ವಿಷಯಕ್ಕೆ ಹೋಗು

ಗಗನೇಂದ್ರನಾಥ ಠಾಕೂರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಗನೇಂದ್ರನಾಥ ಠಾಕೂರ್ (17 ಸೆಪ್ಟೆಂಬರ್ 1867- 14 ಫ಼ೆಬ್ರುವರಿ 1938)[] ಬಂಗಾಳದ ಪ್ರಮುಖ ಚಿತ್ರಕಲಾವಿದರಲ್ಲೊಬ್ಬರು.[][] ನಟರೂ ಹೌದು.

ಆರಂಭಿಕ ಜೀವನ

[ಬದಲಾಯಿಸಿ]

ಹುಟ್ಟಿದ್ದು ಶ್ರೀಮಂತ ಮನೆತನದಲ್ಲಿ. ರಂಗಭೂಮಿಯ ಹೆಸರಾಂತ ಕಲೆಗಾರರೂ ಕಲೆಗಾರರಿಗೆ ಆಶ್ರಯದಾತರೂ ಆದ ಗುಣೇಂದ್ರನಾಥರು ಇವರ ತಂದೆ. ಗಗನೇಂದ್ರನಾಥರ ಪ್ರಧಾನ ಒಲವು ರಂಗಭೂಮಿಯತ್ತ. ಹೀಗಾಗಿ ಚಿಕ್ಕಂದಿನಲ್ಲಿಯೇ ನಾಟಕರಂಗ ಪ್ರವೇಶಿಸಿ ಉತ್ತಮ ನಟರೆಂದು ಹೆಸರು ಗಳಿಸಿದರು.

ಸ್ಪಲ್ಪ ಕಾಲ ಇವರ ವ್ಯಾಸಂಗ ಸೇಂಟ್ ಜ಼ೇವಿಯರ್ ಶಾಲೆಯಲ್ಲಿ ನಡೆಯಿತು. ಅಲ್ಲೂ ಇವರ ಒಲವು ಚಿತ್ರರಚನೆಯ ಕಡೆಗೆ ಇತ್ತಾಗಿ ಇನ್ನುಳಿದ ಪಾಠಗಳಿಗೆ ಇವರು ಗೈರುಹಾಜರಾಗುತ್ತಿದ್ದರು.

ತಂದೆ ಗುಣೇಂದ್ರನಾಥರು 1881ರಲ್ಲಿ ನಿಧನರಾದರು. ಮನೆತನದ ಆಸ್ತಿಯಾದ ಜರಾಸಂಕೊ ಕಟ್ಟಡದ ಅತಿಥಿಗೃಹ ಇವರ ತಾಯಿಯವರ ವಶಕ್ಕೆ ಬಂತು. ಆಗ ಗಗನೇಂದ್ರನಾಥರಿಗೆ 14 ವರ್ಷ. ಹಿರಿಯ ಮಗನಾದುದರಿಂದ ಮನೆಯ ಕಾರುಬಾರೆಲ್ಲ ಇವರ ಮೇಲೆ ಬಿತ್ತು. ಆ ವೇಳೆಗಾಗಲೆ ಕಿರಿಯ ಸೋದರ ಅಬನೀಂದ್ರನಾಥರು ಕಲಾವ್ಯಾಸಂಗದಲ್ಲಿ ಹೆಸರುಗಳಿಸಿದ್ದು ಕಲಾಶಾಲೆಯ ಮುಖ್ಯಸ್ಥರಾದ ಇ.ಬಿ.ಹ್ಯಾವಲರ ಉತ್ತೇಜನದಿಂದ ಭಾರತೀಯ ಕಲೆಯ ಪುನರುಜ್ಜೀವನ ಕಾರ್ಯದಲ್ಲಿ ನಿರತರಾಗಿದ್ದರು. ಗಗನೇಂದ್ರನಾಥರು ತಮ್ಮನ ಕಲಾವ್ಯಾಸಂಗಕ್ಕೆ ತುಂಬ ನೆರವಾದರು.

ಮುಂದಿನ ಜೀವನ, ಸಾಧನೆಗಳು

[ಬದಲಾಯಿಸಿ]

ಇವರು ಯಾವ ಕಲಾಶಾಲೆಯಲ್ಲಿಯೂ ಕಲಿತವರಲ್ಲ. ಯಾವ ಕಲಾವಿದರಲ್ಲಿಯೂ ಅಭ್ಯಾಸ ಮಾಡಿದವರಲ್ಲ. ರೂಢಿಯಲ್ಲಿದ್ದ ಕ್ರಮಕ್ಕೂ ಕಟ್ಟು ಬಿದ್ದವರಲ್ಲ. ಎಲ್ಲವನ್ನೂ ತಮ್ಮ ವಿಮರ್ಶನ ಬುದ್ಧಿಯಿಂದ ಪರಿಶೀಲಿಸಿ, ಸೂಕ್ತವೆನಿಸಿದ್ದನ್ನು ಗ್ರಹಿಸುವುದು, ಗ್ರಹಿಸಿದ್ದನ್ನು ಅಳವಡಿಸಿಕೊಂಡು ತಮಗೆ ಮೆಚ್ಚಗೆಯಾದ ರೀತಿಯಲ್ಲಿ ಕೃತಿರಚನೆ ಮಾಡುವುದು ಇವರ ಸ್ವಭಾವ. ಹೀಗೆ ಇವರು ನಾನಾ ಶೈಲಿಯಲ್ಲಿ ಅನೇಕ ಚಿತ್ರಗಳನ್ನು ರಚಿಸಿ ಉತ್ತಮ ಶ್ರೇಣಿಯ ಕಲಾವಿದರೆಂದು ಹೆಸರು ಗಳಿಸಿದರು.

ಪೂರ್ವದಿಂದ ಮನೆಯಲ್ಲಿ ಸಂಗ್ರಹವಾಗಿದ್ದ ಮೊಗಲಾಯಿ, ರಜಪೂತ್ ಸಂಪ್ರದಾಯಗಳ ಚಿತ್ರಗಳು, ಚೈನಾ ಜಪಾನುಗಳ ಪ್ರಸಿದ್ಧ ಕಲಾವಿದರು ತಯಾರಿಸಿದ ಕಲಾಕೃತಿಗಳು ಗಗನೇಂದ್ರರ ಕಲಾವಿಕಾಸಕ್ಕೆ ನೆರವಾದುವು. ಇವುಗಳ ಪೈಕಿ ಕಪ್ಪುಶಾಯಿಯಿಂದ (ಇಂಡಿಯ ಇಂಕ್) ರೂಪುಗೊಂಡಿದ್ದ ಚಿತ್ರರಚನಾವಿಧಾನ ಇವರಿಗೆ ತುಂಬಾ ಪ್ರಿಯವೆನಿಸಿತು. ಗಗನೇಂದ್ರರು ವರ್ಣಚಿತ್ರರಚನೆಗಾರಂಭಿಸುವ ಮೊದಲು ಕಪ್ಪು ಶಾಯಿ ಉಪಯೋಗಿಸಿ ಅನೇಕ ಚಿತ್ರಗಳನ್ನು ರಚಿಸಿದರು. 'ನಮ್ಮ ಮನೆಯ ತೋಟ' ಇದಕ್ಕೆ ಒಂದು ಉತ್ತಮ ನಿದರ್ಶನ. ಹೊಸದಾಗಿ ಆಚರಣೆಗೆ ಬಂದ ಘನಾಕೃತಿ ವಿಧಾನ (ಕ್ಯೂಬಿಸಂ)[] ಮತ್ತು ಪರಿಣಾಮ ವಿಧಾನಗಳಿಂದ (ಇಂಪ್ರೆಷನಿಸಂ) ಪ್ರೇರಣೆಗೊಂಡು ಅನೇಕ ಚಿತ್ರಗಳನ್ನಿವರು ರಚಿಸಿದ್ದಾರೆ. ಇವರು ರಚಿಸಿರುವ ರಾಂಚಿಯ ಸೂರ್ಯಾಸ್ತಮಾನವೆಂಬ ಚಿತ್ರ ಭವ್ಯ ಕಲಾಕೃತಿಯೆಂದು ಭಾರತದಲ್ಲಲ್ಲದೆ ಫ್ರಾನ್ಸ್ ಮತ್ತು ಇತರ ಪಾಶ್ಚಾತ್ಯ ದೇಶಗಳಲ್ಲೂ ಖ್ಯಾತಿಗೊಂಡಿದೆ. ದೈವತ್ವದೊಂದಿಗೆ ಏಕೀಭಾವದಿಂದ ವರ್ತಿಸುತ್ತಿದ್ದ ಸಾಧು, ಚೈತನ್ಯರ ಆಶ್ರಮ ಮೊದಲಾದ ಇವರ ಚಿತ್ರಗಳು ಯಥಾವತ್ತಾದ ಚಿತ್ರಕ್ರಮಕ್ಕೆ ಒಳ್ಳೆಯ ನಿದರ್ಶನಗಳಾಗಿವೆ.

ಗಗನೇಂದ್ರರಿಗೆ ಸ್ವದೇಶಿ ಚಳವಳಿಯಲ್ಲಿ ಅಪಾರ ಅಸಕ್ತಿ. ಹೀಗಾಗಿ ಹಿರಿಯರು ಸಂಗ್ರಹಿಸಿದ್ದ ವಿಕ್ಟೋರಿಯ ಯುಗದ ಪೀಠೋಪಕರಣಗಳನ್ನು ತ್ಯಜಿಸಿ, ಇವುಗಳ ಸ್ಥಾನದಲ್ಲಿ ಭಾರತೀಯ ಸಂಪ್ರದಾಯದ ಅಣಿಕಟ್ಟುಗಳನ್ನು ಇವರು ತಮ್ಮ ಮನೆಯಲ್ಲಿ ಅಳವಡಿಸಿಕೊಂಡರು.

ಗಗನೇಂದ್ರನಾಥರ ಜೊತೆಗೆ ಸೋದರ ಅಬನೀಂದ್ರನಾಥರೂ ಸೇರಿ ಅನೇಕ ಸ್ವದೇಶಿ ವಸ್ತುಗಳಿಗೆ ನೂತನ ರೂಪು ಕೊಟ್ಟು ಜನಪ್ರಿಯಗೊಳಿಸಿದರು. ಉಡಿಗೆ ತೊಡಗೆಗಳಲ್ಲಿಯೂ ನಾನಾ ಸುಧಾರಣೆಗಳನ್ನು ಮಾಡಿದರು. ತಲೆಯ ಮೇಲೆ ಧರಿಸುತ್ತಿದ್ದ ದಪ್ಪನೆಯ ಮುಂಡಾಸಿಗೆ ಬದಲು ಉದ್ದನೆಯ ಮಕಮಲ್ ಕುಲಾವಿಯನ್ನು ಆಚರಣೆಗೆ ತಂದರು. ರವೀಂದ್ರನಾಥ ಠಾಕೂರರು ಈ ಸುಧಾರಣೆಯನ್ನು ಮೆಚ್ಚಿ ತಾವೂ ಅಂಥ ಕುಲಾವಿಯನ್ನು ಧರಿಸತೊಡಗಿದರು. ರಾಜ್ಯಾಡಳಿತದ ಮೇಲೆ ತಮ್ಮ ಪ್ರಭಾವ ಬೀರಿ ಗಗನೇಂದ್ರರು ದೇಶದ ನಾನಾ ಕೈಕಸುಬುಗಳಿಗೆ, ಗೃಹಕೈಗಾರಿಕೆಗಳಿಗೆ ನೆರವು ನೀಡುವಂತೆ ಮಾಡಿದ್ದನ್ನು ಮರೆಯುವಂತಿಲ್ಲ.

1907ರಲ್ಲಿ ಜನ್ಮತಾಳಿದ ಇಂಡಿಯನ್ ಸೊಸೈಟಿ ಆಫ್ ಆರ್ಟ್ಸ್ ಸಂಸ್ಥೆಯಲ್ಲಿ ಆಸ್ಥೆಯಿಂದ ದುಡಿದವರಲ್ಲಿ ಗಗನೇಂದ್ರನಾಥರೂ ಒಬ್ಬರು. ವಿವಿಧ ಮಾಧ್ಯಮದ ಕಲಾಕೃತಿಗಳಲ್ಲಿ ಉತ್ತಮವಾದುವನ್ನು ಆರಿಸುವುದರಲ್ಲಿ ಗಗನೇಂದ್ರರು ಅಗ್ರಗಣ್ಯರಾಗಿದ್ದರು. ಆದುದರಿಂದ ಸೊಸೈಟಿ ಏರ್ಪಡಿಸುತ್ತಿದ್ದ ವಸ್ತುಪ್ರದರ್ಶನಗಳು ಸಮಾಜದ ಎಲ್ಲ ಅಂತಸ್ತಿನ ಜನರಿಗೂ ಪ್ರಿಯವೆನಿಸಿರುವುವು.

ಗಗನೇಂದ್ರರು ಕಲ್ಲಚ್ಚು ಛಾಪನೆಯಲ್ಲಿಯೂ (ಲಿಥೊ) ವಿಶೇಷ ಆಸ್ಥೆ ತೋರಿ ತಮ್ಮ ಮನೆಯಲ್ಲಿಯೇ ಒಂದು ಛಾಪಖಾನೆಯನ್ನು ಆರಂಭಿಸಿ ಅದರ ಸಹಾಯದಿಂದ ಅನೇಕ ಚಿತ್ರಗಳನ್ನು ಅಚ್ಚುಮಾಡತೊಡಗಿದರು.

1916-18ರ ಅಂತರದಲ್ಲಿ ಗಗನೇಂದ್ರರು ಹಾಸ್ಯ, ವಿನೋದ, ಕುಚೋದ್ಯಗಳನ್ನು ತೋರುವ ವಿವಿಧ ಬಗೆಯ ವ್ಯಂಗ್ಯಚಿತ್ರಗಳನ್ನು ರಚಿಸಿ ಉತ್ತಮ ವ್ಯಂಗ್ಯಚಿತ್ರಗಾರರೆಂದು ಹೆಸರು ಗಳಿಸಿದರು. ಮಕ್ಕಳಿಗಾಗಿ ಇವರು ರಚಿಸಿರುವ ಬೋದರ್ ಬಹುದ್ದೂರ್ ಎಂಬ ಕಥಾಪುಸ್ತಕ ಚೆತ್ರಲಿಪಿಯಿಂದ ಕೂಡಿದ್ದು ಬಹು ಸುಂದರವಾಗಿದೆ.

ಕೇಂದ್ರ ಲಲಿತಾಕಲಾ ಅಕಾಡೆಮಿ ಗಗನೇಂದ್ರನಾಥ ಠಾಕೂರರ ಕಲಾಪ್ರತಿಭೆಯನ್ನು ಮೆಚ್ಚಿ ಅವರನ್ನು ಕುರಿತ ಕಿರುಹೊತ್ತಿಗೆಯೊಂದನ್ನು ಪ್ರಕಟಿಸಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Sengupta, Subodhchandra; Bose, Anjali, eds. (2010). Sansad Bangali Charitabhidhan (5th ed.). Calcutta: Sahitya Samsad. ISBN 9788185626659.
  2. https://en.banglapedia.org/index.php/Tagore,_Gaganendranath
  3. https://madrascourier.com/biography/gaganendranath-tagore-cubism/
  4. Mitter, Partha (2007). The Triumph of Modernism: India's Artists and the Avant-Garde, 1922-1947. Reaktion Books. p. 18. ISBN 978-1-86189-318-5.

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: