ವಿಷಯಕ್ಕೆ ಹೋಗು

ಪ.ಗೋಪಾಲಕೃಷ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ. ಗೋಪಾಲಕೃಷ್ಣ
[[File:
|frameless|center=yes|alt=]]
ವೃತ್ತಿಪತ್ರಕರ್ತರು ಹಾಗೂ ಸಾಹಿತಿ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿನಗೆಲೇಖನ, ಪತ್ತೇದಾರಿ ಕಾದಂಬರಿ

ಪ.ಗೋ. ಎಂದೇ ಕನ್ನಡ ಪತ್ರಿಕೋದ್ಯಮದಲ್ಲಿ ಪರಿಚಿತರಾದ ಪದ್ಯಾಣ ಗೋಪಾಲಕೃಷ್ಣ (೧೯೨೮ - ೧೯೯೭) ಹಾಸ್ಯ ಹಾಗೂ ಹರಿತ ರಾಜಕೀಯ ವಿಶ್ಲೇಷಣೆಗೆ ಹೆಸರಾಗಿದ್ದರು. ವಿಶ್ವ ಕರ್ನಾಟಕ ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿ ಪತ್ರಿಕೋದ್ಯೋಗವನ್ನು ಆರಂಭಿಸಿದ ಪ.ಗೋ. (೧೯೫೫) ಮುಂದೆ ತಾಯಿನಾಡು, ಕಾಂಗ್ರೆಸ್ ಸಂದೇಶ, ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಮಂಗಳೂರಿನಲ್ಲಿ ವಾರ್ತಾ ಲೋಕ ಎಂಬ ಸಂಜೆ ದಿನಪತ್ರಿಕೆಯನ್ನು ಸ್ಥಾಪಿಸಿ, ಸಂಪಾದಿಸಿ, ಮುದ್ರಿಸಿ, ಪ್ರಕಟಿಸಿ ಕೊನೆಗೆ ಮಾರಾಟ ಮಾಡುವ ಸಾಹಸವನ್ನು ಕೈಗೊಂಡಿದ್ದರು. ಕೆಲ ಕಾಲ ಕೊಡಗಿನ ಶಕ್ತಿ ಹಾಗೂ ಬೆಂಗಳೂರಿನ ಟೈಮ್ಸ್ ಆಫ್ ಡೆಕ್ಕನ್ ಪತ್ರಿಕೆಗಳ ಮಂಗಳೂರು ಬಾತ್ಮೀದಾರರಾಗಿದ್ದರು. ಮಂಗಳೂರಿನ ಸ್ಥಳೀಯ ಪತ್ರಿಕೆಗಳಾದ ನವಭಾರತ, ಕನ್ನಡವಾಣಿ ಹಾಗೂ ಪುತ್ತೂರಿನ ವಿಚಾರವಾಣಿ ಪತ್ರಿಕೆಗಳ ಸಂಪಾದಕೀಯ ಬಳಗದಲ್ಲಿಯೂ ಕಾರ್ಯನಿರ್ವಹಿಸಿದ್ದರು. ನಂತರ ಕನ್ನಡಪ್ರಭ ಹಾಗೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗಳ ಮಂಗಳೂರು ಪ್ರತಿನಿಧಿಯಾಗಿದ್ದರು. ಮುಂದೆ ಏಳು ವರ್ಷಗಳ ಕಾಲ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿನಿಧಿಯಾಗಿದ್ದರು. ಸರಳ, ನೇರ ಹಾಗೂ ನಿಷ್ಪಕ್ಷಪಾತ ವರದಿಗಳಿಗೆ ಹೆಸರಾಗಿದ್ದ ಪ.ಗೋ. ವೃತ್ತಿ ಘನತೆಯನ್ನು ಮೆರೆದವರು.

೧೯೯೪ರಲ್ಲಿ ನಿವೃತ್ತಿಯಾದ ನಂತರ ಮಂಗಳೂರಿನ ಹೊಸ ದಿಗಂತ ಪತ್ರಿಕೆಗೆ ಅವರು ಬರೆಯುತ್ತಿದ್ದ ವಿಶೇಷ ಸೃಷ್ಟಿಗಳ ಲೋಕದಲ್ಲಿ ಅಂಕಣ ಜನಪ್ರಿಯವಾಗಿತ್ತು. ಅದು ಅವರ ಪತ್ರಿಕಾ ಜೀವನದ ಆತ್ಮ ವೃತ್ತಾಂತವೂ ಆಗಿತ್ತು. ಅವರ ನೋ ಚೇಂಜ್ ಕತೆಗಳು ಎಂಬ ಅಂಕಣ ಅತ್ಯಂತ ಸ್ವಾರಸ್ಯಕರವಾದ ಹಾಗೂ ವಿಚಾರಪ್ರಚೋದಕವಾದ ಅಂಶಗಳನ್ನು ಒಳಗೊಂಡಿದ್ದ ಲೇಖನಮಾಲೆ ಎಂದು ಹೇಳಲಾಗಿದೆ.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಮಾನ್ಯತೆ ಪಡೆದು ಕರ್ನಾಟಕ ರಾಜ್ಯ ವಾರ್ತಾ ಮತ್ತು ವಿದ್ಯುತ್ ಸಚಿವರಿಂದ ವಿಧ್ಯುಕ್ತವಾಗಿ ಉದ್ಘಾಟಿಸಿ ೦೬ ಅಕ್ಟೋಬರ್ ೧೯೭೬ ರಂದು ಪ್ರಾರಂಭಗೊಂಡ ಅಂದಿನ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕ ಸದಸ್ಯ ಹಾಗೂ ಸಂಘದ ಪ್ರಥಮ ಕಾರ್ಯದರ್ಶಿಯಾಗಿದ್ದವರು ಶ್ರೀ.ಪ.ಗೋಪಾಲಕೃಷ್ಣ.

ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ). ಹುಟ್ಟೂರು ದಕ್ಷಿಣ ಕನ್ನಡ ಮತ್ತು ಈಗಿನ ಕಾಸರಗೋಡು ಜಿಲ್ಲೆಗಳ ಗಡಿಯಂಚಿನಲ್ಲಿರುವ ಅಡ್ಯನಡ್ಕ. ೧೯೨೮ರಲ್ಲಿ ಜನಿಸಿದ ಪ.ಗೋ. ೧೯೫೬ರಲ್ಲಿ ಕನ್ನಡ ದಿನ ಪತ್ರಿಕೆ ವಿಶ್ವ ಕರ್ನಾಟಕ ಮುಖಾಂತರ ಬೆಂಗಳೂರಿನಲ್ಲಿ ಪತ್ರಿಕೋದ್ಯಮಕ್ಕೆ ಪ್ರವೇಶ.ಮುಂದೆ ತಾಯಿನಾಡು, ಕಾಂಗ್ರೆಸ್ ಸಂದೇಶ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದರು. ಮಡಿಕೇರಿಯಿಂದ ಪ್ರಕಟವಾಗುತ್ತಿದ್ದ "ಶಕ್ತಿ " ಪತ್ರಿಕೆಯ ಬೆಂಗಳೂರಿನ ವರದಿಗಾರರಾಗಿದ್ದವರು ಶ್ರೀ. ಪ. ಗೋ.

೧೯೫೯ರ ಸುಮಾರಿಗೆ ಮಂಗಳೂರಿಗೆ ಬಂದು ನೆಲಸಿ ನವಭಾರತ, ಕನ್ನಡವಾಣಿ ಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿ ನಂತರ ಇಂಡಿಯನ್ ಎಕ್ಸಪ್ರೆಸ್, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಟೈಮ್ಸ್ ಆಫ್ ಡೆಕ್ಕನ್ ಪತ್ರಿಕೆಗಳ ಮಂಗಳೂರು ವರದಿಗಾರರಾಗಿ ತಮ್ಮ ವೃತ್ತಿಜೀವನವನ್ನು ಮುಂದುವರಿಸಿದರು. ೧೯೬೩ -೧೯೬೪ ರಲ್ಲಿ ಮಂಗಳೂರಿನಲ್ಲಿ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದರು. ೧೯೯೪ರಲ್ಲಿ ಕಾರ್ಯನಿರತ ಪತ್ರಿಕೋದ್ಯಮದಿಂದ ನಿವೃತಿ ಹೊಂದುವ ಮೊದಲು ತಮ್ಮ ಒಂಬತ್ತು ವರ್ಷಗಳನ್ನು ಇಂಗ್ಲಿಷ್ ಪತ್ರಿಕಾರಂಗದ 'ಟೈಮ್ಸ್ ಆಫ್ ಇಂಡಿಯಾ'ಕ್ಕೆ ಸಲ್ಲಿಸಿ ಪತ್ರಿಕಾರಂಗಕ್ಕೆ ವಿದಾಯ ಹೇಳಿದರೂ ಅಂಕಣ ಸೃಷ್ಟಿಯನ್ನು ಕೊನೆ ತನಕ ಮುಂದುವರಿಸಿ ದಿನಾಂಕ ೧೦ - ೮- ೧೯೯೭ರಂದು ಈ ಪ್ರಪಂಚಕ್ಕೆ ವಿದಾಯ ಹೇಳಿದರು.

ಕೃತಿಗಳು

[ಬದಲಾಯಿಸಿ]

೧೯೫೬ ರಿಂದ ೧೯೯೭ ನೆ ಇಸವಿವರೆಗೆ ನಾಲ್ಕು ದಶಕಗಳಷ್ಟು ತಮ್ಮ ದೀರ್ಘ ಕಾಲವದಿಯಲ್ಲಿ ಹಲವಾರು ಪತ್ರಿಕೆಗಳಲ್ಲಿ ಅಗಾಗ ಕಾಲಂಕಾರರಾಗಿ ಪ.ಗೋ. ಬರೆದ ಕಾಲಂ ಸಾಹಿತ್ಯ ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದೆ. ಬೆಳ್ಳಿಯ ಸೆರಗು ಎಂಬ ಸಾಮಾಜಿಕ ಕಾದಂಬರಿ, ಗನ್ ಬೋ ಸ್ಟ್ರೀಟ್ ಮತ್ತು ಓ. ಸಿ. ೬೭ ಎಂಬ ಪತ್ತೇದಾರಿ ಕಾದಂಬರಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ ಹೆಗ್ಗಳಿಕೆ ಅವರದ್ದು.

ಪ.ಗೋ. ಪತ್ರಗಳು

[ಬದಲಾಯಿಸಿ]

ಪದ್ಯಾಣ ಗೋಪಾಲಕೃಷ್ಣ ಅವರು ತಾಯಿನಾಡು ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಗಳಿಗೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆತ್ಮೀಯರಾಗಿದ್ದವರು ಹೆಚ್.ಆರ್.ನಾಗೇಶರಾವ್ ಹಾಗೂ ಕೆ.ಸತ್ಯನಾರಾಯಣ. ಮಂಗಳೂರಿಗೆ ತೆರಳಿದ ನಂತರ ನಾಗೇಶರಾವ್ ಅವರೊಂದಿಗೆ ಪತ್ರ ಸಂಪರ್ಕ ಇಟ್ಟುಕೊಂಡಿದ್ದರು. ಅಂಥ ಪತ್ರಗಳಲ್ಲಿ ಕನ್ನಡ ಪತ್ರಿಕೋದ್ಯಮದ ಅಂದಿನ ದಿನಗಳ ಬಗ್ಗೆ ಒಂದು ಇಣುಕು ನೋಟವಿದೆ. ಹೆಚ್.ಆರ್.ನಾಗೇಶರಾವ್ ಅವರ ಸಂಗ್ರಹದಲ್ಲಿ ಇನ್ನೂ ಇರುವ ಹಲವಾರು ಪತ್ರಗಳಲ್ಲಿ ಇದು ಒಂದು ಸ್ಯಾಂಪಲ್. ಪತ್ರ ಬರಹಗಳಲ್ಲಿಯೂ ಅಂಕಣಗಳಂತೆ ಅವರ ಹಾಸ್ಯಪ್ರಜ್ಞೆ ಮೆರೆದಿದೆ.

ನಮ್ಮಲ್ಲಿನ ಹವೆ - ಹೇಳಿ ಪ್ರಯೋಜನವಿಲ್ಲ

[ದಿನಾಂಕ 29/4/60ರಂದು ಹೆಚ್.ಆರ್.ನಾಗೇಶರಾವ್ ಅವರು ಸ್ವೀಕರಿಸಿದ ಈ ಪಗೋ ಪತ್ರವು ಮಂಗಳೂರಿನ ಪ್ರಿಕ್ಲಿ ಹೀಟು - ಬೆಂಗಳೂರಿನ ಥಂಡಿ ಹವಾ, ಎರಡೂ ಕಡೆಯ ಪತ್ರಿಕೋದ್ಯೋಗಿಗಳ ಅಗ್ದಿ ಭಯಂಕರ ಸ್ಥಿತಿ, ಕೆರೆಯಿಂದ ಕೆರೆಗೆ ಹಾರುವ ಕಪ್ಪೆಗಳು .. ಹೀಗೆ ನಾಲ್ಕು ದಶಕಗಳ ಹಿಂದಿನ journo daysಗೆ ನಿಮ್ಮನ್ನು ಕರೆದೊಯ್ಯುತ್ತದೆ.]

ಮಂಗಳೂರು 26/4/60

ಗೆ ನಾಗೇಶರಾಯರಿಗೇ

ಗೆ ಪಗೋರಿಗೆಯ ನಮಸ್ತೆ - ಉರ್ಫ್ ವಂದನೆಗಳು.

ಹಲವಾರು ಯೋಜನೆಗಳು ವಿಫಲವಾದ ನಂತರ ಬಂದ ನಿಮ್ಮ ಪತ್ರಕ್ಕೆ ಈ ತಿಂಗಳು ಮುಗಿಯುವ ಮೊದಲೇ ಉತ್ತರ ಬರೆಯಬೇಕು - ಅದೂ ಈ ದಿನದ ಕಾರ್ಯಕ್ರಮದಲ್ಲೆ ಮುಗಿಯಬೇಕೆಂಬ ದೃಢ ನಿರ್ಧಾರ ಮಾಡಿ ಆರಂಭಿಸಿದ್ದೇನೆ: ರಾತ್ರಿ ೧೦:೩೦ರ ಹೊತ್ತಿಗೆ. ಮನೆ ಸಮೀಪವಾದುದರಿಂದ ಅನುಕೂಲ (+ ಅನನುಕೂಲ) ಇರುವ ಕಾರಣ ತಿರುಗಿ ಕಾರ್ಯಾಲಯಕ್ಕೇ ಬಂದು ಬರೆಯುವ ಮನ ಮಾಡಿದ್ದೇನೆ. ಸರಾಗವಾಗಿ ಬರೆಯಲು ink flow ಸರಿಯಾಗಿರುವ ಒಂದು Parker pen ಕೂಡಾ borrow ಮಾಡಿದ್ದೇನೆ (ಆದರಿಂದಾಗಿಯೇ ಮಸಿ ಹಸಿರಾಗೋಕ್ಹತ್ತಿದೆ!) ಆದುದರಿಂದ - ಆಗಾಗ ಸಹ+ನಿರುದ್ಯೋಗಿಗಳು ಬಂದು ತೊಂದರೆ ಕೊಡುತ್ತಿದ್ದರೂ ಮುಂದುವರಿಸುವ ಪ್ರಯತ್ನ ಸಾಗಿದೆ.

ದಿನ ಪಾಳಿಯಾದರೂ ರಾತ್ರಿ ಬಂದು ಬರೆಯಲು ತಕ್ಕ ಸ್ವಾತಂತ್ರ್ಯ ಸಿಕ್ಕಿದೆ. ಕುಮಾರ ಕಂಠೀರವನನ್ನೂ, ಅವನಮ್ಮನನ್ನೂ ಒಟ್ಟಾಗಿ ಬೆಂಗಳೂರಿಗೆ ‘ಥಂಡಿ’ ಹವಾ ತಿನ್ನಲು - 2 ತಿಂಗಳ ಕಾಲ ರಜಾ ಕೊಟ್ಟು ಕಳುಹಿಸಿದ್ದೇನೆ. ಆದುದರಿಂದ ಮನೆಗೀಗ ನಾನೇ ಸರ್ವಾಧಿಕಾರಿ. ಬೀಗ ಜಡಿದು ಬಂದಿರುವ ಕಾರಣ ಎಷ್ಟು ಹೊತ್ತು ಬೇಕಾದರೂ ಬರೆಯಬಹುದು - ಬರೆದು ಮುಗಿಸಬಹುದು.

ಆದ್ದರಿಂದ ಉಭಯ ಕುಶಲೋಪರಿ ಸಾಂಪ್ರತ -

ನಿಮ್ಮ ಪ್ರತಿಯೊಂದು ಪತ್ರದಲ್ಲೂ ಒಂದೊಂದು Bomb, shell ಮಾಡುತ್ತೀರಿ - ನಿಮಗಾದರೂ ಹೇಗೆ ಸಿಗುತ್ತದೆ ಅಂತಹ ಸುದ್ದಿ ಎಂದು ಆಶ್ಚರ್ಯ ಪಡುವ ಹಾಗೆ. ನಮ್ಮದೇನೂ ಇಲ್ಲ ... ಇದ್ದರೂ ಅದೇ double D (Dull & Drab) ಎನ್ನುವ ಹಾಗಿದೆ.

ನಿಮ್ಮಲ್ಲಾದ ಅಗ್ದಿ ಬದಲಾವಣೆ (ಸ್ವಲ್ಪ ಮಟ್ಟಿಗಾದರೂ) ಕಂಡು ಬಂದಿದೆ. ತಪ್ಪುಗಳ ವಿಚಾರ ಮಾತ್ರ ನಾನು ಗಮನಿಸಹೋಗಿಲ್ಲ - ಏಕೆಂದರೆ ನಾವೂ ತಪ್ಪುಗಳಲ್ಲಿ ಕಡಿಮೆಯೇನೂ ಅಲ್ಲ (ಬೆನ್ನು ತಟ್ಟಿಕೊಳ್ಳಲೆ!) ಅಂದರೆ, ಆದ ಕಲಹ ಮತ್ತು ಕೊನೆಯ truceನ ವಿಚಾರ ಮಾತ್ರ ಒಂದಷ್ಟು ಯೋಚನೆ ತರುವಂತಹದು. ‘ವಿಕೋಪಕ್ಕೆ ತಿರುಗದಂತೆ’ ಆಗಲಿ ಎಂದಷ್ಟು ಮಾತ್ರ ಹಾರೈಸುತ್ತೇನೆ.

ನಿಮ್ಮ ಕಾರ್ಯಾಲಯದಲ್ಲಾದ ಆಸನವ್ಯವಸ್ಥೆ ಬದಲಾವಣೆ ಗಮನಾರ್ಹ. ನಮ್ಮಲ್ಲಿ ಆ ರೀತಿಯ ಚಿತ್ರ ಬಿಡಿಸಬೇಕೆಂದರೆ ಹೆಚ್ಚಿನ ಕೆಲಸವೇನೂ ಇಲ್ಲ. ಅತಿ ಸುಲಭ. Administration & Ads ಒಂದು ಫರ್ಲಾಂಗ್ ದೂರ. ಕಟ್ಟಡ, ನಿವೇಶನ ಎಲ್ಲವೂ ಬೇರೆ. ಸಂಪರ್ಕಕ್ಕೆ ITIಯವರ PAX (25 Lines) ಮಾತ್ರವೇ. ನಾವಿರುವುದು ಹೀಗೆ: (ಪಗೋ ಒಂದು ಚಿತ್ರ ಬಿಡಿಸಿಟ್ಟಿದ್ದಾರೆ, ನಂತರ ಕ್ಲಿಕ್ ಮಾಡಿ ಸೇರಿಸುತ್ತೇನೆ - ಸಂ.)

ನಮ್ಮ ಕ್ಲಾಸ್ರೂಂದಲ್ಲಿ M.V.Hegde (Leader Writer - cum (namesake) Asst. Editor) ಒಬ್ಬರೇ ಮಾಸ್ತರರು. ನಮಗೂ ಅವರಿಗೂ ನಡುವೆ ಒಂದು file rack ಇದೆ. ಉಳಿದುದೆಲ್ಲಾ ಒಬ್ಬರ ಬೆನ್ನನ್ನು ಇನ್ನೊಬ್ಬರು ನೋಡುವ ವಿಚಾರ. (ಸ್ಫೂರ್ತಿ ಬರುವುದಕ್ಕೆ ಒಳ್ಳೆಯದು!) ಎಂದಾದರೊಮ್ಮೆ (ನಾನು ಮಂಗಳೂರಿನಲ್ಲಿರುವಾಗಲೇ) ಬಂದೇ ಬರುತ್ತೀರಲ್ಲ, ಆಗ ಕಾಣುವಿರಂತೆ ಪ್ರತ್ಯಕ್ಷವಾಗಿ. ಇಲ್ಲಿಗೆ ಪ್ರವೇಶಿಸುವುದೂ ಅಷ್ಟು ಸುಲಭವಲ್ಲ, ಹೊಸಬರಿಗೆ ದಾರಿ ತಪ್ಪುವ ರೀತಿ. Kudva's empireನ ಹಲವಾರು enterpriseಗಳನ್ನು ದಾಟಿಕೊಂಡು ಬರಬೇಕು. ನಾವಾಯಿತು, ನಮ್ಮ ಮೂಲೆಯಾಯಿತು. ಹೊರಜಗತ್ತು ನಮಗೆ ಕಾಣುವುದೆಂದರೆ Lorry, Car ಇತ್ಯಾದಿಗಳ ಸಂಗ್ರಹ ಮಾತ್ರ.

RBಯವರಿಗೂ (‘ಗ್ರಾಮಾಯಣ’ದ ಲೇಖಕ ರಾವಬಹಾದ್ದೂರ ಅರ್ಥಾತ್ ಆರ್.ಬಿ.ಕುಲಕರ್ಣಿ ಸಂಕದ ಸಹಾಯಕ ಸಂಪಾದಕರಾಗಿದ್ದರು. -ಸಂ.) - ಸಂಯುಕ್ತ ಅವರಿಗೂ ಪ್ರಶಸ್ತಿ-ಪಾರಿತೋಷಕ ಸಿಕ್ಕಿದ ವಿಚಾರ ಪ್ರಜಾವಾಣಿಯಲ್ಲಿ ಓದಿದ್ದೆ. ****ರು (ಹೆಸರನ್ನು edit ಮಾಡಲಾಗಿದೆ. -ಸಂ.) ಕಚೇರಿ ಬಿಟ್ಟ ವಿಚಾರ ಹೇಳಿರಲಿಲ್ಲ. ಈಗ ಹೇಳಿದರೆ - ಸುದ್ದಿ ನಿರೀಕ್ಷಿತ (ಬೆಣ್ಣೆಯವರು ಬಾಳುವುದಿಲ್ಲ ಎಂದು ನಿಮ್ಮಲ್ಲೇ ಒಂದು ಬಾರಿ ಹೇಳಿದ ನೆನಪಿದೆ - ಆದುದರಿಂದ credit ಪಡೆಯಬಹುದು ತಾನೆ?) ಈ ನಡುವೆ ‘ಕಲ್ಲೆ ನಾರಾಯಣರಾಯರು’ ನಿಮ್ಮಲ್ಲೆ ಸೇರಿಕೊಂಡುದು ನಿಜವಾಗಿಯೂ ಆಶ್ಚರ್ಯವೆನಿಸಿದೆ. ಹೂಂ .... ಯಾವ ಕೆರೆಗೆ ಯಾವ ಕಪ್ಪೆ ಬರಲಿದೆಯೊ ಎಂದುಕೊಳ್ಳುವ ಹಾಗಾಯಿತು.

ಉಳಿದ ಸಣ್ಣ-ಪುಟ್ಟ ಬದಲಾವಣೆಗಳ ಅಷ್ಟು ಗಮನಾರ್ಹವಲ್ಲ ಎನ್ನಬೇಕೆಂಬ ಆಸೆ. ಆದರೆ, ವಾಸ್ತವವಾಗಿ ಅವು ಗಮನಾರ್ಹವಾದ ಕಾರಣ, ಗಮನಿಸಿಯೇ ತೀರಬೇಕಾಗಿದೆ. Artist ಬಗ್ಗೆ ಹೆಚ್ಚು ಕಮೆಂಟಿಸುವಂತಿಲ್ಲ. ****ರಿಗೆ (ಹೆಸರನ್ನು edit ಮಾಡಲಾಗಿದೆ. -ಸಂ.) ಅಷ್ಟೊಂದು ಸ್ವಾತಂತ್ರ್ಯ ಕೊಟ್ಟುದು ಮಾತ್ರ ಭಯೋತ್ಪಾದಕ - ಇಲ್ಲಿ ಅವರು mischief maker ಎಂಬ ಪ್ರಸಿದ್ಧಿಯನ್ನು ಪಡೆದಿದ್ದಾರೆ. (ಅವರ ಹೆಸರಿನ ವಿಶೇಷ Box ರಚಿಸಬೇಕೆಂದು World Culture article ಬಂದಾಗಲೇ ಅಂದುಕೊಂಡಿದ್ದೆ - ಏನೋ ಪ್ರಾಶಸ್ತ್ಯ ಸಿಕ್ಕಿರಬೇಕೆಂದು). ಈ ಪತ್ರ ನಿಮ್ಮ ಕೈಸೇರಿ ನೀವು ಉತ್ತರ ಬರೆಯುವ ಹೊತ್ತಿಗಾದರೂ 3 shiftಗಳಾಗಲಿ ಎಂದು ಹಾರೈಸುತ್ತೇನೆ (ನಮ್ಮಲ್ಲಿನ ಎರಡು 8 ಘಂಟೆ shiftಗಳ ಹೊಟ್ಟೆಯುರಿಯೊಂದಿಗೆ!)

ಕುಮಾರ ವೆಂಕಣ್ಣ ‘ಜನವಾಣಿ’ ಸೇರಿಲ್ಲವಾದರೆ ಬೇರೆ ಯಾರಾದರೂ ಸೇರಿದ್ದಾರೆಯೆ? Typical `ಜನವಾಣಿ’ Headings ಕಾಣುವುದಿಲ್ಲವಲ್ಲ. MSRIರಿಗೆ (ಎಂ.ಎಸ್.ರಾಮಸ್ವಾಮಿ ಅಯ್ಯಂಗಾರ್ - ತಾಯಿನಾಡು ಪತ್ರಿಕೆಯಲ್ಲಿ ಉಪಸಂಪಾದಕರಾಗಿದ್ದವರು - ಸಂ.) ಸ್ಥಾನ ದೊರೆತುದು ಸಂತೋಷ (ಎಂದಾದರೂ ಒಂದು ಬಾರಿ ಮನೆ ಎದುರಿಂದ ಹಾದು ಹೋದರೆ ಒಂದು ಸಣ್ಣ ನಮಸ್ಕಾರ ಹೇಳಿ - ಈಗಲೂ ಪತ್ರಿಕೋದ್ಯೋಗಿಗಳ ವಸಾಹತಿನಲ್ಲೇ ಇದ್ದಾರಷ್ಟೆ!) ‘ನಾರದ ಉವಾಚ’ (ನಾಗೇಶರಾಯರು ತಾಯಿನಾಡು ಪತ್ರಿಕೆಯಲ್ಲಿ ಬರೆಯುತ್ತಿದ್ದ ನಿತ್ಯ ಟೀಕಾಂಕಣ. ಪ್ರಜಾವಾಣಿಯ ಛೂಬಾಣದಂತೆ. - ಸಂ.)- ಕೆಲವು ಬಾರಿ ಇಸ್ಪೀಟಾಟವೇ ಆಗಿದೆ ಎನಿಸುತ್ತಿದೆ.

ನಮ್ಮಲ್ಲಿ ಹರಟೆಗಾರರಿದ್ದಾರಾದರೆ, ಅವರಿಗೆ ಅಹ್ವಾನ ಕೊಡಲೆಂದು ಮುಂದೆ ಬಂದವರ (ಅರ್ಥಾತ್ ಪ್ರಕಾಶಕರ) ಯೋಜನೆ ಹರಟೆಗಳದು. ಆದರೆ, ಇದುವರೆಗೆ ಯಾರೂ piece work basisನ ಹರಟೆಗಾರರು ದೊರೆಯದೆ ಅದನ್ನು ಅರ್ಥಗರ್ಭಿತದ MVH ಅವರೇ ತೂಗಿಸಿಕೊಂಡು ಹೋಗುತ್ತಿದ್ದಾರೆ. ಒಂದೆರಡು ಬಾರಿ yours trulyಗೂ invitation ಬಂತು. ಆದರೆ, ಈಗಾಗಲೇ ದೊರೆತ volume ಸಾಕು ಎಂಬ ಸುಪ್ತ ಕಾರಣಕ್ಕಾಗಿ offer decline ಮಾಡಿದೆ.

"ಕಳೆದ ವರ್ಷ ....." ಬೇಡವಾಯಿತು. ಕಿವಿಚುಚ್ಚುವವರ (ಅವರ ದೊಡ್ಡದೊಂದು ತಂಡವೇ ಇದೇ ನಮ್ಮಲ್ಲಿ ... ಪುಣ್ಯಕ್ಕೆ ಅವರಾರೂ Editorialನವರಲ್ಲ. ಹೊರಗಿನವರು ಅಷ್ಟೇ ಸಮಾಧಾನ!) ಪ್ರಭಾವದಿಂದಾಗಿ ಅದು ಬೇಡ ಬೇರೇನಾದರೂ ಮಾಡಿ ... ಎಂಬ ಸುಗ್ರೀವಾಜ್ಞೆ ಹೊರಟ ಕಾರಣವೇ ‘ಹರಟೆ’ಗಳ ಪ್ರವೇಶವಾದುದು. ಈಗಂತೂ ಸಂಕ್ಷಿಪ್ತ ವಾರ್ತಾಸಾರ ಬಿಟ್ಟರೆ ಉಳಿದ ವಿಚಾರಗಳಲ್ಲಿ Times of Indiaದ Leader Page ಆಗಿದೆ. ನೋಡುವಾಗ ಒಂದು ಪೆಟ್ಟಿಗೆಗಳ stackನ ಹಾಗೆ ಕಾಣುತ್ತದೆ. ಓದಲು ಏನಿದೆಯೋ - ಬೇರೆಯವರೇ ಹೇಳಬೇಕು.

ಅರ್ಥಗರ್ಭಿತವನ್ನು ಲೈಕಿಸುವ ವಾರ್ತೆಗಿಂತಲೂ ಹೆಚ್ಚಾಗಿ ನನ್ನ ಪತ್ರವ್ಯವಹಾರವನ್ನು ಖಾ. ರವರು (ಖಾದ್ರಿ ಶಾಮಣ್ಣ ಸಂ.ಕ.ದ ಸುದ್ದಿ ಸಂಪಾದಕರಾಗಿದ್ದರು. - ಸಂ.) ಮೆಚ್ಚುತ್ತಾರೆ ಎಂದು ತಿಳಿದು ನನಗೆ ತುಂಬಾ ಮೆಚ್ಚುಗೆಯಾಯಿತು. ದಿನಕ್ಕೆ average ಮೂರು ಪತ್ರಗಳನ್ನು ದೃಷ್ಟಿಸುವ ಕಾರಣ ಮೆಚ್ಚುಗೆಯಾಗದೆ ಇರುತ್ತದೆಯೆ? ಸ್ಟಾಂಪಿಲ್ಲದ ಅರ್ಜಿಗಳಲ್ಲಿ ಮುಕ್ಕಾಲಂಶ WPB ದಾರಿ ಕಾಣುವುವು. ಆದುದರಿಂದ ದಿನಕ್ಕೆ ಒಂದು ಕಾಲಂ (ಇರಲೇ ಬೇಕು ಎಂಬ Order Standing ಬೇರೆ.) ಪತ್ರಗಳನ್ನು ಮುಂಜಾನೆ ಬಂದ ಹಾಗೆಯೇ ನೋಡಬೇಕು. ಕೊಡುತ್ತೇನೆ, ಮೂಗಿನಲ್ಲಿ ಅಳುತ್ತಾ!

ಸೂರ್ಯನಾರಾಯಣರ ಪೂರ್ವಜನ್ಮ ಫಲ - ನಿಜವಾಗಿಯೂ ಅದೇ. ಏನಾಗಿ ಬಿಟ್ಟರೊ ... ನಾನಾಗಿದ್ದರೆ ಖಂಡಿತವಾಗಿಯೂ ಬಿಡುತ್ತಿರಲಿಲ್ಲ. ಆದರೆ ನಾನು ಹಲಿಂಸೂ ಅಲ್ಲವಲ್ಲ


ಹೆಚ್.ಆರ್.ನಾಗೇಶರಾವ್ ಸಂಗ್ರಹದಿಂದ

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

http://www.gulfkannadiga.com/news-26676.html Archived 2010-10-06 ವೇಬ್ಯಾಕ್ ಮೆಷಿನ್ ನಲ್ಲಿ.