ಫ.ಗು.ಹಳಕಟ್ಟಿ
ಫಕೀರಪ್ಪ ಗುರುಬಸಪ್ಪ ಹಳಕಟ್ಟಿ | |
---|---|
ಜನನ | 2ನೇ ಜೂಲೈ 1880 ಧಾರವಾಡ |
ಮರಣ | 29ನೇ ಜೂನ್ 1964 |
ವೃತ್ತಿ | ಸಂಶೋಧಕರು, ಸಾಹಿತಿ, ವಕೀಲರು |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಕಾನೂನು ಪದವಿ |
ವಿಷಯ | ಕನ್ನಡ ಸಾಹಿತ್ಯ, ವಚನ ಸಾಹಿತ್ಯ |
ಪ್ರಮುಖ ಪ್ರಶಸ್ತಿ(ಗಳು) | ವಚನ ಪಿತಾಮಹ |
ತಂದೆ | ಗುರುಬಸಪ್ಪ |
ವಚನ ಪಿತಾಮಹ ಎಂದು ಪ್ರಖ್ಯಾತರಾದವರು ಫ. ಗು. ಹಳಕಟ್ಟಿಯವರು ಸಂಶೋಧಕರು, ಸಾಹಿತ್ಯ ಪ್ರಚಾರಕ ಮತ್ತು ಸಂಪಾದಕರು.
ಜೀವನ
[ಬದಲಾಯಿಸಿ]ಫ.ಗು.ಹಳಕಟ್ಟಿಯವರು 2ನೇ ಜೂಲೈ 1880ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಗುರುಬಸಪ್ಪ ಹಳಕಟ್ಟಿ ತಾಯಿ ದಾನಾದೇವಿ. ಹಳಕಟ್ಟಿ ಎಂಬುದು ಇವರ ಮನೆತನದ ಹೆಸರು. ತಂದೆ ಗುರುಬಸಪ್ಪ ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತಿಗಳಾಗಿದ್ದರು. ಇಂಗ್ಲೆಂಡಿನ ಇತಿಹಾಸ, ಏಕನಾಥ ಸಾಧುಗಳ ಚರಿತೆ, ಫ್ರಾನ್ಸ್ ದೇಶದ ರಾಜ್ಯಕ್ರಾಂತಿ, ಸಿಕಂದರ ಬಾದಶಹನ ಚರಿತ್ರೆ ಮುಂತಾದ ಕೃತಿಗಳನ್ನು ರಚಿಸಿ ಆ ಕಾಲಕ್ಕೆ ಸಾಹಿತಿಗಳಾಗಿ ಸಾಕಷ್ಟು ಹೆಸರುಗಳಿಸಿದ್ದರು. ಜೊತೆಗೆ ಆಗಿನ ಪ್ರಮುಖ ಪತ್ರಿಕೆಯಾದ "ವಾಗ್ಭೂಷಣ"ದಲ್ಲಿ ಹಲವಾರು ಲೇಖನಗಳನ್ನು ಬರೆದು ನಾಡಿನ ಗಮನ ಸೆಳೆದಿದ್ದರು. ಹೀಗಾಗಿ ಹಳಕಟ್ಟಿಯವರಿಗೆ ಸಾಹಿತ್ಯವೆಂಬುದು ರಕ್ತಗತವಾಗಿ ಒಲಿದು ಬಂದಿತ್ತು.[೧]
ಹಳಕಟ್ಟಿಯವರು ತಮ್ಮ ಹುಟ್ಟೂರು ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸಿ ೧೮೯೬ರಲ್ಲಿ ಮೆಟ್ರಿಕ್ ಮುಗಿಸಿದರು. ನಂತರ ಮುಂದಿನ ಉನ್ನತ ಶಿಕ್ಷಣಕ್ಕಾಗಿ ಮುಂಬಯಿಗೆ ತೆರಳಿ ಅಲ್ಲಿನ ಸೇಂಟ್ ಝೇವಿಯರ್ ಕಾಲೇಜು ಸೇರಿದರು. ಅಲ್ಲಿ ಕನ್ನಡ ಪುರೋಹಿತ ಆಲೂರು ವೆಂಕಟರಾಯರು ಇವರ ಸಹಪಾಠಿಗಳಾಗಿದ್ದರು. ಆ ಸಂದರ್ಭದಲ್ಲಿ ಮುಂಬಯಿಯ ವಿದ್ಯಾರ್ಥಿಗಳು ಮತ್ತು ಅಲ್ಲಿನ ಜನರಲ್ಲಿದ್ದ ಗುಜರಾತಿ ಮತ್ತು ಮರಾಠಿ ಭಾಷಾಭಿಮಾನ, ಕನ್ನಡದವರಲ್ಲಿ ತಮ್ಮ ಭಾಷೆಯ ಬಗ್ಗೆ ಇದ್ದ ನಿರಭಿಮಾನ ಇವರ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತು. ಕನ್ನಡಿಗರು ಎಚ್ಚರಗೊಳ್ಳದಿದ್ದರೆ ಕನ್ನಡ ಉದ್ಧಾರವಾಗದೆಂದು ಆ ಕ್ಷಣವೇ ಕನ್ನಡ ನಾಡು, ನುಡಿ, ನೆಲ, ಜಲ, ಸಾಹಿತ್ಯ, ಸಂಸ್ಕೃತಿಗಾಗಿ ದುಡಿಯಲು ವಿದ್ಯಾರ್ಥಿ ದಿಸೆಯಲ್ಲೇ ದೃಢಸಂಕಲ್ಪ ಮಾಡಿದರು. ಕರ್ನಾಟಕ ಏಕೀಕರಣಕ್ಕಾಗಿ ಆಗಲೇ ಹೋರಾಟದಲ್ಲಿ ನಿರತರಾಗಿದ್ದ ಆಲೂರು ಇವರಿಗಾಗ ಸ್ಫೂರ್ತಿಯಾಗಿದ್ದರು.
೧೯೦೧ರಲ್ಲಿ ಬಿ.ಎ. ಪದವಿ ಪಡೆದ ಹಳಕಟ್ಟಿಯವರು ೧೯೦೪ರಲ್ಲಿ ಕಾನೂನು ಪದವೀಧರರಾಗಿ ಬೆಳಗಾವಿಯಲ್ಲಿ ವಕೀಲಿವೃತ್ತಿ ಪ್ರಾರಂಭಿಸಿದರಾದರೂ ಕೆಲವು ತಿಂಗಳುಗಳಲ್ಲೇ ಕಾರಣಾಂತರಗಳಿಂದ ಬೆಳಗಾವಿಯಿಂದ ವಿಜಯಪುರಕ್ಕೆ ವಾಸ್ತವ್ಯ ಬದಲಾಯಿಸಿದ್ದರು. ಅಲ್ಲಿಂದೀಚೆಗೆ ವಿಜಯಪುರವನ್ನೇ ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡರು.ಅದೇ ವರ್ಷ ಅವರ ದಕ್ಷ ವಕೀಲಿ ವೃತ್ತಿ ನೆನೆದ ಸರಕಾರ ಅವರನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಸರಕಾರಿ ಪ್ಲೇಡರರೆಂದು ನೇಮಿಸಿತು. ಅವರು ಅಧ್ಯಯನದಲ್ಲಿ ಎಂ.ಎ. ಮಾಡಿದ್ದರೂ ಪರೀಕ್ಷೆಗೆ ಕುಳಿತುಕೊಳ್ಳಲು ಸಾಧ್ಯವಾಗಲಿಲ್ಲ. ಇದೇ ಹೊತ್ತಿಗೆ ಕರ್ನಾಟಕದ ಕೃಷಿಕ-ಉದ್ದಾರದ ವೀರಶೈವ ತತ್ವಾರಾಧಕ ದಾನಿಗಳೆನಿಸಿದ ಸಿರಸಂಗಿ ಲಿಂಗರಾಜರು ವೀರಶೈವ ಮಹಾಸಭಾದ ಅಧಿವೇಶನದ ಅಧ್ಯಕ್ಷರಾದರು. ಅವರ ವಿಚಾರ ಧಾರೆ ಕೇಳಿ, ಫಕ್ಕೀರಪ್ಪನವರ ಮನಸ್ಸು ಸಾಕಷ್ಟು ಗಟ್ಟಿಗೊಂಡಿತು.
ಸಿರಿಗೆರೆಯ ಅಂದಿನ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಾಹಾಸ್ವಾಮಿಗಳು ದಾವಣಗೆರೆಯಲ್ಲಿ ನಡೆದ ತರಳಬಾಳು ಹುಣ್ಣಿಮೆಗೆ ಇವರನ್ನು ಅತಿಥಿಯಾಗಿ ಆಹ್ವಾನಿಸಿದ್ದರು. ಅವರು ಹಳ್ಳಿ ಹಳ್ಳಿಗೆ ಸೈಕಲ್ ತುಳಿದು ಮನೆ ಮನೆ ತಿರುಗಿ ವಚನಗಳ ಓಲೆಗರಿ, ತಾಳೆಗರಿ, ಕೈ ಬರಹಗಳ ಪ್ರತಿ ಸಂಗ್ರಹಿಸಲು ಪಟ್ಟ ಶ್ರಮ, ಅದಕ್ಕಾಗಿ ಆರ್ಥಿಕ ವೆಚ್ಚ ಹೆಚ್ಚಾಗಿ ಕೆಸಿಸಿ ಬ್ಯಾಂಕ್ ಅಲ್ಲಿ ಸಾಲ ತೀರಿಸಲಾಗದೆ ಮನೆ ಜಪ್ತಿಗೆ ಬಂದ ವಿಷಯ ತಿಳಿದ ಪರಮ ಪೂಜ್ಯರು ಮಠದಲ್ಲಿದ್ದ ಬಂಗಾರದ ಪದಕ ತರಿಸಿ ಅಂದಿನ ಕಾರ್ಯಕ್ರಮ ಮುಗಿಯುವುದರೊಳಗೆ ಫ ಗು ಹಳಕಟ್ಟಿಯವರನ್ನು ಸನ್ಮಾನಿಸಿ, ಮಠ ಕೊಟ್ಟದ್ದು ಎಂದು ಬಂಗಾರದ ಪದಕವನ್ನು ಹಾಗೆ ಇಟ್ಟುಕೊಳ್ಳಬೇಡಿ, ಇದನ್ನು ಮಾರಿ ನಿಮ್ಮ ಸಾಲ ತೀರಿಸಿ ಋಣಮುಕ್ತರಾಗಿ. ಶರಣ ಸಾಹಿತ್ಯ ಸೇವಕರು, ಸಾಧಕರು ಸಾಲಗಾರನಾಗಿ ಸಾಯಬಾರದು, ಎಂದು ಆಶೀರ್ವದಿಸಿದ್ದರು. ಒಂದು ರಾಷ್ಟ್ರದ ಅಥವಾ ಜನಾಂಗದ ಸತ್ವವನ್ನು ಅಳೆಯಬೇಕಾದರೆ ಅಲ್ಲಿಯ ಜನತೆಯ ದೇಹಬಲದಿಂದಲ್ಲ. ಆತ್ಮಬಲದಿಂದ ಎಂಬುದನ್ನು ನಾವು ಮರೆಯಬಾರದು,
ಈ ದೃಷ್ಟಿಯಿಂದ ಈ ಸಲದ ಸಮಾರಂಭಕ್ಕೆ ಹೆಚ್ಚಿನ ಕಳೆಯನಿತ್ತಿರುವ ಉಧ್ದಾಮ ವ್ಯಕ್ತಿಗಳ ಬಗ್ಗೆ ನಮ್ಮ ಹಾರ್ದಿಕ ವಿಶ್ವಾಸವನ್ನು ವ್ಯಕ್ತಗೊಳಿಸದಿದ್ದರೆ ನಾವು ಕರ್ತವ್ಯಚುತರಾಗುತ್ತೇವ. ಇದರಲ್ಲಿ ಮೊದಲಿಗರು ವಚನಶಾಸ್ತ್ರ ಪಿತಾಮಹರೆಂದು ಪ್ರಸಿಧ್ದಿ ಪಡೆದಿರುವ ಪರಮ ಪುರುಷ ಶ್ರೀ ಫ ಗು ಹಳಕಟ್ಟಿಯವರು. ಇವರೂ ವೀರಶೈವ ಪ್ರಪಂಚಕ್ಕೂ ಅಷ್ಟೇ ಸುಪರಿಚಿತರು. ಶರಣರ ವಿಶ್ವಮಾನ್ಯವಾದ ಸಾಹಿತ್ಯವು ಶ್ರೀಮಾನ್ ಫ ಗು ಹಳಕಟ್ಟಿಯವರು ಇಲ್ಲದಿದ್ದರೆ ಇಂದು ಅದೊಂದು ಅಜ್ಜಿಯ ಕತೆಯಂತೆ ಅನಾಗರೀಕತೆಯ ಕಟ್ಟುಕತೆಯಾಗಿ ಪರಿಣಮಿಸುತ್ತಿತ್ತೆಂದರೆ ಅತಿಶಯೋಕ್ತಿಯಲ್ಲ
ಇಂದು ನಮ್ಮ ಸಮಾಜದಲ್ಲಿ ವಿಶೇಷ ಸೇವೆಯನ್ನು ಸಲ್ಲಿಸಿರುವ ಅನೇಕ ಜಗದ್ಗುರುಗಳು, ಧರ್ಮಾಧಿಕಾರಿಗಳು, ಉದಾರ ದಾನಿಗಳೂ, ಧರ್ಮಾಭಿಮಾನಿಗಳು, ಉಧ್ದಾಮ ಸಾಹಿತಿಗಳೂ ಇದ್ದಾರೆ. ಆದರೆ ಅವರೆಲ್ಲರಿಗಿಂತ ಇವರಿಗೆ ನಮ್ಮ ಹೃದಯದಲ್ಲಿ ಹೆಚ್ಚಿನ ಸ್ಥಾನವಿದೆಯೆಂದು ಹೇಳಲು ನಾವು ಹೆಮ್ಮೆಪಡುತ್ತೇವೆ. ಈ ಇಪ್ಪತ್ತನೆಯ ಶತಮಾನದಲ್ಲಿ ವೀರಶೈವರಲ್ಲಿ ಹೆಮ್ಮೆಪಡುವಂತಹ ಸ್ಮಾರಕಾರ್ಹವಾದ ಸೇವೆಯೊಂದಿದೆಯಾದರೆ ಅದು ಶ್ರೀಮಾನ್ ಹಳಕಟ್ಟಿಯವರ ಶರಣ ಸಾಹಿತ್ಯ ಸೇವೆ,
ಪತಿತಾತ್ಮವನ್ನು ಹಿಡಿದು ಮೇಲೆತ್ತಲು ವಿಶ್ವದಲ್ಲಿ ಸರ್ವಸಮರ್ಥವಾದ, ಸರ್ವಸಮಂಜಸವಾದ, ಸರ್ವಪ್ರಿಯವಾದ ಸಾಹಿತ್ಯವೊಂದಿದೆಯೆಂದರೆ ಅದೇ ಶರಣರ ಸಾಹಿತ್ಯವೆಂದು ನಮ್ಮ ಖಚಿತವಾದ ಅಭಿಪ್ರಾಯ.
ಜನಪ್ರಿಯತೆ
[ಬದಲಾಯಿಸಿ]ಒಂದೆಡೆ ವಕೀಲಿ ವೃತ್ತಿ, ಅಪಾರ ಕಾನೂನು ಜ್ಞಾನದಿಂದಾಗಿ ಆ ಭಾಗದ ಪ್ರಸಿದ್ಧ ವಕೀಲರಾಗಿ ರೂಪುಗೊಂಡ ಇವರು ತಮ್ಮ ಜನಪ್ರಿಯತೆಯಿಂದಲೇ ೧೯೦೫ರಲ್ಲಿ ಬಿಜಾಪುರ ನಗರಸಭೆಯ ಶಾಲಾ ಕಾರ್ಯನಿರ್ವಾಹಕ ಮಂಡಳಿಯ ಸಭಾಧ್ಯಕ್ಷರಾಗಿ ಮತ್ತು ಜಿಲ್ಲಾ ಗ್ರಾಮಾಂತರ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿಯೂ ಆಯ್ಕೆಗೊಂಡರು. ನಂತರದ ದಿನಗಳಲ್ಲಿ ಮುಂಬಯಿ ವಿಧಾನಪರಿಷತ್ತಿನ ಸದಸ್ಯರಾಗಿ ತಮ್ಮ ಶಾಸನಬದ್ಧ ಅಧಿಕಾರದಿಂದ ಕನ್ನಡವನ್ನು ಗಟ್ಟಿಗೊಳಿಸಲು, ಪುಷ್ಠಿಗೊಳಿಸಲು, ಒಟ್ಟಾರೆ ಸಮೃದ್ಧವಾಗಿ ಕನ್ನಡ ಕಟ್ಟಲು ಪ್ರಾಮಾಣಿಕವಾಗಿ ದುಡಿದು ಅಜರಾಮರ ಕೆಲಸ ಮಾಡಿದ್ದಾರೆ.[೨]
ಸಾಹಿತ್ಯ
[ಬದಲಾಯಿಸಿ]1920ರ ಹೊತ್ತಿಗಾಗಲೇ ಒಂದು ಸಾವಿರ ಕಟ್ಟು ಸಂಗ್ರಹವಾಯಿತು. ಫಕ್ಕೀರಪ್ಪನವರು ಹಗಲಿರುಳು ಶ್ರಮವಹಿಸಿ ಮಾಡಿದ ಸಂಶೋಧನೆ ಮೂಲಕ ವಚನಶಾಸ್ತ್ರ ಪ್ರಸಾರ ಭಾಗ -1 ಗ್ರಂಥ ತಯಾರಾಯಿತು. ಇದನ್ನು ಹೇಗಾದರೂ ಮಾಡಿ ಹೊರಹಾಕಬೇಕೆಂಬ ಸಂಕಲ್ಪದೊಂದಿಗೆ ಮಂಗಳೂರಿನ ಬಾಶೆಲ್ಮಿಶನ್ ಪ್ರೆಸ್ಸಿಗೆ 500 ರೂ.ಗಳೊಂದಿಗೆ ಹಸ್ತಪ್ರತಿ ಕೊಟ್ಟು ಕಳಿಸಿದರು[೩].೧೯೨೫ರಲ್ಲಿ ತಮ್ಮ ಸ್ವಂತಮನೆ ಮಾರಿ "ಹಿತಚಿಂತಕ ಮುದ್ರಣಾಲಯ"ವನ್ನು ಪ್ರಾರಂಭಿಸಿದರು. ಹಳಕಟ್ಟಿಯವರು ತಾಳೆಯೋಲೆಗಳನ್ನು ಸಂಗ್ರಹಿಸುವುದಕ್ಕೆ ಮೊದಲು ಕವಿ ಚರಿತೆಕಾರರು ಗುರುತಿಸಿದ್ದು ಕೇವಲ ೫೦ ವಚನಕಾರರನ್ನು ಮಾತ್ರ. ಫ. ಗು. ಹಳಕಟ್ಟಿಯವರು ತಮ್ಮ ಸಂಶೋಧನೆಯ ಮೂಲಕ ೨೫೦ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದರು. ಜೊತೆಗೆ ಹರಿಹರನ ೪೨ ರಗಳೆಗಳನ್ನು ಸಂಶೋಧಿಸಿ ಪ್ರಕಟಿಸಿದ ಸಾಧನೆ ಹಳಕಟ್ಟಿಯವರಿಗೆ ಸಲ್ಲುತ್ತದೆ. 1923ರಲ್ಲಿ ವಚನಶಾಸ್ತ್ರ ಸರ ಭಾಗ 1 ಪ್ರಕಟವಾಯಿತು. 1925ರಲ್ಲಿ ಇರುವ ಮನೆ ಮಾರಿ ಹಿತಚಿಂತಕ ಮುದ್ರಣಾಲಯ ಸ್ಥಾಪಿಸಿದರು. ಹಗಲಿರುಳು ಮುದ್ರಿಸಿದ ಪ್ರತಿ ಅಧ್ಯಯನ ಮಾಡಿ ತಿದ್ದಿ ತೀಡಿ ಮುದ್ರಣಕ್ಕೆ ಅಣಿಗೊಳಿಸುವ ಕಾರ್ಯ ಕೈಗೊಂಡರು. ಕರ್ನಾಟಕದ ಇತಿಹಾಸದಲ್ಲಿಯೇ ಸಂಶೋಧನೆ ಪ್ರಕಟಿಸಲು ಒಂದು ಮುದ್ರಣಾಲಯ ಹಾಕಿದ ಉದಾಹರಣೆ ಇಲ್ಲ. ಅಂತಹ ಮುಂದಾಲೋಚನೆ, ತೀಕ್ಷ್ಣ ಬುದ್ಧಿ, ಚಿಂತನೆ ಹಳಕಟ್ಟಿಯವರದಾಗಿತ್ತು. ಪತ್ರಿಕಾ ಮಾಧ್ಯಮದಿಂದ ಏಕ ಕಾಲಕ್ಕೆ 2ಪತ್ರಿಕೆ ಸಂಪಾದಿಸಿ, ಪ್ರಕಟಿಸಿ ಜನಸಮೂಹದ ಜವಾಬ್ದಾರಿ ತಿಳಿಸುವ ಕಾರ್ಯಕ್ಕೆ ಕೈ ಹಾಕಿದರು.1926ರಲ್ಲಿ ಆರಂಭಿಸಿದ ಶಿವಾನುಭವ ಮಾಸಿಕ ಪತ್ರಿಕೆ 35 ವರ್ಷ ನಿರಂತರ ನಡೆಸಿದ ಕನ್ನಡ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 1927ರಲ್ಲಿ ನವ ಕರ್ನಾಟಕ ಎಂಬ ವಾರ ಪತ್ರಿಕೆ ಆರಂಭಿಸಿದರು. ಹಳಕಟ್ಟಿಯವರು ಸಂಪಾದಿಸಿ ಪ್ರಕಟಿಸಿದ "ವಚನ ಸಾಹಿತ್ಯ ಸಾರ"ವಂತೂ ಅಪೂರ್ವ ವಚನಗಳುಳ್ಳ ಒಂದು ಅದ್ಭುತ ಕೃತಿ. ಶೂನ್ಯ ಸಂಪಾದನೆ, ಶಿವಾನುಭವ, ಕೃಷಿವಿಜ್ಞಾನ, ಪ್ರಭುದೇವರ ವಚನಗಳು, ಹರಿಹರನ ರಗಳೆ, ಪ್ರದೀಪಿಕೆ, ಶಬ್ದಕೋಶ, ಆದಿಶೆಟ್ಟಿ ಪುರಾಣ ಮುಂತಾದವುಗಳು ಇವರ ಪ್ರಮುಖ ಕೃತಿಗಳು.[೪]
ಪತ್ರಿಕೋದ್ಯಮ
[ಬದಲಾಯಿಸಿ]ಪತ್ರಿಕೋದ್ಯಮದಲ್ಲೂ ಬಹಳ ಆಸಕ್ತಿ ಹೊಂದಿದ್ದ ಹಳಕಟ್ಟಿಯವರು ೧೯೨೬ರಲ್ಲಿ ಸಂಶೋಧನೆಗಾಗಿ ಮೀಸಲಾದ ಶಿವಾನುಭವ ಪತ್ರಿಕೆ ಪ್ರಾರಂಭಿಸಿದರು. ಇದನ್ನು ಸತತವಾಗಿ ನಡೆಸಿಕೊಂಡು ಬಂದ ಇವರು ೧೯೫೧ರಲ್ಲಿ ಇದರ ಬೆಳ್ಳಿಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಹಾಗೆಯೇ ೧೯೨೭ರಲ್ಲಿ ‘ನವ ಕರ್ನಾಟಕ’ ಎಂಬ ವಾರಪತ್ರಿಕೆಯನ್ನೂ ಸಹ ಆರಂಭಿಸಿದ್ದರು. ಈ ಎರಡೂ ಪತ್ರಿಕೆಗಳ ಸಂಪಾದಕ ಮತ್ತು ಪ್ರಕಾಶಕ ಹಾಗೂ ಮುದ್ರಕರಾಗಿ ಹಳಕಟ್ಟಿಯವರ ಪತ್ರಿಕಾರಂಗದ ಸಾಧನೆ ಕೂಡ ಗುರುತರವಾದದ್ದೇ.
ಸಂಸ್ಥೆಗಳ ಸ್ಥಾಪನೆ
[ಬದಲಾಯಿಸಿ]ದೂರದೃಷ್ಟಿ ವ್ಯಕ್ತಿತ್ವದ ಹಳಕಟ್ಟಿಯವರು ಸಾಹಿತ್ಯ ಮತ್ತು ಪತ್ರಿಕೋದ್ಯಮದ ಜೊತೆ ಜೊತೆಗೆ ಸಂಘಟನೆ, ಬ್ಯಾಂಕಿಂಗ್, ಕೃಷಿ, ನೇಕಾರಿಕೆ, ಸಹಕಾರಿ ಹೀಗೆ ಎಲ್ಲದರಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರು ೧೯೧೦ರಲ್ಲಿ ವಿಜಯಪುರ ಜಿಲ್ಲಾ ಲಿಂಗಾಯುತ ವಿದ್ಯಾವರ್ಧಕ ಸಂಘ (ಬಿ.ಎಲ್.ಡಿ.ಇ)ವನ್ನು ಮತ್ತು ೧೯೧೨ರಲ್ಲಿ ಶ್ರೀ ಸಿದ್ಧೇಶ್ವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕನ್ನು ಸ್ಥಾಪಿಸಿದ್ದರಲ್ಲದೆ ಗ್ರಾಮೀಣಾಭಿವೃದ್ಧಿ ಸಂಘ, ಒಕ್ಕಲುತನ ಸಹಕಾರಿ ಸಂಘ, ನೇಕಾರರ ಸಂಘ, ಹತ್ತಿ ಮಾರಾಟ ಸಂಘಗಳು ಸೇರಿದಂತೆ ಸಹಕಾರಿ ಸಂಘಗಳನ್ನು ಸಂಸ್ಥಾಪಿಸಿ ತನ್ಮೂಲಕ ಒಟ್ಟಾರೆ ಸಮಾಜಾಭಿವೃದ್ಧಿಗೆ ದುಡಿದ ಅಪರೂಪದ ವ್ಯಕ್ತಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆಯಲ್ಲಿಯೂ ಇವರು ಮಹತ್ತರ ಪಾತ್ರ ವಹಿಸಿದ್ದರು.[೫]
ಇವರು ಸಂಸ್ಥಾಪಿಸಿದ ಬಿ.ಎಲ್.ಡಿ.ಇ. ಸಂಸ್ಥೆ ಹಲವು ವರ್ಷಗಳ ಹಿಂದೆ ಮೂವತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಹಳಕಟ್ಟಿಯವರ ಸಮಗ್ರ ಸಾಹಿತ್ಯವನ್ನು ಹದಿನೈದು ಸಂಪುಟಗಳಲ್ಲಿ ಪ್ರಕಟಿಸಿದೆ.
ಗೌರವಗಳು
[ಬದಲಾಯಿಸಿ]- ೧೯೨೦ರಲ್ಲಿ ಮುಂಬಯಿಯ ವಿಧಾನ ಪರಿಷತ್ತಿನ ಸದಸ್ಯತ್ವ.
- ೧೯೨೮ರಲ್ಲಿ ಜರುಗಿದ ೩ನೇ ಕರ್ನಾಟಕ ಏಕೀಕರಣ ಪರಿಷತ್ತಿನ ಅಧ್ಯಕ್ಷತೆ.
- ೧೯೩೧ರಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯತ್ವ.
- ೧೯೩೩ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷತೆ.
- ೧೯೫೬ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಮುಂತಾದವು ಇವರ ಸೇವೆಗೆ ಸಂದ ಗೌರವ ಪುರಸ್ಕಾರಗಳು.
- 1926ರಲ್ಲಿ ಬಳ್ಳಾರಿಯಲ್ಲಿ ನಡೆದ 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದರು.
- ಭಾರತ ಸರಕಾರ ರಾವ್ ಬಹಾದ್ದೂರ ಪದವಿ ನೀಡಿ ಗೌರವಿಸಿತು.
ನಿಧನ
[ಬದಲಾಯಿಸಿ]ಇಂಥ ಪ್ರಚಂಡ ಸಾಧಕ ಹಳಕಟ್ಟಿಯವರು 29.6.1964ರಂದು ನಾಡನ್ನು ಬಿಟ್ಟು ಅಗಲಿದರೂ ಇವರು ಮಾಡಿದ ಸೇವೆ, ಸಾಧನೆ, ತ್ಯಾಗ, ಕಟ್ಟಿ ಬೆಳೆಸಿದ ಸಂಸ್ಥೆಗಳು ಎಲ್ಲಕ್ಕಿಂತ ಮಿಗಿಲಾಗಿ ವಚನ ಸಾಹಿತ್ಯ ಕ್ಷೇತ್ರ ಇವರ ಹೆಸರನ್ನು ಅಜರಾಮರಗೊಳಿಸಿವೆ.
ವಚನ ಪಿತಾಮಹ
[ಬದಲಾಯಿಸಿ]ಹಳಕಟ್ಟಿಯವರು ಬಸವಣ್ಣನವರ ವಚನಗಳನ್ನು ಇಂಗ್ಲಿಷ್ಗೆ ಅನುವಾದಿಸಿ ಇಂಡಿಯನ್ ಆಂಟಿಕ್ವರಿಯಲ್ಲಿ ಪ್ರಕಟಗೊಳಿಸಿದರು. ಅಷ್ಟೇ ಅಲ್ಲ ವಚನಗಳ ಗಾಯನಕ್ಕೂ ವ್ಯವಸ್ಥೆ ಮಾಡಿಸಿದರಲ್ಲದೆ ಶ್ರೇಷ್ಠ ಸಂಗೀತಕಾರರನ್ನು ವಚನ ಗಾಯನ ರೆಕಾರ್ಡಿಂಗ್ ಗಾಗಿ ಮುಂಬಯಿಯವರೆಗೆ ಕಳುಹಿಸಿದರು. ಹೀಗೆ ವಚನ ಸಾಹಿತ್ಯದ ಪ್ರಸಾರ ಕಾರ್ಯವನ್ನು ಕೈಗೊಂಡ ಅವರನ್ನು ವಚನ ಪಿತಾಮಹ ಎಂದು ಕರೆದಿರುವುದು ಉಚಿತವಾಗಿದೆ.
ಸ್ಮಾರಕ ಭವನ
[ಬದಲಾಯಿಸಿ]ವಿಜಯಪುರದ ಬಿ.ಎಲ್.ಡಿ.ಇ. ಸಂಸ್ಥೆಯು ಡಾ.ಫ.ಗು.ಹಳಕಟ್ಟಿ ಸ್ಮಾರಕ ಭವನ ನಿರ್ಮಿಸಿದೆ.[೬]
ಉಲ್ಲೇಖಗಳು
[ಬದಲಾಯಿಸಿ]- ↑ http://kanaja.in/?tribe_events=%E0%B2%AB-%E0%B2%97%E0%B3%81-%E0%B2%B9%E0%B2%B3%E0%B2%95%E0%B2%9F%E0%B3%8D%E0%B2%9F%E0%B2%BF
- ↑ http://lingayatreligion.com/K/PhaGuHalkatti.htm
- ↑ https://m.dailyhunt.in/news/india/kannada/uk+suddi-epaper-uksuddi/vachana+pitaamaha+da+fa+gu+halakatti-newsid-91349686
- ↑ https://vijaykarnataka.indiatimes.com/district/dharwada/-/articleshow/14562973.cms
- ↑ http://kanaja.in/?tribe_events=%E0%B2%AB-%E0%B2%97%E0%B3%81-%E0%B2%B9%E0%B2%B3%E0%B2%95%E0%B2%9F%E0%B3%8D%E0%B2%9F%E0%B2%BF
- ↑ http://mmkalburgi.com/%E0%B2%AB-%E0%B2%97%E0%B3%81-%E0%B2%B9%E0%B2%B3%E0%B2%95%E0%B2%9F%E0%B3%8D%E0%B2%9F%E0%B2%BF-%E0%B2%86%E0%B2%A4%E0%B3%8D%E0%B2%AE%E0%B2%9A%E0%B2%B0%E0%B2%BF%E0%B2%A4%E0%B3%8D%E0%B2%B0%E0%B3%86/