ಮೀನಾಕುಮಾರಿ
ಮೀನಾಕುಮಾರಿ | |
---|---|
Born | ಮಹಾಜಾಬೀನ್ ಬಾನು ಆಗಸ್ಟ್ ೧, ೧೯೩೨ ಮುಂಬಯಿ |
Died | ಮಾರ್ಚ್ ೩೧, ೧೯೭೨ |
Occupation(s) | ಚಲನಚಿತ್ರ ನಟಿ, ಕವಯತ್ರಿ |
Years active | 1939–1972 |
ಭಾರತೀಯ ಚಿತ್ರರಂಗದಲ್ಲಿ ಮೀನಾಕುಮಾರಿ (ಆಗಸ್ಟ್ ೧, ೧೯೩೨ - ಮಾರ್ಚ್ ೩೧,೧೯೭೨) ಅವರ ಹೆಸರು ಅಜರಾಮರವಾದದ್ದು. ಪರಿಣೀತಾ, ಬೈಜು ಭಾವ್ರಾ, ಚಾರ ದಿಲ್ ಚಾರ ರಹೇನ್, ಸಾಹೀಬ್ ಬೀಬಿ ಔರ್ ಗುಲಾಮ್, ಫಾಕೀಜಾ ಮುಂತಾದ ಚಿತ್ರಗಳಲ್ಲಿನ ತಮ್ಮ ಅಭಿನಯದಿಂದ ಮೀನಾಕುಮಾರಿ ಅಮರರಾಗಿದ್ದಾರೆ..[೧][೨][೩][೪][೫]
ಪ್ರಾರಂಭಿಕ ಬದುಕು
[ಬದಲಾಯಿಸಿ]ಪರ್ಷಿಯಾದ ಆಲಿ ಭಕ್ಷ್ ಹಾಗೂ ರಂಗಭೂಮಿ ಕಲಾವಿದೆ ಇಕ್ಬಾಲ್ ಬೇಗಂ ದಂಪತಿಗಳ ಮೂರನೇ ಮಗಳಾಗಿ ಹುಟ್ಟಿದವರು ಮೀನಾಕುಮಾರಿ. ಅವರು ಹುಟ್ಟಿದ್ದು ಆಗಸ್ಟ್ ೧, ೧೯೩೨ರ ವರ್ಷದಲ್ಲಿ. ಅಂದ ಹಾಗೆ ಮೀನಾಕುಮಾರಿ ಎಂಬುದು ಅವರ ತಂದೆ ತಾಯಿಗಳು ಇಟ್ಟ ಹೆಸರಲ್ಲ. ಮುಹಾಜಾಬೀನ್ ಬಾನು ಎಂಬ ಈ ಹುಡುಗಿಯ ಹೆಸರನ್ನು ಚಿತ್ರರಂಗ ತನ್ನ ಅವಶ್ಯಕತೆಗಳಿಗೆ ಬದಲಿಸಿಕೊಂಡಿತು.
ಈ ಚಿತ್ರರಂಗವೆಂಬ ಇತಿಹಾಸದಲ್ಲಿ ಬಹಳಷ್ಟು ಜನ ತಮ್ಮ ಬದುಕಿನ ಅವಶ್ಯಕತೆಗಳಿಗೆ ಇಲ್ಲಿಗೆ ಅರಸಿಬಂದಿದ್ದಾರೆ. ಭೀಕರ ಬಡತನದಲ್ಲಿದ್ದ ಕುಟುಂಬದಲ್ಲಿ ಈ ಹುಡುಗಿ ಹುಟ್ಟಿದಾಗ ಅವರ ತಂದೆ ತಾಯಿಯ ಬಳಿ ವೈದ್ಯ ಶುಶ್ರೂಷೆ, ಮಗುವಿನ ಪಾಲನೆಗಳಿಗೂ ಹಣವಿರಲಿಲ್ಲವಂತೆ. ಅಪ್ಪ ಆಲಿ ಭಕ್ಷ್ ಹೊಟ್ಟೆ ಪಾಡಿಗಾಗಿ ಸ್ಟುಡಿಯೋಗಳಿಗೆ ಅಲೆದಾಡುತ್ತಿದ್ದ. ತನ್ನ ಮಗಳಿಗೆ ಶಾಲೆಗೆ ಹೋಗಬೇಕು, ಎಲ್ಲ ಮಕ್ಕಳಂತೆ ಆಡಬೇಕು ಎಂಬ ಆಶಯವನ್ನು ತನ್ನ ಕಷ್ಟಗಳ ಮಸುಕಿನಲ್ಲಿ ಕಾಣದಾದ. ಏಳನೆಯ ವಯಸ್ಸಿನಲ್ಲೇ ಈ ಹುಡುಗಿ ತನ್ನಂತೆಯೇ ಸ್ಟುಡಿಯೋಗಳಲ್ಲಿ ಅವಕಾಶಗಳಿಗಾಗಿ ಅಲೆಯುವುದನ್ನು ವಿಧಿಸಿಬಿಟ್ಟ. ತನ್ನ ಆಶಯಗಳನ್ನೆಲ್ಲಾ ತನ್ನೊಡಲಿನಲ್ಲಿ ಅಡಗಿಸಿಕೊಂಡ ಏಳು ವಯಸ್ಸಿನ ಪುಟ್ಟ ಬಾಲೆ ‘ಬೇಬಿ ಮೀನಾಕುಮಾರಿ’ಯಾಗಿ ‘ಫರ್ಜ್ ಹಿ ವತನ್’ ಚಿತ್ರಕ್ಕೆ ಬಣ್ಣ ಹಚ್ಚಿದಳು.[೬][೭]
ಚಲನಚಿತ್ರರಂಗದಲ್ಲಿನ ಪ್ರಖ್ಯಾತಿಯ ದಿನಗಳು
[ಬದಲಾಯಿಸಿ]೧೯೪೯ರ ವೀರ ಘಟೋತ್ಕಚ, ೧೯೫೦ರ ವರ್ಷದ ಶ್ರೀ ಗಣೇಶ್ ಮಹಿಮಾ, ೧೯೫೨ರ ವರ್ಷದ ಅಲ್ಲಾವುದ್ಧೀನ್ ಅದ್ಭುತ ದೀಪ ಮುಂತಾದವು ಮೀನಾಕುಮಾರಿಯವರ ಪ್ರೌಢ ವಯಸ್ಸಿನ ಪ್ರಾರಂಭದಲ್ಲಿನ ಕೆಲವು ಚಿತ್ರಗಳು. ೧೯೫೨ರ ವರ್ಷದಲ್ಲಿ ಮೂಡಿಬಂದ ಪ್ರಸಿದ್ಧ ಚಿತ್ರ ‘ಬೈಜುಭಾವ್ರ’ ಮೀನಾಕುಮಾರಿ ಅವರಿಗೆ ಪ್ರಶಸ್ತಿ, ಪ್ರಸಿದ್ಧಿಗಳೆಲ್ಲವನ್ನೂ ತಂದುಕೊಟ್ಟಿತು.
ಮುಂದೆ ಕಣ್ಣೀರು ಹರಿಸುವ ಪಾತ್ರಗಳಲ್ಲಿ ಪ್ರಸಿದ್ಧಿ ಪಡೆದ ಮೀನಾಕುಮಾರಿ ಅವರ ಅಭಿನಯ ‘ಪರಿಣೀತ’, ‘ದೇರಾ’, ‘ಏಕ್ ಹಿ ರಾಸ್ತಾ’, ‘ಶಾರದಾ’, ‘ದಿಲ್ ಅಪನಾ ಔರ್ ಪ್ರೀತ್ ಪರಾಹೀ’ ಚಿತ್ರಗಳಿಂದ ಎಲ್ಲೆಲ್ಲೂ ಜನಮೆಚ್ಚುಗೆ ಪಡೆದವು. ‘ಅಝಾದ್', ‘ಮಿಸ್ ಮೇರಿ', ‘ಶರ್ತ್', ‘ಕೋಹಿನೂರ್' ಮುಂತಾದವು ಅವರ ಪ್ರಸಿದ್ಧಿಯನ್ನು ಮತ್ತಷ್ಟು ಹೆಚ್ಚಿಸಿದವು.
ಗುರುದತ್ ಅವರ ‘ಸಾಹೀಬ್ ಬೀಬಿ ಔರ್ ಗುಲಾಂ'(೧೯೬೨) ಚಿತ್ರದ ಚೋಟಿ ಬಾಹು ಪಾತ್ರದಲ್ಲಿ ಮೀನಾ ಮದ್ಯವ್ಯಸನಿ ಪತ್ನಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರ ಸಿನಿಮಾ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದ್ದು ಮಾತ್ರವಲ್ಲದೇ ವ್ಯಾವಹಾರಿಕವಾಗಿಯೂ ಅಪಾರ ಯಶಸ್ಸು ಕಂಡಿತು. ಈ ಪಾತ್ರಾಭಿನಯ ಭಾರತೀಯ ಚಲನಚಿತ್ರರಂಗದ ಶ್ರೇಷ್ಠ ಅಭಿವ್ಯಕ್ತಿಗಳಲ್ಲೊಂದು ಎಂದು ಹೆಸರಾಗಿದೆ. ಒಂದು ರೀತಿಯಲ್ಲಿ ಇದು ಮೀನಾಕುಮಾರಿ ಅವರ ಬದುಕಿನ ತದ್ರೂಪಿನಂತಿದೆ ಎಂಬ ಮಾತೂ ಇದೆ.
‘ಸಾಹೀಬ್ ಬೀಬಿ ಔರ್ ಗುಲಾಂ’ ಚಿತ್ರದ ಜನಪ್ರಿಯತೆಯಿಂದ ಮುಂದಿನ ನಾಲ್ಕು ವರ್ಷಗಳಲ್ಲಿ ಮೀನಾಕುಮಾರಿ ಅವರ ಯಶಸ್ಸು ತುತ್ತತುದಿಯವರೆಗೆ ಏರಿತ್ತು. ‘ದಿಲ್ ಏಕ್ ಮಂದಿರ್', ‘ಕಾಜಲ್', ‘ಪೂಲ್ ಔರ್ ಪತ್ತರ್' ಮುಂತಾದ ಎಲ್ಲ ಚಿತ್ರಗಳೂ ಶ್ರೇಷ್ಠ ಅಭಿನಯದ ಪ್ರಶಸ್ತಿಗಳಿಗೆ ನಾಮಾಂಕಿತಗೊಂಡಿದ್ದವು.
೧೯೫೨ರಲ್ಲಿ ಮೀನಾ ಕುಮಾರಿ ಖ್ಯಾತ ಬಾಲಿವುಡ್ ನಿರ್ದೇಶಕ, ವಿವಾಹಿತ ಕಮಲ್ ಅಮ್ರೋಹಿ ಅವರನ್ನು ಪ್ರೀತಿಸಿ ಮದುವೆಯಾದರು. ಮದುವೆ ನಂತರದಲ್ಲಿ ಮೀನಾ ಕುಮಾರಿ ಚಿತ್ರನಿರ್ಮಾಣ ಮಾಡಹೊರಟರು. ಮೊತ್ತ ಮೊದಲಿಗೆ ‘ದೀರಾ' ಚಿತ್ರವನ್ನು ನಿರ್ಮಾಣ ಮಾಡಿದರು. ಅದು ಅವರಿಬ್ಬರ ಪ್ರೇಮಕಥೆಯಾಗಿತ್ತು. ನಂತರ ಮತ್ತೊಂದು ಚಿತ್ರಕ್ಕೆ ಮುಹೂರ್ತ ನಡೆಯಿತು. ಅದುವೇ ‘ಪಕೀಜಾ'. ಆದರೆ ಅದು ಪರದೆಗೆ ಬರಲು ಮುಂದಿನ ೧೪ ವರ್ಷಗಳನ್ನು ತೆಗೆದುಕೊಂಡಿತು.
ಕಷ್ಟದ ಕೊನೆಯ ದಿನಗಳು
[ಬದಲಾಯಿಸಿ]ಮೀನಾಕುಮಾರಿ ಅವರ ಪ್ರೇಮದ ಬದುಕಿನಲ್ಲಿ ಉಂಟಾದ ಸೋಲು ೧೯೬೪ರ ವರ್ಷದಲ್ಲಿ ವಿಚ್ಚೇದನದಲ್ಲಿ ಕೊನೆಗೊಂಡಿತ್ತು. ಚಿತ್ರರಂಗದ ಗಲ್ಲಾಪೆಟ್ಟಿಗೆಯಲ್ಲೂ ಸೋಲು ಅವರನ್ನು ಹಿಂಬಾಲಿಸಿತ್ತು. ಇಂತಹ ಕ್ಷಣಗಳಲ್ಲಿ ಮೀನಾಕುಮಾರಿಯವರು ಕುಡಿತಕ್ಕೆ ಶರಣಾದರಂತೆ. ಅನಾರೋಗ್ಯಕ್ಕೀಡಾದ ಅವರನ್ನು ದೇಶ ವಿದೇಶದ ಚಿಕಿತ್ಸೆಗಳು ಗುಣಪಡಿಸಲು ವಿಫಲವಾದವು.
೧೯೭೨ರಲ್ಲಿ ‘ಪಕೀಜಾ' ಬಿಡುಗಡೆಯಾಯಿತು. ಚಿತ್ರ ಬಿಡುಗಡೆಯಾದಾಗ ಕುಂಟುತ್ತಿತ್ತಂತೆ. ೩೧ ಮಾರ್ಚ್ ೧೯೭೨ರ ದಿನ ಮೀನಾ ಕುಮಾರಿ ತಮ್ಮ ನಲವತ್ತರ ಹರಯದಲ್ಲಿ ಎಲ್ಲವನ್ನೂ ಬಿಟ್ಟು ಹೋದರು. ಇದಕ್ಕೇ ಕಾಯುತ್ತಿದ್ದಂತೆ ಗಳಿಕೆಯಲ್ಲಿ ಚೇತರಿಸಿದ ‘ಪಕೀಜಾ’ ಚಿತ್ರ ಅದ್ಧೂರಿಯ ವ್ಯಾವಹಾರಿಕ ಯಶಸ್ಸು ಮತ್ತು ಜನಪ್ರಿಯತೆಗಳನ್ನು ತನ್ನದಾಗಿಸಿಕೊಂಡಿತು.
ಹುಟ್ಟುವ ಹೊತ್ತಿನಲ್ಲಿ ಜೊತೆಗೆ ತಂದಿದ್ದ ಬಡತನ ಮೀನಾಕುಮಾರಿಯವರನ್ನು ಸಾವಿನ ಸಂದರ್ಭದಲ್ಲೂ ಜೊತೆಗೂಡಿತ್ತು. ದುರಂತದ ಚಿತ್ರಗಳು ಯಶಸ್ವಿಯಾಗುವಷ್ಟು ದುರಂತದ ಬದುಕುಗಳು ಯಶಸ್ಸಿನ ಹಾದಿ ಹಿಡಿಯುವುದಿಲ್ಲ. ಬಣ್ಣದ ಲೋಕವೆಂಬ ಚಿತ್ರರಂಗ ತನ್ನ ಒಡಲಲ್ಲಿ ಅನೇಕ ದುರಂತಗಳನ್ನು ಅಡಗಿಸಿಕೊಂಡಿದೆ. ಇವಕ್ಕೆಲ್ಲಾ ಪ್ರಾತಿನಿಧಿಕವೋ ಎಂಬಂತದ್ದು ಮೀನಾಕುಮಾರಿ ಎಂಬ ಶ್ರೇಷ್ಠ ಅಭಿವ್ಯಕ್ತಿ ಹೊರಹೊಮ್ಮಿಸಿ, ತನ್ನೊಳಗಿನಲ್ಲಿ ದುಃಖವನ್ನು ಗುಪ್ತಗಾಮಿನಿಯಾಗಿಸಿಕೊಂಡ ಮಾನವಜೀವಿಯೊಬ್ಬರ ನಿಜ ಬದುಕಿನ ಯಾತ್ರೆ.
ಕವಯತ್ರಿ
[ಬದಲಾಯಿಸಿ]ಮೀನಕುಮಾರಿಯವರು ತಮ್ಮ ಭಾವನೆಗಳನ್ನು ತಮ್ಮ ಅನೇಕ ಕವಿತೆಗಳಲ್ಲಿ ವ್ಯಕ್ತಪಡಿಸಿದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ "From Sridevi to Guru Dutt: Celebrities that passed away at an untimely age". News X. Archived from the original on 2018-06-20. Retrieved 2018-03-05.
- ↑ Mohamed, Khalid (25 March 2016). "Remembering the Tragedy Queen Meena Kumari". Khaleej Times.
- ↑ Tanha Chand. "Tanha Chand". Rekhta.org. Retrieved 2016-07-25.
- ↑ "Meena Kumari – "The Tragedy Queen of Indian Cinema"". Rolling Frames Film Society. Archived from the original on 2018-08-04. Retrieved 2018-08-01.
- ↑ "Meena Kumari – Interview (1952)". Cineplot.com. 2017-07-19. Retrieved 2017-07-29.
- ↑ "April 2 1954". Filmfare. Archived from the original on 2017-05-11. Retrieved 2016-09-25.
- ↑ Adrian Room (26 July 2010). "Meena Kumari". Dictionary of Pseudonyms: 13,000 Assumed Names and Their Origins. McFarland. ISBN 978-0-7864-4373-4. Retrieved 22 April 2012.