ಹುತ್ರಿದುರ್ಗ
ನವದುರ್ಗಗಳಲ್ಲಿ ಒಂದೆನಿಸಿರುವ ಹುತ್ರಿದುರ್ಗವು ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಸುಮಾರು 65 ಕಿ.ಮಿ. ದೂರದಲ್ಲಿದೆ. ಕುಣಿಗಲ್‍ನಿಂದ ಆಗ್ನೇಯ ದಿಕ್ಕಿಗೆ 16 ಕಿ.ಮೀ. ದೂರವಿರುವ ಹುತ್ರಿದುರ್ಗವು ಮಾಗಡಿಯ ವಾಯುವ್ಯ ದಿಕ್ಕಿಗೆ ಸರಿಸುಮಾರು ಅಷ್ಟೇ ದೂರದಲ್ಲಿದೆ. ಇದು ತುಮಕೂರು ಜಿಲ್ಲೆಯಲ್ಲಿದೆ. ಮಾಗಡಿ-ಕುಣಿಗಲ್ ರಾಜ್ಯ ಹೆದ್ದಾರಿ-94 ರಿಂದ ಸುಮಾರು 7 ಕಿ.ಮಿ. ದೂರದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು 3712 ಅಡಿಗಳ ಎತ್ತರದಲ್ಲಿರುವ ಹುತ್ರಿದುರ್ಗದಲ್ಲಿರುವ ದೊಡ್ಡಬೆಟ್ಟದ ಮೇಲೆ ಹಳೆಯ ಕೋಟೆ ಮತ್ತು ದೇವಸ್ಥಾನವಿದೆ. ಬೆಟ್ಟದ ಬುಡದಲ್ಲಿ ಅದೇ ಹೆಸರಿನ ಹಳ್ಳಿಯೂ ಇದೆ. ವಿಜಯನಗರದ ಅರಸರ ಸಾಮಂತರಾಗಿದ್ದ ಯಲಹಂಕ ನಾಡಪ್ರಭು ಕೆಂಪೇಗೌಡರ ಕಾಲದಲ್ಲಿ (ಕ್ರಿ.ಶ. 1534) ನಿರ್ಮಿಸಿದ ಕೋಟೆಯಿಂದಾಗಿ[೧] ಮತ್ತು ೩ನೇ ಆಂಗ್ಲೋ ಮೈಸೂರು ಯುದ್ದದಿಂದಾಗಿ ಹುತ್ರಿದುರ್ಗವು ಐತಿಹಾಸಿಕವಾಗಿ ಮಹತ್ವ ಹೊಂದಿದೆ. ಹುತ್ರಿದುರ್ಗ ಹಳ್ಳಿಯನ್ನು ಸುತ್ತುವರೆದ ಎರಡು ಬೆಟ್ಟದತುದಿಗಳ ಮೇಲೆ ಈ ಕೋಟೆಯನ್ನು ಕಾಣಬಹುದು. ಇದು ಒಂದು ಏಳು ಸುತ್ತಿನ ಕೋಟೆಯಾಗಿತ್ತು. ಈಗ ಕೋಟೆ ಶಿಥಿಲಾವಸ್ಥೆಯಲ್ಲಿದೆ. ಬೆಟ್ಟದ ಮೇಲುಗಡೆ ಶಿವ ಮತ್ತು ನಂದಿ ಗುಡಿಯಿದೆ. ಪ್ರತಿ ಸೋಮವಾರ ಮತ್ತು ಶುಕ್ರವಾರದಂದು ಪೂಜೆ ಸಲ್ಲಿಸಲಾಗುತ್ತದೆ. ಪಕ್ಕದ ಹೊಡಾಗಟ್ಟ ಗ್ರಾಮದಲ್ಲಿ ಹೊಯ್ಸಳರ (ಹುಲಿ ಕೊಲ್ಲುತ್ತಿರುವ ಸಳ)ಶಾಸನವಿದೆ.
ಹುತ್ರಿದುರ್ಗ | |
---|---|
ಹಳ್ಳಿ/ಕೋಟೆ | |
ದೇಶ | India |
State | ಕರ್ನಾಟಕ |
District | ತುಮಕೂರು |
Founded by | ಯಲಹಂಕ ನಾಡಪ್ರಭು ಕೆಂಪೇಗೌಡ |
Population | |
• Total | ೩೦೦ |
Languages | |
• Official | ಕನ್ನಡ |
Time zone | UTC+5:30 (IST) |
ಹುತ್ರಿದುರ್ಗದ ಇತಿಹಾಸ
[ಬದಲಾಯಿಸಿ]- ಮಾಗಡಿ ಮತ್ತು ಕುಣಿಗಲ್ ನಡುವಿನ ಸಂತೇಪೇಟೆಯ ಬೆಟ್ಟಸಾಲುಗಳ ಮಧ್ಯದಲ್ಲಿ ಹುತ್ರಿ ಎಂಬ ಪುಟ್ಟಗ್ರಾಮವಿದೆ. ನಿಸರ್ಗದ ಮಡಿಲಿನಲ್ಲಿರುವ ಈ ಗ್ರಾಮದ ಸುತ್ತ ದೊಡ್ಡಬೆಟ್ಟ, ಬಸವನದುರ್ಗದ ಬೆಟ್ಟ ಹಾಗೂ ತಿರುಮಲ ಬೆಟ್ಟಗಳನ್ನು ಕಾಣಬಹುದಾಗಿದೆ. ಹುತ್ರಿ ಗ್ರಾಮವಿರುವ ಕಾರಣ ದಿಂದಾಗಿ ಇಲ್ಲಿರುವ ದೊಡ್ಡಬೆಟ್ಟವನ್ನು ಹುತ್ರಿ ಬೆಟ್ಟ ಎಂದು ಕರೆಯುತ್ತಾರೆ. ಮೂರು ಬೆಟ್ಟಗಳ ಮಧ್ಯದಲ್ಲಿರುವ ಹುತ್ರಿ ಗ್ರಾಮವನ್ನೂ ಸೇರಿಸಿಕೊಂಡು ಏಳುಸುತ್ತಿನ ಕೋಟೆಯನ್ನು ಯಲಹಂಕ ನಾಡಪ್ರಭು ಕೆಂಪೇಗೌಡರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ.
- ಕೋಟೆಯ ನಿರ್ಮಾಣ ಕಾರ್ಯ ಕ್ರಿ.ಶ. 1534ರಲ್ಲಿ ಶುರುವಾಗಿರುವುದಾಗಿ ಕೋಟೆಯ ಎಲಿಯೂರು ದ್ವಾರದ ತೊಲೆಯ ಮೇಲಿರುವ ಶಾಸನದಿಂದ ತಿಳಿದುಬರುತ್ತದೆ. ಕೋಟೆಯಿರುವ ಕಾರಣದಿಂದಾಗಿ ಈ ಪ್ರದೇಶಕ್ಕೆ ಹುತ್ರಿದುರ್ಗ ಎಂಬ ಹೆಸರು ಬಂದಿದೆ. ಹುತ್ರಿದುರ್ಗವು ಸಮುದ್ರ ಮಟ್ಟದಿಂದ 3713 ಅಡಿ ಎತ್ತರದಲ್ಲಿದೆ. ಪುರಾಣಗಳಲ್ಲಿ ಕಾಮಗಿರಿ ಎಂತಲೂ, ಕೆಂಪೇಗೌಡರ ಸಂತತಿಯಲ್ಲಿ ಕೊನೆಯವರಾದ ಕೆಂಪವೀರಪ್ಪಗೌಡರ ಕಾಲದಲ್ಲಿ ದೇವಗಿರಿ ಎಂದೂ ಕರೆಸಿಕೊಂಡಿದೆ.
- ಈ ದುರ್ಗವು ಮೈಸೂರು ಅರಸರ ನಂತರ ಟಿಪ್ಪು ಸುಲ್ತಾನನ ಆಳ್ವಿಕೆಯ ಪ್ರದೇಶವಾಗಿದ್ದು 1791-92ರಲ್ಲಿ ನಡೆದ 3ನೇ ಆಂಗ್ಲೋ-ಮೈಸೂರು ಯುದ್ದದ ವೇಳೆ ಬ್ರಿಟೀಷ್ ಸೇನಾಧಿಪತಿ ಲಾರ್ಡ್ ಕಾರ್ನ್‍ವಾಲೀಸ ಹಾಗು ಲೆಫ್ಟಿನೆಂಟ್ ಕರ್ನಲ್ ಸ್ಟುವರ್ಟ್ ಟಿಪ್ಪುವಿನ ಸೈನಿಕರನ್ನು ಇಲ್ಲಿಂದ ಓಡಿಸಿ ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆÀ. ಈ ವೇಳೆಯಲ್ಲಿ ಸುಸ್ಥಿತಿಯಲ್ಲಿದ್ದ ಕೋಟೆಯು ಮದ್ದು-ಗುಂಡುಗಳ ದಾಳಿಗೆ ಸಿಕ್ಕಿ ಕೋಟೆಯ ಬಾಗಿಲು ಸೇರಿದಂತೆ ಹಲವು ಭಾಗಗಳು ನಾಶವಾಗಿರುವುದು ತಿಳಿದು ಬರುತ್ತದೆ.
- ಆಂಗ್ಲರ ಉಚ್ಛಾರಣೆಯ ದೋಷದಿಂದ ರೂಪಾಂತರಗೊಳ್ಳುವ ಹುತ್ರಿದುರ್ಗವು ಬ್ರಿಟೀಷ್ ಲೈಬ್ರರಿಯಲ್ಲಿನ ದಾಖಲೆಗಳಲ್ಲಿ “ಔಟ್ರ ಡ್ರೂಗ್” OUTRADROOG ಎಂದು ದಾಖಲಾಗಿದೆ. 1799ರಲ್ಲಿ ನಡೆಯುವ 4ನೇ ಆಂಗ್ಲೋ-ಮೈಸೂರು ಯುದ್ದದಲ್ಲಿ ಬ್ರಿಟೀಷರು ಮೈಸೂರನ್ನು ವಶಪಡಿಸಿ ಕೊಳ್ಳುವವರೆಗೂ ಹುತ್ರಿದುರ್ಗವು ಬ್ರಿಟೀಷ್ ಸೈನ್ಯಕ್ಕೆ ಅಗತ್ಯವಾದ ಆಹಾರ, ದವಸ-ಧಾನ್ಯಗಳು ಮತ್ತು ಯುದ್ದದಲ್ಲಿ ಭಾಗವಹಿಸಿದ್ದ ಕುದುರೆಗಳಿಗೆ ಆಹಾರವನ್ನು ಪೂರೈಕೆ ಮಾಡುತ್ತಿತ್ತು.
- ಅಲ್ಲದೇ ಇಲ್ಲಿ ಬ್ರಿಟೀಷ್ ಸೈನಿಕರಿಗೆ ಶುಶ್ರೂಷೆ ಮಾಡಲು ಆಸ್ಪತ್ರೆ ಹಾಗೂ ಶಸ್ತ್ರಾಸ್ತ್ರಗಳ ಸಂಗ್ರಹಗಾರಗಳು ಇದ್ದವೆಂಬುದು ಬ್ರಿಟೀಷ್ ಲೈಬ್ರರಿಯಲ್ಲಿನ ದಾಖಲೆಗಳಿಂದ ತಿಳಿದುಬರುತ್ತದೆ. ಕೋಟೆಯ ರಚನೆಗೆ ಹಾಗೂ ಕೋಟೆಯ ಸುತ್ತಲಿನ ನಿಸರ್ಗ ಸೌಂದರ್ಯಕ್ಕೆ ಮನಸೋತ ಬ್ರಿಟೀಷ್ ಚಿತ್ರಕಾರರು ತಮ್ಮ ಕುಂಚದಿಂದ ಹಲವಾರು ಸುಂದರ ಚಿತ್ರಗಳನ್ನು ರಚಿಸಿರುವುದು ಹುತ್ರಿದುರ್ಗದ ನಿಸರ್ಗ ರಮಣೀಯತೆಗೆ ಸಾಕ್ಷಿಯಾಗಿದೆ.
ಮೂರನೇ ಆಂಗ್ಲೋ-ಮೈಸೂರು ಯುದ್ದ
[ಬದಲಾಯಿಸಿ]ಹುತ್ರಿದುರ್ಗವು ಸಾಂಪ್ರದಾಯಿಕವಾಗಿ ಕೆಂಪೇಗೌಡರು ನಿರ್ಮಿಸಿದ ಕೋಟೆ ಕೊತ್ತಳಗಳಿಂದ ಹೆಸರುವಾಸಿಯಾಗಿದೆ. ಇದಲ್ಲದೆ ಟಿಪ್ಪುವಿನ ವಶಕ್ಕೆ ಬಂದ ಮೇಲೆ ಆತ ಯೂರೋಪಿಯನ್ನರನ್ನು ಅಡಗಿಸಿಡಲು ಈ ಕೋಟೆ ಬಳಸಿಕೊಂಡಿರುವುದು ತಿಳಿಯುತ್ತದೆ[೨]. ಮುಂದೆ ೧೭೯೧-೯೨ ರಲ್ಲಿ ರಂದು ಮೈಸೂರಿನ ಟಿಪ್ಪು ಸುಲ್ತಾನ್ ಹಾಗೂ ಕಾರ್ನ್‌ವಾಲಿಸ್ ಅವರ ನಡುವೆ ನಡೆದ ಮೂರನೇ ಆಂಗ್ಲೋ ಮೈಸೂರು ಯುದ್ದದ ಕಾರಣದಿಂದಾಗಿ ಈ ಬಲಿಷ್ಠ ದುರ್ಗದ ಖ್ಯಾತಿ ಜಾಗತೀಕವಾಗಿ ಪ್ರಚಲಿತಕ್ಕೆ ಬಂತು. ಹುತ್ರಿದುರ್ಗಕ್ಕೆ ಮುತ್ತಿಗೆ ಹಾಕಿದ ವಿವರಣೆಯು ಕಾರ್ನ್ ವಾಲೀಸನ ಡೈರಿ, ಬ್ರಿಟೀಷರ ಕಲಾಕೃತಿಗಳು, ನಕ್ಷೆಗಳು ಸೇರಿದಂತೆ ಹಲವು ಕಡತಗಳಲ್ಲಿ ದಾಖಲಾಗಿದೆ.
ಹುತ್ರಿ ಗ್ರಾಮ
[ಬದಲಾಯಿಸಿ]- ಹುತ್ರಿಯು ಸುಮಾರು ಮನೆಗಳಿರುವ ಪುಟ್ಟಗ್ರಾಮವಾಗಿದ್ದು ಇಲ್ಲಿರುವ ದೊಡ್ಡ ಬೆಟ್ಟ ಹಾಗೂ ಬಸವನಬೆಟ್ಟದ ಮಧ್ಯದಲ್ಲಿ ಆಯತಾಕಾರವಾಗಿ ಊರು ಹರಡಿಕೊಂಡಿದೆ. ನೆಲಮಟ್ಟದಿಂದ ಸುಮಾರು 90 ಅಡಿ ಎತ್ತರದ ಕಣಿವೆಯಲ್ಲಿರುವ ಕಾರಣ ದೂರದಿಂದ ಊರು ಗೋಚರಿಸುವುದಿಲ್ಲ. ಸಮತಟ್ಟಾದ ಪ್ರದೇಶದಿಂದ ಕೂಡಿರುವ ಈ ಊರನ್ನು ಮುಖ್ಯರಸ್ತೆ ಮತ್ತು ಅಡ್ಡರಸ್ತೆಗಳಿಂದ ವಿಂಗಡಿಸಲಾಗಿದೆ.
- ಬೆಟ್ಟಗಳಡಿಯ ಕಣವೆ ಪ್ರದೇಶದಲ್ಲಿರುವ ಕಾರಣ ನೀರಿನ ಸಮಸ್ಯೆಯನ್ನು ತಪ್ಪಿಸಲು ಮಳೆನೀರನ್ನು ಸಂಗ್ರಹಿಸಲು ಅಗಲವಾದ ದೊಣೆಗಳನ್ನು ಮತ್ತು ಕೆಲವು ಕಡೆ ಕಲ್ಯಾಣಿಗಳನ್ನು ಮಾಡಲಾಗಿದೆ. ಊರಿನ ಉತ್ತರದ ಅಂಚಿನಲ್ಲಿ ಹಳೆಯ ವೀರಭದ್ರೇಶ್ವರ ದೇವಸ್ಥಾನವಿದೆ. ದೇವಾಲಯದ ಗರ್ಭಗುಡಿಯು ಚೌಕಾಕಾರವಾಗಿದ್ದು ಒಳಗಡೆ ವೀರಭದ್ರ ವಿಗ್ರಹವಿದೆ. ಅಂತರಾಳದ ದ್ವಾರವು ಅಲಂಕಾರಿಕ ಪಟ್ಟಿಕೆಗಳಿಂದ ಕೊಡಿದೆ.
- ಮೂಲತಃ ತೆರೆದ ಮಂಟಪವಾಗಿದ್ದ ನವರಂಗವನ್ನು ಇತ್ತೀಚೆಗೆ ಗೋಡೆಗಳನ್ನು ನಿರ್ಮಿಸಿ ಮುಚ್ಚಲಾಗಿದೆ. ನವರಂಗದ ಕಂಬಗಳಲ್ಲಿ 17ನೇ ಶತಮಾನದ ಶಿಲ್ಪಶೈಲಿಗಳನ್ನು ಹೋಲುವ ಸೇರಿದ ಕಿರುಗಾತ್ರದ ಉಬ್ಬುಶಿಲ್ಪಗಳಿವೆ. ಕಣಿವೆಯ ಪ್ರದೇಶವಾದ ಕಾರಣ ಹುತ್ರಿ ಗ್ರಾಮವು ವೈರಿಗಳಿಗೆ ಅಷ್ಟು ಸುಲಭವಾಗಿ ತುತ್ತಾಗಲು ಸಾಧ್ಯವಿರಲಿಲ್ಲ. ಇದರಿಂದಾಗಿಯೇ ಪ್ರಾಚೀನ ಕಾಲದಿಂದಲೂ ಇಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದರೆಂದು ಸಂಶೋಧನೆಗಳಿಂದ ತಿಳಿದು ಬರುತ್ತದೆ.
ಹುತ್ರಿದುರ್ಗದ ಕೋಟೆ
[ಬದಲಾಯಿಸಿ]- ಹುತ್ರಿದುರ್ಗ ಕೋಟೆಯನ್ನು ಕಟ್ಟುವಾಗ ಬೆಟ್ಟಗಳ ಮಧ್ಯವಿರುವ ಮೈದಾನದಂತಹ ಜಾಗದಲ್ಲಿ ಹುತ್ರಿ ಎಂಬ ಗ್ರಾಮವನ್ನು ರಚಿಸಲಾಗಿದೆ. ಹುತ್ರಿ ಗ್ರಾಮವು ಸುತ್ತಲಿನ ಪ್ರದೇಶಕ್ಕಿಂತ ಸುಮಾರು 90 ಅಡಿ ಎತ್ತರದಲ್ಲಿದೆ. ಈ ಊರನ್ನು ಸೇರಿಸಿಕೊಂಡು ಸುತ್ತಲಿರುವ ಬೆಟ್ಟಗಳಿಗೆ ಹೊಂದಿ ಕೊಂಡಂತೆ ಆಯತಾಕಾರದ ಕೋಟೆಯನ್ನು ಕಟ್ಟಲಾಗಿದೆ.
- ದೊಡ್ಡಬೆಟ್ಟ ಊರಿನ ಉತ್ತರದ ಅಂಚಿನಲ್ಲಿದ್ದರೆ ಬಸವನಬೆಟ್ಟವು ದಕ್ಷಿಣದ ಅಂಚಿನಲ್ಲಿದೆ. ಪುಟ್ಟದಾದ ತಿರುಮಲ ಬೆಟ್ಟವು ಪೂರ್ವದಿಕ್ಕಿನಲ್ಲಿದ್ದು, ಊರಿನ ಪಶ್ಚಿಮದಿಕ್ಕಿನಲ್ಲಿ ಇಳಿಜಾರಿನಂತಹ ಪ್ರದೇಶವಿದ್ದು ಇಲ್ಲಿ ಸಂತೇಪೇಟೆ ಎಂಬ ಗ್ರಾಮವಿದೆ. ಹುತ್ರಿದುರ್ಗವನ್ನು ಪ್ರವೇಶಿಸಲು ಸಂತೇಪೇಟೆಯನ್ನು ಹಾದುಹೋಗಬೇಕಾಗುತ್ತದೆ.
- ಹುತ್ರಿದುರ್ಗದ ಕೋಟೇಯು ಆಯತಾಕಾರದಲ್ಲಿ ರಚನೆಯಾಗಿದೆ. ಕೋಟೆಯು ಅನೇಕ ಚೌಕಾಕಾರದ ಮತ್ತು ಅರ್ಧ ವರ್ತುಲಾಕಾರದ ಕೊತ್ತಳಗಳಿಂದ ಕೂಡಿದ್ದು ಮೂರು ಮುಖ್ಯ ದ್ವಾರಗಳನ್ನು ಹೊಂದಿದೆ. ಕೋಟೆಯ ನಿರ್ಮಾಣದಲ್ಲಿ ಅಲ್ಲಿಯೇ ದೊರೆಯುವ ವಿವಿಧ ಬಗೆಯ ಕಲ್ಲುಗಳನ್ನು ಬಳಸಲಾಗಿದೆ. ಕೋಟೆಯ ಗೋಡೆಗಳು ಸುಮಾರು ಮೂರರಿಂದ ಐದು ಮೀಟರ್ ಎತ್ತರವಿದ್ದು ಒಂದರಿಂದ ಎರಡು ಮೀಟರ್ ನಷ್ಟು ದಪ್ಪವಾಗಿವೆ.
- ಬೆಟ್ಟದ ಕಣಿವೆಯಂತಹ ಪ್ರದೇಶದಲ್ಲಿ ಗೋಡೆಗಳ ಎತ್ತರವನ್ನು ಹೆಚ್ಚಿಸಿ ಬೆಟ್ಟದ ಮೇಲೆ ಗೋಡೆಯ ಎತ್ತರದ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಕೋಟೆ ಗೋಡೆಗಳ ಆಯಕಟ್ಟಿನ ಸ್ಥಳಗಳಲ್ಲಿ ಚೌಕಾಕಾರದ ಕೊತ್ತಳಗಳನ್ನು ನಿರ್ಮಿಸಲಾಗಿದೆ. ಕೊತ್ತಳಗಳು ನಾಲ್ಕರಿಂದ ಆರು ಮೀಟರ್ ಎತ್ತರವಿದ್ದು ಐದು ಮೀಟರಿನಷ್ಟು ಚೌಕಾಕಾರವಾಗಿವೆ. ಕೊತ್ತಳಗಳನ್ನು ಕೋಟೆಯಿಂದ ಮುಂದಕ್ಕೆ ಚಾಚಿಕೊಂಡಂತೆ ನಿರ್ಮಿಸಲಾಗಿತ್ತು.
- ಇದರಿಂದಾಗಿ ಕೋಟೆಯ ಹೊರಗಿನಿಂದ ವೈರಿಗಳು ಹಾರಿಸುತ್ತಿದ್ದ ಫಿರಂಗಿ ಗುಂಡುಗಳು ಕೋಟೆಯ ಒಳಕ್ಕೆ ಪ್ರವೇಶಿಸದಂತೆ ತಡೆಯಲು ಸಾಧ್ಯವಾಗುತ್ತಿತ್ತು. ಕೆಂಪೇಗೌಡರ ಕಾಲದಲ್ಲಿ ದುರ್ಗದ ಮೇಲೆ ದಂಡೆತ್ತಿ ಬರುವ ವೈರಿಗಳ ಮೇಲೆ ನಿಗಾವಹಿಸಲು ಕೊತ್ತಳಗಳನ್ನು ನಿರ್ಮಿಸಲಾಗಿತ್ತು. ಟಿಪ್ಪು ಸುಲ್ತಾನನ ಆಳ್ವಿಕೆಗೆ ಒಳಪಟ್ಟ ಮೇಲೆ ಗೋಡೆಗಳ ಕುಂಬಿಯನ್ನು ಹೆಚ್ಚಿಸಿ ಬಂದೂಕು ಹಾಗೂ ಫಿರಂಗಿಗಳನ್ನು ಬಳಸಲು ಕಿಂಡಿಗಳನ್ನು ಮಾಡಲಾಗಿದೆ.
ದೊಡ್ಡಬೆಟ್ಟದ ಕೋಟೆ
[ಬದಲಾಯಿಸಿ]- ದಕ್ಷಿಣದ ಅಂಚಿನಲ್ಲಿ ನೆಲಮಟ್ಟದಿಂದ 300 ಮೀಟರಿನಷ್ಟು ಎತ್ತರವಿರುವ ದೊಡ್ಡ ಬೆಟ್ಟವು ಹುತ್ರಿದುರ್ಗದ ಮುಖ್ಯವಾದ ಕೋಟೆ ಪ್ರದೇಶ. ವೈರಿಗಳಿಂದ ರಕ್ಷಣೆ ಪಡೆಯಲು ಅನ್ನುಕೂಲವಾಗುವಂತೆ ಬೆಟ್ಟದ ಬುಡದಿಂದ ಮೇಲ್ಭಾಗದರೆಗೂ ಸುಮಾರು ಎಂಟು ಗೋಡೆಗಳನ್ನು ನಿರ್ಮಿಸಲಾಗಿದೆ. ಮೂರರಿಂದ ನಾಲ್ಕು ಮೀಟರ್ ಎತ್ತರವಿರುವ ಗೋಡೆಗಳು ಒಂದರಿಂದ ಎರಡು ಮೀಟರ್ ದಪ್ಪವಾಗಿವೆ.
- ಗಾರೆಯನ್ನು ಬಳಸದೆ ನಯಗೊಳಿಸಿದ ಇಲ್ಲವೇ ನುಣುಪಾದ ಕಲ್ಲುಗಳಿಂದ ಗೋಡೆಗಳನ್ನು ಕಟ್ಟಲಾಗಿದೆ. ಗೋಡೆಯ ಕುಂಬಿ ಭಾಗವನ್ನು ಇಳಿಜಾರಾಗಿ ಕಟ್ಟಲಾಗಿದ್ದು ಇಟ್ಟಿಗೆ ಮತ್ತು ಗಾರೆಯಿಂದ ಮಾಡಲಾಗಿದೆ. ಇಳಿಜಾರಾಗಿರುವ ಕುಂಬಿಯು ಕೋಟೆಯ ಹೊರಗಿನಿಂದ ವೈರಿಗಳು ಹಾರಿಸಿದ ಫಿರಂಗಿ ಗುಂಡು ಅಥವಾ ಈಟಿ, ಭರ್ಜಿಗಳಂತಹ ತೀಕ್ಷ್ಣವಾದ ಆಯುಧಗಳು ಕೋಟೇಯ ಒಳಭಾಗಕ್ಕೆ ಬೀಳುವುದನ್ನು ತಪ್ಪಿಸುತ್ತಿದ್ದವು.
- ಕೋಟೆಯ ಕುಂಬಿಗೋಡೆಗಳಲ್ಲಿ ಕಿಂಡಿಗಳನ್ನು ಮಾಡಲಾಗಿದ್ದು ಸೈನಿಕರು ಕೋಟೆಯ ಒಳಗಿನಿಂದ ಹೊರಗಿನ ವೈರಿ ಸೈನಿಕರ ಮೇಲೆ ಪ್ರತಿದಾಳಿ ಮಾಡಲು ಸಹಕಾರಿಯಾಗಿದ್ದವು. ಓಪ್ಪು ಸುಲ್ತಾನನ ಕಾಲಾವಧಿಯಲ್ಲಿ ಇಳಿಜಾರಿನ ಕುಂಬಿ ಹಾಗು ಫಿರಂಗಿಗಳನ್ನು ಬಳಸಲು ತೆರೆದ ಕಿಂಡಿಗಳನ್ನು ನಿರ್ಮಿಸಲಾಗಿದೆ. ಗೊಡೆಯಲ್ಲಿ ಕುಂಬಿಗೆ ಹೊಂದಿಕೊಂಡಂತೆ ಪಹರೆ ಕಟ್ಟೆಯನ್ನು ಕಟ್ಟಲಾಗಿದ್ದು ಇದು ಸೈನಿಕರ ಪಹರೆಗೆ ಅನುಕೂಲಕರವಾಗಿತ್ತು.
- ದೊಡ್ಡಬೆಟ್ಟದ ಕೋಟೆಯಲ್ಲಿ ಚೌಕಾಕಾರದ ಹಾಗು ವರ್ತುಲಾಕಾರದ ಕೊತ್ತಳಗಳಿವೆ. ಕೆಂಪೇಗೌಡರ ಕಾಲದಲ್ಲಿ ಕೇವಲ ಚೌಕಾಕಾರದ ಕೊತ್ತಳಗಳಿದ್ದರೆ, ಟಿಪ್ಪು ಸುಲ್ತಾನನ ಕಾಲಾವಧಿಯಲ್ಲಿ ನವೀಕರಣಗೊಳ್ಳುವ ಸಂಧರ್ಭದಲ್ಲಿ ಚೌಕಾಕಾರದ ಬದಲಾಗಿ ವರ್ತುಲಾಕಾರದ ಕೊತ್ತಳಗಳನ್ನು ನಿರ್ಮಿಸಲಾಗಿದೆ. ವರ್ತುಲಾಕಾರದ ಕೊತ್ತಳಗಳು ಫಿರಂಗಿಗಳನ್ನು ಬಳಸಲು ಸಹಕಾರಿಯಾಗಿದ್ದವು ಅಲ್ಲದೇ ಫಿರಂಗಿಗಳನ್ನು ಸುಲಭವಾಗಿ ತಿರುಗಿಸಲು ಸಾಧ್ಯವಾಗುತ್ತಿತ್ತು.
- ದೊಡ್ಡಬೆಟ್ಟವು ವಿಶಾಲವಾಗಿದ್ದು ಇದನ್ನು ಪೂರ್ವದ ಆವರಣ ಮತ್ತು ಪಶ್ಚಿಮದ ಆವರಣಗಳೆಂದು ಎರಡು ಸಂಕೀರ್ಣಗಳಾಗಿ ವಿಂಗಡಿಸಲಾಗಿದೆ. ಈ ಎರಡೂ ಆವರಣಗಳನ್ನು ಚಿಕ್ಕದಾದ ಬಂಡೆಕಲ್ಲುಗಳು ಬೇರ್ಪಡಿಸುತ್ತವೆ. ಈ ಎರಡು ಸಂಕೀರ್ಣಗಳು ಕೆಲವು ವಿಶೇಷ ಕಟ್ಟಡಗಳಿಂದ ಕೂಡಿವೆ. ಅಲ್ಲದೇ ಇವೆರಡರ ನಡುವೆ ಕೊಂಡಿಯಾಗಿ ಒಂದು ಮಂಟಪವಿದ್ದು ಅದನ್ನು ಕೆಂಪೇಗೌಡರ ಹಜಾರ ಎಂದು ಕರೆಯುತ್ತಾರೆ.
ಕೋಟೆಯ ಮೂರು ಮುಖ್ಯ ದ್ವಾರಗಳು
[ಬದಲಾಯಿಸಿ]ಹುತ್ರಿದುರ್ಗದ ಕೋಟೆಯು ಮೂರು ಮುಖ್ಯದ್ವಾರಗಳನ್ನು ಒಳಗೊಂಡಿದೆ. ಈ ದ್ವಾರಗಳು ದುರ್ಗವನ್ನು ಪ್ರವೇಶಿಸಲು ಮಾಡಲಾದ ದ್ವಾರಗಳಾಗಿವೆ ಅವುಗಳೆಂದರೆ-
- ಎಲಿಯೂರು ದ್ವಾರ: *ಪಶ್ಚಿಮ ದಿಕ್ಕಿಗಿರುವ ಎಲಿಯೂರು ದ್ವಾರವು ಕೋಟೆಯ ಮುಖ್ಯವಾದ ದ್ವಾರವಾಗಿದೆ. ಈ ದ್ವಾರದ ತೊಲೆಯ ಮೇಲೆ ಶಾಸನವಿದ್ದು () ಇದರ ಪ್ರಕಾರ ಈ ದ್ವಾರವನ್ನು ಚೆನ್ನಮನಾಯಕಯ್ಯನು 1534ರಲ್ಲಿ ಮುತ್ತಯ್ಯನಾಯಕನ ಶಿಷ್ಯನಾಗಿದ್ದ ಜಂಗಮಯ್ಯನಿಂದ ನಿರ್ಮಿಸಿದನೆಂದು ತಿಳಿದುಬರುತ್ತದೆ. ಭದ್ರವಾದ ನವಕಂಭಗಳಿಂದ ಹಾಗೂ ಭೋದಿಗೆಗಳಿಂದ ಕೂಡಿದ ಈ ದ್ವಾರವು ದೂರದಿಂದ ವೈರಿಗಳಿಗೆ ಕಾಣದಂತೆ ಮುಂಭಾಗದಲ್ಲಿ ಎತ್ತರದ ಅಡ್ಡಗೋಡೆಯನ್ನು ಕಟ್ಟಿ ಮರೆಮಾಡಲಾಗಿದೆ.
- ಅಡ್ದಗೋಡೆಯನ್ನು ದಾಟಿಬಂದರೆ ಪಶ್ಚಿಮಾಭಿಮುಖವಾಗಿ ಮುಖ್ಯದ್ವಾರವು ಕಂಡುಬರುತ್ತದೆ. ದ್ವಾರವು ಮರದ ಬಾಗಿಲಿನಿಂದ ಕೂಡಿತ್ತು. ಆದರೆ ದ್ವಾರಕ್ಕೆ ಹಾಕಿದ್ದ ಮರದ ಬಾಗಿಲುಗಳು ಕಾಲಾನುಕ್ರಮದಲ್ಲಿ ನಾಶವಾಗಿವೆ. ದ್ವಾರದಿಂದ ಪ್ರವೇಶಿಸಿದರೆ ಎರಡೂ ಬದಿಯಲ್ಲಿ ಕಂಬಗಳಿಂದ ಕೂಡಿದ ಎತ್ತರದ ವೇದಿಕೆಗಳಿವೆ. ಈ ಕಂಬಗಳ ಮೇಲೆ ಗಣಪತಿ, ಯತಿ, ಶಿವಲಿಂಗ, ಮೀನನಾಥ ಇತ್ಯಾದಿ ಉಬ್ಬುಶಿಲ್ಪಗಳನ್ನು ಕೆತ್ತಲಾಗಿದೆ. ವೇದಿಕೆಗಳ ಮೇಲ್ಛಾವಣಿಯ ಶಿಲಾಫಲಕದಲ್ಲಿ ಕ್ರಿ..ಶ.1534ರ ಚೆನ್ನಮ್ಮನಾಯಕನನ್ನು ಹೆಸರಿಸುವ ಶಾಸನವಿದೆ.
- ಮಾಗಡಿ ದ್ವಾರ: *ಪೂರ್ವ ದಿಕ್ಕಿಗಿರುವ ಮಾಗಡಿ ದ್ವಾರವನ್ನು ಎಲಿಯೂರು ದ್ವಾರದ ನೇರಕ್ಕೆ ಕಟ್ಟಲಾಗಿದೆ.ಇದು ಮಾಗಡಿ ಪಟ್ಟಣದ ಕಡೆಗೆ ಮುಖ ಮಾಡಿದ್ದರಿಂದಾಗಿ ಈ ದ್ವಾರಕ್ಕೆ ಮಾಗಡಿ ದ್ವಾರವೆಂದು ಕರೆಯಲಾಗಿದೆ. ಗಾತ್ರದಲ್ಲಿ ಚಿಕ್ಕದಾಗಿರುವ ಈ ದ್ವಾರವನ್ನು ಕಂಬ ಮತ್ತು ಬೋರಿಗೆಗಳಿಂದ ಕಟ್ಟಲಾಗಿದೆ.
- ದ್ವಾರದ ಒಳಗೆ ಎರಡೂ ಬದಿಗಳಿಗಿದ್ದ ಜಗಲಿಗಳು ನಾಶವಾಗಿವೆ. ದ್ವಾರದ ಬದಿಗಳಲ್ಲಿ ಚೌಕಾಕಾರದ ಕೊತ್ತಳಗಳಿವೆ. ವೈರಿಗಳಿಗೆ ದ್ವಾರವು ಕಾಣದಂತೆ ಮರೆಮಾಡಲು ಅಡ್ಡಗೋಡೆಗಳನ್ನು ನಿರ್ಮಿಸಲಾಗಿತ್ತು. ಅವೂ ಸಹ ನಾಶವಾಗಿವೆ. ಮಾಗಡಿ ದ್ವಾರದ ಪಕ್ಕದಲ್ಲಿ ಒಂದು ಕಲ್ಯಾಣಿಯೂ ಇದೆ.
- ಬಾಲಿಕಟ್ಟೆ ದ್ವಾರ:*ಕೋಟೆಯ ದಕ್ಷಿಣದ ಅಂಚಿನಲ್ಲಿರುವುದೇ ಬಾಲಿಕಟ್ಟೆ ದ್ವಾರ. ಬಾಲಿಕಟ್ಟೆ ದ್ವಾರವು ಸಂಪೂರ್ಣ ನಾಶವಾಗಿದ್ದು ದೊರೆತಿರುವ ಹಳೆಯ ನಕ್ಷೆಯ ಪ್ರಕಾರ ಈ ದ್ವಾರದ ಇಕ್ಕೆಲಗಳಲ್ಲಿ ದೊಡ್ಡಗಾತ್ರದ ಕೊತ್ತಳಗಳಿದ್ದವು ಎಂದು ತಿಳಿದುಬರುತ್ತದೆ. ದ್ವಾರವು ದೊಡ್ಡಗಾತ್ರದಲ್ಲಿದ್ದು ಕಾವಲುಗಾರರ ಅನುಕೂಲಕ್ಕಾಗಿ ದ್ವಾರದ ಎರಡೂ ಒಳಬದಿಗಳಲ್ಲಿ ಜಗಲಿಗಳನ್ನು ನಿರ್ಮಿಸಲಾಗಿತ್ತು.
- ದ್ವಾರದ ಮುಂಭಾಗದಲ್ಲಿ ಅಡ್ಡಗೋಡೆಗಳನ್ನು ನಿರ್ಮಿಸಿ ವೈರಿಗಳಿಗೆ ಕಾಣದಂತೆ ಮರೆಮಾಡಲಾಗಿತ್ತು. ಟಿಪ್ಪೂ ಹಾಗೂ ಬ್ರಿಟೀಷ್ ಸೈನಿಕರ ನಡುವಿನ ಸಂಘರ್ಷದ ಸಮಯದಲ್ಲಿ ಕೋಟೆಯು ಛಿದ್ರವಾಗಿರುವ ಸಾಧ್ಯತೆಯಿದೆ.
- ದೊಡ್ಡಬೆಟ್ಟದ ತುದಿಯಲ್ಲಿರುವ ಶಂಕರಲಿಂಗೇಶ್ವರ ದೇವಾಲಯವು ಪೂರ್ವಾಭಿಮುಖಿಯಾಗಿದೆ. ಇದು ಗರ್ಭಗುಡಿ ಹಾಗು ನವರಂಗಗಳಿಂದ ಕೂಡಿದೆ. ಗರ್ಭಗುಡಿ ಚಿಕ್ಕದಾಗಿದ್ದು ಒಳಗಡೆ ಶಿವಲಿಂಗ ಪೀಠವಿದೆ. ಒಳಗೋಡೆಗೆ ಮಹಿಷಾಸುರ ಮರ್ದನಿ ಶಿಲ್ಪವನ್ನು ಇಡಲಾಗಿದೆ. ನವರಂಗವು ಚೌಕಾಕಾರವಾಗಿದ್ದು ನಾಲ್ಕುಕಂಬಗಳನ್ನು ಮಧ್ಯದಲ್ಲಿ ಜೋಡಿಸಲಾಗಿದೆ. ಈ ನವರಂಗದಲ್ಲಿ ನಂದಿ ವಿಗ್ರಹವಿದೆ.
- ಈ ವಿಗ್ರಹವು ಸರಳವಾಗಿದ್ದು ಗರ್ಭಗುಡಿಯ ಶಿವಲಿಂಗದ ಎದುರಿಗೆ ಪ್ರತಿಷ್ಠಾಪಿಸಲಾಗಿದೆ. ದೇವಾಲಯದ ಹೊರಭಿತ್ತಿಯು ಸರಳವಾಗಿದ್ದು ಕುಂಬಿಯಲ್ಲಿ ಗಾರೆ ಮತ್ತು ಇಟ್ಟಿಗೆಗಳಿಂದ ದೇವಕೋಷ್ಟಗಳನ್ನು ನಿರ್ಮಿಸಲಾಗಿದೆ. ಕೋಷ್ಟಗಳಲ್ಲಿ ಗಾರೆಯಿಂದ ರಚಿಸಿದ ಶಿವನ ವಿವಿಧ ಶಿಲ್ಪಗಳನ್ನು ಇರಿಸಲಾಗಿದೆ.
- ಕೋಷ್ಟಗಳ ಕೀರ್ತಿಮುಖಗಳನ್ನು ಗಾರೆಯಿಂದ ಮಾಡಲಾಗಿದೆ. ದೇವಾಲಯದ ಶಿಖರವು ದ್ರಾವಿಡ ಶೈಲಿಯಲ್ಲಿದ್ದು ಇದು ಏಕತಲದ ಶಿಖರವಾಗಿದೆ. ಶಿಖರದಲ್ಲಿ ಗ್ರೀವ, ವೃತ್ತ ಶಿಖರ, ಕಳಶಗಳನ್ನು ಕಾಣಬಹುದು. ಗಾರೆಯಿಂದ ಮಾಡಿದ ಅಲಂಕಾರದ ಪಟ್ಟಿಕೆಗಳಿವೆ. ಶಿಖರದ ವೇದಿಕೆಯಲ್ಲಿ ನಂದಿ ವಿಗ್ರಹಗಳನ್ನು ನಾಲ್ಕೂ ಮೂಲೆಗಳಲ್ಲಿ ಕೂಡಿಸಲಾಗಿದೆ.
- ಬೆಟ್ಟದ ತುದಿಯಲ್ಲಿರುವ ಶಂಕರಲಿಂಗೇಶ್ವರ ದೇವಸ್ಥಾನದ ಮುಂಭಾಗದ ಬಂಡೆಗಳ ಮಧ್ಯದಲ್ಲಿ ನೀರಿನ ದೊಣೆಯಿದೆ. ಬೆಟ್ಟದ ಇಳಿಜಾರಿನಿಂದ ಹರಿದು ಬರುವ ನೀರು ಇಲ್ಲಿ ಶೇಖರಣೆಯಾಗುತ್ತದೆ. ಈ ತೆರೆದ ದೊಣೆಯನ್ನು ಉದ್ದನೆಯ ಚಪ್ಪಡಿ ಕಲ್ಲುಗಳಿಂದ ಜೋಡಿಸಿ ಮುಚ್ಚಲಾಗಿದೆ. ಈ ದೊಣೆಯು ದೇವಾಲಯಕ್ಕೆ ಪುಷ್ಕರಣಿಯಂತೆ ಕಾರ್ಯ ನಿರ್ವಹಿಸುತ್ತದೆ.
- ಪೂರ್ವದ ಅಂಚಿನಲ್ಲಿರುವ ದೇವಾಲಯದ ನೇರಕ್ಕೆ 4 ಮೀಟರ್ ಎತ್ತರದ ಧ್ವಜಸ್ತಂಭವಿದೆ. ಇದರ ಮುಂಭಾಗದಲ್ಲಿ ಬಂಡೆಗಲ್ಲನ್ನು ವರ್ತುಲಾಕಾರದಲ್ಲಿ ಕೊರೆದು ಕಣಜವನ್ನು ಮಾಡಲಾಗಿದೆ. ಈ ಎಣ್ಣೆ ಕಣಜವನ್ನು ಕಲ್ಲುಚಪ್ಪಡಿ ಮತ್ತು ಗಾರೆಯಿಂದ ಭದ್ರವಾಗಿ ಮುಚ್ಚಲಾಗಿದ್ದು ಯುದ್ದದ ಸಂಧರ್ಭದಲ್ಲಿ ತುಪ್ಪವನ್ನು ಇಲ್ಲಿ ಶೇಖರಿಸಿಡಲಾಗುತ್ತಿತ್ತು. ಅದನ್ನು ಬಳಸಿ ಯುದ್ದದಲ್ಲಿ ಗಾಯಗೊಂಡ ಸೈನಿಕರ ಶುಶ್ರೂಷೆ ಮಾಡಲಾಗುತ್ತಿತ್ತು ಎಂದು ತಿಳಿದುಬರುತ್ತದೆ.
ಮದ್ದಿನ ಮನೆ
[ಬದಲಾಯಿಸಿ]ದೇವಾಲಯದ ಎಡ ಭಾಗಕ್ಕೆ ಆಯತಾಕಾರದ ಚಿಕ್ಕ ಕಟ್ಟಡವಿದೆ. ಇದನ್ನು ಸ್ಥಳೀಯರು ಮದ್ದಿನ ಮನೆಯೆಂದು ಕರೆಯುತ್ತಾರೆ. ಇದು ಆರು ಮೀಟರ್ ಉದ್ದ ಮತ್ತು 2 ಮೀಟರ್ ಅಗಲವಿರುವ ಕಟ್ಟಡವಾಗಿದೆ. ಚಿಕ್ಕ ದ್ವಾರವಿರುವ ಇದರ ಪೀಠಭಾಗವನ್ನು ಕಲ್ಲುಗಳಿಂದ ಕಟ್ಟಲಾಗಿದ್ದು ಗೊಡೆಯನ್ನು ಇಟ್ಟಿಗೆಗಳಿಂದ ಕಟ್ಟಲಾಗಿದೆ. ಮದ್ದು ಶೇಖರಿಸಿಡುತ್ತಿದ್ದ ಈ ಕಟ್ಟಡವನ್ನು ಗಾರೆಯಿಂದ ನಯಗೊಳಿಸಲಾಗಿದೆ ಹಾಗೂ ಇದರ ಮೇಲ್ಛಾವಣಿಯು ಇಳಿಜಾರಾಗಿದೆ. ಈಗ ಈ ಮದ್ದಿನ ಮನೆಯು ನಾಶದ ಅಂಚಿನಲ್ಲಿದೆ.
ಕೆಂಪೇಗೌಡ ಹಜಾರ
[ಬದಲಾಯಿಸಿ]- ಪೂರ್ವ ಹಾಗೂ ಪಶ್ಚಿಮ ಆವರಣಗಳ ಮಧ್ಯದಲ್ಲಿರುವ ಬಂಡೆಗಲ್ಲುಗಳ ನಡುವೆ ಪೀಠದಿಂದ ಕೂಡಿದ ಒಂದು ಮಂಟಪದ ಅವಶೇಷವಿದ್ದು ಇದನ್ನು “ಕೆಂಪೇಗೌಡರ ಹಜಾರ”ವೆಂದು ಕರೆಯುತ್ತಾರೆ. ದೊಡ್ಡಬಂಡೆಗೆ ಅಂಟಿಕೊಂಡು ನಿರ್ಮಿಸಿರುವ ಈ ಹಜಾರವು ಒಂದು ಜಗುಲಿಯಂತಿದ್ದು ಈಗ ನಾಶವಾಗಿದೆ.
- ಇದರ ಪೀಠವು ಅಧಿಷ್ಠಾನದಂತೆ ಅಲಂಕಾರಿಕ ಪಟ್ಟಿಕೆಗಳಿಂದ ಕೂಡಿದೆ. ಆಯತಾಕಾರವಿರುವ ಈ ಹಜಾರವನ್ನು ಪಶ್ಚಿಮಾಭಿಮುಖವಾಗಿ ಕಟ್ಟಲಾಗಿದೆ. ಜಗಲಿಯ ಹಿಂಭಾಗದಲ್ಲಿರುವ ಬಂಡೆಯಲ್ಲಿ ಗಣೇಶನ ಉಬ್ಬು ಶಿಲ್ಪವಿದೆ. ಒಟ್ಟಿನಲ್ಲಿ ಈ ಹಜಾರವು ಎರಡೂ ಆವರಣಗಳಿಗೆ ಕೊಂಡಿಯಂತಿದೆ.
ಅಕ್ಕ-ತಂಗಿ ನೀರಿನ ದೊಣೆಗಳು
[ಬದಲಾಯಿಸಿ]- ಆವರಣದಲ್ಲಿ ಇಟ್ಟಿಗೆ ಮತ್ತು ಗಾರೆಯಿಂದ ಪಕ್ಕಪಕ್ಕದಲ್ಲಿ ನಿರ್ಮಿಸಿದ ನೀರಿನ ದೊಣೆಗಳಿವೆ. ಇವುಗಳನ್ನು ಅಕ್ಕ-ತಂಗಿ ದೊಣೆಗಳೆಂದು ಕರೆಯುತ್ತಾರೆ. ಕಥೆಯೊಂದರ ಪ್ರಕಾರ ಕೆಂಪೇಗೌಡರ ಕಾಲದಲ್ಲಿ ಬಸವನದುರ್ಗದಲ್ಲಿ ಬಸವನಾಯಕನೆಂಬ ದುರುಳನೊಬ್ಬನಿದ್ದನಂತೆ. ಆತನಿಗೆ ಹುತ್ರಿದುರ್ಗದಲ್ಲಿ ವಾಸವಿದ್ದ ಸುಂದರ-ಶ್ರೀಮಂತ ಅಕ್ಕತಂಗಿಯರಿಬ್ಬರ ಮೇಲೆ ಮೋಹವಿತ್ತಂತೆ.
- ಹೊಂಚುಹಾಕಿ ರಾತ್ರಿಯ ವೇಳೆ ಕಾವಲುಗಾರರ ಕಣ್ತಪ್ಪಿಸಿ ಬಂದು ಆ ಅಕ್ಕ ತಂಗಿಯರ ಮೇಲೆ ದಾಳಿ ಮಾಡುತ್ತಾನೆ. ಹೇಗೋ ತಪ್ಪಿಸಿಕೊಂಡಸ್ ಸಹೋದರಿಯರು ಒಡವೆಗಳ ಗಂಟಿನ ಜೊತೆಗೆ ಬೆಟ್ಟದ ತುದಿ ತಲುಪುತ್ತಾರೆ. ಅಲ್ಲಿಗೂ ಬೆನ್ನಟ್ಟಿ ಬಂದ ಬಸವನಾಯಕನ ಕೈಗೆ ಸಿಗಲೊಪ್ಪದ ಅಕ್ಕ ತಂಗಿಯರಿಬ್ಬರೂ ಒಡವೆ ಗಂಟಿನ ಜೊತೆಗೆ ಒಂದೊಂದು ದೊಣೆಗೆ ಹಾರಿ ಪ್ರಾಣ ಬಿಟ್ಟರಂತೆ. ಇದರಿಂದಾಗಿ ಇವು ಅಕ್ಕ-ತಂಗಿ ನೀರಿನ ದೊಣೆಗಳೆಂದು ಹೆಸರುವಾಸಿಯಾಗಿವೆ.
- ಈ ದೊಣೆಗಳ ಪಕ್ಕದಲ್ಲಿ ರಾಗಿ ಬೀಸುವ ಕಲ್ಲುಗಳಿವೆ. ಒಂದು ಮೀಟರಿಗಿಂತ ಹೆಚ್ಚು ವ್ಯಾಸವಿರುವ ಈ ಕಲ್ಲುಗಳನ್ನು ಇಲ್ಲಿ ವಾಸವಿದ್ದ ಸೈನಿಕರಿಗೆ ಆಹಾರ ತಯಾರಿಸಲು ಬಳಸುತ್ತಿದ್ದರು. ಇದೇ ಆವರಣದಲ್ಲಿ ಪಾಳುಬಿದ ಚಿಕ್ಕ ಮಂಟಪವೊಂದಿದ್ದು ಇದು ಆವರನದ ಚಿಕ್ಕ ಗುಡಿಯಾಗಿತ್ತೆಂದು ಊಹಿಸಲಾಗಿದೆ.
ಮೂರು ಸಾವಿರ ವರ್ಷಗಳ ಸಮಾಧಿ
[ಬದಲಾಯಿಸಿ]- ಮಾಗಡಿ ದ್ವಾರದ ಬಳಿಯ ಮುಚ್ಚಾಲಮ್ಮನ ಗುಡಿಯ ಮುಂಭಾಗದಿಂದ ಬಿಸಿಲು-ಬಸವಣ್ಣ ಮಂಟಪದವರೆಗಿನ ಸರ್ವೆ ಸಂಖ್ಯೆ 59ರ ಪ್ರದೇಶದಲ್ಲಿದ್ದ ಸಮಾಧಿಯ ಅವಶೇಷಗಳು ಸುಮಾರು ಮೂರು ಸಾವಿರ ವರ್ಷಗಳ ಹಿಂದಿನ ಕಬ್ಬಿಣ ಯುಗಕ್ಕೆ ಸೇರಿದವೆಂದು 2014ರ ಜೂನ್‍ನಲ್ಲಿ ಪ್ರಾಧ್ಯಾಪಕರಾದ ಹ.ಗು.ರಾಜೇಶ್ ಮತ್ತು ಡಾ.ಪುಟ್ಟಸ್ವಾಮಿಯವರು ನಡೆಸಿದ ಅಧ್ಯಯನಗಳಿಂದ ತಿಳಿದುಬಂದಿದೆ[೪].
- ಇದರಿಂದಾಗಿ ಹುತ್ರಿದುರ್ಗವು ಮೂರು ಸಾವಿರ ವರ್ಷಗಳಷ್ಟು ಹಿಂದೆಯೇ ಮಾನವನಿಗೆ ವಾಸಯೋಗ್ಯವಾಗಿತ್ತು ಎಂದು ತಿಳಿದುಬರುತ್ತದೆ. ಮಾಗಡಿ ಮತ್ತು ಹುತ್ರಿದುರ್ಗದ ಸುತ್ತಮುತ್ತ ‘ಕಲ್ಲು ಸೇವೆ’ ಎಂಬ ವಿಶಿಷ್ಟ ಶವಸಂಸ್ಕಾರ ಪದ್ದತಿ ಚಾಲ್ತಿಯಲ್ಲಿತ್ತು. ಈ ಪದ್ದತಿಯ ಪ್ರಕಾರ ಸತ್ತವರ ಕಳೇಬರವನ್ನು ಸುಡುವುದಾಗಲೀ, ಹೂಳುವುದಾಗಲೀ ಮಾಡದೆ ಬೆಟ್ಟದ ಬಂಡೆಗಳ ಮೇಲೆ ಇರಿಸಿ ಪ್ರಾಣಿ-ಪಕ್ಷಿಗಳಿಗೆ ಆಹಾರವಾಗಲು ಬಿಟ್ಟು ಕೆಲದಿನಗಳ ನಂತರ ಹೋಗಿ ಅಳಿದುಳಿದ ಮೂಳೆಗಳನ್ನು ತಂದು ಸಮಾಧಿ ಮಾಡುತ್ತಿದ್ದರಂತೆ ಎಂಬುದು ಸ್ಥಳೀಯರಿಂದ ತಿಳಿದುಬರುತ್ತದೆ.
- ಕಲ್ಲು ಸೇವೆ ನಡೆಯುತ್ತಿದ್ದ ಬೆಟ್ಟದ ಸಮೀಪವೇ ಕಬ್ಬಿಣಯುಗದ ಸಮಾಧಿಗಳು ದೊರೆತಿರುವುದು ದುರ್ಗಕ್ಕಿರುವ ಸಾವಿರಾರು ವರ್ಷಗಳ ಸಂಬಂಧಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತವೆ. ಕಬ್ಬಿಣಯುಗದ ಈ ಸಮಾಧಿಗಳು ವೃತ್ತಾಕಾರದಲ್ಲಿದ್ದು ಕಪ್ಪು ಹಾಗೂ ಗ್ರಾನೈಟ್ ಶಿಲೆಗಳನ್ನು ಜೋಡಿಸಿಟ್ಟಂತೆ 10 ರಿಂದ 12 ಅಡಿ ವ್ಯಾಸ ಹೊಂದಿವೆ.
- ಅಂದಿನ ಕಾಲದಲ್ಲಿ ಸತ್ತ ಮಾನವನ ದೇಹ/ಅಸ್ಥಿ ಪಂಜರವನ್ನು ಸಮಾಧಿಯಲ್ಲಿಟ್ಟು ಅವುಗಳ ಜೊತೆಗೆ ಮುಂದಿನ ಜನ್ಮಕ್ಕೆ ಉಪಯೋಗವಾಗಲಿ ಎಂಬ ನಂಬಿಕೆಯಿಂದ ಆ ವ್ಯಕ್ತಿಯು ಬಳಸುತ್ತಿದ್ದ ಪಾತ್ರೆ, ಮಡಿಕೆ, ಕುಡಿಕೆ ಮತ್ತು ಆಯುಧಗಳನ್ನೂ ಇರಿಸುತ್ತಿದ್ದರು. ಹೀಗಾಗಿ ಕಲ್ಲುಸೇವೆ ಪದ್ದತಿಗೂ ಹಾಗೂ ಕಬ್ಬಿಣ ಯುಗದ ಶವಸಂಸ್ಕಾರ ಪದ್ದತಿಗೂ ತುಂಬಾ ಸಾಮ್ಯತೆಗಳಿವೆ ಎಂಬುದು ತಜ್ನರ ಅಭಿಪ್ರಾಯ.
ಬಸವನದುರ್ಗ
[ಬದಲಾಯಿಸಿ]- ಬಸವನದುರ್ಗವು ಹುತ್ರಿಬೆಟ್ಟದ ಎದುರಿಗೆ ನೇರವಾದ ಜಾಗದಲ್ಲಿರುವ ಕಾರಣ ಹುತ್ರಿದುರ್ಗದ ಕೋಟೆಯ ನಿರ್ಮಾಣದ ಸಮಯದಲ್ಲಿ ಇದನ್ನೂ ಸೇರಿಸಿ ಕೋಟೆಯ ಗೋಡೆಗಳನ್ನು ನಿರ್ಮಿಸಲಾಗಿರುವುದು ಕಂಡುಬರುತ್ತದೆ. ಹುತ್ರಿದುರ್ಗದ ರಕ್ಷಣೆಗಾಗಿ ಇಲ್ಲಿ ಸೈನಿಕರನ್ನು ಜಮಾವಣೆ ಮಾಡಿ ವೈರಿಗಳ ಚಲನವಲನಗಳನ್ನು ದೂರದಿಂದಲೇ ಗಮನಿಸಲು ಇದು ಅನುಕೂಲಕರ ಪ್ರದೇಶವಾಗಿತ್ತು. ಬೆಟ್ಟದ ತಳದಿಂದ ಮೇಲಿನವರೆಗೆ ನಿರ್ಮಿಸಲಾದ ಕೋಟೆ ಗೋಡೆಗಳಲ್ಲಿ ಚೌಕಾಕಾರದ ಕೊತ್ತಳಗಳನ್ನು ಮತ್ತು ದ್ವಾರಗಳನ್ನು ಮಾಡಲಾಗಿದೆ.
- ಇಲ್ಲಿನ ಕೋಟೆಯ ಒಳಗೋಡೆಯ ಕುಂಬಿಯಲ್ಲಿ ವೈರಿಗಳ ಮೇಲೆ ನಿಗಾ ಇಡಲು ತೆರೆದ ಕಿಂಡಿಗಳನ್ನು ಮಾಡಲಾಗಿದೆ. ಟಿಪ್ಪು ಸುಲ್ತಾನನ ವಶಕ್ಕೆ ಬಂದ ಮೇಲೆ ಇಲ್ಲಿ ಮದ್ದು-ಗುಂಡುಗಳನ್ನು ಶೇಖರಿಸಲು ಉಗ್ರಾಣ ಮಾಡಲಾಗಿತ್ತು. ಟಿಪ್ಪು ಸುಲ್ತಾನನ ಸೈನಿಕರಿದ್ದ ಹುತ್ರಿದುರ್ಗ ಕೋಟೆಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವಾಗ ಬ್ರಿಟೀಷ್ ಸೈನ್ಯವು ಬಸವನದುರ್ಗವನ್ನು ಮೊದಲು ತಮ್ಮ ಕೈವಶ ಮಾಡಿಕೊಂಡಿರುವುದಾಗಿ ತಿಳಿದುಬರುತ್ತದೆ.
ಗಣಿಗಾರಿಕೆಯ ಭೀತಿ
[ಬದಲಾಯಿಸಿ]ಹುತ್ರಿದುರ್ಗದ ಬೆಟ್ಟದಲ್ಲಿ ಅಪಾರ ಪ್ರಾಣಿ ಮತ್ತು ಪಕ್ಷಿ ಸಂಕುಲಗಳ ಜೊತೆಗೆ ಔಷಧೀಯ ಸಸ್ಯಗಳೂ ಇವೆ. ಇದಲ್ಲದೆ ಇಲ್ಲಿರುವ ಕಲ್ಲಿಗೆ ಭಾರಿ ಬೆಲೆಯಿರುವ ಕಾರಣ ಕಲ್ಲು ಗಣಿಗಾರಿಕೆಗೆ ಅನುಮತಿ ಪಡೆಯುವುದರ ಮೂಲಕ ಎಲ್ಲ ಸಂಪತ್ತನ್ನೂ ಲೂಟಿ ಮಾಡುವ ಹುನ್ನಾರ ನಡೆಯುತ್ತಿದೆ.ಹುತ್ರಿದುರ್ಗದ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಪರಿಸರವಾದಿಗಳು ಸೇರಿ ಹುತ್ರಿದುರ್ಗದ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದಾರೆ.
ಹೊರಕೊಂಡಿಗಳು
[ಬದಲಾಯಿಸಿ]- http://www.panoramio.com/user/5388298/tags/Hutridurga Archived 2013-11-14 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
[ಬದಲಾಯಿಸಿ]- ↑ "Hutri Durga with Masti". http://adusumilli2nature.blogspot.in. Retrieved 2015-03-12.
{{cite web}}
: External link in
(help)|publisher=
- ↑ "Iron Age Burial Site". ibtimes.co.in. Retrieved 2015-03-12.
- ↑ ೩.೦ ೩.೧ "Hutridurga Fort". tumkurinfo.net. Retrieved 2015-03-12.
- ↑ "Iron Age burial site discovered at Hutridurga Fort". thehindu.com. 2014-07-10. Retrieved 2015-03-12.
- Pages using the JsonConfig extension
- CS1 errors: external links
- Short description is different from Wikidata
- Pages using infobox settlement with bad settlement type
- Pages using infobox settlement with unknown parameters
- Pages using infobox settlement with no coordinates
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಕರ್ನಾಟಕದ ಪ್ರವಾಸಿ ತಾಣಗಳು
- ಕರ್ನಾಟಕದ ಕೋಟೆಗಳು
- ಬೆಂಗಳೂರು ಜಿಲ್ಲೆಯ ಪ್ರವಾಸಿ ತಾಣಗಳು
- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಳ್ಳಿಗಳು