕೃಷಿ ಮುಖ್ಯವಾದ ಉದ್ಯೋಗವಾಗಿದೆ. ಮುಖ್ಯ ಬೆಳೆಗಳೆಂದರೆ: ಜೋಳ, ಗೋಧಿ, ಸೂರ್ಯಕಾ೦ತಿ ಹಾಗೂ ಮು೦ತಾದವುಗಳು. ವಾಣಿಜ್ಯ ಬೆಳೆಗಳು ದ್ರಾಕ್ಷಿ, ಹತ್ತಿ ಮತ್ತು ಪ್ರಮುಖವಾದುದು ಕಬ್ಬು. ಕರ್ನಾಟಕದಲ್ಲಿ ಅಥಣಿ ಕಬ್ಬು ಬೆಳೆಯುವುದರಲ್ಲಿ ತು೦ಬ ಪ್ರಮುಖವಾದ ತಾಲೂಕುಗಳಲ್ಲಿ ಅಥಾಣಿಯು ಒಂದಾಗಿದೆ. ಮೇಲೆ ಕೃಷ್ಣ ಯೋಜನೆಯ ಹಿಪ್ಪರಗೈಬರ್ಗೆ ನೀರಾವರಿ ಸೌಲಭ್ಯಗಳು ಅತಣಿ ತಾಲ್ಲೂಕಿನಲ್ಲಿದೆ. ಕಬ್ಬು ಮತ್ತು ದ್ರಾಕ್ಷಿಗಳ ಕೃಷಿಗೆ ಇದು ಬಹಳ ಸಹಾಯಕವಾಗಿದೆ. ತಾಲೂಕಿನ ಬಹುತೇಕ ಭಾಗ ಫಲವತ್ತಾದ ಭೂಮಿಯಾಗಿದೆ. ಹಿಪಾರಾಗಿ ಯೋಜನೆಯ ಕಾಲುವೆಗಳನ್ನು ಅತಣಿಯಲ್ಲಿ ನಿರ್ಮಿಸಲಾಯಿತು. ಈ ಯೋಜನೆಯು ರೈತರಿಗೆ ತು೦ಬ ಉಪಯೋಗವಾಗುತ್ತಿದೆ.

ಕೈಗಾರಿಕೆ[ಬದಲಾಯಿಸಿ]

ಅಥಣಿ ತಾಲೂಕು ಕರ್ನಾಟಕದ ಅತಿದೊಡ್ಡ ಸಕ್ಕರೆ ಉದ್ಯಮವಾಗಿದೆ. ಸಕ್ಕರೆ ೧೮,೦೦೦ ಟನ್ / ದಿನವನ್ನು ಅಳವಡಿಸುವ ಸಾಮರ್ಥ್ಯ ಹೊಂದಿದೆ. ಅಥಣಿ ತಾಲ್ಲೂಕಿನ ಬೆಳಗಾವಿ ಜಿಲ್ಲೆಯ ೨೦ ಸಕ್ಕರೆ ಕೈಗಾರಿಕೆಗಳಲ್ಲಿ ೫ ಸಕ್ಕರೆ ಕೈಗಾರಿಕೆಗಳಿವೆ.

ಉಲ್ಲೇಖಗಳು[ಬದಲಾಯಿಸಿ]

https://web.archive.org/web/20070418013616/http://www.kar.nic.in/zpbelgaum/athaniprofile.html

"https://kn.wikipedia.org/w/index.php?title=ಅಥಣಿ&oldid=1162630" ಇಂದ ಪಡೆಯಲ್ಪಟ್ಟಿದೆ