ಗುರು ಗ್ರಹದ ವಾಯುಮಂಡಲ
ಗುರು ಗ್ರಹದ ವಾಯುಮಂಡಲವು ನಮ್ಮ ಸೌರವ್ಯೂಹದಲ್ಲಿನ ಅತ್ಯಂತ ದೊಡ್ಡ ವಾಯುಮಂಡಲವಾಗಿದೆ. ಇದು ಮುಖ್ಯವಾಗಿ ಹೆಚ್ಚು-ಕಡಿಮೆ ಸೂರ್ಯನಲ್ಲಿರುವಷ್ಟೇ ಅನುಪಾತದಲ್ಲಿ ಇರುವ ಜಲಜನಕ ಮತ್ತು ಹೀಲಿಯಂ ಧಾತುಗಳಿಂದಾಗಿದೆ.ಬೇರೆ ರಸಾಯನಿಕಗಳಾದ ಮೀಥೇನ್,ಅಮ್ಮೋನಿಯ,ಹೈಡ್ರೊಜೆನ್ ಸಲ್ಫೈಡ್ ಮತ್ತು ನೀರು ಕಡಿಮೆ ಪ್ರಮಾಣದಲ್ಲಿವೆ. ವಾಯುಮಂಡಲದ ತೀರಾ ಒಳಗಡೆ ನೀರಿದೆಯೆಂದು ಊಹಿಸಲಾಗಿದ್ದರೂ, ನೇರವಾಗಿ ಪರೀಕ್ಷೆಗಳಿಂದ ಅಳೆದಿರುವ ನೀರಿನ ಪರಿಮಾಣ ತುಂಬಾ ಕಡಿಮೆಯೆ. ಗುರುವಿನ ವಾಯುಮಂಡಲದಲ್ಲಿರುವ ಆಮ್ಲಜನಕ,ಸಾರಜನಕ,ಗಂಧಕ ಮತ್ತು ನೋಬಲ್ ಗ್ಯಾಸ್ ಗಳ ಪ್ರಮಾಣವು ಸೌರ ಪ್ರಮಾಣಗಳಿಗಿಂತ ಮೂರುಪಟ್ಟು ಹೆಚ್ಚು.ಗುರು ಗ್ರಹದ ವಾಯುಮಂಡಲವು ಯಾವುದೇ ನಿಶ್ಚಿತ ಗಡಿಯಿಲ್ಲದೇ ಮೇಲಿನ ವಾಯುರೂಪದಿಂದ ಒಳಗಿನ ದ್ರವರೂಪಕ್ಕೆ ನಿಧಾನವಾಗಿ ಬದಲಾಗುತ್ತದೆ.ಗ್ರಹದ ಒಳಭಾಗದಿಂದ ಮೇಲಕ್ಕೆ ವಾತಾವರಣವನ್ನು ಟ್ರೋಪೊಸ್ಫಿಯರ್, ಸ್ಟ್ರಾಟೋಸ್ಫಿಯರ್,ಥರ್ಮೋಸ್ಫಿಯರ್ ಮತ್ತು ಎಗ್ಸೋಸ್ಫಿಯರ್ ಎಂಬ ವಲಯಗಳನ್ನಾಗಿ ವಿಭಾಗಿಸಬಹುದು. ಪ್ರತಿಯೊಂದು ವಲಯವೂ ತನ್ನದೇ ಆದ ಉಷ್ಣತೆಯ ಏರಿಳಿತವನ್ನು ಹೊಂದಿದೆ. ಅತ್ಯಂತ ಕಳಗಿನ ವಲಯವಾದ ಟ್ರೋಪೊಸ್ಫಿಯರ್, ಅಮ್ಮೋನಿಯಾ, ಅಮ್ಮೋನಿಯಮ್-ಹೈಡ್ರೊಸಲ್ಫೈಡ್ ಮತ್ತು ನೀರಿನಿಂದಾದ ಕ್ಲಿಷ್ಟವಾದ ಮೋಡ-ಮಂಜುಗಳ ಪದರಗಳಿಂದ ಕೂಡಿದೆ. ಗುರುಗ್ರಹದ ಮೇಲೆ ಕಾಣುವ ಅಮ್ಮೊನಿಯಾ ಮೋಡಗಳು ಗ್ರಹದ ಭೂಮಧ್ಯರೇಖೆಗೆ ಸಮನಾಂತರವಾಗಿ ೧೨ ಪಟ್ಟಿಗಳಂತೆ ಗೋಚರಿಸುತ್ತವೆ. ಈ ಪಟ್ಟಿಗಳು ಗುರುವಿನ ವಾತಾವರಣದ ಶಕ್ತಿಯುತವಾದ "ಜೆಟ್" ಗಳೆಂದು ಕರೆಯಲ್ಪಡುವ ಬಲವಾಗಿ ಬೀಸುವ ಗಾಳಿಗಳಿಂದ ಕೂಡಿರುತ್ತವೆ. ಈ ಪಟ್ಟಿಗಳು ಒಂದರ ನಂತರ ಇನ್ನೊಂದರಂತೆ ಗಾಢವರ್ಣ ಮತ್ತು ತಿಳಿವರ್ಣಗಳಿಂದ ಕೂಡಿವೆ. ಗಾಢವರ್ಣದ ಪಟ್ಟಿಗಳನ್ನು "ಬೆಲ್ಟ್" ಗಳೆಂದೂ, ತಿಳಿವರ್ಣದ ಪಟ್ಟಿಗಳನ್ನು "ಝೋನ್" ಗಳೆಂದೂ ಕರಯುತ್ತಾರೆ. ಬೆಲ್ಟ್ ಗಳಿಗಿಂತ ತಣ್ಣಗಿರುವ ಝೋನ್ ಗಳು ವಾತಾವರಣದ ಗಾಳಿಯ ಉಬ್ಬಿದ ಭಾಗ(ಅಥವಾ ಉಬ್ಬಿ ಮೇಲೆ ಬರುತ್ತಿರುವ ಗಾಳಿ) ಮತ್ತು ಬೆಲ್ಟ್ ಗಳು ಅಧೋಮುಖವಾಗಿ ಚಲಿಸುತ್ತಿರುವ (ಕೆಳಗಿಳಿಯುತ್ತಿರುವ)ಗಾಳಿಯ ಭಾಗ. ಝೋನ್ ಗಳ ತಿಳಿವರ್ಣಕ್ಕೆ ಘನೀಭೂತವಾದ ಅಮ್ಮೊನಿಯವು(ಅಮ್ಮೊನಿಯಾ ಐಸ್)ಕಾರಣವೆಂದು ನಂಬಲಾಗಿದೆ ಆದರೆ ಬೆಲ್ಟ್ ಗಳ ಗಾಢವರ್ಣಕ್ಕೆ ಕಾರಣವೇನೆಂದು ಇನ್ನೂ ಸರಿಯಾಗಿ ತಿಳಿದುಬಂದಿಲ್ಲ. ಗುರುಗ್ರಹದ ಈ ಗಾಢ-ತಿಳಿವರ್ಣಗಳ ಪಟ್ಟಿಗಳಂತೆ ಕಾಣುವ ಈ ರಚನೆಗಳ ಉಗಮವೂ ಸರಿಯಾಗಿ ತಿಳಿದಿಲ್ಲ. ಆದರೂ ಈ ರಚನೆಗಳ ಉಗಮವನ್ನು ಅರ್ಥೈಸುವ ಪ್ರಯತ್ನಮಾಡುವ ಎರಡು ವಾದಗಳಿವೆ. ಮೊದಲಯನೆಯದಾದ "ಶಾಲೋ ಮೋಡೆಲ್" ಎಂದು ಕರೆಯಲ್ಪಡುವ ವಾದದ ಪ್ರಕಾರ, ಈ ಪಟ್ಟಿಗಳ ರಚನೆಯು ಗುರುವಿನ ಸ್ಥಿರವಾದ ಗರ್ಭದ(ಅಂತರ್ಯದ) ಮೇಲೆ ತೋರುವ ವಾತಾವರಣದ ರಚನೆಗಳು. ಎರಡನೆಯ "ಡೀಪ್ ಮೋಡೆಲ್" ವಾದದ ಪ್ರಕಾರ ಈ ರಚನೆಗಳು ಗುರುವಿನ ಸ್ಥಿರವಲ್ಲದ ಗರ್ಭದೊಳಗೆ ಉಂಟಾಗುತ್ತಿರುವ ಶುದ್ಢ ಜಲಜನಕದ ಚಲನೆಯು ವಾತಾವರಣದ ಮೇಲೆ ಮಾಡುತ್ತಿರುವ ಅಲ್ಲೋಲಕಲ್ಲೋಲದ ವ್ಯಕ್ತಸ್ವರೂಪಗಳು.
ಗುರುಗ್ರಹದ ವಾತಾವರಣವು ಅನೇಕ ರೀತಿಯ ಅಸಾಧಾರಣ ವಿದ್ಯಮಾನಗಳಿಂದ ಕೂಡಿದೆ. ಗಾಢ ಮತ್ತು ತಿಳಿವರ್ಣಗಳ ಪಟ್ಟಿಗಳಲ್ಲಿ ಉಂಟಾಗುವ ಸ್ಥಿತ್ಯಂತರಗಳಲ್ಲದೇ, ತಮ್ಮ ಕೇಂದ್ರಗಳ ಸುತ್ತ ವೇಗವಾಗಿ ಗಿರಿಗಿರನೆ ಪ್ರದಕ್ಷಿಣಾಕರವಾಗಿ ಮತ್ತು ಅಪ್ರದಕ್ಷಿಣಾಕರವಾಗಿ ತಿರುಗುವ ಚಂಡಮಾರುತಗಳು, ಗುಡುಗು ಮತ್ತು ಮಿಂಚುಗಳು ನಿರಂತರವಾಗಿ ಆಗುತ್ತಿರುತ್ತವೆ. ಗುರುಗ್ರಹದ ಮೇಲಿನ ಚಂಡಮಾರುತಗಳು ಕೆಂಪು,ಬಿಳಿ ಮತ್ತು ಕಂದು ಬಣ್ಣದ ದೊಡ್ಡ ಚುಕ್ಕೆಗಳಾಗಿ ಕಂಡುಬರುತ್ತವೆ. ಈ ಚುಕ್ಕೆಗಳಲ್ಲಿ ಎರಡು ಅತ್ಯಂತ ದೊಡ್ದವು "ಗ್ರೇಟ್ ರೆಡ್ ಸ್ಪಾಟ್" (ದೊಡ್ಡ ಕೆಂಪು ಚುಕ್ಕೆ) ಮತ್ತು "ಓವಲ್ BA". ಇವೆರಡು ಮತ್ತು ಇನ್ನಿತರ ಬಹುತೇಕ ದೊಡ್ದ ಚಂಡಮಾರುತಗಳು ಅಪ್ರದಕ್ಷಿಣಾಕಾರವಾಗಿ ತಮ್ಮ ಕೇಂದ್ರಗಳ ಸುತ್ತ ತಿರುಗುತ್ತವೆ.ಇತರ ಸಣ್ಣ ಚಂಡಮಾರುತಗಳು ಬಿಳಿ ಚುಕ್ಕೆಗಳಾಗಿ ಕಾಣುತ್ತವೆ. ಈ ಚಂಡಮಾರುತಗಳ ಕೇಂದ್ರದ ಸುಳಿಗಳು ಹಲವು ನೂರು ಕಿಲೋಮೀಟರುಗಳಷ್ಟು ಆಳವಾಗಿರುತ್ತವೆ.ಗುರುಗ್ರಹದ ದಕ್ಷಿಣ ಗೋಳಾರ್ಧದಲ್ಲಿರುವ ಗ್ರೇಟ್ ರೆಡ್ ಸ್ಪಾಟ್ ಅಥವಾ GRS, ನಮ್ಮ ಸೌರವ್ಯೂಹದಲ್ಲೇ ಅತ್ಯಂತ ದೊಡ್ದ ಚಂಡಮಾರುತ.ನಮ್ಮ ಭುವಿಯ ಗಾತ್ರದ ಹಲವು ಗ್ರಹಗಳನ್ನು ಅಡಗಿಸಿಟ್ಟುಕೊಳ್ಳುವಷ್ಟು ದೊಡ್ಡ ಗಾತ್ರವುಳ್ಳದ್ದು.ಇದು ಸುಮಾರು ೩೦೦ ವರ್ಷಗಳಿಂದ ಬೀಸುತ್ತಲೇ ಇದೆ. GRS ಗೆ ದಕ್ಷಿಣದಲ್ಲಿರುವ ಓವಲ್ BA ಇನ್ನೊಂದು ದೈತ್ಯ ಚಂಡಮಾರುತ ಆದರೆ GRS ಗೆ ಹೋಲಿಸಿದರೆ ಇದು ಅದರ ಮೂರನೆಯ ಒಂದರಷ್ಟಿದೆ. ಈ ಚಂಡಮಾರುತವು ೨೦೦೦ನೆಯ ಇಸವಿಯಲ್ಲಿ ಮೂರು ಬಿಳಿ ವರ್ಣದ ಚುಕ್ಕೆಗಳಂತೆ ಕಾಣುವ ಸಣ್ಣ ಚಂಡಮಾರುತಗಳ ಸಂಗಮದಿಂದ ರೂಪುಗೊಂಡಿತು. ಗುರುಗ್ರಹದಲ್ಲಿ ಸದಾಕಾಲವೂ ಭೀಕರ ಮಿಂಚಿನಿಂದ ಕೂಡಿದ ಬಲವಾದ ಬಿರುಗಾಳಿಗಳು ಮತ್ತು ಚಂಡಮಾರುತಗಳು ತಾಂಡವವಾಡುತ್ತಿರುತ್ತವೆ. ನೀರಿನ ಆವಿಯಾಗುವಿಕೆ ಮತ್ತು ಘನೀಕರಣದ ಪ್ರಕ್ರಿಯೆಯಿಂದುಂಟಾಗುವ ಶೀತಲ ವಾಯುವಿನ ಬಲವಾದ ಪ್ರವಾಹವು ಶಕ್ತಿಯುತವಾದ ಬಿರುಗಾಳಿಗಳನ್ನೂ, ಚಂಡಮಾರುತಗಳನ್ನೂ ಎಬ್ಬಿಸುತ್ತದೆ. ಹೀಗೆ ಆವಿಯಾಗಿ ಮೇಲ್ಬರುವ ಹವೆಯ ಭಾಗಗಳಲ್ಲಿ ವಾಯುವು ಊರ್ಧ್ವಗಾಮಿಯಾಗಿರುತ್ತದೆ. ಇದು ದಟ್ಟವಾಗಿ ಬೆಳ್ಳಗೆ ಹೊಳೆಯುವ ಮೋಡಗಳನ್ನುಂಟುಮಾಡುತ್ತದೆ ಅದ್ದರಿಂದ ಈ ವಲಯಗಳು ತಿಳಿವರ್ಣದ್ದಾಗಿರುತ್ತವೆ. ಈ ಭಾಗಗಳನ್ನೇ ಝೋನ್ ಗಳೆಂದು ಕರೆಯುವುದು.ಬಿರುಗಾಳಿಗಳು ಮತ್ತು ಚಂಡಮಾರುತಗಳು ಝೋನ್ ಗಳ ಪಕ್ಕದಲ್ಲಿರುವ ಗಾಢ ವರ್ಣದ "ಬೆಲ್ಟ್" ವಲಯಗಳಲ್ಲಿರುತ್ತವೆ. ಸಾಧಾರಣವಾಗಿ ಗುರುವಿನ ಮಿಂಚುಗಳ ಶಕ್ತಿ ಮತ್ತು ತೀವ್ರತೆ ಭೂಮಿಯಲ್ಲಿನ ಮಿಂಚುಗಳಷ್ಟೇ ಇದ್ದರೂ ಕೆಲವೊಮ್ಮೆ ಅನೇಕಪಟ್ಟು ಹೆಚ್ಚು ತೀವ್ರತೆ ಮತ್ತು ಬಲದಿಂದ ಕೂಡಿದ ಮಿಂಚುಗಳೂ ಉಂಟಾಗುತ್ತವೆ.
ವಾತಾವರಣದ ಸ್ವರೂಪ
[ಬದಲಾಯಿಸಿ]ಗುರುವಿನ ವಾತಾವರಣವು ನಾಲ್ಕುಬಗೆಯ ವಲಯಗಳಾಗಿ ವಿಂಗಡಿಸಲ್ಪಟ್ಟಿದೆ. ಎತ್ತರಕ್ಕನುಗುಣವಾಗಿ ಈ ವಲಯಗಳನ್ನು ಟ್ರೋಪೊಸ್ಫಿಯರ್, ಸ್ಟ್ರಾಟೋಸ್ಫಿಯರ್,ಥರ್ಮೋಸ್ಫಿಯರ್ ಮತ್ತು ಎಗ್ಸೋಸ್ಫಿಯರ್ ಎಂದು ಗುರುತಿಸಲಾಗಿದೆ. ನಮ್ಮ ಭೂಮಿಗೆ ಇರುವಂತೆ ಗುರುಗ್ರಹಕ್ಕೆ "ಮೀಸೋಸ್ಫಿಯರ್" ಇಲ್ಲ. ಅಲ್ಲದೇ, ಗುರುಗ್ರಹಕ್ಕೆ ಭೂಮಿಗೆ ಇರುವಂತೆ ಘನವಾದ ಮೇಲ್ಮೈ(ನೆಲ) ಇಲ್ಲದಿರುವುದರಿಂದ ಅತ್ಯಂತ ಕೆಳಗಿನ ಟ್ರೋಪೊಸ್ಫಿಯರ್, ನಿಧಾನವಾಗಿ ಕೆಳಗೆಹೋದಂತೆಲ್ಲ ವಾಯುರೂಪದಿಂದ ಗ್ರಹದ ದ್ರವರೂಪದ ಅಂತರ್ಯಕ್ಕೆ ಬದಲಾಗುತ್ತದೆ. ಹೀಗಾಗುವುದಕ್ಕೆ ಕಾರಣವೇನೆಂದರೆ ಜಲಜನಕ ಮತ್ತು ಹೀಲಿಯಂ ಗಳ ಮೇಲೆ ತೀವ್ರವಾದ ಒತ್ತಡ ಮತ್ತು ಉಷ್ಣತೆಗಳಿರುವುದು. ಆದ್ದರಿಂದ ಗುರುಗ್ರಹವು ಗಟ್ಟಿಯಾದ ಮೇಲ್ಮೈ ಹೊಂದಿರದೆ ಅಲ್ಲಿನ ವಾತಾವರಣವು ವಾಯುರೂಪದಿಂದ ದ್ರವರೂಪಕ್ಕೆ ನಿಧಾನವಾಗಿ ಬದಲಾಗುತ್ತದೆ.
ವಾತಾವರಣದಲ್ಲಿ ಮೇಲಿನಿಂದ ಕೆಳಗೆ ಹೊಗುತ್ತಾ ವಾತಾವರಣವು ನಿಧಾನವಾಗಿ ಮಂಜು-ಮಂಜಿನಂತಾಗಿ ದ್ರವರೂಪ ಪಡೆಯುವುದರಿಂದ, ದ್ರವ ಮತ್ತು ವಾಯುರೂಪಗಳ ಮಧ್ಯೆ ನಿಶ್ಚಿತವಾದ ಗಡಿಯಿಲ್ಲ. ಅಂದರೆ ಎಲ್ಲಿ ವಾತಾವರಣದ ವಾಯುರೂಪವು ಮುಗಿದು ದ್ರವರೂಪವು ಶುರುವಾಯಿತೆಂದು ಹೇಳಲಾಗುವುದಿಲ್ಲ.ಹೀಗಾಗಿ ನಮ್ಮ ಭೂಮಿಯಂತೆ ಧೃಢವಾದ (ಅಥವ ಘನವಾದ) ಮೇಲ್ಮೈಯನ್ನು ಹೊಂದಿರದ ಗುರುವಿನ ವಾತಾವರಣದಲ್ಲಿ ಮೇಲ್ಮೈಯನ್ನು ನಿರ್ಧರಿಸುವುದು ತುಸು ಕಷ್ಟ. ಆದ್ದರಿಂದ ವಾತಾವರಣದ ಅತ್ಯಂತ ಕೆಳಗಿನ ಆವರಣವಾದ "ಟ್ರೊಪೋಸ್ಫಿಯರ್"ನ ಕೆಳಗಿನ ಗಡಿಯುನ್ನು ನಿರ್ಧಾರ ಮಾಡಲು ಒಂದು ಉಪಾಯ ಮಾಡಲಾಗಿದೆ. ಅದೇನೆಂದರೆ, ಭೂಮಿಯಂತೆಯೇ ಗುರುಗ್ರಹದಲ್ಲಿಯೂ ಮೇಲೆ ಹೋದಂತೆ ವಾತಾವರಣದ ಒತ್ತಡ ಕಡಿಮೆಯಾಗುತ್ತದೆ, ಕೆಳಗೆ ಬಂದತೆ ಜಾಸ್ತಿಯಾಗುತ್ತದೆ. ವಾತಾವರಣದ ಯಾವ ಎತ್ತರದಲ್ಲಿ ಒತ್ತಡ ೧ ಬಾರ್ ಮತ್ತು ಉಷ್ಣತೆ ೩೪೦ ಕೆಲ್ವಿನ್ ಇದೆಯೋ ಅಲ್ಲಿಂದ ೯೦ ಕಿ.ಮೀ ಕೆಳಗಡೆಯ ಭಾಗವನ್ನು ಟ್ರೊಪೋಸ್ಫಿಯರ್ ನ ಕೆಳಗಿನ ಗಡಿ ಎಂದು ತೀರ್ಮಾನಿಸಲಾಗಿದೆ. ಅಲ್ಲಿಂದ ಕೆಳಗಡೆ ಗುರುವಿನ "ಮೇಲ್ಮೈ" ಶುರುವಾಗುತ್ತದೆಯೆಂದು ತಿಳಿದುಕೊಳ್ಳಬೇಕು. ನಿಜವಾಗಿ ಗುರುವಿಗೆ ಯಾವ "ಮೇಲ್ಮೈ"ಯೂ ಇಲ್ಲ. ಈ ರೀತಿಯ ವಲಯ ವಿಭಜನೆ ಗುರುವಿನ ವಾತಾವರಣವನ್ನು ವಿಂಗಡಿಸಿ ಸರಿಯಾಗಿ ಆರ್ಥಮಾಡಿಕೊಳ್ಳುವದಕ್ಕೆ ಮಾತ್ರವೇ. ವಾತಾವರಣದ ಅತ್ಯಂತ ಕೊನೆಯದಾದ ಹಾಗೂ ಅತ್ಯಂತ ಎತ್ತರದಲ್ಲಿರುವ ಎಗ್ಸೋಸ್ಫಿಯರ್ ಗೆ, ಭೂಮಿಯ ಎಗ್ಸೋಸ್ಫಿಯರ್ ನಂತೆಯೇ ಮೇಲಿನ ಗಡಿಯಿಲ್ಲ. ಮೇಲೆಹೋದಂತೆಲ್ಲಾ "ಮೇಲ್ಮೈ"ಯಿಂದ ಸುಮಾರು ೫೦೦೦ ಕಿ.ಮೀ ಎತ್ತರದಲ್ಲಿ ನಿಧಾನವಾಗಿ ಎಗ್ಸೋಸ್ಫಿಯರ್ ಅಂತರಿಕ್ಷವಾಗಿ ಬದಲಾಗುತ್ತದೆ. ಗುರುವಿನ ವಾತಾವರಣದಲ್ಲಿ ಮೇಲೆ ಹೋದಂತೆಲ್ಲಾ ಉಷ್ಣತೆಯಲ್ಲಿ ಉಂಟಾಗುವ ಬದಲಾವಣೆಗಳನ್ನು ಭೂಮಿಯ ವಾತಾವರಣಕ್ಕೆ ಹೋಲಿಸಬಹುದು. ಗುರುವಿನ "ಮೇಲ್ಮೈ"ಗೆ ತಾಕಿಕೊಂಡಿರುವ ವಾತಾವರಣದ ಕೇಳಗಿನ ವಲಯ ಟ್ರೊಪೋಸ್ಫಿಯರ್ ನ ಉಷ್ಣತೆ ಮೇಲೆ ಹೋದಂತೆ ಕಡಿಮೆಯಾಗುತ್ತಾ ಬಂದು, ಟ್ರೊಪೋಪೌಸ್ ಎನ್ನುವ ಭಾಗದಲ್ಲಿ ಅತ್ಯಂತ ಕನಿಷ್ಟವಾಗಿರುತ್ತದೆ. ಟ್ರೊಪೋಪೌಸ್, ವಲಯಗಳಾದ ಟ್ರೊಪೋಸ್ಫಿಯರ್ ಮತ್ತು ಸ್ಟ್ರಾಟೋಸ್ಫಿಯರ್ ಗಳು ಕೂಡುವ ಗಡಿ ಪ್ರದೇಶ. ಗುರುಗ್ರಹದಲ್ಲಿ ಟ್ರೊಪೋಪೌಸ್, ಕಾಣಿಸುವ ಮೋಡಗಳಿಗಿಂತ ೫೦ ಕಿ.ಮೀ ಎತ್ತರದಲ್ಲಿರುತ್ತದೆ ಇಲ್ಲಿ ಒತ್ತಡ ೦.೧ ಬಾರ್ ಮತ್ತು ಉಷ್ಣತೆ ೧೧೦ ಕೆಲ್ವಿನ್. ನಂತರ ಬರುವ ಸ್ಟ್ರಾಟೊಸ್ಫಿಯರ್ ನಲ್ಲಿ ಉಷ್ಣತೆ ಮೇಲೆ ಹೋದಂತೆ ಹೆಚ್ಚಾಗುತ್ತಲೇ ಹೋಗುತ್ತದೆ. ಮುಂದಿನ ಥರ್ಮೋಸ್ಫಿಯರ್ ಅನ್ನು ಸೇರುವ ಭಾಗದಲ್ಲಿ ಉಷ್ಣತೆ ೩೨೦ ಕೆಲ್ವಿನ್ ಮತ್ತು ಒತ್ತಡ ೧ ಮೈಕ್ರೊ ಬಾರ್ ಗಳಷ್ಟಾಗುತ್ತವೆ.ಇನ್ನೂ ಮೇಲೆ ಹೋದಂತೆಲ್ಲಾ ಥರ್ಮೋಸ್ಫಿಯರ್ ನಲ್ಲಿ ಉಷ್ಣತೆ ಏರುತ್ತಲೇ ಸಾಗಿ, "ಮೇಲ್ಮೈ"ಯಿಂದ ಸುಮಾರು ೧೦೦೦ ಕಿ.ಮೀ ಎತ್ತರದಲ್ಲಿ ಗರಿಷ್ಟ ೧೦೦೦ ಕೆಲ್ವಿನ್ ಮತ್ತು ಒತ್ತಡ ೧ ನ್ಯಾನೊ ಬಾರ್ ಗಳಷ್ಟಾಗುತ್ತವೆ. ಗುರುಗ್ರಹದ ಟ್ರೊಪೋಸ್ಫಿಯರ್ ಕ್ಲಿಷ್ಟವಾದ ಮೋಡಗಳ ಸಂರಚನೆಯನ್ನು ಹೊಂದಿದೆ. ಈ ವಲಯದ ಸುಮಾರು ೦.೭-೦.೧ ಬಾರ್ ಒತ್ತಡದ ಮೇಲಿನ ಭಾಗದಲ್ಲಿ ಗೋಚರಿಸುವ ಮೋಡಗಳು ಅಮ್ಮೋನಿಯಾ ಐಸ್ ನಿಂದ (ಘನೀಭೂತವಾದ ಅಮ್ಮೊನಿಯಾ) ಆಗಿವೆ. ಈ ಮೋಡಗಳ ಕೆಳಗೆ ಅಮ್ಮೊನಿಯಮ್ ಸಲ್ಫೈಡ್ (೧.೫-೩ ಬಾರ್)ಮೋಡಗಳು, ಇವುಗಳ ಕೆಳಗೆ ನೀರಿನಿಂದಾದ (೩-೭ ಬಾರ್)ಮೋಡಗಳಿವೆಯೆಂದು ನಂಬಲಾಗಿದೆ. ಮಿಥೇನ್ ಅನಿಲವು ಗರಣೆಗಟ್ಟಿ ಮೋಡವಾಗುವುದಕ್ಕೆ ಸಾಧ್ಯವಾಗದಷ್ಟು ಹೆಚ್ಚು ಉಷ್ಣತೆಯಿರುವುದರಿಂದ ಮಿಥೇನ್ ಮೋಡಗಳಿಲ್ಲ. ನೀರಿನ ಲಭ್ಯತೆ ಅಮ್ಮೊನಿಯಾ ಮತ್ತು ಹೈಡ್ರೋಜೆನ್ ಸಲ್ಫೈಡ್ ಗಳಿಗಿಂತ ಹೆಚ್ಚಿರುವುದರಿಂದ ಹಾಗೂ ನೀರು ಆವಿಯಾಗಿ ಮೋಡವಾಗುವುದಕ್ಕೆ ಸಾಧ್ಯವಾದಷ್ಟು ಉಷ್ಣತೆಯಿರುವುದರಿಂದ ನೀರಿನ ಮೋಡಗಳ ಅಗಾಧ ಸಾಂದ್ರತೆಯಿದೆ. ಹೆಚ್ಚು ಸಾಂದ್ರತೆಯುಳ್ಳ ಈ ನೀರಿನ ಮೋಡಗಳ ಪದರ, ಗುರುವಿನ ವಾತಾವರಣದ ಸ್ಥಿತ್ಯಂತರ ಮತ್ತು ವಿದ್ಯಮಾನಗಳ ಮೇಲೆ ಬಲವಾದ ಪ್ರಭಾವ ಬೀರುತ್ತದೆ.
ಈ ಎಲ್ಲಾ ಮೋಡಗಳನ್ನೊಳಗೊಂಡ ಪದರಿನ ಮೇಲೆ ಟ್ರೋಪೊಸ್ಫಿಯರ್ ಮತ್ತು ಸ್ಟ್ರಾಟೋಸ್ಫಿಯರ್ ಗಳ ಹಲವಾರು ಮಂಜಿನ ಪದರುಗಳು ಇವೆ. ಈ ಮಂಜಿನ ಪದರುಗಳು ಹೆಪ್ಪುಗಟ್ಟಿದ ಪಾಲಿಸೈಕ್ಲಿಕ್ ಅರೋಮ್ಯಾಟಿಕ್ ಹೈಡ್ರೋಕಾರ್ಬನ್ ಅಥವಾ ಹೈಡ್ರಾಝಿನ್ ನಿಂದಾಗಿವೆ. ಸ್ಟ್ರಾಟೋಸ್ಫಿಯರ್ ನಲ್ಲಿರುವ ಮೀಥೇನ್ ಅನಿಲವು ಸೂರ್ಯನ ಅತಿನೇರಳೆ ಕಿರಣಗಳ ಪ್ರಭಾವಕ್ಕೊಳಗಾಗಿ ಹೈಡ್ರಾಝಿನ್ ಆಗಿ ಮಾರ್ಪಡುತ್ತದೆ. ಸ್ಟ್ರಾಟೋಸ್ಫಿಯರ್ ನಲ್ಲಿ ಮೀಥೇನ್ ನ ಲಭ್ಯತೆಯು ಜಲಜನಕದ ಲಭ್ಯತೆಯ ಅನುಪಾತದಲ್ಲಿ 10−4 ರಷ್ಟಿದ್ದರೆ, ಇತರ ಹೈಡ್ರೋಕಾರ್ಬನ್ ಗಳಾದ ಈಥೇನ್, ಅಸಿಟಲೀನ್ ಗಳ ಲಭ್ಯತೆಯು 10−6 ರಷ್ಟಿದೆ. ಗುರುಗ್ರಹದ ಥರ್ಮೋಸ್ಫಿಯರ್ ನಲ್ಲಿ ಒತ್ತಡ ೧ ಮೈಕ್ರೊಬಾರ್ ಗಿಂತ ಕಡಿಮೆಯಿರುತ್ತದೆ. ಈ ವಲಯದಲ್ಲಿ ಏರ್ ಗ್ಲೋ, ಧ್ರುವೀಯ ಅರೋರಾಗಳು ಮತ್ತು ಎಕ್ಸ್-ರೇ ಹೊಮ್ಮಿಸುವಂತಹ ಹಲವಾರು ವಿದ್ಯಮಾನಗಳು ನೆಡೆಯುತ್ತಿರುತ್ತವೆ. ಈ ವಲಯದೊಳಗೆ ಎಲೆಕ್ಟ್ರಾನು ಮತ್ತು ಅಯಾನ್ ಗಳ ಸಾಂದ್ರತೆಯುಳ್ಳ ಪದರುಗಳಿಂದ ಕೂಡಿದ ಆಯಾನೋಸ್ಫಿಯರ್ ಎನ್ನಲಾಗುವ ಮರಿ ವಲಯವೂ ಇದೆ. ಥರ್ಮೋಸ್ಫಿಯರ್ ನಲ್ಲಿ ಇರುವ ಅತೀವ ಉಷ್ಣತೆಗೆ(೮೦೦-೧೦೦೦ ಕೆಲ್ವಿನ್)ಕಾರಣವಿನ್ನೂ ತಿಳಿದಿಲ್ಲ. ಈ ವಲಯದ ಅಧ್ಯಯನಕಾರರ ಪ್ರಕಾರ ಇಲ್ಲಿ ಉಷ್ಣತೆ ೪೦೦ಕೆಲ್ವಿನ್ ಗಿಂತ ಹೆಚ್ಚಿರಬಾರದು. ಆದರೆ ಪ್ರಯೋಗಗಳ ಮೂಲಕ ಆಳೆದಿರುವ ಉಷ್ಣತೆ ೮೦೦-೧೦೦೦ ಕೆಲ್ವಿನ್. ಈ ಉಷ್ಣತೆಯು ತೀಕ್ಷ್ಣವಾದ ಸೂರ್ಯನ ವಿಕಿರಣವನ್ನು ಈ ವಲಯ ಹೀರಿಕೊಳ್ಳುವುದರಿಂದಾಗಲೀ, ಅಥವಾ ಗುರುವಿನ ಅಯಸ್ಕಾಂತೀಯ ವಲಯದಿಂದ ಥರ್ಮೋಸ್ಫಿಯರ್ ನತ್ತ ನುಗ್ಗಿಬರುವ ಉದ್ದೀಪ್ತ ಕಣಗಳಿಂದಾಗಲೀ,ಅಥವಾ ಗುರುಗ್ರಹದ ಅಂತರಾಳದಿಂದ ಎದ್ದು ಮೇಲೆ ಬಂದು ಹರಡುತ್ತಿರುವ ಗುರುತ್ವಾಕರ್ಷಣೆಯ ಅಲೆಗಳಿಂದಾಗಲೀ ಇರಬಹುದು. ಥೆರ್ಮೋಸ್ಪಿಯರ್ ಮತ್ತು ಎಕ್ಸೋಸ್ಫಿಯರ್ ಗಳು ಗ್ರಹದ ಧ್ರುವಗಳ ಬಳಿ ಎಕ್ಸ್-ರೇ ಗಳನ್ನು ಹೊಮ್ಮಿಸುವುದನ್ನು ಮೊದಲಬಾರಿಗೆ ಐನ್-ಸ್ಟೀನ್ ಖಗೋಳ ವೀಕ್ಷಣಾಲಯವು ೧೯೮೩ರಲ್ಲಿ ಪತ್ತೆಹಚ್ಚಿತು. ಗುರುವಿನ ಅಯಸ್ಕಾಂತೀಯ ವಲಯದಿಂದ ನುಗ್ಗುವ ಉದ್ದಿಪ್ತ ಕಣಗಳು ಧ್ರುವ ಪ್ರದೇಶಗಳಲ್ಲಿ ಧ್ರುವಾರುಣ(ಅರೋರಾ)ವನ್ನು ಉಂಟುಮಾಡುತ್ತವೆ. ಇವು ಭೂಮಿಯ ಧ್ರುವಾರುಣಗಳಂತೆ ಕೇವಲ ಮ್ಯಾಗ್ನೆಟಿಕ್ ಸ್ಟೋರ್ಮ್ ಗಳ ಸಂದರ್ಭದಲ್ಲಿ ಮಾತ್ರ ಉಂಟಾಗದೇ, ಯಾವಾಗಲೂ ಶಾಶ್ವತವಾಗಿ ಗುರುವಿನ ಧ್ರುವ ಪ್ರದೇಶಗಳಲ್ಲಿ ಕಂಡುಬರುತ್ತವೆ. ಭೂಮಿಯನ್ನು ಬಿಟ್ಟು ಹೊರಗಡೆ ಟ್ರೈಹೈಡ್ರೋಜಿನೇಶನ್ ಅಯಾನ್ ಅನ್ನು ಪತ್ತೆಹಚ್ಚಲಾಗಿರುವ ಮೊದಲ ಪ್ರದೇಶ ಗುರುವಿನ ವಾತಾವರಣದ ಥೆರ್ಮೋಸ್ಫಿಯರ್ ವಲಯ. ಈ ಅಯಾನು ಇನ್-ಫ್ರಾ ರೆಡ್ ಸ್ಪೆಕ್ಟ್ರಂ ನ ೩ ಮತ್ತು ೫ ಮೈಕ್ರೊಮೀಟರ್ ಕಂಪನಾಂಕದಲ್ಲಿ ತರಂಗಗಳನ್ನು ತೀವ್ರವಾಗಿ ಸೂಸುತ್ತದೆ. ಇದು ಥರ್ಮೋಸ್ಫಿಯರ್ ನ ಉಷ್ಣತೆಯನ್ನು ನಿಯಂತ್ರಿಸುತ್ತದೆ.
ರಾಸಾಯನಿಕ ಸಂಯೋಜನೆ
[ಬದಲಾಯಿಸಿ]ಗುರುಗ್ರಹದ ವಾತಾವರಣದ ರಾಸಾಯನಿಕ ಸಂಯೋಜನೆಯು ಇಡೀ ಗ್ರಹದ ಸಂಯೋಜನೆಯಂತೆಯೇ ಇದೆ. ಡಿಸೆಂಬರ್ ೭, ೧೯೯೫ ರಂದು ಗೆಲಿಲಿಯೋ ಆಂತರಿಕ್ಷ ನೌಕೆಯು ಪ್ರೋಬ್ ಯಂತ್ರವೊಂದನ್ನು ಗುರುವಿನ ವಾತಾವರಣದಲ್ಲಿ ಬಿಟ್ಟಿತು. ಆ ಪ್ರೋಬ್ ಯಂತ್ರವು ಕೆಳಗೆ ಇಳಿಯುತ್ತಾ ವಾತಾವರಣದ ಬಗ್ಗೆ ಮಾಹಿತಿಯನ್ನು ಆಂತರಿಕ್ಷ ನೌಕೆಗೆ ರವಾನಿಸಿತು ಗ್ರಹದ ಮೇಲ್ಮೈಯಿಂದ ೧೩೨ ಕಿ.ಮೀ ವರಗೆ ಇಳಿದ ನಂತರ ಯಂತ್ರವು ಸ್ತಬ್ಧವಾಯಿತು. ಈ ಕಾರ್ಯಾಚರಣೆಯ ಫಲವಾಗಿ ಗುರುವಿನ ವಾತಾವರಣವು ಇನ್ನಿತರ ಎಲ್ಲಾ "ಅನಿಲ ದೈತ್ಯ"(ಗ್ಯಾಸ್ ಜೇಂಟ್) ಗ್ರಹಗಳಿಗಿಂತ ಹೆಚ್ಚು ವಿಶದವಾಗಿ ತಿಳಿಯಲ್ಪಟ್ಟಿದೆ. ರಸಾಯನಿಕ ಸಂಯೋಜನೆಯ ಮಾಹಿತಿಯ ಇನ್ನಿತರ ಸ್ರೋತಗಳೆಂದರೆ ಇನ್-ಫ್ರಾ ರೆಡ್ ಖಗೋಳ ವೀಕ್ಷಣಾಲಯ, ಗುರುಗ್ರಹದ ಬಳಿ ಹಾದು ಹೋದ ಕ್ಯಾಸಿನಿ ಆಂತರಿಕ್ಷ ನೌಕೆ, ಮತ್ತು ಭೂಮಿಯಲ್ಲಿರುವ ಇತರ ಖಗೋಳ ವೀಕ್ಷಣಾಲಯಗಳು. ಗುರುಗ್ರಹದ ವಾತಾವರಣದಲ್ಲಿ ಪ್ರಮುಖವಾಗಿ ಜಲಜನಕ ಮತ್ತು ಹೀಲಿಯಂ ಸಮೃದ್ಢವಾಗಿವೆ. ಹೀಲಿಯಂ ಅಣುಗಳ ಸಮೃದ್ಧಿ ಜಲಜನಕದ ಅಣುಗಳಿಗೆ ಹೋಲಿಸಿದರೆ 0.157 ± 0.0036 ರಷ್ಟಿದೆ. ಮತ್ತು ಮಾಸ್ ಫ್ರ್ಯಾಕ್ಷನ್ 0.234 ± 0.005 ರಷ್ಟಿದೆ. ಈ ಅನುಪಾತಗಳು ನಮ್ಮ ಸೌರವ್ಯೂಹದ ಉಗಮದ ಸಮಯದಲ್ಲಿದ್ದ ಜಲಜನಕ ಮತ್ತು ಹೀಲಿಯಂ ಅಣುಗಳ ಅನುಪಾತಕ್ಕಿಂತ ಸ್ವಲ್ಪ ಕಡಿಮೆ. ಇದಕ್ಕೆ ಕಾರಣವೇನೆಂದು ತಿಳಿದಿಲ್ಲ, ಆದರೆ ಜಲಜನಕಕ್ಕಿಂತ ಭಾರವಾಗಿರುವ ಹೀಲಿಯಂ ಸ್ವಲ್ಪ ಪ್ರಮಾಣದಲ್ಲಿ ಗುರುವಿನ ಗರ್ಭದಲ್ಲಿ ಹೆಪ್ಪುಗಟ್ಟಿರಬೇಕೆಂದು ತಿಳಿಯಲಾಗಿದೆ. ವಾತಾವರಣದಲ್ಲಿ ಸರಳ ರಾಸಾಯನಿಕಗಳಾದ ನೀರು, ಮೀಥೇನ್(CH4), ಹೈಡ್ರೊಜೆನ್ ಸಲ್ಫೈಡ್(H2S), ಅಮ್ಮೋನಿಯ(NH3), ಫೊಸ್ಫೈನ್(PH3) ಗಳು ಕಂಡುಬರುತ್ತವೆ. ಟ್ರೊಪೋಸ್ಫಿಯರ್ ನ ತೀರಾ ಒಳಗೆ (೧೦ ಬಾರ್) ಇವುಗಳ ಸಮೃದ್ಧಿಯಿರುವುದರಿಂದ ಗುರುವಿನ ವಾತಾವರಣದಲ್ಲಿ ಧಾತುಗಳಾದ ಕಾರ್ಬನ್, ಸಾರಜನಕ, ಆಮ್ಲಜನಕಮತ್ತು ಗಂಧಕಗಳು ಸೂರ್ಯನಲ್ಲಿರುವುದಕ್ಕಿಂತಲೂ ೨-೪ ಪಟ್ಟು ಹೆಚ್ಚಾಗಿವೆ ಎಂದು ತಿಳಿದುಬರುತ್ತದೆ. ನೋಬಲ್ ಅನಿಲಗಳಾದ ಅರ್ಗಾನ್, ಕ್ರಿಪ್ಟಾನ್ ಮತ್ತು ಝೆನಾನ್ ಗಳು ಕೂಡಾ ಸೌರ ಪ್ರಮಾಣಗಳಿಗಿಂತ ಹೆಚ್ಚಾಗಿವೆ ಆದರೆ ನಿಯಾನ್ ಮಾತ್ರ ಕಡಿಮೆಯಿದೆ. ಇತರ ರಾಸಾಯನಿಕಗಳಾದ ಅರ್ಸೈನ್(AsH3),ಜರ್ಮೇನ್(GeH4) ತೀರಾ ಕನಿಷ್ಟ ಪ್ರಮಾಣದಲ್ಲಿವೆ.ಗುರುವಿನ ವಾತಾವರಣದ ಮೇಲುಭಾಗದಲ್ಲಿ ಸರಳ ಹೈಡ್ರೋಕಾರ್ಬನ್ ಗಳು ಕಂಡುಬರುತ್ತವೆ ಇವುಗಳಲ್ಲಿ ಈಥೇನ್, ಅಸಿಟಲೀನ್, ಡೈಅಸಿಟಲೀನ್ ಮುಂತಾದವು ಸೂರ್ಯನ ಅತಿನೇರಳೆ ಕಿರಣಗಳು ಮತ್ತು ಗ್ರಹದ ಆಯಸ್ಕಾಂತೀಯ ವಲಯದಿಂದ ನುಗ್ಗುವ ಉದ್ದೀಪ್ತ ಕಣಗಳು ಮೀಥೇನ್ ಅನಿಲದ ಮೇಲೆ ವರ್ತಿಸಿದಾಗ ಉಂಟಾಗುತ್ತವೆ. ವಾತಾವರಣದ ಇದೇ ಭಾಗದಲ್ಲಿ ಕಂಡುಬರುವ ಕಾರ್ಬನ್ ಡೈಆಕ್ಸೈಡ್, ಕಾರ್ಬನ್ ಮೊನಾಕ್ಸೈಡ್ ಮತ್ತು ಅಲ್ಪ ಪ್ರಮಾಣದ ನೀರು, ಶೂಮೇಕರ್ ಲೆವಿ-೯ ನಂತಹ ಧೂಮಕೇತುಗಳ ಅಪ್ಪಳಿಸುವಿಕೆಯಿಂದ ಉಂಟಾಗಿರಬೇಕೆಂದು ಊಹಿಸಲಾಗಿದೆ. ಈ ಭಾಗದಲ್ಲಿರುವ ನೀರು ಕೆಳಗಿನ ಟ್ರೊಪೋಸ್ಫಿಯರ್ ನಿಂದ ಬರಲು ಸಾಧ್ಯವಿಲ್ಲ, ಎಕೆಂದರೆ ಟ್ರೊಪೋಸ್ಫಿಯರ್ ನ ಮೇಲಿನ ಗಡಿಯಾಗಿರುವ ಟ್ರೊಪೋಪೌಸ್ ತಣ್ಣಗಿರುವುದರಿಂದ, ನೀರಾವಿಯನ್ನು ತಣ್ಣಗೆ ಮಾಡಿ ಭಾರವಾಗಿರುವ ಮೋಡಗಳನ್ನಾಗಿಸಿ ತನ್ನನ್ನು ದಾಟಿ ಮೇಲಿನ ಸ್ಟ್ರಾಟೋಸ್ಫಿಯರ್ ಗೆ ಹೊಗದಂತೆ ತಡೆಯುತ್ತದೆ. ಭೂಮಿಯಿಂದ ಮತ್ತು ಆಂತರಿಕ್ಷನೌಕೆಗಳಿಂದ ನೆಡೆಸಲಾದ ಪರೀಕ್ಷೆಗಳಿಂದ ಗುರುಗ್ರಹದ ವಾತಾವರಣದ ಐಸೋಟೋಪ್ ಅನುಪಾತಗಳ ಉತ್ತಮ ತಿಳುವಳಿಕೆಯುಂಟಾಗಿದೆ. ಜುಲೈ ೨೦೦೩ರಲ್ಲಿ ಒಪ್ಪಲ್ಪಟ್ಟ ಡ್ಯುಟೇರಿಯಂ ಸಮೃದ್ಧಿಯು 2.25 ± 0.35 × 10−5 ರಷ್ಟು, ಇದು ಬಹುಶಃ ನಮ್ಮ ಸೌರವ್ಯೂಹಕ್ಕೆ ಜನ್ಮನೀಡಿದ ಮೂಲ ನಕ್ಷತ್ರ ನ್ಯಬೂಲಾ (ಪ್ರ್ಟೊಟೊ ಸ್ಟಾರ್ ನ್ಯಬೂಲಾ)ದಲ್ಲಿದ್ದ ಅನುಪಾತವಿರಬೇಕು. ಸಾರಜನಕದ ಐಸೋಟೊಪುಗಳಾದ 15N ಮತ್ತು 14N ಗಳ ಅನುಪಾತವು 2.3 × 10−3 ರಷ್ಟು. ಇದು ಭೂಮಿಯ ವಾತಾವರಣದ ಇವೇ ಐಸೋಟೊಪುಗಳ ಅನುಪಾತದ (3.5 × 10−3) ಮೂರನೆಯ ಒಂದರಷ್ಟು ಎಂಬುದು ವಿಶೇಷವಾಗಿದೆ ಎಕೆಂದರೆ ಕೆಲವು ಸೌರವ್ಯೂಹದ ಉಗಮವನ್ನು ಅರ್ಥೈಸುಲು ಯತ್ನಿಸುವ ವಾದಗಳು ಭೂಮಿಯ ವಾತಾವರಣದ ಸಾರಜನಕದ ಐಸೋಟೊಪುಗಳ ಅನುಪಾತವನ್ನು ಸೌರವ್ಯೂಹದ ಉಗಮಕಾಲದಲ್ಲಿದ್ದ ಅನುಪಾತವೆಂದು ಪ್ರತಿಪಾದಿಸಿದ್ದವು.
ಝೋನ್, ಬೆಲ್ಟ್ ಮತ್ತು ಜೆಟ್ ಗಳು
[ಬದಲಾಯಿಸಿ]ದೂರದಿಂದ ನೋಡಿದಾಗ ಗುರುಗ್ರಹದ ಮೇಲೆ, ಗ್ರಹದ ಭೂಮಧ್ಯ ರೇಖೆಗೆ ಸಮನಾಂತರವಾಗಿ ಅನೇಕ ಪಟ್ಟಿಗಳಂತ ರಚನೆಗಳು ತೋರುತ್ತವೆ. ಎರಡು ಬಗೆಯ ಪಟ್ಟಿಗಳಿವೆ, ತಿಳಿವರ್ಣದ ಪಟ್ಟಿಗಳಿಗೆ ಝೋನ್ ಗಳೆಂದು ಮತ್ತು ಗಾಢವರ್ಣದ ಬೆಲ್ಟ್ ಗಳೆಂದು ಕರೆಯಲಾಗಿದೆ. ಗ್ರಹದ ಮಧ್ಯದಲ್ಲಿ ಅಗಲವಾದ "ಭೂಮಧ್ಯ ಝೋನ್"(ಇಕ್ವಟೋರಿಯಲ್ ಝೋನ್ ಅಥವಾ EZ ) 7°S ಮತ್ತು 7°N ರೇಖಾಂಶಗಳ ಮಧ್ಯ ವಿಸ್ತರಿಸುತ್ತಾ ಹೋಗುತ್ತದೆ. EZ ನ ಮೇಲೆ ಮತ್ತು ಕೆಳಗೆ "ಉತ್ತರ ಭೂಮಧ್ಯ ಝೋನ್" ಮತ್ತು "ದಕ್ಷಿಣ ಭೂಮಧ್ಯ ಝೋನ್" 18°N ಮತ್ತು 18°S ರೇಖಾಂಶಗಳ ಮಧ್ಯ ವಿಸ್ತಾರಗೊಳ್ಳುತ್ತವೆ. ಭೂಮಧ್ಯ ರೇಖೆಯಿಂದ ಇನ್ನೂ ದೂರದಲ್ಲಿ ಉತ್ತರ ಮತ್ತು ದಕ್ಷಿಣ ಟ್ರಾಪಿಕಲ್ ಝೋನ್ ಗಳಿವೆ. ಎರಡು ಝೋನ್ಗಳ ಮಧ್ಯ ಒಂದು ಬೆಲ್ಟ್ ಇರುತ್ತದೆ. ಒಂದರ ನಂತರ ಇನ್ನೊಂದರಂತೆ ಝೋನ್ ಮತ್ತು ಬೆಲ್ಟ್ ಗಳ ರಚನೆಯು ಗ್ರಹದ ಧ್ರುವ ಪ್ರದೇಶಗಳ ೫೦ ಡಿಗ್ರಿ ರೇಖಾಂಶದವರೆಗೂ ಕಾಣಿಸುತ್ತದೆ ನಂತರ ಮಂದವಾಗುತ್ತದೆ. ಬೆಲ್ಟ್ ಮತ್ತು ಝೋನ್ ಗಳ ತೋರಿಕೆಯ ವ್ಯತ್ಯಾಸವು ಅವುಗಳಲ್ಲಿರುವ ಮೋಡಗಳ ಪಾರದರ್ಶಕತೆಯನ್ನವಲಂಬಿಸಿರುತ್ತದೆ. ಮೋಡಗಳಲ್ಲಿ ಅಮ್ಮೋನಿಯಾದ ಸಾಂದ್ರತೆಯು ಹೆಚ್ಚಿದ್ದಲ್ಲಿ ಬೆಳ್ಳಗೆ ಹೊಳೆಯುವ ಅಮ್ಮೊನಿಯಾ ಐಸ್ ಉಂಟಾಗಿ ತಿಳಿವರ್ಣದಿಂದ ಝೋನ್ ಎಂದು ಕರೆಯಲ್ಪಡುತ್ತದೆ. ಆದರೆ ಬೆಲ್ಟ್ ಗಳಲ್ಲಿನ ಮೋಡಗಳು ತೆಳ್ಳಗಿರುತ್ತವಲ್ಲದೆ ಗಾಢವರ್ಣವುಳ್ಳದ್ದಾಗಿರುತ್ತವೆ. ಯಾವ ರಾಸಾಯನಿಕಗಳಿಂದ ಗಾಢವರ್ಣವುಂಟಾಗಿದೆಯೆಂದು ನಿಶ್ಚಿತವಾಗಿ ತಿಳಿದುಬಂದಿಲ್ಲ,ಆದರೆ ವಾತಾವರಣದಲ್ಲಿರುವ ಗಂಧಕ,ರಂಜಕ ಮತ್ತು ಕಾರ್ಬನ್ ಗಳ ಕಾಂಪೌಂಡು ಗಳಿಂದಾಗಿರಬೇಕೆಂದು ಊಹಿಸಲಾಗಿದೆ.
ಗುರು ಗ್ರಹದ ಮೇಲೆ ಪಟ್ಟಿಗಳಂತೆ ಕಾಣುವ ಝೋನ್ ಮತ್ತು ಬೆಲ್ಟ್ ಗಳು ವಾಸ್ತವವಾಗಿ ಬಲವಾಗಿ ಬೀಸುವ "ಜೆಟ್" ಗಳೆಂದು ಕರಯಲ್ಪಡುವ ಬಿರುಗಾಳಿಗಳಿಂದ ಕೂಡಿರುತ್ತವೆ. ಪಶ್ಚಿಮದಿಕ್ಕಿಗೆ ಬೀಸುವ (ಪಶ್ಚಿಮವಾಹಿನಿ) ಜೆಟ್ ಗಳು ಝೋನ್ ಗಳು ಬೆಲ್ಟ್ ಗಳಾಗುವ ಮಧ್ಯಪ್ರದೇಶಗಳಲ್ಲಿ ಕಂಡುಬರುತ್ತವೆ(ಭೂಮಧ್ಯ ರೇಖೆಯಿಂದ ಧ್ರುವಗಳೆಡೆ ಮೇಲೆ ಹೋಗುತ್ತಾ). ಹಾಗೆಯೇ ಪೂರ್ವದಿಕ್ಕಿಗೆ ಬೀಸುವ ಜೆಟ್ ಗಳು ಬೆಲ್ಟ್ ಗಳು ಝೋನ್ ಗಳಾಗಿ ಮಾರ್ಪಡುವ ಪ್ರದೇಶದಲ್ಲಿರುತ್ತವೆ. ಈ ರೀತಿಯ ವಾಯುರಚನೆಯ ಅರ್ಥವೇನೆಂದರೆ ಝೋನ್ ನಲ್ಲಿನ ವಾಯುಪ್ರವಾಹಗಳು ಬೆಲ್ಟ್ ಗಳಲ್ಲಿ ಕಡಿಮೆಯಾಗುತ್ತವೆ ಮತ್ತು ಭೂಮಧ್ಯ ರೇಖೆಯಿಂದ ಧ್ರುವಗಳಡೆ ಹೋಗುತ್ತಾ ಝೋನ್ ಗಳಲ್ಲಿ ಹೆಚ್ಚಾಗುತ್ತವೆ.ಆದ್ದರಿಂದ ವಾಯುವು ಝೊನ್ ಗಳಲ್ಲಿ ಅಪ್ರದಕ್ಷಿಣಾಕಾರದಲ್ಲೂ, ಬೆಲ್ಟ್ ಗಳಲ್ಲಿ ಪ್ರದಕ್ಷಿಣಾಕಾರದಲ್ಲೂ ತಿರುಗುತ್ತದೆ. ಆದರೆ EZ ಮಾತ್ರ ಇದಕ್ಕೆ ವಿರುದ್ಧವಾಗಿ ಪೂರ್ವವಾಹಿನಿಯಾದ ಒಂದು ಬಲವಾದ ಜೆಟ್ ಅನ್ನು ಹೊಂದಿದೆ ಮತ್ತು ಭೂಮಧ್ಯಕ್ಕೆ ನಿಖರವಾಗಿರುವ ಪ್ರದೇಶದಲ್ಲಿ ಮಂದ ಪ್ರವಾಹವನ್ನು ತೋರಿಸುತ್ತದೆ. ಗುರುವಿನ ಜೆಟ್ ಗಳು ತುಂಬಾ ವೇಗದಿಂದ ಬೀಸುತ್ತವೆ ಸಾಮಾನ್ಯವಾಗಿ ೧೦೦ ಮೀಟರ್ ಪ್ರತಿ ಸೆಕೆಂಡ್ ಗಿಂತಲೂ ಹೆಚ್ಚು ವೇಗದಿಂದಿರುತ್ತವೆ. ಈ ರೀತಿಯ ವೇಗ ೦.೭-೧ ಬಾರ್ ಒತ್ತಡದ ಎತ್ತರದಲ್ಲಿರುವ ಅಮ್ಮೊನಿಯಾ ಮೋಡಗಳಿಗಿರುತ್ತದೆ. ಪೂರ್ವವಾಹಿನಿ ಜೆಟ್ ಗಳು ಸಮಾನ್ಯವಾಗಿ ಪಶ್ಚಿಮವಾಹಿನಿ ಜೆಟ್ ಗಳಿಗಿಂತ ಹೆಚ್ಚು ಶಕ್ತಿಯುತವಾಗಿರುತ್ತವೆ. ಜೆಟ್ ಗಳ ಎತ್ತರವೆಷ್ಟಿರುತ್ತದೆಯೋ ತಿಳಿದಿಲ್ಲ, ಅದರೆ ಮೋಡಗಳ ಮೇಲೆ ೨-೩ ಸ್ಕೇಲ್-ಹೈಟ್ ಗಳ ನಂತರ ಮಂದವಾಗುತ್ತವೆ.ಮೋಡಗಳ ಕೆಳಗೆ ವಾಯುವೇಗ ಸ್ವಲ್ಪ ಹಚ್ಚಿ ನಂತರ ೨೨ಬಾರ್ ಒತ್ತಡದಷ್ಟು ಆಳದವರೆಗೆ ಹಾಗೆಯೇ ಇದ್ದುದು ಗೆಲಿಲಿಯೋ ಪ್ರೋಬ್ ಯಂತ್ರದಿಂದ ತಿಳಿಯಲ್ಪಟ್ಟಿದೆ. ಇನ್ನೂ ಆಳದಲ್ಲಿ ಹೋದಂತೆ ಪ್ರೋಬ್ ಯಂತ್ರವು ಸ್ತಬ್ಧವಾಯಿತು. ಬಹುಶಃ ತೀವ್ರ ಒತ್ತಡದಿಂದ ನಾಶವಾಗಿರಬೇಕು. ಗುರುಗ್ರಹದ ಪಟ್ಟಿಗಳ ರಚನೆಯ ಉಗಮವು ಹೇಗಾಯಿತೆಂದು ಇನ್ನೂ ಧೃಡಪಟ್ಟಿಲ್ಲ. ಬಹುಶಃ ಭೂಮಿಯ ವಾತಾವರಣದ ಹಾಡ್ಲೀ ಸೆಲ್ ಗಳ ರಚನೆಯ ಕ್ರಿಯೆಯಂತಹುದೇ ಕಾರಣವಿರಬೇಕು. ಸರಳವಾದ ವಾದವೇನೆಂದರೆ, ವಾತಾವರಣದಲ್ಲಿ ಉಬ್ಬಿ ಮೇಲೆ ಬರುತ್ತಿರುವ ವಾಯುಪ್ರವಾಹವು ಝೋನ್ ಗಳು ಮತ್ತು ಹಾಗೆ ಮೇಲೆಬಂದು ತಣ್ಣಗಾಗಿ ಕೆಳಗೆ ಹೋಗುತ್ತಿರುವ ಪ್ರವಾಹಗಳು ಬೆಲ್ಟ್ ಗಳು. ಆಮ್ಮೊನಿಯಾ ಅನಿಲದಿಂದ ಸಮೃದ್ಧವಾದ ವಾಯುವು ಊರ್ಧ್ವಮುಖವಾಗಿ ಚಲಿಸಿ, ಮೇಲೆಬಂದು ವಿಸ್ತಾರವಾಗಿ ಹರಡಿ, ತಣ್ಣಗಾಗಿ ಬೆಳ್ಳಗೆ ಹೊಳೆಯುವ ಅಮ್ಮೊನಿಯಾದ ಸಾಂದ್ರ ಮೋಡಗಳಾಗಿ, ತಿಳಿವರ್ಣಹೊಂದಿ ಝೋನ್ ಪಟ್ಟಿಯಂತೆ ಕಾಣುತ್ತದೆ. ಬೆಲ್ಟ್ ಗಳಲ್ಲಿ ಈ ತಣ್ಣಗಾದ ವಾಯುವು ಅಧೋಮುಖವಾಗಿ ಚಲಿಸಿ, ಕೆಳಗಿನ ವಾತಾವರಣದ ಒತ್ತಡದಿಂದ ಬೆಚ್ಚಗಾಗುವುದರಿಂದ ಅದರಲ್ಲಿನ ಬಿಳಿ ಅಮ್ಮೊನಿಯಾ ಮೋಡಗಳು ಆವಿಯಾಗಿ ಕೆಳಗಿನ ಗಾಢವರ್ಣದ ಇತರ ಮೋಡಗಳು ಕಾಣಿಸುವುದರಿಂದ ಬೆಲ್ಟ್ ಗಳು ಗಾಢವರ್ಣದ್ದಾಗಿ ಗೋಚರಿಸುತ್ತವೆ. ಈ ಝೋನ್ ಮತ್ತು ಬೆಲ್ಟ್ ಪಟ್ಟಿಗಳ ಸ್ಥಾನ,ಅಗಲ ಮತ್ತು ಇವುಗಳಲ್ಲಿನ ಜೆಟ್ ಗಳ ವೇಗವು ಆಶ್ಚರ್ಯಕರವಾಗಿ ಬಹು ಸಮಯದವರೆಗೂ ಬದಲಾಗದೇ ಇರುತ್ತದೆ. ಕ್ರಿ.ಶ ೧೯೮೦ ರಿಂದ ಕ್ರಿ.ಶ ೨೦೦೦ ರವರೆಗೆ ತೀರ ವಿರಳವಾಗಿ ಅಲ್ಪಸ್ವಲ್ಪ ಬದಲಾವಣೆಗಳಾಗಿವೆ. ಉದಾಹರಣೆಗೆ, ಉತ್ತರ ಟ್ರಾಪಿಕಲ್ ಝೋನ್ ಮತ್ತು ಉತ್ತರ ಟೆಂಪರೇಟ್ ಬೆಲ್ಟ್ ಗಳ ಮಧ್ಯದಲ್ಲಿ ೨೩ ಡಿಗ್ರಿ ಉತ್ತರದಲ್ಲಿರುವ ಪೂರ್ವವಾಹಿನಿಯಾದ ಒಂದು ಜೆಟ್ ಬಿರುಗಾಳಿಯ ವೇಗವು ಸ್ವಲ್ಪ ಮಂದವಾಗಿದೆ.ಆದರೆ ಈ ಪಟ್ಟಿಗಳ ವರ್ಣವ್ಯತ್ಯಾಸ ಮತ್ತು ತೀವ್ರತೆಯಲ್ಲಿ ಕಾಲಕಳೆದಂತೆ ಬದಲಾವಣೆಗಳಾಗುತ್ತಲೇ ಇರುತ್ತವೆ.
ಪಟ್ಟಿಗಳು
[ಬದಲಾಯಿಸಿ]ಗುರುವಿನ ವಾತಾವರಣದ ಪ್ರತಿಯೊಂದು ಪಟ್ಟಿಯೂ ತನ್ನದೇ ಆದ ಹೆಸರು ಮತ್ತು ವಿಶೇಷ ಗುಣಗಳನ್ನು ಹೊಂದಿದೆ. ಈ ಪಟ್ಟಿಗಳು ಧ್ರುವ ಪ್ರದೇಶಗಳ ಕೆಳಗಿನಿಂದ ಪ್ರಾರಂಭವಾಗುತ್ತವೆ. ಗುರುವಿನ ಧ್ರುವ ಪ್ರದೇಶಗಳು ಧ್ರುವ ಬಿಂದುವಿನಿಂದ 40–48° N/S ರಷ್ಟು ವಿಸ್ತಾರವಾಗಿವೆ. ನೀಲಿ-ಬೂದು ಬಣ್ಣದಿಂದ ಕಾಣುವ ಈ ಪ್ರದೇಶಗಳಲ್ಲಿ, ಗಮನಿಸುವಂತಹ ಯಾವುದೇ ವಿಶೇಷತೆಗಳಿಲ್ಲ. ಉತ್ತರ "ನಾರ್ತ್ ಟೆಂಪರೇಟ್" ಪ್ರದೇಶವು "ಲಿಂಬ್ ಡಾರ್ಕೆನಿಂಗ್", "ಫೋರ್ ಶೋರ್ಟೆನಿಂಗ್" ನಂತಹ ವಿದ್ಯಮಾನಗಳಿಂದಾಗಿ ಧ್ರುವಪ್ರದೇಶಗಳಿಗಿಂತ ಹೆಚ್ಚು ಭಿನ್ನವಾಗೇನೂ ಕಾಣಿಸುವುದಿಲ್ಲ. ಆದರೂ ಈ ಪ್ರದೇಶದಲ್ಲಿ ಒಂದು ಬೆಲ್ಟ್ (NNTB) ಮತ್ತು ಒಂದು ಝೋನ್ (NNTZ) ಗಳನ್ನು ಗುರುತಿಸಲಾಗಿದೆ. ಇವೆರಡನ್ನು ಬಿಟ್ಟರೆ ಇನ್ನೂ ಕೆಲವು ಸಣ್ಣ ಬೆಲ್ಟ್ ಮತ್ತು ಝೋನ್ ಗಳು ಈ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಉದ್ಭವವಾಗಿ ಕಣ್ಮರೆಯಾಗುತ್ತಿರುತ್ತವೆ. ಗುರುಗ್ರಹದ ಅತ್ಯಂತ ಉತ್ತರದಲ್ಲಿರುವ ಮತ್ತು ಸ್ಪಷ್ಟವಾಗಿ ಕಾಣಿಸುವ ಬೆಲ್ಟ್ "ನಾರ್ತ್ ನಾರ್ತ್ ಟೆಂಪರೇಟ್ ಬೆಲ್ಟ್" ಅಥವಾ NNTB. ಆದರೆ ಕೆಲವೊಮ್ಮೆ ಇದು "ಕಾಣೆಯಾಗುತ್ತದೆ".ಇದರಲ್ಲಿನ ಪ್ರಕ್ಷುಬ್ಧತೆಗಳು ಅಲ್ಪಾಯು ಮತ್ತು ಸಣ್ಣ ದಾಗಿರುತ್ತವೆ.ಗುರುಗ್ರಹದ ಅತ್ಯಂತ ಉತ್ತರದಲ್ಲಿರುವ ಮತ್ತು ಸ್ಪಷ್ಟವಾಗಿ ಕಾಣಿಸುವ ಝೋನ್ "ನಾರ್ತ್ ನಾರ್ತ್ ಟೆಂಪರೇಟ್ ಝೋನ್" ಅಥವಾ NNTZ. ಇದು ಸಾಧಾರಣವಾಗಿ ಪ್ರಕ್ಷುಬ್ಧತೆಗಳಿಲ್ಲದೇ ಶಾಂತವಾಗಿರುತ್ತದೆ. ಉತ್ತರ ಟೆಂಪರೇಟ್ ಪ್ರದೇಶವನ್ನು ಭೂಮಿಯಿಂದ ಸುಲಭವಾಗಿ ದೊರದರ್ಶಕದ ಸಹಾಯದಿಂದ ನೋಡಬಹುದು. ಆದ್ದರಿಂದ ಈ ಪ್ರದೇಶದ ಉತ್ತಮ ವೀಕ್ಷಣಾ ಇತಿಹಾಸದ ದಾಖಲೆಗಳಿವೆ. ಈ ಭಾಗದಲ್ಲಿ ಒಂದು ಪ್ರಬಲವಾದ, ಪೂರ್ವಕ್ಕೆ ಬೀಸುತ್ತಿರುವ ಬಿರುಗಾಳಿಯಿದೆ. ಈ ಬಿರುಗಾಳಿ "ಉತ್ತರ ಟೆಂಪರೇಟ್ ಬೆಲ್ಟ್" ಅಥವಾ NTBಯ ದಕ್ಷಿಣ ಗಡಿಯಾಗಿದೆ. NTBಯು ಸುಮಾರು ಹತ್ತು ವರ್ಷಗಳಿಗೊಮ್ಮೆ ಮಂದವಾಗಿ ಸುಲಭವಾಗಿ ಕಾಣಿಸದಂತಾಗಿ ಉತ್ತರ ಟೆಂಪರೇಟ್ ಝೋನ್ (NTZ)ನನ್ನು ಉತ್ತರ ಟ್ರಾಪಿಕಲ್ ಝೋನ್ (NTropZ) ನೊಂದಿಗೆ ವಿಲೀನಗೊಳಿಸುತ್ತದೆ. ಇದನ್ನು ಬಿಟ್ಟರೆ ಉಳಿದ ಸಮಯದಲ್ಲಿ NTZ, ಬೆಲ್ಟ್ ಒಂದರಿಂದ ಉತ್ತರ-ದಕ್ಷಿಣಾರ್ಧಗಳಾಗಿ ವಿಭಜಿತವಾಗಿರುತ್ತದೆ. ಉತ್ತರ ಟ್ರಾಪಿಕಲ್ ಪ್ರದೇಶವು NTropZ ಮತ್ತು ಉತ್ತರ ಎಕ್ವಟೋರಿಯಲ್ ಬೆಲ್ಟ್ ಅಥವಾ NEB ಗಳನ್ನು ಒಳಗೊಂಡಿದೆ. ಸಮಾನ್ಯವಾಗಿ NTropZ ತನ್ನ ವರ್ಣವ್ಯತ್ಯಾಸದಲ್ಲಿ ಸ್ಥಿತ್ಯಂತರಗಳನ್ನು ತೋರಿಸುವುದಿಲ್ಲ. ಆದರೆ ಕೆಲವೊಮ್ಮೆ NTBಯ ದಕ್ಷಿಣ ಜೆಟ್ ಪ್ರವಾಹದಲ್ಲಿ ಪ್ರಕ್ಷುಬ್ಧತೆಗಳುಂಟಾದಾಗ ವರ್ಣದ ತೀವ್ರತೆಯಲ್ಲಿ ವ್ಯತ್ಯಾಸ ಕಾಣುತ್ತದೆ. NTZನ ಹಾಗೆಯೇ ಇದೂ ಕೂಡ ಕೆಲವೊಮ್ಮೆ ಉತ್ತರ ಟ್ರಾಪಿಕಲ್ ಬೆಲ್ಟ್ ಅಥವಾ NTropBಯಿಂದ ವಿಭಜಿಸಲ್ಪಡುತ್ತದೆ.ತುಂಬಾ ವಿರಳವಾಗಿ NTropZ ನಲ್ಲಿ ಕೆಲವೊಮ್ಮೆ ಎರಡು "ಸಣ್ಣ ಕೆಂಪು ಚುಕ್ಕೆಗಳು" ಕಾಣಿಸುತ್ತವೆ. ಆದರೆ ದಕ್ಷಿಣದ "ಗ್ರೇಟ್ ರೆಡ್ ಸ್ಪಾಟ್"ನಂತಲ್ಲದೆ, ಇವು ಬಹುತೇಕ ಜೊತೆಯಾಗಿ ಕಂಡುಬಂದು, ಸುಮಾರು ಒಂದು ವರ್ಷದವರೆಗೆ ಬಾಳುವ ಅಲ್ಪಾಯುಗಳಾಗಿರುತ್ತವೆ.ಪಯೋನಿಯರ್ ಆಂತರಿಕ್ಷ ನೌಕೆಯು ಗುರುವಿನ ಬಳಿಯಿಂದ ಹಾದು ಹೋದಾಗ ಇಂತಹದೊಂದು ಕೆಂಪು ಚುಕ್ಕೆ ಈ ಪ್ರದೇಶದಲ್ಲಿದ್ದಿತ್ತು. ಉತ್ತರ ಎಕ್ವಟೋರಿಯಲ್ ಬೆಲ್ಟ್ ಅಥವಾ NEB ಯು ಗುರುಗ್ರಹದಲ್ಲೇ ಅತ್ಯಂತ ಕ್ರಿಯಾಶೀಲವಾಗಿರುವ ಅನೇಕ ಸ್ಥಿತ್ಯಂತರಗಳನ್ನು ತೋರುವ ವಲಯ. ಇದರಲ್ಲಿ ಅಂಡಾಕಾರದ, ಅಪ್ರದಕ್ಷಿಣಾಕಾರವಾಗಿ ಸುತ್ತುವ ಚಂಡಮಾರುತಗಳೂ ಮತ್ತು ಪ್ರದಕ್ಷಿಣಾಕಾರವಾಗಿ ತಿರುಗುವ ಕಂದುಬಣ್ಣದ ಚಂಡಮಾರುತಗಳೂ ಇವೆ. ಮೊದಲನೆಯ ಪ್ರಕಾರದವು ಎರಡನೆಯದವುಕ್ಕಿಂತ ಸ್ವಲ್ಪ ಉತ್ತರದಲ್ಲಿ ಜನಿಸುತ್ತವೆ.NTropZ ನಂತಯೇ ಈ ಪ್ರಕ್ಷುಬ್ಧತೆಗಳು ಅಲ್ಪಾಯುಗಳಾಗಿರುತ್ತವೆ. ದಕ್ಷಿಣ ಎಕ್ವಟೋರಿಯಲ್ ಬೆಲ್ಟ್ ಅಥವಾ SEB ಯಂತಯೇ NEBಯು ಕೂಡಾ ಕೆಲವೊಮ್ಮೆ ನಾಟಕೀಯವಾಗಿ ಅಗೋಚರವಾಗಿ ಪುನಃ "ಉದ್ಭವ"ವಾದದ್ದಿದೆ. ಈ ಬದಲಾವಣೆಯ ಕಾಲಮಾನ ಸುಮಾರು ೨೫ ವರ್ಷಗಳು ಭೂಮಧ್ಯ ಪ್ರದೇಶ ಅಥವಾ EZ, ತನ್ನ ವಿಸ್ತಾರದಲ್ಲಾಗಲೀ, ರೇಖಾಂಶದಲ್ಲಾಗಲೀ ಅಸ್ಥಿರತೆಯನ್ನು ತೋರದೇ ಸ್ಥಿರವಾಗಿರುವ ಪ್ರದೇಶ. ತನ್ನ ಉತ್ತರ ತುದಿಯಲ್ಲಿ ಅತ್ಯಾಕರ್ಷಕ ವಾಯುಪ್ರವಾಹದ ಸುಳಿಗಳನ್ನು ಹೊಂದಿದೆ. ಈ ಸುಳಿಗಳು NEBಯಿಂದ ಆಗ್ನೇಯದಿಕ್ಕಿಗೆ ಚಲಿಸುವಂತೆ ತೋರುತ್ತವಲ್ಲದೇ, ಗಾಢವರ್ಣದ, ಬೆಚ್ಚಗಿರುವ(ಇನ್-ಫ್ರಾ ರೆಡ್ ನಲ್ಲಿ) ಫೆಸ್ಟೂನ್ ಗಳೆಂದು ಕರೆಯಲ್ಪಡುವ ರಚನೆಗಳಿಂದ ಸುತ್ತುವರಿಯಲ್ಪಟ್ಟಿರುತ್ತವೆ. EZ, ವರ್ಣ ಸಂಯೋಜನೆಯಲ್ಲಿ ಸಾಕಷ್ಟು ವ್ಯತ್ಯಾಸವನ್ನು ತೋರುತ್ತದೆ. ಮಂದ ತಿಳಿವರ್ಣದಿಂದ ಕಿತ್ತಳೆವರ್ಣ ಮತ್ತು ತಾಮ್ರವರ್ಣದವರೆಗೆ ಈ ಪ್ರದೇಶದ ಬಣ್ಣ ಬದಲಾಗುತ್ತದೆ.ಕೆಲವೊಮ್ಮೆ ಇದು ಎಕ್ವಟೊರಿಯಲ್ ಬ್ಯಾಂಡ್ ನಿಂದ ವಿಭಜಿತವಾಗಿರುತ್ತದೆ. ಇದರಲ್ಲಿರುವ ಬಿರುಗಾಳಿಗಳು ೩೯೦ ಕಿ.ಮೀ ಪ್ರತಿ ಗಂಟೆಯಷ್ಟು ವೇಗವಾಗಿ ಚಲಿಸುತ್ತವೆ.
ದಕ್ಷಿಣ ಟ್ರಾಪಿಕಲ್ ಪ್ರದೇಶವು ದಕ್ಷಿಣ ಟ್ರಾಪಿಕಲ್ ಝೋನ್ ಮತ್ತು SEB ಯನ್ನು ಒಳಗೊಂಡಿದೆ,ಇದು ಗುರುಗ್ರಹದಲ್ಲೇ ಅತ್ಯಂತ ಕ್ರಿಯಾಶೀಲವಾಗಿರುವ ಪ್ರದೇಶ.ಇದರಲ್ಲಿ ಅತ್ಯಂತ ಪ್ರಬಲವಾದ ಪಶ್ಛಿಮವಾಹಿನಿಯಾಗಿ ಬೀಸುವ ಜೆಟ್ ಬಿರುಗಾಳಿಯಿದೆ.SEB ಯು ಗ್ರಹದಲ್ಲೇ ಅತ್ಯಂತ ಗಾಢವರ್ಣದ,ಅತ್ಯಂತ ವಿಸ್ತಾರವುಳ್ಳ ಬೆಲ್ಟ್.ಇದರ ಇನ್ನೊಂದು ವಿಶೇಷತೆಯೇನೆಂದರೆ "ಗ್ರೇಟ್ ರೆಡ್ ಸ್ಪಾಟ್"ಅನ್ನು ಹಿಂಬಾಲಿಸುವ ಚಂಡಮಾರುತಗಳಂತಹ ವಾಯು ಪ್ರಕ್ಷುಬ್ಧತೆಗಳ ಸರಣಿ ಇದರಲ್ಲಿರುವುದು.NTropZ ನಂತಯೇ STropZ ಕೂಡಾ ಗ್ರಹದ ಮುಖ್ಯ ಝೋನ್ ಗಳಲ್ಲೊಂದು. ಇದರಲ್ಲಿಯೇ ಸೌರವ್ಯೂಹದ ಅತ್ಯಂತ ದೈತ್ಯ ಗಾತ್ರದ ಚಂಡಮಾರುತ "ಗ್ರೇಟ್ ರೆಡ್ ಸ್ಪಾಟ್" ಇರುವುದು. ಈ ಝೋನ್ ಕೆಲವೊಮ್ಮೆ ದಕ್ಷಿಣ ಟ್ರಾಪಿಕಲ್ ವಾಯು ಪ್ರಕ್ಷುಬ್ಧತೆಯಿಂದ ವಿಭಜಿತವಾಗಿ ತೋರುತ್ತದೆ. ಈ ವಿಭಜನೆ ಬಹಳ ಕಾಲ ಇರುತ್ತದೆ. ಗತಕಾಲದಲ್ಲಿ ವೀಕ್ಷಣೆಗೆ ಸಿಕ್ಕ ವಿಭಜನೆ ೧೯೦೧ ರಿಂದ ೧೯೩೯ರ ವರೆಗೆ ಇತ್ತು. ದಕ್ಷಿಣ ಟೆಂಪರೇಟ್ ಪ್ರದೇಶದಲ್ಲಿ, ದಕ್ಷಿಣ ಟೆಂಪರೇಟ್ ಬೆಲ್ಟ್ ಅಥವಾ STB ಮತ್ತೊಂದು ಗಾಢವರ್ಣದ, NTB ಗಿಂತಲೂ ಪ್ರಮುಖ ಬೆಲ್ಟ್. ಇದರಲ್ಲಿ ಮಾರ್ಚ್ ೨೦೦೦ದವರೆಗೂ ಬೇರೆ ಬೇರೆಯಾಗಿದ್ದ ಅಂಡಾಕಾರದ BC, DE, ಮತ್ತು FA ಎಂದು ಗುರುತಿಸಲ್ಪಟ್ಟ ಮೂರು ಚಂಡಮಾರುತಗಳಿದ್ದವು. ನಂತರ ಇವು ಒಂದನ್ನೊಂದು ಕೂಡಿಕೊಂಡು ದೈತ್ಯಾಕಾರದ "ಓವಲ್ BA" ಎಂಬ ಚಂಡಮಾರುತವಾಗಿ ಮಾರ್ಪಾಡಾದವು. GRSಗಿಂತ ಸ್ವಲ್ಪ ಚಿಕ್ಕದಾಗಿರುವ "ಓವಲ್ BA"ಯನ್ನು "ರೆಡ್ ಜೂನಿಯರ್" ಎಂದೂ ಕರೆಯುತ್ತಾರೆ."ಓವಲ್ BA"ಯ ಜನನಕ್ಕೆ ಕಾರಣವಾದ ಮೂರು ಚಂಡಮಾರುತಗಳು ಮೂಲತಃ ದಕ್ಷಿಣ ಟೆಂಪರೇಟ್ ಝೋನ್ (STZ) ವಾಸಿಗಳಾಗಿದ್ದವು ಆದರೆ ನಿಧಾನವಾಗಿ ಉತ್ತರಕ್ಕೆ ಚಲಿಸಿ STBಯೊಳಕ್ಕೆ ಬಂದು STB ಯ ಚಲನೆಗೆ ತಡೆಯೊಡ್ಡಿದಂತಾಯಿತು ನಂತರ "ಓವಲ್ BA"ಯ ಜನನವಾಯಿತು. STZನ ತೋರಿಕೆಯು ಅತಿ ಹೆಚ್ಚು ಸ್ಥಿತ್ಯಂತರಗಳಿಂದ ಕೂಡಿದೆ. ಗುರುವಿನ ವಾಯುಮಂಡಲದಲ್ಲಿ ಇನ್ನೂ ಅನೇಕ ವಿಶೇಷತೆಗಳಿವೆ ಆದರೆ ಅವನ್ನು ಭೂಮಿಯಿಂದ ವೀಕ್ಷಿಸುವುದು ಕಷ್ಟ. ಸೌತ್-ಸೌತ್ ಟೆಂಪರೇಟ್ ಪ್ರದೇಶವನ್ನು ಗುರುತಿಸುವುದು NNTR ಅನ್ನು ಗುರುತಿಸುವುದಕ್ಕಿಂತ ಹೆಚ್ಚು ಕಠಿಣ. ದಕ್ಷಿಣ ಧ್ರುವ ಪ್ರದೇಶದಿಂದ ಸುಲಭವಾಗಿ ಪ್ರತ್ಯೇಕಿಸಲು ಬಾರದ ಈ ಪ್ರದೇಶ ಸೂಕ್ಷ್ಮ ಮತ್ತು ಕ್ಷೀಣವಾಗಿ ಕಾಣಿಸುತ್ತದೆ. ಇದನ್ನು ಅಧ್ಯಯನ ಮಾಡಲು ದೊಡ್ಡ ದೂರದರ್ಶಕ ಅಥವಾ ಅಂತರಿಕ್ಷ ನೌಕೆಯೇ ಬೇಕು.
ಪರಿಚಲನೆ
[ಬದಲಾಯಿಸಿ]ಗುರುಗ್ರಹದ ವಾತಾರವಣದ ಪರಿಚಲನೆಯು ಭೂಮಿಯ ವಾತಾವರಣದ ಪರಿಚಲನೆಗಿಂತ ತುಂಬಾ ಭಿನ್ನವಾಗಿದೆ. ಗುರುಗ್ರಹದ ಕೇಂದ್ರವು ದ್ರವರೂಪವಾಗಿದ್ದು ಅಲ್ಲಿ ಯಾವುದೇ ರೀತಿಯ ಘನ ಪದಾರ್ಥವಿಲ್ಲ.ಆದ್ದರಿಂದ ವಾತಾವರಣದ ಸಂವಹನವು ಗ್ರಹದ ವಾಯುಮಂಡಲದಾದ್ಯಂತ ಉಂಟಾಗುತ್ತದೆ.ಇದುವರೆಗೂ ಗುರುಗ್ರಹದ ವಾತಾವರಣವನ್ನು ಸಂಪೂರ್ಣವಾಗಿ ಅರ್ಥೈಸುವ ವಾದವು ಮಂಡಿಸಲ್ಪಟ್ಟಿಲ್ಲ.ಆ ರೀತಿಯ ಯಾವುದೇ ವಾದವು ಈ ಕೆಳಗಿನ ವಿದ್ಯಮಾನಗಳನ್ನು ವಿವರಿಸಬೇಕಾಗುತ್ತದೆ. ೧. ಗುರುಗ್ರಹದ ಭೂಮದ್ಯ ರೇಖೆಗೆ ಸಮನಾಂತರವಾಗಿರುವ ಪಟ್ಟಿಗಳಂತಹ ರಚನೆಗಳು. ೨. ಗುರುಗ್ರಹದ ಭೂಮಧ್ಯ ರೇಖೆಯ ಪ್ರದೇಶದಲ್ಲಿರುವ ಶಕ್ತಿಯುತವಾದ ಪೂರ್ವ ವಾಹಿನಿಯಾದ ಜೆಟ್ ಬಿರುಗಾಳಿ. 3. ಝೋನ್ ಮತ್ತು ಬೆಲ್ಟ್ ಗಳ ನಡುವಿನ ವ್ಯತ್ಯಾಸಗಳು, 4.ಗ್ರೇಟ್-ರೆಡ್-ಸ್ಪಾಟ್ ನಂತಹ ದೈತ್ಯ ಚಂಡಮಾರುತಗಳ ಉಗಮ ಮತ್ತು ಸ್ಥಿರತೆ. ಗುರುಗ್ರಹದ ವಾತಾವರಣದ ಪರಿಚಲನೆಯನ್ನು ವಿವರಿಸುವ ವೈಙ್ಞಾನಿಕ ವಾದಗಳನ್ನು ಎರಡು ರೀತಿಯಾಗಿ ವಿಂಗಡಿಸಬಹುದು. ೧. ಶಾಲೋ ಮೋಡೆಲ್ ಮತ್ತು ೨. ಡೀಪ್ ಮೋಡೆಲ್ ಮೊದಲ ಗುಂಪಿನ ವಾದಗಳು ವಾತಾವರಣದ ಪರಿಚಲನೆಯು ಗುರುವಿನ ಸ್ಥಿರವಾದ ಗರ್ಭದ ಮೇಲೆ ವಾಯುಮಂಡಲದಲ್ಲಿ ಉಂಟಾಗುವ ವಿದ್ಯಮಾನ.ಎರಡನೆ ವಾದದ ಪ್ರಕಾರ ವಾತಾವರಣದ ಪರಿಚಲನೆಯು ಗುರುವಿನ ಅಂತರ್ಯದಲ್ಲೊಳಗಾಗುತ್ತಿರುವ ಸಂವಹನದ ವ್ಯಕ್ತಸ್ವರೂಪ. ಈ ಎರಡೂ ವಾದಗಳು ಗುರುಗ್ರಹದ ವಾತಾವರಣದ ಕೆಲವೊಂದು ವಿದ್ಯಮಾನಗಳನ್ನು ವಿವರಿಸುವಲ್ಲಿ ಸಫಲತೆಯನ್ನೂ ಮತ್ತೆ ಕೆಲವು ವಿದ್ಯಮಾನಗಳನ್ನು ವಿವರಿಸುವಲ್ಲಿ ಅಸಫಲತೆಯನ್ನೂ ಹೊಂದಿವೆ. ವಾತಾವರಣದ ಪರಿಚಲನೆಯನ್ನು ವಿವರಿಸುವ ನಿಜವಾದ ಕಾರಣವು ಈ ಎರಡೂ ವಾದಗಳ ಅಂಶಗಳನ್ನೊಳಗೊಂಡಿರಬೇಕು.